ಅಥವಾ

ಒಟ್ಟು 33 ಕಡೆಗಳಲ್ಲಿ , 20 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ಪು ಉಳ್ಳನ್ನಕ್ಕ ತೊಪ್ಪೆ ಕಿಚ್ಚಿಗೊಳಗಪ್ಪುದೆ ? ಅಪ್ಪುವಾರಿ, ಕಿಚ್ಚು ಮುಟ್ಟಿದ ಮತ್ತೆ ತೊಪ್ಪೆಯೆಂಬ ನಾಮ ಎತ್ತಹೋಯಿತ್ತು ? ಈ ಕಷ್ಟವ ಮುಟ್ಟಿದ್ದ ತನು, ದೃಷ್ಟವ ಕಂಡಿದ್ದ ಚಿತ್ತ, ಈ ಉಭಯದ ಗೊತ್ತ ಕಂಡು, ಈ ಗುಣ ಮುಕ್ತಿಯಹ ಭೇದವೆಂದು ಅರಿದ ಮತ್ತೆ, ಕಟ್ಟಿ ಬಿಟ್ಟು ನೋಡಿ, ವಸ್ತುವ ಕಂಡೆಹೆನೆಂಬುದು ಎತ್ತಣ ಶುದ್ಧಿ ಹೇಳಾ, ಕಾಮಧೂಮ ಧೂಳೇಶ್ವರಾ ?
--------------
ಮಾದಾರ ಧೂಳಯ್ಯ
ಲಿಂಗ ಂಗವೆಂಬ ಸಂದೇಹ ಉಳ್ಳನ್ನಕ್ಕ ಸಂದಳಿಯದೆಂಬರೈ ನಿನ್ನವರೆನ್ನ. ಮನ್ನಣೆಯ ಕರಸ್ಥಲಕ್ಕೆ ಇನ್ನು ನೀ ಬಂದಡೆ ಉನ್ನತೋನ್ನತನಪ್ಪೆ ಸಂದಿಲ್ಲದೆ ನಾ ನಿಮ್ಮ ಸೊಮ್ಮಿನೊಳಗಾನೀಗ ಲೀಯ್ಯವಪ್ಪೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಎನಗೆ ಗುರುವಾಗಬೇಡ ಹೆಣ್ಣು ಹೊನ್ನು ಮಣ್ಣಿನ ಆಸೆ ಉಳ್ಳನ್ನಕ್ಕ, ಎನಗೆ ಲಿಂಗವಾಗಬೇಡ ಶಕ್ತಿಸಂಪರ್ಕವುಳ್ಳನ್ನಕ್ಕ, ಎನಗೆ ಜಂಗಮವಾಗಬೇಡ ಕಂಡಕಂಡವರ ಮಂದಿರದಲ್ಲಿ ಹೊಕ್ಕು ಅಶನ ವಿಷಯಕ್ಕಾಗಿ ಹುಸಿವೇಷವ ತೊಟ್ಟು ಗಸಣಿಗೊಳಬೇಡ, ಎಂದು ಹೇಳಿದ ಮಾತಿಗೆ ನೊಂದ ನೋವು, ನಿಮ್ಮ ದೇವತ್ವದ ಹಾನಿ ಎನ್ನ ಸಜ್ಜನದ ಕೇಡು. ಎನ್ನ ಹೊದ್ದಡೆ ಮಾಣೆ, ಇದ್ದುದ ಹೇಳಿದೆ, ನೊಂದಡೆ ನೋಯೆ, ಸದಾಶಿವಮೂರ್ತಿಲಿಂಗವೆ ನಿನ್ನ ನಾ ಹಿಂಗದ ತೊಡಕು.
--------------
ಅರಿವಿನ ಮಾರಿತಂದೆ
ನಿಮ್ಮ ನೋಡುವ ಸುಖ ಉಳ್ಳನ್ನಕ್ಕರ, ಬೆರಸಲೆಲ್ಲಿಯದಯ್ಯಾ ? ನಿಮ್ಮ ಬೆರಸುವ ತವಕ ಉಳ್ಳನ್ನಕ್ಕ ನೋಟ ಹಿಂಗದು ! ನೋಡಿ ಕೂಡಿ ಸೈವೆರಗಾದ ಸುಖವನು ಏನೆಂದುಪಮಿಸುವೆನಯ್ಯಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅರಿದೆಹೆ ಅರುಹಿಸಿಕೊಂಡೆಹೆನೆಂಬ ಉಭಯವುಳ್ಳನ್ನಕ್ಕ, ಆ ಗುಣ ಅರಿವೋ, ಮರವೆಯೋ ಎಂಬುದ ತಿಳಿವುದು ಅದೇನು ಹೇಳಾ ? ಕ್ರೀ ಉಳ್ಳನ್ನಕ್ಕ ನಿಃಕ್ರೀ ಕುರುಹುಗೊಂಡಿತ್ತು. ಅರಿವುಳ್ಳನ್ನಕ್ಕ ಅಜ್ಞಾನ ಒಡಲುಗೊಂಡಿತ್ತು. ತಮವುಳ್ಳನ್ನಕ್ಕ ಆ ಬೆಳಗು ತಮಕ್ಕೊಳಗಾಯಿತ್ತು. ಅದೆಂತೆಂದಡೆ: ವಾಯುವ ಬೆಂಬಳಿಯಲ್ಲಿ ಗಂಧಸ್ವರೂಪವಾದಂತೆ, ಆವಾವ ಕುಸುಮದ ಗಂಧವ ವಾಯು ತಾ ಬೆರೆದಲ್ಲಿ, ಬಂಧವಿಲ್ಲದ ತೆರದಂತೆ. ಅರಿವುದು, ಅರುಹಿಸಿಕೊಂಬುದು ಎರಡಳಿದಲ್ಲಿ, ಕುರುಹೆಂದು ಪ್ರಮಾಣಿಸುವುದಕ್ಕೆ, ಅರಿವೆಂದು ಕೂಡುವುದಕ್ಕೆ, ಆ ಉಭಯದ ಎಡೆಯ ಹೇಳಾ. ಕ್ರೀಯಿಂದ ಕಾಬ ಮುಕ್ತಿ, ಜ್ಞಾನದಿಂದ ಕಾಬ ನಿರವಯ. ಆ ಗುಣ, ಶುಕ್ತಿಯಲ್ಲಿ ಅಡಗಿಪ್ಪ ಅಪ್ಪುವಿನಂತೆ, ಒಪ್ಪಕ್ಕೆ ತಾನಾಗಿ ಕುಕ್ಕಿದಡೆ, ಅಪ್ಪುವೆಂಬ ನಾಮಕ್ಕೆ ಸಿಕ್ಕಿಲ್ಲದೆ ನಿಶ್ಚಯವಾದುದು. ನೀರು ಸಾರ ಕೂಡಿದಲ್ಲಿ, ಏರ ಕಾಸಲಿಕ್ಕೆ ನೀರರತು ಸಾರ ಉಳಿದಂತೆ, ಸಾರ ನೀರಿಂದ ಕುರುಹುಗೊಂಡಿತ್ತು. ಆ ನೀರೆ ಸಾರವಾದಲ್ಲಿ, ಕೂಡಿ ಸವಿಯೆಂಬ ನಾಮವಾಯಿತ್ತು. ಸವಿ ಸಾರ ಕೂಡಿ ಅಂಗದ ಮೇಲೆ ರೂಪವಾಯಿತ್ತು. ನುಂಗಿದ ಮತ್ತೆ ಸವಿಸಾರ ಒಂದೂ ಇಲ್ಲ. ಅಂಗವೆಂಬನ್ನಕ್ಕ ಲಿಂಗ, ಲಿಂಗವೆಂಬನ್ನಕ್ಕ ಅಂಗ. ಉಭಯದ ಸಂಗವ ಜಡನೆಂದು ನುಂಗಿದ ಮತ್ತೆ, ಆತ್ಮಂಗೆ ಬಂಧ ಮೋಕ್ಷವೆಂಬುದೊಂದೂ ಇಲ್ಲ. ಕಾಮಧೂಮ ಧೂಳೇಶ್ವರನೆಂದು ಎನಲಿಲ್ಲ.
--------------
ಮಾದಾರ ಧೂಳಯ್ಯ
ಜಡ ಅಜಡವೆಂಬುಭಯ ಕೂಟ ಉಳ್ಳನ್ನಕ್ಕ ನಾನೆಂಬುದದೇನು? ವಿಚಾರಕ್ಕೆ ನೀನೆಂಬುದದೇನು? ಗೆಲ್ಲ ಸೋಲಕ್ಕೆ ಹೋರಿ ಒಳ್ಳಿದನಾದನೆಂಬಲ್ಲಿಯೆ ಕಳ್ಳ ಕದ್ದ ಗಜವಲ್ಲಿ ಅಡಗಿ ಮಾರೂದು ಹೇಳಾ. ಬಲ್ಲವನಾದೆನೆಂಬಲ್ಲಿಯೆ ಉಳಿಯಿತ್ತು ನಿಜಗುಣಯೋಗಿಯ ಯೋಗಕ್ಕೆ ಸಲ್ಲದ ಗುಣ.
--------------
ನಿಜಗುಣಯೋಗಿ
ಕಾಯ ಇಂದ್ರಿಯಂಗಳಲ್ಲಿ ಮಚ್ಚಿ ಇಹನ್ನಕ್ಕ ಭಕ್ತಿಸ್ಥಲವಿಲ್ಲ. ಆತ್ಮ ಹಲವು ವಿಷಯಂಗಳಲ್ಲಿ ಹರಿವನ್ನಕ್ಕ ಮಹೇಶ್ವರಸ್ಥಲವಿಲ್ಲ. ಹಿರಿದು ಕಿರಿದನರಿದು ರೋಚಕ ಆರೋಚಕವೆಂಬನ್ನಕ್ಕ ಪ್ರಸಾದಿಸ್ಥಲವಿಲ್ಲ. ಜಾಗ್ರದಲ್ಲಿ ಕಂಡು ಸ್ವಪ್ನದಲ್ಲಿ ತೋರಿ ಸುಷುಪ್ತಿಯಲ್ಲಿ ಅಳಿವನ್ನಕ್ಕ ಪ್ರಾಣಲಿಂಗಸಂಬಂಧಿಯಲ್ಲ. ಚತುರ್ವಿಧಫಲಪದಂಗಳಲ್ಲಿ ಕಾಬ ಕಾಣಿಕೆ ಉಳ್ಳನ್ನಕ್ಕ ಶರಣಸ್ಥಲವಿಲ್ಲ. ಅರಿದೆ ಮರೆದೆನೆಂದು ಉಭಯದ ಸಂದೇಹವುಳ್ಳನ್ನಕ್ಕ ಐಕ್ಯಸ್ಥಲವಿಲ್ಲ. ಇಂತೀ ಷಟ್ಸ್ಥಲಂಗಳಲ್ಲಿ ಸೋಪಾನದ ಮೆಟ್ಟಿಲಿನಂತೆ, ಒಂದ ಮೆಟ್ಟಿ ಒಂದನೇರುವನ್ನಕ್ಕ ಸ್ಥಲಕುಳಭರಿತನಾಗಬೇಕು. ಮೇಲನೇರಿ ಕೆಳಗೆ ಇಳಿಯೆನೆಂಬ ಭಾವ ನಿಂದಲ್ಲಿ ಆರನೆಣಿಸಲಿಲ್ಲ. ಮೂರೆಂದು ಬೇರೊಂದ ಮುಟ್ಟಲಿಲ್ಲ. ಕರಗಿದ ಬಂಗಾರಕ್ಕೆ ಕರಚರಣಾದಿಗಳು ಇಲ್ಲದಂತೆ, ಆತ ಕುರುಹಡಗಿದ ಷಡುಸ್ಥಲಬ್ರಹ್ಮಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉಪ ಜೀವೋಪಜೀವಕ ಶತ್ರು ಮಿತ್ರಾದಿ ಉದಾಸೀನ. ಸ್ತುತಿ ನಿಂದೆ ಮಾನಾಪಮಾನ ಪ್ರಾರಬ್ಧ ಸುಖದುಃಖ ಭೋಗೋಪಭೋಗಂಗಳನುಳ್ಳ ತನು ಉಳ್ಳನ್ನಕ್ಕ ಆರಿಗಾದಡೂ ರಾಗದ್ವೇಷವೆತ್ತ ಹೋದಡೊ ಬೆನ್ನಬಿಡವಾಗಿ ಇವ ಮಾಣಿಸಬಾರದು. `ದೃಷ್ಟತ್ವೇನ ಅಹಂ ಮಮ' ಎಂದುದಾಗಿ ಇಂತು ಕಾಮ ಕ್ರೋಧಾದಿಯೇ ಮಾಯೆ. ಈ ಮಾಯೆಯನುಳಿದು ಸೋಹಂಭಾವದೊಳಿರೆ ಆತ ನಿತ್ಯಮುಕ್ತನವ್ಯಕ್ತನಪ್ರಮೇಯ ಪರಮಾನಂದನಪ್ಪ ನಿರವಯನಹ ನಿಜಗುಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಶರೀರ ಉಳ್ಳನ್ನಕ್ಕ ನೆಳಲಿಲ್ಲದಿರಬಾರದು, ಭೂಮಿಯುಳ್ಳನ್ನಕ್ಕ ಆಕಾಶವಿಲ್ಲದಿರಬಾರದು. ನಾನುಳ್ಳನ್ನಕ್ಕ ನೀನಿಲ್ಲದಿರಬಾರದು ಗುಹೇಶ್ವರಲಿಂಗವು ಶಕ್ತಿಗೆ ಒಳಗಾಯಿತ್ತಾಗಿ, ಬಚ್ಚಬರಿಯ ಬಯಲೆಂಬುದಕ್ಕೆ ಉಪಮಾನವಿಲ್ಲ.
--------------
ಅಲ್ಲಮಪ್ರಭುದೇವರು
ದೇಹದ ಕಲೆಯನರಿವನ್ನಬರ ಇಷ್ಟಲಿಂಗ ಸಂಬಂಧಿಯಲ್ಲ. ಭಾವದ ಭ್ರಮೆ ಉಳ್ಳನ್ನಕ್ಕ ಭಾವಲಿಂಗ ಸಂಬಂಧಿಯಲ್ಲ. ಪ್ರಾಣ ಪ್ರಳಯವನರಿವನ್ನಬರ ಪ್ರಾಣಲಿಂಗ ಸಂಬಂಧಿಯಲ್ಲ. ಭಾವ ಇಷ್ಟದಲ್ಲಿ ನಿಂದು, ಇಷ್ಟಕ್ಕೆ ಭಾವ ಚೇತನವಾಗಿ ರಜ್ಜು ತೈಲವ ಆಗ್ನಿಗೆ bs್ಞೀದಿಸಿಕೊಡುವಂತೆ, ಇಷ್ಟಭಾವದ ಸತ್ವ, ಆ ಉಭಯನಾಧರಿಸಿ ನಿಂದ ಒಡಲು ಸದ್ಭಾವವಂತನ ಕ್ರೀ. ಈ ಮೂರು ಏಕವಾಗಿ ವೇಧಿಸಿ, ಉದಯಿಸಿ ತೋರುವ ಬೆಳಗು, ಆ ಕಳೆಯನೊಳಕೊಂಡಲ್ಲಿ, ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕರಣಂಗಳ ನಿವೃತ್ತಿಯ ಮಾಡಿ ಲಿಂಗವ ಕಂಡೆಹೆನೆಂಬಲ್ಲಿ ಮುಂದೆ ಅರಿದು ಕಾಣಿಸಿಕೊಂಬ ಕುರುಹು ಅದೆಂತುಟಯ್ಯಾ? ಆ ಕರಣವೆ ಮೊದಲು ಆ ಕುರುಹು ಹಿಂಗೆ ಆ ಕುರುಹಿಂದೆ ಇಂದ್ರಿಯಂಗಳು ಸಲೆಸಂದು, ನೀರನಟ್ಟಿ ಮುಂದಳ ಸಾರ ಸವಿಯ ಫಲ ಭೋಗಂಗಳಬೆಳವಂತೆ, ಇದು ಲಿಂಗವ್ಯವಧಾನಿಯ ಸಂಬಂಧ, ಇಂದ್ರಿಯ ಲಿಂಗ ಮುಖಂಗಳಿಂದ ಲಿಂಗ ಇಂದ್ರಿಯ ಮುಖದಿಂದ. ಗಂಧ ಕುಸುಮದಂತೆ ಇಂದ್ರಿಯ ಕುರುಹಿನ ಭೇದ. ಈ ದ್ವಂದ್ವ ಉಳ್ಳನ್ನಕ್ಕ ದೃಕ್ಕಿಂಗೆ ದೃಷ್ಟಿಯಿಂದ ಕಾಣಿಸಿಕೊಂಬಂತೆ ಅರಿವು ಕುರುಹಿನ ಭೇದ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಹವಣಲ್ಲದ ಶಾಖೆಯ ಕಪಿ ಹಿಡಿಯಲೊಲ್ಲದು. ಗಮನವಿಲ್ಲದ ಪಿಕಶಿಶು ನುಡಿಯಲರಿಯದು. ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕಟ. ಇಂತೀ ತ್ರಿವಿಧದ ಭೇದವ ನೋಡಿರೆ ಭಕ್ತರಪ್ಪಡೆ ! ಹೂ ಮಿಡಿಯ ಹರಿದಡೆ ಹಣ್ಣಪ್ಪುದೆ ? ಹಸಿವು ತೃಷೆ ವಿಷಯ ಉಳ್ಳನ್ನಕ್ಕ ಅದ್ವೈತ ಉಂಟೆ ಜಗದೊಳಗೆ ? ತನ್ನ ಮರೆದು ಲಿಂಗವ ಮರೆವುದು, ತನ್ನ ಮರೆಯದೆ ಲಿಂಗವ ಮರೆವ ಯೋಗವಿನ್ನೆಂತಾದುದೊ ? ಸುಡು, ಸುಡು, ಅವಂದಿರು ಗುರುದ್ರೋಹಿಗಳು ಆಚಾರಭ್ರಷ್ಟರು. ಈ ಉಭಯ ತನುಗುಣ ನಾಸ್ತಿಯಾಗದನ್ನಕ್ಕ;_ ಸತ್ಕ್ರಿಯೆಯಿಂದ ಮಾಡುವುದು ಲಿಂಗದಾಸೋಹವ. ಭಯಭಕ್ತಿಯಿಂದ ಮಾಡುವುದು ಜಂಗಮದಾಸೋಹವ. ತನು ಕರಗದೆ ಮನ ಬೆರಸದೆ ನಿಮಗೆ ಮಾಡುವ ವ್ರತಗೇಡಿಗಳ ಎನಗೆ ತೋರದಿರಾ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಖ್ಯಾತಿಲಾಭಕ್ಕೆ ಮಾಡುವಾತ ಭಕ್ತನಲ್ಲ. ಡಂಬಕಕ್ಕೆ ಡೊಂಬರಂತೆ ತಿರುಗುವವ ಜಂಗಮವಲ್ಲ. ತನು ತಲೆ ಬತ್ತಲೆಯಾಗಿ, ಮನ ತ್ರಿವಿಧ ಆಸೆ ಉಳ್ಳನ್ನಕ್ಕ ವಿರಕ್ತನಲ್ಲ. ಇಂತೀ ಗುಣವ ಸಂಪಾದಿಸುವನ್ನಕ್ಕ, ಎನಗೆ ಮುಕ್ತಿಯೆಂಬ ಬಟ್ಟೆಯಿಲ್ಲ. ನೀ ಸತ್ತೆ, ನಾ ಕೆಟ್ಟೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಧರ್ಮವ ನುಡಿವಲ್ಲಿ ಕ್ರಿಯಾಧರ್ಮ, ನಿರ್ಮವ ನುಡಿವಲ್ಲಿ ಮಾಯಿಕಮಲಂ ನಾಸ್ತಿ. ಕಾಯ ಉಳ್ಳನ್ನಕ್ಕ ಪೂಜೆ, ಜೀವವುಳ್ಳನ್ನಕ್ಕ ನೆನಹು. ಎರಡಿಟ್ಟು ನೋಡುವಲ್ಲಿ ಕೂಟ, ಆತುರ ಹಿಂಗಿದ ಮತ್ತೆ ಬಂಕೇಶ್ವರಲಿಂಗನ ಎಡೆಯಾಟ ಹಿಂಗಿತ್ತು.
--------------
ಸುಂಕದ ಬಂಕಣ್ಣ
ಅರ್ತಿಗೆ ಕಟ್ಟಿದ ಲಿಂಗ ಕೈಯೊಳಗಾಯಿತ್ತು. ನಿಶ್ಚಯದ ಲಿಂಗ ಆರ ಗೊತ್ತಿಗೂ ಸಿಕ್ಕದು. ಆ ಘನಲಿಂಗ ಉಳ್ಳನ್ನಕ್ಕ ನಾ ಜಂಗಮ, ನೀವು ಜಂಗುಳಿಗಳು. ಎನಗಿನ್ನಾವ ಭೀತಿಯಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಇನ್ನಷ್ಟು ... -->