ಅಥವಾ

ಒಟ್ಟು 41 ಕಡೆಗಳಲ್ಲಿ , 19 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರೆಗೆ ತೊಂಬತ್ತೆಂಟುಸಾವಿರ ಯೋಜನದುದ್ದದಲು ಸಿಡಿಲು ಮಿಂಚು ಮುಗಿಲುಗಳಿಹವು. ಅದರಿಂದ ಮೇಲೆ ಒಂದುಲಕ್ಷ ಯೋಜನದುದ್ದದಲು ಬೃಹಸ್ಪತಿ ಇಹನು. ಆ ಬೃಹಸ್ಪತಿಯಿಂದ ಮೇಲೆ ಮೂವತ್ತೆರಡುಲಕ್ಷ ಯೋಜನದುದ್ದದಲು ಶುಕ್ರನಿಹನು. ಆ ಶುಕ್ರನಿಂದ ಮೇಲೆ ಅರುವತ್ತುನಾಲ್ಕು (ಸಾವಿರರಿ) ಯೋಜನದುದ್ದದಲು ಶನಿಯಿಹನು. ಆ ಶನಿಯಿಂದ ಮೇಲೆ ಒಂದಕೋಟಿ ಇಪ್ಪತ್ತೆಂಟುಲಕ್ಷ ಯೋಜನದುದ್ದಲು ಆದಿತ್ಯನಿಹನು. ಆ ಆದಿತ್ಯನಿಂದ ಮೇಲೆ ಎರಡುಕೋಟಿಯುಂ ಐವತ್ತುಸಾವಿರ (ಐವತ್ತಾರುರಿ)ಲಕ್ಷ ಯೋಜನದುದ್ದದಲು ರಾಹುಕೇತುಗಳು ಪ್ರವರ್ತಿಸಿಕೊಂಡಿಹವು. ಅಲ್ಲಿಂದ ಮೇಲೆ ಐದುಕೋಟಿಯುಂ ಹನ್ನೆರಡುಲಕ್ಷ ಯೋಜನದುದ್ದದಲು ನಕ್ಷತ್ರವಿಹವು. ಆ ನಕ್ಷತ್ರಂಗಳಿಂದ ಮೇಲೆ ಹತ್ತುಕೋಟಿಯುಂ ಇಪ್ಪತ್ತುನಾಲ್ಕು (ಲಕ್ಷ) ಯೋಜನದುದ್ದದಲು ಸಕಲ ಮಹಾಋಷಿಗಳಿಹರು. ಆ ಋಷಿಗಳಿಂದ ಮೇಲೆ ಇಪ್ಪತ್ತುಕೋಟಿಯುಂ ನಾಲ್ವತ್ತೆಂಟುಲಕ್ಷ ಯೋಜನದುದ್ದದಲು ತ್ರಿವಿಧ ದೇವತೆಗಳಿಹರು. ಆ ತ್ರಿವಿಧ ದೇವತೆಗಳಿಂದಂ ಮೇಲೆ ನಾಲ್ವತ್ತುಕೋಟಿಯುಂ ತೊಂಬತ್ತಾರುಲಕ್ಷ ಯೋಜನದುದ್ದದಲು ದೇವರ್ಕಳಿಹರು. ಆ ದೇವರ್ಕಳಿಂದಂ ಮೇಲೆ ಎಂಬತ್ತೊಂದುಕೋಟಿಯುಂ ತೊಂಬತ್ತೆರಡುಲಕ್ಷ ಯೋಜನದುದ್ದದಲು ದ್ವಾದಶಾದಿತ್ಯರಿಹರು. ಆ ದ್ವಾದಶಾದಿತ್ಯರಿಂದಂ ಮೇಲೆ ನೂರರುವತ್ತುಮೂರುಕೋಟಿಯುಂ ಎಂಬತ್ತುನಾಲ್ಕುಲಕ್ಷ ಯೋಜನದುದ್ದದಲು ಮಹಾಸೇನರಿಹರು. ಆ ಮಹಾಸೇನರಿಂದಂ ಮೇಲೆ ಮುನ್ನೂರಿಪ್ಪತ್ತೇಳುಕೋಟಿಯುಂ ಅರವತ್ತೆಂಟುಲಕ್ಷ ಯೋಜನದುದ್ದದಲು ಕೃತರೆಂಬ ಮಹಾಮುನಿಗಳಿಹರು. ಇಂತು_ಧರೆಯಿಂದಂ ಆಕಾಶ ಉಭಯಂ ಕೂಡಲು ಆರುನೂರೈವತ್ತೈದು ಕೋಟಿ ಐದು ಲಕ್ಷ ತೊಂಬತ್ತೆಂಟು ಸಾವಿರ ಯೋಜನದುದ್ದದಲು ಒಂದು ಮಹಾಲೋಕವಿಹುದು. ಆ ಲೋಕದಿಂದ ಹದಿನಾಲ್ಕು ಲೋಕವುಂಟು. ಅವು ಎಲ್ಲಿಹವೆಂದಡೆ: ಪಾತಾಳಲೋಕ ದೇವರ ಕಟಿಯಲ್ಲಿಹುದು, ರಸಾತಳಲೋಕ ದೇವರ ಗುಹ್ಯದಲ್ಲಿಹುದು, ತಳಾತಳಲೋಕ ಊರುವಿನಲ್ಲಿಹುದು, ಸುತಳಲೋಕ ಜಾನುವಿನಲ್ಲಿಹುದು, ನಿತಳಲೋಕ ಜಂಘೆಯಲ್ಲಿಹುದು, ವಿತಳಲೋಕ ಪಾದೋಧ್ರ್ವದಲ್ಲಿಹುದು, ಅತಳಲೋಕ ಪಾದತಳದಲ್ಲಿಹುದು. ಅಲ್ಲಿಂದತ್ತ ಕೆಳಗುಳ್ಳ ಲೋಕವನಾತನೆ ಬಲ್ಲ. ಭೂಲೋಕ ನಾಭಿಯಲ್ಲಿಹುದು, ಭುವರ್ಲೋಕ ಹೃದಯದಲ್ಲಿಹುದು, ಸ್ವರ್ಲೋಕ ಉರೋಮಧ್ಯದಲ್ಲಿಹುದು, ಮಹರ್ಲೋಕ ಕಂಠದಲ್ಲಿಹುದು, ಜನರ್ಲೋಕ ತಾಲವ್ಯದಲ್ಲಿಹುದು, ತಪರ್ಲೋಕ ಲಲಾಟದಲ್ಲಿಹುದು, ಸತ್ಯಲೋಕ ಬ್ರಹ್ಮರಂಧ್ರದಲ್ಲಿಹುದು. ಅಲ್ಲಿಂದತ್ತ ಮೇಲುಳ್ಳ ಲೋಕವನಾತನೆ ಬಲ್ಲ. ಇಂತೀ ಈರೇಳು ಲೋಕವು ತಾನೆಯಾಗಿಪ್ಪ ಮಹಾಲಿಂಗವನ್ನು ಅಡಗಿಸಿಹೆನೆಂಬ ಅತುಳಬಲ್ಲಿದರು ಕೆಲಬರುಂಟೆ ? ಅಡಗುವನು ಮತ್ತೊಂದು ಪರಿಯಲ್ಲಿ, ಅದು ಹೇಂಗೆ ? ಅಡರಿ ಹಿಡಿಯಲು ಬಹುದು ಭಕ್ತಿಯೆಂಬ ಭಾವದಲ್ಲಿ ಸತ್ಯಸದಾಚಾರವನರಿದು ಪಾಪಕ್ಕೆ ನಿಲ್ಲದೆ ಕೋಪಕ್ಕೆ ಸಲ್ಲದೆ ಮಾಯವನುಣ್ಣದೆ ಮನದಲ್ಲಿ ಅಜ್ಞಾನವ ಬೆರಸದೆ ಅಲ್ಲದುದನೆ ಬಿಟ್ಟು, ಬಲ್ಲುದನೆ ಲಿಂಗಾರ್ಚನೆಯೆಂದು `ಓಂ' ಎಂಬ ಅಕ್ಷರವನೋದಿ ಅರಿತ ಬಳಿಕ ಬಸುರಲ್ಲಿ ಬಂದಿಪ್ಪ, ಶಿರದಲ್ಲಿ ನಿಂದಿಪ್ಪ ಅಂಗೈಯೊಳಗೆ ಅಪ್ರತಿಮನಾಗಿ (ಸಿಲ್ಕಿಪ್ಪ) ಕಾಣಾ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಆ ಪರಶಿವನೇ ತಾನೇ ಆದ ಆತ್ಮನೋರ್ವಗೆ ಕರ್ಮ ಎರಡು, ಮೂರು ಗುಣ, ಕರಣ ನಾಲ್ಕು, ಇಂದ್ರಿಯ ಐದು, ವರ್ಗ ಆರು, ವ್ಯಸನ ಏಳು, ಮದ ಎಂಟು, ನಾಳ ಒಂಬತ್ತು, ವಾಯು ಹತ್ತು, ಎಪ್ಪತ್ತೆರಡು ಸಾವಿರ ನಾಡಿ, ಅರವತ್ತಾರುಕೋಟಿ ಗುಣ, ಆರುವರೆಕೋಟಿ ರೋಮ- ಇವು ಮೊದಲಾದ ಅನಂತ ತತ್ವಯುಕ್ತವೆನಿಸಿದ ತೊಂಬತ್ತಾರು ಅಂಗುಲ ದೇಹದೊಳಗೆ ನಿರ್ದೇಹಿಯಾಗಿ, ಕರ್ಮ ಎರಡರೊಳಗೆ ದುಷ್ಕರ್ಮಮಾಡುವದೆಂತೆನೆ : ಜಾರ ಚೋರ ಹುಸಿ ಹಾಸ್ಯ ಡಂಭಕ ಜೀವಹಿಂಸಾ ಪರಪೀಡಾ ಕ್ಷುದ್ರ ಧೂರ್ತ ಕ್ರೋಧಿ ವಿಕಾರಿ ಪರದ್ರವ್ಯಾಪಹಾರಕ ಅಹಂಕಾರ ಅಜ್ಞಾನ ಅನಾಚಾರ ಪಂಚಪಾತಕ ವಿಶ್ವಾಸಘಾತಕ ಇವು ಮೊದಲಾದ ಅನಂತ ದುರ್ಗುಣದಿಂದ ತನ್ನ ತಾ ಮರೆತು ತಾ ಮಾಡಿದ ದುಷ್ಕರ್ಮದಿಂದೆ ಪಾಪಹತ್ತಿ, ದುಃಖಗೊಂಡು ಯಮನೊಳಗಾಗಿ ನರಕ ಉಂಡು ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಅನಂತಕಾಲ ತಿರುತಿರುಗಿ ಬಳಲುವದು. ಆ ಬಳಲುವ ದುಷ್ಕರ್ಮವೇ ಕಾಲೋಚಿತಕ್ಕೆ ಸತ್ಕರ್ಮವಾಯಿತು. ಅದು ಎಂತಾಯಿತೆಂದರೆ : ಚೋರರಿಗೆ ಪರದ್ರವ್ಯಾಪಹಾರ ವಿಯೋಗದಲ್ಲಿ, ದೇಗುಲ ದೀಪದಕುಡಿ ಕಡಿದಂತೆ : ಆ ಸತ್ಕರ್ಮ ಮಾಡುವದೆಂತೆನೆ : ದಯ, ಧರ್ಮ, ನಯ, ನೀತಿ ಶಾಂತಿ, ದಾಂತಿ, ಕ್ಷಮೆ, ದಮೆ, ಭಕ್ತಿ , ಜ್ಞಾನ, ವೈರಾಗ್ಯ, ನಿರಹಂಕಾರ, ನಿರಾಶ, ಅಷ್ಟಾಂಗಯೋಗ, ಅಷ್ಟವಿಧಾರ್ಚನೆ, ಅಷ್ಟಾವರಣನಿಷೆ* - ಇವು ಮೊದಲಾದ ಅನಂತ ಸುಗುಣದಿಂದೆ ಪುಣ್ಯವೊದಗಿ ಸುಖಗೊಂಡು ಇಂದ್ರನೊಳಗಾಗಿ ಸ್ವರ್ಗ ಅನುಭವಿಸಿ ಅಥವಾ ಬಹು ಸತ್ಕರ್ಮವಾದಡೆ ಸದಾಶಿವನ ಚೌಪದ ಬಹುಪದದೊಳಗಾಗಿ ಕೈಲಾಸಕ್ಕೆ ಹೋಗಿ ಸತ್ಕರ್ಮದಿಂದ ಒದಗಿದ ಪುಣ್ಯದ ಫಲವನ್ನು ಅನುಭವಿಸಿ ಮರಳಿ ಎಂಬತ್ನಾಲ್ಕುಲಕ್ಷ ಜೀವರಾಶಿ ಯೋನಿಯ ದ್ವಾರದಲ್ಲಿ ಅನಂತಕಾಲ ತಿರುತಿರುಗಿ ಅಷ್ಟಭೋಗಸುಖದೊಳಗೆ ತೊಳಲುವದು, ಆ ತೊಳಲುವ ಸತ್ಕರ್ಮವೇ ಕಾಲೋಚಿತಕ್ಕೆ ದುಷ್ಕರ್ಮವಾಗುವದು. ಅದೆಂತೆನೆ : ಶಿವಗಡ ಬಿದ್ದು ಗಂಧರ್ವ ಕರಿನಾಯಿ ಆದಂತೆ `ಅತಿದಾನಾದ್ ಬಲೇರ್ಬಂಧಃ' ಎಂಬ ನೀತಿ ಉಂಟಾಗಿ, ಇದಕ್ಕೆ ದುಷ್ಟಮಾರಿ ಚೌಡಾಪೂರ ವಿರೂಪಾಕ್ಷಿಗೆ ಜಂಗಮದಾಸೋಹದಲ್ಲಿ ಜಂಗಮದೋಷ ಘಟಿಸಿದಂತೆ. ಅದುಕಾರಣ ಸತ್ಕರ್ಮಕ್ಕೆ ಬೀಜ ದುಷ್ಕರ್ಮ, ದುಷ್ಕರ್ಮಕ್ಕೆ ಬೀಜ ಸತ್ಕರ್ಮ. ಹೀಗಾದ ಮೇಲೆ ಸತ್ಕರ್ಮವೇ ದುಷ್ಕರ್ಮ, ದುಷ್ಕರ್ಮವೇ ಸತ್ಕರ್ಮ, ಪಾಪವೇ ಪುಣ್ಯ ಪುಣ್ಯವೇ ಪಾಪ, ಸುಖವೇ ದುಃಖ ದುಃಖವೇ ಸುಖ, ಇವು ಎರಡರೊಳಗೆ ಹೆಚ್ಚು ಕಡಿಮೆ ಎಂಬುದೇನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರವಯವಾಯಿತ್ತು, ನಿರವಯದಿಂದ ನಿರಾಕಾರವಾಯಿತ್ತು, ನಿರಾಕಾರದಿಂದ ಆದಿಯಾಯಿತ್ತು. ಆದಿಯಿಂದ ಮೂರ್ತಿಯಾದನೊಬ್ಬ ಶರಣ, ಆ ಶರಣನ ಮೂರ್ತಿಯಿಂದ ಸದಾಶಿವನಾದ. ಆ ಸದಾಶಿವಮೂರ್ತಿಗೆ ಜ್ಞಾನಶಕ್ತಿಯಾದಳು. ಆ ಸದಾಶಿವಂಗೆಯೂ ಜ್ಞಾನಶಕ್ತಿಯಿಬ್ಬರಿಗೆಯೂ ಶಿವನಾದ. ಆ ಶಿವಂಗೆ ಇಚ್ಛಾಶಕ್ತಿಯಾದಳು. ಆ ಶಿವಂಗೆಯೂ ಇಚ್ಛಾಶಕ್ತಿಯರಿಬ್ಬರಿಗೆಯೂ ರುದ್ರನಾದ. ಆ ರುದ್ರಂಗೆ ಕ್ರಿಯಾಶಕ್ತಿಯಾದಳು. ಆ ರುದ್ರಂಗೆಯೂ ಕ್ರಿಯಾಶಕ್ತಿಯಿಬ್ಬರಿಗೆಯೂ ವಿಷ್ಣುವಾದ. ಆ ವಿಷ್ಣುವಿಂಗೆ ಮಹಾಲಕ್ಷ್ಮಿಯಾದಳು. ಆ ವಿಷ್ಣುವಿಂಗೆಯೂ ಮಹಾಲಕ್ಷ್ಮಿಯಿಬ್ಬರಿಗೆಯೂ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯಾದಳು. ಆ ಬ್ರಹ್ಮಂಗೆಯೂ ಸರಸ್ವತಿಯಿಬ್ಬರಿಗೆಯೂ ನರರು ಸುರರು ದೇವರ್ಕಳು ಹೆಣ್ಣು ಗಂಡು ಸಚರಾಚರ ಸಹಿತವಾಗಿ ಎಂಬತ್ತುನಾಲ್ಕುಲಕ್ಷ ಜೀವಜಂತುಗಳು, ತೋರುವ ತೋರಿಕೆಯೆಲ್ಲ ಹುಟ್ಟಿತ್ತು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಎಂಬತ್ತುನಾಲ್ಕುಲಕ್ಷ ಮುಖದೊಳಗೊಂದೆ ಮುಖವಾಗಿ ಕಾಡಿ ನೋಡೆನ್ನನು, ಬೇಡಿ ನೋಡೆನ್ನನು, ಬೇಡದಿದ್ದಡೆ, ಅಯ್ಯಾ, ನಿಮಗೆ ಪ್ರಮಥರಾಣೆ. ನೀನಾವ ಮುಖದಲ್ಲಿ ಬಂದು ಬೇಡಿದೊಡೀವೆನು. ಕೂಡಲಸಂಗಮದೇವಾ. 431
--------------
ಬಸವಣ್ಣ
ಭಾನುವಿನ ಅಂಗಮಧ್ಯದಲ್ಲಿ ಒಂದು ಏಣಿ. ಏಣಿಗೆ ಮೂರು ಕಾವು, ಮೆಟ್ಟಿ ಹತ್ತುವುದಕ್ಕೆ ಮೆಟ್ಟು ಎಂಬತ್ತುನಾಲ್ಕುಲಕ್ಷ. ಅದ ತಾಳಲಾರದೆ ಏಣಿ ಜಾರಿತ್ತು, ಕಾವು ಮುರಿಯಿತ್ತು. ಹಲ್ಲು ಎಲ್ಲಿಗೆ ಹೋದವೆಂದು ಕಾಣಬಾರದು, ಸಗರದ ಬೊಮ್ಮನೊಡೆಯ ತನುಮನ ಸಂಗವಾಗಿ ಕುರುಹಡಗಿದ ಕಾರಣ.
--------------
ಸಗರದ ಬೊಮ್ಮಣ್ಣ
ಶಿವಶಿವಾ, ಈ ಮರುಳಮಾನವರು ಸಟೆಯ ಸಂಸಾರದಲ್ಲಿ ಸಿಲ್ಕಿ, ತಾವಾರೆಂಬುದನರಿಯದೆ, ತಮ್ಮ ನಿಜಸ್ವರೂಪವ ಮರದು ಕೆಟ್ಟ ಕೇಡ ಹೇಳುವೆನು ಕೇಳಿರಯ್ಯ. ಹುಲಿಯ ಬಾಯ ಕುರಿಯ ಹಾಗೆ, ತೋಳನ ಬಾಯ ಮರಿಯ ಹಾಗೆ, ಸರ್ಪನ ಬಾಯ ಕಪ್ಪೆಯ ಹಾಗೆ, ಬೆಕ್ಕಿನ ಬಾಯ ಇಲಿಯ ಹಾಗೆ, ಕಟುಕನ ಕೈಯ ಹೋತಿನ ಹಾಗೆ, ರಾಜನ ಕೈಯ ಚೋರನ ಹಾಗೆ, ಇಂತೀ ದೃಷ್ಟಾಂತದಂತೆ- ಮಾಯಾಕಾಳರಕ್ಕಸಿಯ ಮೂರು ಮುಖದಲ್ಲಿ- ಆ ಮೂರು ಮುಖ ಆವಾವೆಂದಡೆ: ಜಾಗ್ರ ಸ್ವಪ್ನ ಸುಷುಪ್ತಿಯೆಂಬ ತ್ರಿಮುಖದೊಳಗೆ ಗೋಪ್ಯಮುಖ, ಸಂದ ಮುಖಗಳುಂಟು, ಪೇಳ್ವೆ. ಜಾಗ್ರಾವಸ್ಥೆಯೇ ವಕ್ತ್ರವಾಗುಳ್ಳ ಮಣ್ಣಿನಲ್ಲಿ ಕಾಮ ಕ್ರೋಧ ಲೋಭವೆಂಬ ತ್ರಿವಿಧಮುಖವು. ಸ್ವಪ್ನಾವಸ್ಥೆಯೇ ವಕ್ತ್ರವಾಗುಳ್ಳ ಹೆಣ್ಣಿನಲ್ಲಿ ಘ್ರಾಣ, ಜಿಹ್ವೆ, ನೇತ್ರ, ಶ್ರೋತ್ರ, ತ್ವಕ್ಕುಯೆಂಬ ಪಂಚಮುಖವು. ಸುಷುಪ್ತಾವಸ್ಥೆಯೇ ವಕ್ತ್ರವಾಗುಳ್ಳ ಹೊನ್ನಿನಲ್ಲಿ ಪ್ರಾಣಾದಿ ಧನಂಜಯಾಂತ್ಯಮಾದ ದಶವಾಯುಗಳೇ ದಶಮುಖವಾಗಿರ್ಪವು. ಇಂತೀ ತ್ರಿವಿಧಮುಖ ಮೊದಲುಮಾಡಿಕೊಂಡು ಹಲವು ಮುಖದಿಂದ ಹರಿಹರಿದುಕೊಂಡು ತಿಂದು ಹಿಂಡಿ ಹಿಪ್ಪಿಯ ಮಾಡುವಾಗ ಹಿಂದೆ ಹೇಳಿದ ದೃಷ್ಟಾಂತದಂತೆ ಮಾಯೆಯೆಂಬ ಹೊಲೆಯಲ್ಲಿ ಶಿಲ್ಕಿ ಈರೇಳುಲೋಕವೆಲ್ಲ, ಆಳುತ್ತ, ಮುಳುಗುತ್ತ ಆಲಪರಿದು, ಚಾಲಿವರಿದು ಎಂಬತ್ತುನಾಲ್ಕುಲಕ್ಷ ಭವಮಾಲೆಯಲ್ಲಿ ಸತ್ತುಹೋದ ಪ್ರಾಣಿಗಳಿಗೆ ಇನ್ನೆತ್ತಣ ಮುಕ್ತಿಯಯ್ಯಾ. ಇಂತೀ ಮರುಳಮಾನವರ ಕಂಡು ಬೆಕ್ಕನೆ ಬೆರಗಾಗಿ ಹೊಟ್ಟೆಹುಣ್ಣಾಗುವನ್ನಕ್ಕರ ನಕ್ಕು ಶಬ್ದಮುಗ್ಧನಾಗಿ ಸುಮ್ಮನಿರ್ದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮೂರು ತಟ್ಟೆಯ ನಡುವೆ, ಒಂದು ಕಂಬವ ನಟ್ಟು, ಎಂಬತ್ತನಾಲ್ಕು ಲಕ್ಷ ದಾರವ[ಟ್ಟ] ಕಟ್ಟಿ, ಅದರ ಮೇಲೆ ನಿಂದಾಡುತ್ತಿರಲಾಗಿ, ನಡುವಣ ಕಂಬ ಮುರಿದು ಬೀಳುತ್ತಿರಲಾಗಿ, ಕಂಡೆ, ಮೂರು ತಟ್ಟೆಯಲ್ಲಿ ಕಟ್ಟಿದ ನೇಣ ಹಿಡಿದು, ಕೆಳಯಿಕ್ಕೆ ಧುಮುಕಲಮ್ಮದೆ, ಮೇಲಕ್ಕೆ ಹತ್ತಲಮ್ಮದೆ, ನಡುವೆ ಉಯ್ಯಾಲೆಯನಾಡುತ್ತಿರ್ದೆನಯ್ಯಾ. ಇರ್ದವನ ಕಂಡು, ಹಿರಿದಪ್ಪ ಆಕಾಶದಲ್ಲಡಗಿರ್ದ ಹದ್ದುಬಂದು ಹೊಯ್ಯಲಾಗಿ, ಕಪಾಲ ಸಿಡಿಯಿತ್ತು. ಮೂರು ತಟ್ಟೆ ಮುರಿಯಿತ್ತು. ಎಂಬತ್ತುನಾಲ್ಕುಲಕ್ಷ ಕಣ್ಣಿ ಒಂದೂ ಇಲ್ಲದಂತೆ ಕಿತ್ತವು. ಅದಕ್ಕೆ ಬಂಧಮುಕ್ತವೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪಂಕದೊಳಗಿನ ಪಶುವಿಗೆ ಒಬ್ಬ ಪುರುಷನಿಂದ ಚೆೃತನ್ಯವಲ್ಲದೆ ಆ ಪಂಕದೊಳಗಿನ ಪಶುವಿಗೆ ಬೇರೆ ಚೆೃತನ್ಯ ಉಂಟೆ ಹೇಳಾ ? ಅರಣ್ಯದೊಳಗೆ ಅಜಗರನೆಂಬ ಸರ್ಪನು ಆಹಾರವಿಲ್ಲದೆ ಇರಲು ಅದಕ್ಕೆ ಪರಶಿವನು ತಾವೇ ತಮ್ಮ ಕರುಣ ಕೃಪೆಯಿಂದೊಂದು ಮೃಗಪಕ್ಷಿಯ ಅನಾಯಾಸದಿಂದ ಮುಂದೆ ಹಾಯಿಸಿದೊಡೆ, ಆ ಅಜಗರನೆಂಬ ಸರ್ಪನು ಭಕ್ಷಿಸಿ ಇರುವುದಲ್ಲದೆ, ತಾ ಬೇರೆ ಮೃಗಪಕ್ಷಿಗಳ ಭಕ್ಷಿಸುವ ಚೆೃತನ್ಯವುಂಟೆ ಹೇಳಾ? ಎಷ್ಟು ದಿವಸವಾದಡೆಯೂ ಬಿದ್ದಲ್ಲಿ ಬಿದ್ದಿರ್ಪುದು ನೋಡಾ. ಬೇಡಿ ಬಂದೀಖಾನೆ ಕೊಳ್ಳದೊಳಗೆ ಇರುವ ಪ್ರಾಣಿಗಳಿಗೆ ಒಬ್ಬ ರಾಜನ ದಯದಿಂದ ಅನ್ನಪಾನ ಉಂಟಲ್ಲದೆ, ಅವರಿಗೆ ಬೇರೆ ತಮ್ಮ ಸ್ವತಂತ್ರದಿಂದ ತಾವೇ ಅನ್ನೋದಕವ ಕೊಂಬ ಚೆೃತನ್ಯ ಉಂಟೆ ಹೇಳಾ? ಅವರು ಎಷ್ಟು ಕಾಲವಾದಡೆಯು ಇದ್ದಲ್ಲಿ ಇರುವರು ನೋಡಾ. ತೊಟ್ಟಿಲೊಳಗಿನ ಶಿಶು ಹೊಟ್ಟೆಹಸಿದು ಒದರಿದರೆ ಆ ಶಿಶುವಿನ ತಾಯಿ ಬಂದು ಮೊಲೆವಾಲ ಕೊಟ್ಟು ರಕ್ಷಣಮಾಡುವದಲ್ಲದೆ ಆ ಶಿಶುವಿಗೆ ಬೇರೆ ಸ್ವತಂತ್ರಚೈತನ್ಯ ಉಂಟೆ ಹೇಳಾ? ಎಷ್ಟೊತ್ತಾದಡೆಯೂ ಆ ಶಿಶುವು ಇದ್ದಲ್ಲಿ ಇರುವದು ನೋಡಾ. ಇಂತೀ ದೃಷ್ಟದಂತೆ ಇರುವೆ ಮೊದಲು ಆನೆ ಕಡೆ ಎಂಬತ್ತುನಾಲ್ಕುಲಕ್ಷ ಜೀವರಾಶಿ ಯೋನಿಯಲ್ಲಿ ಸುಖದುಃಖದಿಂದ ನೊಂದು ಬೆಂದು ಅಳಲಿ ಬಳಲಿ ಭವಜಾಲದಲ್ಲಿ ತಿರುಗುವ ಜೀವಾತ್ಮರಿಗೆ ಪರಕ್ಕೆ ಪರವಾದ ಪರಶಿವನು ತಾನೆ ತನ್ನ ಕರುಣಕೃಪೆಯಿಂದ ಆ ಜೀವಾತ್ಮರ ಹೃದಯದಲ್ಲಿ ಶಿವಜ್ಞಾನೋದಯವನಿತ್ತು ಸಂಸಾರಪ್ರಪಂಚವ ನಿವೃತ್ತಿಯ ಮಾಡಿ ಬಹಿಷ್ಕರಿಸಿ ಕ್ರಿಯಾಘನಗುರುವಾಗಿ ಬಂದು ಲಿಂಗಾಂಗಸಮರಸವ ತೋರಿ ಭವಬಂಧನವೆಂಬ ಭವಪಾಶವ bs್ಞೀದಿಸಿ ಆ ಜೀವಾತ್ಮರ ಜೀವಭಾವವನಳಿದು ಸಜ್ಚೀವಾತ್ಮರುಗಳ ಮಾಡಿ, ರಕ್ಷಿಸುವನಲ್ಲದೆ, ಆ ಜೀವಾತ್ಮರು ತಮ್ಮಾತ್ಮಜ್ಞಾನದಿಂದ ಅಷ್ಟಾಂಗಯೋಗ ಅನುಪಾನ ಕ್ರಿಯೆಗಳಿಂದ ಸಾಧಿಸಿ ಭವಹಿಂಗಿಸಿ ಪರಶಿವಲಿಂಗದಲ್ಲಿ ಬೆರಸಿದನೆಂದಡೆ ಎಂದಿಗೂ ಸಾಧ್ಯವಾಗದು. ಅದೇನು ಕಾರಣವೆಂದೊಡೆ, ತಮ್ಮ ನಿಜವ ತಾವರಿಯದ ಕಾರಣ. ಎಷ್ಟು ಯುಗಾಂತರದಲ್ಲಿ ಭವಭವದಲ್ಲಿ ಘಾಸಿಯಾಗುತ್ತಿರ್ಪರು ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶುಕ್ಲ ಶೋಣಿತಾತ್ಮಸಂಬಂಧವಾದ ಮಾತಾಪಿತೃಗಳ ಸಂಯೋಗ ಕಾಲಕ್ಕೆ ಜೀವಾತ್ಮರು ಜನಿಸಿದ ಪರಿಯ ಪೇಳುವೆ. ಅದೆಂತೆಂದೊಡೆ : ಜನಿಸಿದ ಮೂರುದಿವಸಕ್ಕೆ ಸ್ತ್ರೀಯರ ನಯನ ಕೆಂಪಾಗಿ ಮೂರಾರುದಿವಸಕ್ಕೆ ಕೈಕಾಲು ಕತ್ತರಿಸಿ ಏಳೆಂಟುದಿವಸಕ್ಕೆ ಅಂಗ ಜಾಡ್ಯವಾಗಿ ಈರ್ಹತ್ತುದಿವಸಕ್ಕೆ ಇಂದ್ರಿಯ ಹೆಪ್ಪುಗೊಂಡು ಒಂದುಮಾಸಕ್ಕೆ ಮಾಂಸಗೊಂಡು ಎರಡುತಿಂಗಳಿಗೆ ಪಿಂಡಗಟ್ಟಿ ಬಯಕೆ ತೋರಿ ಮೂರುತಿಂಗಳಿಗೆ ಅಂಡಗಟ್ಟಿ ಹೇಸಿಕೆ ಹುಟ್ಟಿ ನಾಲ್ಕುತಿಂಗಳಿಗೆ ಅಂಗರೂಪು ಹುಟ್ಟಿ ಐದುತಿಂಗಳಿಗೆ ಅವಯವಂಗಳು ಹುಟ್ಟಿ ಆರುತಿಂಗಳಿಗೆ ಅವಯವಂಗಳು ಬಲಿದು ಏಳುತಿಂಗಳಿಗೆ ರೋಮ ಹುಟ್ಟಿ ಇಂತೀ ಪರಿಯಲ್ಲಿ ಶಿವಕೃಪೆಯಿಂದ ಪಿಂಡವರ್ಧನವಾಗಲು, ಇಂತಪ್ಪ ಪಿಂಡದಲ್ಲಿ ಶಿವಾಜ್ಞೆಯಿಂದ ಆತ್ಮನು ಪ್ರವೇಶವಾದಾಕ್ಷಣವೇ ಗರ್ಭದಲ್ಲಿ ಶಿಶುವು ಉಲುಕುವುದು. ಎಂಟುತಿಂಗಳಿಗೆ ಕುಕ್ಕುಟಾಸನದಿಂದ ಶಿಶುವು ಹುದುಗಿಕೊಂಡಿರ್ಪುದು. ನವಮಾಸಕ್ಕೆ ಮರ್ಕಟಾಸನದಿಂದ ನೆಟ್ಟನೆ ಕುಳ್ಳಿರ್ದು ಶಿಶುವು ಸರ್ಪನುಂಗಿದ ಇಲಿಯ ಹಾಂಗೆ ಗರ್ಭವೆಂಬ ಸರ್ಪ ಶಿಶುವನೊಳಕೊಂಡಿರ್ಪುದು. ಆ ಶಿಶುವಿಗೆ ಕ್ರಿಮಿಕೀಟಕ ಜಂತುಗಳು ಮೊದಲಾದ ಅನೇಕ ಬಾಧೆಗಳುಂಟು. ಆ ಬಾಧೆಗಳಿಂದ ಆ ಶಿಶುವು ತನ್ನ ಕೆನ್ನೆಗೆರಡು ಹಸ್ತವ ಹಚ್ಚಿ ಊಧ್ರ್ವಮುಖವಾಗಿ ಶಿವಧೋ ಶಿವಧೋ ಎಂದು ಶಿವಧ್ಯಾನವ ಮಾಳ್ಪ ಸಮಯದಲ್ಲಿ ಹರಕರುಣದಿಂದ ಆ ಗರ್ಭವೆಂಬ ಮನೆಯ ಬಿಟ್ಟು ಹೊರಡುವ ಸಮಯಕ್ಕೆ ಆ ಶಿಶುವಿನ ದುಃಖವ ಪೇಳ್ವೆ: ಕೋಟಿಸಿಡಿಲು ಹೊಯ್ದಂತೆ, ಸಾವಿರಚೇಳು ಕಡಿದಂತೆ, ಧರ್ಮಿಷ್ಟರಾಜನು ಮೃತವಾದರೆ ಅತಿಬಡವರಿಗೆ ದುಃಖವಾದಹಾಂಗೆ. ಬಳಗುಳ್ಳ ಪುಣ್ಯಪುರುಷನು ಸಾಯಂಕಾಲದಲ್ಲಿ ಮೃತನಾಗಿ ಪ್ರಾತಃಕಾಲದಲ್ಲಿ ಅವನ ಶವ ಎತ್ತುವಕಾಲಕ್ಕೆ ಅವನ ಬಳಗಕ್ಕೆ ದುಃಖವಾದಹಾಂಗೆ. ಆ ಮಾಯಾಯೋನಿಯೆಂಬ ಸೂಕ್ಷ್ಮ ಅಧೋದ್ವಾರದಿಂ ಆತ್ಮನು ಅನೇಕ ದುಃಖ ದಾವತಿಯಿಂದ ಜನಿಸಲು ಅಂತಪ್ಪ ಪಿಂಡಕ್ಕೆ ಯೋನಿ ಕಂಡರೆ ಹೆಣ್ಣೆಂಬರು ಶಿಶ್ನವ ಕಂಡರೆ ಗಂಡೆಂಬರು. ಒಳಗಿರುವ ಆತ್ಮನು ಹೆಣ್ಣು ಅಲ್ಲ, ಗಂಡು ಅಲ್ಲ ನಿರಾಳ ಬ್ರಹ್ಮಾಂಶಿಕವು. ಅದೆಂತೆಂದಡೆ: ಪಾಪದದೆಸೆಯಿಂದ ಹೆಣ್ಣಾಗಿ ಜನಿಸುವುದು; ಪುಣ್ಯದದೆಸೆಯಿಂದ ಪುರುಷನಾಗಿ ಜನಿಸುವುದು. ಇಂತೀ ಪರಿಯಲ್ಲಿ ಇರುವೆ ಮೊದಲು ಆನೆ ಕಡೆ ಎಂಬತ್ತುನಾಲ್ಕುಲಕ್ಷ ಜೀವರಾಶಿಯ ಯೋನಿಚಕ್ರಮಾರ್ಗದಲ್ಲಿ ತಿರುಗಿ ತಿರುಗಿ ಭವರಾಟಾಳಮಾರ್ಗದಲ್ಲಿ ದೇವ ದಾನವ ಮಾನವರು ಮೊದಲಾದ ಸಕಲಜನರು ಬರುವದುಕಂಡು ಥರಥರನೆ ನಡುಗಿ ಮರಳಿ ಈ ಜನನೀಜಠರಕ್ಕೆ ಬರಲಾರೆನೆಂದು ಅಂಜಿ ನಿಮ್ಮ ಮರೆಹೊಕ್ಕನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುಪೂಜೆ ಮಾಡುವಣ್ಣಗಳ ಸೂಳೇರ ಬಾಯಿಲೋಳೆ ನೆಕ್ಕಿಸಿತ್ತು ಮಾಯೆ. ಲಿಂಗಪೂಜೆ ಮಾಡುವಣ್ಣಗಳ ಅಂಗನೆಯರ ತೊಡೆಯ ಮೂಸಿನೋಡಿಸಿತ್ತು ಮಾಯೆ. ಜಂಗಮಪೂಜೆ ಮಾಡುವಣ್ಣಗಳ ರಂಭೆಯರ ಜಾನು ಜಂಘಯಲ್ಲಿರಿಸಿತ್ತು ಮಾಯೆ. ಪಾದೋದಕ ಪ್ರಸಾದವಕೊಂಬ ಅಣ್ಣಗಳ ಮದ್ಯಪಾನ ಮಾಂಸವ ತಿನಿಸಿತ್ತು ಮಾಯೆ. ವಿಭೂತಿ ರುದ್ರಾಕ್ಷಿ ಧರಿಸುವಣ್ಣಗಳ ತಿದಿಯ ಹಿರಿಸಿ ಮುಸುಕಿಯ ಕಟ್ಟಿಸಿತ್ತು ಮಾಯೆ. ಮಂತ್ರಧ್ಯಾನಿಗಳೆಲ್ಲರ ಅಂಗನೆಯರ ಭಗಧ್ಯಾನದಲ್ಲಿರಿಸಿತ್ತು ಮಾಯೆ ಜಪತಪವ ಮಾಡುವಣ್ಣಗಳ ಮುಸುಕು ತೆಗೆದು ಸ್ತ್ರೀಯರ ಮುಖವ ನೋಡಿಸಿತ್ತು ಮಾಯೆ. ಗುರುಹಿರಿಯರೆಂಬಣ್ಣಗಳ ಹಿರಿಯ ಶೂಲಕ್ಕೆ ಇಕ್ಕಿತ್ತು ಮಾಯೆ. ವಿರಕ್ತರೆಂಬಣ್ಣಗಳ ರಂಭೇರ ಮಲ ಒಸರುವ ಪೃಷ*ವ ಪಿಡಿಸಿತ್ತು ಮಾಯೆ. ಪಟ್ಟದಯ್ಯಗಳು ಚರಮೂರ್ತಿ ಹಿರಿಯರು ಮಾನ್ಯರೆಂಬಣ್ಣಗಳ ರಟ್ಟೆಗೆ ಹಗ್ಗಹಚ್ಚಿ ಸ್ತ್ರೀಯರ ಮುಂದೆ ಹಿಂಡಗಟ್ಟಿ ಎಳಸಿತ್ತು ಮಾಯೆ. ವೇದಾಗಮ ಪುರಾಣ ತರ್ಕ ತಂತ್ರಗಳೆಲ್ಲ ನೋಡಿ ಹಾಡುವಣ್ಣಗಳೆಲ್ಲರ ಹೊಲೆಮಾದಿಗರ ಕಾಲು ಹಿಡಿಸಿತ್ತು ಮಾಯೆ. ಇಂತೀ ನಾನಾ ಹಾದಿ ಶ್ರುತಿಗಳ ವಾಕ್ಯವ ಕೇಳಿ ದಾನಧರ್ಮಗಳ ಮಾಡುವಣ್ಣಗಳನೆಲ್ಲರ ತಲೆಕೆಳಗಾಗಿ ಕಾಲುಮೇಲಾಗಿ ಎಂಬತ್ತುನಾಲ್ಕುಲಕ್ಷ ಯೋನಿಗಳಲ್ಲಿ ರಾಟಾಳ ತಿರುಗಿದಂತೆ ತಿರುಗಿಸಿತ್ತು ಮಾಯೆ. ಇಂತಪ್ಪ ಮಾಯೆಯ ಗೆಲುವರೆ ಆರಿಗೂ ಅಳವಲ್ಲ. ಶಿವಜ್ಞಾನಸಂಪನ್ನರಾದ ಶಿವಶರಣರೇ ಬಲ್ಲರಲ್ಲದೆ, ಮಿಕ್ಕಿನ ದೇವ ದಾನವ ಮಾನವರು ಮೊದಲಾದ ಎಲ್ಲರಿಗೂ ಇಲ್ಲ ಇಲ್ಲ ಎಂದನಯ್ಯ ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪೃಥ್ವಿ ಅಪ್ಪು ತೇಜ ವಾಯು ಆಕಾಶದ ಕೊನೆಯ ಮೊನೆಯ ಮೇಲೆ, ಇಪ್ಪತ್ತೈದು ಗ್ರಾಮಂಗಳು, ಚೌಷಷ್ಟಿ ಪಟ್ಟಣ. ಛಪ್ಪನ್ನ ವೀಥಿಗಳ ದಾಂಟಿ, ಛತ್ತೀಸ ಪುರದ ರಚನೆಯ ನೋಡಬಲ್ಲೆವೆಂಬರು, ತ್ರಿಕೋಣದ್ವಾರಮಂಟಪದ ಅಯ್ವೆತ್ತೆರಡಕ್ಷರದ, ಶಾಸನದ ಲಿಪಿಯಂ ತಿಳಿಯಲೋದಿ, ಎಂಬತ್ತುನಾಲ್ಕುಲಕ್ಷ ದ್ವಾರದೊಳಗೆ ಹೊಕ್ಕು ಹೊರವಡುವ ಜೀವನ ತಿಳಿಯಲರಿಯದೆ ದಕ್ಷಿಣದ್ವಾರದಿಂದ ಉತ್ತರದ್ವಾರಕ್ಕೆ ಬಂದು, ಪಶ್ಚಿಮವಾಯುವ ಕೊನೆಯ ಮೊನೆಯ ಮೇಲೆ ಬೆಳಗುವ ಜ್ಯೋತಿಯ ನಿಮ್ಮ ಶರಣರಲ್ಲದೆ, ಲೋಕದ ಅಜ್ಞಾನಿಗಳೆತ್ತ ಬಲ್ಲರು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಗುರುವೆಂಬವನೇ ಹೊಲೆಯ. ಲಿಂಗಾಂಗಿ ಎಂಬವನೇ ಮಾದಿಗ. ಜಂಗಮವೆಂಬವನೇ ಸಮಗಾರ. ಈ ಮೂವರೊಳಗೆ ಹೊಕ್ಕು ಬಳಕೆಯ ಮಾಡಿದಾತನೇ ಭಕ್ತ. ಆ ಭಕ್ತನೆಂಬುವನೇ ಡೋರ. ಇಂತೀ ಚತುರ್ವಿಧ ಭೇದವ ತಿಳಿದು, ಪಾದೋದಕ ಪ್ರಸಾದವ ಕೊಡಬಲ್ಲರೆ ಗುರುಲಿಂಗಜಂಗಮವೆಂಬೆ. ಈ ನಿರ್ಣಯವ ತಿಳಿದು ಪಾದೋದಕ ಪ್ರಸಾದ ಕೊಳ್ಳಬಲ್ಲರೆ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣೈಕ್ಯರೆಂಬ ಷಟ್‍ಸ್ಥಲಬ್ರಹ್ಮಿ ಎಂಬೆ. ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ. ಇಂತೀ ಕ್ರಮವರಿತು ಪಾದೋದಕ ಪ್ರಸಾದವ ಕೊಳ್ಳಬಲ್ಲರೆ ಮೋಕ್ಷವಾಗುವುದಕ್ಕೆ ತಡವಿಲ್ಲವಯ್ಯ. ಈ ಭೇದವ ತಿಳಿಯದೆ ಅಯ್ಯಾ, ಹಸಾದ ಮಹಾಪ್ರಸಾದ ಪಾಲಿಸಿರೆಂದು, ಕರುಣಿಸಿರೆಂದು ಕೃಪೆ ಮಾಡಿ ಭೂತದೇಹಿಗಳೆದುರಿಗೆ ಪಾತಕಮನುಜರು ಅಡ್ಡಡ್ಡ ಬಿದ್ದು ಎದಿ ವಡ್ಡುಗಟ್ಟಿ ಮೊಳಕಾಲು ಗೂಡುಗಟ್ಟಿ ಹಣೆ ಬುಗುಟಿ ಎದ್ದು ಈ ಪರಿಯಲ್ಲಿ ಅಯ್ಯಾ ಪ್ರಸಾದ ಪಾಲಿಸೆಂದು ಪಡಕೊಂಡು ಲಿಂಗಕ್ಕೆ ತೋರಿ ತೋರಿ ತಮ್ಮ ಉದರಾಗ್ನಿ ಅಡಗಿಸಿಕೊಂಡು, ಕಡೆಯಲ್ಲಿ ಎಣ್ಣೆಯ ನಾತಕ್ಕೆ ಅಲಗ ನೆಕ್ಕುವ ಶ್ವಾನನ ಹಾಗೆ ತಮ್ಮ ನಾಲಿಗಿಯಲಿ ತಳಗಿ ತಾಬಾಣವ ನೆಕ್ಕಿ ನೆಕ್ಕಿ, ಆ ತಳಗಿ ತಾಬಾಣ ಸವೆದು ಸಣ್ಣಾಗಿ ಹೋದವಲ್ಲದೆ, ಇಂತಪ್ಪ ಮತಿಭ್ರಷ್ಟ ಹೊಲೆಯ ಮಾದಿಗರಿಗೆ ಪರಶಿವನ ಮಹಾಪ್ರಸಾದ ಸಾಧ್ಯವೇ? ಸಾಧ್ಯವಲ್ಲ. ಮುಂದೆ ಎಂಬತ್ತುನಾಲ್ಕುಲಕ್ಷ ಯೋನಿದ್ವಾರದಲ್ಲಿ ತಿರುಗಿ ತಿರುಗಿ ಭವದತ್ತ ಮುಖವಾಗಿ ನರಕವನೆ ಭುಂಜಿಸುವದು ಉಂಟೆಂದ ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲೋಕದ ನಚ್ಚಮಚ್ಚನೆ ನೀಗಿ ನಿಚ್ಚಟನಾಗಿ ಜ್ಞಾನ ಕ್ರೀಗಳಿಂದಾಚರಿಸಿ ಅಂಗಲಿಂಗದ ಸಂಬಂಧಿಗಳಾದ ಶಿವಲಿಂಗಮೋಹಿಗಳು ನೀವು ಕೇಳಿರಯ್ಯ. ಶರಣರು ಮುಕ್ತಿಪುರಕ್ಕೆ ಹೋಗುವ ಬಟ್ಟೆಯ ಬೆಡಗು ಬಿನ್ನಾಣದ ಪರಿಯ. ಆ ಮುಕ್ತಿಪುರಕ್ಕೆ ಹೋಗುವ ಹಾದಿಯಲ್ಲಿ ಒಂದು ಪಂಚವರ್ಣದ ಕಣ್ಣು ಮನಕ್ಕೆ ಮುಟ್ಟದ ಮಹಾಪಟ್ಟಣವೊಂದೇ. ಆ ಪಟ್ಟಣವ ಕಟ್ಟಿದುದು ಮೊದಲಾಗಿ ಊರು ಹಾಳಾಗಿಪ್ಪುದು. ಆ ಪಟ್ಟಣದ ನಡುವೆ ಹೋಗುತಿಪ್ಪ ಹಾದಿಯಲ್ಲಿ ಅಹಂಕಾರ ಮಮಕಾರಂಗಳೆಂಬ ಎರಡು ಪಟ್ಟಣಂಗಳು ತುಂಬಿ ತುಳುಕುತ್ತಿವೆ. ಆ ಎರಡು ಪಟ್ಟಣಕ್ಕೆ ಹೋದ ಹಾದಿ ಹೆಬ್ಬಟ್ಟೆಗಳಾಗಿಪ್ಪವು. ಆ ಎರಡು ಪಟ್ಟಣದ ವಿದಿಕ್ಕಿನಲ್ಲಿ ಒಂದು ಭಕ್ತಿಪುರವಿದೆ. ಆ ಭಕ್ತಿಪುರಕ್ಕೆ ಹಾದಿಯಿಲ್ಲ. ಆ ಭಕ್ತಿಪುರಕ್ಕೆ ಹೋದಲ್ಲದೆ ಮುಂದಣ ಮುಕ್ತಿಪುರದ ಬಟ್ಟೆಯ ಕಾಣಬಾರದು. ಆ ಮುಂದಣ ಪಯಣಗತಿಯ ಸಂಚುವರಿಯುವ ಸಂಬಂಧಮಂ ಶರಣ ಮನದಲ್ಲಿ ತಿಳಿದು ಆ ಹೆಬ್ಬಟ್ಟೆಗಳಲ್ಲಿ ಹೋದರೆ ಎಂಬತ್ತುನಾಲ್ಕುಲಕ್ಷ ಪ್ರಕಾರದ ಪರಮಂಡಲದಲ್ಲಿ ಸುಳಿವುದು ತಪ್ಪದೆಂದು ಅದಕ್ಕೆ ಹೇಹಮಂ ಮಾಡಿ ತಮ್ಮವರು ಹೋದ ನಸುದೋಯಲ ಬೆಂಬಳಿವಿಡಿದು ಹೋಗಿ ಭಕ್ತಿಪುರಮಂ ಕಂಡು ಆ ಭಕ್ತಿಪುರದ ನಡುವೆ ಹೋಗುತಿಪ್ಪ ಹಾದಿಯಲ್ಲಿ ಹೆಬ್ಬುಲಿ ಕರಡಿ ಕಳ್ಳ ರಕ್ಕಸಿ ಕರಿಘಟೆಯಿಪ್ಪ ಮಹಾಸರೋವರದ ಅರಣ್ಯವಿದೆ. ಆ ಸರೋವರದ ಮಧ್ಯದಲ್ಲಿ ಎಂಟುಕಲಶದ ಚೌಕಾಮಂಟಪದ ಸುವರ್ಣದ ದೇಗುಲವಿದೆ. ಆ ದೇಗುಲದಲ್ಲಿ ಮುಕ್ತಿರಾಜ್ಯಕ್ಕೆ ಪಟ್ಟುವ ಕಟ್ಟುವ ಸಮರ್ಥಿಕೆಯನುಳ್ಳ ಜಂಗಮಲಿಂಗವಿದೆ. ಆ ಜಂಗಮಲಿಂಗಮಂ ಶರಣ ಕಂಡು ಹರುಷಗೊಂಡು ಭಾವದಲ್ಲಿಯೇ ಷೋಡಶೋಪಚಾರ ಅಷ್ಟವಿಧಾರ್ಚನೆಗಳಿಂದ ಪೂಜೆಯಂಮಾಡಿ ತನ್ನ ಮನದಭೀಷ್ಟೆಯಂ ನೆನೆದಂತೆ ಮನದಲ್ಲಿ ಬೇಡಿ ದೇಹ ಮನ ಪ್ರಾಣಕುಳ್ಳ ಸಮಸ್ತ ಕರಣಾದಿ ಗುಣಗಳೆಲ್ಲಮಂ ಸುಟ್ಟು ಬೊಟ್ಟಿಕ್ಕಿ ನಿರ್ಮಲ ಸ್ವರೂಪನಾಗಿ ಅಲ್ಲಿಂದ ಮುಂದೆ ನಡೆವುತಿಪ್ಪಾಗ ಊಧ್ರ್ವದಿಕ್ಕಿನ ಆಕಾಶದಲ್ಲಿ ಅನೇಕ ಚೋದ್ಯವನೊಳಕೊಂಡಿಪ್ಪ ತ್ರಿಪುರಮಂ ಕಂಡು ಆ ತ್ರಿಪುರವ ಮೇಲೆ ಬ್ರಹ್ಮರಂಧ್ರವೆಂಬ ಕೈಲಾಸದ ಕಡೆಯ ಬಾಗಿಲೊಳಿಪ್ಪ ಐಕ್ಯಸ್ಥಲವೆನಿಸುವ ಆರುನೆಲೆಯ ಮಾಣಿಕ್ಯವರ್ಣದ ಉಪ್ಪರಿಗೆ ತಳಮಂ ಕಂಡು ಪತಿಯಿದ್ದ ಮನೆಯ ಬಾಗಿಲಂ ಸತಿ ಸಾರುವಂತೆ ಆ ಶರಣ ಆ ಉಪ್ಪರಿಗೆಯ ಬಾಗಿಲಂ ಸಾರೆ ಆ ಬಾಗಿಲಿನಲ್ಲಿ ಡಾಕಿನಿ ಶಾಕಿನಿ ರಾಕಿನಿ ಲಾಕಿನಿ ಕಾಕಿನಿ ಹಾಕಿನಿಯರೆಂಬ ಷಡ್ವಿಧಶಕ್ತಿಗಳಿಗೆ ಆದಿನಾಯಕಿಯಾಗಿಪ್ಪಳು, ಊಧ್ರ್ವಕುಂಡಲಿನಿಯೆಂಬ ಜ್ಞಾನಶಕ್ತಿ. ಆ ಶಕ್ತಿ ಆ ಬಾಗಿಲಿಗೆ ದ್ವಾರಪಾಲಕಿಯಾಗಿಪ್ಪಳು. ಅವಳು ಅಂಗರ ತಡೆವಳು ನಿರಂಗರ ಬಿಡುವಳೆಂಬುದ ಶರಣ ತನ್ನ ಮನದಲ್ಲಿ ತಾನೆ ತಿಳಿದು ಅಲ್ಲಿಪ್ಪ ಮಹಾಲಿಂಗಮಂ ಶರಣ ಮಂತ್ರಮಾಲೆಯಂ ಮಾಡಿ ಮನದಲ್ಲಿ ಧರಿಸಿ ಸೋಮ ಸೂರ್ಯರ ಕಲಾಪಮಂ ನಿಲಿಸಿ ಕುಂಭಮಂ ಇಂಬುಗೊಳಿಸಿ ರೆುsುೀಂ ರೆುsುೀಂ ಎಂದು ರೆುsುೀಂಕರಿಸುತಿಪ್ಪ ಪೆಣ್ದುಂಬಿಯ ನಾದಮಂ ಚಿಣಿಮಿಣಿ ಎಂದು ಸಣ್ಣರಾಗದಿಂದ ಮನವ ಸೋಂಕುತಿಪ್ಪ ವೀಣಾನಾದಮಂ ಲಿಂಗ ಲಿಂಗವೆಂದು ಕರೆವುತಿಪ್ಪ ಘಂಟಾನಾದಮಂ ಢಮ್ಮ ಢಮ್ಮ ಎನುತಿಪ್ಪ ಪೂರಿತವಾದ ಭೇರಿನಾದಮಂ ಚಿಟಿಲು ಪಿಟಿಲು ಧಿಗಿಲು ಭುಗಿಲೆನುತಿಪ್ಪ ಮೇಘನಾದಮಂ ಓಂ ಓಂ ಎಂದು ಎಲ್ಲಿಯೂ ಎಡೆವಿಡದೆ ಉಲಿವುತಿಪ್ಪ ಪ್ರಣವನಾದಮಂ ಓಂ ಹ್ರಾಂ ಹ್ರೀಂ ಹ್ರೂಂ ಹ್ರೇಂ ಹ್ರೆ ೈಂ ಹ್ರೌಂ ಹ್ರಂ ಹ್ರಃ ಎಂದು ಬೆಳಗ ಬೀರುತಿಪ್ಪ ದಿವ್ಯನಾದಮಂ ಅರಣ್ಯ ಘೋಳಿಡುವಂತೆ ಹೂಂಕರಿಸುತಿಪ್ಪ ಸಿಂಹನಾದಮಂ ಈ ಪ್ರಕಾರದ ನಾದಂಗಳಂ ಶರಣ ಕೇಳಿ ಮನದಣಿದು ಹರುಷಂ ಮಿಕ್ಕು ಆ ಬಾಗಿಲು ದಾಂಟಿ ಪಶ್ಚಿಮ ದಿಕ್ಕಿಗೆ ಮುಖವಾಗಲೊಡನೆ ಚೌಕಮಧ್ಯದಲ್ಲಿ ವಜ್ರ ವೈಡೂರ್ಯ ಪುಷ್ಯರಾಗ ಗೋಮೇಧಿಕ ಇಂತಿವರೊಳಗಾದ ನವರತ್ನಂಗಳ ಕಂಭ ಬೋದಿಗೆ ಹಲಗೆಗಳಿಂದ ಅನುಗೈದು ತೀರಿಸಿದ ಮಹಾ ಶ್ರೀ ಗುರುವಿನ ಒಡ್ಡೋಲಗದ ಹಜಾರದ ಪ್ರಭೆಯು ಆಕಾಶವನಲೆವುತಿಪ್ಪುದಂ ಕಂಡು ಬಹಿರಾವರಣವ ಸೇರಿಪ್ಪ ಪ್ರಾಕಾರದ ಗೋಡೆಯ ಎರಡು ಹದಿನಾರು ಗೊತ್ತುಗಳಲ್ಲಿ ಈಶಾನ ಪರ್ಜನ್ಯ ಜಯಂತರೊಳಗಾದ ಮೂವತ್ತೆರಡು ತಂಡದ ಅನಂತ [ವಾ]ಸ್ತುದೇವತೆಗಳ ಕಾವಲ ಅತ್ಯುಗ್ರವಂ ಕಂಡು ಶರಣರ್ಗೆ ತಡೆಹಿಲ್ಲವೆಂಬುದಂ ತನ್ನ ಮನಜ್ಞಾನದಿಂದವೇ ಅರಿದು ಕಾವಲಾಗಿಪ್ಪ [ವಾ]ಸ್ತುದೇವತೆಗಳ ಕೃಪಾದೃಷ್ಟಿಯಿಂದ ಸಂತೈಸಿ ಮುಕ್ತಿಪುರಕ್ಕೆ ಮೂಲ ಸೂತ್ರವಾದ ಬ್ರಹ್ಮರಂಧ್ರದ ಪೂರ್ವ ದಿಕ್ಕಿನ ಚಂದ್ರಮಂಡಲದಲ್ಲಿಪ್ಪ ಬಾಗಿಲ ಬೀಗಮಂ ತೆಗೆದು ಶರಣನು ಒಳಹೊಗಲೊಡನೆ ಬಹಿರಾವರಣದ ವೀಥಿ ಓಲಗದೊಳಿಪ್ಪ ಹರಿ ಸುರ ಬ್ರಹ್ಮಾದಿ ದೇವತೆಗಳು ಮನು ಮುನಿ ಗರುಡ ಗಂಧರ್ವ ಇಂದ್ರ ಚಂದ್ರರೊಳಗಾದ ಅನಂತರೆಲ್ಲರು ಬೆದರಿ ಕೆಲಸಾರೆ ಸೋಮವೀಥಿಯೊಳಿಪ್ಪ ಅನಂತರುದ್ರರೊಳಗಾದ ಇಪ್ಪತ್ತನಾಲ್ಕುತಂಡದ ಅನಂತರು ಶಿವನ ಒಡ್ಡೋಲಗದ ವೈಭವವ ನಡೆಸುವ ಪರಿಚಾರಕರು ಬಂದು ಶರಣ ಲಿಂಗದೃಷ್ಟಿ ಸಂಧಾನವಾಗಲೆಂದು ಸಮ್ಮುಖವಂ ಮಾಡೆ ಸೂರ್ಯವೀಥಿಯೊಳಿಪ್ಪ ಉಮೆ ಚಂಡೇಶ್ವರ ನಂದಿಕೇಶ್ವರರೊಳಗಾದ ಹದಿನಾರುತಂಡದ ಅನಂತರುದ್ರರು ಬಂದು ಶರಣನ ಸನ್ಮಾನವಂ ಮಾಡೆ ಅಗ್ನಿವೀಥಿಯೊಳಿಪ್ಪ ವಾಮೆ ಜ್ಯೇಷೆ*ಯರೊಳಗಾದ ಎಂಟುತಂಡದ ಅನಂತಶಕ್ತಿಯರು ಬಂದು ಶರಣನ ಇದಿರ್ಗೊಳೆ ಕರ್ನಿಕಾವೀಥಿಯೊಳಿಪ್ಪ ಅಂಬಿಕೆ ಗಣಾನಿಯರೊಳಗಾದ ನಾಲ್ಕುತಂಡದ ಶಕ್ತಿಯರು ಬಂದು ಶರಣನ ಕೈವಿಡಿದು ಕರೆತರೆ ಈ ಸಿಂಹಾಸನಕ್ಕೆ ಮೇಲುಗದ್ದಿಗೆಯೆನಿಪ ಸಿಂಹಾಸನ ಶುಭ್ರವರ್ಣದ ಹತ್ತುನೂರುದಳವ ಗರ್ಭೀಕರಿಸಿಕೊಂಡು ಬೆಳಗುತಿಪ್ಪ ಒಂದು ಮಹಾಕಮಲ. ಆ ಕಮಲದಳಂಗಳೊಳಗಿಪ್ಪ ಪ್ರಣವ. ಆ ಪ್ರಣವ ಸ್ವರೂಪರಾದ ಬಸವಾದಿ ಅಸಂಖ್ಯಾತ ಪ್ರಮಥಗಣಂಗಳು ಆ ಪ್ರಮಥಗಣಂಗಳಿಗೆ ಶರಣಭಾವದಲ್ಲಿಯೇ ಸಾಷ್ಟಾಂಗವೆರಗಿ ನಮಸ್ಕಾರವ ಮಾಡೆ ಆ ಗಣಂಗಳು ಕೃಪಾದೃಷ್ಟಿಯಿಂದ ಶರಣನ ಮೈದಡವಿ ಅನಂತಕೋಟಿ ಸೋಮ ಸೂರ್ಯ ಕಾಲಾಗ್ನಿ ಮಿಂಚು ನಕ್ಷತ್ರಂಗಳು ತಮ್ಮ ತಮ್ಮ ಪ್ರಕಾಶಮಂ ಒಂದೇ ವೇಳೆ ತೋರಿದ ಬೆಳಗಿನೊಡ್ಡವಣೆ ಪಂಚಪತ್ರಂಗಳಾವರಣಂಗಳಾಗಿ ತೋರ್ಪ ಹದಿನಾರುದಳಂಗಳೊಳಿಪ್ಪ ಷೋಡಶಕಳಾಪುಂಜವೆನಿಸುವ ಪದ್ಮಿನಿ ಚಂದ್ರಿಣಿಯರೊಳಗಾದ ಷೋಡಶ ಲಾವಣ್ಯಶಕ್ತಿನಿಯರ ಬೆಳಗಂ ಕಂಡು ಆ ಬೆಳಗಿನೊಡ್ಡವಣೆ ಬಯಲಾಯಿತ್ತು. ಈ ಕರ್ಣಿಕಾಪ್ರದೇಶದ ಪಂಚಪತ್ರಂಗಳೊಳಗಿಪ್ಪ ಪಂಚಪ್ರಣವಂಗಳ ಬೆಳಗಂ ಕಂಡು ಆ ಲಾವಣ್ಯಶಕ್ತಿನಿಯರ ಬೆಳಗು ತೆಗೆದೋಡಿತ್ತು. ಕರ್ಣಿಕಾಗ್ರದೊಳು ನಿಜನಿವಾಸವಾಗಿ ಮೂರ್ತಿಗೊಂಡಿಪ್ಪ ನಿಷ್ಕಲಬ್ರಹ್ಮದ ಚರಣದಂಗುಲಿಯ ನಖದ ಬೆಳಗಂ ಕಂಡು ಆ ಪ್ರಣವಂಗಳ ಬೆಳಗು ತಲೆವಾಗಿದವು. ಇಂತಪ್ಪ ಘನಕ್ಕೆ ಘನವಾದ ಮಹಾಲಿಂಗವಂ ಶರಣಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ ಮನಂ ನಲಿದು ಆನಂದಾಶ್ರುಜಲಂ ಸುರಿದು ಪುಳಕಂಗಳುಣ್ಮೆ ರೋಮಾಂಚನಂ ಗುಡಿಗಟ್ಟೆ ಪ್ರಣವದ ನುಡಿ ತಡೆಬಡಿಸಿ ನಡೆ ದಟ್ಟಡಿಸುವ ಕಾಲದಲ್ಲಿ ಕರ್ಪೂರದ ಪುತ್ಥಳಿ ಬಂದು ಉರಿಯ ಪುತ್ಥಳಿಯನಾಲಂಗಿಸಿದಂತೆ ಶರಣಂ ಬಂದು ಆ ಘನಲಿಂಗಮಂ ಅಮರ್ದಪ್ಪಿ ಪುಷ್ಪ ಪರಿಮಳದಂತೆ ಏಕವಾಗಿ ಘನಲಿಂಗ ತಾನೆಯಾದ, ಮಹಾಗುರು ಸಿದ್ಧೇಶ್ವರಪ್ರಭುವಿನ ಚರಣಮಂ ನಾನು ಕರಸ್ಥಲದಲ್ಲಿ ಪಿಡಿದು ಪೂಜೆಯಂ ಮಾಡಲೊಡನೆ ಎನ್ನ ತನುವೇ ಪಂಚಬ್ರಹ್ಮ ಪ್ರಾಣವೇ ಪರಬ್ರಹ್ಮವಾಯಿತು. ಪ್ರವೃತ್ತಿಯ ಬಟ್ಟೆ ಹುಲ್ಲು ಹುಟ್ಟಿತು. ನಿವೃತ್ತಿಯ ಬಟ್ಟೆ ನಿರ್ಮಲವಾಯಿತು. ಉಯ್ಯಾಲೆಯ ಮಣೆ ನೆಲೆಗೆ ನಿಂದಂತೆ ಆದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಎಂಬತ್ತುನಾಲ್ಕುಲಕ್ಷ ಬಹುರೂಪ ಚಂದ ಚಂದದಲ್ಲಿ ಆಡಿ ಬಂಧುಗಳ ಮೆಚ್ಚಿಸಬಂದೆ. ಅವರು ಬಹುರೂಪದಂದವನರಿಯರು. ರೇಕಣ್ಣಪ್ರಿಯ ನಾಗಿನಾಥನಲ್ಲಿ ಬಹುರೂಪದಿಂದ ವಿಚ್ಫಂದವಾಯಿತ್ತು.
--------------
ಬಹುರೂಪಿ ಚೌಡಯ್ಯ
ಶಿವ ಶಿವಾ, ನಾವು ಗುರುಲಿಂಗಜಂಗಮದ ತೀರ್ಥಪ್ರಸಾದಸಂಬಂಧಿಗಳೆಂದು ನುಡಿದುಕೊಂಬ ಎಲೆ ಮತಿಭ್ರಷ್ಟ ಮರುಳಮಾನವರಿರಾ, ನೀವು ಕೇಳಿರೋ, ನಾನು ಹೇಳಲಂಜುವೆನು. ಹೇಳಿದರೆ ಜಿಗುಪ್ಸೆ, ಹೇಳುವೆನು ಕೇಳಿರೋ. ಹೊಲಸು ಹಿಡಿಯಬಹುದು, ಪರಸ್ತ್ರೀಗಮನ ಮಾಡಬಾರದು. ಅದೇನು ಕಾರಣವೆಂದಡೆ: ಆ ಹೊಲಸಿನ ದೋಷವು ನೀರಿನಿಂದ ತೊಳೆದರೆ ನಿರ್ಮಲವಾಗಿ ತೋರುವುದು. ಆ ಹೆಂಗಸಿನ ದೋಷವು ನೀರಿನಿಂದ ತೊಳೆದರೆ ಹೋಗದು, ಬೆಂಕಿಯಿಂದ ಸುಟ್ಟರೆ ಹೋಗದು. ಅಂತಪ್ಪ ಹೊಲಸಿಗಿಂತ ಕರಕಷ್ಟವಾದ ಪೊಂಬಣ್ಣದ ಚರ್ಮದ ಹೆಂಗಸಿನ ಶೃಂಗಾರದ ಚಲ್ವಿಕೆಯ ಕಂಡು, ಆಶ್ಚರ್ಯಗೊಂಡು ಬೆಕ್ಕನೆ ಬೆರಗಾಗಿ, ಲಿಂಗಕ್ಕೆ ಹೊರಗಾಗಿ ಆ ಹೆಣ್ಣಿನ ತೊಡೆಯ ಕಣಕಾಲ ಸಂದುಗಳಲ್ಲಿ ಕುಳಿತು, ಲಿಂಗವ ಪಿಡಿವ ಕರದಲ್ಲಿ ಮಲ ಒಸರುವ ಪುಕಳಿಯ ಪಿಡಿದು, ಅಮರ್ದಪ್ಪಿ ಗಲ್ಲವ ಕಡಿದು ಆಕೆಯ ಉಚ್ಚಿ ಪುಚ್ಚಿ, ಜೌಗಿನ ಬಚ್ಚಲಹರಿಗೆ ಮೆಚ್ಚಿ, ನಿಚ್ಚ ನಿಚ್ಚಕ್ಕೆ ಕಚ್ಚಿ ಕಡಿದಾಡುವ ನುಚ್ಚಬಡುಕ ಮರುಳಮಾನವರು, ಗುರುಹಿರಿಯರು, ಜಂಗಮಲಿಂಗಿಗಳೆಂದು ಕರೆತಂದು, ನೀರು, ಕೂಳು ನೀಡಿ ತೀರ್ಥಪ್ರಸಾದವೆಂದು ಹೆಸರಿಟ್ಟು, ದೊಡ್ಡ ದೊಡ್ಡ ಗಡ್ಡದ ಹಿರಿಯರೆಲ್ಲರು ಕೂಡಿ, ದಾಸೋಹ ಮಾಡಿ, ಎದೆ ದಡ್ಡುಗಟ್ಟುವನ್ನಕ್ಕ ಅಡ್ಡಡ್ಡ ಬಿದ್ದು, ಅಯ್ಯಾ, ಹಸಾದ ಮಹಾಪ್ರಸಾದ ಪಾಲಿಸೆಂದು ಪಡಕೊಂಡು, ತಮ್ಮ ಉದರಾಗ್ನಿಯನಡಗಿಸಿಕೊಂಡು, ಎಂಬತ್ತುನಾಲ್ಕುಲಕ್ಷ ಯೋನಿಯಲ್ಲಿ ತಿರುಗುವ ಜಗಭಂಡ ಅಚ್ಚವ್ರತಗೇಡಿ ನಿಜ ಅಪರಾಧಿ ಕತ್ತೆ ಸೂಳೆಮಕ್ಕಳೆಲ್ಲ ತೀರ್ಥಪ್ರಸಾದಸಂಬಂಧ, ನಿತ್ಯ ನಿಜಲಿಂಗೈಕ್ಯ ಸತ್ಯಸದ್ಭಕ್ತರಾಗಬಲ್ಲರೇನಯ್ಯಾ? ಇಂತಪ್ಪ ಭವಕರ್ಮಿಗಳ ಮುಂದೆ ಲಿಂಗಾಂಗಸಂಗಸಮರಸದ ಅನುಭಾವವ ನುಡಿಯಲಂಜಿ, ಶಬ್ದಮುಗ್ಧನಾಗಿ ಸುಮ್ಮನಿದ್ದನು ಕಾಣಾ ನಿಮ್ಮ ಶರಣನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->