ಅಥವಾ

ಒಟ್ಟು 32 ಕಡೆಗಳಲ್ಲಿ , 21 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಡಪತ್ರೆಯ ನಾಡಕೀಡೆ ತಿಂದಿರವೆ ? ಉಡು ಏಕಾಂತ ನಿವಾಸಿಯೆ ? ತೋಳ ದಿಗಂಬರಿಯೇ ? ಎತ್ತು ಬ್ರಹ್ಮಚಾರಿಯೇ? ಬಾವುಲ ತಲೆಕೆಳಗಾಗಿದ್ದಡೆ ತಪಸ್ವಿಯೇ ? ಸಕಳೇಶ್ವರದೇವಾ, ನಿಮ್ಮ ನಿಜವನರಿಯದ ಶರಣರು ಹೊರಹಂಚೆ ಒಳಬೊಳ್ಳೆ, ಒಲ್ಲದು ಲಿಂಗೈಕ್ಯರು.
--------------
ಸಕಳೇಶ ಮಾದರಸ
ಎಲ್ಲರ ಸುಂಕ, ಎತ್ತು ತೊತ್ತು ಬಂಡಿ ಬಲ್ಲೆತ್ತು . ಎನ್ನ ಸುಂಕ ಎಲ್ಲರ ಪರಿಯಲ್ಲ. ಕಟ್ಟಿದ ಕುರುಹಿಂಗೆ, ಹಿಡಿದ ವ್ರತನೇಮನಿತ್ಯಕ್ಕೆ ತಪ್ಪಲಿಲ್ಲಾಯೆಂದು ಕೊಟ್ಟ ಚೀಟ ಸಿಕ್ಕಿಸಿದೆ ನಿಮ್ಮಂಗದಲ್ಲಿ. ಭಕ್ತರಾಗಿ ಕಳವು ಹಾದರ ಮಿಕ್ಕಾದೊಂದೂ ಬೇಡ ಎಂದು ಕೊಟ್ಟ ಚೀಟು ವಿಶುದ್ಧಿ, ಜಗದ ಸುಂಕದೊಡೆಯ ಬಂಕೇಶ್ವರಲಿಂಗನು.
--------------
ಸುಂಕದ ಬಂಕಣ್ಣ
ನೆವದಿಂದ ಶರಣರ ಬಾಗಿಲಲ್ಲಿ ಹೋಗಿ ಕಟ್ಟಿದ ಹಸು ಕೂಡಿದ ಎತ್ತು ಬಿಡಿರೊ ಎಂದು ಕೂಗುತ್ತಿದ್ದೇನೆ. ಎನ್ನ ಕೂಗಿನ ದನಿಯಿಂದ ಮಹಾಶರಣರ ಸತಿ ಬಂದು ಕಟ್ಟಿದ ಹಸುವ ಬಿಟ್ಟು, ಕೂಡಿದ ಎತ್ತ ಕಡಹಿ ನಾಳೆ ಕೊಡಿಯೆಂದು ಹೊಡೆವುತಿದ್ದೇನೆ ಗೋಪತಿನಾಥ ವಿಶ್ವೇಶ್ವರಲಿಂಗದಡಿಗಾಗಿ.
--------------
ತುರುಗಾಹಿ ರಾಮಣ್ಣ
ಅಯ್ಯಾ, ಎನ್ನ ಹೊರಗೆ ನೋಡಿದಡೆ ಇಂತಾಯಿತಯ್ಯ. ಎನ್ನ ಒಳಗೆ ನೋಡಿದಡೆ ಎಳ್ಳಿನಿತು ಹುರುಳಿಲ್ಲವಯ್ಯ ದೇವ. ಹೊನ್ನು ನನ್ನದು, ಹೆಣ್ಣು ನನ್ನದು, ಮಣ್ಣು ನನ್ನದು, ಪುತ್ರಮಿತ್ರಕಳತ್ರಯಾದಿಗಳು ನನ್ನದು, ಧನಧಾನ್ಯ ನನ್ನದು, ಆನೆ ಕುದುರೆ ಎತ್ತು ತೊತ್ತು ಮಂದಿ ಮಕ್ಕಳು ಅಷ್ಟೈಶ್ವರ್ಯದಲ್ಲಿ ನಾ ಬಲ್ಲಿದನೆಂದು ಬಹುಹಮ್ಮಿನಿಂದ ಗುರುಹಿರಿಯರ ಕಂಡಡೆ ತಲೆವಾಗದಯ್ಯ ಎನ್ನ ಚಿತ್ತವು. ಇಂತಾ ಚಿತ್ತದಿಂದ ನುಗ್ಗುನುರಿಯಾದೆನಯ್ಯ ನಿಃಕಳಂಕಮೂರ್ತಿ ಸಚ್ಚಿದಾನಂದ ಎನ್ನ ಅಪರಾಧವ ನೋಡದೆ ಕಾಯಯ್ಯ. ಕರುಣಾಂಬುದಿ ಅನಾದಿ ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ ! ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಎತ್ತು ತೊತ್ತಾಗಿ, ಭೃತ್ಯನಾಗಿ ಎಂದಿಪ್ಪೆನಯ್ಯಾ. ನಿಮ್ಮವರ ಮನೆಯಲು ಕೂಡಲಸಂಗಮದೇವಾ, ಲಿಂಗಜಂಗಮದ ಲೆಂಗಿಯಾಗಿ. 267
--------------
ಬಸವಣ್ಣ
ಭೂಮಿಯ ಹಿಡಿದು ಉಳುತ್ತಿದ್ದೇನಯ್ಯಾ, ಕಡೆ ನಡು ಮೊದಲಿಲ್ಲದೆ. ಎನ್ನ ಸ್ವಾಮಿಯ ಬರವಿಂಗೆ ಇದಿರಾದವು ಮೂರೆತ್ತು. ಕಡೆಯ ಹೊಲದ ತೆವರಿನಲ್ಲಿ, ಮರ ತಾಗಿ, ನೇಗಿಲು ಮುರಿಯಿತ್ತು, ನೊಗ ಸೀಳಿತ್ತು, ಎತ್ತು ಸತ್ತವು. ಎನಗಿನ್ನಾವುದು ದಿಕ್ಕು, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಎಮ್ಮೆಯನೇರಿದ ಎತ್ತು ಸಮ್ಮಗಾರ ನೋಡ. ಎತ್ತಿನ ಒಡೆಯ ಬಂದು ಎಮ್ಮೆಯ ಕೊಲ್ಲಲು ಸಮ್ಮಗಾರನು ಸತ್ತು ನಿಮ್ಮ ಕಂಡೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಸುವ ಕಾವಲ್ಲಿ ದೆಸೆಯನರಿತು, ಎತ್ತ ಕಾವಲ್ಲಿ ಪೃಥ್ವಿಯನರಿದು, ಕರುವ ಕಟ್ಟುವಲ್ಲಿ ಗೊತ್ತ ಕಂಡು ಧನವ ಕಾವಲ್ಲಿ ಸಜ್ಜನನಾಗಿ, ಜೀವಧನವ ಕಂಡಲ್ಲಿ ಮನ ಮುಟ್ಟದೆ, ಇಂತೀ ಭೇದೇಂದ್ರಿಯಂಗಳ ತುರುಮಂದೆಯಲ್ಲಿ ಕರು ಕಡುಸು ಎತ್ತು ಹಸುವಿನಲ್ಲಿ ಚಿತ್ರದ ವರ್ಣವನರಿಯಬೇಕು ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ.
--------------
ತುರುಗಾಹಿ ರಾಮಣ್ಣ
ಭವಭಾರಿ ಬಂಡಿ ಎತ್ತಿನ ಕಣ್ಣಿ ಹರಿದ ಕಾರಣ ನಿನ್ನ ಅರಿವಿನ ಬೆಳಗು ಗುರಿ ತಾಗಿ ಬಿದ್ದಡೂ ಎತ್ತು ಅತ್ತ ಹೋಗಿಯೆ ಮರಳಿತು. ಆ ಹೆಜ್ಜೆಯನು ಏಕೆ ಇಕ್ಕರೊ ? ಎತ್ತ ಎತ್ತನೆ ಹೊತ್ತು ಮೀರಿ ಓಡಿತ್ತಾಗಿ ಹಿಂದೆ ಅರಸುವರಿಲ್ಲ. ರೇಕಣ್ಣಪ್ರಿಯ ನಾಗಿನಾಥನ ಗೊಗ್ಗನೆತ್ತಿಗೆ ಹಗ್ಗವಿಲ್ಲ.
--------------
ಬಹುರೂಪಿ ಚೌಡಯ್ಯ
ಅನುಭವ ಅನುಭವವೆಂಬ ಅಣ್ಣಗಳು ನೀವು ಕೇಳಿರೆ, ಅನುಭವವೆಂಬುದೊಂದು ಎತ್ತು, ಕೆಟ್ಟಿತ್ತು. ಎತ್ತು ಗೇಣುದ್ದ, ಕೊಂಬು ಮೊಳದುದ್ದ. ಕೆಟ್ಟೆಂಟು ದಿನ, ಕಂಡು ಹದಿನಾರುದಿನ ನಿನ್ನೆ ಮೆಟ್ಟಿದ ನಾಟಿಯ ಮೊನ್ನೆ ಮೇವುದ ಕಂಡೆ ಗುಹೇಶ್ವರನೆಂಬ ಎತ್ತು ನಿಮ್ಮೊಳಗೈದಾನೆ; ಅರಸಿಕೊಳ್ಳಿರೊ.
--------------
ಅಲ್ಲಮಪ್ರಭುದೇವರು
-->