ಅಥವಾ

ಒಟ್ಟು 96 ಕಡೆಗಳಲ್ಲಿ , 36 ವಚನಕಾರರು , 67 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ನೋಡಿದರೆನ್ನಯ ಮನವಿಪ್ಪುದು. ಜಗದಗಲದಲ್ಲಿ ನೋಡಿದರೆನ್ನ ಮನವಿಪ್ಪುದು. ಸಪ್ತಸಾಗರದಿಂದತ್ತತ್ತವೆನ್ನಯ ಮನವಿರುತ ಚರಿಸುತಿಪ್ಪುದು. ಸಾಕ್ಷಿ ಗ್ರಂಥ : ``ಮಕಾರಂ ಮರುತರೂಪಯೋ ನಕಾರಂ ನಾಹಂ ಕೋಹಂ | (?) ಅಕ್ಷರದ್ವಯ ಮನೋ ನಾಮ ಸರ್ವದಾ ಸಮಾಶ್ರೀತಂ ||'' ಎಂದುದಾಗಿ, ಮನವೆಂಬ ವಾಯು ಹರಿದು ಗಳಿಗೆ ಗಳಿಗೆಗೆ ಒಂದೊಂದು ನೆನೆನೆನೆದು ಹಂಬಲಿಸಿ ಹತವಾಗುತಿದೆ. ಮನದ ಗಂಧೆಯ ತುರುಸಿದರೆ ಸುಖವಾಗುತಿದೆ. ಸುಖದಿಂದ ದುಃಖ, ದುಃಖದಿಂದ ಪ್ರಳಯಕ್ಕಿಕ್ಕಿ ಕೊಲ್ಲುತಿದೆ ಮನ. ಮನವೆಂಬ ಮಾಯದ ಬಲೆಯಲೆನ್ನ ಕೆಡವದೆ ಉಳುಹಿಕೊಳ್ಳಯ್ಯ ನಿರ್ಮಳ ನಿರ್ಮಳಾತ್ಮಕ ಜಗದಾರಾಧ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಧರೆಯ ಮೇಲೆ ನಿಂದು ಹೊಡೆವಡಿಸಿಕೊಂಬ ದೈವದ ಕುರುಹು ಎಲ್ಲಿ ಇದ್ದಿತ್ತು ಹೇಳಿರಣ್ಣಾ ? ಶರೀರದ ಮೇಲೆ ಕಟ್ಟಿ, ಕರ ಚರಣಾದಿ ಅವಯವಂಗಳು ಮುಂತಾದ ಹಲವು ಪರಿಭ್ರಮಣದಿಂದ ಪೂಜಿಸಿಕೊಂಬುದು, ಅದಾವ ಲಿಂಗವಣ್ಣಾ ? ಸರ್ವರೆಲ್ಲರ ಕೈಯಲ್ಲಿ, ಇದು ವಸ್ತು ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು, ಅದಾವ ವಸ್ತುವಿನ ಕುರುಹಣ್ಣಾ ? ಇಂತೀ ಸ್ಥಾವರ ಚರ ಅರಿವಿನ ಕುರುಹೆಂಬುದೊಂದು ಸೆರಗ ತೋರಾ ? ಅದು ನುಡಿವಡೆ ಸಮಯಕ್ಕೆ ದೂರ. ಅದು ಮುನ್ನವೆ ಅರಿದರಿವ ಈಗ ಕುರುಹಿಡುವಲ್ಲಿ, ಅದು ಪರಿಭ್ರಮಣ ಭ್ರಾಂತಿ. ಇಂತೀ ಕರ್ಮಕಾಂಡ, ಇಂತಿವನರಿದು ಬೆರೆದೆನೆಂಬ ಜ್ಞಾನಕಾಂಡ. ಸುಮುದ್ರಿತವಾಗಿ, ಆ ಸುಮುದ್ರೆಯಲ್ಲಿ ಸೂತಕ ನಿಂದು, ಅದೇತಕ್ಕೂ ಒಡಲಿಲ್ಲದಿಪ್ಪುದು, ಕಾಮಧೂಮ ಧೂಳೇಶ್ವರ ತಾನು ತಾನೆ.
--------------
ಮಾದಾರ ಧೂಳಯ್ಯ
ಅಡುವ ಮಡಕೆಯ ತೋರಿ ಶಿಶುವಿನ ಹಸುವಅಡಗಿಸುವವಳಂತೆ, ಬರಿದೆ ಗುಮ್ಮನಿದೆಯೆಂದು ಶಿಶುವ ಬೆದರಿಸಿ ಹಸುಳೆಯ ಅಡಗಿಸುವವಳಂತೆ, ಎನ್ನ ಗಸಣಿಗಾರದೆ ಗುರುಚರವೆಂಬ ಬರಿಯ ಇರವ ತೋರಿ, ನೀನು ಎಲ್ಲಿ ಅಡಗಿದೆ? ನಿನ್ನ ಕುರುಹ ತ್ರಿವಿಧದಲ್ಲಿಯೂ ಕಾಣೆ. ಅದು ನಿನ್ನ ಗನ್ನವೊ? ಎನ್ನ ವಿಶ್ವಾಸದ ಹೀನವೊ? ಉಭಯವೂ ನಿನ್ನ ಕೇಡು. ಆಳಿನ ಅಪಮಾನ ಆಳ್ದಂಗೆ ತಪ್ಪದು. ನೀನೆ ಕೆಡುವೆ, ನಿನ್ನೊಳಗೆ ಮುನ್ನವೆ ನಾ ನಷ್ಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಲಿಂಗವೆ ನಿಮ್ಮ ನೆನೆವ ಮನಕ್ಕೆ ಹೊನ್ನ ತೋರಿ, ನಿಮ್ಮ ನೋಡುವ ನೋಟಕ್ಕೆ ಹೆಣ್ಣ ತೋರಿ, ನಿಮ್ಮ ಪೂಜಿಸುವ ಕೈಗೆ ಮಣ್ಣ ತೋರಿ, ಮತ್ತೆ ಗಣಂಗಳ ಸಾಕ್ಷಿಯಾಗಿದ್ದುದ ತಿಳಿದು ಅವರಿಗೆ ಅಂಜಿ ಮನದ ಕೊನೆಯಲ್ಲಿ ಮಂತ್ರರೂಪಾಗಿ ನಿಂದ ಕಾರಣ ಹೊನ್ನಿನ ನೆನಹು ಕೆಟ್ಟಿತ್ತು ನೋಡಾ ! ಪರಶಿವಮೂರ್ತಿಯ ಮುದ್ದುಮೊಗದ ತುಟಿಯಲ್ಲಿ ಹುಟ್ಟಿದ ಓಂಕಾರನಾದಾಮೃತವ ಚುಂಬನವ ಮಾಡಲಿಕ್ಕೆ ಹೆಣ್ಣಿನ ನೋಟ ಕೆಟ್ಟಿತ್ತು. ಕರಕಮಲ ಗದ್ದುಗೆಯ ಮಾಡಿದ ಕಾರಣ ಮಣ್ಣಿನ ಧಾವತಿ ಬಿಟ್ಟುಹೋಯಿತ್ತು. ಇಂತು ಮಾಡಿದಿರಿ ಲಿಂಗವೆ, ಮತ್ತೆ ನಿಮ್ಮ ಬೇಡಿದಡೆ ಅಷ್ಟೈಶ್ವರ್ಯ ಚತುರ್ವಿಧಪದಗಳನು ಕೊಡುವಿರಿ. ಇವೆಲ್ಲ ಅಲ್ಪಸುಖ, ತಾಮಸಕಿಕ್ಕುವವು. ಮತ್ತೆ ನಮ್ಮ ಗಣಂಗಳ ಮನೆಯಲ್ಲಿ ಕೇಡಿಲ್ಲದಂತಹ ನಿತ್ಯವಾದ ವಸ್ತು ಅಷ್ಟೈಶ್ವರ್ಯಗಳುಂಟು, ನಿದ್ಥಿ ನಿಧಾನಗಳುಂಟು, ಇದಕ್ಕೆ ನಾವು ನೀವು ಬೇಡಿಕೊಂಬುವ ಬನ್ನಿರಿ. ಅವರಿರುವ ಸ್ಥಲವ ತೋರಿಕೊಡಿ ಎಲೆ ಲಿಂಗವೆ. ಅವರು ಎಲ್ಲಿ ಐದಾರೆಯೆಂದಡೆ : ಏಳುಪ್ಪರಿಗೆಯೊಳಗಿಪ್ಪರು. ಅವರ ನಾಮವ ಪೇಳ್ವೆನು - ಪಶ್ಚಿಮಚಕ್ರದಲ್ಲಿ ನಿರಂಜನ ಜಂಗಮವು, ಗುರು-ಹಿರಿಯರು ಅಸಂಖ್ಯಾತ ಮಹಾಗಣಂಗಳು ಸಹವಾಗಿಪ್ಪರು. ಅವರ ಮಧ್ಯದಲ್ಲಿ ನೀವೆ ನಾವಾಗಿ ಬೇಡಿಕೊಂಬೆವು. ಬೇಡಿಕೊಂಡ ಮೇಲೆ ಅವರು ಕೊಟ್ಟ ವಸ್ತುವ ಹೇಳಿಹೆನು ಕೇಳಿರೆ ಲಿಂಗವೆ. ಅವು ಯಾವುವೆಂದಡೆ : ಜೀವಾತ್ಮ ಅಂತರಾತ್ಮ ಪರಮಾತ್ಮರೆಂಬ ಆತ್ಮತ್ರಯರು, ಹೇಮಾದ್ರಿ ರಜತಾದ್ರಿ ಮಂದರಾದ್ರಿಯೆಂಬ ಮೇರುಗಳ ಸೆಜ್ಜೆಯ ಮಾಡಿ, ವಾಯುವನೆ ಶಿವದಾರವ ಮಾಡಿ, ತನುತ್ರಯವನೆ ವಸ್ತ್ರವ ಮಾಡಿ, ಇವುಗಳನೆ ಅವರು ನಮಗೆ ಕೊಟ್ಟರು. ಅಲ್ಲದೆ ಪರಸ್ತ್ರೀಯರ ಅಪ್ಪದ ಹಾಗೆ ನಿಃಕಾಮವೆಂಬ ಉಡುಗೊರೆಯ ಮಾಡಿ ಕಟ್ಟಿನಲ್ಲಿಟ್ಟರು. ಕುಶಬ್ದವ ಕೇಳದ ಹಾಗೆ ಬಲದ ಕರ್ಣದಲ್ಲಿ ಷಡಕ್ಷರವೆಂಬ ವಸ್ತುವ ಮಾಡಿಯಿಟ್ಟರು. ಪಂಚಾಂಗುಲಿಗೆ ಪಂಚಾಕ್ಷರವೆ ಐದುಂಗುರವ ಮಾಡಿಯಿಟ್ಟರು. ನೂರೆಂಟು ನಾಮ ಹರಗÀಣ ಕೊರಳಲಿ ಹಾಕಿದರು. ಆಪತ್ತಿಗೆ ಅಂಜಬೇಡೆಂದು ವಿಭೂತಿಧೂಳನ ಧಾರಣವಮಾಡಿ ಜೋಡಂಗಿಯ ಮಾಡಿ ತೊಡಿಸಿದರು. ಗಣಂಗಳು ಹೋದ ಹಾದಿಯನೆ ಮುಂಡಾಸವ ಮಾಡಿ ತಲೆಗೆ ಸುತ್ತಿದರು. ಆವ ಕಂಟಕವು ಬಾರದ ಹಾಗೆ ಗಣಂಗಳ ಪಾದಧೂಳನವ ಸೆಲ್ಲೆಯ ಮಾಡಿ ಹೊದಿಸಿದರು. ಭಕ್ತಿಯೆಂಬ ನಿಧಾನವ ಕೊಟ್ಟು, ಭಾವದಲ್ಲಿ ಬಚ್ಚಿಟ್ಟುಕೊಳ್ಳಿರಿ ಎಂದರು. ಅಷ್ಟಾವರಣವೆ ನಿದ್ಥಿನಿಧಾನವೆಂದು ಹೇಳಿದರು. ಇವೆಲ್ಲ ವಸ್ತುಗಳ ನಿಮ್ಮ ನೋಡಿ ಕೊಟ್ಟರಲ್ಲದೆ ಬೇರಿಲ್ಲ. ನಿಮ್ಮ ದಾಸಾನುದಾಸಯೆಂದು ನಿಮ್ಮೊಡವೆಯ ನಿಮಗೊಪ್ಪಿಸು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅರಳೆಯ ಮರನು ವಿಷ್ಣುಕಾಂತಿ ಬನ್ನಿ ಮುತ್ತಕ ತೊಳಚಿ ಹರಿ ಹರಿಯೆಂದು ಹೊಡ[ವ]ಡುವಿರಿ. ಎಲ್ಲಿ ಭೋ! ಎಲ್ಲಿ ಭೋ! ನಿಮ್ಮ ನಿಮ್ಮ ಹೊಡವಡುವ ದೈವಗಳೆಲ್ಲಾ ಗಿಡುಮರನಾಗಿ ಹೋದವಲ್ಲಾ! ನಿಮ್ಮ ನಡೆಯೆಲ್ಲಾ ಅನಾಚಾರ, ನುಡಿಯೆಲ್ಲಾ ಶಿವದ್ರೋಹ! ಇವದಿರ ಗಡಣ ಬೇಡೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬೆಲ್ಲದ ಪುತ್ಥಳಿಯ ಕೈಯಲ್ಲಿ ಹಿಡಿದು ಎಲ್ಲಿ ಚುಂಬಿಸಿದಡೂ ಇನಿದಹುದು. ಒಳ್ಳಿಹ ಬೇವಿನ ಹಣ್ಣ ಮೆಲ್ಲನೆ ಚುಂಬಿಸಿದಡೆ ಇನಿದಹುದೆ? ಎಲ್ಲ ವಿದ್ಯೆಯನೂ ಬಲ್ಲೆವೆಂದೆಂಬರು, ಅವರು ಅ(ಸ?)ಲ್ಲದೆ ಹೋದರಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತನ್ನ ತಾನರಿತೆನೆಂಬಲ್ಲಿ ತಾನಾರು ? ಅರಿತುದೇನಯ್ಯಾ ? ತನ್ನ ಮರೆದು ಇದಿರಿಂಗೆ ಅರಿವ ಹೇಳುವಲ್ಲಿ ಆ ಮರೆದ ಅರಿವಿಂಗೆ ಕುರುಹುಂಟೆ ? ಇಂತೀ ಉಭಯದಲ್ಲಿ ತಿಳಿದು ಮತ್ತೆ ವಚನ ನಿರ್ವಚನವೆಂಬುದು ಎಲ್ಲಿ ಅಡಗಿತ್ತು ಹೇಳಾ ? ತನ್ನಲ್ಲಿ ತೋರಿದ ಸ್ವಪ್ನ ತನಗೆ ಭೀತಿ ನಿರ್ಭೀತಿಯಾದಂತೆ ಇದಿರ ಘಟ್ಟಕ್ಕೆ ಪಡಿಪುಚ್ಚವುಂಟೆ ? ಇಂತೀ ಭಾವವ ತಿಳಿದಲ್ಲಿ ಆ ವಸ್ತು ತನಗೆ ಅನ್ಯಭಿನ್ನವಿಲ್ಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.
--------------
ಪ್ರಸಾದಿ ಭೋಗಣ್ಣ
ಗುರುವ ತಲೆಯಲ್ಲಿ ಹೊತ್ತು ನಡೆವ ಶಿಷ್ಯನಲ್ಲಿ ಗುರುವಡಗಿ ಶಿಷ್ಯ ಗುರುವಾದ ಪರಿಯ ಬಲ್ಲವರಾರಯ್ಯಾ? ಗುರುವಿನ ಗುರುತ್ವ ಶಿಷ್ಯಂಗಾಯಿತ್ತು, ಶಿಷ್ಯನ ಶಿಷ್ಯತ್ವ ಎಲ್ಲಿ ಹೋಯಿತ್ತೆಂದರಿಯಬಾರದು. ಗುರುವಿಲ್ಲದ ಶಿಷ್ಯಂಗೆ ಪರವಿಲ್ಲ. ಪರವಿಲ್ಲದ ಶಿಷ್ಯ ಸ್ವಯಂವಾಗನೆಂಬುದ ನಿಮ್ಮ ಶರಣರ ಅನುಭಾವದಲ್ಲಿ ಕಂಡೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಎಲ್ಲಿ ನೋಡಿದಡಲ್ಲಿ ಮನವೆಳಸಿದಡೆ ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಪರವಧುವನುಮಾದೇವಿಯೆಂಬೆ ಕೂಡಲಸಂಗಮದೇವಾ. 446
--------------
ಬಸವಣ್ಣ
ಇದು ಲೇಸಾಯಿತ್ತು: ತುಂಬಿದ ಲೆಕ್ಕಕ್ಕೆ ಮತ್ತೊಂದೆಂದು ಕಡೆಗಾಣಿಸುವಂತೆ, ಸ್ಥಾಣುವಿನ ಮರೆಯ ಚೋರನಂತೆ, ಅಂಬುಧಿಯ ಕೊಂಬಿನಲ್ಲಿದ್ದ ವಿಹಂಗನಂತೆ, ಎಲ್ಲಿ ಬಂದಡೂ ಗುಹೇಶ್ವರನೆಂಬ ಭಾವ ಒಂದಾಯಿತ್ತು !
--------------
ಅಲ್ಲಮಪ್ರಭುದೇವರು
ತೃಣ ಮುನಿದು ತ್ರಿಣಯನ ಹೆಡಗುಡಿಯ ಕಟ್ಟುವಾಗ, ಹಣೆಯ ಬೆಂಕಿ ಎಲ್ಲಿ ಅಡಗಿತ್ತೆಂದರಿಯೆ, ಕಡುಗಲಿಗಳೆಲ್ಲರೂ ಉಡುವಿನ ಕೈಯಲ್ಲಿ ಸಾವಾಗ, ಉಡಿಯ ಕೈದು ಎಲ್ಲಿ ಉಡುಗಿದವೆಂದರಿಯೆ. ಒಕ್ಕುಡಿತೆಯಲ್ಲಿ ಅಡಗಿತ್ತು ಸಮುದ್ರ, ಕೆರೆ ತುಂಬಿ ತೊರೆ ಒಡೆಯಿತ್ತು ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಾಳಿಕಾದೇವಿ, ಚಾಮುಂಡಿ, ಗಂಗೆ ಗೌರಿ, ಬನಶಂಕರಿ, ಎಲ್ಲಿ, ಏಕಲಾತಿ, ಹುಲಗಿ, ಹೊಸೂರಿ, ಸತ್ತವರು, ಹೆತ್ತವರು ಇಂತೀ ಹಲವು ಪಿಶಾಚಿಗಳ ಹೆಸರಿಂದ ಇದಿರಿಟ್ಟು ಆರಾಧಿಸಿ, ಅದರ ನೈವೇದ್ಯವೆಂದು ಶ್ರೀಗುರುವಿತ್ತ ಲಿಂಗಕ್ಕೆ ತೋರಿ ಭುಂಜಿಸುವ ಶಿವದ್ರೋಹಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ ಕಾಣಾ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಭಕ್ತಿಯುಳ್ಳನ್ನಕ್ಕ ಇಷ್ಟಲಿಂಗದ ಹಂಗು ಬೇಕು. ಆತ್ಮನುಳ್ಳನ್ನಕ್ಕ ಅರಿವೆಂಬುದ ವಿಚಾರಿಸಬೇಕು. ಮತ್ರ್ಯವೆಂಬುದು ನಾ ಬಲ್ಲನ್ನಕ್ಕ ಕರ್ಕಶದ ಜಗ. ಇದು ಕಾರಣದಲ್ಲಿ, ಕೈಲಾಸವೆಂಬ ಬಟ್ಟೆಯನರಸಬೇಕು. ಎನ್ನ ಸತ್ಯಕ್ಕೆ, ಎನ್ನ ಭಕ್ತಿಗೆ, ಎನ್ನ ಮನಕ್ಕೆ ಎನ್ನ ಮುಕ್ತ್ಯಂಗನೆ, ಎನ್ನ ನಿಶ್ಚಯಕ್ಕೆ ಒಂದು ಗೊತ್ತು ತೋರಾ. ನಿಃಕಳಂಕ ಮಲ್ಲಿಕಾರ್ಜುನ ಎಲ್ಲಿ ಇದ್ದಹನು ಹೇಳಾ ?
--------------
ಮೋಳಿಗೆ ಮಾರಯ್ಯ
ಇಂತಪ್ಪ ಲಿಂಗೈಕ್ಯವಹ ಭೇದವ ತಿಳಿಯದೆ ಮೂಢಮತಿಯಿಂದ ಕಾಡಲಿಂಗವ ಕೈಯಲ್ಲಿ ಪಿಡಿದು, ಮೈಯಲ್ಲಿ ಬೂದಿಯ ಧರಿಸಿ, ಗುಡ್ಡಗಂಹರ ಗುಹೆಗಳಲ್ಲಿ ಕಲ್ಲಪಡಿಯಲ್ಲಿ ಪರ್ಣಶಾಲೆಯ ಬಂಧಿಸಿ, ಅನ್ನ ಉದಕ ನಿದ್ರೆಯ ತೊರೆದು, ಪರ್ಣಾಹಾರವ ಭಕ್ಷಿಸಿ, ತನುವನೊಣಗಿಸಿ, ಮನವ ಬಳಲಿಸಿ, ಆತ್ಮನ ಸತ್ವಗುಂದಿ, ಚಳಿ ಮಳಿ ಗಾಳಿ ಬಿಸಿಲುಗಳಿಂದ, ಕಲ್ಲುಮರದಂತೆ ಕಷ್ಟಬಟ್ಟರೆ, ಇಂತಪ್ಪವರು ಲಿಂಗೈಕ್ಯವಾಗಲರಿಯರು ; ಕಡೆಯಲ್ಲಿ ಭವಭಾರಿಗಳು. ಮತ್ತೆಂತೆಂದಡೆ : ತಮ್ಮ ನಿಲವ ತಾವರಿಯದೆ ಎಲ್ಲಿ ಕುಳಿತರೂ ಇಲ್ಲ ; ಎಲ್ಲಿ ಹೋದಡೆಯೂ ಇಲ್ಲ. ಏನು ಮಾಡಿದಡೆಯು ವ್ಯರ್ಥವಲ್ಲದೆ ಸ್ವಾರ್ಥವಿಲ್ಲ. ಅದೇನು ಕಾರಣವೆಂದಡೆ : ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಯಾಗಿ ಸರ್ವಾಂಗಲಿಂಗಮಯ ತಾನೆಂದು ತಿಳಿದು, ಆ ಘನಮಹಾ ಇಷ್ಟಬ್ರಹ್ಮದಲ್ಲಿ ಬೇರೆಯಲ್ಲದೆ ಕೂಡಬಲ್ಲರೆ ಅದೇ ಲಿಂಗೈಕ್ಯ ಎಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕೈಲಾಸವೆಂಬುದು ಕ್ರಮಕೂಟ, ಮೋಕ್ಷವೆಂಬುದು ಭವದಾಗರ, ಕಾಯಸಮಾಧಿಯೆಂಬುದು ಪ್ರಪಂಚಿನ ಪುತ್ಥಳಿ. ಕಾಯ ಜೀವ ಕೂಡಿ ಬಯಲಾಗಿ ಇನ್ನಾವಠಾವಿನಲ್ಲಿ ಪೋಗಿ ನಿಲುವುದು? ತನುವಿನ ಗಂಭೀರವೆಂಬುದ ಮರಸಿದೆ, ಸದ್ಗುರುವ ತೋರಿ. ಸದ್ಗುರುವೆಂಬುದ ಮರಸಿದೆ ನಿಜವಸ್ತು ಶಿಲೆಯ ಮರೆಯಲ್ಲಿದ್ದು. ಲಿಂಗವೆಂಬುದ ಕುರುಹಿಟ್ಟು ಲಿಂಗವೆಂಬುದ ಮರಸಿದೆ, ತ್ರಿವಿಧ ಬಟ್ಟೆ ಕೆಡುವುದಕ್ಕೆ. ಜಂಗಮವೆಂಬುದ ತೋರಿ, ಜಂಗಮವೆಂಬುದ ಮರಸಿ ನೀನು ಎಲ್ಲಿ ಅಡಗಿದೆ? ಎಲ್ಲಿ ಉಡುಗಿದೆ? ಎಲ್ಲಿ ಬೆಂದೆರಿ ಎಲ್ಲಿ ಬೇಕರಿಗೊಂಡೆ? ನೀನು ಎಲ್ಲಿ ಹೋದೆ? ಹುಲ್ಲು ಹುಟ್ಟಿದ ಠ್ಞವಿನಲ್ಲಿ ನೀನೆಲ್ಲಿ ಹೋದೆ? ಅಲ್ಲಿ ನಿನ್ನವರೆಲ್ಲರ ಕಾಣದೆ, ಕಲ್ಲು, ಮಣ್ಣು ನೀರಿನಲ್ಲಿ ನೆರೆದಂತೆ ಬದುಕು, ನನಗಿಲ್ಲಿಯೇ ಸಾಕು. ನೀ ಕೊಟ್ಟ ಕುರುಹಿನಲ್ಲಿಯೆ ಬಯಲು ಸದ್ಯೋಜಾತಲಿಂಗವೆಂಬುದು ನಿರಾಲಂಬವಾಯಿತ್ತು.
--------------
ಅವಸರದ ರೇಕಣ್ಣ
ಇನ್ನಷ್ಟು ... -->