ಅಥವಾ

ಒಟ್ಟು 26 ಕಡೆಗಳಲ್ಲಿ , 17 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ತೆ ಅಳಿಯನ ಸಂಗವ ಮಾಡಿ ಒಳ ಒಳಗಿನ ಗೆಳೆಯರ ಬಳಿವಿಡಿಯನಾರು ಬಲ್ಲರಯ್ಯಾ! ಅಳಿಯ ನೆಂಟರ ಕೂಟವಂದಾದಲ್ಲಿ ನಿಂದಿತ್ತು ಪ್ರಾಣಲಿಂಗಸಂಬಂಧ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯಲ್ಲಿ ಲಿಂಗವುಂಟೆ? `ಸ್ವಯಮಾತ್ಮ ಪರೋಲಿಂಗ' ವೆಂದುಲಿವ ಬೀದಿಯ ಭಂಡರ ಮಾತ ಕೇಳಲಾಗದು. ತಿಲಕುಸುಮ ಪರಿಮಳದಂತೆ ಒಳ ಹೊರಗು ಪರಿಪೂರ್ಣ ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಕಂಗಳ ಬಲದಲ್ಲಿ ಮುನಿದೆಹೆನೆಂಬೆನೆ ಕಂಗಳು ತನ್ನನಲ್ಲದೆ ನೋಡವು. ಮನದ ಬಲದಲ್ಲಿ ಮುನಿದೆಹೆನೆಂಬೆನೆ ತನುಮನ ತಾಳಲಾರವವ್ವಾ. ಇಂತೀ ಮನಪ್ರೇರಕ ಮನ ಚೋರಕ ತನ್ನಾಧೀನವಾಗಿ ಸಾಧನವಪ್ಪಡೆ ಮನದ ಒಳ ಮೆಚ್ಚುವನವ್ವಾ. ಮನದಲ್ಲಿ ಬಯಸುವೆ, ಭಾವದಲ್ಲಿ ಬೆರಸುವೆ, ಮನಹಿಂಗೆ ಪ್ರಾಣನಾಥನಾಗಿ ಮಹಾಲಿಂಗ ಗಜೇಶ್ವರದೇವ ಮನಸಿಂಗೆ ಮನಸ ತರಲೀಸನವ್ವಾ.
--------------
ಗಜೇಶ ಮಸಣಯ್ಯ
ಎಲ್ಲಾ ಜಗಂಗಳೊಳಗಿರ್ದಡೇನು ಶಿವನು ಜಗದಂತಹನಲ್ಲ. ಜಗವ ತನ್ನೊಳಗಿಕ್ಕಿ ತಾ ಹೊರಗಿರ್ದಹೆನೆಂದಡೆ ಬ್ರಹ್ಮಾಂಡದಂತಹನೇ ? ಅಲ್ಲ. ಆಕಾಶದೋಪಾದಿಯಲ್ಲಿ ಸರ್ವಲೋಕದ ಒಳ ಹೊರಗೆ ಮೂಲ ಚೈತನ್ಯ ತಾನಾಗಿ, ಆಧಾರವಾದ ನಮ್ಮ ರೇಕಣ್ಣಪ್ರಿಯ ನಾಗಿನಾಥ
--------------
ಬಹುರೂಪಿ ಚೌಡಯ್ಯ
ಅರ್ಕನ ಉದಯಕ್ಕೆ ಕತ್ತಲೆ ಹರಿದು, ಚಕ್ಕನೆ ಬೆಳಗಾಯಿತ್ತು. ಬೆಳಗು ಪಸರಿಸಲಾಗಿ ನಿದ್ರೆ ಹರಿದು ಎದ್ದು ಕುಳ್ಳಿರ್ದು ಇದೆತ್ತಣ ಬೆಳಗೆಂದು ಹಿಂಬಾಗಿಲ ತೆಗೆದು ನೋಡಲು ಒಳ ಹೊರಗೆಲ್ಲಾ ತಾನೆ ಬೆಳಗುತ್ತಿರಲು ಆ ಬೆಳಗಿನೊಳಗೆ ನಿಂದು ಬೆಳಗುತ್ತಿದ್ದರಯ್ಯಾ. ಬೆಳಗನ ಬೆಳಗು ಒಬ್ಭುಳಿಯಾದಂತೆ, ಬೆಳಗು ಬೆಳಗು ಹಳಚಿದಂತೆ ಬೆಳಗುತ್ತಿದ್ದರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣರು.
--------------
ಸ್ವತಂತ್ರ ಸಿದ್ಧಲಿಂಗ
ಧರೆಯಾಕಾಶದ ಮಧ್ಯದಲ್ಲಿ ಉರಿಯ ಸೀರೆಯನುಟ್ಟು ಧರೆಯಾಕಾಶಕ್ಕೆ ಎಡೆಯಾಡುತಿದಾಳೆ ನೋಡಾ. ಊರ ಒಳ ಹೊರಗೆ ತಾನಾಗಿ ಆರು ಬಣ್ಣದ ಪಕ್ಷಿಯ ಶಿರದ ಅಮೃತವ ಕರೆದು ತಾನು ಪರಮಾನಂದ ಲೀಲೆಯಿಂದ ನಲಿದಾಡುತಿದಾಳೆ ನೋಡಾ. ಊರು ಬೆಂದು ಉಲುಹು ಅಳಿದುಳಿದು ಆರು ಬಣ್ಣದ ಪಕ್ಷಿಯಳಿದು ಆರೂಢವಾಯಿತ್ತು ನೋಡಾ. ಉರಿಯ ಸೀರೆಯ ಆಂಗನೆ ಉಪಮಾತೀತನ ನೆರೆದುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಂಚಭೂತೇಂದ್ರಿಯಂಗಳ ವಂಚನೆಯನತಿಗಳೆದ ನಿರ್ವಂಚಕನ ನೋಡಾ. ತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ ವಿಶ್ವಾವ್ಯಸನ, ಉತ್ಸಾಹವ್ಯಸನ, ಸೇವಕಾವ್ಯಸನವೆಂಬ ಸಪ್ತವ್ಯಸನಂಗಳ ಸಂಹಾರವ ಮಾಡಿದ ನಿವ್ರ್ಯಸನಿಯ ನೋಡಾ. ಷಡೂರ್ಮಿ ಷಡುವರ್ಗಂಗಳ ಹೊಡೆದಪ್ಪಳಿಸಿ ದಶವಾಯುಗಳ ಗಮನಾಗಮನದ ಶಿರವನರಿದ ಶಿವಜ್ಞಾನ ಸಂಪನ್ನನ ನೋಡಾ. ಅಷ್ಟತನುಮೂರ್ತಿಗಳ ಒಳಹೊರಗೆ ತೊಳಗಿ ಬೆಳಗುವ ಸ್ವಯಂಜ್ಯೋತಿ ತಾನಾಗಿ ಅಷ್ಟತನುಮೂರ್ತಿಯ ಮದಂಗಳ ಸುಟ್ಟುರುಹಿ ಒತ್ತಿ ಒರಸಿದ ಉಪಮಾತೀತನ ನೋಡಾ. ಸರ್ವವಿಕಾರಂಗಳ ಗರ್ವಪರ್ವತವ ಮುರಿದು ನಿರ್ವಿಕಾರಿಯಾದ ನಿಶ್ಚಲ ವಿರಕ್ತನ ನೋಡಾ. ಒಳ ಹೊರಗೆಂಬ ಕುಳವಳಿದ ನಿಃಕಳಂಕ ನಿರಾಕುಳನ ನೋಡಾ. ಅರುಹು ಮರಹಳಿದು, ನಿರ್ದೇಹಿಯಾಗಿ ನಿರ್ಮಲಾತ್ಮಕನಾಗಿ ಲಿಂಗವನಪ್ಪಿ ಅಗಲದಿಪ್ಪ ಮಹಾತ್ಮ ಶರಣರಿಂಗೆ ನಮೋ ನಮೋಯೆಂದು ಬದುಕಿದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಷ್ಟಲಿಂಗವ ಕರಕ್ಕೆ, ಪ್ರಸಾದಲಿಂಗವ ತನುವಿಂಗೆ ಒಳ ಹೊರಗೆನ್ನದೆ ಸರ್ವಾಂಗದೊಳಗೆ ಚರ ಪ್ರಸಾದಂಗವನಿತ್ತ ಶ್ರೀಗುರು ಆನಂದಸ್ಥಾನದಲ್ಲಿ ಅಕ್ಷರಂಗವನು ತಂದಿತ್ತ ಕಾರಣ ತನ್ನಂತೆ ಆನಾದೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆತ್ಮಂಗೆ ಜೀವ ಪರಮನೆಂದು ವಿಭೇದವ ತಿಳಿವಲ್ಲಿ ಆ ಅರಿವಿಂಗೆ ಆವ ಠಾವಿನ ಕುರುಹು? ಸಂಪುಟದ ಘಳಿಗೆಯಂತೆ ಮಡಿಕೆಯ ಭೇದ. ಜೀವ ಪರಮನ ಉಭಯದ ಯೋಗ. ಮುಕುರದ ಒಳ ಹೊರಗಿನಂತೆ ಘಟವೊಂದು. ದ್ರವ್ಯವೇಕವ ಮಾಡುವ ಕುಟಿಲದಿಂದ ಉಭಯ ಭಿನ್ನವಾಯಿತ್ತು. ಈ ಗುಣ ಜೀವ ಪರಮನ ನೆಲೆ. ಇದಾವ ಠಾವಿನ ಅಳಿವು ಉಳಿವು? ಈ ಗುಣವ ಭಾವಿಸಿ ತಿಳಿದಲ್ಲಿ ಸ್ವಾನುಭಾವ ಸಂಗ ಸಾವಧಾನದ ಕೂಟ, ಜ್ಞಾನನೇತ್ರ ಸೂತ್ರ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕಾಯವೆ ಜೀವವೊ? ಜೀವವೆ ಕಾಯವೊ? ಕಾಯವಳಿದಲ್ಲಿ ಜೀವವಳಿವುದೊ ಉಳಿವುದೊ? ಬಲ್ಲವರು ನೀವು ಹೇಳಿರೆ! ಪ್ರಾಣವು ಲಿಂಗವು ಬೇರಿಪ್ಪುದೊ? ಬೆರಸಿಪ್ಪುದೊ? ಬಲ್ಲಡೆ ನೀವು ಹೇಳಿರೆ. ಪ್ರಾಣಲಿಂಗ ಲಿಂಗಪ್ರಾಣವೆಂಬ ಸಂದು ಸಂಶಯವಳಿದು ಶುದ್ಧವಿದ್ಯಾತೀತ ನೀನೇ. ನಿಜನಿರ್ಣಯ ನಿಃಪತಿಯಾಗಿ, ಕಾಯ ಜೀವದ ಭೇದವಳಿದು ಜೀವ ಪರಮನೆಂಬುಭಯವಳಿದುಳಿದು ಒಳ ಹೊರಗೆಂಬ ಕುಳವಳಿದಾತ ನೀನೇ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
-->