ಅಥವಾ

ಒಟ್ಟು 67 ಕಡೆಗಳಲ್ಲಿ , 26 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆಂಡತಿ, ಗಂಡನ ಒಡೆಯರೆಂದು ಕೂಡಿಕೊಂಡು ಉಂಡೆಹೆನೆಂಬ ಜಗಭಂಡೆಯ ನೋಡಾ. ಕೂಟಕ್ಕೆ ಪುರುಷನಾಗಿ ನೇಮಕ್ಕೆ ಒಡೆತನವುಂಟೆ? ಇಂತೀ ಜಾರೆಯ ನೇಮ ಮೂತ್ರದ ದ್ವಾರಕ್ಕೆ ಈಡು. ಇಂತೀ ಸಂಸಾರದ ಘಾತಕತನದ ವ್ರತ ಮೀಸಲ ಶುನಕ ಮುಟ್ಟಿದಂತೆ ಅದು ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ಅಯ್ಯಾ ಎನ್ನ ತಂದೆ ತಾಯಿಗಳು ತಮ್ಮ ಕಂದನಪ್ಪ ಶಕ್ತಿಯ ಕೈಲೆಡೆಗೊಟ್ಟು ಕಳುಹಿದಡೆ, ಎನ್ನ ಇಲ್ಲಿಗೆ ತಂದು ಮದುವೆಯಂ ಮಾಡಿ, ಮುಗ್ಧನಪ್ಪ ಗಂಡನ ಕೊರಳಲ್ಲಿ ಕಟ್ಟಿ, ಎನ್ನ ಅತ್ತೆ ಮಾವಂದಿರ ವಶಕ್ಕೆ ಕೊಟ್ಟರು. ಎಮ್ಮತ್ತೆ ಮಾವಂದಿರ ಊರ ಹೊಕ್ಕರೆ, ಕತ್ತಲೆಯಲ್ಲದೆ ಬೆಳಗಿಲ್ಲ. ಎಮ್ಮತ್ತೆ ಮಾವಂದಿರ ಮನೆಯ ಹೊಕ್ಕರೆ, ಅತ್ತಿಗೆ ನಾದಿನಿ ಭಾವ ಮೈದುನ ಇವರು ನಾಲ್ವರು ಎನ್ನ ಗಂಡನ ತಲೆಯೆತ್ತಿ ನೋಡಲೀಸರು. ಹಟ್ಟಿಯಲಿಪ್ಪ ಶುನಕ ಅಡಿಯಿಟ್ಟು ನಡೆಯಲೀಸವು. ಸುತ್ತಲಿಹ ಆನೆ ಕುದುರೆ ತೊತ್ತಳದುಳಿವುತಿಪ್ಪವು. ಒತ್ತೊತ್ತಿನ ಬಾಗಿಲವರು ಎನ್ನ ಇತ್ತಿತ್ತ ಹೊರಡಲೀಸರು. ಸುತ್ತಲಿಹ ಕಾಲಾಳ ಪ್ರಹರಿ, ಮೊತ್ತದ ಸರವರ ಈ ಮುತ್ತಿಗೆಗೊಳಗಾಗಿ ನಾ ಸತ್ತು ಹುಟ್ಟುತಿರ್ದೆನಯ್ಯಾ, ಆಗ ಎನ್ನ ಹೆತ್ತತಾಯಿ ಬಂದು ತತ್ವವೆಂಬ ತವರುಮನೆಯ ಹಾದಿ ತೋರಿದಡೆ, ಇತ್ತ ತಾ ನೋಡಿ ಎಚ್ಚತ್ತು, ಎನ್ನ ಚಿಕ್ಕಂದಿನ ಗಂಡನ ನೋಡಿದೆ. ಎಮ್ಮಿಬ್ಬರ ನೋಟದಿಂದ ಒಂದು ಶಿಶು ಹುಟ್ಟಿತ್ತು. ಆ ಶಿಶು ಹುಟ್ಟಿದಾಕ್ಷಣವೆ ಎಮ್ಮಿಬ್ಬರ ನುಂಗಿತ್ತು. ನುಂಗಿದ ಶಿಶು ತಲೆಯೆತ್ತಿ ನೋಡಲು, ಎಮ್ಮತ್ತೆ ಮಾವಂದಿರಿಬ್ಬರು ಹೆದರಿ ಬಿದ್ದರು. ಅತ್ತಿಗೆ ನಾದಿನಿ ಭಾವ ಮೈದುನ ಇವರು ನಾಲ್ವರು ಎತ್ತಲೋ ಓಡಿಹೋದರು. ಈ ಹಟ್ಟಿಯಲ್ಲಿಪ್ಪ ಶುನಕ ಸುತ್ತಲಿಹ ಆನೆ ಕುದುರೆ ಒತ್ತೊತ್ತಿನ ಬಾಗಿಲವರು, ಸುತ್ತಲಿಹ ಕಾಲಾಳ ಪ್ರಹರಿ ಮೊತ್ತದ ಸರವರ ಹೊತ್ತಿ ನಿಂದುರಿದು, ನಾ ಸುತ್ತಿ ನೋಡಿದರೆ ಎಲ್ಲಿಯೂ ಬಟ್ಟಬಯಲಾಗಿರ್ದಿತ್ತು ಕಾಣಾ. ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಮದುವೆಯ ಗಂಡನ ಮುಖದಿಂದೆ ಮಂಗಲಪುರುಷರ ಸಂಗವನರಿದೆ. ನಟನೆಗಳಿಂದೆ ಮೂವರಿಗೆ ರತಿರಮ್ಯವಾಗಿ ಮೆಚ್ಚಿಸಿ ಆ ಮೆಚ್ಚಿನೊಳಗಾದೆನು. ಸವಿನುಡಿಯ ಸಾರದೊಳು ಮೂವರಿಗೆ ಮರುಳುಮಾಡಿ ಆ ಮರುಳಿನೊಳಗಾದೆನು. ಮೆಚ್ಚು ಮರುಳ ನುಂಗಿ ಚಿಣ್ಣ ಮನೆಯ ಚೆದುರ ನಮ್ಮ ಗುರುನಿರಂಜನ ಚನ್ನಬಸವಲಿಂಗವನಪ್ಪಿ ಅರಿಯದಾದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ದಾಸಿಯ ಸಂಗವ ಮಾಡಿದಡೆ ಸೂಕರನ ಮಾಂಸವ ತಿಂದ ಸಮಾನ, ವೇಶಿಯ ಸಂಗವ ಮಾಡಿದಡೆ ಮಾಂಸವ ತಿಂದ ಸಮಾನ, ಮುಂಡೆಯ ಸಂಗವ ಮಾಡಿದಡೆ ಅಮೇಧ್ಯವ ತಿಂದ ಸಮಾನ, ಗಂಡನ ಬಿಟ್ಟವಳ ಸಂಗವ ಮಾಡಿದಡೆ ನರಮಾಂಸವ ತಿಂದ ಸಮಾನ, ಗಂಡನುಳ್ಳವಳ ಸಂಗವ ಮಾಡಿದಡೆ ಸತ್ತ ಹೆಣದ ಬೆನ್ನ ಮಲವ ತಿಂದ ಸಮಾನ, ಚೋರ ಕನ್ನಿಕೆಯ ಸಂಗವ ಮಾಡಿದಡೆ ಸುರಾಪಾನವ ಕೊಂಡ ಸಮಾನ. ಇದು ಕಾರಣ ಗುರುವಾಗಲಿ, ಜಂಗಮವಾಗಲಿ, ಭಕ್ತನಾಗಲಿ ದಾಶಿ ವೇಶಿ ವಿಧವೆ ಪರಸ್ತ್ರೀ ಚೋರಕನ್ನಿಕೆ ಬಿಡಸ್ತ್ರೀ ಮೊದಲಾದ ಹಲವು ಪ್ರಕಾರದ ರಾಶಿಕೂಟದ ಸ್ತ್ರೀಯರ ಬಿಟ್ಟು ಶುದ್ಧಕನ್ಯೆಯ ಭಕ್ತಗಣ ಸಾಕ್ಷಿಯಾಗಿ ವಿಭೂತಿಪಟ್ಟ ಪಾಣಿಗ್ರಹಣ ಏಕಪ್ರಸಾದಭುಕ್ತನಾಗಿ ಭಕ್ತಿಕಲ್ಯಾಣವಾಗಿ ಸತ್ಯಸದಾಚಾರದಲ್ಲಿ ವರ್ತಿಸುವ ಭಕ್ತಾರಾಧ್ಯರಿಗೆ_ ಗುರುವುಂಟು ಲಿಂಗವುಂಟು ಜಂಗಮವುಂಟು ಪಾದೋದಕವುಂಟು ಪ್ರಸಾದವುಂಟು; ಆತಂಗೆ ನಿಜಮೋಕ್ಷವುಂಟು. ಇಂತಲ್ಲದೆ_ ತನ್ನಂಗವಿಕಾರಕ್ಕೆಳಸಿ ದುರ್ವಿಷಯಾಸಕ್ತನಾಗಿ ಆರು ಪ್ರಕಾರದ ಸ್ತ್ರೀಯರು ಮುಂತಾದ ರಾಶಿಕೂಟದ ಸ್ತ್ರೀಯರಿಗೆ ಹೇಸದೆ ಆಸೆ ಮಾಡುವ ಪಾಠಕರಿಗೆ; ಗುರುವಿಲ್ಲ; ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ; ಅವ ಭಕ್ತನಲ್ಲ ಜಂಗಮವಲ್ಲ, ಅವರಿಗೆ ಮುಕ್ತಿಯಿಲ್ಲ, ಮುಂದೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎನ್ನ ತಂದೆಯ ಬಸುರಲ್ಲಿ ಬಂದಳೆಮ್ಮವ್ವೆ ಎನ್ನ ತಂಗಿಯರಿಬ್ಬರೂ ಹೆಂಡಿರಾದರೆನಗೆ. ಎನ್ನ ಸತಿಯರು ಎನ್ನ ಮದವಳಗಿತ್ತಿಯ ಮಾಡಿ, ಎಮ್ಮಪ್ಪಗೆ ಮದುವೆಯ ಮಾಡಿದರು. ಎನ್ನ ಗಂಡನ ಮನೆಯೊಡವೆಯನೆನ್ನ ಉಗುರುಕಣ್ಣಿನಲ್ಲೆತ್ತಿ ಒಗತನವ ಮಾಡುವೆನು. ಎಮ್ಮಕ್ಕನ ಕೈಯಿಂದ ಎನ್ನ ಗಂಡನ ಹೆಂಡತಿಯೆನಿಸಿಕೊಂಬೆನು. ಎನ್ನ ಗಂಡ ಆಳಲಿ ಆಳದೆ ಹೋಗಲಿ ಪತಿಭಕ್ತಿಯ ಬಿಡೆ ಕಾಣಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಹಿಂದ ಮರಹಿಸದೆ, ಮುಂದನರುಹಿಸದೆ ಹರಿಹರಿದು ಉಪದೇಶವ ಮಾಡುವ ಹೀಹಂದಿಗಳನೇನೆಂಬೆಯ್ಯಾ ? ಗಂಡನ ಗುರು ಹೆಂಡತಿಯ ಮಾವನೆ ? ಹೆಂಡತಿಯ ಗುರು ಗಂಡನ ಮಾವನೆ ? ಉಪಮೆಗೆ ಬಾರದ ವಸ್ತುವ ಭಾವಕ್ಕೆ ತಂದು ನುಡಿವ ನರಕಿಗಳ ಕೂಗಿಡೆ ಕೂಗಿಡೆ ನರಕದಲದ್ದೂದ ಮಾಬನೆ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಅಕ್ಕನಪುರುಷನ ಬಲದಿಂದ ಬ್ರಹ್ಮನ ತಲೆ ಹೊಡೆದು, ತಂಗಿಯಪುರುಷನ ಬಲದಿಂದ ವಿಷ್ಣುವಿನ ಹಸ್ತವ ಕಡಿದು, ತಾಯಿಯ ಗಂಡನ ಬಲದಿಂದ ರುದ್ರನ ಎದೆಯ ಹೊಡೆದು ಇರ್ಪಾತನೆ ಚಿಲ್ಲಿಂಗಸಂಬಂಧಿ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಗಮ ನಿಗಮ ಶಾಸ್ತ್ರ ಪುರಾಣವೆಂಬ ಅಂಧಕನ ಕೈಗೆ ಕೋಲಕೊಟ್ಟು ನಡೆಸಿಕೊಂಡು ಹೋಗುವಾಗ, ತನ್ನ ಕಣ್ಣುಗೆಟ್ಟಡೆ ಮುಂದಕ್ಕೆ ಗಮನವಿಲ್ಲ. ಹಿಂದಕ್ಕೆ ತಿರುಗಲರಿಯದೆ, ಎರಡಕ್ಕೆ ಕೆಟ್ಟ ಜಂಬುಕನಂತೆ ಆಯಿತ್ತು ನೋಡಾ. ಸಜ್ಜನ ಗಂಡನ ಕದ್ದು, ಕಳ್ಳನ ಹಿಂದೆ ಹೋದ ಸತಿಯಂತೆ ಆದರಲ್ಲಾ. ಸಂತೆಯಲ್ಲಿ ಗುಡಿಸಲನಿಕ್ಕಿ ಹಡೆದುಂಬ ಸೂಳೆಯಂತೆ, ಮನವೆ ಸೂಳೆಯಾಗಿ, ಮಾತಿನ ಮಾಲೆಯ ಸರವನಿಕ್ಕಿಕೊಂಡು, ವಾಚಾಳಿಗತನದಿಂದ ಒಡಲ ಹೊರೆವವರೆಲ್ಲರೂ ಶರಣರಪ್ಪರೆ ? ಅಲ್ಲಲ್ಲ. ಅದೆಂತೆಂದಡೆ: ತನು ಕರಗಿ, ಮನ ಪುಳಕವಾದ ಮಹಾಮಹಿಮರಿಗಲ್ಲದೆ ಉಚ್ಚಿಯ ಬಚ್ಚಲಲ್ಲಿ ಓಲಾಡುವ ತೂತಜ್ಞಾನಿಗಳಿಗೆಂತಪ್ಪದು ಹೇಳಾ ? ಕಾಲಾಳು ಆಕಾಶವನಡರಿಹೆನೆಂಬ ಪರಿಯೆಂತೊ ? ಬ್ರಹ್ಮಪುರ ವೈಕುಂಠ ರುದ್ರಪುರ ಅಷ್ಟಾದಿ ಕೈಲಾಸವೆಂಬ ಈ ಪಂಚಗ್ರಾಮಂಗಳ ವರ್ಮ ಕರ್ಮವಳಿದ ಮಹಾದೇವಂಗಲ್ಲದೆ ಮುಂದಕ್ಕೆ ಅಡಿಯಿಡಬಾರದು. ಪಿಪೀಲಿಕ ಕಪಿಯ ಮತವೆಂಬ ಪಥ ಮೀರಿ, ವಿಹಂಗವೆಂಬ ವಾಹನಮಂ ಏರಿ, ಬ್ರಹ್ಮಾಂಡಕ್ಕೆ ದಾಳಿ ಮಾಡಿ, ಸುವರ್ಣಪುರಮಂ ಸುಟ್ಟು ಸೂರೆಗೊಂಡ ಮಹಾನುಭಾವಿಗಳ ತೋರಿ ಬದುಕಿಸಾ. ನಿಜಗುರು ಭೋಗೇಶ್ವರಾ, ನಾ ನಿಮ್ಮ ಧರ್ಮವ ಬೇಡಿಕೊಂಬೆ.
--------------
ಭೋಗಣ್ಣ
ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವಾ ! ಅಂಗವಿದ್ಯೆಯನೊಲ್ಲ, ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ, ಕೈಯ ತೊಳೆದಲ್ಲದೆ ಮುಟ್ಟಲೀಯ, ಕಾಲ ತೊಳೆದಲ್ಲದೆ ಹೊಂದಲೀಯ. ಇಂತೀ ಸರ್ವಾಂಗ ತಲೆದೊಳೆದ ಕಾರಣ, ಕೂಡಲಸಂಗಮದೇವನೆನ್ನ ಕೂಡಿಕೊಂಡನವ್ವಾ
--------------
ಬಸವಣ್ಣ
ಅಂಗದ ಮೇಲಕ್ಕೆ ಬಂದ ಆಚಾರಲಿಂಗದ ಹೊಲಬನರಿಯದೆ ಕೈಲಾಸದ ಮೇಲಿಪ್ಪ ಬಾಲಕೋಟಿಸೂರ್ಯಪ್ರಕಾಶವನುಳ್ಳ ಶಿವನನೊಲಿಸಬೇಕೆಂದು ಒಂದು ವಸ್ತುವ ಎರಡಿಟ್ಟು ನುಡಿವ ಮಂದಮತಿಗಳು ನೀವು ಕೇಳಿರೇ. ಮಹಾಮೇರುಪರ್ವತವೇ ಶರಣ. ಆ ಶರಣನ ಸ್ಥೂಲತನುವೇ ರಜತಾದ್ರಿ. ಸೂಕ್ಷ ್ಮತನುವೇ ಹೇಮಾದ್ರಿ. ಕಾರಣತನುವೇ ಮಂದರಾದ್ರಿ. ಈ ಮೂರುಪರ್ವತಂಗಳ ಅರಮನೆಗಳಲ್ಲಿ ನೆಲಸಿಪ್ಪ ಶಿವನಾರೆಂದರೆ ನಿರಾಕಾರ ಶೂನ್ಯಬ್ರಹ್ಮವೇ. ಶರಣನ ಕುರಿತು ಪಂಚಸಾದಾಖ್ಯಂಗಳನೊಳಕೊಂಡು ಸಾಕಾರವಾಗಿ ಬಂದ ಇಷ್ಟಲಿಂಗವೇ[ಆ] ಶಿವನು. ಗ್ರಂಥ : `ಜ್ವಲತ್ ಕಾಲಾನಲಾಭಾಸಾ ತಟಿತ್ ಕೋಟಿ ಸಮಪ್ರಭಾ| ತಸ್ಯೋಧ್ರ್ವಾ ಚ ಶಿಖಾ ಸೂಕ್ಷ ್ಮ ಚಿದ್ರೂಪಾ ಪರಮಾ ಕಲಾ| ಏವಂ ವೇದ ಕಲಾ ದೇವಿ ಸದ್ಗುರೋಶ್ಯಿಷ್ಯಮಸ್ತಕೇ ಹಸ್ತಾಬ್ಜಮಥನಾದ್ ಗ್ರಾಹ್ಯಾ ತಸ್ಯ ಭಾವ ಕರೋದಿತಾ ವಪುರೇವಂ ಸಮುತ್ಪನ್ನಂ ತತ್ ಪ್ರಾಣಂ ಮಿಶ್ರಿತಂ ಭವೇತ್ ಯಥಾ ಗುರುಕರೇ ಜಾತಾ ಲಿಂಗ ಭಕ್ತಿದ್ರ್ವಿಭೇದಕಾ' ಇಂತೆಂದುದಾಗಿ ಆ ನಿರಾಕಾರಬ್ರಹ್ಮನೇ ಶಿವನು. ಆ ಶಿವನ ಧರಿಸಿಪ್ಪ ಶರಣನ ಕಾಯವೇ ಕೈಲಾಸ. ಇದಲ್ಲದೆ ಮತ್ತೊಂದು ಕೈಲಾಸ ಬೇರೊಬ್ಬ ಶಿವನುಂಟೆಂದು ಭ್ರಮೆಗೊಂಡು ಮನವನೆರಡು ಮಾಡಿಕೊಂಬುದು ಅಜ್ಞಾನ ನೋಡಾ. ಉರದ ಮಧ್ಯದಲ್ಲಿ ಒರಗಿಪ್ಪ ಗಂಡನಂ ಬಿಟ್ಟು ಇನ್ನು ನೆರೆಮನೆಯ ಗಂಡರಿಗೆ ಮನವನಿಕ್ಕುವ ಹಾದರಗಿತ್ತಿಗೆ ಪತಿಭಕ್ತಿಯೆಲ್ಲಿಯದೋ?. ಶ್ರೀಗುರು ಕರುಣಿಸಿಕೊಟ್ಟ ಕ್ರಿಯಾಲಿಂಗವನು ಅರ್ಚನೆ ಪೂಜನೆಯಿಂದ ಅರ್ಪಿತಾವಧಾನದಿಂದ ಧ್ಯಾನ ಧಾರಣದಿಂದ ಸಮತೆ ಸಮಾಧಾನದಿಂದ ಧ್ಯಾನ ಮೌನ ಉಪಾವಸ್ಥೆಯಿಂದ ಮುನಿಸು ಮೂದಲೆಯಿಂದ ಕಾಮಿಸಿ ಕಂಬನಿದುಂಬಿ ಕರಸ್ಥಲದಲಿಪ್ಪ ಪ್ರಾಣೇಶ್ವರನ ಶ್ರೀ ಚರಣಕ್ಕೆ ಲಲಾಟ ಪೂಜೆಯ ಮಾಡಿ ಒಲಿಸಿ ಒಡಗೂಡಿ ನಿಜಮುಕ್ತಿವಡೆಯದೆ ಆಕಾರವಂ ಮರೆದು ನಿರಾಕಾರವಂ ಕೂಡಿಹೆನೆಂಬ ಲೋಕದ ಕಾಕುಮಾನವರೆಲ್ಲಾ ಕಾಲ ಕಾಮರಿಗೆ ತುತ್ತಾಗಿ ಕಾಲಾಗ್ನಿರುದ್ರನ ಹೊಡೆಗಿಚ್ಚಿಗೊಳಗಾದರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅಂಗವ ಲಿಂಗಮುಖದಲ್ಲಿ ಅರ್ಪಿಸಿ, ಅಂಗ ಅನಂಗವಾಯಿತ್ತು. ಮನವ ಅರಿವಿಂಗರ್ಪಿಸಿ, ಮನ ಲಯವಾಯಿತ್ತು. ಭಾವವ ತೃಪ್ತಿಗರ್ಪಿಸಿ, ಭಾವ ಬಯಲಾಯಿತ್ತು. ಅಂಗ ಮನ ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು. ಎನ್ನ ಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ, ಶರಣಸತಿ ಲಿಂಗಪತಿಯಾದೆನು. ಇದು ಕಾರಣ, ಚೆನ್ನಮಲ್ಲಿಕಾರ್ಜುನನೆಂಬ ಗಂಡನ ಒಳಹೊಕ್ಕು ಬೆರಸಿದೆನು.
--------------
ಅಕ್ಕಮಹಾದೇವಿ
ಅರಸಿಕೊಂಡು ಬಂದ ಗಂಡನ ಸುಖ ಹೆಂಡತಿಯ ಮುಂದೆ, ಹೆಂಡತಿಯ ಸುಖ ಗಂಡನೊಳಗೆ, ಕಾಣಬಾರದ ಸೌಖ್ಯ ಕಾಣಲಾಯಿತ್ತು ಸತಿಯಿಂದೆ ಪತಿಗೆ ; ಕೊಳ್ಳಬಾರದ ಸೌಖ್ಯ ಕೊಳ್ಳಲಾಯಿತ್ತು ಪತಿಯಿಂದೆ ಸತಿಗೆ. ಸತಿಪತಿಸಂಯೋಗದಲ್ಲಿ ಪತಿಯ ಸತಿನುಂಗಿ, ಸತಿಯು ಪತಿಯಾಗಿ ಪತಿ ಅಳಿದು ಗುರುನಿರಂಜನ ಚನ್ನಬಸವಲಿಂಗವೆಂಬ ನಾಮನಿರ್ನಾಮವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಡಗಂಡರ ಎದೆಯ ಮೆಟ್ಟಿ ನಡೆವರುಂಟೆ ? ಗಂಡಗಂಡರ ಚಲ್ಲಣವ ಮಾಡಿ ಉಟ್ಟವರುಂಟೆ ? ಗಂಡಗಂಡರ ಚರ್ಮವ ಹೊದ್ದವರುಂಟೆ ? ಗಂಡಗಂಡರ ತೊಟ್ಟವರುಂಟೆ ? ಗಂಡಗಂಡರ ತುರುಬಿದವರುಂಟೆ ? ಗಂಡಗಂಡರ ಭಸ್ಮವಮಾಡಿ ಹೂಸಿದವರುಂಟೆ ? ಗಂಡಗಂಡರಿಗೆ ಗಂಡನ ಕಣ್ಣು ಕಾಲಲ್ಲದೆ. ಗಂಡಗಂಡರಿಗೆ ಗಂಡನ ಶಿರ ಕರದಲ್ಲದೆ. ಗಂಡುವೇಷವೆಂಬುದು ನಿಮ್ಮ ಶಕ್ತಿರೂಪು. ಗಂಡರಿಗೆ ಗಂಡನು ನಡೆಯಿತ್ತೆ ಬಟ್ಟೆ ಎಂಬುದು ನಿಮಗೆ ಸಂದಿತ್ತು. ಶಂಭುಜಕ್ಕೇಶ್ವರ ಶರಣ ಜಗದೊಳಗೊಬ್ಬನೆ ಗಂಡನು.
--------------
ಸತ್ಯಕ್ಕ
ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವ ಭಂಗಿತರ ಮುಖವ ನೋಡಲಾಗದು. ಅದೆಂತೆಂದಡೆ; ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವ ಹಾದರಗಿತ್ತಿಯಂತೆ ಅವಂದಿರ ಭಕ್ತಿ. ಅಂತಪ್ಪ ಪಂಚಮಹಾಪಾತಕರ ಮುಖದತ್ತ ತೋರದಿರಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಹಸಿಹಂದರದಿ ಪಡೆದ ಗಂಡನ ವಂಚಿಸಿ, ವಿಷಯಾತುರದಿ ಪಿಸುಣಮಾನವರನಪ್ಪುವ ಹಾದರಗಿತ್ತಿಯೆಂತೆ, ಪಂಚಕಳಸವಿಕ್ಕಿ ದೇವಭಕ್ತರ ನಡುವೆ ಹಸ್ತಮಸ್ತಕ ಸಂಯೋಗವ ಮಾಡಿ ಗುರುಕರುಣಿಸಿ ಕೊಟ್ಟ ಪ್ರಾಣಲಿಂಗವನವಿಶ್ವಾಸವ ಮಾಡಿ, ಕ್ಷೇತ್ರ ಜಾತ್ರಿ ಲಿಂಗವ ಕಂಡು, ವಿಶ್ವಾಸವಿಟ್ಟು ಎರಗುವ ಪಂಚಮಹಾಪಾತಕರ ನೋಡಾ ! ಸಾಕ್ಷಿ :``ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಂ ವಿಶೇಷಯೇತ್ | ಪ್ರಸಾದನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ || '' ಎಂದುದಾಗಿ, ಮತ್ತೊಮ್ಮೆ ಗ್ರಂಥಸಾಕ್ಷಿಯ ಕೇಳು ಮುಂದರಿಯದ ಮಾನವ. ಸಾಕ್ಷಿ :``ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ| ಶಿವಜ್ಞಾನಂ ನ ಜಾನಂತಿ ಸರ್ವತೀರ್ಥಂ ನಿರರ್ಥಕಂ ||'' ಎಂದುದಾಗಿ. ಇಂತೆಂಬುದನರಿಯದೆ, ಅಜ್ಞಾನದ ಭ್ರಾಂತಿಯಲ್ಲಿ ಅನ್ಯಲಿಂಗವನಾಶ್ರಯಿಸುವ ಕುನ್ನಿಗಳಿಗೆ ಗುರುವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು ಎಂದಿಗೂ ಇಲ್ಲವಾಗಿ ರೌರವನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನಷ್ಟು ... -->