ಅಥವಾ

ಒಟ್ಟು 60 ಕಡೆಗಳಲ್ಲಿ , 23 ವಚನಕಾರರು , 50 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ಸಕಲವ ನೇತಿಗಳೆದು ನಿಂದ ಅಕ್ಷತೆಯನಿಡುವೆನಯ್ಯಾ. ವಿಕಳಭಾವರೂಪಿಲ್ಲದ ಗಂಧವ ಧರಿಸುವೆನಯ್ಯಾ. ಸಕಲಭಾವ ಸಂಚರಿಸದೆ ನಿರುತವಾಗಿ ನಿಂದ ಧೂಪವ ಕೈಕೊಳ್ಳಯ್ಯಾ. ಇಂತೀ ಮನಘನ ಭಾವಪೂಜೆ ನಿಮಗರ್ಪಿತವಯ್ಯಾ. ಸಗರದ ಬೊಮ್ಮನೊಡೆಯ ಎನ್ನ ತನುಮನ ಸಂಗದಲ್ಲಿ ನಿಂದು, ನಿಸ್ಸಂಗವಾದಲ್ಲಿಯೆ ನಿಮಗೆ ಪೂಜೆಯಯ್ಯಾ.
--------------
ಸಗರದ ಬೊಮ್ಮಣ್ಣ
ಎಲಾ, ಶಿವಪೂಜೆಯ ಮಾಡುವ ಶಿವಪೂಜಕರು ನೀವು ಕೇಳಿರಯ್ಯಾ ; ನಿಮ್ಮ ಶಿವಪೂಜೆ[ಯ]ವಿಧ ಯಾವುದೆಲಾ ? ಜಲದಿಂದ ಮಜ್ಜನವ ನೀಡುವಿರಿ ; ಜಲ ಮೀನಿನೆಂಜಲು. ಅಡವಿಯಂ ತಿರುಗಿ, ಪುಷ್ಪವಂ ತಂದು, ಶಿವಗಂ ಅರ್ಪಿ[ಸುವಿರಿ]; ಪುಷ್ಪ ಭೃಂಗದೆಂಜಲು. ಪಂಚಾಭಿಷೇಕ[ವ]ಮಾಡುವಿರಿ; ಕ್ಷೀರ ಕರುವಿನೆಂಜಲು. ಮಧು[ವ] ಅಭಿಷೇಕವ ಮಾಡುವಿರಿ; [ಮಧು] ಮಧು[ಕ]ರಮಯಂ. [ಇಂ]ತೀ ನೈವೇದ್ಯವಂ ಮಾಡುವೆಯಲ್ಲದೆ ಶಿವಪೂಜೆಯ ವಿಧವ ಬಲ್ಲೆ ಏನಯ್ಯಾ ? ಅದು ಎಂತೆಂದಡೆ: ಮಾನಸ ಪೂ[ಜಕ]ಸ್ಯ ಸರ್ವಪಾಪಃ [ಪರಿಹರತಿ] | ಸಾ[ಮೀ]ಪ್ಯ[ಂ] ಸದ್ಗು[ರೋಃ] ಪ್ರಾ[ಪ್ಯ] ಪುನರ್ಭವ ವಿನಶ್ಯತಿ || ಇಂತೀ ಆಗಮ ಗ್ರಂಥವುಂಟಲ್ಲಾ ಇದನ್ನರಿತು ಮಾನಸವೆಂಬೋ ಕಲ್ಲಿನ ಮೇಲೆ ಮದಮಚ್ಚರವೆಂಬೋ ಗಂಧ ಕೊರಡಿನಿಂದ ತೇಯ್ದು, ಸತ್ಯವೆಂಬೋ ಗಂಧವಂ ಹಚ್ಚಿ, ನಿತ್ಯತ್ವ ಎಂಬೋ ಅಕ್ಷತೆಯನಿಟ್ಟು, ಗುರುಕೀಲೆಂಬೋ ಒರಳಿನಲ್ಲಿ ಮದಮಚ್ಚರವೆಂಬೋ ತಂಡಿಲಂ ಕುಟ್ಟಿ, ಬುದ್ಧಿಯೆಂಬೋ ಮೊರದಿಂದ ಝಾಡಿಸಿ ಕೇರಿ, ನಿಜವೆಂಬೋ ಅನ್ನವಂ ಮಾಡಿ, ನಿರ್ಮಳ ಚಿತ್ತವೆಂಬೋ ತುಪ್ಪವಂ ನೀಡಿ, ನಿರುಪಮ ಅವಸ್ಥೆಗಳಿಂದ ನೈವೇದ್ಯವಂ ಕೊಟ್ಟು, ಕಾಮಕ್ರೋಧವೆಂಬೋ ಬತ್ತಿಯ ಹೊಸೆದು, ಗುರುಪ್ರಣುತವೆಂಬೋ ಪಣತಿಯೊಳಗೆ ನಿರ್ಮಳವೆಂಬೋ ತೈಲವಂ ಎರೆದು ಜ್ಯೋತಿಯ ಮುಟ್ಟಿಸಿ, ನಿರ್ಮಳ ಲಿಂಗಕ್ಕಂ ಅರ್ಪಿಸಿ ಮೋಕ್ಷವ ಕಂಡಡೆ ಶಿವಪೂಜಕನೆಂದು ನಮೋ ಎಂಬುವೆನಯ್ಯಾ ಬರಿದೆ 'ನಾ ಶಿವಪೂಜೆ' 'ನೀ ಶಿವಪೂಜಕ'ನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಅಯ್ಯ, ದಂಡಾಕೃತಿ, ಮಕಾರಪ್ರಣಮ, ಘಂಟಾನಾದ, ಸ್ವಾಧಿಷಾ*ನಚಕ್ರ, ಶ್ವೇತವರ್ಣ, ಮಹೇಶ್ವರಸ್ಥಲ, ಸ್ಥೂಲತನು, ಸುಬುದ್ಧಿಹಸ್ತ, ಗುರುಲಿಂಗ, ಜಿಹ್ವೆಮುಖ, ನೈಷಿ*ಕಾಭಕ್ತಿ, ಸುರಸಪದಾರ್ಥ, ಸುರಪ್ರಸಾದ, ವಿಷ್ಣುಪೂಜಾರಿ, ವಿಷ್ಣುವಧಿದೇವತೆ, ಕತೃಸಾದಾಖ್ಯ, ಚಿತ್ತವೆಂಬ ಲಕ್ಷಣ, ಗೂಢವೆಂಬ ಸಂಜ್ಞೆ, ಪಶ್ಚಿಮದಿಕ್ಕು, ಯಜುರ್ವೇದ, ಅಪ್ಪುವೆ ಅಂಗ, ಅಂತರಾತ್ಮ, ಜ್ಞಾನಶಕ್ತಿ, ಪ್ರತಿಷೆ*ಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು ಎನ್ನ ಸ್ವಾಧಿಷಾ*ನಚಕ್ರವೆಂಬ ಸೇತುಬಂಧಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಮಂತ್ರಮೂರ್ತಿಸ್ವರೂಪವಾದ ಗುರುಲಿಂಗವೆ ರಾಮೇಶ್ವರಲಿಂಗವೆಂದು ತನುತ್ರಯವ ಮಡಿಮಾಡಿ, ಪರಿಣಾಮವೆಂಬ ಜಲದಿಂ ಮಜ್ಜನಕ್ಕೆರದು, ಅಪ್ಪು ನಿವೃತ್ತಿಯಾದ ಗಂಧವ ಧರಿಸಿ, ಬುದ್ಧಿ ಸುಬುದ್ಧಿಯಾದಕ್ಷತೆಯನಿಟ್ಟು, ಅಲ್ಲಿಹ ಷಡ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಶ್ವೇತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ಸ್ವಪ್ನಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ನಿಃಕ್ರೋಧವೆಂಬಾಭರಣವ ತೊಡಿಸಿ, ಸುರುಚಿಯೆಂಬ ನೈವೇದ್ಯವನರ್ಪಿಸಿ, ನೈಷೆ*ಯೆಂಬ ತಾಂಬೂಲವನಿತ್ತು. ಇಂತು ಗುರುಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಗುರುಲಿಂಗಮೂರ್ತಿಯನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು ಆ ಗುರುಲಿಂಗ ಪೂಜೆಯ ಸಮಾಪ್ತವ ಮಾಡಿ ಓಂ ಮಂ ಮಂ ಮಂ ಮಂ ಮಂ ಮಂ ಎಂಬ ಮಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಶ್ಚಿಂತದಿಂದ ಬೆರಸಬಲ್ಲಾತನೆ ನೈಷಾ*ಭಕ್ತಿಯನುಳ್ಳ ವೀರಮಾಹೇಶ್ವರ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಚೇತನವಳಿದು ಅಚೇತನವಸ್ತು ರೂಪಾಗಿ ಬಂದಿತ್ತದೇತಕ್ಕೆ ಎಂಬುದು ತಿಳಿದು, ಬಂಗಾರವ ಕಳೆದು ಬಣ್ಣವ ನೋಡಬಾರದು. ಕುಸುಮವ ಕಳೆದು ಗಂಧವ ಕಾಣಬಾರದು. ದರ್ಪಣದ ಘಟವ ಕಳೆದು ನೋಡಲಿಕ್ಕೆ ಪ್ರತಿಬಿಂಬಿಸುವುದೆ ? ಅಂಗವ ಕಳೆದು ಲಿಂಗವನರಿಯಬಾರದು. ಲಿಂಗವ ಕಳೆದು ಆತ್ಮನನರಿವ ಪರಿಯಿನ್ನೆಂತೊ ? ಆತ್ಮನ ಚೇತನವ ಬಿಟ್ಟು ಹಿತಜ್ಞಾನವರಿಯಬೇಕೆಂಬ ಅಜಾತರು ಕೇಳಿರೊ. ಅಂಗವ ಕಳೆದು ಲಿಂಗವ ಕಂಡೆನೆಂಬುದು, ಲಿಂಗವಳಿದು ಆತ್ಮನನರಿದೆನೆಂಬುದು, ಆತ್ಮನಳಿದು ಅರಿವನರಿದೆನೆಂಬುದು, ಅದೇತರ ಮರೆ ಹೇಳಾ. ತೃಷೆಯರತು ನೀರ ಕೊಳಬಹುದೆ ? ಆಪ್ಯಾಯನವನರತು ಓಗರವನುಣಬಹುದೆ ? ಸತ್ಕ್ರೀಯಿಲ್ಲದೆ ಲಿಂಗವನರಿಯಬಹುದೆ ? ಆ ಲಿಂಗಕ್ಕೆ ಅರ್ಚನೆ ಪೂಜನೆ ಹೀನವಾಗಿ ವಸ್ತುವನರಿತೆನೆಂಬ ನಿಶ್ಚಿಯವಂತರು ನೀವೇ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪರ್ಣ ಉದುರಿದ ವೃಕ್ಷ ಕಡಿದು, ಕೊಂಗೆಯ ಸವರದೆ ಮನೆಯ ಕಟ್ಟಿ, ಪಾತಾಳದ ಬೇತಾಳಂಗೆ ರುದ್ರನನಾಹುತಿಯ ಕೊಟ್ಟು, ಸ್ವರ್ಗಲೋಕದ ಮಾರೇಶ್ವರಂಗೆ ವಿಷ್ಣುವಿನ ಆಹುತಿ ಕೊಟ್ಟು, ಮತ್ರ್ಯಲೋಕದ ಜಗಜಟ್ಟಿಗೆ ಬ್ರಹ್ಮನ ಆಹುತಿ ಕೊಟ್ಟು, ಉಳಿದಲೋಕದ ಭೂತಂಗಳಿಗೆ ಷಟ್‍ಸ್ಥಲದ ಭವಿಗಳ ಕೊಟ್ಟು, ಜನಿವಾರ ಹರಿದು ಗಂಧವ ಧರಿಸದೆ, ಜಳಕವ ಮಾಡದೆ, ಮಡಿ ಉಡದೆ, ಮೈಲಿಗೆಯನುಟ್ಟು, ಉಣ್ಣದ ಆಹಾರವನುಂಡು ಕಾಯಕವ ಮಾಡುತ್ತಿರ್ಪರು ನೋಡೆಂದ, ಕಾಡನೋಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಚಿನ್ನದ ಕುರುಹ ಒರೆದಲ್ಲದೆ ಅರಿಯಬಾರದು. ಚಂದನದ ಗುಣವ ಮರ್ದನಂಗೈದಲ್ಲದೆ ಗಂಧವ ಕಾಣಬಾರದು. ಇಕ್ಷುದಂಡದ ಪರಿಯ ಬಂಧಿಸಿದಲ್ಲದೆ ವಿಶೇಷವ ಕಾಣಬಾರದು. ನಾನಾ ರಸ ಗಂಧಂಗಳ ಗುಣವ ಸವಿದಲ್ಲದೆ ಕಾಣಬಾರದು. ಕ್ಷೀರದ ಘಟ್ಟಿಯ ಮಥನದಿಂದಲ್ಲದೆ ರುಚಿಸಬಾರದು. ಮಹಾತ್ಮರ ಸಂಗ ಮಹಾನುಭಾವದಿಂದಲ್ಲದೆ ಕಾಣಬಾರದು. ಇದು ಕಾರಣ, ಮಾತು ಮಾತಿಂಗೆಲ್ಲಕ್ಕೂ ಮಹದನುವುಂಟೆ ? ಲಿಂಗವ ಸೋಂಕಿದ ಮನಕ್ಕೆ ಅಂಗ ಭಿನ್ನವಾವುದೆಂದಡೆ, ಶೇಷನ ಅವಸಾನದಂತಿರಬೇಕು, ತ್ರಾಸಿನ ವಾಸದ ಭಾಷಾಂಗದಂತಿರಬೇಕು. ಹೀಂಗಲ್ಲದೆ ಸರ್ವಾನುಭಾವಿಗಳೆಂತಾದಿರಣ್ಣಾ. ಕೊಲ್ಲದ ಕೊಲೆಯ, ಗೆಲ್ಲದ ಜೂಜವ, ಬಲ್ಲತನವಿಲ್ಲದ ಬರಿವಾಯ ಮಾತಿನ ಗೆಲ್ಲ ಸೋಲಕ್ಕೆ ಹೋರಿದಡೆ, ವಲ್ಲಭ ನಿಃಕಳಂಕ ಮಲ್ಲಿಕಾರ್ಜುನನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ಅಯ್ಯ, ನಿರಂಜನಾಕೃತಿ, ವ್ಯಂಜನ ಹಕಾರಪ್ರಣಮ, ಮಹಾನಾದ, ಪಶ್ಚಿಮಚಕ್ರ, ಅಖಂಡಮಹಾಜ್ಯೋತಿವರ್ಣ, ನಿರಾತಂಕಸ್ಥಲ, ನಿರ್ಮುಕ್ತಿತನ, ನಿರ್ಮಾಯಹಸ್ತ, ನಿರಂಜನ ಲಿಂಗ, ಪಶ್ಚಿಮವೆಂಬ ಮುಖ, ಅಪ್ರಮಾಣ ಭಕ್ತಿ, ಅವಿರಳ ಪದಾರ್ಥ, ಅವಿರಳ ಪ್ರಸಾದ, ಪರಮೇಶ್ವರ ಪೂಜಾರಿ, ಪರಮೇಶ್ವರನಧಿದೇವತೆ, ನಿಶ್ಚಲಸಾದಾಖ್ಯ, ನಿರ್ವಂಚಕವೆಂಬ ಲಕ್ಷಣ, ಅವಿರಳವೆಂಬ ಸಂಜ್ಞೆ, ನಿರಾಳದಿಕ್ಕು, ಅಗಮ್ಯವೇದ, ಶಿವಯೋಗಿಯೆ ಅಂಗ, ಚಿನ್ಮಯಾತ್ಮ, ನಿರ್ವಯಶಕ್ತಿ, ಅನಂತಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು, ಎನ್ನ ಪಶ್ಚಿಮಚಕ್ರವೆಂಬ ಮಹಾ ಮೇರುಪರ್ವತಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ನಿಜಮೋಕ್ಷ ಕರ್ತುಸ್ವರೂಪವಾದ ನಿರಂಜನಲಿಂಗವೆ ಶಾಂಭವಮೂರ್ತಿಲಿಂಗವೆಂದು ಹಂಸತ್ರಯವ ಮಡಿಮಾಡಿ, ನಿರ್ಭಾವವೆಂಬ ಜಲದಿಂ ಮಜ್ಜನಕ್ಕೆರದು, ನಿರ್ಜಾತವೆಂಬ ಗಂಧವ ಧರಿಸಿ, ನಿರ್ಜಡವೆಂಬಕ್ಷತೆಯನಿಟ್ಟು, ನಿದ್ರ್ವಂದ್ವವೆಂಬ ಪುಷ್ಪದ ಮಾಲೆಯಂ ಧರಿಸಿ, ನಿರ್ಲಜ್ಜವೆಂಬ ಧೂಪವ ಬೀಸಿ, ನಿರಾಲಂಬವೆಂಬ ಜ್ಯೋತಿಯ ಬೆಳಗಿ, ನಿರಾವಯವೆಂಬ ವಸ್ತ್ರವ ಹೊದ್ದಿಸಿ, ನಿಸ್ಪøಹವೆಂಬಾಭರಣವ ತೊಡಿಸಿ, ನಿರಾಳವೆಂಬ ನೈವೇದ್ಯವನರ್ಪಿಸಿ, ನಿರಾವರಣವೆಂಬ ತಾಂಬೂಲವನಿತ್ತು, ಇಂತು ನಿರಂಜನಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಸಹಸ್ರಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ನಿರಂಜನಲಿಂಗವನ್ನು ಕಂಗಳುತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು, ಆ ನಿರಂಜನಲಿಂಗದ ಪೂಜೆಯ ಸಮಾಪ್ತವ ಮಾಡಿ, ಮಹಾಜ್ಞಾನಜಪವೆಂಬ ದ್ವಾದಶಪ್ರಣಮಮಂತ್ರಂಗಳಿಂದೆ ನಮಸ್ಕರಿಸಿ, ಈ ನಿರಂಜನಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಜಾಂತರ್ಯಾಮಿಯಾಗಿ ಆಚರಿಸಬಲ್ಲಾತನೆ ಅಪ್ರಮಾಣಭಕ್ತಿಯನ್ನುಳ್ಳ ನಿಜಮೋಕ್ಷಸ್ವರೂಪ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯಾ ಘ್ರಾಣದಲ್ಲಿ ನಿಂದು ಗಂಧವ ಗ್ರಹಿಸಿ ಗಂಧಪ್ರಸಾದವನೀವುತ್ತಿರ್ಪಿರಯ್ಯ. ಜಿಹ್ವೆಯಲ್ಲಿ ನಿಂದು ರಸವ ಗ್ರಹಿಸಿ ರಸಪ್ರಸಾದವನೀವುತ್ತಿರ್ಪಿರಯ್ಯ. ನೇತ್ರದಲ್ಲಿ ನಿಂದು ರೂಪದ ಗ್ರಹಿಸಿ ರೂಪಪ್ರಸಾದವ ನೀವುತ್ತಿರ್ಪಿರಯ್ಯ. ತ್ವಕ್ಕಿನಲ್ಲಿ ನಿಂದು ಸ್ವರ್ಶನವ ಗ್ರಹಿಸಿ ಸ್ಪರ್ಶನಪ್ರಸಾದವನೀವುತ್ತಿರ್ಪಿರಯ್ಯ. ಶ್ರೋತ್ರದಲ್ಲಿ ನಿಂದು ಶಬ್ದವ ಗ್ರಹಿಸಿ ಶಬ್ದಪ್ರಸಾದವನೀವುತ್ತಿರ್ಪಿರಯ್ಯ. ಮನದಲ್ಲಿ ನಿಂದು ಪರಿಣಾಮವ ಗ್ರಹಿಸಿ ಪರಿಣಾಮಪ್ರಸಾದವ ನೀವುತ್ತಿರ್ಪಿರಯ್ಯ. ಇಂತು ಸರ್ವೇಂದ್ರಿಯಂಗಳಲ್ಲಿ ನಿಂದು, ಸರ್ವಪದಾರ್ಥವ ಗ್ರಹಿಸಿ ಎನಗೆ ಪ್ರಸಾದವ ಕರುಣಿಸುತ್ತಿರ್ಪಿರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅರಿದೆಹೆ ಅರುಹಿಸಿಕೊಂಡೆಹೆನೆಂಬ ಉಭಯವುಳ್ಳನ್ನಕ್ಕ, ಆ ಗುಣ ಅರಿವೋ, ಮರವೆಯೋ ಎಂಬುದ ತಿಳಿವುದು ಅದೇನು ಹೇಳಾ ? ಕ್ರೀ ಉಳ್ಳನ್ನಕ್ಕ ನಿಃಕ್ರೀ ಕುರುಹುಗೊಂಡಿತ್ತು. ಅರಿವುಳ್ಳನ್ನಕ್ಕ ಅಜ್ಞಾನ ಒಡಲುಗೊಂಡಿತ್ತು. ತಮವುಳ್ಳನ್ನಕ್ಕ ಆ ಬೆಳಗು ತಮಕ್ಕೊಳಗಾಯಿತ್ತು. ಅದೆಂತೆಂದಡೆ: ವಾಯುವ ಬೆಂಬಳಿಯಲ್ಲಿ ಗಂಧಸ್ವರೂಪವಾದಂತೆ, ಆವಾವ ಕುಸುಮದ ಗಂಧವ ವಾಯು ತಾ ಬೆರೆದಲ್ಲಿ, ಬಂಧವಿಲ್ಲದ ತೆರದಂತೆ. ಅರಿವುದು, ಅರುಹಿಸಿಕೊಂಬುದು ಎರಡಳಿದಲ್ಲಿ, ಕುರುಹೆಂದು ಪ್ರಮಾಣಿಸುವುದಕ್ಕೆ, ಅರಿವೆಂದು ಕೂಡುವುದಕ್ಕೆ, ಆ ಉಭಯದ ಎಡೆಯ ಹೇಳಾ. ಕ್ರೀಯಿಂದ ಕಾಬ ಮುಕ್ತಿ, ಜ್ಞಾನದಿಂದ ಕಾಬ ನಿರವಯ. ಆ ಗುಣ, ಶುಕ್ತಿಯಲ್ಲಿ ಅಡಗಿಪ್ಪ ಅಪ್ಪುವಿನಂತೆ, ಒಪ್ಪಕ್ಕೆ ತಾನಾಗಿ ಕುಕ್ಕಿದಡೆ, ಅಪ್ಪುವೆಂಬ ನಾಮಕ್ಕೆ ಸಿಕ್ಕಿಲ್ಲದೆ ನಿಶ್ಚಯವಾದುದು. ನೀರು ಸಾರ ಕೂಡಿದಲ್ಲಿ, ಏರ ಕಾಸಲಿಕ್ಕೆ ನೀರರತು ಸಾರ ಉಳಿದಂತೆ, ಸಾರ ನೀರಿಂದ ಕುರುಹುಗೊಂಡಿತ್ತು. ಆ ನೀರೆ ಸಾರವಾದಲ್ಲಿ, ಕೂಡಿ ಸವಿಯೆಂಬ ನಾಮವಾಯಿತ್ತು. ಸವಿ ಸಾರ ಕೂಡಿ ಅಂಗದ ಮೇಲೆ ರೂಪವಾಯಿತ್ತು. ನುಂಗಿದ ಮತ್ತೆ ಸವಿಸಾರ ಒಂದೂ ಇಲ್ಲ. ಅಂಗವೆಂಬನ್ನಕ್ಕ ಲಿಂಗ, ಲಿಂಗವೆಂಬನ್ನಕ್ಕ ಅಂಗ. ಉಭಯದ ಸಂಗವ ಜಡನೆಂದು ನುಂಗಿದ ಮತ್ತೆ, ಆತ್ಮಂಗೆ ಬಂಧ ಮೋಕ್ಷವೆಂಬುದೊಂದೂ ಇಲ್ಲ. ಕಾಮಧೂಮ ಧೂಳೇಶ್ವರನೆಂದು ಎನಲಿಲ್ಲ.
--------------
ಮಾದಾರ ಧೂಳಯ್ಯ
ಜಪವೇಕೊ ಅಪ್ರಮಾಣಂಗೆ ? ತಪವೇಕೊ ಚತುರ್ವಿಧಪ[ಥೆ]ಕ್ಕೆ ಹೊರಗಾದಾತಂಗೆ ? ನೇಮವೇಕೊ ನಿತ್ಯತೃಪ್ತಂಗೆ ? ನಿತ್ಯವೇಕೊ ಅಷ್ಟವಿಧಾರ್ಚನೆ ಷೋಡಶೋಪಚಾರಭರಿತಂಗೆ ? ಜಪಕ್ಕೊಳಗಾದ ರುದ್ರ, ತಪಕ್ಕೊಳಗಾದ ವಿಷ್ಣು, ನೇಮಕ್ಕೊಳಗಾದ ಬ್ರಹ್ಮ, ನಿತ್ಯಕ್ಕೊಳಗಾದ ಈಶ್ವರ, ಉಪಚರಣೆಗೊಳಗಾದ ಸದಾಶಿವ. ಇಂತಿವರೆಲ್ಲರೂ ಸೃಷ್ಟಿಯ ಮೇಲಣ ತಪ್ಪಲಿಲ್ಲಿರ್ದರೇಕೆ, ಎಲ್ಲಾ ಬೆಟ್ಟವನೇರಿ ? ಇಂತಿವರ ಬಟ್ಟೆಯ ಮೆಟ್ಟದೆ ನಿಶ್ಚಯವಾದ ಶರಣ, ಇಹದವನಲ್ಲ, ಪರದವನಲ್ಲ. ಆ ಶರಣ ಉಡುವಲ್ಲಿಯೂ ತಾನೆ, ತೊಡುವಲ್ಲಿಯೂ ತಾನೆ, ಕೊಡುವಲ್ಲಿಯೂ ತಾನೆ, ಮುಟ್ಟುವಲ್ಲಿಯೂ ತಾನೆ, ತಟ್ಟುವಲ್ಲಿಯೂ ತಾನೆ ಬೇರೊಂದಿಲ್ಲವಾಗಿ. ಕ್ಷೀರವ ಕೂಡಿದ ಜಲವ ಭೇದಿಸಬಹುದೆ ಅಯ್ಯಾ ? ವಾರಿಧಿಯ ಕೂಡಿದ ಸಾರವ ಬೇರೆ ರುಚಿಸಲುಂಟೆ ಅಯ್ಯಾ ? ಆರಡಿ ಕೊಂಡ ಗಂಧವ ಬೇರು ಮಾಡಿ ಮುಡಿಯಲಿಲ್ಲ. ತೋರಲಿಲ್ಲದ ರೂಪಿಂಗೆ ಆರಾಧಿಸುವುದಕ್ಕೆ ಬೇರೆ ಒಡಲಿಲ್ಲ. ಸಾಕಾರಕ್ಕೆ ಆರೈಕೆಯಿಲ್ಲದೆ ಸತ್ತು ರೂಪಾದಲ್ಲಿಯೆ, ಇ[ಹದ]ಲ್ಲಿ ಪರದಲ್ಲಿ ಪರಿಣಾಮಿಗಳಾಗಲಿ, ಇಂತಿವಕ್ಕೆ ದೂರವಾಗಿ ಬಾಳುಗೆಟ್ಟು ಜಾಳಾದೆ, ಹೇಳಹೆಸರಿಲ್ಲದಂತಾದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರಸು ಅರಸಿಯ ಕೂಡುವಾಗ ಅವರಂಗವ ಕಂಡವರುಂಟೆ? ಕೌಮುದಿಯ ಕುಂಡಲಿಯ ತಂದುದುಂಟೆ? ಚಂದನ ಗಂಧವ ತಂದಿರಲು ಸಂಚಾರದೊದಗು. ಮಿಂಚಿನವಳಿ, ಕಂಚಿನ ಕೂಟದಂತೆ ಆತ್ಮನ ಸಂಚಿತದಳಿವು ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹೂವ ಕೊಯ್ಯುವರಲ್ಲದೆ, ಹೂವಿನ ಗಂಧವ ಕೊಯ್ದವರುಂಟೆ ಅಯ್ಯಾ? ಮಾತನಾಡುವರಲ್ಲದೆ, ಮಾತಿನ ಭೇದದ ವಾಸನೆಯ ಕಂಡವರುಂಟೆ ಅಯ್ಯಾ? ಇದು ನೀತಿಯ ಒದಗು, ಕ್ರೀಯ ನಿಹಿತವಾಗಿ ಮಾಡುವಲ್ಲಿ ಭಾವಶುದ್ಧವಾಗಿರಬೇಕು. ಮಾತನರಿದಾಡುವಲ್ಲಿ, ಮಾತಿನ ರೀತಿಗೆ ತಾ ಒದಗು ನಿಹಿತವಾಗಿರಬೇಕು. ಅದು ಕೂಟಸ್ಥ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಅಯ್ಯ, ನಿಃಕಲಾಕೃತಿ, ಓಂಕಾರಪ್ರಣಾಮ, ಭ್ರಮರನಾದ, ಬ್ರಹ್ಮಚಕ್ರ, ಜ್ಯೋತಿವರ್ಣ, ನಿಃಕಳಂಕಸ್ಥಲ, ಚಿದ್ರೂಪತನು, ಸ್ವತಂತ್ರಹಸ್ತ, ನಿಃಕಳಂಕಲಿಂಗ, ಬ್ರಹ್ಮರಂದ್ರಮುಖ, ಸದ್ಭಾವಭಕ್ತಿ, ಪರಮಾನಂದಪದಾರ್ಥ, ಪರಮಾನಂದಪ್ರಸಾದ, ಶ್ರೀಗುರು ಪೂಜಾರಿ, ಶ್ರೀಗುರು ಅಧಿದೇವತೆ, [?ಸಾದಾಖ್ಯ] ಅಗಮ್ಯವೆಂಬ ಲಕ್ಷಣ, ಅಪ್ರಾಮಣವೆಂಬ ಸಂಜ್ಞೆ, ಹೃತ್ಕಮಲದಿಕ್ಕು, ಧನುರ್ವೇದ, ಚಿತ್ಸೂರ್ಯನೆ ಅಂಗ, ಮಹಾ ಆತ್ಮ, ಅನಾಮಯಶಕ್ತಿ, ನಿರ್ವಂಚಕ ಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು ಎನ್ನ ಬ್ರಹ್ಮರಂಧ್ರಚಕ್ರವೆಂಬ ರಜತಾದ್ರಿಪರ್ವತಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಶಿವದೀಕ್ಷಾಸ್ವರೂಪವಾದ ನಿಃಕಲಲಿಂಗವೆ ರಜತೇಶ್ವರಲಿಂಗವೆಂದು ಗುಣತ್ರಯವ ಮಡಿಮಾಡಿ, ಸ್ವತಂತ್ರವೆಂಬ ಜಲದಿಂ ಮಜ್ಜನಕ್ಕೆರದು, ಸೂರ್ಯ ನಿವೃತ್ತಿಯಾದ ಗಂಧವ ಧರಿಸಿ, ಪರತಂತ್ರ ಸ್ವತಂತ್ರವಾದಕ್ಷತೆಯನಿಟ್ಟು, ಅಲ್ಲಿಹ ಸಹಸ್ರದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಜ್ಯೋತಿವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ. ಅಲ್ಲಿಹ ನಿಃಕಳಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ನಿರಾಭಾರವೆಂಭಾಭರಣವ ತೊಡಿಸಿ, ಪರಮಾನಂದವೆಂಬ ನೈವೇದ್ಯವನರ್ಪಿಸಿ, ಸದ್ಭಾವವೆಂಬ ತಾಂಬೂಲವನಿತ್ತು, ಅಂತು ನಿಃಕಳಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ದಶಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ನಿಃಕಳಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು, ಆ ನಿಃಕಳಲಿಂಗದ ಪೂಜೆಯ ಸಮಾಪ್ತವ ಮಾಡಿ, ಕ್ರಿಯಾಜಪವೆಂಬ ದ್ವಾದಶಪ್ರಣವಮಂತ್ರಂಗಳಿಂದೆ ನಮಸ್ಕರಿಸಿ, ಆ ನಿಃಕಳಲಿಂಗವೆ ತಾನೆಂದರಿದು ಕೂಡಿ ಎರಡಳಿದು ಸ್ವತಂತ್ರನಾಗಿ ಆಚರಿಸಬಲ್ಲಾತನೆ ಸದ್ಭಾವಭಕ್ತಿಯನುಳ್ಳ ನಿಃಕಳಂಕ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಕೆಚ್ಚ[ಲಿನ] ಹಾಲಲ್ಲಿ ತುಪ್ಪವಿಪ್ಪ ಭೇದವ ಬಲ್ಲಡೆ ಬಲ್ಲರೆಂಬೆ. ಬೆಂಕಿಯೊಳಗಣ ಬೇಗೆಯ ಬಲ್ಲಡೆ ಬಲ್ಲರೆಂಬೆ. ವಾಯುವಿನೊಳಗಿರ್ಪ ಸಂಚಾರವ ಬಲ್ಲಡೆ ಬಲ್ಲರೆಂಬೆ. ಬೀಜದೊಳಗಿರ್ಪ [ರ]ಸಾಂಕುರ[ವ] ಬಲ್ಲಡೆ ಬಲ್ಲರೆಂಬೆ. ಕಾಯದೊಳಗಿರ್ಪ ಪ್ರಾಣನ ನೆಲೆಯ ಬಲ್ಲಡೆ ಬಲ್ಲರೆಂಬೆ. ಚಂದನದೊಳಗಿಪ್ಪ ಗಂಧವ ಬಂಧಿಸಿ ಹಿಡಿಯಬಲ್ಲಡೆ. ಲಿಂಗವಿಪ್ಪೆಡೆಯ ಬಲ್ಲರೆಂಬೆ. ಶಿಲೆಯೊಳಗಿಪ್ಪ ಕುಲಹೀನನ ಬೆಳಗಿ ತೋರುವ [ಆ]ಮಲಿನ[ರ] ಮುಖವ ಕಂಡು ಮತ್ತೆ ದಿಂಗು[ವಿ]ಡಿಯಲೇಕೊ? ದಿಂ[ಗ ವಿ]ಡಿದು ಭಂಡರಹ ಲಂಡರಿಗೇಕೆ ಲಿಂಗದ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಕಂಗಳ ಮಣಿಯ ಬೆಳಗಿನೊಳು, ಈರೇಳು ಭುವನದ ಶೃಂಗಾರವಡಗಿತ್ತು. ಆರೂ ಅರಿಯರಲ್ಲಾ. ಅತಿ ಶೃಂಗಾರದೊಳಗಣ ಗಂಧವನೊಂದು ಘ್ರಾಣ ನುಂಗಿತ್ತು. ಘ್ರಾಣದೊಳಗಣ ಗಂಧವ ಪ್ರಾಣ ನುಂಗಿತ್ತು. ಪ್ರಾಣದೊಳಗಣ ಗಂಧದ ಭಾವ ನುಂಗಿತ್ತು. ಭಾವದೊಳಗಣ ಗಂಧದ ಬಯಲು ನುಂಗಿತ್ತು. ಬಯಲೊಳಗಣ ಗಂಧವ ಮಹಾಬಯಲ ಕೂಡಿದ ಲಿಂಗೈಕ್ಯಂಗೆ ಭವಬಂಧನವಿಲ್ಲೆಂದಿತ್ತು ಗುರುವಚನ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->