ಅಥವಾ

ಒಟ್ಟು 40 ಕಡೆಗಳಲ್ಲಿ , 21 ವಚನಕಾರರು , 38 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದೆತಾಯಿಗಳಿಂದುದಯವಾಗಿ ಬಂದು ಮೂರೂರು ಭೂಮಿಯೊಳಗೆ ಮೂರು ಮುಖದ ಎತ್ತು, ಹಗಲಿರುಳು ಕಾಳಗತ್ತಲೆಯಲ್ಲಿ ಮೂರು ನಾಮವ ಹೊತ್ತು, ಮೂರು ಹುಲ್ಲಿನ ರಸವನು ನೀರ ಮೇಲೆ ನಿಂದು ಸೇವಿಸುತ್ತಿರಲು, ನಾಭಿಯಿಂದೆ ಅಗ್ನಿ ಸೂಸಿ ಉರಿಹತ್ತಿ ಎತ್ತು ಬೆಂದಿತ್ತು ನೋಡಾ! ನೀರೊಳಗಿರ್ದ ಗಜಾಳಿ ಕುರಿಗಳ ಕೂಡಿ ನೋಡುತಿರ್ದವು. ಪರಿಪರಿಯಿಂದೆ ಬೀಸುವ ಗಾಳಿ ನಿಂದಿತ್ತು ನೋಡಾ! ಗೊರವನ ಕೈಪಂಜಿನ ಬೆಳಗ ಕಂಡು ಕೈಕಾಲುಮುಖದೊಳೆದು ನಡೆದು ನಿಂದಲ್ಲಿ ಬೆಳಗಿನ ಬೆಳಗು ತಾನೆ ನೋಡಾ ಗುರುನಿರಂಜನ ಚನ್ನಬಸವಲಿಂಗಾ!
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ನಾನೊಂದ ಬೇಡುವೆ ನಿಮ್ಮಲ್ಲಿ ಎನಗೊಂದು ಲೇಸ ಮಾಡಯ್ಯ. ನಾರಿಯರುರದ ಗಾಳಿ ಸೋಂಕದಂತೆ ಎನ್ನುವ ಮಂತ್ರಿಸಿ ರಕ್ಷಿಸಯ್ಯ. ಎನಗಿನಿಸು ಮಾಡಿ ಬದುಕಿಸಯ್ಯ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನಿಮ್ಮ ಶ್ರೀಪಾದವ ಹರಿದು ಹತ್ತುವ ನೆನೆವ ಮನವ ಕೆಡಿಸಲೆಂದು ಮೋಹದ ಗಾಳಿ ಕೈವೀಸಲೊಡನೆ ಕೋಪದ ಕಿಚ್ಚು ಹತ್ತಿ ಬೆಂದೆನಯ್ಯಾ. ನಿಮ್ಮ ನೆನೆವ ಮನವ ಕಾಡುವ ವಿಧಿಯ ಕೊಂದು ನೆಲೆಸೆನ್ನ ಕಪಿಲಸಿದ್ಧಮಲ್ಲಿನಾಥ ದೇವರದೇವ!
--------------
ಸಿದ್ಧರಾಮೇಶ್ವರ
ಇಂತಪ್ಪ ಸತ್ಯಾರ್ಥವನರಿದು ಸರ್ವಪ್ರಪಂಚ ಮರದು ಹಾಲುಳ್ಳಲ್ಲಿ ಹಬ್ಬವ ಮಾಡಿ, ಗಾಳಿ ಉಳ್ಳಲ್ಲಿ ತೂರಿಕೊಳ್ಳಿ! ಬಳಿಕ ಅರಸಿದರುಂಟೆ ಪರಮಸುಖವು ನಿಜಗುರು ಸ್ವತಂತ್ರ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ? ಹರುಗೋಲ ಪಡೆದಲ್ಲಿ ತೊರೆಯ ದಾಂಟಿಕೊಳ್ಳಿರಣ್ಣಾ.
--------------
ಸಿದ್ಧರಾಮೇಶ್ವರ
ಘಟ್ಟಬೆಟ್ಟದ ನಟ್ಟನಡುವಿನ ಗಿರಿಯಲ್ಲಿ ಹುಟ್ಟಿತೊಂದು ಸೋಜಿಗದಗ್ನಿಯ ಕಳೆ. ಆ ಕಳೆಯ ಬೆಳಗ ಕಾಣೆನೆಂದು ಇಬ್ಬರು ಮುಂದುಗೆಟ್ಟರು, ಮೂವರು ತಾಮಸಕ್ಕೊಳಗಾದರು, ನಾಲ್ವರು ನಡೆಗೆಟ್ಟರು, ಐವರು ಅಂಧಕರಾದರು, ಆರುಮಂದಿ ಹೋರಾಟಗೊಳುತಿರೆ, ಏಳುಮಂದಿ ಕೂಪವ ಬಿದ್ದರು, ಎಂಟುಮಂದಿ ತಂಟುಕಕ್ಕೆ ಒಳಗಾದರು. ಒಂಬತ್ತು [ಮಂದಿ] ಕಣವಿಯ ಹರವರಿಯಲ್ಲಿ [ಹೊಕ್ಕರು.] ಹತ್ತು ಬಗೆಯವರು ಹರಿದಾಡುತಿರೆ, ಇದನು ಕಂಡು, ತರುಗಿರಿಯ ನಡುವೆ ಹರಿವ ಉದಕ ಗಾಳಿ ಬಂದು ಬೆಟ್ಟವನಡರಿ, ಉರಿವ ಜ್ಯೋತಿಯ ತಾಗದ ಮುನ್ನ ನೀರಹರಿಯನಡ್ಡಂಗಟ್ಟಿ, ಗಾಳಿಯ ಹಿಮ್ಮೆಟ್ಟಿಸಿ, ಜ್ಞಾನಪರಬ್ರಹ್ಮದಲ್ಲಿ ನಿಂದವರಾರೆಂದರೆ : ಪ್ರಭುದೇವರು, ಚೆನ್ನಬಸವೇಶ್ವರದೇವರು, ಮೋಳಿಗೆಯ್ಯನವರು, ಸಂಗನಬಸವೇಶ್ವರದೇವರು, ನೀಲಾಂಬಿಕೆ ತಾಯಿ, ಅಕ್ಕನಾಗಮ್ಮ, ಮಹಾದೇವಿಯಕ್ಕ, ಮುಕ್ತಾಯಿ ಮುಖ್ಯವಾದ ಏಳುನೂರಾ ಎಪ್ಪತ್ತು ಅಮರಗಣಂಗಳ ಲೆಂಕರ ಲೆಂಕನಾಗಿ ಎನ್ನ ಆದಿಪಿಂಡಿವ ಧರಿಸಿ, ಮತ್ರ್ಯಕ್ಕೆ ಕಳುಹಿದ ಭೇದವ ಪಿಂಡಜ್ಞಾನದಿಂದಲರಿದು ಆಚರಿಸುತ್ತಿದ್ದೆನಯ್ಯಾ ಎನ್ನಾಳ್ದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಾರುವ ಹಕ್ಕಿಯ ಹಿಡಿದೆ, ಬೀಸುವ ಗಾಳಿಯ ಹಿಡಿದೆ. ವೈಶಾಖದ ಬಿಸಿಲ ಹಿಡಿದು ಜಗವ ಹಾಸಿ ಕಟ್ಟಿದೆ. ಒಂದು ತಾರು ಗಂಟು, ಒಂದು ಜಿಗುಳು ಗಂಟು, ಒಂದು ಕುರುಹು ಗಂಟು. ಮೂರರ ಮುದ್ರೆಯ ಮೀರಿ ಹಾರಿತ್ತು ಹಕ್ಕಿ. ಬೀಸಿತ್ತು ಗಾಳಿ, ಹುಯ್ಯಿತ್ತು ಬಿಸಿಲು. ಬಿಸಿಲ ಢಗೆ ತಾಗಿ, ವಸುಧೆಯವರೆಲ್ಲರೂ ಬಾಯಿ ಕಿಸವುತ್ತಿದ್ದರು. ಕಿಸುಕುಳರ ನೋಡಿ, ಶರೀರದ ಗೂಡಿನ ಒಡೆಯ ಗುಮ್ಮಟನ ಪ್ರಾಣ, ಅಗಮ್ಯೇಶ್ವರಲಿಂಗ ಒಡಗೂಡುತ್ತಿದ್ದ.
--------------
ಮನುಮುನಿ ಗುಮ್ಮಟದೇವ
ಗಾಳಿಯ ಹಡೆದಲ್ಲಿ ತೂರಿಕೊಳ್ಳಯ್ಯಾ, ಗಾಳಿ ನಿನ್ನಾಧೀನವಲ್ಲಯ್ಯಾ. ನಾಳೆ ತೂರಿಹೆನೆಂದಡೆ ಇಲ್ಲಯ್ಯಾ. ಶಿವಶರಣೆಂಬುದೊಂದು ಗಾಳಿಯ ಹಡೆದಲ್ಲಿ, ಬೇಗ ತೂರೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನೆಲ ನೀರು ಕಿಚ್ಚು ಗಾಳಿ ಬಯಲು ಕೂಡಿ ಆದ ಪಿಂಡವ ತಾನೆಂದೆಂಬ ಮಿಥ್ಯಾಚರ್ಮದೇಹಿಗಳನೇನೆಂಬೆನಯ್ಯ? ನೆಲನಲ್ಲದ ನೀರಲ್ಲದ ಕಿಚ್ಚಲ್ಲದ ಗಾಳಿಯಲ್ಲದ ಬಯಲಲ್ಲದ ಪ್ರಕೃತಿಯಲ್ಲದ ಪುರುಷನಲ್ಲದ ಮೇಲಣ ಶುದ್ಧಸ್ವಯವೆ ತಾನೆಂದು ತಿಳಿದಾತನಲ್ಲದೆ ಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಂಸಾರವೆಂಬ ಶರಿಧಿ ಅಡ್ಡಗಟ್ಟಲು, ಅನುವನರಿದವಂಗೆ ಅಂಗವೆ ಹಡಗು, ಮನವೆ ಕೂಕಂಬಿಕಾರ. ಜ್ಞಾನ_ಸುಜ್ಞಾನವೆಂಬ ಗಾಳಿ ತೀಡಲು, ಸುಲಕ್ಷಣದಿಂದ ಸಂಚರಿಸುತ್ತಿರಲು ಬರ್ಪವು ಮೀನು, ಮೊಸಳೆ, ಅಷ್ಟಗಿರಿ,_ಜತನ. ಮೊತ್ತದ ಸಂಚಾರದ ಹಡಗು ತಾಗುತ್ತಿದೆ, ಎಚ್ಚತ್ತಿರು, ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಮೈಮರೆಯದೆ. ಕತ್ತಲೆ ದೆಸೆ ಅತ್ತಲೆ ಪೋಗು; ಉತ್ತರನಕ್ಷತ್ರದ ಪ್ರಭೆಯಿದೆ ! ಸೆಟ್ಟಿ ಜತನ ! ಪಟ್ಟಣವಿದೆ,_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸಂಸಾರ ವಿಷಯರಸವೆಂಬ ಕಾಳಕೂಟ ಹಾಲಹಲವಿಷವ ಕೊಂಡವರಾರಾದರೂ ಜೀವಿಸಿದವರುಂಟೆ? ಇಲ್ಲವಾಗಿ. ಎಲ್ಲರೂ ಸಂಸಾರ ವಿಷಯರಸದಲ್ಲಿ ಸಾವುತ್ತೆ ೈದಾರೆ. ಆ ವಿಷಯದ ಗಾಳಿ ಸೋಂಕಿ ಬಳಲುತ್ತಿದ್ದೇನಯ್ಯ. ನಿಮ್ಮ ಕೃಪಾಪ್ರಸಾದವೆಂಬ ನಿರ್ವಿಷವ ಕೊಟ್ಟು ರಕ್ಷಿಸಯ್ಯ ಎನ್ನ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಭೂಮಿ ಜಲ ಅಗ್ನಿ ಗಾಳಿ ಆಕಾಶ ಇವು ಮೊದಲಾದ ಪಂಚಕದಿಂದುದಿಸಿದುದೆ ಬ್ರಹ್ಮಾಂಡವೆನಿಸಿತ್ತು. ಅದರ ಸೂತ್ರವಿಡಿದು ಬಂದದ್ದೇ ಪಿಂಡಾಂಡವೆನಿಸಿತ್ತು. ರವಿ ಚಂದ್ರ ಆತ್ಮದಿ ಅಂಗವೆನಿಸಿತ್ತು. ಪಿಂಡಾಂಡದಿ ತೋರುವ ಕಾಯವೇ ಗುರುವಾಗಿ, ಪ್ರಾಣವೆ ಲಿಂಗವಾಗಿ, ಜ್ಞಾನವೆ ಜಂಗಮವಾಗಿ, ಮುಂದೆ ಕಾಯದೊಳು ಕಾಂಬ ಅರುವಿನ ಬೆಳಗೆ ವಿಭೂತಿ, ಅರುವಿನ ಕರಣವೇ ಪಾದೋದಕ, ಅರುವಿನ ಆನಂದವೇ ಪ್ರಸಾದ, ಅರುವಿನ ಕೃಪೆಯೇ ರುದ್ರಾಕ್ಷಿ, ಅರುವು ತಾನೇ ಆಗು ಮೆರೆದುದೇ ಮಂತ್ರ ಇಂತು ಪಿಂಡಾಂಡಪಂಚಕ ಅಷ್ಟತನು ಒಳಗೊಂಡು ಕಾಂಬುದೊಂದೀಪರಿಯ ಅಷ್ಟಾವರಣವಾದ ಶ್ರೇಷ*ಗುರುವೆ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಕಲ್ಲ ತಾಗಿದ ಮಿಟ್ಟೆ ಕೆಲಕ್ಕೆ ಸಾರುವಂತೆ ಆನು ಬಲ್ಲೆನೆಂಬ ನುಡಿ ಸಲ್ಲದು. ಲಿಂಗದಲ್ಲಿ ಮರೆದು ಮಚ್ಚಿರ್ದ ಮನವು ಹೊರಗೆ ಬೀಸರವೋಗದೆ ? ಉರೆ ತಾಗಿದ ಕೋಲು ಗರಿ ತೋರುವುದೆ ? ಮೊರೆದು ಬೀಸುವ ಗಾಳಿ ಪರಿಮಳವನುಂಡಂತೆ ಬೆರಸಬೇಕು ಚೆನ್ನಮಲ್ಲಿಕಾರ್ಜುನಯ್ಯನ.
--------------
ಅಕ್ಕಮಹಾದೇವಿ
ಆವುದ ಹಿಡಿದು ಬೀಸಿದಲ್ಲಿಯೂ ಗಾಳಿ ತಪ್ಪದು. ಏನ ಹಿಡಿದು ನುಡಿದಿಹೆನೆಂಬನ್ನಕ್ಕ ಮನದ ಸೂತಕ ಮೊದಲು. ಒಂದು ಕಂಡು ಒಂದರಲ್ಲಿ ಕೂಡಿಹೆನೆಂಬನ್ನಬರ, ಅರಿವಿನ ಸೂತಕ ಬಿಡದು. ದೀಪವ ಕೆಡಿಸಿದ ಸೆರಗಿನಂತೆ, ಅನಲನಾಹುತಿಗೊಂಡ ಸಾರದಂತೆ, ಬಯಲು ಬಯಲ ಕೂಡಿದ ನಿರಾಳಕ್ಕೆ ಲಕ್ಷವುಂಟೆ ? ಅರಿವುದಕ್ಕೆ ಮುನ್ನವೆ ಅರಿದ ಅರಿವನು, ಕರಿಗೊಂಡಲ್ಲಿಯೆ ಲೋಪ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಕೇಳುವ ಸಂಗೀತ, ನೋಡುವ ಸುರೂಪುಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ವಾಸಿಸುವ ಸುಗಂಧ, ರುಚಿಸುವ ಸುರಸಂಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ತಟ್ಟು ಮುಟ್ಟು ತಾಗು ನಿರೋಧ ಸೋಂಕು ಸಂಬಂಧಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಹಲ್ಲುಕಡ್ಡಿ ದರ್ಪಣ ಮೊದಲಾದ ಪದಾರ್ಥಂಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಚಳಿ ಮಳೆ ಗಾಳಿ ಬಿಸಿಲು ಸಿಡಿಲು ಮಿಂಚು ನೀರು ನೆಳಲುಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಪೃಥ್ವಿ ಗಗನ ತತ್ತ್ವತೋರಿಕೆ ಸೂರ್ಯ ಚಂದ್ರ ಅಗ್ನಿ ತಾರೆ ಪ್ರಕಾಶಂಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಇಂತೀ ಲಿಂಗಾರ್ಪಿತ ಸಕೀಲವನರಿಯದೆ ಬರಿದೆ ಪ್ರಸಾದಿಗಳೆಂದು ನುಡಿವ ನುಡಿಜಾಣರ ಕಂಡು ನಾಚಿದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬೀಸುವ ಗಾಳಿ ಧೂಳಿಯನೆತ್ತಲು ಮಸುಳಿದನೆ ಸೂರ್ಯನು? ಆ ಸೂರ್ಯನಂತೆ ಬೆಳಗುತ್ತಿರವೇಡಾ! ಹಿರಿಯರ ಮನವು ಮನವಿಚ್ಛಂದವಾಗದೆ ಒಂದೆಯಂದದಿ ಇಪ್ಪಂತಪ್ಪ ನಿಮ್ಮದೊಂದು ಸಮತೆಯ ಗುಣ ಎನ್ನನೆಂದು ಪೊದ್ದಿಪ್ಪುದು ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->