ಅಥವಾ

ಒಟ್ಟು 330 ಕಡೆಗಳಲ್ಲಿ , 62 ವಚನಕಾರರು , 263 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದಶ್ರುತಿಯಿಂದ ವಸ್ತುವನರಿತೆಹೆನೆಂದಡೆ ಆ ವೇದವೆ ಹಾದಿಯೆ ವಸ್ತುವ ಕಾಬುದಕ್ಕೆ ? ಆ ವೇದ ಸರ್ವವು ಬ್ರಹ್ಮವೆಂದಲ್ಲಿ ವಸ್ತು ಎಲ್ಲಿ ಉಳಿಯಿತ್ತು ? ಆ ತೆರನ ತಿಳಿದು ವೇದವಾರನರಸಿತ್ತು ? ಶ್ರುತಿ ಯಾರ ಭೇದಿಸಿತ್ತು ? ಆ ಗುಣ ನಾದಬಿಂದುಕಳೆಯೊಳಗಾದಲ್ಲಿ ವಸ್ತುತತ್ವರೂಪಾಯಿತ್ತು. ಆ ಸ್ವರೂಪದ ಭೇದದಿಂದ ಪಂಚಭೌತಿಕದ ಗುಣದಿಂದ ಪಂಚವಿಂಶತಿತತ್ವಂಗಳೆಲ್ಲವೂ ಗೊತ್ತಾದವು. ನಾಲ್ಕು ವೇದ, ಹದಿನಾರು ಶಾಸ್ತ್ರ, ಇಪ್ಪತ್ತೆಂಟು ದಿವ್ಯಪುರಾಣಂಗಳಲ್ಲಿ ವೇದ್ಥಿಸಿ ಭೇದಿಸಿ ಕಂಡೆನೆಂಬಲ್ಲಿ ನಿಂದಿತ್ತು ನಿಜ ಸಂದೇಹಕ್ಕೆ ಒಳಗಾದುದಾಗಿ. ತರ್ಕಂಗಳಿಂದ ತರ್ಕಿಸಿ ನೋಡಿ ಮಿಕ್ಕಾದ ತತ್ವಂಗಳಲ್ಲಿ ಲಕ್ಷಿಸಿ ಪ್ರಮಾಣಿಸಿದಲ್ಲಿ ವಸ್ತು ಹಲವು ಕುಲವೆಂದು ಕಲ್ಪಿಸಿ ನುಡಿವಲ್ಲಿ ವಿಭೇದ ಪಕ್ಷವಲ್ಲದೆ ವಸ್ತು ಏಕರೂಪು. ಜಲ ಬಹುನೆಲಂಗಳಲ್ಲಿ ನಿಂದು ಒಲವರವಿಲ್ಲದೆ ಸಸಿ ವೃಕ್ಷಂಗಳ ಸಲಹುವಂತೆ ಸರ್ವಗುಣಸಂಪನ್ನನಾದೆಯಲ್ಲಾ ಪರಮಪ್ರಕಾಶ ಪರಂಜ್ಯೋತಿ ಪಂಚಬ್ರಹ್ಮಸ್ವರೂಪನಾದೆಯಲ್ಲಾ ಎನಗೆ ನೀನಾದೆಹೆನೆಂದು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ಕೈ ಮುಟ್ಟುವಲ್ಲಿ, ಕಿವಿ ಕೇಳುವಲ್ಲಿ, ಬಾಯಿ ಕೊಂಬಲ್ಲಿ, ಮೂಗು ವಾಸಿಸುವಲ್ಲಿ, ಕಣ್ಣು ನೋಡುವಲ್ಲಿ- ಇಂತೀ ಅಯಿದರ ಗುಣ ಎಡೆಯಾಟ ಅದಾರಿಂದ ಎಂಬುದ ತಾ ವಿಚಾರಿಸಿದಲ್ಲಿ, ಪಂಚಕ್ರೀಯಲ್ಲಿ ಸಂಚಿತ ಪ್ರಾರಬ್ಧ ಆಗಾಮಿಯೆಂಬ ಹಿಂಚುಮುಂಚಿಗೆ ಸಿಕ್ಕದೆ, ಕುಡಿವೆಳಗಿನ ಮಿಂಚಿನ ಸಂಚದಂತಿರಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮೂರು ಗುಣ ಮುರಿಮುರಿದು ಮೂರಕ್ಕೆ ತಂದು ಮುರಿಟ್ಟಿತ್ತು ನೋಡಾ, ಮಾರಹರ ಪಾದಪದ್ಮಭ್ರಮರ. ಮೂರು ಗುಣದಂತಾಚರಿಸಬಾರದು; ಮೂರು ಗುಣ ಬಿಡಬಾರದು ನೋಡಾ. ಮೂರರಿಂದಾರು ಲಿಂಗವ ದಾಂಟಿ, ಮೂರರಲ್ಲಿ ಐಕ್ಯವ ನೋಡೆ ಪುರಾರಿ ಪರಮಾತ್ಮ ಕಪಿಲಸಿದ್ಧಮಲ್ಲಿಕಾರ್ಜುನಾ ತಾನೆ ನೋಡಾ, ಮಾರಯ್ಯಾ.
--------------
ಸಿದ್ಧರಾಮೇಶ್ವರ
ತಾನರಿದು ಮತ್ತೇನುವ ಮುಟ್ಟೆನೆಂಬುದು ಭರಿತಾರ್ಪಣದ ಕಟ್ಟು. ಇಂತೀ ಗುಣ, ಭರಿತಾರ್ಪಣವಲ್ಲವೆ ? ಅಶನದಾಸೆಯ ಬಿಡು, ಎಲೆ ದೆಸೆಗೆಟ್ಟ ಜೀವವೆ. ನಿನ್ನ ನೀನರಿ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗವಾಗಬಲ್ಲಡೆ.
--------------
ಭರಿತಾರ್ಪಣದ ಚೆನ್ನಬಸವಣ್ಣ
ರಸ ಗಂಧ ರೂಪು ಶಬ್ದ ಸ್ಪರ್ಶ ಪಂಚೇಂದ್ರಿಯಂಗಳಲ್ಲಿ ಅರ್ಪಿಸುವನ್ನಕ್ಕ ಭಕ್ತ. ರೂಪು ರುಚಿಯ ಕಂಡರ್ಪಿಸುವನ್ನಕ್ಕ ಮಾಹೇಶ್ವರ. ಇಚ್ಫೆಯನರಿತು ಸಾಕು ಬೇಕೆಂಬನ್ನಕ್ಕ ಪ್ರಸಾದಿ. ಕಂಡಲ್ಲಿ ಮುಟ್ಟದೆ ಕಾಣಿಸಿಕೊಂಡು ಮುಟ್ಟಿಹೆನೆಂಬಲ್ಲಿ ಪ್ರಾಣಲಿಂಗಿ. ವಂದನೆ ನಿಂದೆಗೆ ಒಳಗಹನ್ನಕ್ಕ ಶರಣ. ಮುಟ್ಟುವ ತಟ್ಟುವ ತಾಗುವ ಸೋಂಕುವ ಸುಖವನರಿದು ಕೂಡಬೇಕೆಂಬನ್ನಕ್ಕ ಐಕ್ಯ. ಆ ಗುಣ ಪರುಷವ ಸೋಂಕಿದ ಲೋಹದಂತಾದುದು ಷಟ್‍ಸ್ಥಲ. ಇಂತೀ ಆರನವಗವಿಸಿ ಬೇರೊಂದು ತೋರದಿಪ್ಪುದು ಐಕ್ಯಸ್ಥಲಲೇಪಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಬರಡು ಕರೆವಾಗ ಈಯಿತ್ತೆ? ಆ ಕೊರಡು ಚಿಗುರುವಲ್ಲಿ ಹುಟ್ಟಿತ್ತೆ? ಆಗ ತೃಣ ನುಡಿವಲ್ಲಿ ಆತ್ಮ ಜೀವಿಸಿತ್ತೆ? ಆಗ ಕಾಷ್ಠವೇಷವೆದ್ದು ನಡೆವಲ್ಲಿ ಅರಿವು ಕರಿಗೊಂಡಿತ್ತೆ? ಇಂತಿವು ವಿಶ್ವಾಸದ ಹಾಹೆ. ಗುರುಚರದಲ್ಲಿ ಗುಣ, ಶಿವಲಿಂಗ ರೂಪಿನಲ್ಲಿ ಸಲಕ್ಷಣವನರಸಿದಲ್ಲಿಯೆ ಹೋಯಿತ್ತು ಭಕ್ತಿ. ಈ ಗುಣ ತಪ್ಪದೆಂದು ಸಾರಿತ್ತು ಡಂಗುರ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 61 ||
--------------
ದಾಸೋಹದ ಸಂಗಣ್ಣ
ಗುಣ ರೂಪಂಗಳ ಮೀರಿ ಶಿಷ್ಯಜನ ಮನೋಜ್ಞಾನಾಂಧಕಾರಕ್ಕೆ ಸೂರ್ಯೋದಯನಾಗಿ, ಲಲಾಟಲೋಚನ ಚಂದ್ರಕಳಾ ದಶಭುಜಂಗಳಂ ಜ್ಞಾನ ಶಾಂತಿ ಬಾಹುದ್ವಯಂಗಳಲ್ಲಿ ಪುದುಂಗೊಳಿಸಿ, ಭುವನ ಹಿತಾರ್ಥಮಾಗಿ ದೇಶಿಕಸ್ವರೂಪಮಂ ತಾಳ್ದು, ದೀಕ್ಷಾ ಶಿಕ್ಷಾ ಸ್ವಾನುಭಾವಾತ್ಮಕನಾಗಿ ಚರಿಪ ಷಟ್ಸ ್ಥಲಬ್ರಹ್ಮ ಪ್ರಬೋಧಕ ಪ್ರಭು ಪ್ರಸನ್ನಮೂರ್ತಿ ಪರಮ ಶಿವಲಿಂಗ ಭಕ್ತಜನಾಂತರಂಗಾ. ಮನ್ಮಾನಸಾಂಭೋಜ ಭೃಂಗ ತವ ಪಾದ ಪಲ್ಲವಂಗಳೆ ಮನೋವಚನಕಾಯಂಗಳಿಂ ತ್ರಿವಾರಂ ಶರಣು ಶರಣು.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಗುರುವಿನಲ್ಲಿ ಗುಣ ವಿದ್ಯೆ ಕುಲ ಬಾಲ್ಯ ಯೌವನ ವೃದ್ಧನೆಂದು ಅರಸಲುಂಟೇ ? ಅರಸಿದರೆ ಮಹಾಪಾತಕ. ಸಾಕ್ಷಿ :`` ಆಚಾರ್ಯೇ ಬಾಲಬುದ್ಧಿಶ್ಚ ನರಬುದ್ಧಿಸ್ತಥೈವ ಚ | ಅಸಿಷ್ಟ ಬುದ್ಧಿಭಾವೇನ ರೌರವಂ ನರಕಂ ವ್ರಜೇತ್ || '' ಎಂದುದಾಗಿ, ಎನ್ನ ಗುರು ಬಾಲನೂ ಅಲ್ಲ, ಯೌವನನೂ ಅಲ್ಲ, ವೃದ್ಧನೂ ಅಲ್ಲ. ಮೃತರಹಿತ ಪರಶಿವ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ.
--------------
ಹೇಮಗಲ್ಲ ಹಂಪ
ಕಲ್ಲು ರತಿಯಿಂದ ರತ್ನವಾದಂತೆ, ಉದಕ ಸಾರವರತು ಲವಣವಾದಂತೆ, ವಾರಿ ವಾಯುವ ಸಂಗದಿಂದ ಬಲಿದಂತೆ, ಪೂರ್ವವನಳಿದು ಪುನರ್ಜಾತನಾದ ಮತ್ತೆ, ಎನ್ನವರೆಂದು ಬೆರಸಿದಲ್ಲಿ, ಆ ಗುಣ ಆಚಾರಕ್ಕೆ ಹೊರಗಾಯಿತ್ತು. ಮಾತೆ ಪಿತ ಸಹೋದರ ಬಂಧುಗಳೆಂದು ಮನ ಕೂರ್ತು ಬೆರಸಿದಲ್ಲಿ, ಆಚಾರಕ್ಕೆ ಭ್ರಷ್ಟ, ವಿಚಾರಕ್ಕೆ ದೂರ, ಪರಮಾರ್ಥಕ್ಕೆ ಸಲ್ಲ. ಇವನೆಲ್ಲವ ಕಳೆದುಳಿದು ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅಂಗ ಗುಣವಳಿದು ಲಿಂಗ ಗುಣ ಉಳಿಯಿತ್ತಯ್ಯ. ಆವರಿಸಿತ್ತಯ್ಯ ಪರಮ ಅನುಪಮ ಭಕ್ತಿಸುಖ. ಲಿಂಗಾಂಗವೆಂಬ ಎರಡನರಿಯೆನಯ್ಯ. ಶುದ್ಧ ಸುಜ್ಞಾನ ಜಂಗಮಲಿಂಗ ಗ್ರಾಹಕನಾಗಿ ಪ್ರಾಣಲಿಂಗವೆಂಬ ಎರಡನರಿಯೆನಯ್ಯ. ಎರಡೆರಡೆಂದು ಈ ಹುಸಿಯನೇಕೆ ನುಡಿವರಯ್ಯ. ಇನ್ನೆರಡು ಒಂದಾಯಿತ್ತಾಗಿ ಲೋಕಚಾತುರ್ಯ, ಲೋಕವ್ಯವಹರಣೆ. ಲೋಕಭ್ರಾಂತಿಯ ಮರೆದೆನಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನಿಮ್ಮಲ್ಲಿ ನಿಬ್ಬೆರಗಾದೆನಯ್ಯಾ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅರಿವಿನ ಗುಣ ಬಸವಣ್ಣನೊಳಗಡಕವಯ್ಯಾ, ಮರಹಿನ ಜ್ಞಾನ ಚೆನ್ನಬಸವಣ್ಣನೊಳಗಡಕವಯ್ಯಾ. ಅರಿವು ಮರವೆ ತಾನೆ ಶಿವರೂಪುಪ್ರಭೆ ಪ್ರಭುಲಿಂಗಮೂರ್ತಿಯಾಯಿತ್ತು ಕಪಿಲಸಿದ್ಧಮ್ಲನಾಥಯ್ಯಾ.
--------------
ಸಿದ್ಧರಾಮೇಶ್ವರ
ನೇಮವ ಮಾಡಿಕೊಂಡು ಭಕ್ತರ ಭವನಂಗಳ ಹೊಕ್ಕು, ಕಾಯಕ ಸತ್ತು, ಹಣ ಹೊನ್ನ ಬೇಡೆಹೆನೆಂಬುದು ಕಷ್ಟವಲ್ಲವೆ ಸದ್ಭಕ್ತಂಗೆ ? ಆ ಗುಣ ಅಮರೇಶ್ವರಲಿಂಗಕ್ಕೆ ದೂರ.
--------------
ಆಯ್ದಕ್ಕಿ ಮಾರಯ್ಯ
ತನ್ನ ಸಮ ಕ್ರೀವಂತರಲ್ಲಿಯಲ್ಲದೆ ಕೊಳುಕೊಡೆ ಮಿಕ್ಕಾದ ಹೊರಗಣ ಕ್ರೀ ಸೋಂಕು ಬಾಹ್ಯರಚನೆ ತಪ್ಪದಿರಬೇಕು. ಆತ್ಮನರಿದು ಮುಟ್ಟುವಲ್ಲಿ ತನ್ನ ವ್ರತದೆಸಕವನರಿದು ಸ್ವಪ್ನಾವಸ್ಥೆಗಳಲ್ಲಿದ್ದು ಸೂಕ್ಷ ್ಮತನುವಂ ಮುಟ್ಟದೆ, ಅಲ್ಲದುದ ಕಂಡು ಮತ್ತೆ ಆರೂ ಅರಿಯರೆಂದು ತನ್ನಲ್ಲಿಯೇ ಅಡಗದೆ, ತಲೆದೋರಿದಲ್ಲಿಯೇ ಲಯವಾಗಬೇಕು. ಇಂತೀ ಗುಣ ಆತ್ಮನ ಶೀಲ ಮನಕ್ಕೆ ಮನೋಹರ ಶಂಕೇಶ್ವರ ಲಿಂಗದಲ್ಲಿ.
--------------
ಕರುಳ ಕೇತಯ್ಯ
ಗುಣ ನೋಡುವಡೆ ಕೀಳು ಗುಣವಯ್ಯಾ ಧೇನುವಿನಲ್ಲಿ. ನಿಂದಿಸುವ, ಬಂದ ಭಕ್ತರ ಹಾದು ಹೋಗುವ ಕುಂದುವಡೆಯದೆ, ಮಲತ್ರಯ ಪೊಂದದ ಸಚ್ಚಿದಾನಂದ ಗುಣವುಂಟಯ್ಯಾ ಮಹೇಶನಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೇಮದ ಬಣ್ಣ ರಸವು ಅಗ್ನಿಯ ಸಂಗದಿಂದ ರಸವೊಸರಿ ಸಂಗ ಪರಿಪೂರ್ಣವಾದಲ್ಲಿ, ರಸವೋ ? ಬಣ್ಣವೋ ? ಘಟವೋ? ಎರಕವಿಲ್ಲದೆ ಘಟ್ಟಿಯಾದಂತೆ ಅಂಗವು, ಲಕ್ಷಿಸಿಪ್ಪ ಲಿಂಗವು, ಲಕ್ಷಿಸುತಿಪ್ಪ ಚಿತ್ತವು, ಹೆಪ್ಪುಗೊಂಡಂತೆ ಈ ಗುಣ ಲಿಂಗಾಂಗಿಯ ಶುಭಸೂಚನೆ, ನಿಃಕಳಂಕ ಮಲ್ಲಿಕಾರ್ಜುನ ಲಿಂಗವನೊಡಗೂಡಿದವನಂಗ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->