ಅಥವಾ

ಒಟ್ಟು 25 ಕಡೆಗಳಲ್ಲಿ , 14 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಂಬ ಕೂಳಿಗೆ ಉಪದೇಶವ ಮಾಡುವ ಚುಂಬಕರು ಹೆಚ್ಚಿ, ಭಕ್ತಿಯಪಥವ ಕೆಡಿಸಿದರು. ಡೊಂಬ ಡೋಹರ ಹೊಲೆಯರು ಮಾದಿಗರು. ಉಪದೇಶವಿಲ್ಲದವರು ಪಿಂಬೇರ ಅನಾಚಾರಿಯ ಆರಾಧಿಸಿ, ಶಂಭುವಿನ ಸರಿಯೆಂದು ಅವರೊಳಗೆ ಹಲವರು ಕೊಂಬನೂದುವ, ಸೊಣಕನ ಕೊರಳಲ್ಲಿ ಬಾರ ಕವಡೆಯ ಕಟ್ಟಿಕೊಂಡು ನಾಯಾಗಿ ಬೊಗಳುವರು. ಕಂಬದ ಬೊಂಬೆಯ ಮಾಡಿ ಮೈಲಾರ ಭೈರವ ಆಯಿರ (?) ಧೂಳಕೇತನೆಂಬ ಕಾಳುದೈವವ ಊರೂರದಪ್ಪದೆ ತಿರಿದುತಿಂಬ ಡಂಭಕರ ಕೈಯಲ್ಲಿ ಉಪದೇಶವ ಕೊಂಡವರು, ಗುರುಲಿಂಗಜಂಗಮದ ಹೊಲಬನರಿಯದೆ ಭಂಗಿತರಾದರು. ಅಂಗದ ಮೇಲಣ ಸೂತಕ ಹಿಂಗದು. ಅನ್ಯದೈವದ ಜಾತ್ರೆಗೆ ಹೋಗಿ, ನಾಡನರಕದಲ್ಲಿ ಬೆರಣಿಯ ಮಾಡುವ ನಾನಾ ಜಾತಿಗಳು ಹರಕೆಯ ಹಿಂಗಿಸದೆ, ಗುರುಕಾರುಣ್ಯವ ಕೊಟ್ಟವಂಗೆ ಕುಂಭಿನಿಪಾತಕ ತಪ್ಪದೆಂದ ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಗುರುಕಾರುಣ್ಯವ ಪಡೆದು ಅಂಗದ ಮೇಲೆ ಲಿಂಗಧಾರಣವಾಗಿ, ಶ್ರೀ ವಿಭೂತಿಯ ಧರಿಸಿದ ಮಹಾತ್ಮನು ಮುಂದೆ ಶಿವನ ಜ್ಞಾನಚಕ್ಷುವಿನಿಂದುದಯಿಸಿದ ರುದ್ರಾಕ್ಷಿಯ ಧರಿಸುವ ಭೇದವೆಂತೆಂದೊಡ ಃ ಶಿಖಾಸ್ಥಾನದಲ್ಲಿ ಏಕಮುಖವನುಳ್ಳಂಥ ಒಂದು ರುದ್ರಾಕ್ಷಿಯ `` ಓಂ ಸದಾಶಿವಾಯ ನಮ ಃ '' ಎಂಬ ಮಂತ್ರದಿಂದ ಧಾರಣಮಾಡುವುದು. ಮಸ್ತಕದಲ್ಲಿ ಎರಡುಮುಖ ಮೂರುಮುಖ ಹನ್ನೆರಡುಮುಖಂಗಳನುಳ್ಳಂಥ ಮೂರು ರುದ್ರಾಕ್ಷಿಗಳ `` ಓಂ ವಹ್ನಿಸೂರ್ಯಸೋಮಾಧಿಪಾಯ ಶಿವಾಯ ನಮಃ '' ಎಂಬ ಮಂತ್ರದಿಂದ ಧಾರಣಮಾಡುವುದು. ಶಿರವ ಬಳಸಿ ಹನ್ನೊಂದುಮುಖಂಗಳನುಳ್ಳಂಥ ಮೂವತ್ತಾರು ರುದ್ರಾಕ್ಷಿಗಳ ``ಓಂ ಷಟ್‍ತ್ರಿಂಶತತ್ತಾ ್ವತ್ಮಕಾಯ ಪರಶಿವಾಯ ನಮಃ '' ಎಂಬ ಮಂತ್ರದಿಂದ ಧಾರಣಮಾಡುವುದು. ಕರ್ಣಯುಗದಲ್ಲಿ ಐದುಮುಖ ಹತ್ತುಮುಖ ಏಳುಮುಖಂಗಳನುಳ್ಳಂಥ ಒಂದೊಂದು ರುದ್ರಾಕ್ಷಿಯ ``ಓಂ ಸೋಮಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಕಂಠಸ್ಥಾನದಲ್ಲಿ ಎಂಟುಮುಖ, ಆರುಮಖಂಗಳನುಳ್ಳಂಥ ಮೂವತ್ತೆರಡು ರುದ್ರಾಕ್ಷಿಗಳ ``ಓಂ ತ್ರಿಯಂಬಕಕಲಾತ್ಮನೇ ಶ್ರೀಕಂಠಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಉರಸ್ಥಾನದಲ್ಲಿ ನಾಲ್ಕುಮುಖಂಗಳನುಳ್ಳಂಥ ಐವತ್ತುನಾಲ್ಕು ರುದ್ರಾಕ್ಷಿಗಳ ``ಓಂ ಶ್ರೀಕಂಠಾದಿಮುಕ್ತ್ಯಾತ್ಮಕಾಯ ಶ್ರೀ ಸರ್ವಜ್ಞಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಬಾಹುದ್ವಯದಲ್ಲಿ ಹದಿಮೂರುಮುಖಂಗಳನುಳ್ಳಂಥ ಹದಿನಾರು ಹದಿನಾರು ರುದ್ರಾಕ್ಷಿಗಳ ``ಓಂ ಸುಖಾಸನಾದಿ ಷೋಡಶಮೂರ್ತ್ಯಾತ್ಮಕಾಯ ಶ್ರೀಕಂಠಾಯ ನಮಃ'' ಎಂಬ ಮಂತ್ರದಿಂದ ಬಲದ ತೋಳಿನಲ್ಲಿ ಧಾರಣಮಾಡುವುದು. ``ಓಂ ಸೋಮಕಲಾತ್ಮಕಾಯ ಸೋಮಾಯ ನಮಃ'' ಎಂಬ ಮಂತ್ರದಿಂದ ಎಡದ ತೋಳಿನಲ್ಲಿ ಧಾರಣಮಾಡುವುದು. ಮುಂಗೈ ಎರಡರಲ್ಲಿ ಒಂಬತ್ತು ಮುಖಂಗಳನುಳ್ಳಂಥ ಹನ್ನೆರಡು ಹನ್ನೆರಡು ರುದ್ರಾಕ್ಷಿಗಳ ``ಓಂ ದ್ವಾದಶಾದಿತ್ಯಾಕ್ಷಾಯ ಶ್ರೀ ಮಹಾದೇವಾಯ ನಮಃ'' ಎಂಬ ಮಂತ್ರದಿಂದ ಬಲದ ಮುಂಗೈಯಲ್ಲಿ ಧಾರಣಮಾಡುವುದು. ``ಓಂ ಕೇಶವಾದಿತ್ಯಾಯ ಉಮಾಪತಯೇ ನಮಃ'' ಎಂಬ ಮಂತ್ರದಿಂದ ಎಡದ ಮುಂಗೈಯಲ್ಲಿ ಧಾರಣಮಾಡುವುದು. ಕಕ್ಷಸ್ಥಾನದಲ್ಲಿ ಯಜ್ಞೋಪವೀತರೂಪವಾಗಿ ಹದಿನಾಲ್ಕುಮುಖಂಗಳನುಳ್ಳಂಥ ನೂರೆಂಟು ರುದ್ರಾಕ್ಷಿಗಳ ``ಓಂ ಶತರುದ್ರವಿದ್ಯಾಸ್ವರೂಪಾತ್ಮಕಾಯ ಶ್ರೀ ವಿಶ್ವೇಶ್ವರಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಇಂತೀ ಸ್ಥಾನಗಣನೆ ಮುಖಮಂತ್ರಂಗಳ ಭೇದವನರಿದು, ಶ್ರೀ ರುದ್ರಾಕ್ಷಿಯ ಧರಿಸಿದ ಶರಣ ತಾನೇ ಸಾಕ್ಷಾತ್ ಪರಶಿವನಲ್ಲದೆ ಬೇರಲ್ಲವಯ್ಯ. ಅದೆಂತೆಂದೊಡೆ :ಪರಮರಹಸ್ಯದಲ್ಲಿ- ``ಭಾಲೇ ತ್ರೈಪುಂಡ್ರಕಂ ಯಸ್ಯ ಗಲೇ ರುದ್ರಾಕ್ಷಮಾಲಿಕಾ | ವಕ್ತ್ರೇ ಷಡಕ್ಷರಂ ಮಂತ್ರಂ ಶಿವಃ ನಾ ಸಂಶಯಃ ||'' ಎಂದುದಾಗಿ, ಅಂತಪ್ಪ ಮಹಿಮಂಗೆ ಶರಣೆಂದವರೆ ಧನ್ಯರಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬ್ರಾಹ್ಮಣನಾಗಲಿ ಕ್ಷತ್ರಿಯನಾಗಲಿ ವೈಶ್ಯನಾಗಲಿ ಶೂದ್ರನಾಗಲಿ ಆವಜಾತಿಯಲ್ಲಿ ಹುಟ್ಟಿದಾತನಾದಡಾಗಲಿ, ಗುರುಕಾರುಣ್ಯವ ಪಡೆದು ಅಂಗದ ಮೇಲೆ ಲಿಂಗಧಾರಣವಾಗಿ ಆಚಾರಕ್ರಿಯಾಸಂಪನ್ನನಾದ ಮಹಾತ್ಮನೇ ಮೂರುಲೋಕಕ್ಕಧಿಕ ನೋಡಾ ! ಅದೆಂತೆಂದೊಡೆ : ``ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಶೂದ್ರೋ ವಾಪ್ಯಂತ್ಯಜೋýಪಿ ವಾ | ಶಿವಭಕ್ತಃ ಸದಾ ಪೂಜ್ಯಃ ಸರ್ವಾವಸ್ಥಾಂ ಗತೋýಪಿ ವಾ ||'' ಎಂದುದಾಗಿ, ಇಂತಪ್ಪ ಪರಮ ಶಿವಭಕ್ತನು ಶರಣ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಕಾರುಣ್ಯವ ಪಡೆದು ಲಿಂಗದೊಳವಗ್ರಾಹಕನಾಗದೆ, ಅಂಗಲಿಂಗ, ಪ್ರಾಣಲಿಂಗ, ಆತ್ಮಲಿಂಗಸಂಬಂಧದ ವಿಚಾರವಿಲ್ಲದೆ ಬರಿಯ ಜ್ಞಾನಯೋಗವೆಂಬ ಶೂನ್ಯದನುಭಾವಿಗೆ ಗುರುಭಕ್ತಿ ಇಲ್ಲ, ಗುರುಭಕ್ತಿ ಇಲ್ಲವಾಗಿ ಲಿಂಗಭಕ್ತಿ ಇಲ್ಲ, ಲಿಂಗಭಕ್ತಿಯಿಲ್ಲವಾಗಿ ಜಂಗಮಭಕ್ತಿ ಇಲ್ಲ, ಜಂಗಮಭಕ್ತಿ ಇಲ್ಲವಾಗಿ ಪ್ರಸಾದವಿಲ್ಲ, ಪ್ರಸಾದಪ್ರಸನ್ನವಿಲ್ಲವಾಗಿ ಮೋಕ್ಷವಿಲ್ಲ. ಇದು ಕಾರಣ, ಸದ್ಗುರು ಸಿದ್ಧಸೋಮನಾಥನಲ್ಲಿ ಗುರುಕರಜಾತರಾದ ಲಿಂಗಾಂಗಸಂಬಂಧಿಗಳಪೂರ್ವವಯ್ಯಾ ಪ್ರಭುವೆ.
--------------
ಅಮುಗಿದೇವಯ್ಯ
ಗುರುಕಾರುಣ್ಯವ ಪಡೆದು ಲಿಂಗಾನುಗ್ರಾಹಕನಾಗಿ ಅಂಗ ಲಿಂಗ ವೇಧೆಯಿಂದಿರಲು ಆ ಇಷ್ಟಲಿಂಗಕ್ಕೆ ಅಂಗವೇ ಅರ್ಪಿತ. ಮತ್ತಾ ಇಷ್ಟಲಿಂಗಕ್ಕೆ ಮನಕ್ಕೆ ವೇದ್ಯವಾಗಿ ಪ್ರಾಣನಲ್ಲಿ ಪ್ರವೇಶವಾಗಿ ಲಿಂಗವೇ ಪ್ರಾಣವಾಗಿರಲು ಆ ಪ್ರಾಣಲಿಂಗಕ್ಕೆ ಮನವೇ ಅರ್ಪಿತ. ಇಷ್ಟ ಪ್ರಾಣ ಸಂಗ ಸಂಯೋಗ ಸಮರಸಾನುಭಾವ ಲಿಂಗದನುವರಿತು, ಅರಿಕೆಯರತ ಅರುವಿನ ತೃಪ್ತಿಯೇ ಭಾವಲಿಂಗಾರ್ಪಿತ. ಇದಕ್ಕೆ ಶ್ರುತಿ: ಇಷ್ಟಲಿಂಗಾರ್ಪಿತಂ ಚಾಂಗಂ ಪ್ರಾಣಲಿಂಗಾರ್ಪಿತಂ ಮನಃ ಭಾವಲಿಂಗಾರ್ಪಿತಾ ತೃಪ್ತಿರಿತಿ ಭೇದೋ ವರಾನನೇ ಇಂತೆಂದುದಾಗಿ, ಇಷ್ಟ ಪ್ರಾಣ ತೃಪ್ತಿ ಸಮರಸಾದ್ವೈತವಾದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತ.
--------------
ಆದಯ್ಯ
ಗುರುಕಾರುಣ್ಯವ ಪಡೆದೆವೆಂಬರು; ಒಬ್ಬನಾಗಾದೆಹೆನೆಂಬ, ಒಬ್ಬ ಚೇಗೆಯಾದೆಹೆನೆಂಬ ಇವರಿಬ್ಬರು ಪಿಂಡಭೋಗಿಗಳು, ಭಕ್ತಂಗೆ ಈ ಆಗೂ ಇಲ್ಲ, ಈ ಚೇಗೆಯೂ ಇಲ್ಲ. ಗುರುದ್ರವ್ಯಾವನೊಪ್ಪಿಸಿದನಾಗಿ. ``ಗುರುದ್ರವ್ಯಾಭಿಲಾಷೇಣ ಗುರುದ್ರವ್ಯಸ್ಯ ವಂಚನಂ ಯಃ ಕುರ್ಯಾದ್ಗುರೋರ್ಭಕ್ತಃಸ ಭವೇತ್ ಬ್ರಹ್ಮರಾಕ್ಷಸಃ ' ಎಂದುದಾಗಿ, ಗುರುದ್ರವ್ಯವಾವುದೆಂದಡೆ; ದೈಹಿಕದ್ರವ್ಯ, ¨sõ್ಞತಿಕದ್ರವ್ಯ, ಆತ್ಮದ್ರವ್ಯ, ಇಂದ್ರಿಯದ್ರವ್ಯ, ಜ್ಞಾನದ್ರವ್ಯ_ ಈ ಪಂಚದ್ರವ್ಯವನು ಉಭಯವಳಿದು ಷೋಡಶೋಪಚಾರದಲ್ಲಿ ಅರ್ಪಿಸಬಲ್ಲರೆ ಕೂಡಲಚೆನ್ನಸಂಗಯ್ಯನಲ್ಲಿ ಆತನೆ ಗುರುಭಕ್ತ.
--------------
ಚನ್ನಬಸವಣ್ಣ
ತನತನಗೆ ಕುಳ್ಳಿರ್ದು ಮನಸಿಗೆ ಬಂದಂತೆ ಘನಲಿಂಗದ ವಾರ್ತೆಯ ಗಳಹುತಿಪ್ಪರು ನೋಡಾ ! ಗುರುಕಾರುಣ್ಯವ ಹಡೆಯದೆ, ಸ್ವರಬಿಂದುಗಳ ತಡೆಯದೆ ಹರನ ಶರಣರ ಮುಂದೆ ಹಿರಿದು ಮಾತನಾಡುತಿಪ್ಪರು ನೋಡಾ ! ಇರಿಯದೆ ಮೆರೆವರು, ಅರಿಯದೆ ಉಳಿವರು ಕೂಡಲಚೆನ್ನಸಂಗಯ್ಯನಲ್ಲಿ ಜನಜಂಗುಳಿಗಳು
--------------
ಚನ್ನಬಸವಣ್ಣ
ಗುರುಕಾರುಣ್ಯವಂ ಪಡೆದು ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಕುಲದೈವ, ತನ್ನಂಗದ ಮೇಲಿಪ್ಪ ಲಿಂಗವೆಂದರಿಯದೆ ಮನೆ ದೈವ, ತನ್ನ ಮನೆಗೆ ಬಂದ ಜಂಗಮವೆಂದರಿಯದೆ ಮತ್ತೆ ಬೇರೆ ಕುಲದೈವ ಮನೆದೈವವೆಂದು ಧರೆಯ ಮೇಲಣ ಸುರೆಗುಡಿ ಹೊಲೆದೈವ ಭವಿಶೈವದೈವಂಗಳ ಹೆಸರಿನಲ್ಲಿ ಕಂಗ? ಪಟ್ಟ, ಕಾಲ ಪೆಂಡೆಯ, ಕಡೆಯ, ತಾಳಿ, ಬಂಗಾರಂಗಳ ಮೇಲೆ ಆ ಪರದೈವಂಗಳ ಪಾದ ಮುದ್ರೆಗಳನೊತ್ತಿಸಿ ಅವನಿದಿರಿಟ್ಟು ಆರಾಧಿಸಿ, ಅವರೆಂಜಲ ಭುಂಜಿಸಿ ತಮ್ಮ ಲಿಂಗಶರೀರಂಗಳ ಮೇಲೆ ಅವನು ಕಟ್ಟಿಕೊಂಡು ಮತ್ತೆ ತಾವು ಭಕ್ತರೆಂದು ಬಗಳುವ ಪರ(ಶಿವ?) ಸಮಯದ್ರೋಹಿಗಳನಿರಿದಿರಿದು ಕಿರಿಕಿರಿದಾಗಿ ಕೊಯಿದು ಕೆನ್ನಾಯಿಗಿಕ್ಕದೆ ಮಾಣ್ಬರೆ ? ಇಂತಪ್ಪ ನರಕಜೀವಿಗಳನು ಕೂಡಲಚೆನ್ನಸಂಗಯ್ಯ ರವಿಸೋಮರುಳ್ಳನ್ನಕ್ಕ ನಾಯಕ ನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಇಂತಪ್ಪ ಭೇದವ ತಿಳಿಯದೆ ಪುರಾತರ ವಚನವ ನೋಡಿ ಕೇಳಿ, ಹೊನ್ನು, ಹೆಣ್ಣು, ಮಣ್ಣು ಬಿಟ್ಟು ಪ್ರಪಂಚವ ಬಿಟ್ಟೆವೆಂಬಿರಿ, ಬಿಟ್ಟ ಪರಿಯ ಪೇಳಿರಯ್ಯ ? ಹೊನ್ನಲ್ಲವೇ ಆತ್ಮ ? ಹೆಣ್ಣಲ್ಲವೇ ಮನಸ್ಸು ? ಮಣ್ಣಲ್ಲವೇ ಪೃಥ್ವಿತತ್ವಾಂಶಭೂತವಾದ ದೇಹವು ? ಇಂತಪ್ಪ ಹೊನ್ನು, ಹೆಣ್ಣು, ಮಣ್ಣು ಒಳಗಿಟ್ಟುಕೊಂಡು ಬಾಹ್ಯದ ಹೊನ್ನು ಹೆಣ್ಣು ಮಣ್ಣನೆ ಬಿಟ್ಟರೆ, ಬಿಟ್ಟಂತಾಯಿತೇ ಎಲಾ ಮರುಳ ಮಾನವರಿರಾ ? ದೇಹವ ದಗ್ಧಮಾಡಬೇಕೆಂದು ಅನ್ನ ಉದಕವ ಬಿಟ್ಟು, ಅರಣ್ಯಕ್ಕೆ ಹೋಗಿ, ಕಂದಮೂಲ ಪರ್ಣಾಹಾರವ ಭಕ್ಷಿಸಿ ತನು ಒಣಗಿಸಿದರೇನು ದೇಹದಗ್ಧವಾದಂತಾಯಿತೇ ? ಆಗದು. ಹುತ್ತದ ಮೇಲೆ ಬಡಿದು ಸರ್ಪನ ಕೊಂದಂತಾಯಿತಲ್ಲದೆ ದೇಹ ದಗ್ಧವಾಗಲರಿಯದು ಎಲೆ ಮರುಳ ಮಾನವರಿರಾ. ಅದೆಂತೆಂದೊಡೆ: ಶಿವಜ್ಞಾನೋದಯವಾಗಿ ಗುರುಕಾರುಣ್ಯವ ಪಡದು, ಲಿಂಗಾಂಗಸಂಬಂಧಿಯಾದ ಶಿವಶರಣನ ದೇಹವು ಜ್ಞಾನಾಗ್ನಿಯಲ್ಲಿ ದಗ್ಧವಾಯಿತಲ್ಲದೆ ಉಳಿದ ಜೀವಾತ್ಮರ ದೇಹವು ದಗ್ಧವಾಗಲರಿಯದು. ದೇಹದ ಗುಣವ ಬಿಡಬೇಕೆಂಬಿರಿ, ಬಿಡಲಿಕ್ಕೇನು ಕಟ್ಟಿದ ಪಶುಗಳೆ ? ಬಿಡಲಿಕ್ಕೇನು ಹಟ್ಟಿಯ ಪಶುಗಳೆ ? ಕಣ್ಣಿಗೆ ಕಾಣಿಸದ, ಕೈಗೆ ಸಿಕ್ಕದ ಗುಣಗಳ ಬಿಡಬೇಕೆಂಬಿರಿ. ಇದಕ್ಕೆ ದೃಷ್ಟಾಂತ: ಸೂರ್ಯನ ಬಿಂಬ ಜಲದಲ್ಲಿ ಕಾಣುವದು. ಆ ಬಿಂಬವ ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ. ಜ್ಯೋತಿಯ ಪ್ರಭೆಯ ಕಡೆಯಕ್ಕೆ ತೆಗೆದು ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ. ದೇಹದೊಳಗಣ ಪ್ರಾಣವ ಬಹಿಷ್ಕರಿಸಿ ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ. ಇಂತೀ ಭೇದವ ತಿಳಿಯದೆ ವನವಾಸದಲ್ಲಿ ತನುಮನವ ಬಳಲಿಸಿ ಭವದತ್ತ ಮುಖವಾಗಿ ಹೋಗುವ ಹೇಸಿಮೂಳರ ಕಂಡು ನಾಚಿತ್ತಯ್ಯ ಎನ್ನ ಮನವು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಹದ ಪೂರ್ವವ ಜರೆದು, ಪರದ ಪೂರ್ವವನರಿದು, ಗುರುಕಾರುಣ್ಯವ ಪಡೆದು, ಅಂತರ್ಬಾಹ್ಯದ ಭವಿಯ ತೊರೆದು ಭಕ್ತಿಪರಾಯಣರಾಗಿ ನಿಂದುದೆ ಲಿಂಗದ ನಿಜದಂಗ. ಅದೆಂತೆಂದಡೆ; ತ್ರಿಗುಣಂ ಪಂಚಕಂ ಚೈವ ಚತ್ವಾರಿ ಷಡ್ವಿಧೈವ ಚ ಸಘಾತಂ ವ್ಯಸನಂ ಚೈವ ಇತ್ಯಾದಿ ಭವಿಮಿಶ್ರಿತಂ ಎಂದುದಾಗಿ, ಅಂತರಂಗದ ಭವಿಯನು ಹಿಂಗಿ, ಅನೃತಮಸ್ಥಿರಂ ವಾಕ್ಯಂ ವಂಚನಂ ಪಙ್ತಭೇದನಂ ಔದಾಸೀನಂ ನಿರ್ದಯತ್ವಂ ಷಡ್ವಿಧಂ ಭವಿಮಿಶ್ರಿತಂ ಎಂಬೀ ಮಾನವರಂಗದ ಭವಿಯನು ಕಳೆದು, ಅರ್ಚನಾದಿ ಕ್ರಿಯಾಕಾಲೇ ಪ್ರಚ್ಛನ್ನಂ ಪಟಮುತ್ತಮಂ ಪಾಪೀ ಕೋಪೀ ಪರಿಭ್ರಷ್ಟೋನಾಸ್ತಿಕೋ ವ್ರತದೂಷಕಃ ದುರ್ಜನಶ್ಚ ದುರಾಚಾರೀ ದುರ್ಮುಖಶ್ಚಾಪ್ಯದೀಕ್ಷಿತಃ ಪ್ರಮಾದಾದ್ದೃಶ್ಯತೇ ಯೇನ ತಸ್ಯ ಪೂಜಾ ತು ನಿಷ್ಫಲಂ ಎಂಬೀ ಬಹಿರಂಗದ ಭವಿಯನ್ನು ತೊಲಗಿಸಿ, ಇಂತೀ ತ್ರಿವಿಧಭವಿಯನು ದೂರಮಾಡಿ, ಶಿವಭಕ್ತಿಯೆ ಅಂಗವಾದ ಲಿಂಗೈಕ್ಯ ಲಿಂಗಪೂಜಕರಿಗೆ ಪೂರ್ವವರ್ಣಾಶ್ರಮಾದಿ ಸೂತಕವಿಲ್ಲ, ಕೂಡಲಸಂಗಯ್ಯಾ.
--------------
ಬಸವಣ್ಣ
-->