ಅಥವಾ

ಒಟ್ಟು 22 ಕಡೆಗಳಲ್ಲಿ , 11 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯದ ಕಳವಳದಿಂದ, ಕರಣದ ಕಳವಳದಿಂದ, ಇಂದ್ರಿಯ ಕಳವಳದಿಂದ, ವಿಷಯದ ಕಳವಳದಿಂದ, ಮೋಹದ ಕಳವಳದಿಂದ ಮಾಯಾಪಾಶ ಪಾಕುಳದಲ್ಲಿ ಜನ್ಮ ಜರೆ ಮರಣ ಭವಕ್ಕೊಳಗಾದ ಭವಿಗೆ ಅನಂತದೈವವಲ್ಲದೆ, ಜನ್ಮ ಜರೆ ಮರಣ ಭವವಿರಹಿತ ಸದ್ಭಕ್ತಂಗೆ ಅನಂತದೈವವುಂಟೆ ? ಸೂಳೆಗೆ ಅನಂತಪುರುಷರ ಸಂಗವಲ್ಲದೆ, ಗರತಿಗೆ ಅನಂತಪುರುಷರ ಸಂಗವುಂಟೆ? ಚೋರಂಗೆ ಪರದ್ರವ್ಯವಲ್ಲದೆ, ಸತ್ಯಸಾತ್ವಿಕಂಗೆ ಪರದ್ರವ್ಯವುಂಟೆ ? ಹಾದರಗಿತ್ತಿಗೆ ಹಲವು ಮಾತಲ್ಲದೆ, ಪರಮಪತಿವ್ರತೆಗೆ ಹಲವು ಮಾತುಂಟೆ ? ಪರಮಪಾತಕಂಗೆ ಹಲವು ತೀರ್ಥ, ಹಲವು ಕ್ಷೇತ್ರವಲ್ಲದೆ ? ಪರಮಸದ್ಭಕ್ತಂಗೆ ಹಲವು ತೀರ್ಥ, ಹಲವು ಕ್ಷೇತ್ರಗಳುಂಟೆ ? ಗುರುದ್ರೋಹಿ ಲಿಂಗದ್ರೋಹಿ ಚರದ್ರೋಹಿ, ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಭಕ್ತದ್ರೋಹಿ, ಮಾತೃದ್ರೋಹಿ ಪಿತೃದ್ರೋಹಿಗೆ ಕಾಲಕಾಮಕರ್ಮದ ಭಯವಲ್ಲದೆ ಸತ್ಯ ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ ಸತ್ಕಾಯಕ ಸದ್ಭಕ್ತಿಪ್ರಿಯ ಸದ್ಧರ್ಮಿಗೆ, ಕಾಲಕಾಮಕರ್ಮದ ಭಯವುಂಟೆ, ಕಲಿದೇವರದೇವಾ ?
--------------
ಮಡಿವಾಳ ಮಾಚಿದೇವ
ಶಿವ ಶಿವಾ ! ಕನಸಿನಲ್ಲಿ ಜಂಗಮವ ಕಂಡು, ಮನಸ್ಸಿನಲ್ಲಿ ಗುಡಿಯ ಕಟ್ಟುವರಯ್ಯಾ ! ನೆಟ್ಟನೆ ಮನೆಗೆ ಜಂಗಮ ಬಂದಡೆ ಕೆಟ್ಟೆವಿನ್ನೇನ ಬೇಡಿಯಾರೆಂಬ ಕಷ್ಟ ಜೀವಿಯ ಭಕ್ತಿಯಂತಾಯಿತ್ತು ವ್ರತಸ್ಥನ ಭಕ್ತಿ. ಕಾಗೆ ತಮ್ಮ ದೇವರೆಂದು ಕರೆದು ತಮ್ಮ ಮನೆಯ ಮೇಲೆ ಕೂಳ ಹಾಕಿ ಕೈಮುಗಿದು ಬೇಡಿಕೊಂಬರಯ್ಯಾ, ಆ ಕಾಗೆ ಬಂದು ಮನೆಯ ಹೊಕ್ಕಡೆ ಒಕ್ಕಲೆತ್ತಿ ಹೋಹ ಮರ್ಕಟನ ಭಕ್ತಿಯಂತಾಯಿತ್ತಯ್ಯಾ ನೇಮಸ್ಥನ ಭಕ್ತಿ. ಹಾವು ತಮ್ಮ ದೇವರೆಂದು ಹಾಲನೆರೆದು ಕೈಮುಗಿದು ಬೇಡಿಕೊಂಬರಯ್ಯಾ ಆ ಹಾವ ಕಂಡಡೆ ಹೆದರಿ ಓಡುವ ಭಾವಭ್ರಮಿತರ ಭಕ್ತಿಯಂತಾಯಿತ್ತಯ್ಯಾ ಶೀಲವಂತನ ಭಕ್ತಿ. ಹೊಸ್ತಿಲ ದೇವರೆಂದು ಪೂಜಿಸಿ ಮರಳಿ ಇಕ್ಕಾಲಿಕ್ಕಿ ದಾಂಟಿ ಹೋಹ ಒಕ್ಕಲಗಿತ್ತಿಯ ಭಕ್ತಿಯಂತಾಯಿತ್ತಯ್ಯಾ, ಭಾಷೆವಂತನ ಭಕ್ತಿ. ಕೆರಹ ಕಳೆದು ಕೈಯ ತೊಳೆದು ಸಗ್ಗಳೆಯ ನೀರ ಕುಡಿದ ಬ್ರಾಹ್ಮಣನ ಭಕ್ತಿಯಂತಾಯಿತ್ತಯ್ಯಾ ಸಮಯಾಚಾರಿಯ ಭಕ್ತಿ. ನಾಯ ನಡು ಸಣ್ಣದೆಂದು ಅಂದಣವನೇರಿಸಿದಡೆ ಆ ನಾಯಿ ಎಲುವ ಕಂಡಿಳಿದಂತಾಯಿತ್ತಯ್ಯಾ ನಿತ್ಯಕೃತ್ಯನ ಭಕ್ತಿ_ ಇಂತೀ ಆರು ಪ್ರಕಾರದ ದೃಷ್ಟಾಂತಗಳ ತೋರಿ ಹೇಳಿದೆ. ಅಂತು ಭಕ್ತನ ಜಂಗಮವೆ ಶಿವನೆಂದರಿದು ಪಾದೋದಕ ಪ್ರಸಾದವ ಕೊಂಡು ನಮಸ್ಕರಿಸಿದ ಬಳಿಕ ಮತ್ತಾ ಜಂಗಮ ಮನೆಗೆ ಬಂದು, ಹೊನ್ನು [ವಸ್ತ್ರಾದಿ] ಮುಟ್ಟಿಯಾರೆಂಬ ಅಳುಕುಂಟೆ ಸದ್ಭಕ್ತಂಗೆ ? ಇಲ್ಲವಾಗಿ, ಅದೆಂತೆಂದಡೆ, ಲೈಂಗ್ಯೇ: ಅರ್ಥಪ್ರಾಣಾಭಿಮಾನೇಷು ವಂಚನಂ ನೈವ ಕುತ್ರಚಿತ್ ಯಥಾ ಭಾವಸ್ತಥಾ ದೇವಶ್ಚರೋಚ್ಛಿಷ್ಟಂ ವಿಶೇಷತಃ ಸ್ವೇಷ್ಟಲಿಂಗಾಯ ದತ್ವಾ ತು ಪುನಃ ಸೇವೇತ ಭಕ್ತಿಮಾನ್ ಸ ಏವ ಷಟ್‍ಸ್ಥಲಬ್ರಹ್ಮೀ ಪ್ರಸಾದೀ ಸ್ಯಾನ್ಮಹೇಶ್ವರಃ _ಇಂತೆಂಬ ಪುರಾಣ ವಾಕ್ಯವನರಿಯದೆ ಅಳುಳ್ಳಡೆ ಸುಡುಸುಡು, ಅವನು ಗುರುದ್ರೋಹಿ ಆಚಾರಭ್ರಷ್ಟ ವ್ರತಗೇಡಿ ನರಮಾಂಸಭುಂಜಕ ಜಂಗಮನಿಂದಕ ಪಾಷಂಡಿ ದೂಷಕ. ಆತನ ಹಿಡಿದು ಹೆಡಗುಡಿಯ ಕಟ್ಟಿ ಮೂಗನುತ್ತರಿಸಿ ಇಟ್ಟಿಗೆಯಲೊರಸಿ ಅನಂತಕಾಲ ಕೆಡಹುವ ನಮ್ಮ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ಶ್ರೀಗುರುಲಿಂಗಜಂಗಮದ ಲೀಲೆಯ ಧರಿಸಿ, ಪರಸ್ತ್ರೀಯಳೆಂಬ ಹಡಿಕೆಯ ಯೋನಿದ್ವಾರದಲ್ಲಿ ತೊಳಲುವ ಜಡಜೀವಿಡಂಬಕನಲ್ಲಿ ಸಮಯಾಚಾರವ ಮಾಡುವಾತಂಗೆ ಭವಿಜನ್ಮ ತಪ್ಪದು ನೋಡ! ತಾನಿದ್ದಲ್ಲಿಗೆ ಪ್ರಸಾದಪುಷ್ಪತೀರ್ಥದೆಡೆ ಪ್ರಸಾದವ ತರಿಸಿಕೊಂಡಾತಂಗೆ ಶುನಿಸೂಕರಜನ್ಮ ತಪ್ಪದು ನೋಡ! ಸಮಪಂಕ್ತಿಯಲ್ಲಿ ವಾಮನವಾದ ಉಕ್ಕಳವ ಕೊಟ್ಟುಕೊಂಡಾತಂ- ದೀಕ್ಷಾಹೀನ, ಆಚಾರಭ್ರಷ್ಟ! ತನ್ನ ಪವಿತ್ರಕರ್ತುವಾದ ಗುರುವಿನಾಜ್ಞೆಯ ಮೀರಿ ಗುರುನಿಂದ್ಯವ ಮಾಡುವ ಗುರುದ್ರೋಹಿ, ಪರದೈವ-ಪರದ್ರವ್ಯಾಪಹಾರಕನ ಕೂಡೆ ಪಾದೋದಕ-ಪ್ರಸಾದವ ಏಕಭಾಜನವ ಮಾಡಿದಾತಂU ಶತಸಹಸ್ರಜನ್ಮಾಂತರದಲ್ಲಿ ಕ್ರಿಮಿಕೀಟಕಜನ್ಮ ತಪ್ಪದು ನೋಡ! ಸತ್ಯಸದಾಚಾರದ ವರ್ಮಾವರ್ಮವ ಭೇದಿಸಿ, ಹರಗುರುವಚನೋಕ್ತಿಯಿಂದ ಪ್ರಮಾಣಿಸಿ, ಬುದ್ಧಿಯ ಹೇಳುವಾತನೆ ಮಹಾಪ್ರಭುವೆಂದು ಭಾವಿಸುವಾತನೆ ಸದಾಚಾರಿ ಸನ್ಮಾರ್ಗಿ ನೋಡ! ಇದ ಮೀರಿ ಆಜ್ಞೋಪದೇಶವ ಕೇಳದೆ ತನ್ನ ಮನಬಂದಂತೆ ಚರಿಸುವ ಭ್ರಷ್ಟನ ಮೋರೆಯ ಮೇಲೆ ಶರಣಗಣಂಗಳ ರಕ್ಷೆಯಿಂದ ಹೊಡದು, ಆ ಮೇಲೆ ಗಾರ್ದ[ಭ]ಜನ್ಮದಲ್ಲಿ ಜನಿಸೆಂದಾತನಂಬಿಗರ ಚೌಡಯ್ಯನು. ನೋಡ, ಸಂಗನ ಬಸವೇಶ್ವರ.
--------------
ಅಂಬಿಗರ ಚೌಡಯ್ಯ
ಲಿಂಗ ಮುಂತಾದ ಭಕ್ತನ ಅಂಗದ ಮೇಲಣ ಲಿಂಗ ಹೋಯಿತ್ತೆಂದು ಸಂದೇಹವ ಮಾಡಿ, ಶೈಲ ವಾರಿ ಪಾಶ ಶಸ್ತ್ರ ಸಮಾಧಿ ಎಂಬಿವ ಕೊಳಲಾಗದು. ಅದೆಂತೆಂದಡೆ: ಭಕ್ತಸ್ಯ ಲಿಂಗದೇಹಸ್ಯ ತದೇಹಂ ಲಿಂಗವರ್ಜಿತಂ | ಶಸ್ತ್ರ ಶೈಲಂ ಜಲಂ ಪಾಶಂ ಸಮಾಧಿಶ್ಚ ವಿವರ್ಜಯೇತ್ || ಎಂದುದಾಗಿ, ಇದಕ್ಕೆ ಮುಕ್ತಿಯನೆಯುವ ಪಥವೆಂತೆಂದಡೆ: ನಿಶ್ಚಿತಂ ನಿರ್ಮಲಂ ಚೈವ ನಿಶ್ಚಲಂ ನಿರುಪಾಧಿಕಂ | ಭುಕ್ತಿಮುಕ್ತಿಪ್ರದಾತಾಹ ಇತ್ಯತ್ವಂ ಶಿವಮಂದಿರಂ || ಎಂದುದಾಗಿ, ಧ್ಯಾನ ಧಾರಣ ಸಮಾಧಿಯಲ್ಲಿಹುದು. ಅದೆಂತೆಂದಡೆ: ತಪೋ ಧ್ಯಾನಾಧಿಕಂ ಕುರ್ವನ್ ರುದ್ರಾಕ್ಷಂ ಧಾರಯನ್ ಸದಾ | ಶಿವಮಂತ್ರಜಪಂ ಶ್ಚೈವ ಶಿವಲೋಕೇ ಮಹೀಯತೇ || ಇಂತೆಂಬ ಶ್ರುತಿಯ ಮೀರಿ, ಅಂಗಕ್ಕೆ ಆಸೆಯ ಮಾಡಿ, ಲಿಂಗವ ಧರಿಸಿ ಪೂಜೆಯ ಮಾಡುವ ಶಿಷ್ಯ ಗುರುದ್ರೋಹಿ. ಹಣವಿಗಾಸೆ ಮಾಡಿ ಲಿಂಗಧಾರಣ ಮಾಡುವ ಗುರು ಶಿವದ್ರೋಹಿ. ಅದೆಂತೆಂದಡೆ: ಲಿಂಗಬಾಹ್ಯಕೃತಂ ದೃಷ್ಟ್ವಾ ಪುನರ್ಲಿಂಗಂತು ಧಾರಯೇತ್ | ಪೂಜಾಯಾ ನಿಷ್ಫಲಾ ಚೈವ ರೌರವಂ ನರಕಂ ವ್ರಜೇತ್ || ಎಂದುದಾಗಿ, ಇಂತು ಇವರಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ, ವಿಭೂತಿ ರುದ್ರಾಕ್ಷಿ ಪ್ರಣವ ಪಂಚಾಕ್ಷರಿ ಇಲ್ಲವಾಗಿ ಸತ್ಪಥಕ್ಕೆ ಸಲ್ಲರು ಕಾಣಿಭೋ. ಇವರು ಕಂಡಕಂಡವರೊಡನೆ ಹರಿವ ಚಾಂಡಾಲಗಿತ್ತಿಯಂತೆ. ಇವಂದಿರ ಮುಖವ ನೋಡಲಾಗದು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಆದಿಯ ಪ್ರಸಾದವ ಕೊಂಬಡೆ ಆತ್ಮದ್ರೋಹಿ, ಗುರುಪ್ರಸಾದವ ಕೊಂಬಡೆ ಗುರುದ್ರೋಹಿ, ಲಿಂಗ ಪ್ರಸಾದವ ಕೊಂಬಡೆ ಲಿಂಗದ್ರೋಹಿ, ಜಂಗಮ ಪ್ರಸಾದವ ಕೊಂಬಡೆ ಜಂಗಮದ್ರೋಹಿ, ಸಮಯ ಪ್ರಸಾದವ ಕೊಂಬಡೆ ಭಾವವಳಿಯದಾಗಿ, ಕೂಡಲಚೆನ್ನಸಂಗ[ನೆಂಬ] ಹಿರಿಯನ ಹಿರಿಯ ಮಗ ಸಂಗನಬಸವಣ್ಣನ ಪ್ರಸಾದಕ್ಕೆ ನಾನೆಂಬ ಓಗರ
--------------
ಚನ್ನಬಸವಣ್ಣ
ಸೂಳೆ ಸುರೆ ಬೆಕ್ಕು ನಾಯಿ ಅನ್ಯದೈವ ತಾಳಹಣ್ಣು ಇಷ್ಟುಳ್ಳನ್ನಕ್ಕರ ಅವ ಭಕ್ತನೆ ? ಅಲ್ಲ ಅಲ್ಲ. ಅವ ಶಿವದ್ರೋಹಿ, ಅವ ಗುರುದ್ರೋಹಿ. ಹಂದಿ ಹಂದಿಯ ಹೇಲ ತಿಂದು, ಒಂದರ ಮೋರೆಯನೊಂದು ಮೂಸಿ ನೋಡುವಂತೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ದಾರಿಯಲ್ಲಿ ಬೀದಿಯಲ್ಲಿ ಮನೆಗಳಲ್ಲಿ ಹೊನ್ನು ಹೆಣ್ಣು ಮಣ್ಣಿನ ಮೇಲಣ ಕಾಮವಿಕಾರ ತೋರಿದಡೆ ಅದಕ್ಕೇನೂ ಶಂಕೆಯಿಲ್ಲ. ಅದೇನು ಕಾರಣವೆಂದಡೆ: ಚಿತ್ರದ ಹುಲಿ, ಕನಸಿನ ಹಾವು. ಜಲಮಂಡುಕ ಕಚ್ಚಿ ಸತ್ತವರುಂಟೆ? ಇದು ಕಾರಣ ಜಾಗ್ರಸ್ವಪ್ನಸುಷುಪ್ತಿಗಳಲ್ಲಿ ಕಾಮವಿಕಾರ ತೋರಿತ್ತೆಂದು ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಗಳಿಂದ ಘಟವ ಬಿಟ್ಟಡೆ, ಆತ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ. ಇದು ಭಕ್ತರಾಚರಣೆ, ವಿರಕ್ತನಿರ್ಣಯ. ಇಂತಪ್ಪವರಿಗೆ ಸದ್ಯೋಜಾತಲಿಂಗವುಂಟಿಲ್ಲವೆಂದೆನು.
--------------
ಅವಸರದ ರೇಕಣ್ಣ
-->