ಅಥವಾ

ಒಟ್ಟು 21 ಕಡೆಗಳಲ್ಲಿ , 10 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೃಷ್ಟಿ ನಟ್ಟಿತ್ತು ನೋಡಾ, ನಟ್ಟು ಮತ್ತೆ ತೆಗೆಯಲಾರದು ನೋಡಾ. ಅಲ್ಲಿಯೇ ಅಚ್ಚೊತ್ತಿದಂತಿತ್ತು ನೋಡಾ. ಆಶ್ರಯವ ಗೆಲಿದು ನಿರಾಶ್ರಯದ ನಿಃಪತಿಯಲ್ಲಿ ನಿಂದನು ಕೂಡಲಚೆನ್ನಸಂಗಾ, ನಿಮ್ಮ ಶರಣ.
--------------
ಚನ್ನಬಸವಣ್ಣ
ವಿಶ್ವವೆಲ್ಲವೂ ಮಾಯೆಯ ವಶವಾಗಿ, ವಿಶ್ವದೊಳಗಾದ ದ್ರವ್ಯವ ಮಾಯೋಚ್ಛಿಷ್ಟವೆಂದು ಶಿವನೊಲ್ಲ. ಅಂತಪ್ಪ ಮಾಯೆಯ ಗೆಲಿದು, ಮಾಯಾತೀತರಾದ ಭಕ್ತರಿಂದೊದಗಿದ ಪ್ರಸಾದ, ಮಾಯಾತೀತನಾದ ಶಿವಂಗೆ ಮಹಾನೈವೇದ್ಯ, ಪರಮತೃಪ್ತಿ ಎಂಬುದ ನಾ ಬಲ್ಲೆನಯ್ಯಾ. ಅದೆಂತೆಂದಡೆ: ಮಾಯೋಚ್ಛಿಷ್ಟಂ ಜಗತ್ಸರ್ವಂ ಶುದ್ಧಂ ಪಂಚಾಕ್ಷರೇಣ ಚ ಅಭಿಮಂತ್ರ್ಯ ತದುಚ್ಛಿಷ್ಟಂ ಪದಾರ್ಥಂ ಭಕ್ತಿಮಾನ್ನರಃ ಚರಲಿಂಗೇ ವಿಚಾರೇಣ ಸಮರ್ಪ್ಯ ತದನಂತರಂ ಸ್ವಲಿಂಗೇ ಚ ಪ್ರಸಾದಾನ್ನಂ ದತ್ವಾ ಭೋಜನಮಾಚರೇತ್ ಎಂದುದಾಗಿ ಚೆನ್ನಯ್ಯನುಂಡು ಮಿಕ್ಕುದ ಚಪ್ಪರಿದು ಸವಿದ, ಚೋಳಿಯಕ್ಕನೊಕ್ಕುದ ಕೊಂಡ. ಇದು ಕಾರಣ_ ನಿಮ್ಮ ಪರಮಕಲಾರೂಪವಾದ ಜಂಗಮದ ಪ್ರಸಾದವ ನಿಮಗೆ ದಣಿಯಿತ್ತು ನಿಮ್ಮ ಪ್ರಸಾದವೆಂಬ ಜ್ಯೋತಿ ಎನ್ನಂಗ_ಪ್ರಾಣ_ಭಾವ_ಜ್ಞಾನ ಹಿಂಗದೆ ಬೆಳಗುತ್ತಿದೆ, ನೋಡಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕಾಲಕರ್ಮಕಂಜಿ ಶಿವನ ಶೀಲ ಭಕ್ತಿಯ ಹಿಡಿದು ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದವ ಕೊಂಡು, ಕರ್ಮ ದುರಿತವ ಗೆಲಿದು, ಶೀಲ ಶಿವಭಕ್ತಿಯಿಲ್ಲದ ದ್ರೋಹಿಗಳು, ಹಾಲು ಹಯನ ಮೀಸಲವೆಂದು ಕೂಡಿಸಿಕೊಂಬರು. ಅವರು ಶೂಲಕ್ಕೆ ಬಿದ್ದು, ಹೊಲೆಜನ್ಮಕ್ಕೆ ಮಾದಿಗರಾಗಿ, ಉಪವಾಸವಿರ್ದು ಹಸಿದುಂಬ ಕ್ರೂರಕರ್ಮಿಗಳ ಮುಖವ ನೋಡಲಾಗದೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಮುನ್ನ ವಿಟ ಶ್ವೇತನು ಶಿವ ಎಂಬ ಶಬ್ದದಿಂದೆ ಕಾಲನ ಕಂಟಕವ ಗೆಲಿದು ನೀಲಲೋಹಿತನ ಓಲಗದಲ್ಲಿರಲಿಲ್ಲವೆ ? ಮುನ್ನ ಸುಕುಮಾರನು ಪರಶಿವಲಿಂಗದರ್ಶನದಿಂದೆ ಯಮನಪುರಿಯ ಬಾಧೆಯ ನೀಗಿ ಹರನ ರಜತಾದ್ರಿಯಲ್ಲಿರಲಿಲ್ಲವೆ ? ಮುನ್ನ ಮಾರ್ಕಂಡೇಯನು ಪರಬ್ರಹ್ಮಲಿಂಗವ ಪೂಜಿಸಿ, ಯಮನ ಉರಹರಿದು ಹರನ ಕೈವಲ್ಯವ ಪಡೆಯಲಿಲ್ಲವೆ ? ಇದನರಿತು ಸ್ಥಿರವಾಗಿ ಪೂಜಿಸಿ ವರನ ಬೇಡಿರೋ ನಮ್ಮ ಅಖಂಡೇಶ್ವರ ಲಿಂಗದೇವನ.
--------------
ಷಣ್ಮುಖಸ್ವಾಮಿ
ಪರಮ ಲಿಂಗಾಂಗಿಯ ಇರವು ಎಂತಿಪ್ಪುದಯ್ಯಾ ಎಂದರೆ ವಾಕ್ಕು ಮೂಲ ಮಂತ್ರದಲ್ಲಿ ಜೋಕೆಗುಂದದೆ ಪಾಣಿ ಶಿವಲಿಂಗಪೂಜೆಗೆ ಮಾಣದೆ ಮನಸಂದು ಪಾದವೇಕಾಂತವಾಸಕ್ಕೆ ಹರುಷದಿಂದ ಪದವಿಟ್ಟು ಗುಹ್ಯ ಬ್ರಹ್ಮಚಾರಿಯಾಗಿ ಆನಂದಮಂ ಅಳಿದು ಪಾಯುವಿನ ಗುಣ ಅದಕ್ಕದು ಸಹಜವೆಂದು ನೆಲೆಮಾಡಿ ಕರ್ಮೇಂದ್ರಿಯಂಗಳ ಕಾಲ ಮುರಿದು ಶಬ್ದ ಮೊದಲು ಗಂಧ ಕಡೆಯಾದ ನಾಲ್ಕೊಂದು ವಿಷಯಂಗಳು ತನುಮನವ ಸೋಂಕುವುದಕ್ಕೆ ಮುನ್ನವೇ ಲಿಂಗಾರ್ಪಣವ ಮಾಡಿ ಆ ವಿಷಯಂಗಳಿಗೊಳಗಾಗದೆ ಆತ್ಮತ್ರಯಂಗಳ ತಾಳ ಕೊಯ್ದು ಪಂಚಬ್ರಹ್ಮಂಗಳಂ ಪಂಚೇಂದ್ರಿಯಂಗಳಲ್ಲಿ ಪ್ರತಿಷೆ* ಮಾಡಿ ಕಾಮುಕತನವ ಕಡೆಗೊತ್ತಿ ಜ್ಞಾನೇಂದ್ರಿಯಂಗಳ ನೆನಹ ಕೆಡಿಸಿ ಪ್ರಾಣ ಮೊದಲಾದ ಮೂರೆರಡು ವಾಯುಗಳ ಜರಿದು ಸೆರೆವಿಡಿದು ಮೊದಲಾ ವಾಯುವಿನ ವಶಮಾಡಿ ಪಂಚವಾಯುವಿನ ಸಂಚಮಂ ಕೆಡಿಸಿ ಅಂತಃಕರಣಗಳೆಂಬ ಮಾನಸಗಳ್ಳರ ಕಳೆದು ದ್ವಾದಶಪತ್ರದ ಹೊಂದಾವರೆಯ ಲಿಂಗಕ್ಕೆ ನಿರಂಜನ ಪೂಜೆಯಂ ಮಾಡುವ ಪೂಜಾರಿಗಳಂ ಮಾಡಿ ಕರಣಂಗಳಂ ಗೆಲಿದು ಅಂತಃಕರಣಂಗಳ ಚಿಂತೆಗೊಳಗುವii್ಞಡಿ ಆತ್ಮಜ್ಞಾನಮಂ ಅಡಗಿಸಿ ಭೋಗಮಂ ನೀಗಿ ಪಂಚಭೂತಂಗಳೆಂಬ ಭೂಪರಿಗೆ ಪರಿಚಾರಕರಾದ ಇಪ್ಪತ್ತೆ ೈದುಜೀವರಿಗೆ ನಿರುದ್ಯೋಗಮಂ ಮಾಡಿ ಫಲಪದಂಗಳನೊದೆದು ನಿರ್ವಯಲಕೂಟಕ್ಕೆ ಮನವಿಟ್ಟು ಇಷ್ಟಲಿಂಗಮಂ ಕರದಲ್ಲಿ ಪಿಡಿದು ಪೂಜೆಯಂ ಮಾಡಿ ಆ ಲಿಂಗಮಂ ಅನಿಮಿಷ ದೃಷ್ಟಿಯಿಂದ ನೋಡುವುದೀಗ ಲಿಂಗದ ನೋಟ. ಅದು ರತ್ನಾಕರ ಜಂಬೂದ್ವೀಪದ ಸುನಾದ ಬ್ರಹ್ಮದ ಕೂಟ. ಹೀಂಗಲ್ಲದೆ ಪಂಚಭೂತಂಗಳ ಕುಟಿಲವ್ಯಾಪಾರಂಗಳೆಂಬ ಬಲೆಗೆ ತಾನು ಸಿಲ್ಕಿ ಭಕ್ತಿ ಜ್ಞಾನ ವೈರಾಗ್ಯಮಂ ಸುಟ್ಟುರುಹಿ ಉಪಾಧಿಕೆಯಲ್ಲಿ ಒಡವೆರದು ಹೊಟ್ಟೆಯ ಕಿಚ್ಚಿಗೆ ಇಷ್ಟಲಿಂಗಮಂ ಕರದಲ್ಲಿ ಪಿಡಿದು ಪೂಜೆಯಂ ಮಾಡಿ ಇದಿರ ಮೆಚ್ಚಿಸುವೆನೆಂದು ಆ ಲಿಂಗವ ನೋಡುವ ನೋಟವೆಂತಿಪ್ಪುದೆಂದೊಡೆ ಹೊತ್ತು ಹೋಗದ ಕೋಡಗ ತಿರುಗಾಟಕ್ಕೆ ಬಂದು ಮಾಣಿಕ್ಯಮಂ ಕಂಡು ಆ ಮಾಣಿಕ್ಯವ ಕರದಲ್ಲಿ ಪಿಡಿದು ಮೂಸಿ ನೆಕ್ಕಿ ನೋಡಿ ಹಲ್ಲುಗಿರಿದು ನೋಡಿ ನೋಡಿ ಕಾಲಮಂ ಕಳೆದ ತೆರನಂತಾಯಿತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕಾಯಗೊಂಡು ಹುಟ್ಟಿದವರು; ದೇವರಾದಡಾಗಲಿ ಈವರಾದಡಾಗಲಿ ಮಾಯೆಯ ಸಾಧಿಸಿ ಗೆಲುವದರಿದು ನೋಡಾ ! ಮನದ ತಮಂಧವ ಗೆಲಿದು, ನೆನೆದು ಸುಖಿಯಾದೆಹೆನೆಂಬವರ ಬೆಂಬತ್ತಿ ಕಾಡಿತ್ತು ಕರ್ಮ. ಗುಹೇಶ್ವರಲಿಂಗವ ಕಿರಕಿರಿದಾಗಿ ನೆನೆದಡೆ ಹಿರಿಹಿರಿದಾಗಿ ಕಾಡುವುದು ನೋಡಾ ಮರಹು ! ಸಂಗನಬಸವಣ್ಣಾ ನೀ ನೆನೆದ ನೆನಹು ಆರಂತಹುದೂ ಅಲ್ಲ ನೋಡಾ.
--------------
ಅಲ್ಲಮಪ್ರಭುದೇವರು
-->