ಅಥವಾ

ಒಟ್ಟು 67 ಕಡೆಗಳಲ್ಲಿ , 22 ವಚನಕಾರರು , 62 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣು ನೋಡಿ ಅರ್ಪಿಸಿದ ಪ್ರಸಾದ ಅದಾವ ಲಿಂಗಕ್ಕೆ ? ಕಿವಿ ಕೇಳಿ ಅರ್ಪಿಸಿದ ಪ್ರಸಾದ ಅದಾವ ಲಿಂಗಕ್ಕೆ ? ಘ್ರಾಣ ವಾಸಿಸಿ ಅರ್ಪಿಸಿದುದು ಅದಾವ ಲಿಂಗಕ್ಕೆ ? ಜಿಹ್ವೆಯ ಕೊನೆಯಲ್ಲಿ ಸವಿದು ಅರ್ಪಿಸಿದುದು ಅದಾವ ಲಿಂಗಕ್ಕೆ ? ಕರ ಮುಟ್ಟಿದ ಸೋಂಕಿನ ಸುಖ ಅದಾವ ಲಿಂಗಕ್ಕೆ ? ಇಂತೀ ಪಂಚೇಂದ್ರಿಯಂಗಳಲ್ಲಿ ಅರ್ಪಿಸಿಕೊಂಬ ಆತ್ಮನ ತೃಪ್ತಿ ಐದೋ ಮೂರೋ ಬೇರೆರಡೋ ಏಕವೋ ? ಎಂಬುದ ನಿಧಾನಿಸಿ ಬಹುವೆಜ್ಜದ ಕುಂಭದಲ್ಲಿ ಅಗ್ನಿಯನಿರಿಸಿ ಉರುಹಲಿಕೆ ವೆಜ್ಜ ವೆಜ್ಜಕ್ಕೆ ತಪ್ಪದೆ ಕಿಚ್ಚು ಹೊದ್ದಿ ತೋರುವದು ವೆಜ್ಜದ ಗುಣವೋ ? ಒಂದಗ್ನಿಯ ಗುಣವೋ ? ಇಂತೀ ಗುಣವ ನಿಧಾನಿಸಿಕೊಂಡು ನಿಜಪ್ರಸಾದವ ಕೊಂಬ ಸ್ವಯಪ್ರಸಾದಿಗೆ ತ್ರಿವಿಧಪ್ರಸಾದ ಸಾಧ್ಯವಪ್ಪುದಲ್ಲದೆ ವರ್ತಕಪ್ರಸಾದಿಗಳಿತ್ತಲೆ ಉಳಿದರು. ದಹನ ಚಂಡಿಕೇಶ್ವರಲಿಂಗಕ್ಕೆ ಅರ್ಪಿತ ಮುಟ್ಟದೆ ಹೋಯಿತ್ತು.
--------------
ಪ್ರಸಾದಿ ಲೆಂಕಬಂಕಣ್ಣ
ಮಾಯೆ ಮಹಾಸಂಚಲವೆಂಬ ಸುಳಿಗಾಳಿಯೊಳು ಸಿಕ್ಕಿದ ತರಗೆಲೆಯಂತೆ, ತಳಹಳಗೊಳ್ಳುತ್ತಿದಿತೀ ಜಗವೆಲ್ಲವು ಎನಗಿನ್ನೆಂತೊ, ಎನಗಿನ್ನೆಂತಯ್ಯಾ. ಬಲ್ಲೆನೆಂಬವರ ಬಾಯ ಟೊಣೆಯಿತ್ತು ಮಾಯೆ. ಆಗಮಿಕರ ಮೂಗ ಕೊಯ್ಯಿತ್ತು ಮಾಯೆ. ಅನುಭಾವಿಗಳೆಲ್ಲರೂ ಮನವಿಕಾರಕ್ಕೆ ಒಳಗಾದರು. ಅರಿದೆನೆಂಬವರೆಲ್ಲರೂ ಮರಹಿಂಗೆ ಬೀಜವಾದರು. ಬ್ರಹ್ಮಿಗಳೆಲ್ಲರೂ ಹಮ್ಮಿಂದ ಹಗರಣದ ಮರುಳಂಗಳಾದರು ವಿರಕ್ತರೆಲ್ಲರೂ ಯುಕ್ತಿಗೆಟ್ಟು ಭವಮಾಲೆಗೊಳಗಾದರು. ನಿರ್ವಾಣಿಗಳೆಲ್ಲರೂ ಸೆರೆಸಂಕಲೆಗೊಳಗಾದರು. ಯೋಗಿಗಳೆಲ್ಲರೂ ವಿಕಳವೆಂಬ ರೋಗಕ್ಕೆ ಒಳಗಾದರು. ತಪಸಿಗಳೆಲ್ಲರೂ ಕಪಟ ಕಳವಳಕ್ಕೊಳಗಾದರು. ಧ್ಯಾನ ಮೌನ ವ್ರತ ನಿತ್ಯ ನೇಮ ಕರ್ಮ ಕ್ರಿಯೆಗಳು ವಸ್ತುವ ಮರೆದು, ಮಾಯಾಧೂಳಿನೊಳಗೆ ಸಿಕ್ಕಿ ವಿಕಳತೆಗೊಂಡು, ನೆನೆವ ಮನ, ವಾಸಿಸುವ ಘ್ರಾಣ, ನೋಡುವ ನೇತ್ರ, ನುಡಿವ ನಾಲಗೆ, ನಡೆವ ಪಾದದ್ವಯಗಳೆಲ್ಲ ಭ್ರಮೆಗೊಳಗಾಯಿತ್ತಯ್ಯ. ಶಿವಶಿವಾ ಮಹಾದೇವಾ, ಇದೆಲ್ಲಿಯ ಮಾರಿ ಬಂದಿತ್ತಯ್ಯ. ಈ ಜಗವನೆತ್ತಿ ಕೊಂದು ಕೂಗುವ ಮಾರಿಯ ಗೆಲುವವರನಾರೊಬ್ಬರನೂ ಕಾಣೆ. ಎನಗಿನ್ನೆಂತಯ್ಯ, ಎನಗಿನ್ನೆಂತಯ್ಯಾ ! ಭಕ್ತಿಜ್ಞಾನವೈರಾಗ್ಯವನಿತ್ತು ಸಲಹಯ್ಯಾ. ಎನ್ನ ಕರಣಂಗಳಿಗೆ ಸಮಸ್ತ ಪ್ರಸಾದವನಿತ್ತು ಸಲಹಯ್ಯಾ, ನಿಃಕಳಂಕ ಚೆನ್ನಮಲ್ಲಿಕಾರ್ಜುನಪ್ರಭುವೆ.
--------------
ನಿಃಕಳಂಕ ಚೆನ್ನಮಲ್ಲಿಕಾರ್ಜುನ ಪ್ರಭುವೆ
ಸರ್ವಾರ್ಪಿತವ ಮಾಡಬೇಕೆಂಬರು, ಸರ್ವೇಂದ್ರಿಯ ನುಮತವಾದುದನರಿಯರು. ಶ್ರೋತ್ರ ನೇತ್ರ ಘ್ರಾಣ ಜಿಹ್ವೆ [ತ್ವಕ್ಕು] ಸಹಿತ ಅರ್ಪಿತವ ಮಾಡಬೇಕು. ಪ್ರಾಣಪ್ರಯಾಣಕಾಲ್ಯೇಪಿ ಸರ್ವಭೋಗೇಷು ಯಸ್ಸದಾ ಅರ್ಪಣೇ ಚಾವಧಾನೀ ಚ ಸ ಲಿಂಗೀ ಪ್ರಾಣನಾಯಕಃ[ಎಂದುದಾಗಿ] ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗೆ ನಮೋ ನಮೋ.
--------------
ಚನ್ನಬಸವಣ್ಣ
ಭಕ್ತ ಮಾಹೇಶ್ವರ ಪ್ರಸಾದಿಯೆಂದು ಈ ಮೂರು ಕ್ರಿಯಾಂಗವಯ್ಯ. ಪ್ರಾಣಲಿಂಗಿ ಶರಣ ಐಕ್ಯವೆಂದು ಈ ಮೂರು ಜ್ಞಾನಾಂಗವಯ್ಯ. ಆಚಾರಲಿಂಗ ಗುರುಲಿಂಗ ಶಿವಲಿಂಗವೆಂದು ಈ ಮೂರು ಕ್ರಿಯಾಲಿಂಗವಯ್ಯ. ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು ಈ ಮೂರು ಜ್ಞಾನಲಿಂಗವಯ್ಯ. ಇವಕ್ಕೆ ಅಂಗ ಲಿಂಗ ಸಂಗ ಸಂಯೋಗನಿರ್ದೇಶವ ಹೇಳಿಹೆನು. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ಆ ಆರು ಕ್ರಿಯಾಂಗವು. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು ಲಿಂಗವಾರು ತೆರನಾಗಿಪ್ಪುದಯ್ಯ. ಇನ್ನು ಸಂಗವಾರು ತೆರನದೆಂತೆಂದಡೆ: ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರ, ಭಾವವೆಂದು ಸಂಗವಾರು ತೆರನಾಗಿಪ್ಪುದಯ್ಯ. ಘ್ರಾಣದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ; ನೇತ್ರದಲ್ಲಿ ಶಿವಲಿಂಗ; ತ್ವಕ್ಕಿನಲ್ಲಿ ಜಂಗಮಲಿಂಗ; ಶ್ರೋತ್ರದಲ್ಲಿ ಪ್ರಸಾದಲಿಂಗ; ಭಾವದಲ್ಲಿ ಮಹಾಲಿಂಗ ಸಂಬಂಧ. ಇಂತೀ ಷಂಡಗವು ಷಡ್ವಿಧಲಿಂಗದಲ್ಲಿ ಸಮರಸ ಸಂಯೋಗವಾದಲ್ಲಿ ಅಂಗ ಲಿಂಗ ಸಂಬಂಧವೆನಿಸಿಕೊಂಡಿತಯ್ಯ. ಇನ್ನು ಪ್ರಾಣಾಂಗವಾರು ತೆರನದೆಂತೆಂದಡೆ: ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಶುದ್ಧಾತ್ಮ ಆ ಆರು ಪ್ರಾಣಾಂಗಗಳು. ಇಂತೀ ಪ್ರಾಣಾಂಗಂಗಳಲ್ಲಿಯೂ ಹಿಂದೆ ಹೇಳಿದ ಷಡ್ವಿಧಲಿಂಗವು ಮಾರ್ಗ ಕ್ರೀಯನೆಯ್ದಿ ಮೀರಿದ ಕ್ರಿಯಾಸ್ಥಲದಲ್ಲಿ ಬಂದು ನಿಂದು ಜ್ಞಾನಗಮ್ಯವಾಗಿ ಸಂಗದನುವನರಿದು ಪ್ರಾಣಾಂಗವಾರೂ ಲಿಂಗಸಂಬಂಧವಾದವಯ್ಯ. ಹಿಂದೆ ಹೇಳಿದ ಕ್ರಿಯಾಂಗವಾರು ಮುಂದೆ ಹೇಳುವ ಸುಚಿತ್ತಾದಿ ಭಾವಾಂತ್ಯವಹ ಜ್ಞಾನಾಂಗವಾರು. ಈ ಉಭಯಾಂಗವು ಲಿಂಗಸಂಗದಿಂದ ಲಿಂಗಕ್ಕೆ ಅಂಗಕ್ಕೆ ಆಶ್ರಯಸ್ಥಾನನಾಗಿ ನಿಂದ ನಿರುಪಮ ಮಹಿಮ ಶರಣ ತಾನೆ ಅಂಗಲಿಂಗ ಪ್ರಾಣಲಿಂಗ ಸಂಬಂಧಿಯೆನಿಸಿಕೊಂಬನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪವಾಗಿಹ ಮೂರ್ತಿಬ್ರಹ್ಮದಲ್ಲಿ ಬ್ರಹ್ಮ, ಪೃಥ್ವಿ, ಗಂಧ, ಚಿತ್ತ, ಘ್ರಾಣ, ಗುದವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ : ``ಧಾತಾ ಧಾತ್ರೀ ಚ ಗಂಧಶ್ಚ ಚಿತ್ತ ಂ ಘ್ರಾಣಗುದಸ್ತಥಾ | ಏತೇಷಾಂ ಮಿಶ್ರಿತಂ ಷಟ್ಕಂ ಮೂರ್ತಿಬ್ರಹ್ಮೇತಿ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎನ್ನ ಘ್ರಾಣ ಗಂಧವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ಜಿಹ್ವೆ ರುಚಿಯ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ನೇತ್ರ ರೂಪವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ತ್ವಕ್ಕುಸ್ಪರ್ಶನವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ಶ್ರೋತ್ರ ಶಬ್ದವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಇದು ಕಾರಣ ಅಖಂಡೇಶ್ವರಾ, ನಾ ನಿಮಗರಿದು ಕೊಡಬೇಕೆಂಬ ಖಂಡಿತಭಾವವು ಅಖಂಡಿತವಾಯಿತ್ತಯ್ಯಾ.
--------------
ಷಣ್ಮುಖಸ್ವಾಮಿ
ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ, ಶಬ್ದ ಸ್ಪರ್ಶ ರೂಪು ರಸ ಗಂಧ, ಆಕಾಶ, ವಾಯು, ಅಗ್ನಿ, ಸಲಿಲ, ಭೂಮಿ. ಈ ಸಕಲ ಕಾರಣ ಪ್ರಾಪ್ಯಸ್ವರೂಪನಾಗಿ, ``ಸಾಮವೇದಾಶ್ರಯೋ ಪುರುಷಃ ``ಸ್ವಯಂಜ್ಯೋತಿರಸ್ಮಿನ್ ಮಾನುಷತ್ವಂ ಉಪೇತ್ಯ ಎಂಬ ಶ್ರುತಿಗೆ ಅಪ್ರತಿಮೇಯನಾಗಿ ವಿೂರಿದ, ನಿತ್ಯ ಶುದ್ಧ ಪ್ರಬುದ್ಧ ಬೋಧ ವೇದ್ಯ ಸಂವಿದ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎನ್ನ ಘ್ರಾಣ ಶುದ್ಧವಾಯಿತ್ತಯ್ಯಾ, ಏಕೋರಾಮಿತಂದೆಗಳ ಧರ್ಮದಿಂದ. ಎನ್ನ ಜಿಹ್ವೆ ಶುದ್ಧವಾಯಿತ್ತಯ್ಯಾ, ಪಂಡಿತಾರಾಧ್ಯರ ಧರ್ಮದಿಂದ. ಎನ್ನ ನೇತ್ರ ಶುದ್ಧವಾಯಿತ್ತಯ್ಯಾ. ರೇವಣಸಿದ್ಧೇಶ್ವರದೇವರ ಧರ್ಮದಿಂದ. ಎನ್ನ ತ್ವಕ್ಕು ಶುದ್ಧವಾಯಿತ್ತಯ್ಯಾ, ಸಿದ್ಧರಾಮೇಶ್ವರದೇವರ ಧರ್ಮದಿಂದ. ಎನ್ನ ಹೃದಯ ಶುದ್ಧವಾಯಿತ್ತಯ್ಯಾ. ಮರುಳಸಿದ್ಧೇಶ್ವರದೇವರ ಧರ್ಮದಿಂದ ಸಕಳೇಶ ಮಾದಿರಾಜಯ್ಯಗಳ ಧರ್ಮದಿಂದ. ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾ, ತೆಲುಗುಜೊಮ್ಮಯ್ಯಗಳ ಧರ್ಮದಿಂದ. ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾ, ಕೇಶಿರಾಜಯ್ಯಗಳ ಧರ್ಮದಿಂದ. ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ, ಬಸವಣ್ಣ, ಚನ್ನಬಸವಣ್ಣ, ಪ್ರಭು, ವೀರಮಡಿವಾಳಯ್ಯಗಳ ಧರ್ಮದಿಂದ. ಐಘಟದೂರ ರಾಮೇಶ್ವರಾ, ನಿಮ್ಮ ಶರಣರ ಧರ್ಮದಿಂದ ನಾನು ಶುದ್ಧನಾದೆನಯ್ಯಾ.
--------------
ಮೆರೆಮಿಂಡಯ್ಯ
ಮೈ ಶೀತೋಷ್ಣವ ಮರೆದು, ಘ್ರಾಣ ಗಂಧವ ಮರೆದು, ನಯನ ನೋಟವ ಮರೆದು, ಕಿವಿ ಶಬ್ದವ ಮರೆದು, ನಾಲಗೆ ರುಚಿಯ ಮರೆದು, ಅಂಡಜ ಜರಾಯುಜನೆನಿಸದೆ- ಕೂಡಲಚೆನ್ನಸಂಗಯ್ಯನ ಉಪನಯನವಾದ ಶರಣನು.
--------------
ಚನ್ನಬಸವಣ್ಣ
ಅನಾದಿಕುಳ ಗುರುಸನುಮತವಾದ ಪ್ರಸಾದಿ, ಲಿಂಗ ಜಂಗಮಸನುಮತವಾದ ಪ್ರಸಾದಿ, ಆಪ್ಯಾಯನ ಅವಧಾನ ಅಂಗವಿಸದೆ ನಿಂದು ಸನುಮತವಾದ ಪ್ರಸಾದಿ, ನೇತ್ರ ಶ್ರೋತ್ರ ಘ್ರಾಣ ಮನ ಬುದ್ಧಿ ಚಿತ್ತಹಂಕಾರ ಸನುಮತವಾದ ಪ್ರಸಾದಿ, ರೂಪ ರಸ ಗಂಧ ಶಬ್ದ ಸ್ಪರ್ಶ ಪಂಚೇಂದ್ರಿಯ ವಿಷಯ ಸನುಮತವಾದ ಪ್ರಸಾದಿ, ದೇಹಾದಿಗುಣವನತಿಗಳೆದು ಉದರಾಗ್ನಿ ತಲೆದೋರದೆ ಸಕಲಸನುಮತವಾದ ಪ್ರಸಾದಿ. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ, ಸಮಾಪ್ತವಾಗಿ ಲಿಂಗಲೀಯವಾದ ಪ್ರಸಾದಿ.
--------------
ಚನ್ನಬಸವಣ್ಣ
ಎನ್ನ ನೇತ್ರ ಪ್ರಸಾದವಾಯಿತ್ತಯ್ಯಾ. ಎನ್ನ ಶ್ರೋತ್ರ ಪ್ರಸಾದವಾಯಿತ್ತಯ್ಯಾ. ಎನ್ನ ಘ್ರಾಣ ಪ್ರಸಾದವಾಯಿತ್ತಯ್ಯಾ. ಎನ್ನ ಜಿಹ್ವೆ ಪ್ರಸಾದವಾಯಿತ್ತಯ್ಯಾ. ಎನ್ನ ತ್ವಕ್ಕು ಪ್ರಸಾದವಾಯಿತ್ತಯ್ಯಾ. ಎನ್ನ ತನು ಪ್ರಸಾದವಾಯಿತ್ತಯ್ಯಾ. ಎನ್ನ ಮನ ಪ್ರಸಾದವಾಯಿತ್ತಯ್ಯಾ. ಎನ್ನ ಪ್ರಾಣ ಪ್ರಸಾದವಾಯಿತ್ತಯ್ಯಾ. ಎನ್ನ ಭಾವ ಪ್ರಸಾದವಾಯಿತ್ತಯ್ಯಾ. ಎನ್ನ ಜೀವ ಪ್ರಸಾದವಾಯಿತ್ತಯ್ಯಾ. ಎನ್ನ ಸಕಲಕರಣೇಂದ್ರಿಯಂಗಳೆಲ್ಲ ಪ್ರಸಾದವಾಗಿ, ಅಖಂಡೇಶ್ವರಾ, ನಿಮ್ಮ ಮಹಾಪ್ರಸಾದದ ಬೆಳಗಿನೊಳಗೆ ಓಲಾಡುತ್ತಿದ್ದೆನಯ್ಯಾ.
--------------
ಷಣ್ಮುಖಸ್ವಾಮಿ
ಸಕಲಮೂರ್ತಿಯಾಗಿ ಇಷ್ಟಲಿಂಗವಾಯಿತ್ತು. ನಿಷ್ಕಲಮೂರ್ತಿಯಾಗಿ ಪ್ರಾಣಲಿಂಗವಾಯಿತ್ತು. ಕೇವಲ ನಿರವಯಮೂರ್ತಿಯಾಗಿ ಭಾವಲಿಂಗವಾಯಿತ್ತು. ಸಕಲಮೂರ್ತಿಗೆ ಕ್ರಿಯೆ, ನಿಷ್ಕಲಮೂರ್ತಿಗೆ ಜ್ಞಾನ, ಕೇವಲ ನಿರವಯಮೂರ್ತಿಗೆ ಆನಂದ, ಸ್ಥೂಲವೇ ಕಾಯ, ಸೂಕ್ಷ್ಮವೇ ಪ್ರಾಣ, ಕಾರಣವೇ ವಸ್ತು. ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯವೆಂಬವು ಸೂಕ್ಷ್ಮದ ಷಡ್ವಿಧಲಿಂಗವು. ಇವಕ್ಕೆ `ಓಂ ನಮಃಶಿವಾಯ' ಎಂಬುದೇ ತೃಪ್ತಿ. ಸಂತೋಷವೇ ಕಾರಣ, ಮಹಾಕಾರಣವೇ ಪರಿಣಾಮ. ತೂರ್ಯಾತೀತವಾಗಿ ಸರ್ವಕೇಳಿಕೆಯಂ ಕೇಳಿ ನಿಜಾನಂದವಾಗಿಹುದು. ವಿರಾಟವೇ ಸುನಾದವಾಗಿ ಹೊರಬಿದ್ದು ನುಡಿದು ಭೇರಿನಾದದಂತೆ ಆಕಾಶಧ್ವನಿಯಂತೆ ತನಗೆ ತಾನೇ ಕೇಳುವುದು. ಹಿರಣ್ಯಗರ್ಭಬಿಂದುವಿನ ಮನೆಯಲ್ಲಿ ಗಾಳಿಪಟಕ್ಕೆ ಬೇರಬಿರಿಕೆಯ ಕಟ್ಟಿ ನುಡಿಸುವ ತೆರದಂತೆ ತೇಜವಾಗಿ ಶಂಖದ ಧ್ವನಿಯಂತೆ ತೋರುತಿರ್ಪ ಸುನಾದಕ್ಕೆ ಎರಡಂಗುಲದ ಮೇಲೆ ತೇಜವಿಹುದು. ಅದು ತುಂಬಿದ ಹುಣ್ಣಿಮೆಯ ಬೆಳದಿಂಗಳಂತೆ, ಚಂದ್ರಜ್ಯೋತಿಯ ಪ್ರಭೆಯಂತೆ, ಹೂಬಿಸಿಲಿನಂತೆ ತೋರುತಿರ್ಪುದು. ಕಳೆಯ ಮನೆಯಲ್ಲಿ ಎರಡಂಗುಲ ಪ್ರಮಾಣ. ಮೂಲಪ್ರಕೃತಿ ಮೂಗಿನಮೇಲೆ ಭ್ರೂಮಧ್ಯ ಪ್ರಣವದಲ್ಲಿ ಓಂಕಾರಧ್ವನಿಯ ಝೇಂಕಾರದಂತೆ, ಘಂಟೆಯ ಬಾರಿಸಿದಂತೆ, ತಟತಟನೆ ಹಾರಿ ಅದು ಭ್ರೂಮಧ್ಯಸ್ಥಾನದಲ್ಲಿ ತೋರುವುದು. ನಾದವೇ ಶಬ್ದ, ನಿಃಶಬ್ದವೇ ಬಿಂದುಮಯ. ನಾದದೊಳಗಿರ್ದ ನಾದವೇ ಓಂಕಾರ. ಚಿಜ್ಜ್ಯೋತಿಯ ಪ್ರಕಾಶ ಭ್ರೂಮಧ್ಯದ ಪಣೆಯ ಮೇಲೆ ಎರಡಂಗುಲದಲ್ಲಿ ಕಾಣಿಸುತ್ತಿಹುದು. ಅದು ಮನದಿಂದೆ ಕಂಡಿತೋ ಕಣ್ಣಿನಿಂದ ಕಂಡಿತೋ ಎಂದಡೆ, ನೆನಹು ಎಂಬ ಅಂತಃಕರಣ ಓಂ ನಮಃಶಿವಾಯ ಎಂಬ ಪ್ರಣವಜ್ಯೋತಿಯ ತೋರಿತ್ತು. ಚಿತ್ತದ ತೋರಿಕೆ ಅರವತ್ತಾರುಕೋಟಿ ಪ್ರಣವಜ್ಯೋತಿಯ ಕಿರಣದಲ್ಲಿ ತೇರಿನ ಬದಿಯ ಬಿರಿಸಿನೋಪಾದಿಯ ನೆನಹು ಮಾತ್ರಕ್ಕೆ ತೋರುತ್ತಿಹುದು. ಹೊರದೃಷ್ಟಿಯ ಒಳಗಿಟ್ಟು, ಒಳದೃಷ್ಟಿಯ ಹೊರಗಿಟ್ಟು ಪರಿಪೂರ್ಣವಾಗಲು, ಒಳಹೊರಗೆ ನೋಡುವ ಶಿವಶರಣರ ಮನ ಭಾವಕ್ಕೆ ಆನಂದವೇ ತೋರುತ್ತಿಹುದು. ದಿನಕರನ ಕಾಂತಿ, ಮಧ್ಯಾಹ್ನದ ಬಿಸಿಲು, ಅಂತರಂಗದ ಛಾಯೆಯಂತೆ, ನಿರ್ಮಲವಾದ ದರ್ಪಣದ ಪ್ರತಿಬಿಂಬದಂತೆ, ತನ್ನ ರೂಪಂಗಳ ತಾನೆ ನೋಡಿದಾತನು ಜೀವನ್ಮುಕ್ತನು. ಆತ ಭವದಬಳ್ಳಿಯ ಹರಿದು ನಿತ್ಯಾನಂದ ನಿರ್ಮಳ ನಿರಾವರಣ ನಿಜ ಚಿನ್ಮಯನಾಗಿಹನು. ಇನ್ನು `ಓಂ ನಮಃಶಿವಾಯ' ಎಂಬ ಊಧ್ರ್ವಪ್ರಣವ. ಅಳ್ಳನೆತ್ತಿಯ ಸ್ಥಾನದಲ್ಲಿ ಅರುಹಿನ ಮನೆಯುಂಟು. ಅದಕ್ಕೆ ತಟಿಮಂತ್ರ. ಅಂತರಂಗದ ಬಾಯಲ್ಲಿ ಎಡಬಲವು ಎರಡು ಕರ್ಣದ್ವಾರಂಗಳಲ್ಲಿ ನುಡಿಯ ಕೇಳಿದಡೆ ಸುನಾದವಾಯಿತ್ತು. ಅದು ದಶನಾದಂಗಳಿಂದೆ ಶರಧಿ ನಿರ್ಝರ ಮೇಘ ಮುರಜ ಭೇರಿ ಕಹಳೆ ಘಂಟೆ ಶಂಖ ವೀಣೆ ಭ್ರಮರನಾದಂಗಳೆಂಬ ದಶನಾದಂಗಳನು ಗುರುಮುಖದಿಂದರಿತು ಹಗಲಿರುಳು ಆ ದಶನಾದಂಗಳೊಳಗಾದ ಸುನಾದವನು ಎಡೆದೆರಹಿಲ್ಲದೆ ಲಾಲಿಸಿ ಕೇಳುವುದು ಶಿವಯೋಗೀಶ್ವರರು. ಅದು ಪ್ರಸಾದಲಿಂಗಸ್ಥಲ, ವಿಶುದ್ಧಿಯ ಮನೆ ; ಶರಣಸ್ಥಲ. ಆ ಸ್ಥಲದಲ್ಲಿ ನಾದವ ಕೇಳಿದವರಿಗೆ ಜಾಗ್ರ ಸ್ವಪ್ನ ಸುಷುಪ್ತಿಗಳೆಂಬ ಮೂರವಸ್ಥೆಗಳು, ತನುತ್ರಯಂಗಳು ತೂರ್ಯದಲ್ಲಿ ಹರಿದುಹೋಗುವವು. ಸುನಾದದಲ್ಲಿ ಮನಸ್ಸಿಟ್ಟಡೆ ಓಂ ನಮಃಶಿವಾಯ ಎಂಬ ಪ್ರಣವನಾದವ ಕೇಳಿದವರಿಗೆ ಸ್ವಪ್ನವು ಎಂದಿಗೂ ತೋರದು. ಇರುಹೆ ಸುಳಿದಡೆ ಎಚ್ಚರಿಕೆ, ದಿಗಿಲುಭುಗಿಲೆಂದಡೆ ನೀನಾರೆಲಾ ಎಂದು ಮಾತನಾಡಿಸಿಬಿಡುವನು. ಆ ಪ್ರಣವಘೋಷ ಸತ್ತೆನೆಂಬಂತೆ ದಿವಸ ಹನ್ನೆರಡು ತಾಸಿನೊಳಗೆ ತನುವ ಬಿಡುವ ಸಮಯದಲ್ಲಿ, ಆ ಘೋಷ ನಿರ್ಘೋಷವಾಗಿ ನಾದ ನುಡಿಯದು. ಅದು ಲಕ್ಷವಿಟ್ಟು ನೋಡಿದಡೆ ತೋರುವುದು. ಅಂಗುಲ ಪ್ರಮಾಣವಾಗಿ ವಸ್ತುವು ಅಂಗುಷ್ಟಕ್ಕೆ ಬರುವುದು. ವೃಕ್ಷವನೇರಿದ ಸರ್ಪನಂತೆ ಬ್ರಹ್ಮರಂಧ್ರದ ಕೊನೆಗೇರುವುದು. ಹೆದ್ದುಂಬಿಯ ಕೊಳವಿಯೋಪಾದಿಯಲ್ಲಿ ವಸ್ತುವು ಅಳ್ಳಿನೆತ್ತಿಯ ಸ್ಥಾನದಲ್ಲಿ ಏರಿ ಹೋಗುವುದು. ಈ ಮನೆಯ ಶಿವಶರಣ ಬಲ್ಲ. ಇದು ಹನ್ನೆರಡು ತಾಸು ಪುರಸತ್ತಿಗೆಯ ಹೇಳಿದ ಅರುಹು. ಇಂತಪ್ಪ ವಸ್ತುವಿನ ನಿಲುಕಡೆಯ ಬಲ್ಲ ಶರಣನು. ತನ್ನವಸಾನಕಾಲದ ಎಚ್ಚರಿಕೆಯನರಿದು, ಗೋವು ಮಲಗುವಷ್ಟು ಧರಣಿಯ ಸಾರಣಿಯ ಮಾಡುವುದು. ಗೋಮಯ ಗೋಮೂತ್ರ ಗೋಕ್ಷೀರ ಗೋದಧಿ ಗೋಘೃತ ಗೋರೋಚನ ಎಂಬ ಷಡುಸಮ್ಮಾರ್ಜನೆಯ ಮಾಡುವುದು. ಶಿವಜಂಗಮದ ಧೂಳಪಾದಾರ್ಚನೆಯ ಉದಕಮಂ ನೀಡಿ ಸಮ್ಮಾರ್ಜನೆಯ ಮಾಡುವುದು. ರಂಗವಲ್ಲಿಯ ತುಂಬುವುದು, ಭಸ್ಮವ ತಳೆವುದು. ಪಾದೋದಕ ಪ್ರಸಾದಮಂ ಸಲಿಸಿ, ಶಿವಗಣಂಗಳಿಗೆ ವಂದನೆಯ ಮಾಡಿ, ಆ ಸಮ್ಮಾರ್ಜನೆಯ ಮಾಡಿದ ಗದ್ಗುಗೆಯ ಮೇಲೆ ಮುಹೂರ್ತವ ಮಾಡಿ, `ಓಂ ನಮಃಶಿವಾಯ' ಎಂಬ ಪ್ರಣವಸ್ಮರಣೆಯ ಮಾಡುವುದು. ಹಸ್ತದಲ್ಲಿ ಇಷ್ಟಲಿಂಗವ ಹಿಡಿದುಕೊಂಡು ಇರವಂತಿಗೆ ಸೇವಂತಿಗೆ ಮೊಲ್ಲೆ ಮಲ್ಲಿಗೆ ಜಾಜಿ ಕರವೀರ ಸುರಹೊನ್ನೆ ಸಂಪಿಗೆ ಮರುಗ ಪಚ್ಚೆ ದವನ ಬಿಲ್ವಪತ್ರೆ ಮೊದಲಾದ ಸಮಸ್ತ ಪುಷ್ಪ ಪತ್ರೆಗಳ ಧರಿಸಿ, ಆ ಶಿವಲಿಂಗವನು ಮನವೊಲಿದು ಕಂಗಳ ತುಂಬಿ ನೋಡುತ್ತ, ದೇವಭಕ್ತರು ಬಂದಡೆ ಶರಣಾರ್ಥಿ ಎಂದು, ಮಜ್ಜನವ ನೀಡಿಸಿ, ವಿಭೂತಿಯ ಧರಿಸಿ, ಪುಷ್ಪಪತ್ರೆಗಳ ಧರಿಸಿ ಎಂದು ಅವರ ಪಾದವಿಡಿದು, ಶರಣಾರ್ಥಿ ಸ್ವಾಮಿಗಳಿಗೆ ಎಂದು ಹೇಳಿ, ಶಿವಾರ್ಪಣವ ಮಾಡಿ ಎಂದು ಬಿನ್ನಹವ ಮಾಡುವುದು. ಮದುವೆ ಮಾಂಗಲ್ಯ ಅರ್ತಿ ಉತ್ಸಾಹ ಶಿಶುವಿನ ಹೆಸರಿಡುವ ಹಾಗೆ ಹರುಷ ಪರುಷ ಧೈರ್ಯವೇ ಭೂಷಣವಾಗಿ ನಿರೋಧಂಗಳ ಮಾಡದೆ ``ಓಂ ನಮಃಶಿವಾಯ' ಎಂಬ ಮಂತ್ರ ಭೋರ್ಗರೆಯೆ ನಿರ್ಮಲ ನೈಷಿ*ಕದಿಂದೆ ಶಿವಜಂಗಮದ ಪಾದವನು ಮಸ್ತಕದ ಮೇಲೆ ಇಡಿಸುವುದು. ಹಿತವಂತರಾದವರು ವೀರಶೈವ ಪರಮವಚನಂಗಳಂ ಕೇಳಿಸುವುದು. ಎಡಬಲದಲ್ಲಿರ್ದ ಸಕಲ ಭಕ್ತರು ಮಹೇಶ್ವರರು `ಓಂ ನಮಃಶಿವಾಯ' ಎಂಬ ಶಿವಮಂತ್ರವನ್ನು ಆ ಶರಣನ ಕರ್ಣಂಗಳಲ್ಲಿ ಉಚ್ಚರಿಸುವುದು. ಈ ಹಡಗದ ಹಗ್ಗವ ಮತ್ತೊಂದು ಹಡಗಕ್ಕೆ ಹಾಕಿ ಬಿಗಿದಡೆ, ಹಡಗಕ್ಕೆ ಹಡಗ ಕೂಡಿ, ಸಮುದ್ರದ ತೆರೆಯೋಪಾದಿಯಲ್ಲಿ ಹಡಗವ ಬಿಟ್ಟು ಪ್ರತಿಹಡಗದೊಳಗೆ ಮೂರ್ತವ ಮಾಡಿದಂತೆ, ಮಂತ್ರಮಂತ್ರವು ಸಂಬಂಧವಾಗಿ, ಉರಿ ಕರ್ಪುರ ಕೊಂಡಂತಾಯಿತ್ತು ಶರಣನ ದೇಹಪ್ರಾಣವು. ಇದು ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ಅತಿ ರಹಸ್ಯ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಘ್ರಾಣ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ಜಿಹ್ವೆ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ನೇತ್ರ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ತ್ವಕ್ಕು ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ಶ್ರೋತ್ರ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ಮನ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ಇಂತು ಸರ್ವೇಂದ್ರಿಯಂಗಳು ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮತ್ತೆಯು ಪೃಥ್ವ ್ಯಪ್ತೇಜೋ ವಾಯ್ವಾಕಾಶಾತ್ಮಂಗಳೆ ತತ್ವಂ. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬಿವೆ ಅಂಗಂ. ಸುಚಿತ್ತ ಸುಬುದ್ದಿ ನಿರಂಹಕಾರ ಸುಮನ ಸುಜ್ಞಾನ ಸದ್ಭಾವಂಗಳೆ ಹಸ್ತಂ. ಕರ್ಮಸಾದಾಖ್ಯ ಕರ್ತೃಸಾದಾಖ್ಯ ಮೂರ್ತಿಸಾದಾಖ್ಯ ಶಿವಸಾದಾಖ್ಯ ಮಹಾಸಾದಾಖ್ಯಂಗಳೆಂಬಿವೆ ಸಾದಾಖ್ಯಂ. ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿಯಾದಿಶಕ್ತಿ ಪರಶಕ್ತಿ ಚಿಚ್ಛಕ್ತಿಗಳೆಂಬಿವೆ ಶಕ್ತಿ. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗಂಗಳೆಂಬಿವೆ ಲಿಂಗ. ನಿವೃತ್ತಿ ಪ್ರತಿಷೆ* ವಿದ್ಯೆ ಶಾಂತಿ ಶಾಂತ್ಯಾತೀತೆ ಶಾಂತ್ಯಾತೀತೋತ್ತರೆಗಳೆಂಬಿವೆ ಕಲೆ. ಸದ್ಯಾದಿ ಪರ್ಯಾಯಮಾದ ಘ್ರಾಣಂ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯವೆಂಬಿವೆ ಮುಖಂ. ಗಂಧ ರಸ ರೂಪ ಸ್ಪರ್ಶ ತೃಪ್ತಿಗಳೆಂಬಿವೆ ದ್ರವ್ಯಂ. ಶ್ರದ್ಧೆ ನಿಷೆ* ಸಾವಧಾನಮನುಭಾವಮಾನಂದ ಸಮರಸವೆಂಬಿವೆ ಭಕ್ತಿ. ನಕಾರ ಮಃಕಾರ ಶಿಕಾರ[ವಾಕಾರ] ಯಕಾರೋಕಾರಂಗಳೆಂಬಿವೆ ಮಂತ್ರ ಮಿಂತೇಕಾದಶ ಸಕೀಲಮಿದೆಲ್ಲಂ ತ್ವದೀಯ ವಿಮರ್ಶನ ಸ್ವರೂಪಮಯ್ಯಾ, ಪರಮ ಶಿವಲಿಂಗ ಪರೋಕ್ಷಜ್ಞಾನತಾಲಿಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ನಡೆವ ನುಡಿವ ಚೈತನ್ಯವುಳ್ಳನಕ್ಕ ಒಡಲ ಗುಣಂಗಳಾರಿಗೂ ಕಾಣವು. ನೋಡುವ ನಯನ, ಕೇಳುವ ಶ್ರೋತ್ರ, ವಾಸಿಸುವ ಘ್ರಾಣ, [ಮುಟ್ಟವ ತ್ವಕ್ಕು, ರುಚಿಸುವ ಚಿಹ್ವೆ] ತಾಗಿತ್ತೆನಬೇಡ. ನೋಡುತ್ತ [ಕೇಳುತ್ತ ವಾಸಿಸುತ್ತ ಮುಟ್ಟುತ್ತ, ರುಚಿಸುತ್ತ] ಲಿಂಗಾರ್ಪಿತವಮಾಡಿ ಲಿಂಗಭೋಗೋಪಭೋಗಿಯಾದ ಪ್ರಸಾದಿಗಳಿಗೆ ಸರ್ವಾಂಗಶುದ್ಧವೆಂಬುದಿದೆಯಯ್ಯಾ. ಕಾಯತ್ರಯಂಗಳ ಜೀವತ್ರಯಂಗಳ ಭಾವತ್ರಯಂಗಳನೊಂದು ಮಾಡಿ; ಸುಖ-ದುಃಖ, ಗುಣ-ನಿರ್ಗುಣಂಗಳೆಂಬ ಉಭಯವ, ಲಿಂಗದಲ್ಲಿ ಏಕವ ಮಾಡಿ; ಅಹುದು ಅಲ್ಲ, ಬೇಕುಬೇಡೆಂಬ ಸಂಶಯವ ಕಳೆದು; ಕೂಡಲಚೆನ್ನಸಂಗನ ಆದಿಯ ಪುರಾತನರು ಮಾಡಿದ ಪಥವಿದು.
--------------
ಚನ್ನಬಸವಣ್ಣ
ಇನ್ನಷ್ಟು ... -->