ಅಥವಾ

ಒಟ್ಟು 32 ಕಡೆಗಳಲ್ಲಿ , 19 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಲವು ಕಡೆಗೆ ಹರಿವ ಮನವ ಚಿತ್ತದಲ್ಲಿ ನಿಲಿಸಿ, ಆ ಚಿತ್ತವ ನಿಶ್ಚಿಂತದಲ್ಲಿ ಕರಗಿಸಿ, ನಿರಾಕುಳಲಿಂಗವನಾಚರಿಸುವ ಸ್ವಯಜ್ಞಾನಿಗೆ ಓಂ ನಮೋ ಓಂ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗಡಿಗೆ ಗುಡವನು ನುಂಗಿತ್ತು ಅಡಿಯಲ್ಲಿದ್ದ ಕುಡಿಕೆ ಆ ಉಭಯವ ನುಂಗಿತ್ತು. ನುಂಗಿಹೆನೆಂದ ಚಿತ್ತವ ಸಂದೇಹ ನುಂಗಿತ್ತು. ಈ ಉಭಯದ ಸಂದೇಹದ ಸಂಚ ಹಿಂಗಿಯಲ್ಲದೆ ಲಿಂಗವಿಲ್ಲ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಹಾಸನಿಕ್ಕುವಾತನ ಕೈಯ ತೂತಿನ ಕೊಳಪೆಯ ನೂಲು ನುಂಗಿತ್ತು. ಕಡ್ಡಿಯ ಸುತ್ತುವ ಕೂಸ ರಾಟಿಯ ಕೈ ನುಂಗಿತ್ತು. ಉಂಕೆಯ ಮಾಡುವಾತನ ಕೈಯ ಕುಂಚಿಗೆಯ ತುಂತುರು ನುಂಗಿತ್ತು. ನೆಯ್ವ ಅಣ್ಣನ ಕೈಯ ನಳಿಗೆ ನುಂಗಿತ್ತು. ಹಾಸಿನ ಕಡ್ಡಿಯ ಉಂಕೆಯ ನೆಯ್ವಾತನ ಬುದ್ಧಿಯ ಚಿತ್ತವ ಏನೆಂದರಿಯದ ಕೂಸು ನುಂಗಿತ್ತು. ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯಾನುಭಾವಿಯಾದ ಶರಣ.
--------------
ಗುಪ್ತ ಮಂಚಣ್ಣ
ಮನದಲ್ಲಿ ಹುಟ್ಟಿದ ಅರಿವು ಮಾಡುವ ಮಾಟದಲ್ಲಿ ಕಾಣಬಹುದು, ಶರಣರ ಸಂಗಕ್ಕೆಳಸಿದ ಚಿತ್ತವ ಅನುಭಾವದಲ್ಲಿ ಕಾಣಬಹುದು. ಒಳಹೊರಗೆ ತೆರಹಿಲ್ಲದ ಕೂಟ ನಿನ್ನದು. ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ ನಿನ್ನ ಪಾದಕ್ಕೆ ನಮೋ ನಮೋ ಎಂಬೆನು.
--------------
ಆಯ್ದಕ್ಕಿ ಮಾರಯ್ಯ
ಭಕ್ತನಂತೆ ತ್ರಿವಿಧ ಮಲಕ್ಕಿಕ್ಕುವನೆ ಚಿತ್ತವ ? ವಿರಕ್ತನಂತೆ ಸರ್ವವ್ಯಾಪಾರಕ್ಕೆ ಮೊತ್ತದ ಇಂದ್ರಿಯ ವರ್ಗದಲ್ಲಿ , ಸುಚಿತ್ತವ ಬಿಟ್ಟು ಮತ್ತೆ ವಿರಕ್ತನಪ್ಪನೆ ? ಈ ಉಭಯದ ಭಾವವ ನಿಶ್ಚೆ ೈಸಿದಲ್ಲಿ , ಕುಸುಮ ಗಂಧದಂತೆ, ಮುಕುರ ಬಿಂಬದಂತೆ, ಉರಿ ಕಪುರದಿರವಿನ ತೆರದಂತೆ, ನಿಃಕಳಂಕ ಕೂಡಲಚೆನ್ನ ಸಂಗಮದೇವ ತಾನಾದ ಶರಣ.
--------------
ಹಡಪದ ರೇಚಣ್ಣ
ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ. ಆ ಸರೋವರದ ಮೇಲೆ ಒಂದು ದಳದ ಕಮಲವ ಕಂಡೆ, ಆ ಕಮಲವರಳಿ ವಿಕಸಿತವಾಗಿತ್ತು, ಪರಿಮಳವೆಸಗಿತ್ತು. ಆ ಪರಿಮಳದ ಬೆಂಬಳಿವಿಡಿದು ಹೋಗುತ್ತಿರಲು, ಮುಂದೆ ಒಂದು ದಾರಿಯ ಕಂಡು, ಆ ಮುಂದಳ ದಾರಿಯಲ್ಲಿ ಹೋದವರೆಲ್ಲರು ನಿಂದೆ ಕುಂದುಗಳಿಗೊಳಗಾಗಿ ಸಂದುಹೋದರು. ಇದ ಕಂಡು ನಾ ಹೆದರಿಕೊಂಡು ಎಚ್ಚತ್ತು, ಚಿತ್ತವ ಸುಯಿದಾನವ ಮಾಡಿ, ಹಿತ್ತಲ ಬಾಗಿಲ ಕದವ ತೆಗೆದು ನೋಡಿದಡೆ ಬಟ್ಟಬಯಲಾಗಿದ್ದಿತ್ತು. ಆ ಬಟ್ಟಬಯಲೊಳಗೆ ಮಹಾಬೆಳಗನೆ ನೋಡಿ ನಾ ಎತ್ತಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು. ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ. ಜನನವಾದವರಿಗೆ ಮರಣ ತಪ್ಪದು. ಅದೇನು ಕಾರಣವೆಂದಡೆ ಮರವೆ ಮರವೆಗೆ ಮುಂದುಮಾಡಿತ್ತು; ಕರ್ಮಕ್ಕೆ ಗುರಿಮಾಡಿತ್ತು; ಕತ್ತಲೆಯಲ್ಲಿ ಮುಳುಗಿಸಿತ್ತು. ಕಣ್ಣು ಕಾಣದೆ ಅಂಧಕನಂತೆ ತಿರುಗುವುದ ನೋಡಿ, ನಾ ಹೆದರಿಕೊಂಡು ಎಚ್ಚತ್ತು ಚಿತ್ತವ ಸುಯಿದಾನವ ಮಾಡಿ, ನಿಶ್ಚಿಂತವಾಗಿ ನಿಜವ ನೆಮ್ಮಿ ಅರುಹ ಕಂಡೆ. ಅರುಹುವಿಡಿದು ಆಚಾರವ ಕಂಡೆ; ಆಚಾರವಿಡಿದು ಗುರುವ ಕಂಡೆ; ಗುರುವಿಡಿದು ಲಿಂಗವ ಕಂಡೆ; ಲಿಂಗವಿಡಿದು ಜಂಗಮವ ಕಂಡೆ; ಜಂಗಮವಿಡಿದು ಪಾದೋದಕ ಪ್ರಸಾದವ ಕಂಡೆ. ಪಾದೋದಕ ಪ್ರಸಾದವಿಡಿದು ಮಹಾಶರಣನ ಕಂಡೆ. ಆ ಮಹಾಶರಣನ ಪಾದವಿಡಿದು ಎನ್ನ ಕಾಯಗುಣವಳಿಯಿತ್ತು ಕರಣಗುಣ ಸುಟ್ಟಿತ್ತು; ಅಂಗಗುಣ ಅಳಿಯಿತ್ತು ಲಿಂಗಗುಣ ನಿಂದಿತ್ತು; ಭಾವ ಬಯಲಾಯಿತ್ತು ಬಯಕೆ ಸವೆಯಿತ್ತು. ಮಹಾದೇವನಾದ ಶರಣನ ಬರಿಯ ಬೆಳಗಲ್ಲದೆ, ಕತ್ತಲೆ ಕಾಣಬಾರದು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆಧಾರ, ಸ್ವಾಧಿಷ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾಚಕ್ರವೆಂಬ ಷಡಾಧಾರಚಕ್ರವನರಿದು, ಏರಿ ಏರಿ ಇಳಿದು ಆದಿಯ ನೋಡಿಕೊಂಡು, ಆದಿ ಅನಾದಿ ಎಂಬ ಭೇದವ ನೋಡಿ, ಶೋಧಿಸಿ, ಸಪ್ತಧಾತುವಿನ ನೆಲೆಯ ಕಂಡು, ಮನ ಬುದ್ಧಿ ಚಿತ್ತವ ಏಕಹುರಿಯ ಮಾಡಿ, ಉತ್ಪತ್ತಿ ಸ್ಥಿತಿ ಲಯವೆಂಬ ಕಾಲಮೂಲಾದಿಗಳ ಸುಟ್ಟು, ಧ್ಯಾನದಲ್ಲಿ ನಿಂದು, ಅಂಗ ಲಿಂಗ ಹಸ್ತ ಮುಖ ಅರ್ಪಿತ ಅವಧಾನವೆಂಬ ಷಟ್‍ಸ್ಥಲವ ಮೆಟ್ಟಿನಿಂದು, ಆರರಿಂದ ವಿೂರಿ ತೋರುವ ಬೆಳಗ ಕಂಡು, ನಾನು ಒಳಹೊಕ್ಕು ನೋಡಲಾಗಿ, ಒಳಹೊರಗೆ ತೊಳತೊಳಗಿ ಬೆಳಗುತ್ತ ಇಳೆ ಬ್ರಹ್ಮಾಂಡ ತಾನೆಯಾಗಿರ್ದ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಕಂಡವರಿಗೆ ದೇವರ ಕಟ್ಟುವ ಭಂಡ ಗುರುವಿನ ಇರವು ಜಗಭಂಡೆ ಎದೆಯ ಕೊಟ್ಟು ಕಂಡವರ ಕೈಯಲ್ಲಿ ಎದೆಯ ಹೆಟ್ಟಿಸಿಕೊಂಬಂತೆ. ಅಗಲಿ ಬೀಳುವ ಕಲ್ಲಿಗೆ ಹರಿದು ತಲೆಯನೊಡ್ಡಿಸುವನಂತೆ. ಆ ಬರಿ ಕಾಯನಲ್ಲಿ ಕಟ್ಟಿದ ಇಷ್ಟ ತೊಟ್ಟಿಯ ಹುದುರಿನಲ್ಲಿ ಕಲ್ಲು ಸಿಕ್ಕಿದಂತಾಯಿತ್ತು. ಅದು ಭ್ರಷ್ಟನ ಕೈಯ ಕಟ್ಟುಗೂಳು, ಉತ್ತಮರೊಲ್ಲರು. ಆ ಚಿತ್ತವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ರಸದ ಬಾವಿಯ ಚೆಲ್ಲಿ, ಅಸಿಯ ಮಡುವ ಕಲಕಿ, ಕತ್ತರಿವಾಣಿಯ ಗೊತ್ತ ಕೊಯಿದು, ಕರೋತಿಯ ಕಣ್ಣ ಕುತ್ತಿ, ಅಶ್ವನ ಚಿತ್ತವ ಕಿತ್ತು, ನಿಶ್ಚಯದಲ್ಲಿ ಆಡುವವ ತಾನೆ, ನಿಜವಸ್ತು ಸದಾಶಿವಮೂರ್ತಿಲಿಂಗ
--------------
ಅರಿವಿನ ಮಾರಿತಂದೆ
ಭೇದವ ಭೇದಿಸುವ ಚಿತ್ತವ, ನಾದಬಿಂದು ಕಳೆಗೆ ಅತೀತವಪ್ಪ ಆತ್ಮನ, ಅಡಗಿ ರಂಜಿಸುವ ಠಾವ ಕುರುಹುಗೊಂಡವನ ಯೋಗಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಿಥ್ಯವಲ್ಲದ ಭಕ್ತನ ಭಾವ ನಿತ್ಯ ಜಂಗಮಾರ್ಚನೆಯನೆ ಮುಂದುಗೊಂಡಿಪ್ಪುದು. ಭೃತ್ಯತ್ವವೆಂಬ ರತ್ನಾಂಬರವ ಹೊದ್ದು ಕರ್ತೃಗಳಡಿಯನು ಕೂಡಿದ ಕರದ ಮೇಲೆ ಕುಡಿನೋಟ ಬಿಡದಿಹುದು, ಸತ್ಯ ಪದಾರ್ಥವ ನೀಡಿ ಮಿಕ್ಕುದಕ್ಕೆಳಸಲಲ್ಲಿಟ್ಟಿಹನು ಚಿತ್ತವ. ಒಡೆಯರಿಂಗಿತವನರಿಯಲಿಟ್ಟಿಹನು ಮನವ. ಸಮತೋಪಚಾರ ಸಮರಸ ನುಡಿಯನನುಕೂಲಿಗಿಟ್ಟಿಹನು ಗುರುಚರಲಿಂಗ. ಎನ್ನ ಪ್ರಾಣವೆಂಬುದ ಸುಜ್ಞಾನದಲ್ಲಿಟ್ಟಿಹನು ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹರಿವ ಹಾವಿಂಗೆ ಕಾಲ ಕೊಟ್ಟು, ಉರಿವ ಕಿಚ್ಚಿಗೆ ಕಯ್ಯನಿಕ್ಕಿ, ಅರಿವ ಆಯುಧಕ್ಕೆ ಕೊರಳ ಕೊಟ್ಟು, ಮತ್ತೆಂತೊ, ಅರುಹಿರಿಯರಾದಿರಿರಿ ಮುಂದಕ್ಕಾತನನರಿಯಬಲ್ಲಡೆ, ಹರಿವ ಚಿತ್ತವ ನಿಲಿಸಿ ಕುದಿವ ಆಸೆಯ ಕೆಡಿಸಿ, ಸರ್ವವ್ಯಾಪಾರವೆಂಬ ಗೊತ್ತಿಗೆ ಚಿತ್ತವನಿಕ್ಕದೆ ನಿಶ್ಚಯನಾಗಿ ನಿಂದುದು ಆತನಿರವೆ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಪ್ರಾಣಕೂ ಲಿಂಗಕೂ ಅನುಸಂಧಾನವ ಮಾಡಬೇಕೆಂಬಲ್ಲಿ ಮಣಿಯ [ನಿ]ರಾಳದಲ್ಲಿ ಏರುವ ನೂಲೆ ? ರಾಗಾದಿ ವ್ಯಾಮೋಹ ತಥ್ಯಮಿಥ್ಯ ನಿಶ್ಚಯವಾದಲ್ಲಿಯೆ ವಸ್ತುವಿನಲ್ಲಿ ಅನುಸಂಧಾನವಾದ ಚಿತ್ತವ ಸನ್ನೆ ಸಂಜ್ಞೆಯ ಮಾಡಿ ಗೂಡಿಸಲಿಲ್ಲ. ಆಯದಲ್ಲಿ ಗಾಯವಾದ ಆತ್ಮನ ಸ್ವಸ್ಥದಂತೆ ಅರಿದಲ್ಲಿಯೆ ಮಾಯಾಮಲ ಕರ್ಮ ಬಿಟ್ಟುದು, ವೀರಶೂರ ರಾಮೇಶ್ವರಲಿಂಗವನರಿದುದು.
--------------
ಬಾಲಬೊಮ್ಮಣ್ಣ
ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯದೆ, ಕತ್ತಲೆಯೊಳು ಮುಳುಗಿ, ಕಾಮನ ಬಲೆಯೊಳಗೆ ಸಿಕ್ಕಿದ ಎಗ್ಗ ಮನುಜರಿರಾ, ನೀವು ಕೇಳಿರೋ. ನಿಮ್ಮ ಇರವು ಎಂತೆಂದಡೆ; ಕಾಯವೆಂದಡೆ ಕಳವಳಕ್ಕೊಳಗಾಯಿತ್ತು; ಜೀವವೆಂದಡೆ ಅರುಹು ಮರವೆಗೊಳಗಾಯಿತ್ತು; ಮನವೆಂದಡೆ ಸಚರಾಚರವನೆಲ್ಲವ ಚರಿಸುವುದಕ್ಕೆ ಒಳಗಾಯಿತ್ತು; ಪ್ರಾಣವೆಂದಡೆ ಇವೆಲ್ಲವನು ಆಡಿಸಿ ನೋಡುವುದಕ್ಕೆ ಒಳಗಾಯಿತ್ತು. ಇವರೊಳಗೆ ಬಿದ್ದು ಏಳಲಾರದ ಬುದ್ಧಿಹೀನರಿರಾ, ನೀವು ಕೇಳಿ, ಹೇಳಿಹೆನು. ನಮ್ಮ ಶರಣರು ಜಗದೊಳಗೆ ಹುಟ್ಟಿ ಜಗವನೆ ಮರೆದು, ಎಚ್ಚತ್ತು ಚಿತ್ತವ ಸುಯಿದಾನವ ಮಾಡಿ, ಕಳವಳಕ್ಕೊಳಗಾಗಿದ್ದ ಕಾಯವನೆ ಸರ್ವಾಂಗಲಿಂಗವ ಮಾಡಿದರು. ಅರುಹು ಮರವೆಯೊಳಗಾಗಿದ್ದ ಜೀವನ ಬುದ್ಧಿಯನೆ ಪರಮನ ಬುದ್ಧಿಯ ಮಾಡಿದರು. ಸಚರಾಚರವ ಚರಿಸುವುದಕ್ಕೊಳಗಾಗಿದ್ದ ಮನವನೆ ಅರುಹು ಮಾಡಿದರು. ಆಡಿಸಿ ನೋಡುವುದಕ್ಕೆ ಒಳಗಾಗಿದ್ದ ಪ್ರಾಣವನೆ ಲಿಂಗವಮಾಡಿದರು. ಈ ಸರ್ವಾಂಗವನು ಲಿಂಗವ ಮಾಡಿ ಆ ಲಿಂಗವನು ಕಂಗಳಲ್ಲಿ ಹೆರೆಹಿಂಗದೆ ನೋಡಿ, ಆ ಮಂಗಳದ ಮಹಾಬೆಳಗಿನಲ್ಲಿ ಬಯಲಾದರಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಇನ್ನಷ್ಟು ... -->