ಅಥವಾ

ಒಟ್ಟು 36 ಕಡೆಗಳಲ್ಲಿ , 19 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿತ್ತು ಬೆಳಸು ಸರ್ವಜೀವಕಿವನೊಬ್ಬನೆ. ಮತ್ತೆ ಮರಳಿ ಅನ್ಯದೈವಕ್ಕೆರಗಬೇಕೊ? ಪೃಥ್ವೀರಾಜವನಾಳುವವರು, ಕಾದಿ ಹೋದವರ ಗೋತ್ರವಧೆಯಂ ಮಾಡಿ, ಸತ್ತುಹೋದ ಪಾಂಡವರು. ಜಗಕ್ಕೆ ಬಿತ್ತು ಬೆಳೆಯ ಕೊಟ್ಟನೆಂಬ ನೀತಿಹೀನರ ನುಡಿಯ ಕೇಳಲಾಗದೆಂದ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ನಾಲ್ಕು ವೇದವನೋದಿದನಂತರ ಮನೆಯ ಬೋನವ ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ ನೋಡಲಾಗದು. ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು ತಮ್ಮ ಪಾದುಕದಿಂದ ಪಾಕವ ಮುಚ್ಚಿದರು. ``ಶ್ವಾನೋ ಶ್ರೇಷ*ವೆಂದು ಇಕ್ಕಿದೆನು ಮುಂಡಿಗೆಯ. ಎತ್ತಿರೋ ಜಗದ ಸಂತೆಯ ಸೂಳೆಯ ಮಕ್ಕಳು. ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು ಬೊಗಳುವರ ಮೋರೆಯ ಮೇಲೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮರೆಂಬ ಅಷ್ಟತನುವಿಡಿದು ಜಗಕ್ಕೆ ದೃಷ್ಟನಾಗಿ ತೋರುವ ಕರ್ಮರೂಪವೆಂಬುದು ಶಿವನ ಸ್ಥೂಲತನುವೆನಿಸುವುದು. ಸಕಲಲೋಕಕ್ಕೆ ಆಧಾರಾಧೇಯವಾಗಿ, ಕಮಲಲೋಚನರೊಳಗಾದ ದೇವ ದಾನವ ಮಾನವಮನುಮುನಿಗಳಿಗೊಡೆಯನಾಗಿ, ವರದಾಭಯಕರನೆನಿಸಿ ಮೂರ್ತಿಸಹಿತ ತೋರುವ. ಪ್ರಕೃತಿವಿಡಿದು ನಿತ್ಯವೆನಿಸಿ, ಕೈಲಾಸಪತಿ ಪಶುಪತಿಯಾಗಿ, ನಂದಿನಾಥ ಭೃಂಗಿನಾಥ ಮೊದಲಾದ ಗಣನಾಥರ ಕಣ್ಗೆ ಮಂಗಳವಾಗಿ ತೋರುವ. ಸದಾಶಿವಮೂರ್ತಿಯೆಂಬುದು ಶಿವನ ಸೂಕ್ಷ್ಮತನುವೆನಿಸುವುದು. ಅತ್ಯತಿಷ*ದ್ದಶಾಂಗುಲವೆಂಬ ಶ್ರುತಿತಾರ್ಕಣೆಯಾಗಿ, ಅಕಾಯಚರಿತನಾಗಿ, ಕಾಲಕರ್ಮಕ್ಕಗೋಚರನಾಗಿ, ತೋರಿಯೂ ತೋರದೆ, ಮುಟ್ಟಿಯೂ ಮುಟ್ಟದೆ, ಆಗಿಯೂ ಆಗದೆ, ಇರ್ದೂ ಇಲ್ಲದೆ, ಬೆರಸಿಯೂ ಬೆರಸದೆ, ಆಕಾಶದಂತೆ ಭರಿತನಾಗಿ, ಅವಿನಾಶಿಯಾಗಿ, ಅಭಾವಿಯಾಗಿ, ತತ್ವಮಸಿವಾಕ್ಯಲೀನವಾಗಿ, ಜ್ಞಾತೃ ಜ್ಞಾನ ಜ್ಞೇಯವಿಹೀನವಾಗಿ ತೋರಿದನೆನ್ನ ಸ್ವಾಮಿ. ಶ್ರೀಗುರುಕಾರುಣ್ಯದಿಂದಳವಟ್ಟು, ಜ್ಞಾನಿಯ ಹೃದಯದೊಳಗೆ ದರ್ಪಣದ ಛಾಯೆಯಂತೆ ತೋರಿ ಹಿಡಿಯಲಿಲ್ಲದ ಒಳಗಣ ಬಯಲು ಮುಸುಕಿದ ಮಹಾಬಯಲಿನಂತೆ ಮುಟ್ಟಲಿಲ್ಲದ ಸ್ವಯಂವೇದ್ಯವಾದ ಘನತತ್ವದ ರೂಪೆಂಬುದು ಮಹಾಘನ ಸದ್ಗುರು ಸಿದ್ಧಸೋಮನಾಥಾ, ನಿಮ್ಮ ಕಾರಣತನುವೆನಿಸುವುದು.
--------------
ಅಮುಗಿದೇವಯ್ಯ
ನಡೆದಡೆ ನಿರ್ಗಮನಿ ! ಸುಳಿದಡೆ ಗತಿವಿರಹಿತನನು ಏನೆಂಬೆನು ? ಎಂತೆಂಬೆನು ? ಅಘಟಿತಘಟಿತನನು, ಏನೆಂಬೆನು ಎಂತೆಂಬೆನು ? ಅಖಂಡಿತ ಮಹಿಮನನು ಏನೆಂಬೆನು ಎಂತೆಂಬೆನು ? ಆದಿಯಿಂದತ್ತತ್ತ ಗುಹೇಶ್ವರನ ಶರಣ ಅಲ್ಲಮಯ್ಯನ ಸುಳುಹು ಜಗಕ್ಕೆ ಪಾವನ !
--------------
ಅಲ್ಲಮಪ್ರಭುದೇವರು
ಜಗಕ್ಕೆ ಹೊರಗಾಗಿ ಅರಿವ ಠಾವಿಲ್ಲ, ಜಗಕ್ಕೆ ಒಳಗಾಗಿ ಮರೆವ ಠಾವಿಲ್ಲ , ಒಳಹೊರಗೆಂಬುದು ಒಂದೇ ಭೇದವಾದ ಕಾರಣ ಕುಡಿಕೆಯ ಘೃತ ಅಗಲಿಕೆ ಬಂದಂತೆ, ಅದು ಮುಂದಣ ಬಯಕೆ. ಇದು ಇಂದಿನ ಇರವು ಎಂಬುದನರಿದಲ್ಲಿ, ಉಂಟು, ಇಲ್ಲಾ ಎಂಬ ಸಂದೇಹ ಹರಿಯಿತ್ತು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದಲ್ಲಿ.
--------------
ಶಿವಲೆಂಕ ಮಂಚಣ್ಣ
ವಿಶ್ವಾಸದ ಹರವರಿಯಲ್ಲಿ ವಿಶ್ವಮಯ ಸ್ಥಲಕುಳಂಗಳಾದವು. ಅದು ನಾನಾ ತಟಾಕಂಗಳಲ್ಲಿ ತೋರುವ ದಿನಕರನಂತೆ, ಹಲವುಮಯ ತೋರುವುದಲ್ಲಿಗಲ್ಲಿಗೆ ಒಲವರವಿಲ್ಲದೆ. ಆ ವರುಣನ ನೆಲೆ ಒಂದೆ ಹಲವು ಜಗಕ್ಕೆ ಹೊಲಬಾದಂತೆ ಸ್ಥಲಜ್ಞನಾದೆಯಲ್ಲಾ. ಸ್ಥಲಲೇಪ ಒಂದೆಂದರಿತಲ್ಲಿ, ಏಕಸ್ಥಲಮೂರ್ತಿ ನೀನೆ. ಏಕವು ಸಾಕೆಂದಲ್ಲಿ ನಿರಾಕಾರನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಈರೇಳುಲೋಕ, ಹದಿನಾಲ್ಕು ಭುವನವಳಯದಲ್ಲಿ ಜಂಬೂದ್ವೀಪ ನವಖಂಡ ಪೃಥ್ವಿ ಹಿಮಸೇತು ಮಧ್ಯದೊಳಗಾದ ಖಂಡಮಂಡಲ ಯುಗಜುಗಂಗಳು, ಪಂಚಭೌತಿಕ ಪಂಚವಿಂಶತಿತತ್ವ ಸಕಲವಾಸಂಗಳೆಲ್ಲವು ತನ್ನ ಸಾಕಾರದಲ್ಲಿ ತೋರುವುದು. ಉತ್ತಮ ಕನಿಷ* ಮಧ್ಯಮವೆಂಬ ಸುಕ್ಷೇತ್ರವಾಸ, ತನ್ನಂಗದಲ್ಲಿ ಸುಳಿದಾಡುವ ಮಂಗಳಮಯದಿರವ, ಸಕಲೇಂದ್ರಿಯವ ಬಂಧಿಸದೆ ಕೂಡಿ, ಅವರವರ ಅಂಗದ ಮುಖದಲ್ಲಿ ಲಿಂಗಕ್ಕೆ ಕೊಟ್ಟು, ಸುಸಂಗಿಯಾಗಿ ವಸ್ತುವಿನ ಅಂಗದಲ್ಲಿ ಬೆರಸು. ನೀನರಿದನೆಂಬುದಕ್ಕೆ ಬೇರೊಂದು ಕಡೆಯಿಲ್ಲ. ನೀ ಮರೆದನೆಂಬುದಕ್ಕೆ ಬೇರೊಂದು ಮನವಿಲ್ಲ. ವಸ್ತು ದ್ರವ್ಯವ ತೋರಿ ಅಳಿದ ಮತ್ತೆ ವಸ್ತುವ ಕೂಡಿದಂತೆ, ಜಗಕ್ಕೆ ಭಕ್ತಿಯ ತೋರಿ ವಸ್ತು ಲೇಪ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಐಕ್ಯಲೇಪವಾದ.
--------------
ಸಗರದ ಬೊಮ್ಮಣ್ಣ
ವಸ್ತುಲೀಲಾಲೋಲನಾಗಿ ಅವತಾರಮೂರ್ತಿಯಾದಲ್ಲಿ ತ್ರಿಗುಣ ಸಂಭವವಾಯಿತ್ತು. ಪಂಚಭೌತಿಕ ಬಲಿದು ಪಂಚವಿಂಶತಿತತ್ವವಾಯಿತ್ತು. ಈ ಭೇದವ ಜಗಕ್ಕೆ ತೋರಿ, ತಾ ಹೊರಗಾದ ಸದಾಶಿವಮೂರ್ತಿಲಿಂಗದ ಬೆಡಗು.
--------------
ಅರಿವಿನ ಮಾರಿತಂದೆ
ಶರಣಭರಿತ ಶಿವನು ಶಿವಭರಿತ ಶರಣನೆಂಬುದು ನಿಜವಲ್ಲದೆ, ಜಗಭರಿತ ಶಿವನು ಶಿವಭರಿತ ಜಗವೆಂಬುದು ಹುಸಿ ನೋಡಾ ! ಅದೇನು ಕಾರಣವೆಂದೊಡೆ : ಜಗಕ್ಕೆ ಪ್ರಳಯ ಮಹಾಪ್ರಳಯಂಗಳುಂಟು. ಇದು ಕಾರಣ, ಪ್ರಳಯಾತೀತ ಶರಣಸನ್ನಿಹಿತ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ ಮಟ್ಟಿಯನಿಟ್ಟ ದ್ವಿಜರ ಮಾತದೇಕೆ ಹಗಲುಗಾಣದ ಗೂಗೆ ಇರುಳಾಯಿತ್ತೆಂದಡೆ, ಜಗಕ್ಕೆ ಇರುಳಪ್ಪುದೆ ಮರುಳೆ ಹೋಮದ ನೆವದಲ್ಲಿ ಹೋತನು ಕೊಂದು ತಿಂಬ ಅನಾಮಿಕರೊಡನಾಡಿ ಗೆಲಿವುದೇನು ಕೂಡಲಸಂಗಮದೇವಾ.
--------------
ಬಸವಣ್ಣ
ಆದಿ ಅನಾದಿಯಿಲ್ಲದಂದು, ಮಹಾಬಯಲು ಬೆಳಗಿಲ್ಲದಂದು ನಿಜಪ್ರಸಾದವ ತೋರಿಸಾ. ನಾದವನೆ ಬಯಲು ನುಂಗಿ, ಬಯಲನೆ ಕಳೆ ನುಂಗಿ ಹೊಳೆವ ಲಿಂಗವಿದೆಲ್ಲಿಯದೊ ? ಪ್ರಸಾದಿಯ ಪ್ರಸಾದ ಮುಟ್ಟಿದಲ್ಲದೆ ಲಿಂಗಾರ್ಪಿತಕ್ಕೆ ಸಲ್ಲದು, ಜಗಕ್ಕೆ ಪ್ರಸಾದಿಗಳೆಂತಪ್ಪರೊ ? ಅನಾದಿಯ ಸೋಂಕಿಲ್ಲದ ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರು ಅನಂತ ಕುಳರಹಿತನು.
--------------
ಚನ್ನಬಸವಣ್ಣ
ಪೃಥ್ವಿ ರೂಪಾದಲ್ಲಿ ಸದ್ಯೋಜಾತನಾದ, ಅಪ್ಪು ರೂಪಾದಲ್ಲಿ ವಾಮದೇವನಾದ ಅಗ್ನಿ ರೂಪಾದಲ್ಲಿ ಅಘೋರನಾದ, ವಾಯು ರೂಪಾದಲ್ಲಿ ತತ್ಪುರುಷನಾದ, ಗಗನ ರೂಪಾದಲ್ಲಿ ಈಶಾನ್ಯನಾದ. ಇಂತೀ ಪಂಚಕೋಶಂಗಳಲ್ಲಿ ನಿಂದು, ಜಗಕ್ಕೆ ಶಾಂತಿಯನಿತ್ತು, ತಾ ಸ್ವಯಂಜ್ಯೋತಿಯಾಗಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ
ಕೃತಯುಗದಲ್ಲಿ ದೇವರು ದೇವಾಸುರನ ಕೊಲುವಲ್ಲಿ, ಪ್ರಮಥನೆಂಬ ಗಣೇಶ್ವರನಾಗಿರ್ದನು. ಗಜಾಸುರನ ಚರ್ಮವ ಬಿಚ್ಚಿ ಅಜಾರಿ ಹೊದೆವಲ್ಲಿ ಉಗ್ರನೆಂಬ ಗಣೇಶ್ವರನಾಗಿರ್ದನು. ಅಸುರರ ಶಿರೋಮಾಲೆಯ ಕೊರಳಲ್ಲಿ ಉರದಲ್ಲಿ ಹಾರವಾಗಿ ಧರಿಸಿ ಜಗಕ್ಕೆ ಜೂಬಾಗಿಪ್ಪಲ್ಲಿ, ಶಂಕೆಯಿಲ್ಲದೆ ನಿಶ್ಶಂಕನೆಂಬ ಗಣೇಶ್ವರನಾಗಿರ್ದನು. ಸಮಸ್ತ ದೇವರಿಗೆ ಕರುಣಾಮೃತವ ಸುರಿದು ಸುಖವನಿತ್ತು ರಕ್ಷಿಸುವಲ್ಲಿ ಶಂಕರನೆಂಬ ಗಣೇಶ್ವರನಾಗಿರ್ದನು. ಜಾಳಂಧರನೆಂಬ ಅಸುರನ ಕೊಲುವಲ್ಲಿ ಜಾಣರಿಗೆ ಜಾಣನಾಗಿ ವಿಚಿತ್ರನೆಂಬ ಗಣೇಶ್ವರನಾಗಿರ್ದನು. ತ್ರೇತಾಯುಗದಲ್ಲಿ ಕಾಳಂಧರದೊಳಗೆ ಶಿವನು ನಿಜಮಂದಿರವಾಗಿದ್ದಲ್ಲಿ, ಕಾಲಾಗ್ನಿರುದ್ರನೆಂಬ ಗಣೇಶ್ವನಾಗಿರ್ದನು. ಪಿತಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸುವಲ್ಲಿ, ಮಾತಾಪಿತನೆಂಬ ಗಣೇಶ್ವರನಾಗಿರ್ದನು. ತಾಳಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸಿ ಸೃಷ್ಟಿಯ ಕಲ್ಪಿಸಿ ಬ್ರಹ್ಮಾಂಡ ಭಾರಮಂ ಧರಿಸುವಲ್ಲಿ, ತಾಳಸಮ್ಮೇಳನೆಂಬ ಗಣೇಶ್ವರನಾಗಿರ್ದನು. ಜಲಪ್ರಳಯದಲ್ಲಿ ಜಗನ್ನಾಥನು ಅಳಿಯದೆ ಇಪ್ಪಲ್ಲಿ ಜನನಮರಣವರ್ಜಿತನೆಂಬ ಗಣೇಶ್ವರನಾಗಿರ್ದನು. ಜಗವೆಲ್ಲಾ ಶೂನ್ಯವೆಂದಡೆ ನಾನೆ ಹುಟ್ಟಿಸಿದೆನೆಂದು, ಆದಿಗಣನಾಥನೆಂಬ ಗಣೇಶ್ವರನಾಗಿರ್ದನು. ಸುರಾಸುರರು ಅಹಂಕಾರದಲ್ಲಿ ಹೆಚ್ಚಿ ಮೇರೆದಪ್ಪಿದಲ್ಲಿ ಗೂಳಿಯಾಗಿ ಹೋರಿ ಎಲ್ಲರ ತೊತ್ತ?ದುಳಿದು, ಒಕ್ಕಲಿಕ್ಕಿ ಮಿಕ್ಕು ಮೀರಿ ನಂದಿಮಹಾಕಾಳನೆಂಬ ಗಣೇಶ್ವರನಾಗಿರ್ದನು. ಉರಿಗಣ್ಣ ತೆರೆದಡೆ ಉರಿದಹವು ಲೋಕಂಗಳೆಂದು ಜಗವ ಹಿಂದಿಕ್ಕಿಕೊಂಡು ವಂದ್ಯನೆಂಬ ಗಣೇಶ್ವರನಾಗಿರ್ದನು. ಉಮೆಯ ಕಲ್ಯಾಣದಲ್ಲಿ ಕಾಲಲೋಚನನೆಂಬ ಗಣೇಶ್ವರನಾಗಿರ್ದನು. ಅಂಧಕಾಸುರನ ಕೊಲುವಲ್ಲಿ ನೀಲಲೋಹಿತನೆಂಬ ಗಣೇಶ್ವರನಾಗಿರ್ದನು. ತ್ರಿಪುರದಹನವ ಮಾಡುವಲ್ಲಿ ಸ್ಕಂದನೆಂಬ ಗಣೇಶ್ವರನಾಗಿರ್ದನು. ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕುವಲ್ಲಿ ನೀಲಕಂಠನೆಂಬ ಗಣೇಶ್ವರನಾಗಿರ್ದನು. ದ್ವಾಪರದಲ್ಲಿ ಲಿಂಗಪ್ರಾಣಸಂಯೋಗವಾಗಿ ವೃಷಭನೆಂಬ ಗಣೇಶ್ವರನಾಗಿರ್ದನು. ಇಂತು ನಾಲ್ಕು ಯುಗ, ಹದಿನಾಲ್ಕು ಭುವನಂಗಳು ಮಡಿವಲ್ಲಿ, ಹುಟ್ಟುವಲ್ಲಿ ನಂದಿಕೇಶ್ವರನೆಂಬ ಗಣೇಶ್ವರನಾಗಿರ್ದನು. ಕಲಿಯುಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದನದಫ ಪೂರ್ವಾಶ್ರಯವ ಕಳೆದು ಲಿಂಗವಾಗಿ ಕುಳಸ್ಥಳವನರಿತು ಮಹಾಂತ ಕೂಡಲಚೆನ್ನಸಂಗನ ಮಹಾಮನೆಯಲ್ಲಿ, ಸರ್ವಾಚಾರಸಂಪನ್ನ ಬಸವಣ್ಣನೆಂಬ ಗಣೇಶ್ವರನಾಗಿರ್ದನು ಕೇಳಾ ಪ್ರಭುವೆ !
--------------
ಚನ್ನಬಸವಣ್ಣ
ಕಂಡುದೆಲ್ಲವೂ ಜಗದ ಸೊಮ್ಮು. ಕಾಣುದದೆಲ್ಲವೂ ಮಾಯೆಯ ಸೊಮ್ಮು. ಕಂಡುದ, ಕಾಣದುದ ತಾ ನಿಧಾನಿಸಿಕೊಂಡು ತನಗಿಲ್ಲದುದ ತಾನರಿದು, ನಷ್ಟವಪ್ಪುದ ಜಗಕ್ಕೆ ಕೊಟ್ಟು ಬಟ್ಟಬಯಲ ತುಟ್ಟತುದಿಯ ದೃಷ್ಟವ ಕಾಬುದಕ್ಕೆ ಮುನ್ನವೆ ದೃಕ್ಕು ದೃಶ್ಯಕ್ಕೆ ಹೊರಗಾಗಬೇಕು, ವೀರಶೂರ ರಾಮೇಶ್ವರಲಿಂಗವ ಕೂಡಬಲ್ಲಡೆ
--------------
ಬಾಲಬೊಮ್ಮಣ್ಣ
ಹರನ ಕೈಯ ಕಪಾಲವಿ[ಡಿ]ದ ತೆರನನರಿಯದಲ್ಲಾ ಲೋಕ. ನರಜನ್ಮಕ್ಕಾಹುತಿಯ ಬಗೆದು, ಅರುವತ್ತುನಾಲ್ಕು ಭಾಗವ ಮಾಡಿ, ಚೌಷಷ್ಟಿವಿದ್ಯವು ನಿಮಗೆ ಕಾಯಕಪ್ಪರವೆಂದು ಕೈವರ್ತಿಸಿದನೀ ಜಗಕ್ಕೆ ಶಿವನು. ಇದು ಕಾರಣ, ಶಿವಭಕ್ತರು ಕರ್ಮಮೂಲ ಕಾಯಕವಿಡಿದು ಬಂದುವೆ ಲಿಂಗಕ್ಕರ್ಪಿತ. ಕಾಯಕ ಹೀನವೆಂದು ಬಿಟ್ಟು ಹಿಡಿದಡೆ ಭಕ್ತನಲ್ಲ. ಪಥಕ್ಕೆ ಸಲ್ಲ , ಪುರಾತನರೊಲ್ಲರು, ಲಿಂಗ ಮೆಚ್ಚಲ್ಲ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಇನ್ನಷ್ಟು ... -->