ಅಥವಾ

ಒಟ್ಟು 70 ಕಡೆಗಳಲ್ಲಿ , 22 ವಚನಕಾರರು , 57 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಿನ್ನಪ್ರಾಣವಳಿದು ನಿರ್ಮಳಚಿತ್ತವ ಮಾಡಿ ಕಣ್ಣಾಲಿ ಉರೆ ನಟ್ಟು ಹೊರ ಸೂಸದೆ (ಕ)ಣ್ಣ ಬಣ್ಣವ ಕಳೆದು, ಉಣ್ಣನು ಉಣ್ಣದೆ ಇರನು, ತನ್ನ ನಿಲವನರಿತು ತಾನೊಬ್ಬನೆ ಇರನು. ಜನ್ಮ ಮೃತ್ಯುಗಳಲ್ಲಿ ಕಾಳು ಬೆಳುದಿಂಗಳಲ್ಲಿ, ತನ್ನ ಪ್ರಾಣ ತನಗೆ ಪ್ರಕಾಶವು. ತನ್ನೊಳಗೆ ಹೊಣೆ ಹೊಕ್ಕು, ಕುಂಬಳದ ಸೂಚಿಯ ಸುಮ್ಮಾನಿ ಶರಣನ ನಿಲವ ನೋಡಾ ! ಅಳಲಲಿಲ್ಲ ಬಳಲಲಿಲ್ಲ ಅಳಿಯಲಿಲ್ಲ ಉಳಿಯಲಿಲ್ಲ,_ಎರಡಳಿದ ನಿಲವು. ಉಭಯ ಮಧ್ಯದ ಕೊರಡಿಂಗೆ ಕುಂಟಿಯನಿಕ್ಕಿ ಕೆಡಿಸುವನು ತಾನಲ್ಲ. ಹೊರಳಲರಿಯನು ಕೊಳಚಿಯ ಉದಕದೊಳಗೆ. ಕಳಾಕಳಾ ಭೇದದಿಂದ ತೊಳತೊಳಗುವನು. ದಳಭ್ರೂಮಧ್ಯದ ಧ್ರುವಮಂಡಲವ ಮೀರಿ ಕಳೆದು ದಾಂಟಿ ಕೂಡಲಚೆನ್ನಸಂಗಯ್ಯನೊಳಗೆ ಶರಣಕಾಂತಿಯ ನಿಲವಿಂಗೆ ಶರಣು ಶರಣು !
--------------
ಚನ್ನಬಸವಣ್ಣ
ಮುಕ್ತಿಗೆ ಸದಾ ಸಂಧಾನವಾದ ಮಹಾಜ್ಞಾನ ಶಿವಕ್ಷೇತ್ರವೆಂಬ ಶಾಂಭವಿಯಚಕ್ರವಿವರವೆಂತೆಂದೊಡೆ: ಅಗ್ನಿಮಂಡಲದ ಪೂರ್ವದಿಕ್ಕಿನ ಸಕಾರವೇ ವಾಮೆ, ಷಕಾರವೇ ಜೇಷೆ*, ಶಕಾರವೇ ರೌದ್ರಿ, ವಕಾರವೇ ಕಾಳಿ. ಅಗ್ನಿಮಂಡಲದ ನೈಋತ್ಯದಳಕ್ಕೆ ಆಧಾರಚಕ್ರಸಂಬಂಧವು. ಅದರ ಮುಂದಣ ಲಕಾರವೇ ಬಾಲೆ, ರಕಾರವೇ ಬಲಪ್ರಮಥಿನಿ, ಯಕಾರವೇ ಸರ್ವಭೂತದಮನಿ, ಮಕಾರವೇ ಮನೋನ್ಮನಿ. ಇನ್ನು ಸೂರ್ಯಮಂಡಲದ ಬಕಾರ ಭಕಾರಗಳೆರಡು ಕೂಡಿ ಅಗ್ನಿಮಂಡಲದ ಈಶಾನ್ಯದಳಕ್ಕೆ ಸ್ವಾಧಿಷಾ*ನಚಕ್ರಸಂಬಂಧವು. ಮುಂದೆ ಚಂದ್ರಮಂಡಲದ ವಿವರವೆಂತೆಂದೊಡೆ: ಅಃ ಎಂಬುದೇ ಷಣ್ಮುಖಿ, ಅಂ ಎಂಬುದೇ ಭವ, ಔಕಾರವೇ ಶರ್ವ, ಓಕಾರವೇ ರುದ್ರ, ಐಕಾರವೇ ಮಹಾದೇವ, ಏಕಾರವೇ ಸೋಮ, ಲೂೃಕಾರವೇ ಭೀಮ, ಲೃಕಾರವೇ ಉಗ್ರ, Iೂಕಾರವೇ ಪಶುಪತಿ, ಋಕಾರವೇ ಉಮೇಶ್ವರ, ಊಕಾರವೇ ಚಂಡೇಶ್ವರ, ಉಕಾರವೇ ನಂದೀಶ್ವರ, ಈಕಾರವೇ ಮಹಾಕಾಳ, ಇಕಾರವೇ ಭೃಂಗಿರಿಟಿ, ಆಕಾರವೇ ಗಣೇಶ್ವರ, ಅಕಾರವೇ ವೃಷಭೇಶ್ವರ, ಚಂದ್ರಮಂಡಲದಲ್ಲಿ ವಿಶುದ್ಧಿಚಕ್ರಸಂಬಂಧವು. ಇನ್ನು ಮುಂದೆ ಸೂರ್ಯಮಂಡಲವೆಂತೆಂದೊಡೆ: ಪೂರ್ವದಳದ ಕಕಾರವೇ ಅನಂತ, ಖಕಾರವೇ ಸೂಕ್ಷ್ಮ, ಗಕಾರವೇ ಶಿವೋತ್ತಮ, ಘಕಾರವೇ ಏಕನೇತ್ರ, ಙಕಾರವೇ ಏಕರುದ್ರ. ಚಕಾರವೇ ತ್ರಿಮೂರ್ತಿ, ಛಕಾರವೇ ಶ್ರೀಕಂಠ, ಜಕಾರವೇ ಶಿಖಂಡಿ, ಝಕಾರವೇ ಇಂದ್ರ, ಞಕಾರವೇ ಅಗ್ನಿ. ಟಕಾರವೇ ಯಮ, ಠಕಾರವೇ ನೈಋತ್ಯ. ಸೂರ್ಯಮಂಡಲದ ನೈಋತ್ಯದಳಕ್ಕೆ ಅನಾಹತಚಕ್ರಸಂಬಂಧವು. ಡಕಾರವೇ ವರುಣ, ಢಕಾರವೇ ವಾಯುವ್ಯ, ಣಕಾರವೇ ಕುಬೇರ, ತಕಾರವೇ ಈಶಾನ್ಯ, ಥಕಾರವೇ ಧರಾ, ದಕಾರವೇ ಧ್ರುವ, ಧಕಾರವೇ ಸೋಮ, ನಕಾರವೇ ಅಪ್ಪು, ಪಕಾರವೇ ಅನಿಲ, ಫಕಾರವೇ ಅನಲ, ಸೂರ್ಯಮಂಡಲದ ವರುಣದಳದಿಂದೆ ಈಶಾನ್ಯದಳಕ್ಕೆ ಮಣಿಪೂರಕಚಕ್ರ ಸಂಬಂಧವು. ಈಶಾನ್ಯ ಇಂದ್ರ ಮಧ್ಯದ ಬಕಾರ ಭಕಾರಂಗಳ ಪೆಸರು, ಬಕಾರವೇ ಪ್ರತ್ಯೇಶ, ಭಕಾರವೇ ಪ್ರಭವ, ಇವೆರಡು ಸ್ವಾಧಿಷಾ*ನಚಕ್ರದವು. ಇನ್ನು ಅಕಾರ ಹಕಾರಂಗಳಿಗೆ ಭೇದವಿಲ್ಲದ ಕಾರಣ ಚಂದ್ರಮಂಡಲದ ಅ ಎಂಬಕ್ಷರವು ಅಗ್ನಿಮಂಡಲದ ಲಂಬಕ್ಷರವು ಇವೆರಡು ಆಜ್ಞಾಚಕ್ರಸಂಬಂಧವಾಗಿಹವು. ಈ ಷಟ್‍ಚಕ್ರಂಗಳು ಶಾಂಭವಿಚಕ್ರದಲ್ಲಿ ಸಂಬಂಧವಾಗಿಹವು. ಇನ್ನು ಅಷ್ಟದಳಂಗಳಿಗೆ ಹಂಚಿಹಾಕುವ ವಿವರವೆಂತೆಂದೊಡೆ: ವಾಮ, ಗಣೇಶ್ವರ, ವೃಷಭೇಶ್ವರ, ಅನಂತ, ಸೂಕ್ಷ್ಮ, ಶಿವೋತ್ತಮ, ಇಂದ್ರ, ಸತ್ಯ, ಭೃಂಗಿ, ಅಂತರ್ಲಕ್ಷ ಈ ಹತ್ತು ಇಂದ್ರದಳದಲ್ಲಿ ಸಂಬಂಧವು. ಜೇಷ*, ಮಹಾಕಾಳ, ಭೃಂಗರೀಟಿ, ಏಕನೇತ್ರ, ಏಕರುದ್ರ, ತ್ರಿಮೂರ್ತಿ, ಅಗ್ನಿ, ಪೂಷನ್, ವಿಧಿ, ದಮ ಈ ಹತ್ತು ಅಗ್ನಿದಳದಲ್ಲಿ ಸಂಬಂಧವು. ರೌದ್ರಿ, ನಂದೀಶ್ವರ, ಚಂಡೇಶ್ವರ, ಶ್ರೀಕಂಠ, ಶಿಖಂಡಿ, ಇಂದ್ರ ಯಮ, ಭಾಸ್ಕರ, ಪುಷ್ಪದತ್ತ , ಬಲಾಟ ಈ ಹತ್ತು ಯಮದಳದಲ್ಲಿ ಸಂಬಂಧವು. ಕಾಳಿ, ಉಮೇಶ್ವರ, ಪಶುಪತಿ, ಅಗ್ನಿ, ಯಮ, ನೈಋತ್ಯ, ದೌವಾರಿಕ, ಸುಗ್ರೀವ, ಆವರಣ ಈ ಹತ್ತು ನೈಋತ್ಯದಳದಲ್ಲಿ ಸಂಬಂಧವು. ಬಾಲೆ, ಉಗ್ರ, ಭೀಮ, ವರುಣ, ಏಕನೇತ್ರ, ಕುಬೇರ, ಅರುಣ, ಅಸುರ, ಗಂಹ್ವರ, ವೇಗ, ಈ ಹತ್ತು ವರುಣದಳದಲ್ಲಿ ಸಂಬಂಧವು. ಬಲಪ್ರಮಥಿನಿ, ಸೋಮ, ಅಪನಿಲ, ಮಹಾದೇವ, ಈಶಾನ್ಯ, ಧರಾ, ಧ್ರುವ, ವಾಯು, ನಾಗಮುಖ, ಸೋಮ, ಈ ಹತ್ತು ವಾಯುವ್ಯದಳದಲ್ಲಿ ಸಂಬಂಧವು. ಸರ್ವಭೂತದಮನಿ, ರುದ್ರ, ಶರ್ವ, ಸೋಮ, ಅಪ್ಪು, ನೀಲ, ಕುಬೇರ, ಅಘೋರ, ದಿತಿ, ಅದಿತಿ, ಈ ಹತ್ತು ಕುಬೇರದಳದಲ್ಲಿ ಸಂಬಂಧವು. ಮನೋನ್ಮನಿ, ಭವ, ಷಣ್ಮುಖಿ, ನಳ, ಪ್ರತ್ಯೇಶ, ಪ್ರಭವ, ಈಶಾನ್ಯ, ಪರ್ಜನ್ಯ, ಜಯಂತ, ಸಂಕರ, ಈ ಹತ್ತು ಈಶಾನ್ಯದಳದಲ್ಲಿ ಸಂಬಂಧವು. ಇಲ್ಲಿಗೆ ಅಷ್ಟದಳದ ವಿವರ ಮುಗಿಯಿತು. ಇನ್ನು ಮುಂದೆ ಚೌದಳದ ವಿವರವೆಂತೆಂದೊಡೆ : ಇಂತಪ್ಪ ಅಷ್ಟದಳವನೊಳಕೊಂಡು ಅಂಬಿಕೆ, ಗಣಾನಿ, ಈಶ್ವರಿ, ಮನೋನ್ಮನಿ ಎಂಬ ಚತುರ್ದಳ ಶಕ್ತಿಯರಿರ್ಪರು. ಪೂರ್ವದಳದ ಸಕಾರವೇ ಅಂಬಿಕೆ. ದಕ್ಷಿಣದಳದ ಅಕಅರವೇ ಗಣಾನಿ. ಪಶ್ಚಿಮದಳದ ವಿಕಾರವೇ ಈಶ್ವರಿ. ಉತ್ತರದಳದ ಕ್ಷಕಾರವೇ ಮನೋನ್ಮನಿ. ಇಂತೀ ಚತುರ್ವಿಧಶಕ್ತಿಯನೊಳಕೊಂಡಿರ್ಪಳು ಹ್ರೀಂಕಾರಶಕ್ತಿ. ಹ್ರೀಂಕಾರಶಕ್ತಿ ಎಂದಡೂ ಮೂಲಜ್ಞಾನ ಚಿತ್ತು ಎಂದಡೂ ಚಿದಾತ್ಮ ಎಂದಡೂ ಪರ್ಯಾಯ ನಾಮವು. ಇಂತಪ್ಪ ಹ್ರೀಂಕಾರಶಕ್ತಿಗೆ ಆಶ್ರಯವಾಗಿರ್ಪುದು ನಿಷ್ಕಲಲಿಂಗವು. ನಿಷ್ಕಲಲಿಂಗವೆಂದಡೂ ಶುದ್ಧಪ್ರಸಾದವೆಂದಡೂ ಹಕಾರಪ್ರಣವವೆಂದಡೂ ಪರ್ಯಾಯ ನಾಮಂಗಳು. ಇಂತಪ್ಪ ನಾಮಂಗಳನೊಳಕೊಂಡು ಪಿಂಡ ಬ್ರಹ್ಮಾಂಡಗಳೊಳಹೊರಗೆ ಪರಿಪೂರ್ಣವಾಗಿ ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ ನಿಷ್ಕಲಲಿಂಗವು. ಇಂತಪ್ಪ ಅನಾದಿ ನಿಷ್ಕಲ ಪರಶಿವಬ್ರಹ್ಮದ ನಿಜದ ನಿಲವನು ಶ್ರುತಿಗುರುವಚನ ಸ್ವಾನುಭಾವಂಗಳಿಂದರಿದು ತನ್ನೊಳಗೆ ಗರ್ಭೀಕರಿಸಿಕೊಂಡು ಸುಳಿವ ಮಹಾಶರಣರ ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಂಗಳ ಕತ್ತಲೆಯ ಕೆಡಿಸಿದ ರವಿಯ ಚಂದದಂತಾಯಿತ್ತೆನ್ನಗುರುವಿನುಪದೇಶ. ಕನ್ನಡಿ ರವಿಯ ತನ್ನೊಳಗೆ ಇರಿಸಿದಂತಾಯಿತ್ತೆನ್ನ ಗುರುವಿನುಪದೇಶ. ಜಲದ ನಿರ್ಮಳ ಗಗನವನೊಳಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಚಂದ್ರಕಾಂತದ ಶಿಲೆಯ ಬಂದು ಚಂದ್ರಮ ಸೋಂಕಿದಂತಾಯಿತ್ತೆನ್ನ ಗುರುವಿನುಪದೇಶ. ಕೊಡನೊಳಗಣ ಬಯಲ ಹಂಚಿಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಇದು ಕಾರಣ, ದರ್ಪಣಕೆ ದರ್ಪಣವ ತೋರಿದಂತಾಯಿತ್ತೆನ್ನ ಗುರುವಿನುಪದೇಶ. ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಂತಾಯಿತ್ತೆನ್ನ ಗುರುವಿನುಪದೇಶ.
--------------
ಅಮುಗಿದೇವಯ್ಯ
ಫಲಪದವನತಿಗಳೆದು ಹಲವು ಸೀಮೆಯ ಮೀರಿ ಹೊಲಬುಗೆಟ್ಟಾತನ್ಕ ಬ್ರಹ್ಮವಾದ, ತನ್ನೊಳಗೆ ಜಗವಾಗಿ ಜಗದೊಳಗೆ ತಾನಾಗಿ ತನುಗುಣಕೆ ತಾ ದೂರವಾಗಿ. ಕುರುಹುಗೆಟ್ಟಾ ಸೀಮೆ ಹಲಬರೊಳಗಿದ್ದು ಒಲವು ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕಂಗಳಿಗೆ ತೂ..... ಬಾರ ಅಂಗಜೀವಿಗಳ ಕೂಡಿ ನಡೆವನೆ ಶರಣ ? ತನ್ನ ಸುಖವನೆ ಸಂತದಲಿ ಅನುಭವವ ಮಾಡುವನಲ್ಲದೆ, ನುಡಿದಂತೆ ನಡೆಯದಿದ್ದವರ ಕಂಡಡೆ ತನ್ನೊಳಗೆ ತಾನೆ ನಗುವ ಶರಣ ನುಡಿದಡೆ ಅದನಲ್ಲೆಂಬರು ಸಂಸಾರಜೀವಿಗಳು. ಶರಣ ನುಡಿದಡೆ ಅದನಲ್ಲೆಂಬರು ಸಂಸಾರಜೀವಿಗಳು. ಶರಣ ನುಡಿದಡೆ ಅದನಲ್ಲೆಂಬರು ಭವಭಾರಿಜೀವಿಗಳು. .... ಅಲ್ಲೆಂಬುದ ತಾನು ಬಲ್ಲನಾಗಿ ನುಡಿಯ. ಗುಣಮುಗ್ಧವರಿõ್ಞನಿಯಾಗಿಪ್ಪ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಆ ಪರಶಿವನ ಮೂಲಮಂತ್ರಸ್ವರೂಪವಾದ ಭುವನಬ್ರಹ್ಮಾಂಡದ, ಸಕಲಜೀವಿಗಳ ವಿಸ್ತಾರವ ಕಂಡು, ತೋರಿ ಅಡಗುವ ಪರಿಗೆ ಸಂಸಾರಮಿಥ್ಯವೆಂದು ಸಜ್ಜನಗುಣದಲ್ಲಿ ಕೂಡಿ, ಸತ್ಪುರುಷರ ಸಂಗವಮಾಡಿ, ಶಾಸ್ತ್ರಾಗಮ ಶಿವಪುರಾಣ, ಶಿವಾಚಾರದಲ್ಲಿ ಮನವಿಟ್ಟು ತತ್ ತ್ವಂ ಅಸಿಯೆಂಬೋ ವಾಕ್ಯಕ್ಕೆ ಚಿತ್ತವೆಳಸಿ ವಸ್ತು ತಿಳಿಯಬೇಕೆಂದು ತತ್ವಜ್ಞಾನಿಗಳ ಹುಡುಕುವ ಶ್ರುತಿಜ್ಞಾನಿಗಳಿಗೆ, ಆ ವಸ್ತುವೇ ಗುರುವಾಗಿ, ತತ್ವೋಪದೇಶವ ಹೇಳಿ, ತತ್ವ ಮಂತ್ರ ವಿವರವ ತಿಳಿಸಲು, ಆ ತತ್ವ ಮಂತ್ರ ವಿವರವ ತನ್ನೊಳಗೆ ಲಕ್ಷವಿಟ್ಟು ನೋಡೆ ಆತ್ಮಜ್ಞಾನ ಅನುಮಿಷವಾಯಿತ್ತು. ಆ ಆತ್ಮಜ್ಞಾನ ಅನುಮಿಷದೃಷ್ಟಿ, ಆ ಆತ್ಮಾನಾತ್ಮವ ಶೋಧಿಸಿತ್ತು. ಆ ಶೋಧನೆ ಮಹಾಜ್ಞಾನ ಬೆಳಗಲು, ಆ ಬೆಳಗಿನೊಳಗೆ ಮೂಲಪ್ರಣವದ ಒಡಲೊಳಗಿನ ಆರು ಆಕೃತಿಗಳೆ ಆರು ಬೀಜಪ್ರಣವಗಳು, ಆ ಆರು ಪ್ರಣವಗಳೇ ಆ ಪರಶಿವನ ಆರು ಮುಖಗಳು, ಆ ಆರು ಮುಖಗಳಿಗೆ ಆರು ತತ್ವಗಳು, ಆರಾರು ಮೂವತ್ತಾರುತತ್ವವು. ಮೂವತ್ತಾರುತತ್ವಗಳಿಗೆ ಬ್ರಹ್ಮಾಂಡ, ಆ ಬ್ರಹ್ಮಾಂಡವೇ ಹನ್ನೆರಡು ಭೂತ, ಹನ್ನೆರಡು ಭೂತಗಳೇ ಪಿಂಡಾಂಡ. ಆ ಪಿಂಡಾಂಡದಲ್ಲಿ ಹನ್ನೆರಡು ಜ್ಞಾನ, ಹನ್ನೆರಡು ಸ್ಥಾನ, ಹನ್ನೆರಡು ಚಕ್ರ, ಹನ್ನೆರಡು ಅಂಗ, ಹನ್ನೆರಡು ಲಿಂಗ, ಹನ್ನೆರಡು ಭಕ್ತಿ, ಹನ್ನೆರಡು ಶಕ್ತಿ, ಹನ್ನೆರಡು ಮಂತ್ರ, ಹನ್ನೆರಡು ಹಸ್ತ, ಹನ್ನೆರಡು ಮುಖ, ಹನ್ನೆರಡು ಪದಾರ್ಥ, ಹನ್ನೆರಡು ಪ್ರಸಾದ, ಹನ್ನೆರಡು ತೃಪ್ತಿ-ಇವು ಮೊದಲಾದ ಸತ್ಕರ್ಮದೊಳಾಗದ ಸರ್ವಸುಗುಣಗಳು, ಸರ್ವದುರ್ಗುಣಗಳು, ಸರ್ವವೂ ಮೂಲಪ್ರಣವವೆಂದು ತಿಳಿದು, ಸರ್ವವೂ ಮೂಲಪ್ರಣವವೇ ಶಿವ, ಆ ಮೂಲಪ್ರಣವವೇ ಅಷ್ಟಾವರಣ, ಆ ಮೂಲಪ್ರಣವವೇ ಸಕಲಪ್ರಾಣಿಗಳು, ಆ ಮೂಲಪ್ರಣವವೇ ನಾನು, ಸರ್ವವೂ ಮೂಲಪ್ರಣವವೆಂದು ಇಲ್ಲೇನು, ಅಲ್ಲೇನು, ಎಲ್ಲೇನು, ಹಿಂಗೇನು, ಹಾಂಗೇನು, ಹ್ಯಾಂಗೇನು, ಇದ್ದಂಗಿರು ಸಿದ್ಧೇಶನೆಂಬುವದ ತಿಳಿದು, ತಿಳಿಯದೇ ನರಕದ ಕೇರಿಗೆ ಕಿರಿಕುಲದ ಸೂಕರ ಹೋದಂತೆ, ಹಸಿಯ ತೊಗಲಿನ ವಸರುವ ತೂತಿನ ಹಳೇ ಘಾಯಿಯ ಬಿರಿಕಿನೊಳಗೆ, ಸರಕನೇ ಎದ್ದು ಜರಕನೇ ಜಾರಿ ಸಿಗಬಿದ್ದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಲಯಭೋಗಾಧಿಕಾರವನುಳ್ಳ ಪರಶಿವನು ತಾನೆ ತತ್ವಪ್ರಭಾವಮೂರ್ತಿಯೆನಿಸಿನದಫವ್ಯಯ ಅಪ್ರಮಾಣ ಅಸಾಧ್ಯ ನಿಷ್ಕಲತತ್ವವೆ ಪಂಚಸಂಜ್ಞೆಯಿಂದಿಪ್ಪುದು, ಅದೆಂತೆಂದಡೆ: ಜಗತ್‍ಸೃಷ್ಟಿಗಾದಿ, ಅಷ್ಟತನುಗಳಿಗಾದಿ, ತ್ರಿಮೂರ್ತಿಗಳಿಗಾದಿ, ಷಟ್ತ್ರಿಂಶತತ್ವಕ್ಕಾದಿ, ಈಶ್ವರ ಸದಾಶಿವಗಾದಿಯಾಗಿಪ್ಪ, ಮೇಲಣ ಪರತತ್ವವೆ ಪರ ಅನಂತಕೋಟಿ ಬ್ರಹ್ಮಾಂಡಗಳೊಳಗೆಡವಿಡದೆ ಚರಾಚರವೆನಿಸುವ ಪ್ರಾಣಿಗಳೊಳಗೆ ಸೂಕ್ಷ್ಮವಾಗಿ, ವಟವೃಕ್ಷದೊಳಡಗಿಪ್ಪ ಬೀಜದಂತೆ ಗೂಢವಾಗಿ, ಆರಿಗೂ ಹಡೆಯಬಾರದೆ ವಿಶ್ವಕ್ಕೆ ಕಾರಣವಾಗಿಹುದೆ ಗೂಢ. ತನ್ನೊಳಗೆ ಶಿವಶಕ್ತಿಗಳ ಶರೀರ ಘಟಿಸಿ ಚರಾಚರಂಗಳು ಸ್ತ್ರೀಪುಂನನಪುಂಫಸಕವೆಂಬ ಮುದ್ರೆಯಿಂದ ಬಹುನಾಮಂಗಳಿಂದ ತನ್ನೊಳಗಿಪ್ಪ ಕಾರಣ ಶರೀರಸ್ಥ. ತನ್ನೊಳಗಿಹ ಮಾಯೆಯಿಂದ ಜಗತ್‍ಸೃಷ್ಟಿ ಮೊದಲಾದ ಸಕಲಪ್ರಪಂಚ ತೋರಿ ಆ ಪ್ರಪಂಚಿಂಗೆ ತಾನೆ ಭೂಮಿಯಾಗಿ ಎಲ್ಲವ ತನ್ನೊಳಗಿಂಬಿಟ್ಟು ತಾನೆನ್ನದ ಅಭಿನ್ನದಿಂದಹುದೆ ಲಿಂಗಕ್ಷೇತ್ರ. ಈಶ್ವರ ಸದಾಶಿವರು ಮೊದಲಾದ ಅನಂತದೇವಾತ್ಮಮೂರ್ತಿಗಳ ಜನನಂಗಳಾದಿಯಿಂದತ್ತತ್ತಲಿಪ್ಪುದೆ ಅನಾದಿ. ಇಂತಪ್ಪ ಪಂಚಸಂಜ್ಞೆಯನುಳ್ಳ ಲಿಂಗವನರಿತ ಲಿಂಗೈಕ್ಯಂಗೆ ನಮೋ ನಮೋ ಎಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಎನ್ನರು ಅನ್ಯವನು ಅನ್ಯ ತಾ ತನ್ನೊಳಗೆ ಬಿನ್ನಾಣವೇನು. ಲೋಕದ ಹೊರಗೆಯೂ ಅನ್ಯತ್ರವು ಬೇಡ, ತಾ ತನ್ನೊಳಗೆ ಬಿನ್ನಾಣಂ ತಿಳಿದು ನೋಡು. ಸಮತೆಯೊಳಗೆ ಬೇರನ್ಯವೆ ಇಲ್ಲ, ತನ್ನೊಳಗೆ ಸರ್ವವೂ ಬಿನ್ನಾಣವೇನದರ ಪರಿ ಬೇರೇನು ಹೇಳಾ, ಸನ್ನುತವು ಸಮತೆಯ ಆನನ್ಯತವು ಆದರೆ ತನ್ನೊಳಗೆ ಸರ್ವವೂ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ನೀರು ನೀರು ಕೂಡಿ, ಕ್ಷೀರ ಕ್ಷೀರವ ಕೂಡಿ, ಅಗ್ನಿ ಅಗ್ನಿಯ ಕೂಡಿದಂತೆ. ತನ್ನೊಳಗೆ ಶಿವನು, ಶಿವನೊಳಗೆ ತಾನು ಅಡಗಿ ಏಕವಾದ ಮತ್ತೆ, ತಾ ಶಿವನಾದೆನೆಂಬ ಅಹಂಭಾವವಿಲ್ಲ ನೋಡಯ್ಯಾ. ಸರ್ವಾತ್ಮರೆಂಬ ಪರತತ್ವ ತಾನಾದ ಮತ್ತೆ, ಭೇದಾಭೇದ ಶಂಕೆಯೆಂಬುದು ಏನೂ ಇಲ್ಲ ನೋಡಯ್ಯಾ. ನಿತ್ಯ ನಿರ್ವಿಕಾರ ನಿಸ್ಸೀಮ ವ್ಯೋಮಾತೀತ ನಿರ್ವಿಕಲ್ಪ ನಿಜ ತಾನಾದ ಮತ್ತೆ, ಭೂಮ್ಯಾದಿ ಭೂತ ಗ್ರಹ ನಕ್ಷತ್ರ ದೇವ ಮನುಷ್ಯ ತಿರ್ಯಗ್ಜಾತಿಗಳೆಂಬವೇನೂ ಇಲ್ಲ ನೋಡಾ. ಸತ್ತು ಚಿತ್ತು ಆನಂದಲಕ್ಷಣವಿದೆಂಬ ಜ್ಞಾನಶೂನ್ಯವಾಗಿ ಶಬ್ದಮುಗ್ಧವಾದ ಮತ್ತೆ ಪರಬ್ರಹ್ಮಅಪರಬ್ರಹ್ಮವೆಂಬ ನಾಮವು ಇಲ್ಲ. ತಾನಲ್ಲದೆ ಮತ್ತೇನೂ ಇಲ್ಲ ನೋಡಾ. ``ಜಲೇ ಜಲಮಿವ ನ್ಯಸ್ತಂ ವಹ್ನೌ ವಹ್ನಿರಿವಾರ್ಪಿತಃ ಪರಬ್ರಹ್ಮಣಿ ಲೀನಾತ್ಮನ ವಿಭಾಗೇನ ದೃಶ್ಯತೇ' ಇಂತೆಂದುದಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಾದ ಲಿಂಗೈಕ್ಯನಿರವು.
--------------
ಸ್ವತಂತ್ರ ಸಿದ್ಧಲಿಂಗ
ಕರಸ್ಥಲದಲ್ಲಿ ಶಿವಲಿಂಗವ ಬಿಜಯಂಗೈಸಿಕೊಂಡು ಕಣ್ಣ ಮುಚ್ಚಿ, ಬಾಯ ತೆರೆದು, ಅನ್ಯವ ನೆನೆವನ್ನಬರ ಇನ್ನು ಲಿಂಗದ ಮರ್ಮವನರಿದುದಿಲ್ಲ. ಉಂಟಾದುದ ಹುಸಿಮಾಡಿ, ಇಲ್ಲದುದ ನೆನೆದಡೆ ಅದು ಸಹಜವಾಗಬಲ್ಲುದೆ ? ದೇವದೇಹಿಕ ಭಕ್ತ, ಭಕ್ತದೇಹಿಕ ದೇವನೆಂದುದಾಗಿ, ತನ್ನೊಳಗೆ ಲಿಂಗ, ಲಿಂಗದೊಳಗೆ ತಾನು, ನೆನೆಯಲಿಲ್ಲ, ನೆನೆಯಿಸಿಕೊಳ್ಳಲಿಲ್ಲವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಯ್ಯಾ ನಾ ಉತ್ತರವನೇರಿ ನೋಡಲಾಗಿ, ಊರೊಳಗಣ ಉಲುಹೆಲ್ಲ ನಿಂದಿತ್ತು. ಪಶ್ಚಿಮಕ್ಕಿಳಿದು ನೋಡಲಾಗಿ, ಪ್ರಾಣ ಪವನನ ಸುಳುಹು ನಿಂದಿತ್ತು. ಪೂರ್ವವ ಮೆಟ್ಟಿ ನೋಡಲಾಗಿ, ಆರು ನೆಲೆ ಮೂರಾಗಿದ್ದವು. ಅಯ್ಯಾ ನಾ ದಕ್ಷಿಣಕ್ಕೆ ಬಂದು ನೋಡಲಾಗಿ ಈರೇಳು ಭವನವು ಕುಕ್ಷಿಯೊಳಗೆ ನಿಕ್ಷೇಪವಾಗಿದ್ದಿತು. ಅದು ಹೇಗೆಂದಡೆ : ಇಹಲೋಕವು ತನ್ನೊಳಗೆ, ಪರಲೋಕವು ತನ್ನೊಳಗೆ, ಸಚರಾಚರವೆಲ್ಲ ತನ್ನೊಳಗೆ, ಶಿವಶಕ್ತಿಯು ತನ್ನೊಳಗೆ, ಭುವನಾದಿ ಭುವನಂಗಳು ತನ್ನೊಳಗೆ. ಅದು ಹೇಗೆಂದಡೆ : ಅದಕ್ಕೆ ದೃಷ್ಟವ ಹೇಳಿಹೆನು, ಬಲ್ಲವರು ತಿಳಿದುನೋಡಿ, `ಒಂ ಏಕಮೇವನದ್ವಿತೀಯ' ಎಂಬ ಶ್ರುತಿ ಕೇಳಿ ಬಲ್ಲಿರೆ. ಇಂತಪ್ಪ ಮನಕ್ಕೆ ಒಂದಲ್ಲದೆ ಎರಡುಂಟೆ ? ತಾನಲ್ಲದೆ ಅನ್ಯೋನ್ಯವಿಲ್ಲಾಯೆಂದು ಅರಿದ ಮೇಲೆ ತನಗಿಂದ ಮುನ್ನ ಇವೇನಾದರು ಉಂಟೆ ? ಇದು ಕಾರಣ, ನಮ್ಮ ದೇವನೊಬ್ಬನೆ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಆತಂಗೆ ನಮೋ ನಮೋ ಎಂಬೆ.
--------------
ಹಡಪದ ಅಪ್ಪಣ್ಣ
ಕೇಳಿರೇ ಕೇಳಿರವ್ವಾ ಕೆಳದಿಯರೆಲ್ಲ. ಮನಕ್ಕೆ ಮನೋಹರವಾದ, ಕಂಗಳಿಗೆ ಮಂಗಳವಾದ, ಶೃಂಗಾರದ ಸೊಬಗಿನ ನಲ್ಲ ಬಂದು ಎನ್ನ ತನ್ನೊಳಗೆ ಮಾಡಿಕೊಂಡ ಒಂದು ವಿಪರೀತವ ಹೇಳುವೆ ಚಿತ್ತವೊಲಿದು ಲಾಲಿಸಿರವ್ವಾ. ಎನ್ನ ತನುವಿನೊಳಗೆ ತನ್ನ ತನುವನಿಟ್ಟು ಮಹಾತನುವಮಾಡಿದ. ಎನ್ನ ಮನದೊಳಗೆ ತನ್ನ ಮನವನಿಟ್ಟು ಘನಮನವಮಾಡಿದ. ಎನ್ನ ಪ್ರಾಣದೊಳಗೆ ತನ್ನ ಪ್ರಾಣವನಿಟ್ಟು ಚಿತ್‍ಪ್ರಾಣವಮಾಡಿದ. ಎನ್ನ ಜೀವದೊಳಗೆ ತನ್ನ ಜೀವವನಿಟ್ಟು ಸಂಜೀವನವಮಾಡಿದ. ಎನ್ನ ಭಾವದೊಳಗೆ ತನ್ನ ಭಾವವನಿಟ್ಟು ಸದ್ಭಾವವಮಾಡಿದ. ಎನ್ನ ಕರಣಂಗಳೊಳಗೆ ತನ್ನ ಕರಣಂಗಳನಿಟ್ಟು ಚಿತ್‍ಕರಣಂಗಳಮಾಡಿದ. ಎನ್ನ ಇಂದ್ರಿಯಂಗಳೊಳಗೆ ತನ್ನ ಇಂದ್ರಿಯಂಗಳನಿಟ್ಟು ಚಿದಿಂದ್ರಿಯಂಗಳಮಾಡಿದ. ಎನ್ನ ವಿಷಯಂಗಳೊಳಗೆ ತನ್ನ ವಿಷಯಂಗಳನಿಟ್ಟು ನಿರ್ವಿಷಯಂಗಳ ಮಾಡಿದನಾಗಿ, ಅಖಂಡೇಶ್ವರನೆಂಬ ನಲ್ಲನೊಳಗೆ ಕರ್ಪುರವೆಣ್ಣು ಉರಿಪುರುಷನನಪ್ಪಿ ರೂಪಳಿದಂತಾದೆನು ಕೇಳಿರವ್ವಾ.
--------------
ಷಣ್ಮುಖಸ್ವಾಮಿ
ತನ್ನೊಳಗೆ ತಾನು ತಾನಾದ ಬಳಿಕ ಭಿನ್ನಪ್ರಕೃತಿಗಳಿನ್ಯಾತಕಯ್ಯ. ಸನ್ಮಾರ್ಗದೊಳು ನಿಂದು, ಪರಕೆ ಪರವನಾಚರಿಸಬಲ್ಲಡೆ ಆತನೆ ಸ್ವಯಜ್ಞಾನಿ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎನ್ನ ಕರಕಮಲಮಧ್ಯದಲ್ಲಿ ಪರಮನಿರಂಜನದ ಕುರುಹ ತೋರಿದ. ಆ ಕುರುಹಿನ ಮಧ್ಯದಲ್ಲಿ ಅರುಹಿನ ಕಳೆಯ ತೋರಿದ. ಆ ಕಳೆಯ ಮಧ್ಯದಲ್ಲಿ ಮಹಾಜ್ಞಾನದ ಬೆಳಗ ತೋರಿದ. ಆ ಬೆಳಗಿನ ನಿಲವಿನೊಳಗೆ ಎನ್ನ ತೋರಿದ. ಎನ್ನೊಳಗೆ ತನ್ನ ತೋರಿದ. ತನ್ನೊಳಗೆ ಎನ್ನನಿಂಬಿಟ್ಟುಕೊಂಡ ಮಹಾಗುರುವಿಂಗೆ ನಮೋ ನಮೋ ಎನುತಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಿಃಕಳ ನಿರುಪಮ ತೇಜೋಮಯ ನಿರಂಜನಲಿಂಗದ ನೆನಹಿನ ಮಹಾಘನ ಮಹತ್ವವನುಳ್ಳ ಮಹಾಂತ ಅಖಂಡಪರಶಿವನೊಳಗೆ ಷಡ್‍ವಕ್ತ್ರವನುಳ್ಳ ಪರಬ್ರಹ್ಮವಿರ್ಪುದು, ಆ ಪರಬ್ರಹ್ಮದಲ್ಲಿ ಬ್ರಹ್ಮಾಂಡವಿರ್ಪುದು, ಆ ಬ್ರಹ್ಮಾಂಡದೊಳಗೆ ಸಕಲ ಸ್ಥಿರಚರಪ್ರಾಣಿಗಳಿರ್ಪುವು. ಆ ಪ್ರಾಣಿಗಳ ಸತ್ಕರ್ಮ ದುಷ್ಕರ್ಮದಿಂದಾದ ಪುಣ್ಯ ಪಾಪಂಗಳಿಂದೆ ಬಂದ ಸುಖದುಃಖಂಗಳನುಂಡು ಸೃಷ್ಟಿ ಸ್ಥಿತಿ ಲಯಕ್ಕೊಳಗಾಗಿ ಅನಂತಕಾಲ ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಬರುತಿರ್ಪುದು. ಆ ಬರುವದರೊಳಗೆ ಸತ್ಕರ್ಮದಿಂದ ಪುಣ್ಯವೊದಗಿ ಮಾನವಜನ್ಮ ಬರಲು ಈ ಮಾನವಜನ್ಮದ ಅಜ್ಞಾನಕ್ಕೆ ಆ ಮಹಾಮಹಾಂತ ಪರಿಮಳವನೊಳಕೊಂಡು ಮಹಾಂತಮಾರುತ ಸುಳಿಯಲು ಆ ಮಾರುತನ ಸೋಂಕಿಗೆ ಆ ಅಜ್ಞಾನ ಸುಜ್ಞಾನವಾಯಿತ್ತು. ಆ ಸುಜ್ಞಾನದಿಂದೆ ಸತ್ಕರ್ಮವ ಮಾಡಲು ಸಾಧುರಸಂಗವು ದೊರಕಿತ್ತು. ಆ ಸಾಧುರಸಂಗದಿಂದ ಸುಗುಣ ಅಳವಟ್ಟಿತ್ತು. ಆ ಸುಗುಣ ಅಳವಟ್ಟಲ್ಲಿ ಸಂಸಾರ ಹೇಯವಾಯಿತ್ತು. ಆ ಸಂಸಾರ ಹೇಯವಾದಲ್ಲಿ ಮುಕ್ತನಾಗಬೇಕೆಂಬೋ ಚಿಂತೆ ತಲೆದೋರಿತ್ತು. ಆ ಚಿಂತಾಪರವಶದಿಂದೆ ದುಃಖಗೊಂಡಿರಲು ಆ ಮಹಾಂತಪರಿಮಳವನೊಳಕೊಂಡು, ಮಹಾಂತಮಾರುತನೆಂಬ ಪ್ರಭುವೇ ತಾ ಮುನ್ನ ಸೋಂಕಿದ್ದಕ್ಕೆ ತನ್ನ ಬಯಸುವ ಶಿಷ್ಯನಲ್ಲಿಗೆ ತಾನೇ ಗುರುವಾಗಿ ಬಂದು, ಮೋಕ್ಷವಾಸನಿಗೆ ಅವಸ್ಥೆಯೊಳಗಿದ್ದ ಶಿಷ್ಯನ ಸಂತೈಸಿ, ಮಹಾಂತಪರಿಮಳವನುಳ್ಳ ಮುಕ್ತಿಫಲವಾಗುವ ಘನವೆಂಬ ಪುಷ್ಪಕ್ಕೆ ಮೂಲನೆನವಾದ ಮನವೆಂಬ ಲಿಂಗದಲ್ಲಿ ನಿಃಕಲವೇ ನಾನು, ನಾನೇ ನೀನು. ಹೀಗೆಂಬುವುದ ಉಸುರದೆ ಮರೆಗೈದು, ಆ ಲಿಂಗಮಂ ಪರಿಪೂರ್ಣವಾದ ಕರಕಮಲಕ್ಕೆ ಕೊಟ್ಟು ಮನವೆಂಬ ಲಿಂಗದ ನೆನವೆಂಬ ಬಳ್ಳಿಯೇ ಜಂಗಮವೆಂದು ತೋರಿ, ಆ ಬಳ್ಳಿಯ ಬೊಡ್ಡಿಯ ತಂಪು ಪಾದೋದಕವು. ಆ ಆನಂದ ತಂಪ್ಹಿಡಿಯುವುದಕ್ಕೆ ಮಡಿಯಾದ ಮೃತ್ತಿಕೆಯು ನಿರಂಜನಪ್ರಸಾದ. ಆ ಮೃತ್ತಿಕೆಗೆ ಒಡ್ಡಾದ ತೇಜೋಮಯವೇ ವಿಭೂತಿ, ಆ ತೇಜಸ್ಸು ಲಿಂಗಪೂಜೆಯೇ ರುದ್ರಾಕ್ಷಿ, ಆ ತೇಜಸ್ಸು ಲಿಂಗಸ್ಫುಟನಾದವೇ ನಿರುಪಮಮಂತ್ರ, ಇಂತೀ ಅಷ್ಟಾವರಣ ಘಟ್ಟಿಗೊಂಡು ಪೂಜಿಸಲಾಗಿ ಆ ಶಿಷ್ಯನು ಗುರುವ ಹಾಡಿ, ಲಿಂಗವ ನೋಡಿ, ಜಂಗಮವ ಪೂಜಿಸಿ, ಪಾದೋದಕವನ್ನುಪಾರ್ಜಿಸಿ, ಪ್ರಸಾದವನುಂಡು, ವಿಭೂತಿಯ ಲೇಪಿಸಿಕೊಂಡು, ರುದ್ರಾಕ್ಷಿಯ ಧರಿಸಿಕೊಂಡು, ಮಂತ್ರವ ಚಿತ್ತದೊಳಿರಿಸಿ ಆಚರಿಸಲು, ಆ ಶಿಷ್ಯನ ಕಾಯ ಆ ಗುರುವನಪ್ಪಿ ಸದ್ಗುರುವಾಯಿತ್ತು. ಮನವು ಲಿಂಗವ ಕೂಡಿ ಘನಲಿಂಗವಾಯಿತ್ತು. ಪ್ರಾಣ ಜಂಗಮವ ಮರೆಗೊಂಡು ನಿಜಜಂಗಮವಾಯಿತ್ತು. ತೃಷೆ ಪಾದೋದಕದಲ್ಲಿ ಮುಳುಗಿ ಆನಂದಪಾದೋದಕವಾಯಿತ್ತು. ಹಸಿವು ಪ್ರಸಾದದಲ್ಲಡಗಿ ಪ್ರಸಿದ್ಧಪ್ರಸಾದವಾಯಿತ್ತು. ಚಂದನ ವಿಭೂತಿಯಲ್ಲಿ ಸತ್ತು ಚಿದ್ವಿಭೂತಿಯಾಯಿತ್ತು. ಶೃಂಗಾರ ರುದ್ರಾಕ್ಷಿಯಲ್ಲಿ ಕರಗಿ ಏಕಮುಖರುದ್ರಾಕ್ಷಿಯಾಯಿತ್ತು. ಚಿತ್ತ ಮಂತ್ರದಲ್ಲಿ ಸಮರಸವಾಗಿ ಮೂಲಮಂತ್ರವಾಯಿತ್ತು. ಇಂಥಾ ಮೂಲಮಂತ್ರವೇ ಬ್ರಹ್ಮಾಂಡ, ಪಿಂಡಾಂಡ, ಸ್ಥಿರ, ಚರ, ಸಮಸ್ತಕ್ಕೆ ಕಾರಣ ಚೈತನ್ಯಸೂತ್ರವಾಗಿ ಅಂತರಂಗ ನಿವೇದಿಸಲು, ಅಲ್ಲಿ ಅಂತರಂಗದಲ್ಲಿ ತೋರುವ ಆರುಸ್ಥಲ, ಆರುಚಕ್ರ, ಆರುಶಕ್ತಿ, ಆರುಭಕ್ತಿ, ಆರುಲಿಂಗ, ಆರಾರು ಮೂತ್ತಾರು, ಇನ್ನೂರಾಹದಿನಾರು ತೋರಿಕೆಗೆ ಆ ಮೂಲಮಂತ್ರ ತಾನೇ ಕಾರಣ ಚೈತನ್ಯಸೂತ್ರವಾಗಿ ಕಾಣಿಸಲು ಸಮ್ಯಜ್ಞಾನವೆನಿಸಿತು. ಆ ಸಮ್ಯಜ್ಞಾನಬೆಳಗಿನೊಳಗೆ ಮುದ್ರೆ ಸಂಧಾನ ವಿವರ ವಿಚಾರದಿಂದೆ ಷಟ್ತಾರೆಗಳ ಸ್ವರೂಪದ ಆರುಭೂತ, ಆರುಮುಖ, ಆರುಹಸ್ತ, ಆರುಪ್ರಸಾದ, ಆರುತೃಪ್ತಿ, ಆರು ಅಧಿದೇವತೆ ಮೊದಲಾದ ಆರಾರು ಮೂವತ್ತಾರು ಇನ್ನೂರಾಹದಿನಾರು ಅನಂತ ತೋರಿಕೆಯೆಲ್ಲಾ ಮಂತ್ರಸ್ವರೂಪವೇ ಆಗಿ ತೋರಿದಲ್ಲಿ ತತ್ವಜ್ಞಾನವಾಯಿತು. ಒಳಗೇಕವಾದ ತತ್ವಜ್ಞಾನವು ಹೊರಗೆ ನೋಡಲು ಹೊರಗೇಕವಾಗಿ ತೋರಿತು. ಒಳಹೊರಗೆಂಬಲ್ಲಿ ನಡುವೆಂಬುದೊಂದು ತೋರಿತು. ಈ ಮೂರು ಒಂದೇ ಆಗಿ, ಒಂದೇ ಬ್ಯಾರೆ ಬ್ಯಾರೆ ಸ್ಥೂಲ ಸೂಕ್ಷ್ಮ ಕಾರಣ ಮೂರಾದಲ್ಲಿ ಆತ್ಮಜ್ಞಾನವಾಯಿತು. ಆ ಆತ್ಮಜ್ಞಾನದಿಂದ ಆತ್ಮಾನಾತ್ಮ ವಿಚಾರ ಗಟ್ಟಿಗೊಂಡಲ್ಲಿ ಮಹಾಜ್ಞಾನಪ್ರಕಾಶವಾಯಿತು. ಆ ಮಹಾಜ್ಞಾನದಿಂದೆ ಅನುಭವದ ದೃಷ್ಟಿಯಿಡಲು ಬೊಂಬೆಸೂತ್ರ ಆಡಿಸುವವನಂತೆ ಬ್ಯಾರೆ ಬ್ಯಾರೆ ಕಾಣಿಸಲು ಈ ಬೊಂಬೆಯ ಸೂತ್ರ ಆಡಿಸುವವನು ಇವು ಮೂರು ಎಲ್ಲಿಹವು, ಏನೆಂದು ತೂರ್ಯವೇರಿ ಸೂರೆಗೊಂಡಲ್ಲಿ ಸ್ವಯಂಬ್ರಹ್ಮವೆನಿಸಿತ್ತು. ಆ ಸ್ವಯಂಬ್ರಹ್ಮಜ್ಞಾನವು ತನ್ನ ತಾ ವಿಚಾರಿಸಲು ತನ್ನೊಳಗೆ ಜಗ, ಜಗದೊಳಗೆ ತಾನು, ತಾನೇ ಜಗ, ಜಗವೇ ತಾನೆಂಬಲ್ಲಿ ನಿಜಜ್ಞಾನವಾಯಿತು. ಆ ನಿಜಜ್ಞಾನದಿಂದೆ ನಿಜವರಿಯಲು ಆ ನಿಜದೊಳಗೆ ತಾನೇ ಜಗ, ಜಗದೊಳಗೆ ತಾನೇ ಎಂಬೋ ಎರಡಿಲ್ಲದೆ ತಾನೆ ತಾನೆಂಬೊ ಅರುವಾಯಿತು. ಆ ಅರುವು ಮರೆಗೊಂಡು ಕುರುಹು ಉಲಿಯದೆ ನಿರ್ಬೈಲಾಗಲು ಮಹಾಂತನೆಂಬ ಹೆಸರಿಲ್ಲದೆ ಹೋಗಿ ಏನೋ ಆಯಿತ್ತು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನಷ್ಟು ... -->