ಅಥವಾ

ಒಟ್ಟು 119 ಕಡೆಗಳಲ್ಲಿ , 49 ವಚನಕಾರರು , 104 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಗವನರಿದು ಜರೆದು ಸಂಗಸಂಬಂಧವಾದ ಚಿನುಮಯ ಚನ್ನಮಹೇಶ್ವರನ ತನುಮನಭಾವಂಗಳು ಮತ್ತೊಂದಕ್ಕೆ ಆಸ್ಪದವಿರಹಿತವಾಗಿರ್ದವು. ಅದೆಂತೆಂದೊಡೆ, ಗುರುಭಕ್ತಿಸೇವಾನುಕೂಲಿ ಕಾಯದ ಗತಿಯುಳ್ಳನ್ನಕ್ಕರ ಕಂಡು ಮಾಡಿ ವಿನೋದಿಸಬೇಕೆಂಬುದೊಂದು ನಿರುತ, ಮಂತ್ರ ಧ್ಯಾನ ಜಪ ಸ್ತೋತ್ರಾದಿಗಳಿಂದೆ ಲಿಂಗಾರ್ಚನೆಯವಸರ ಮನವುಳ್ಳನ್ನಕ್ಕರ ಮಾಡಿ ನೋಡಿ ಆನಂದಿಸಬೇಕೆಂಬುದೊಂದು ನಿಷ್ಠೆ. ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಾರಾಧನೆ ಪ್ರಾಣಾದಿ ದ್ರವ್ಯವುಳ್ಳನ್ನಕ್ಕರ ಮಾಡಿ ನೀಡಿ ಸುಖಿಸಬೇಕೆಂಬುದೊಂದು ಭಾವದ ನಿರುತ. ಇಂತು ತ್ರಿವಿಧ ಪದದಲ್ಲಿ ತ್ರಿವಿಧ ವಿದ್ಯಾಸನ್ನಿಹಿತನಾಗಿ ಎಡೆದೆರಹಿಲ್ಲದಿರುತಿರ್ದನು ಗುರುನಿರಂಜನ ಚನ್ನಬಸವಲಿಂಗನಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಷಡ್ವಿಧ ಚಕ್ರಂಗಳಿಲ್ಲದಂದು, ಷಡ್ವಿಧ ಮೂರ್ತಿಗಳಿಲ್ಲದಂದು, ಷಡ್ವಿಧ ಲಿಂಗಂಗಳಿಲ್ಲದಂದು, ಷಡ್ವಿಧ ಶಕ್ತಿಗಳಿಲ್ಲದಂದು, ಷಡ್ವಿಧ ಭಕ್ತಿಯಿಲ್ಲದಂದು, ಷಡ್ವಿಧ ಹಸ್ತಂಗಳಿಲ್ಲದಂದು, ಷಡ್ವಿಧ ಕಲೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಅಕಾರ ಉಕಾರ ಮಕಾರಗಳಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ಗುರು ಲಿಂಗ ಜಂಗಮವಿಲ್ಲದಂದು, ಇಷ್ಟ ಪ್ರಾಣ ಭಾವಂಗಳಿಲ್ಲದಂದು, ಧ್ಯಾನ ಧಾರಣ ಸಮಾದ್ಥಿಗಳಿಲ್ಲದಂದು, ನಾಮ ರೂಪ ಕ್ರಿಯೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಮನ ನಿರ್ಮನಂಗಳಿಲ್ಲದಂದು, ಭಾವ ನಿರ್ಭಾವಂಗಳಿಲ್ಲದಂದು, ಜ್ಞಾನ ಮಹಾಜ್ಞಾನಂಗಳಿಲ್ಲದಂದು, ಶಬ್ದ ನಿಃಶಬ್ದಂಗಳಿಲ್ಲದಂದು, ಆತ್ಮ ನಿರಾತ್ಮಂಗಳಿಲ್ಲದಂದು, ನಾನು ನೀನಿಲ್ಲದಂದು, ಅತ್ತತ್ತಲೆ. ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ಅಪರಂಪರ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರ್ಗಮನಿಯಾದ ಶರಣಂಗೆ ಸಂಧಾನವಲ್ಲದೆ ಗಮನಿಯಾದ ಶರಣಂಗೆ ಅನುಗೊಳದೆಂಬ ಅಣ್ಣಗಳು ನೀವು ಕೇಳಿರೇ. ಸೂರ್ಯನು ರಥವನೇರಿ ಪದಾರ್ಥಂಗಳ ಚಬುಕುಮಾಡಿ ಮನೋವೇಗದಿಂ ಪಶ್ಚಿಮ ಸಮುದ್ರಕ್ಕೆ ದಾಳಿಯಿಡಲು ರವಿಕಿರಣಂಗಳು ಹಿಂದುಳಿದಿಪ್ಪವೇ? ಅದು ಕಾರಣ- ಪುಷ್ಪವಿದ್ದಲ್ಲಿ ಪರಿಮಳವಿಪ್ಪುದು. ಅಂಗವಿದ್ದಲ್ಲಿ ಲಿಂಗವಿಪ್ಪುದು. ಲಿಂಗವಿದ್ದಲ್ಲಿ ಆ ಲಿಂಗದ ಮೇಲೆ ಮನವಿಪ್ಪುದು. ಲಿಂಗದ ಮೇಲೆ ಮನವಿಪ್ಪಲ್ಲಿಯೇ ಶರಣ. ಆ ಶರಣ ನಡೆದಲ್ಲಿಯೇ ಉರಿವಗ್ನಿಯ ಮೇಲೆ ತಂಗಾಳಿ ಬೀಸಿದಂತೆ. ತ್ರಿಪುಟಿಯ ಮೇಲೆ ಚಿದ್ಭೆಳಗು ಓಲಾಡುತ್ತಿದೆ. ಆ ಶರಣ ನೋಡುವಲ್ಲಿಯೇ ಪ್ರಣವದ ಬಳ್ಳಿ ಮನವ ಸುತ್ತುತ್ತಿದೆ. ಆ ಶರಣ ನೋಡುವಲ್ಲಿಯೇ ಪಂಚವರ್ಣಂಗಳ ಸ್ವರೂಪು ಲಿಂಗಾರ್ಪಿತವಾಗುತ್ತಿದೆ. ಶರಣ ಕುಂಬ್ಥಿಸುವಲ್ಲಿಯೇ ಓಂಕಾರ ಒಡಗೂಡುವುದಯ್ಯ. ಶರಣ ರೇಚಿಸುವಲ್ಲಿಯೇ ಪಂಚಾಕ್ಷರಂಗಳು ಎಡೆಯಾಡುತ್ತಿವೆ. ಶರಣ ಸುಳಿವಲ್ಲಿಯೇ ಹಲವು ಪ್ರಕಾರದ ವಸ್ತುಗಳ ತನುಸೋಂಕು ಲಿಂಗಮನವ ತುಂಬುತ್ತಿದೆ. ಇದು ಕಾರಣ ತೋಂಟದಾರ್ಯನ ಕರುಣಪ್ರಸಾದಮಂ ಪಡೆದು ತತ್ವಸ್ವರೂಪ ಧ್ಯಾನ ಧಾರಣ ಅರ್ಪಿತಾವಧಾನವನರಿದ ಶರಣಂಗೆ ಗಮನಾಗಮನವೆಂಬುಭಯವುಂಟೇ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಇನ್ನು ಪ್ರಾಣಾಯಾಮದ ಲಕ್ಷಣವೆಂತೆಂದೊಡೆ : ಪ್ರಾಕೃತಪ್ರಾಣಾಯಾಮವೆಂದು, ವೈಕೃತಪ್ರಾಣಾಯಾಮವೆಂದು, ಆ ಎರಡರಿಂ ಪೊರತಾದ ಕೇವಲ ಕುಂಭಕವೆಂದು, ಮೂರು ಪ್ರಕಾರವಾಗಿರ್ಪುದದೆಂತೆನೆ : ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು ಹಂಸ ಹಂಸವೆಂದುಚ್ಚರಿಸುವ ಅಹಂಕಾರಾತ್ಮಕವಾದ ಜೀವಜಪವೇ ಪ್ರಾಕೃತ ಪ್ರಾಣಾಯಾಮವೆನಿಸುವುದು. ಮತ್ತಾ ಜೀವಜಪವನು ಗೂರೂಪದೇಶದಿಂದೆ ಲೋಪವಮಾಡಿ ಸೋಹಂ ಸೋಹಂ ಎಂಬ ಮಂತ್ರಸಂಸ್ಕಾರದಿಂದುಚ್ಚರಿಸುವುದೆ ವೈಕೃತಪ್ರಾಣಾಯಾಮವೆನಿಸುವುದು. ಆ ವೈಕೃತಪ್ರಾಣಾಯಾಮವೆ ಇನ್ನೊಂದು ಪ್ರಕಾರವಾಗಿ ಪೇಳಲ್ಪಡುವುದದೆಂತೆನೆ : ಕನಿಷ್ಠೆ ಅನಾಮಿಕೆಗಳಿಂದೆ ಈಡನಾಡಿಯಂ ಬಲಿದು, ಪಿಂಗಳನಾಡಿಯಿಂದೆ ದೇಹಾಂತರ್ಗತ ವಾಯುಮಂ ಅಕಾರೋಚ್ಚರಣದಿಂ ಪನ್ನೆರಡು ಮಾತ್ರೆ ರಚಿಸಿ, ಮತ್ತೆ ಪಿಂಗಳನಾಡಿಯಂ ಅಂಗುಷ್ಠದಿಂ ಬಲಿದು, ಈಡಾನಾಡಿಯಿಂದೆ ಪನ್ನೆರಡು ಮಾತ್ರೆ ಉಕಾರೋಚ್ಚರಣದಿಂ ಪೂರಿಸಿ, ನಾಬ್ಥಿ ಹೃದಯ ಕಂಠವೆಂಬ ತ್ರಿಸ್ಥಾನದೊಳೊಂದರಲ್ಲಿ ಪನ್ನೆರಡು ಮಾತ್ರೆ ಮಕಾರೋಚ್ಚರಣದಿಂ ತುಂಬಿಪುದೆ ಕನಿಷ್ಠಪ್ರಾಣಾಯಾಮವೆನಿಸುವುದು. ಅದೆಂತೆಂದೊಡೆ : ಶೀಘ್ರವಲ್ಲದೆ ವಿಳಂಬವಲ್ಲದೆ ಜಾನುಪ್ರದಕ್ಷಿಣಮಂ ಮಾಡಿ, ಅಂಗುಲಿಸ್ಫೋಟನಮಂ ಮಾಡಿದರೆ ಒಂದು ಮಾತ್ರೆ ಎನಿಸುವುದು. ಇಂತಹ ಮಾತ್ರೆ ಪನ್ನೆರಡು ಆದರೆ ಕನಿಷ್ಠವೆನಿಸುವುದು. ಮತ್ತಾ ಮಾತ್ರೆ ಇಪ್ಪತ್ತು ನಾಲ್ಕಾದರೆ ಮಧ್ಯಮವೆನಿಸುವುದು. ಬಳಿಕಾ ಮಾತ್ರೆ ಮೂವತ್ತಾರಾದರೆ ಉತ್ತಮವೆನಿಸುವುದು. ಇಂತೀ ಮೂವತ್ತಾರು ಮಾತ್ರೆಗಳು ಮಂತ್ರ ಸ್ಮರಣೆ ಧ್ಯಾನ ಸಹಿತಮಾಗಿ ಮಾಳ್ಪುದೆ ಪ್ರಾಣಾಯಾಮದಲ್ಲಿ ಉತ್ತಮ ಪ್ರಾಣಾಯಾಮವೆನಿಸುವುದು. ಇನ್ನು ಕೇವಲ ಕುಂಭಕವೆಂತೆನೆ : ವಾಮಭಾಗದ ಈಡಾನಾಡಿಯೇ ಚಂದ್ರನಾಡಿಯೆಂದು ಯಮುನಾನದಿ ಎಂದು ಪೇಳಲ್ಪಡುವುದು. ದಕ್ಷಿಣಭಾಗದ ಪಿಂಗಳನಾಡಿಯೇ ಸೂರ್ಯನಾಡಿಯೆಂದು ಗಂಗಾನದಿಯೆಂದು ಪೇಳಲ್ಪಡುವುದು. ಸುಷುಮ್ನೆಯೆಂಬ ಮಧ್ಯನಾಡಿಯೇ ಅಗ್ನಿಯೆಂದು ಸರಸ್ವತಿನದಿಯೆಂದು ಪೇಳಲ್ಪಡುವುದಾಗಿ, ಆ ನದಿತ್ರಯಂಗಳ ಸಂಬಂಧದಿಂ ತ್ರಿವೇಣಿಯೆಂಬ ಯೋಗಸ್ಥಲಕೆ ತ್ರಿಕೂಟವೆಂದು, ಮಧ್ಯಹೃದಯವೆಂದು, ಕಾಶಿಕ್ಷೇತ್ರವೆಂದು, ಕೂರ್ಚವೆಂದು ಆಜ್ಞಾಚಕ್ರವೆಂದು, ಪರ್ಯಾಯ ನಾಮಂಗಳನುಳ್ಳ ಶಿವಧ್ಯಾನಕ್ಕೆ ರಹಸ್ಯವಾದ ಭ್ರೂಮಧ್ಯಸ್ಥಾನದಲ್ಲಿ ಮನೋಮಾರುತಂಗಳನೈದಿಸಿ ಯೋಗಮಂ ಸಾದ್ಥಿಸಲ್ತಕ್ಕುದೇ ಪ್ರಾಣಾಯಾಮಾಭ್ಯಾಸ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸತಿಸುತ ಮಾತಾಪಿತರಂದದಿ ಮೋಹದಲಿ ಮನಮಗ್ನವಾದರೆ, ಅವನಿಗೆ ಲಿಂಗವಿಲ್ಲ , ಲಿಂಗಕ್ಕೆ ತಾನಿಲ್ಲ. ಅದೇನು ಕಾರಣವೆಂದರೆ, ಆತನ ಧ್ಯಾನ ಸತಿಯ ಮೇಲೆ ಸುತರ ಮೇಲೆ ಮಾತಾಪಿತರ ಮೇಲೆ ಇಪ್ಪುದಲ್ಲದೆ, ಲಿಂಗದ ಮೇಲಿಲ್ಲ. ಅದು ಕಾರಣ, ಆತ ಕಟ್ಟಿದುದು ಲಿಂಗವಲ್ಲ , ತೊಟ್ಟುದುದು ವಿಭೂತಿ ರುದ್ರಾಕ್ಷಿಯಲ್ಲ . ಅದು ಕಾರಣ, ಆತನಾಚಾರಕ್ಕೆ ದೂರ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಸರ್ವಕಳಾ ಚಿತ್ರ ವಿಚಿತ್ರವೆಂಬ ಮೋಹನ ಚಿಚ್ಫಕ್ತಿಯು ವೇದೋಪನಿಷತ್ತು ಶಾಸ್ತ್ರ ಆಗಮ ಪುರಾಣ ಶಬ್ದ ಜ್ಯೋತಿಷ ವ್ಯಾಕರಣ ಯೋಗಾಭ್ಯಾಸ ವೀಣಾಭರಣ[ತ?] ಛಂದಸ್ಸು ನಾಟಕಾಲಂಕಾರ ಇಂತೀ ಪರೀಕ್ಷೆಯು ನೋಡುವ ಅಯ್ಯಗಳ ಎಲ್ಲ ತನ್ನ ಜವನಿಕೆಯೊಳಗೆ ಕೆಡಹಿಕೊಂಡಿತ್ತು. ಧ್ಯಾನ ಮೌನದಿಂದ ಕಂಡೆಹೆನೆಂಬವರ ಅಜ್ಞಾನಕೆ ಒಡಲುಮಾಡಿತ್ತು. ತತ್ವದವ ನೋಡೆಹೆನೆಂಬವರ ಮೆಚ್ಚಿಸಿ ಮರುಳುಮಾಡಿತ್ತು. ಅಂಗವೆಲ್ಲವನರಿದೆನೆಂಬವರ ಹಿಂಗದೆ ತನ್ನ ಅಂಗದ ಬಲೆಯೊಳಗೆ ಕೆಡಹಿತ್ತು. ಲಿಂಗಮೋಹಿಗಳೆಂಬವರ ತನ್ನ ಸಂಗದ ಅನಂಗನ ಅಂತರಂಗಕ್ಕೆ ಒಳಗುಮಾಡಿತ್ತು. ವೇದವೇದ್ಯವೆಂಬರೆಲ್ಲರನು ಏಕಾಂತದೊಳಗೆ ತಳಹೊ[ವ?]ಳಗೊಳಿಸಿತ್ತು. ಕಣ್ಣ ಮುಚ್ಚಿ ಜಪ ಧ್ಯಾನ ಶೀಲ ಮೌನ ನೇಮ ನಿತ್ಯವ ಹಿಡಿವ ವ್ರತಿಗಳ ನಾನಾ ಭವದಲ್ಲಿ ಬರಿಸಿತ್ತು. ವಾಗದ್ವೈತವ ನುಡಿವ ಅರುಹಿರಿಯರೆಂಬವರ ಜಾಗ್ರದಲ್ಲಿ ಆಕ್ರಮಿಸಿಕೊಂಡಿತ್ತು. ಸ್ವಪ್ನದಲ್ಲಿ ಮೂಅರ್sತರ ಮಾಡಿತ್ತು. ಸುಷುಪ್ತಿಯಲ್ಲಿ ಕಂಡೆನೆಂಬವರ ವ್ಯಾಪ್ತಿಯೆಂಬ ಬೇಳುವೆಗೊಳಗುಮಾಡಿತ್ತು. ಇಂತೀ ತ್ರಿವಿಧದೊಳ ಹೊರಗಿನ ಭೇದವನರಿಯದ ಪ್ರಪಂಚುದೇಹಿಗಳಿಗೆ ವಿರಕ್ತಿ ಇನ್ನೆಲ್ಲಿಯದು ? ಘಟಿಸದು ಕಾ[ಣಾ]. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ನಿರ್ಧರವಾದಲ್ಲಿ ನಿವಾಸವಾಗಿಪ್ಪನು.
--------------
ಬಾಚಿಕಾಯಕದ ಬಸವಣ್ಣ
ಅಯ್ಯ, ನಿನ್ನ ಸ್ವಾತ್ಮಜ್ಞಾನದಿಂದ ಶ್ರುತಿಗುರುಸ್ವಾನುಭಾವವಿಡಿದು, ನಿನ್ನ ತನು-ಮನ-ಕರಣ-ಇಂದ್ರಿಯಂಗಳ ಪರಿಪಕ್ವವ ಮಾಡಿ, ಆ ತನು-ಮನ-ಕರಣ-ಇಂದ್ರಿಯಂಗಳ ಆಶ್ರೈಸಿದ ಅರ್ಥಪ್ರಾಣಾಬ್ಥಿಮಾನಂಗಳ ಶ್ರೀಗುರುಲಿಂಗಜಂಗಮ ಭಕ್ತಮಾಹೇಶ್ವರ ಶರಣಗಣಂಗಳಿಗರ್ಪಿತವಮಾಡಿ, ನಿರ್ವಂಚಕಬುದ್ಧಿ ಮುಂದುಗೊಂಡು, ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಇಷ್ಟಲಿಂಗವ ತೃಪ್ತಿಮಾಡಿ, ಮಂತ್ರ ಧ್ಯಾನ ಜಪಸ್ತೋತ್ರಂಗಳಿಂದ ಪ್ರಾಣಲಿಂಗವ ತೃಪ್ತಿಮಾಡಿ, ಮನೋರ್ಲಯ ನಿರಂಜನ ಪೂಜಾಕ್ರಿಯೆಗಳಿಂದ ಭಾವಲಿಂಗವ ತೃಪ್ತಿಮಾಡಿ, ಗುರುಲಿಂಗಜಂಗಮದ ಪಾದೋದಕ ಪ್ರಸಾದದಿಂದ ಮತ್ತಾ ಗುರುಲಿಂಗಜಂಗಮದ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಮೊದಲಾದ ಮಹಾಪ್ರಮಥಗಣಂಗಳ ತೃಪ್ತಿಮಾಡಿ, ತನಗೊಂದಾಶ್ರಯಂಗಳಿಲ್ಲದೆ, ಚಿದ್ಘನಲಿಂಗದಲ್ಲಿ ಅವಿರಾಳನಂದದಿಂದ ಕೂಟಸ್ಥನಾಗಿರುವಂದೆ ನಿಸ್ಸಂಸಾರದೀಕ್ಷೆ. ಇಂತುಂಟೆಂದು ಶ್ರೀಗುರು ನಿಷ್ಕಳಂಕ ನಿಷ್ಪ್ರಪಂಚ ನಿರಾಲಂಬ ನಿಷ್ಕಾಮ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಗಜ ಗಮನ, ಅಹಿತ ಶರಸಂಧಾನ, ಮಯೂರನ ಶಯನ, ಮಾರ್ಜಾಲನ ಧ್ಯಾನ, ಕಂಠೀರವನ ಲಾಗು, ಬಕಮೂರ್ತಿಯ ಅನುಸಂಧಾನ, ಅಳಿಯ ಗಂಧ ಭುಂಜನೆ, ಮಧು ಮಕ್ಷಿಕದ ಘೃತಗೊಡ ವಾಸ, ಮೂಷಕದ ದ್ವಾರಭೇದ, ಮರೆವಾಸವೈದುವ ಸಂಚ, ಚೋರನ ಕಾಹು, ಪರಿಚಾರಕನ ವೇಳೆ, ಸಾಹಿತ್ಯನ ಉಪಮೆ, ಸಂಗೀತರ ಸಂಚು, ತಾಳಧಾರಿಯ ಕಳವು, ವಾದ್ಯಭೇದಕನ ಮುಟ್ಟು, ಘ್ರಾಣನ ಹರಿತ, ಭಾವಜ್ಞನ ಚಿತ್ತ . ಇಂತೀ ನಾನಾ ಗಣಂಗಳ ಲಕ್ಷಾಲಕ್ಷಿತವ ತಿಳಿದು, ಶ್ರುತ ದೃಷ್ಟ ಅನುಮಾನ ಮುಂತಾದ ನಾನಾ ಭೇದಂಗಳಲ್ಲಿ ವಿಚಾರಿಸಿ ಕಂಡು, ನಾನಾರೆಂಬುದದೇನೆಂದು ತಿಳಿದು, ತನಗೂ ಇದಿರಿಂಗೂ ಪಡಿಪುಚ್ಚವಿಲ್ಲದೆ, ಸಿಂಧುವಿನೊಳಗಾದ ಸಂಭ್ರಮಂಗಳ ಸಂಚಾರದ ಅಂಗವೆಲ್ಲ ಹೋಗಿ ನಿರಂಗವಾದಂತೆ. ಅಂಗವಾತ್ಮನ ಸಂಗ, ಈ ಅಂಗವೆಂದು ತಿಳಿದು, ಆವ ಸ್ಥಲವನಂಗೀಕರಿಸಿದಲ್ಲಿಯೂ ಪರಿಪೂರ್ಣವಾಗಿ ಏನ ಹಿಡಿದಲ್ಲಿಯೂ ತಲೆವಿಡಿಯಿಲ್ಲದೆ ಏನ ಬಿಟ್ಟಲ್ಲಿಯೂ ಕುಳವಿಡಿಯಿಲ್ಲದೆ ಕರ್ಪುರ ಮಹಾಗಿರಿಯ ಸುಟ್ಟಡೆ ಒಕ್ಕುಡಿತೆ ಬೂದಿ ಇಲ್ಲದಂತೆ, ಚಿತ್ತನಿಶ್ಚಯವಾದ ಸದ್ಭಕ್ತ ಪರಮ ವಿರಕ್ತನ ಇರವು ಇದು. ಎನ್ನೊಡೆಯ ಚೆನ್ನಬಸವಣ್ಣನ ಹರವರಿಯ ತೆರನಿದು. ಸಾಧ್ಯ ಮೂವರಿಗಾಯಿತ್ತು , ಅಸಾಧ್ಯವಸಂಗತ. ನಿಃಕಳಂಕ ಕೂಡಲಚೆನ್ನ ಸಂಗಮದೇವರೆಂದರಿದವಂಗೆ ಅಸಾಧ್ಯ ಸಾಧ್ಯವಾಯಿತ್ತು ?
--------------
ಹಡಪದ ರೇಚಣ್ಣ
ಮರ್ಕಟನ ಉಚಿತ, ವಿಹಂಗನ ಪವನ, ಪಿಪೀಲಿಕನ ಧ್ಯಾನ, ತ್ರಿವಿಧಾತ್ಮನ ಭೇದ, ಸ್ಥೂಲದ ವಿವರ, ಸೂಕ್ಷ ್ಮದ ಸುಳುಹ, ಕಾರಣದ ಚೋದ್ಯ. ಇಂತೀ ತ್ರಿವಿಧ ವಿವರಂಗಳಲ್ಲಿ ತತ್ವಮಸಿ ಎಂಬ ಭಿತ್ತಿಯ ವಿಚಾರಿಸಿ ಶ್ರುತದಲ್ಲಿ ಕೇಳದುದ ದೃಷ್ಟದಲ್ಲಿ ಕಂಡುದ ಅನುಮಾನದಲ್ಲಿ ಅರಿದುದ ಭಿನ್ನವಿಲ್ಲದೆ ಚಿನ್ಮಯಮೂರ್ತಿ ತಾನಾಗಿ ಕರ್ಮಕ್ರೀಯಲ್ಲಿಯೆ ಲೋಪ. ಶಂಭುವಿನಿಂದಿತ್ತ ಸ್ರಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 69 ||
--------------
ದಾಸೋಹದ ಸಂಗಣ್ಣ
ಸೀಮೆ ಸಂಬಂಧಗಳ ಮೀರಿಪ್ಪ ಮಂತ್ರಕ್ಕೆ ರಾಜಮಂತ್ರನು ತಾನು ಪಂಚಾಕ್ಷರಿ. ಪಂಚಾಕ್ಷರಿಯ ಗುಣದ ಬಸವಾಕ್ಷರತ್ರಯದ ಧ್ಯಾನ ಮೌನದ ಗುಣದ ಸತ್ವವಿಡಿದು, ಆನಂದ ತ್ರೈಲಿಂಗ ಮೂಲಮಂತ್ರಕ್ಕೀಗ ಬಸವಾಕ್ಷರವು ಮಾತೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಧ್ಯಾನ ಧಾರಣ ಸಮಾಧಿ ಯೋಗಂಗಳಿಂದ ಕಾಬುದು ತನುಪ್ರಾಪ್ತಿ ಐಸೆ ? ಅದು ಸ್ಥೂಲ ಸೂಕ್ಷ್ಮ ಕಾರಣಕ್ಕೆ ಘಟಯೋಗಸಂಬಂಧ. ಅದು ಬ್ರಹ್ಮನ ಭಿತ್ತಿ, ವಿಷ್ಣುವಿನ ಆಗು, ರುದ್ರನ ಚೇಗೆ, ಅದು ಗುರು ಚರ ಪರಕ್ಕೆ ಕೊಟ್ಟ ಹಸಿಗೆ. ಸಾಕಾರದಲ್ಲಿ ಕಂಡು, ನಿರಾಕಾರದಲ್ಲಿ ಅರಿದು, ಬೆಳಗಿನ ಬಯಲಲ್ಲಿ ನಿರವಯಾಂಗನಾಗಿ ಇರಬೇಕು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ
ಇಷ್ಟಲಿಂಗದ ಮುಖವಾವುದು? ಪ್ರಾಣಲಿಂಗದ ಮುಖವಾವುದು? ಭಾವಲಿಂಗದ ಮುಖವಾವುದು ಎಂದರೆ ಹೇಳಿಹೆ ಕೇಳಿರಣ್ಣ: ಇಷ್ಟಲಿಂಗದ ಮುಖವೈದು: ಪ್ರಾಣ ವಾಯುಗಳ ಮುಖವನೆಯ್ದಿ ಪ್ರಾಣಲಿಂಗವೆನಿಸಿಕೊಂಡಿತ್ತು. ಭಾವವನೆಯ್ದಿ ಭಾವಲಿಂಗವೆನಿಸಿಕೊಂಡಿತ್ತು. ಒಂದೇ ಲಿಂಗ ತನುತ್ರಯಂಗಳಲ್ಲಿ ಇಷ್ಟ ಪ್ರಾಣ ಭಾವ ರೂಪಕವಾಗಿಪ್ಪುದು. ಜೀವತ್ರಯಂಗಳಲ್ಲಿ ಮಂತ್ರ ಜ್ಞಾನ ಧ್ಯಾನ ರೂಪಕವಾಗಿಪ್ಪುದು. ಅವಸ್ಥಾನತ್ರಯಂಗಳಲ್ಲಿ ಸತ್ಕಿ ್ರಯಾಚರಣೆ ತದ್ವಾಸನೆ ತಲ್ಲೀಯ್ಯವಾಗಿಪ್ಪುದು. ಮಲತ್ರಯಂಗಳಲ್ಲಿ ಸ್ವಯ ಚರ ಪರ ರೂಪಕವಾಗಿಪ್ಪುದು. ಈಷಣತ್ರಯಂಗಳಲ್ಲಿ ಲಿಂಗ ಪ್ರೇಮರತಿಗೆ ಸಕಲಸಾಧನಂಗಳಾಗಿ ಮಾಯಾಭ್ರಾಂತಿಯನು ನಿಭ್ರಾಂತಿಯೆನಿಸಿ ಶುದ್ಧ ಪ್ರಭಾ ಪರಿಪೂರ್ಣ ಲಿಂಗ ತಾನೆ ಪ್ರಸನ್ನ ಪ್ರಸಾದ ರೂಪಕನಾಗಿರುತಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾಯೆ ಮಹಾಸಂಚಲವೆಂಬ ಸುಳಿಗಾಳಿಯೊಳು ಸಿಕ್ಕಿದ ತರಗೆಲೆಯಂತೆ, ತಳಹಳಗೊಳ್ಳುತ್ತಿದಿತೀ ಜಗವೆಲ್ಲವು ಎನಗಿನ್ನೆಂತೊ, ಎನಗಿನ್ನೆಂತಯ್ಯಾ. ಬಲ್ಲೆನೆಂಬವರ ಬಾಯ ಟೊಣೆಯಿತ್ತು ಮಾಯೆ. ಆಗಮಿಕರ ಮೂಗ ಕೊಯ್ಯಿತ್ತು ಮಾಯೆ. ಅನುಭಾವಿಗಳೆಲ್ಲರೂ ಮನವಿಕಾರಕ್ಕೆ ಒಳಗಾದರು. ಅರಿದೆನೆಂಬವರೆಲ್ಲರೂ ಮರಹಿಂಗೆ ಬೀಜವಾದರು. ಬ್ರಹ್ಮಿಗಳೆಲ್ಲರೂ ಹಮ್ಮಿಂದ ಹಗರಣದ ಮರುಳಂಗಳಾದರು ವಿರಕ್ತರೆಲ್ಲರೂ ಯುಕ್ತಿಗೆಟ್ಟು ಭವಮಾಲೆಗೊಳಗಾದರು. ನಿರ್ವಾಣಿಗಳೆಲ್ಲರೂ ಸೆರೆಸಂಕಲೆಗೊಳಗಾದರು. ಯೋಗಿಗಳೆಲ್ಲರೂ ವಿಕಳವೆಂಬ ರೋಗಕ್ಕೆ ಒಳಗಾದರು. ತಪಸಿಗಳೆಲ್ಲರೂ ಕಪಟ ಕಳವಳಕ್ಕೊಳಗಾದರು. ಧ್ಯಾನ ಮೌನ ವ್ರತ ನಿತ್ಯ ನೇಮ ಕರ್ಮ ಕ್ರಿಯೆಗಳು ವಸ್ತುವ ಮರೆದು, ಮಾಯಾಧೂಳಿನೊಳಗೆ ಸಿಕ್ಕಿ ವಿಕಳತೆಗೊಂಡು, ನೆನೆವ ಮನ, ವಾಸಿಸುವ ಘ್ರಾಣ, ನೋಡುವ ನೇತ್ರ, ನುಡಿವ ನಾಲಗೆ, ನಡೆವ ಪಾದದ್ವಯಗಳೆಲ್ಲ ಭ್ರಮೆಗೊಳಗಾಯಿತ್ತಯ್ಯ. ಶಿವಶಿವಾ ಮಹಾದೇವಾ, ಇದೆಲ್ಲಿಯ ಮಾರಿ ಬಂದಿತ್ತಯ್ಯ. ಈ ಜಗವನೆತ್ತಿ ಕೊಂದು ಕೂಗುವ ಮಾರಿಯ ಗೆಲುವವರನಾರೊಬ್ಬರನೂ ಕಾಣೆ. ಎನಗಿನ್ನೆಂತಯ್ಯ, ಎನಗಿನ್ನೆಂತಯ್ಯಾ ! ಭಕ್ತಿಜ್ಞಾನವೈರಾಗ್ಯವನಿತ್ತು ಸಲಹಯ್ಯಾ. ಎನ್ನ ಕರಣಂಗಳಿಗೆ ಸಮಸ್ತ ಪ್ರಸಾದವನಿತ್ತು ಸಲಹಯ್ಯಾ, ನಿಃಕಳಂಕ ಚೆನ್ನಮಲ್ಲಿಕಾರ್ಜುನಪ್ರಭುವೆ.
--------------
ನಿಃಕಳಂಕ ಚೆನ್ನಮಲ್ಲಿಕಾರ್ಜುನ ಪ್ರಭುವೆ
ವಿರತಿ ವಿರತಿಯೆಂದು ವಿರತಿಯ ಹೊಲಬನರಿಯದೆ ಹಂಬಲಿಸಿ ಹಲಬುತಿಪ್ಪರಣ್ಣ. ಕಠಿಣ ಪದಾರ್ಥವ ಸವಿದೊಡೆ ವಿರತಿಯೆ? ಕಠಿಣ ಪದಾರ್ಥವನೊಲ್ಲೆನೆಂದು ಕಳೆದೊಡೆ ವಿರತಿಯೆ? ವೃಕ್ಷದಡಿಯ ಫಲಂಗಳನೆತ್ತಿ ಮೆದ್ದೊಡೆ ವಿರತಿಯೆ? ಬಿದ್ದ ಫಲಂಗಳ ಮುಟ್ಟೆನೆಂದು ಭಾಷೆಯ ಮಾಡಿದೊಡೆ ವಿರತಿಯೆ? ಕ್ರೀಯೆಲ್ಲಿ ಮುಳುಗಿದೊಡೆ ವಿರತಿಯೆ? ನಿಷ್ಕಿ ್ರೀಯ ಮಾಡಿದೊಡೆ ವಿರತಿಯೆ? ಮೌನಗೊಂಡಡೆ ವಿರತಿಯೆ? ನಿರ್ಮೌನವಾದಡೆ ವಿರತಿಯೆ? ಕ್ರೀಯನಾಚರಿಸಿ, ಅರಿವಿನಮಾತ ಬಣ್ಣವಿಟ್ಟು ನುಡಿದರೆ ವಿರತಿಯೆ? ಇಂತಿವೆಲ್ಲವು ವಿರತಿಯ ನೆಲೆಯನರಿಯದೆ ತಲೆಬಾಲಗೆಟ್ಟು ಹೋದವು. ಇನ್ನು, ಮುಕ್ತಿಪಥವ ತೋರುವ ವಿರತಿಯ ಬಗೆಯಾವುದೆಂದರೆ- ಷಟ್ಸ ್ಥಲಕ್ಕೆ ಒಪ್ಪವಿಟ್ಟು ಎತ್ತಿದ ಮಾರ್ಗವನಿಳುಪದೆ ಹಿಡಿದ ವ್ರತನೇಮಂಗಳಲ್ಲಿ ನೈಷೆ*ಯಾಗಿ ಈಷಣತ್ರಯಂಗಳ ಘಾಸಿಮಾಡಿ ಬಹಿರಂಗಮದಂಗಳ ಬಾಯ ಸೀಳಿ ಅಂತರಂಗಮದಂಗಳ ಸಂತೋಷಮಂ ಕೆಡಿಸಿ ಅಷ್ಟಮೂರ್ತಿ ಅಷ್ಟಮದಂಗಳ ನಷ್ಟವ ಮಾಡಿ ಎಂಟೆರಡುದಿಕ್ಕಿನಲ್ಲಿ ಹರಿವ ದಶವಾಯುಗಳ ಗಂಟಲ ಮುರಿದು ಸುಗುಣ ದುರ್ಗುಣಂಗಳ ನಗೆಗೊಳಗುಮಾಡಿ ನವನಾಳಂಗಳ ಮುಂಬಾಗಿಲಲ್ಲಿ ನವಲಿಂಗಂಗಳ ಸಿಂಗರಿಸಿ ತನು ಮನವ ಸೋಂಕಿದ ಸಾಕಾರ ನಿರಾಕಾರವೆಂಬ ಪದಾರ್ಥಂಗಳ ವಂಚಿಸದೆ ಆಯಾಯ ಲಿಂಗಂಗಳಿಗೆ ತೃಪ್ತಿಯಂ ಮಾಡಿ ನಡೆವಲ್ಲಿ ನುಡಿವಲ್ಲಿ ಮಂತ್ರಂಗಳಲ್ಲಿ ಮೈಮರೆದಿರದೆ ಆಚಾರಾದಿ ಮಹಾಲಿಂಗಗಳ ಷಡುವರ್ಣದ ಬೆಳಗಂ ಧ್ಯಾನ ಮೌನದಲ್ಲಿಯೇ ಕಣ್ಣಿಲ್ಲದೆ ಕಂಡು ಗಂಗೆ ಯಮುನೆ ಸರಸ್ವತಿಯೆಂಬ ಮೂರು ಗಂಗೆ ಕೂಡಿದ ಮಧ್ಯವೀಗ ಸಂಗಮಕ್ಷೇತ್ರ. ಆ ಸಂಗಮಕ್ಷೇತ್ರದ ರತ್ನಮಂಟಪದಲ್ಲಿ ನೆಲೆಸಿಪ್ಪ ತೋಂಟದ ಅಲ್ಲಮನೆಂಬ ಪರಬ್ರಹ್ಮದ ಬೆಳಗಿನ ಪ್ರಭೆಯ ಮೊತ್ತಮಂ ಕಂಡು ಆ ತೋಂಟದ ಅಲ್ಲಮನೆಂಬ ಪರಬ್ರಹ್ಮದ ದಿವ್ಯ ಶ್ರೀಚರಣಮಂ ಭಾವಪುಷ್ಪಂಗಳೆಂಬ ಜಾಜಿ ಮಲ್ಲಿಗೆ ಕೆಂದಾವರೆಯಲ್ಲಿ ಪೂಜೆಯಂ ಮಾಡಿ ಜೀವನ್ಮುಕ್ತಿಯಾದುದೀಗ ನಿಜ ವಿರಕ್ತಿ. ಇಂತಪ್ಪ ವಿರಕ್ತಿಯನಳವಡಿಸಿಕೊಳ್ಳದೆ ಮಾತಿಂಗೆ ಮಾತು ಕೊಟ್ಟು ಮತಿಮರುಳಾಗಿಪ್ಪವರಿಗಂಜಿ ನಾನು ಶರಣೆಂಬೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅಮೃತದೊಳಗೆ ಜನಿಸಿ ಅಮೃತದೊಳಗೆ ವರ್ತಿಸುವ ಅಮೃತದೇಹಿಗೆ ಹಸಿವು ತೃಷೆಯೆ ? ಆ ಅಮೃತವೆ ಆಹಾರ, ಆ ಅಮೃತವೆ ಸೇವನೆ, ಬೇರೊಂದು ವಸ್ತುವುಂಟೆ ? ಇಲ್ಲ. ಅಮೃತವೇ ಸರ್ವಪ್ರಯೋಗಕ್ಕೆ. ಇದಕ್ಕೆ ಕಟ್ಟಳೆಯುಂಟೆ ? ಕಾಲವುಂಟೆ ? ಆಜ್ಞೆ ಉಂಟೆ ? ಬೇರೆ ಕರ್ತರುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಶ್ರೀಗುರುಲಿಂಗದಲ್ಲಿ ಜನಿಸಿ, ಶಿವಲಿಂಗದಲ್ಲಿ ಬೆಳೆದು ಜಂಗಮಲಿಂಗದಲ್ಲಿ ವರ್ತಿಸಿ, ಪ್ರಸಾದಲಿಂಗದಲ್ಲಿ ಪರಿಣಾಮಿಸಿ, ಗುರು ಲಿಂಗ ಜಂಗಮ ಪ್ರಸಾದ ಒಂದೆಂದರಿದು ಆ ಚತುರ್ವಿಧ ಏಕವಾದ ಲಿಂಗವೇ ಪ್ರಾಣ, ಪ್ರಾಣವೇ ಲಿಂಗ ಲಿಂಗವೇ ಅಂಗ, ಅಂಗವೆ ಲಿಂಗವಾದ ಲಿಂಗಸ್ವಾಯತವಾದ ಲಿಂಗೈಕ್ಯಂಗೆ ಜಪ ಧ್ಯಾನ ತಪಕ್ಕೆ ಅರ್ಚನೆಗೆ ಪೂಜನೆಗೆ ಆಗಮವುಂಟೆ ? ಕಾಲವುಂಟೆ ? ಕರ್ಮವುಂಟೆ ? ಕಲ್ಪಿತವುಂಟೆ ? ಇಲ್ಲ. ಸರ್ವವೂ ಲಿಂಗಮಯ. ಆ ಲಿಂಗವಂತಂಗೆ ನಡೆದುದೇ ಆಗಮ, ಪೂಜಿಸಿದುದೇ ಕಾಲ ಮಾಡಿದುದೇ ಕ್ರಿಯೆ, ನುಡಿದುದೇ ಜಪ, ನೆನೆದುದೇ ಧ್ಯಾನ ವರ್ತಿಸಿದುದೇ ತಪಸ್ಸು. ಇದಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ರವಿ, ಶಶಿ, ಆತ್ಮ ಮನೋವಾಕ್ಕಾಯ ಹೊನ್ನು ಹೆಣ್ಣು ಮಣ್ಣು ಮೊದಲಾದ ಸರ್ವಪದಾರ್ಥವನರ್ಪಿಸಿ, ಗುರು ಲಿಂಗ ಜಂಗಮದ ಪ್ರಸನ್ನತೆಯ ಪಡೆದ ಮಹಾಪ್ರಸಾದಿಗೆ ಸರ್ವವೂ ಪ್ರಸಾದವಲ್ಲದೆ ಮತ್ತೊಂದಿಲ್ಲ. ಆ ಪ್ರಸಾದಿಗೆ ಪದಾರ್ಥವೆಂಬ ಪ್ರಸಾದವೆಂಬ ಭೇದವುಂಟೆ ? ಅರ್ಪಿತವೆಂಬ ಅನರ್ಪಿತವೆಂಬ ಸಂದೇಹವುಂಟೆ ? ಕೊಡುವಲ್ಲಿ ಕೊಂಬಲ್ಲಿ ಸೀಮೆಯುಂಟೆ ? ನಿಸ್ಸೀಮಪ್ರಸಾದಿಗೆ ಸರ್ವವೂ ಪ್ರಸಾದ. ಆ ಭೋಗಕ್ಕೆ ಮೇರೆ ಉಂಟೆ ? ಅವಧಿಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ವೇದ ಶಾಸ್ತ್ರ ಆಗಮ ಪುರಾಣ ಮೊದಲಾದ ಸರ್ವವಿದ್ಯಂಗಳ ತಾತ್ಪರ್ಯ ಮರ್ಮ ಕಳೆಗಳನರಿದ ಮಹಾಜ್ಞಾತೃವಿಂಗೆ ಆ ಮಹಾಜ್ಞಾನವೇ ದೇಹ, ಆ ಮಹಾಜ್ಞೇಯವೇ ಪ್ರಾಣ. ಈ ಮಹತ್ತಪ್ಪ ಜ್ಞಾತೃ ಜ್ಞಾನ ಜ್ಞೇಯ ಒಂದಾದ ಮಹಾಬೆಳಗಿನ ಸುಖಸ್ವರೂಪಂಗೆ ಮತ್ರ್ಯ ಸ್ವರ್ಗ ದೇವಲೋಕವೆಂಬ ಫಲಪದದಾಸೆಯುಂಟೆ ? ಇಲ್ಲ. ನಿರಂತರ ತೇಜೋಮಯ ಸುಖಸ್ವರೂಪನು ವಿದ್ಯಾಸ್ವರೂಪನು ನಿತ್ಯಾನಂದಸ್ವರೂಪನು. ಆ ಮಹಾಮಹಿಮನ ಮಹಾಸುಖಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಆ ಮಹಾನುಭಾವಿ ತಾನೆ ಕೇವಲ ಜ್ಯೋತಿರ್ಮಯಲಿಂಗವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->