ಅಥವಾ

ಒಟ್ಟು 205 ಕಡೆಗಳಲ್ಲಿ , 45 ವಚನಕಾರರು , 146 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ, ಪರಶಿವನೇ ಶ್ರೀಗುರುರೂಪಾಗಿ ನಿನ್ನ ಮನಕ್ಕೆ ಬಂದನು. ಬುದ್ಧಿಯೇ ನಿನ್ನ ಬುದ್ಧಿ ಸುಬುದ್ಧಿಯಾದುದಲ್ಲಾ, ಶ್ರೀಗುರುವೇ ಶಿವ[ಲಿಂಗ]ರೂಪಾಗಿ ನಿನ್ನ ಬುದ್ಧಿಗೆ ಬಂದನು. ಚಿತ್ತವೇ ನೀ ನಿನ್ನ ಚಿತ್ತ ನಿಶ್ಚಿಂತವಾದುದಲ್ಲಾ, ಶಿವಲಿಂಗವೇ ಜಂಗಮರೂಪಾಗಿ ನಿನ್ನ ಚಿತ್ತಕ್ಕೆ ಬಂದನು. ಅಹಂಕಾರವೇ, ನಿನ್ನಹಂಕಾರ ನಿಜವಾದುದಲ್ಲಾ, ಶ್ರೀ ಗುರು ಲಿಂಗ ಜಂಗಮ ತ್ರಿವಿಧವು ಏಕೀಭವಿಸಿ ನಿನಗೆ ಪ್ರಸನ್ನಪ್ರಸಾದವ ಕರುಣಿಸಿದನು. ಆ ಪ್ರಸಾದಲಿಂಗಸ್ವಾಯತವಾಗಿ ನಿಮಗೆ ನಾಲ್ವರಿಗೂ ಪರಿಣಾಮವಾಯಿತ್ತು ಕಾಣಾ. ಪ್ರಾಣವು ನಿನಗೆ ಲಿಂಗಪ್ರಾಣವಾದುದಲ್ಲಾ, ನಮ್ಮೆಲ್ಲರನೂ ಗಬ್ರ್ಥೀಕರಿಸಿಕೊಂಡಿಪ್ಪ ಅಂಗವೇ ಲಿಂಗವಾದುದಲ್ಲಾ. ಪ್ರಾಣವೇ ನಿನ್ನ ಸಂಗದಿಂದ ನಿನ್ನನಾಶ್ರಯಿಸಿಕೊಂಡಿಪ್ಪ ಸರ್ವತತ್ತ್ವಂಗಳೂ ಸರ್ವಪಂಚಾದ್ಥಿಕಾರಿಗಳೂ ಸರ್ವಯೋಗಿಗಳೆಲ್ಲ ಶಿವಪದಂಗಳ ಪಡೆದರಲ್ಲಾ. ಅಹಂಗೆ ಅಹುದು ಕಾಣಾ, ಪ್ರಾಣವೇ ಇದು ದಿಟ, ನೀನೇ ಮಗುಳೆ ಮಹಾಬಂಧುವಾಗಿ ನಿನಗೊಂದು ಏಕಾಂತವ ಹೇಳುವೆನು ಕೇಳು. ನಾನು ನೀನು ಅನೇಕ ಕಲ್ಪಂಗಳಲ್ಲಿಯೂ ಅನೇಕ ಯೋನಿಗಳಲ್ಲಿಯೂ ಜನಿಸಿ ಸ್ಥಿತಿ ಲಯಂಗಳನೂ ಅನುಭವಿಸಿ, ಪಾಪಪುಣ್ಯಂಗಳನುಂಡುದ ಬಲ್ಲೆ. ಅವೆಲ್ಲವನೂ ಕಳೆದುಳಿದು, ಶ್ರೀಗುರುವಿನ ಕರುಣ ಮೇರೆವರಿದು ಮಹಾಪದವಾಯಿತ್ತು. ಶ್ರೀಗುರುವಿನ ಹಸ್ತದಲ್ಲಿ ಜನನವಾಯಿತ್ತು. ಶ್ರೀಗುರುವಿನ ಕರುಣವಾಯಿತ್ತು. ಶಿವಲಿಂಗ ಸ್ವಾಯತವಾಯಿತ್ತು. ಜಂಗಮವೆಂದರಿದು ಜ್ಞಾನವಾಯಿತ್ತು. ಶ್ರೀಗುರು ಲಿಂಗ ಜಂಗಮದಿಂದ ಪ್ರಸಾದವ ಪಡೆದು ಪ್ರಸಾದವನು ಗ್ರಹಿಸಿ ಶಿವಮಹಾಮುಕ್ತಿಪದವಾಯಿತ್ತು. ಇನ್ನೊಂದ ನಾ ನಿಮ್ಮ ಬೇಡಿಕೊಂಬೆನು : ಮಾಯಾಂಗನೆ ಆಸೆ ಮಾಡಿಕೊಂಡು ಬಂದಹಳು, ಅವರಿಬ್ಬರೂ ಹೋಗಲೀಸದಿರಿ, ನಿಮಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಾಣೆ ಎನಗೆಯೂ ಅದೇ ಆಣೆ.
--------------
ಉರಿಲಿಂಗಪೆದ್ದಿ
ಎಲೆ ಮನವೆ ಕೇಳಾ, ಶಿವನು ನಿನಗೆ ಅನಂತಾನಂತಯುಗದಲ್ಲಿ ಶಿವಾನುಭಾವಸ್ಥಿತಿಯ ಕಳುಹಿತ್ತ, ಲೋಕಕ್ಕೆರಡು ಸ್ಥಿತಿಯಲ್ಲಿ ಜನ್ಮಾದಿ ಕಟ್ಟಣೆಯ ಹರಿಯೆಂದು. ಆ ಪ್ರಭಾಮೂರ್ತಿಯಾಗಿ ಗುರುವೆಂಬ ನಾಮವಂ ಧರಿಸಿ, ಮಹಾಲಿಂಗೈಕ್ಯವನು, ಮಹಾಲಿಂಗ ಯೋಗಪ್ರಭಾವವನು, ಅಷ್ಟಾಷಷ್ಟಿತೀರ್ಥಂಗಳನು, ಶಿವನು ಅನಂತಪ್ರಾಣಿಗಳಿಗೆ ಸಾಧನವೆಂದು ಮಾಡಿದನು. ಮಂದರಗಿರಿ ರಜತಗಿರಿ ಮೇರುಗಿರಿ ಹಿಮಗಿರಿ ಮೊದಲಾದ ಅಷ್ಟಕುಲಪರ್ವತಂಗಳನು ಸ್ಥಲಂಗೊಳಿಸಿದನು. ಅನಾದಿಸಂಸಿದ್ಧದಾದಿಲಿಂಗೇಶ್ವರದೇವರ ಸ್ಥಲಂಗೊಳಿಸಿದನು. ಎಲ್ಲಾ ಯಂತ್ರಕ್ಕೆ ಅಮೃತಕಳೆಯನೀಯಲೆಂದು ಕಪಿಲಸಿದ್ಧಮಲ್ಲಿಕಾರ್ಜುನದೇವರ ಸ್ಥಲಂಗೊಳಿಸಿದನು. ಸಿದ್ಧಸಿಂಹಾಸನದ ಮೇಲೆ ನಾಮಕರಣ ರಾಮನಾಥನಾಗಿ ಗುರು ಮತ್ರ್ಯಕ್ಕೆ ಬಂದ ಕಾಣಾ ಮನವೆ. ಆಚಾರ ಗೋಚರವಾಗಬೇಕೆಂದು ಆ ನಿರ್ವಯಲೆಂಬ ಸ್ವಾಮಿ ತಾನೆಯಾಗಿ, ಓಂಕಾರ ಊಧ್ರ್ವರೇತ ಶಿವನಾಗಿ, ಬೆಳಗನುಟ್ಟು ಬಸವಣ್ಣ ಬಂದ ಕಾಣಾ ಮನವೆ. ಎಲ್ಲಾ ಪ್ರಾಣಿಗಳಿಗೆ ಜಿಹ್ವೆಗಳನು ಪವಿತ್ರವ ಮಾಡಲೆಂದು ಶುದ್ಧಸಿದ್ಧಪ್ರಸಿದ್ಧಪ್ರಸಾದವ ತೋರಿಹೆವೆನುತ ಮಹಾಪ್ರಸಾದಿ ಚೆನ್ನಬಸವಣ್ಣ ಬಂದ ಕಾಣಾ ಮನವೆ. ಜ್ಞಾನವಾಹನವಾಗಿ ತನುಮನಧನದ ಮೇಲೆ ನಡೆದು, ಅನಂತಮೂರ್ತಿಗಳ ಪವಿತ್ರವ ಮಾಡಲೆಂದು ಎಲ್ಲಾ ಸಂಬಂಧವನು ಕರಸ್ಥಲದಲ್ಲಿ ಹಿಡಿದುಕೊಂಡು, ಜಂಗಮವಾಗಿ ಪ್ರಭುದೇವರು ಬಂದರು ಕಾಣಾ ಮನವೆ. ಗುರುವೆ ಮಹಾಭಕ್ತನಾಗಿ ಅರ್ಪಿತವ ಮಾಡಿ, ಪ್ರಸಾದಿಯ ಅನುಭಾವದ ಆಭರಣವೆ ಜಂಗಮವಾಗಿ, ಇಂತೀ ಚತುರ್ವಿಧಸ್ಥಲಂಗಳು ಎನ್ನ ಪ್ರಾಣನ ಕೊರಳಲ್ಲಿಹವಾಗಿ, ನಿಮ್ಮ ಅನಿಮಿಷವಾಗಿ ನಾ ನೋಡುತಿರ್ದೆ ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಒಡಲಾಸೆಗೆ ಅನ್ಯರ ಸೇವೆಯ ಮಾಡುವ ಕಡುಪಾಪಿಮನವೆ ಕೇಳು. ದದ್ಥಿಯ ಮಥನವ ಮಾಡೆ ಪಂಚಾಮೃತವ ಕೊಡುವುದಲ್ಲದೆ, ಉದಕವ ಕಡೆಯಲೇನ ಕೊಡದ ತೆರದಲ್ಲಿ ಅನ್ಯರನಾಸೆಗೈದರೆ- ಪರುಷ ಮನೆಯೊಳಿರೆ ಪರರ ಹಣವ ಬೇಡಿ ಚಾಲಿವರಿವ ಮರುಳುಮಾನವನಂತೆ, ವರ ಅಮೃತಬಾವಿ ಗೃಹದೊಳಿರೆ ಸವುಳು ನೀರಿಂಗೆ ಚಾಲಿವರಿವ ಹೆಡ್ಡಮನುಜನಂತೆ, ಸರ್ವರ ಮನ ಧರ್ಮ ಕರ್ಮವನರಿವ ಪರಮಾತ್ಮ ನಿನ್ನ ಅಂಗೈಕರದೊಳಿರೆ ಪರರಾಸೆಗೈಯದಿರು, ಆಸೆಗೈಯದಿರು. ಆಸೆಗೈ ಆಸೆಗೈ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವನಾಸೆಗೈದರೆ ನಿನಗೆ ಮುಕ್ತಿಯುಂಟು ಕೇಳಲೆ ಮನುಜ.
--------------
ಹೇಮಗಲ್ಲ ಹಂಪ
ಎಲೆ ಕಾಲಂಗೆ ಸೂರೆಯಾದ ಕರ್ಮಿ, ಎಲೆ ಕಾಮಂಗೆ ಗುರಿಯಾದ ಮರುಳೆ, ಬಿಡು ಬಿಡು ಕೈಯ ನರಕವೆಂದರಿಯದೆ ತಡೆವರೆ ಮನುಜಾ ? ಚೆನ್ನಮಲ್ಲಿಕಾರ್ಜುನನ ಪೂಜೆಯ ವೇಳೆ ತಪ್ಪಿದರೆ ನಾಯಕ ನರಕ ಕಾಣಾ ನಿನಗೆ.
--------------
ಅಕ್ಕಮಹಾದೇವಿ
ಹಿರಣ್ಯಚ್ಛೆಯ ಹೆಚ್ಚಿ ನುಡಿವರು ನಿನ್ನಂಗವಪ್ಪರೆ ಅಯ್ಯಾ? ಅಪ್ಪರಪ್ಪರು ಹೊನ್ನು ಹೆಣ್ಣು ಮಣ್ಣು ತ್ರಿವಿಧವ ಬಿಟ್ಟವರು. ಅಪ್ಪರಪ್ಪರು ಸತ್ಪಾತ್ರ-ಅಪಾತ್ರವೆಂದರಿದವರು. ಅಪ್ಪರಪ್ಪರು ಸದಾಚಾರ, ನಿಹಿತಾಚಾರ, ಗುರುಚರಭಕ್ತಿ, ಸ್ವಾನುಭಾವದೀಕ್ಷೆ ಸಮನಿಸಿದವರು. ನಿನ್ನಂಗ ಎಲ್ಲರಂತಲ್ಲ ಹೊಸ ಪರಿ ಎಲೆ ಅಯ್ಯಾ. ಮಸ್ತಕದಲ್ಲಿ ಪೂಜೆಯ ಮಾಡಿ ಅದ ನಿರ್ಮಾಲ್ಯವೆಂದು ತ್ಯಜಿಸಿ, ಮರಳಿ ಪಡೆದು ನಿನಗೆ ಪಾತ್ರವಾದರು. ಅಪ್ಪುದಕ್ಕನುಮಾನವೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅರ್ಚಿಸಲು ಬೇಡವದು, ಪೂಜಿಸಲು ಬೇಡ, ನಿತ್ಯ ಜಪತಪನೇಮ ನಿನಗೆ ಬೇಡ. ಸಚ್ಚಿದಾನಂದ ಗುರು ಕಪಿಲಸಿದ್ಧಮಲ್ಲಿಕಾರ್ಜುನನ ಬಸವಾಕ್ಷರತ್ರಯವ ನೆನೆ ನಿತ್ಯಪದವು
--------------
ಸಿದ್ಧರಾಮೇಶ್ವರ
ಉಂಡೆನುಟ್ಟೆನೆಂಬ ಸಂದೇಹ ನಿನಗೇಕಯ್ಯಾ? ಉಂಬುದೆ ಅಗ್ನಿ? ಉಡುವುದೆ ಪೃಥ್ವಿ? ನೀನೆಂದು ಉಂಡೆ? ನಾನೆಂದು ಕಂಡೆ? ಉಣ್ಣದೆ ಉಡದೆ ಹೊಗೆಯ ಕೈಯಲ್ಲಿ ಸತ್ತೆನೆಂಬ ಅಂಜಿಕೆ ನಿನಗೆ ಬೇಡ, ಅಂಜದಿರು,_ ಗುಹೇಶ್ವರಾ ನಿನಗಾವ ನಾಚಿಕೆಯೂ ಇಲ್ಲ.
--------------
ಅಲ್ಲಮಪ್ರಭುದೇವರು
ಎನ್ನೊಳಗೆ ನೀನು ಪ್ರವೇಶ, ನಿನ್ನೊಳಗೆ ನಾನು ಪ್ರವೇಶ, ದೇವ ನೀನಿಲ್ಲದಿಲ್ಲ, ಭಕ್ತ ನಾನಲ್ಲದಿಲ್ಲ. ಈ ಪರಿಯ ಮಾಡುವರಿನ್ನಾರು ಹೇಳಾ ? ಎನಗೆ ನೀನೇ ಗತಿ, ನಿನಗೆ ನಾನೇ ಗತಿ ಇನ್ನೇಕೆ ಜವನಿಕೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?
--------------
ಉರಿಲಿಂಗಪೆದ್ದಿ
ಎನಗೆ ಸೋಂಕಿದ ಸಕಲರುಚಿಪದಾರ್ಥಂಗಳನು, ನಿನಗೆ ಕೊಡುವೆನೆಂದವಧಾನಿಸುವನ್ನಬರ, ಎನಗೂ ಇಲ್ಲದೆ ಹೋಯಿತ್ತು , ನಿನಗೂ ಇಲ್ಲದೆ ಹೋಯಿತ್ತು . ಈ ಭೇದಬುದ್ಧಿಯು ಬಿಡಿಸಿ, ಆನರಿದುದೆ ನೀನರಿದುದೆಂಬಂತೆ ಎಂದಿಂಗೆನ್ನನಿರಿಸುವೆ ಸಕಳೇಶ್ವರಾ.
--------------
ಸಕಳೇಶ ಮಾದರಸ
ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ, ಎನ್ನ ಕರಣಾದಿ ಗುಣಂಗಳ ಕಳೆದು, ಎನ್ನ ಕಾಯದ ಕರ್ಮವ ತೊಡೆದು, ಎನ್ನ ಪ್ರಾಣನ ಧರ್ಮವ ನಿಲಿಸಿ, ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು ಕಾರುಣ್ಯವ ಮಾಡಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಉಳ್ಳವರು ಹಗೆಹ ತೆಗೆವನ್ನಕ್ಕರ, ಇಲ್ಲದವರ ಹರಣ ಹೋಯಿತ್ತೆಂಬ ಗಾದೆ ಎನಗಾಯಿತ್ತು. ಮಾತು ಬಣ್ಣಿಸಲು ಹೊತ್ತು ಹೋಯಿತ್ತಯ್ಯಾ. ನಿನಗೆ ಅದೆ, ಹರಿನುಡಿಗೆ ಕಡೆಯಿಲ್ಲ. ಒಬ್ಬರ ನೋಡುವಾಗ, ಅರುವತ್ತು ಮನುಷ್ಯರ ನೋಡುವ ಹಾಂಗೆ ಆಗುತ್ತಿದೆ. ಶೂನ್ಯಸಿಂಹಾಸನ ಬವರಿಗೊಡುತ್ತಿದೆ. ಪ್ರಾಣ ಹೆಡತಲೆಯಲ್ಲಿ ಹೋಗುತ್ತಿದೆ. ಗುಹೇಶ್ವರ ಹಸಿದನು, ಪದಾರ್ಥವ ನೀಡಯ್ಯಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಎಲ್ಲಾ ಭಕ್ತಿಯ ಭೇದವನು, ಎಲ್ಲಾ ಕೂಟದ ಭೇದವನು, ಎಲ್ಲಾ ಶೀಲದ ಭೇದವನು, ನಾನು ನಿನಗೆ ಬಿನ್ನೈಸುವೆ ಕೇಳಯ್ಯಾ. ನೀನು ಕರ್ತನಾಗಿ, ನಾನು ಭೃತ್ಯನಾಗಿ ಅವಧರಿಸಯ್ಯಾ. ಎಲ್ಲಾ ಭೇದಂಗಳನು ಬಸವಣ್ಣ ಮಾಡಿದನು. ನಿಜಸ್ವಾಯತವನು ಬಸವಣ್ಣ ಮಾಡಿದನು. ಜಂಗಮಸ್ವಾಯತವನು ಬಸವಣ್ಣ ಮಾಡಿದನು. ಎನ್ನ ಸರ್ವಾಂಗಸ್ವಾಯತವನು ಬಸವಣ್ಣ ಮಾಡಿದನು. ಕಾರಣ, ಆ ಬಸವಣ್ಣನ ನೆನೆನೆನೆದು ಬದುಕಿದೆನು ಕಾಣಾ ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಹಾಲೋಗರವನುಂಡು ಬಾಲೆಯರ ತೋಳಮೇಲೊರಗಿದಡೆ ಬಾರದ ಭವದಲ್ಲಿ ಬಪ್ಪುದು ತಪ್ಪದು ಕಾಣಿರಣ್ಣ. ಅಲ್ಲಿಯ ಆಲಿಂಗನ ವಿಷ, ಚುಂಬನ ನಂಜು, ನೋಟ ಸರಳು, ಸವಿನುಡಿ ಕಠಾರಿ ನೋಡಾ. ಅಲ್ಲಿಯ ನೆನಹು ಆಜ್ಞಾನ ನೋಡಾ. ಅದು ತನ್ನ ಹಿತಶತ್ರುತನದಿಂದ ಭ್ರಾಂತುಭಾವನೆಯ ಹುಟ್ಟಿಸಿ ಕೊಲುವದಾಗಿ, ಆ ಸಂಸಾರ ನಿನಗೆ ಹಗೆಯೆಂದು ತಿಳಿಯ, ಮರುಳುಮಾನವ. ಇದುಕಾರಣ, ಸಂಸಾರಸುಖವನುಣ್ಣಲೊಲ್ಲದೆ, ಬಾಲೇಂದುಮೌಳಿಯ ಜ್ಞಾನಪ್ರಸಾದವನುಂಡು ನಾನು ಬದುಕಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಂಗಮವೆ ಪ್ರಾಣವೆಂಬುದು ನಿನಗೆ ಹುಸಿಯಾಯಿತ್ತಲ್ಲಾ ಸಂಗನಬಸವಣ್ಣ. ನಿನಗೆ ಪ್ರಸಾದದ ಪ್ರಸನ್ನತೆಯೆಂಬುದು ಸಂದೇಹವಾಯಿತ್ತಲ್ಲಾ ಚೆನ್ನಬಸವಣ್ಣ. ನಿನಗೆ ಕಾಯವೆ ಬಸವಣ್ಣ, ಜೀವವೆ ಚೆನ್ನಬಸವಣ್ಣ. ಕೇತಯ್ಯಗಳ ಅಳಿವು, ಕಲಿದೇವನ ಉಳಿವಾಯಿತ್ತು.
--------------
ಮಡಿವಾಳ ಮಾಚಿದೇವ
ನಾನು ಭೃತ್ಯನಾಗಿದ್ದಲ್ಲಿ ಕರ್ತರ ಇರವ ವಿಚಾರಿಸೂದು ಭಕ್ತರ ಇರವಲ್ಲ, ಇದು ವಿಶ್ವಾಸದ ಯುಕ್ತಿ. ಇಷ್ಟಕಂಜಿ ಬಿಟ್ಟಡೆ ಮೊದಲು ಮೋಸವಾದಲ್ಲಿ ಲಾಭಕ್ಕೆಸರಿಹುದುಗುಂಟೆ? ಶರಣರ ಮರೆ ಮನಕ್ಕೆ ವಿರೋಧವುಂಟೆ? ಮಣ್ಣಿನ ಹೊದಕೆ ಮೈ ಜಲಕ್ಕೆ ನಿರ್ಮಲವಲ್ಲದೆ ಬ್ಥಿನ್ನಭಾವವಿಲ್ಲ. ಎನ್ನ ಮಾತು ನಿನಗೆ ಅನ್ಯವೆ, ನನ್ನಿಯಲ್ಲದೆ? ಅದಕ್ಕೆ ಬ್ಥಿನ್ನ ಭಾವವಿಲ್ಲ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಇನ್ನಷ್ಟು ... -->