ಅಥವಾ

ಒಟ್ಟು 70 ಕಡೆಗಳಲ್ಲಿ , 28 ವಚನಕಾರರು , 61 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನಾದ್ವೈತದ ಹೆಚ್ಚುಗೆ, ಭಾವಾದ್ವೈತಕ್ಕೆ ಸಂಬಂಧವಾಗಿಹುದು. ಭಾವಾದ್ವೆ ೈತದ ಹೆಚ್ಚುಗೆ, ಕ್ರಿಯಾದ್ವೈತವ ಸಂಬಂದ್ಥಿಸಿಕೊಂಡಿಹುದು. ಕ್ರಿಯಾದ್ವೈತದ ಹೆಚ್ಚುಗೆ, ಸರ್ವಮಯವಾಗಿ ಘನಲಿಂಗವ ಗಬ್ರ್ಥೀಕರಿಸಿಕೊಂಡಿಪ್ಪುದು. ಇಂತೀ ಭೇದ. ಕ್ರೀ ಜ್ಞಾನಕ್ಕೆ ಒಡಲಾಗಿ, ಮಥನದಿಂದ ವಹ್ನಿ ಕುರುಹಿಗೆ ಬಂದಂತೆ, ಕ್ರೀಯಿಂದ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಮಾತಿನಲ್ಲಿ ಮಹತ್ವವ ನುಡಿದು ನೀತಿಯಲ್ಲಿ ಅಧಮರಾದ ಮಾನವರು ಈಶ್ವರೋವಾಚವ ನುಡಿದುಕೊಂಡು ನಡೆದರೆ ಬೆಟ್ಟಕ್ಕ ನಾಯಿ ಬಗುಳಿದಂತೆ. ಕಷ್ಟರ ನುಡಿ ಕಾಮಾರಿಯ ಮುಟ್ಟದು ಕಾಣಾ. ನಿಮ್ಮ ಮುಟ್ಟದ ಮನಕ್ಕೆ ಬಂದಂತೆ ನಡೆವವರ, ಮನಕ್ಕೆ ಬಂದಂತೆ ನುಡಿವವರ ಮಚ್ಚೆನು ಕಾಣಾ. ಅಲ್ಲಿ ನೀವಿಲ್ಲದ ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುತ್ವವುಳ್ಳ ಮಹದ್ಗುರುವನರಿಯದೆ ನಾನು ಗುರು ತಾನು ಗುರುವೆಂದು ನುಡಿವಿರಿ. ಧನದಲ್ಲಿ ಗುರುವೆ? ಮನದಲ್ಲಿ ಗುರುವೆ? ತನುವಿನಲ್ಲಿ ಗುರುವೆ? ನಿತ್ಯದಲ್ಲಿ ಗುರುವೆ? ವಿದ್ಯೆಯಲ್ಲಿ ಗುರುವೆ? ಭಕ್ತಿಯಲ್ಲಿ ಗುರುವೆ? ಜ್ಞಾನದಲ್ಲಿ ಗುರುವೆ? ವೈರಾಗ್ಯದಲ್ಲಿ ಗುರುವೆ? ದೀಕ್ಷೆಯಲ್ಲಿ ಗುರುವೆರಿ ಶಿಕ್ಷೆಯಲ್ಲಿ ಗುರುವೆರಿ ಸ್ವಾನುಭಾವದಲ್ಲಿ ಗುರುವೆರಿ ಮಾತಾಪಿತರಲ್ಲಿ ಗುರುವೆರಿ ದೇವದಾನವ ಮಾನವರೆಲ್ಲರು ನೀವೆಲ್ಲರು ಆವ ಪರಿಯಲ್ಲಿ ಗುರು ಹೇಳಿರಣ್ಣಾ? ಗುರುವಾರು ಲಘುವಾರೆಂದರಿಯರಿ, ಮನ ಬಂದಂತೆ ನುಡಿದು ಕೆಡುವಿರಾಗಿ. ಹರಿಬ್ರಹ್ಮರು ಗುರುತ್ವಕ್ಕೆ ಸಂವಾದಿಸಿ ಮಹದ್ಗುರುವಪ್ಪ ಪರಂಜ್ಯೋತಿರ್ಲಿಂಗದ ಆದಿಮಧ್ಯಾವಸಾನದ ಕಾಲವನರಿಯದೆ ಲಘುವಾಗಿ ಹೋದರು. ಮತ್ತಂ ಅದೊಮ್ಮೆ ವಿಷ್ಣ್ವಾದಿ ದೇವಜಾತಿಗಳೆಲ್ಲರೂ ನೆರೆದು ನಾ ಘನ, ತಾ ಘನ, ನಾನು ಗುರು, ತಾನು ಗುರುವೆಂದು ಮಹಾಸಂವಾದದಿಂದ ಅತಿತರ್ಕವ ಮಾಡಿ ಗುರುತ್ವವುಳ್ಳ ಪುರುಷನ ನಿಶ್ಚೈಸಲರಿಯದೆ, ಆ ಸಭಾಮಧ್ಯದಿ ಪರಮಾಕಾಶದಿ `ಅತ್ಯತಿಷ*ದ್ದಶಾಂಗುಲನೆನಿಪ' ಮದ್ಗುರುವಪ್ಪ ಮಹಾಲಿಂಗವು ಇವರುಗಳ ಅಜ್ಞಾನವ ಕಂಡು ಮಹಾವಿಪರೀತಕ್ರೀಯಲ್ಲಿ ನಗುತಿರಲು ನಮ್ಮೆಲ್ಲರನೂ ನೋಡಿ ನಗುವ ಪುರುಷನಾರು? ಈ ಪುರುಷನ ನೋಡುವ, ಈ ಪುರುಷನಿಂದ ನಮ್ಮಲ್ಲಿ ಆರು ಘನ ಆರು ಗುರುವೆಂದು ಕೇಳುವೆವೆಂದು ಆ ಮಹಾಪುರುಷನ ಸಮೀಪಕ್ಕೆ ಅಗ್ನಿ ವಾಯು ಮೊದಲಾಗಿಹ ದೇವಜಾತಿಗಳೆಲ್ಲರೂ ಪ್ರತ್ಯೇಕರಾಗಿ ಹೋಗಲು ಅತ್ಯತಿಷ*ದ್ದಶಾಂಗುಲಮಾಗಿರ್ದು ಇವರುಗಳ ಗುರುತ್ವವೆಲ್ಲವನೂ ಒಂದೇ ತೃಣದಲ್ಲಿ ಮುರಿದು ತೃಣದಿಂದವೂ ಕಷ್ಟ ಲಘುತ್ವವ ಮಾಡಿದನು. ಇದು ಕಾರಣ, ಪರಶಿವನೆ ಮದ್ಗುರು ಕಾಣಿರೆ. ಧನದಲ್ಲಿ ಗುರುವೆರಿ ನೀವೆಲ್ಲರು ಧನದಲ್ಲಿ ಗುರುವೆಂಬಡೆ ನೀವು ಕೇಳಿರೆ, ಕಾಣಿವುಳ್ಳವಂಗೆ ಶತಸಂಖ್ಯೆ ಉಳ್ಳವನೆ ಗುರು, ಶತಸಂಖ್ಯೆ ಉಳ್ಳವಂಗೆ ಸಹಸ್ರಸಂಖ್ಯೆ ಉಳ್ಳವನೆ ಗುರು, ಸಹಸ್ರಸಂಖ್ಯೆ ಉಳ್ಳವಂಗೆ ಮಹದೈಶ್ವರ್ಯ ಉಳ್ಳವನೆ ಗುರು, ಮಹದೈಶ್ವರ್ಯ ಉಳ್ಳವಂಗೆ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಮೊದಲಾದ ಮಹದೈಶ್ವರ್ಯವುಳ್ಳ ಇಂದ್ರನೆ ಗುರು. ಇಂದ್ರಂಗೆ ಅನೂನೈಶ್ವರ್ಯವನುಳ್ಳ ಬ್ರಹ್ಮನೆ ಗುರು, ಆ ಬ್ರಹ್ಮಂಗೆ ಐಶ್ವರ್ಯಕ್ಕೆ ಅಧಿದೇವತೆಯಪ್ಪ ಮಹಾಲಕ್ಷ್ಮಿಯನುಳ್ಳ ವಿಷ್ಣುವೆ ಗುರು, ಆ ವಿಷ್ಣುವಿಂಗೆ ಅಷ್ಟಮಹದೈಶ್ವರ್ಯವನುಳ್ಳ ರುದ್ರನೆ ಗುರು, ಆ ರುದ್ರಂಗೆ ಈಶ್ವರನೆ ಗುರು, ಈಶ್ವರಂಗೆ ಸದಾಶಿವನೆ ಗುರು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಯೇ ತೇ ಗರ್ಭಗತಾ ಯಸ್ಯ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಅಂತಹ ಸದಾಶಿವಂಗೆ ಎಮ್ಮ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ಮನದಲ್ಲಿ ಗುರುವೇ ನೀವೆಲ್ಲರು ದುರ್ಮನಸ್ಸಿಗಳು ಪರಧನ ಪರಸ್ತ್ರೀ ಅನ್ಯದೈವಕ್ಕೆ ಆಸೆ ಮಾಡುವಿರಿ. ಇಂತಹ ದುರ್ಮನಸ್ಸಿನವರನೂ ಸುಮನವ ಮಾಡಿ ಸುಜ್ಞಾನಪದವ ತೋರುವ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ತನುವಿನಲ್ಲಿ ಗುರುವೆ? ಜನನ ಮರಣ ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ ಜನಿಸುವ ಅನಿತ್ಯತನು ನಿಮಗೆ. ಇಂತಪ್ಪ ತನುವನುಳ್ಳವರ ಪೂರ್ವಜಾತನ ಕಳೆದು, ಶುದ್ಧತನುವ ಮಾಡಿ ಪಂರ್ಚಭೂತತನುವ ಕಳೆದು, ಶುದ್ಧತನುವ ಮಾಡಿ ಭಕ್ತಕಾಯ ಮಮಕಾಯವೆಂದು ಶಿವನುಡಿದಂತಹ ಪ್ರಸಾದಕಾಯವ ಮಾಡಿ ನಿತ್ಯಸುಖದೊಳಿರಿಸಿದ ಪರಶಿವಮೂರ್ತಿ ಶ್ರೀಗುರುವೇ ಗುರು ಕಾಣಿರೆ. ವಿದ್ಯೆಯಲ್ಲಿ ಗುರುವೆ? ನೀವೆಲ್ಲರು ವೇದದ ಬಲ್ಲಡೆ, ಶಾಸ್ತ್ರವನರಿಯರಿ, ವೇದಶಾಸ್ತ್ರವ ಬಲ್ಲಡೆ, ಪುರಾಣವನರಿಯರಿ, ವೇದಶಾಸ್ತ್ರಪುರಾಣವ ಬಲ್ಲಡೆ, ಆಗಮವನರಿಯರಿ, ವೇದಶಾಸ್ತ್ರಪುರಾಣ ಆಗಮನ ಬಲ್ಲಡೆ ಅವರ ತಾತ್ಪರ್ಯವನರಿಯರಿ, ಅಷ್ಟಾದಶವಿದ್ಯೆಗಳ ಮರ್ಮವನರಿಯರಿ. ವೇದಂಗಳು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂದವು. ಅದನ್ನರಿಯರಿ ನೀವು, ಅನ್ಯವುಂಟೆಂಬಿರಿ, `ಶಿವ ಏಕೋ ದ್ಯೇಯಃ ಶಿವಶಂಕರಃ ಸರ್ವಮನ್ಯತ್ಪರಿತ್ಯಾಜ್ಯಂ' ಅಂದವು, ನೀವು ಅನ್ಯವ ಧ್ಯಾನಿಸುವಿರಿ, ಅನ್ಯವ ಪೂಜಿಸುವಿರಿ, ವಿದ್ಯೆ ನಿಮಗಿಲ್ಲ, ನಿಮಗೆ ಹೇಳಿಕೊಡುವ ವ್ಯಾಸಾದಿಗಳಿಗಿಲ್ಲ, ಅವರಿಗೆ ಅಧಿಕನಾಗಿಹ ವಿಷ್ಣುಬ್ರಹ್ಮಾದಿಗಳಿಗಿಲ್ಲ, ವೇದಾದಿ ಅಷ್ಟಾದಶವಿದ್ಯೆಗಳ ಶಿವನೆ ಬಲ್ಲನು. ಸರ್ವವಿದ್ಯೆಗಳನೂ ಶಿವನೇ ಮಾಡಿದನು, ಶಿವನೇ ಕರ್ತನು `ಆದಿಕರ್ತಾ ಕವಿಸ್ಸಾಕ್ಷಾತ್ ಶೂಲಪಾಣಿರಿತಿಶ್ರುತಿಃ ಎಂದುದಾಗಿ. `ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಕತಯೇ ನಮಃ ಎಂದುದಾಗಿ, `ಈಶಾನಸ್ಸರ್ವವಿದ್ಯಾನಾಂ ಎಂದುದಾಗಿ, ವಿದ್ಯಾರೂಪನಪ್ಪ ಎಮ್ಮ ಪರಶಿವಮೂರ್ತಿ ಶ್ರೀಗುರುವೇ ವಿದ್ಯೆಯಲ್ಲಿ ಗುರು ಕಾಣಿರೆ, ದೀಕ್ಷೆಯಲ್ಲಿ ಗುರುವೇರಿ ನೀವು `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬಿರಿ, ಆ ವಿಷ್ಣುವ ಭಜಿಸಿ ವಿಷ್ಣುವೇ ಗುರುವೆಂಬಿರಿ. ಅಂತಹ ವಿಷ್ಣುವಿಂಗೆಯೂ ಉಪಮನ್ಯು ಗುರು ಕಾಣಿರೆ. ಅಂತಹ ಉಪಮನ್ಯು ಮೊದಲಾದ ದೇವಋಷಿ ಬ್ರಹ್ಮಋಷಿ ರಾಜಋಷಿ ದೇವಜಾತಿ ಮಾನವಜಾತಿಗಳಿಗೆ ಪರಶಿವನಾಚಾರ್ಯನಾಗಿ ಉಪದೇಶವ ಮಾಡಿದನು. ವೇದಶಾಸ್ತ್ರ ಆಗಮ ಪುರಾಣಂಗಳಲ್ಲಿ, ವಿಚಾರಿಸಿ ನೋಡಿರೆ. ಅದು ಕಾರಣ ಮಹಾಚಾರ್ಯನು ಮಹಾದೀಕ್ಷಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಶಿಕ್ಷೆಯಲ್ಲಿ ಗುರುವೇರಿ ನಿಮಗೆ ಶಿಕ್ಷಾಸತ್ವವಿಲ್ಲ. ವೀರಭದ್ರ ದೂರ್ವಾಸ ಗೌತಮಾದಿಗಳಿಂ ನೀವೆಲ್ಲಾ ಶಿಕ್ಷೆಗೊಳಗಾದಿರಿ. ಶಿಕ್ಷಾಮೂರ್ತಿ ಚರಲಿಂಗವಾಗಿ ಶಿಕ್ಷಿಸಿ ರಕ್ಷಿಸಿದನು ಪರಶಿವನು. ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ ಎಂದುದಾಗಿ, ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ ಅತಿಭಕ್ತ್ಯಾ ಲಿಂಗಸಂತುಷ್ಟಿರಪಹಾಸ್ಯಂ ಯಮದಂಡನಂ ಎಂದುದಾಗಿ, ಶಿಕ್ಷೆಯಲ್ಲಿ ಗುರು ಎಮ್ಮ ಪರಶಿವಮೂರ್ತಿ ಮದ್ಗುರುವೇ ಗುರು ಕಾಣಿರೆ. ಸ್ವಾನುಭಾವದಲ್ಲಿ ಗುರುವೆ? ನೀವು ದೇವದಾನವಮಾನವರೆಲ್ಲರು ದೇಹಗುಣವಿಡಿದು ಮದಾಂಧರಾಗಿ ಸ್ವಾನುಭಾವ[ರಹಿತರಾದಿರಿ]. ಸ್ಕಂದ ನಂದಿ ವೀರಭದ್ರ ಭೃಂಗಿನಾಥ ಬಸವರಾಜ ಮೊದಲಾದ ಎಮ್ಮ ಮಾಹೇಶ್ವರರೇ ಸ್ವಾನುಭಾವಸಂಪನ್ನರು. ಇಂತಹ ಮಹಾಮಹೇಶ್ವರರಿಗೆ ಸ್ವಾನುಭಾವವ ಕರುಣಿಸಬಲ್ಲ ಎಮ್ಮ ಪರಶಿವಮೂರ್ತಿ ಮಹದ್ಗುರು[ವೇ] ಸ್ವಾನುಭಾವದಲ್ಲಿ ಗುರು ಕಾಣಿರೆ. ಮಾತಾಪಿತರ ಗುರುವೆಂಬಿರಿ, ಲಘುವಿನಲ್ಲಿ ತಾವೆಲ್ಲರು ಜನಿಸಿದಿರಿ. ತಮ್ಮ ಸ್ಥಿತಿಯೂ ಲಘು, ಲಘುವಾಗಿ ಲಯವಪ್ಪುದು ಗುರುವೆ? ಅಲ್ಲ. ಸೋಮಃ ಪವತೇ ಜನಿತಾ ಮತೀನಾಂ ಜದಿತಾ ದಿವೋ ಜನಿತಾ ಪೃಥ್ವಿವ್ಯಾ ಜನಿತಾಗ್ನೇರ್ಜನಿತಾ ಸೂರ್ಯಸ್ಯ `ಜನಿತೋಥವಿಷ್ಣೋಃ ಎಂದುದಾಗಿ, `ಶಿವೋ ಮಮೈವ ಪಿತಾ ಎಂದುದಾಗಿ, ಸರ್ವರಿಗೂ ಮಾತಾಪಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೊ. ಭಕ್ತಿಯಲ್ಲಿ ಗುರುವೆ? ನಿಮಗೆ ಲವಲೇಶ ಭಕ್ತಿಯಿಲ್ಲ, ನೀವೆಲ್ಲರು ಉಪಾಧಿಕರು. ನಿರುಪಾಧಿಕರು ಎಮ್ಮ ಮಹಾಸದ್ಭಕ್ತರು ತನು ಮನ ಧನವನರ್ಪಿಸಿ ಉಂಡು ಉಣಿಸಿ ಆಡಿ ಹಾಡಿ ಸುಖಿಯಾದರು ಶರಣರು. ಇಂತಹ ಶರಣಭರಿತ ಸದಾಶಿವಮೂರ್ತಿ ಮಹಾಸದ್ಗುರುವೇ ಭಕ್ತಿಯಲ್ಲಿ ಗುರು ಕಾಣಿರೆ. ಜ್ಞಾನದಲ್ಲಿ ಗುರುವೇ? ನೀವೆಲ್ಲರು ದೇವದಾನವ ಮಾನವರು ಅಜ್ಞಾನಿಗಳು. ಜ್ಞಾತೃ ಜ್ಞಾನ ಜ್ಞೇಯವಪ್ಪ ಪರಶಿವಲಿಂಗವನರಿಯದೆ ಅಹಂಕಾರದಿಂ ಲಘುವಾದಿರಿ. ಪರಧನ ಪರಸ್ತ್ರೀ ಪರಕ್ಷೇತ್ರಕ್ಕೆ ಆಸೆಮಾಡಿ ಲಘುವಾದಿರಿ ನಿರಾಶಸಂಪೂರ್ಣರು ಶಿವಜ್ಞಾನಸಂಪನ್ನರು ಎಮ್ಮ ಮಾಹೇಶ್ವರರು ಇಂತಹ ಮಾಹೇಶ್ವರರಿಂಗೆ ಶಿವಜ್ಞಾನವ ಕರುಣಿಸುವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ವೈರಾಗ್ಯದಲ್ಲಿ ಗುರುವೆ? ನೀವು ಆಶಾಬದ್ಧರು, ನಿರಾಶಾಸಂಪೂರ್ಣರು ಎಮ್ಮ ಸದ್ಭಕ್ತರು. ಇಂತಹ ಭಕ್ತದೇಹಿಕನಪ್ಪ ದೇವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ವೈರಾಗ್ಯದಲ್ಲಿ ಗುರು ಕಾಣಿರೆ. ಇದು ಕಾರಣ, ನಿತ್ಯದಲ್ಲಿ, ಸತ್ಯದಲ್ಲಿ, ಅಷ್ಟಮಹದೈಶ್ವರ್ಯದಲ್ಲಿ ದೀಕ್ಷೆಯಲ್ಲಿ, ಸ್ವಾನುಭಾವದಲ್ಲಿ, ಜ್ಞಾನದಲ್ಲಿ ವಿದ್ಯೆಯಲ್ಲಿ, ಬುದ್ಧಿಯಲ್ಲಿ, ವೈರಾಗ್ಯದಲ್ಲಿ, ಮಾತಾಪಿತರಲ್ಲಿ ಉಪಮಾತೀತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. `ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ, ಮಹಾಘನತರವಪ್ಪ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಲಲಾಟಲೋಚನಂ ಚಾಂದ್ರೀಂ ಕಲಾಮಪಿ ಚ ದೋದ್ರ್ವಯಂ ಅಂತರ್ನಿಧಾಯ ವರ್ತೇ[s]ಹಂ ಗುರುರೂಪೋ ಮಹೇಶ್ವರಿ ಎಂದುದಾಗಿ ಪರಶಿವನೇ ಗುರು, ಶ್ರೀಗುರುವೇ ಪರಶಿವನು. ಇಂತಹ ಮಹಾಸದ್ಗುರುವಪ್ಪ ಪರಶಿವಮೂರ್ತಿ ಕಾರುಣ್ಯವ ಮಾಡಿ, ಸದ್ಭಕ್ತಿಪದವ ತೋರಿದ ಎಮ್ಮ ಗಣನಾಥದೇವರೇ ಗುರು ಕಾಣಿರೆ. ಇದು ಕಾರಣ, ಶರಣಮೂರ್ತಿ ಶ್ರೀಗುರು. ಶ್ರೀಗುರು ಲಿಂಗ ಜಂಗಮ ಒಂದೆಯಾಗಿ ಶ್ರೀಗುರುವೇ ಗುರು, ಉಳಿದದ್ದೆಲ್ಲಾ ಲಘು. ಪರಶಿವಲಿಂಗವೇ ಗುರು, ಉಳಿದವೆಲ್ಲವೂ ಲಘು. ಜಂಗಮವೇ ಗುರು, ಉಳಿದವೆಲ್ಲವೂ ಲಘು. ಇದನರಿದು ಶ್ರೀಗುರುವನೇ ನಂಬುವುದು. ತನು ಮನ ಧನವನರ್ಪಿಸುವುದು, ನಿರ್ವಂಚಕನಾಗಿ ನಿರುಪಾಧಿಕನಾಗಿ ನಿರಾಶಾಸಂಪೂರ್ಣನಾಗಿ, ಧ್ಯಾನಿಸಿ ಪೂಜಿಸಿ ಸದ್ಭಕ್ತಿಯಿಂ ವರ್ತಿಸಿ ಪ್ರಸಾದವ ಪಡೆದು ಮುಕ್ತನಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನೊಂದು ಭಾಷೆಯನವಧರಿಸುವದು ಮಹಾಮಹಿಮ ಗುರುವೆ, ಮುನ್ನಾದುದಕ್ಕೆ ನಿನ್ನ ಮನ ಬಂದಂತೆ ಮಾಡು. ಇನ್ನೊಂದು ಭಾಷೆಯನವಧರಿಸುವದು ಮಹಾಮಹಿಮ ಲಿಂಗವೆ, ಪರವಧುವೆನ್ನ ಹೆತ್ತತಾಯಿ ಸಮಾನ. ಇದ್ದವರೆನ್ನ ಸಹೋದಯಸ್ತ್ರೀಯ ಸಮಾನ. ಪಣ್ಯಾಂಗನೆಯರ ಸಂಗವೆನಗೆ ನಾಯಮಾಂಸ ನರರಡಗಿನ ಸಮಾನ. ದಾನವರ ಸಂಗವೆನಗೆ ಸೂಕರನ ಮಲದ ಸಮಾನ. ಇಹಿಂಗೆಂದು ಭಾಷೆಯ ಮಾಡಿ, ತಿರುಗಿ ಆಸೆ ಮಾಡಿ ಕೂಡಿದೆನಾದಡೆ, ನಿಮ್ಮ ಪ್ರಸಾದಕ್ಕೆ ಬಾಯಿದೆರೆಯನು. ತನು ಲೋಭದಿಂದ ಕೂ[ಡಿದೆನಾದ]ಡಾ ತನುವ ದಿಗುಬಲಿಗೊಡುವೆನು, ಕೊಡದಿರ್ದಡೆ, ಧರೆ ಚಂದ್ರಾರ್ಕರುಳ್ಳನ್ನ ಬರ ಅರಸು ನರಕದಲ್ಲಿಕ್ಕು. ಸೂಕರ ನಾಯಿ ವಾಯಿಸ ಗಾರ್ದಭ ಬಸುರಲ್ಲಿ ಬರಿಸು. ಬರಿಸದಿದಡೆ ನಿಮಗೆ ನಿಮ್ಮಾಣೆ ಸಕಳೇಶ್ವರಾ.
--------------
ಸಕಳೇಶ ಮಾದರಸ
ಮನಕ್ಕೆ ವ್ರತವ ಮಾಡಿ, ತನುವಿಗೆ ಕ್ರೀಯ ಮಾಡಬೇಕು. ಇಂದ್ರಿಯಂಗಳಿಗೆ ಕಟ್ಟನಿಕ್ಕಿ, ಆತ್ಮನ ಸಂದೇಹವ ಬಿಡಿಸಿ ಕ್ರೀಯ ಮಾಡಬೇಕು. ಹೀಂಗಲ್ಲದೆ ವ್ರತಾಚಾರಿಯಲ್ಲ. ಮನಕ್ಕೆ ಬಂದಂತೆ ಹರಿದು, ಬಾಯಿಗೆ ಬಂದಂತೆ ನುಡಿದು, ಇಂತೀ ನಾ ವ್ರತಿಯೆಂದರೆ ಮೂಗನರಿಯದೆ ಮಾಣ ಏಲೇಶ್ವರಲಿಂಗನು.
--------------
ಏಲೇಶ್ವರ ಕೇತಯ್ಯ
ಅಹಿ ಕ್ರೂರಮೃಗಂಗಳೆಲ್ಲಕ್ಕೂ ಬಾಯಿಕಟ್ಟಿಂದ ಕಚ್ಚವು ಫಲಂಗಳ, ಹೊಲದಲ್ಲಿದ್ದಡೂ ಆ ಹೊಲದ ಸೀಮೆಯ ಫಲವನೊಲ್ಲದ ತೆರದಿಂದ ಕಡೆಯೆ ನಿಮ್ಮ ಹೊಲಬಿನ ಹೊಲ ? ಗುರುಭಕ್ತನಾದಡೆ ಗುರು ಆಜ್ಞೆ ತಪ್ಪದೆ ಲಿಂಗಭಕ್ತನಾದಡೆ ಅರ್ಚನೆ, ಪೂಜನೆ, ನಿತ್ಯ ನೇಮ ಕೃತ್ಯಂಗಳು ತಪ್ಪಡೆ, ಜಂಗಮಭಕ್ತನಾದಡೆ ಆಪ್ಯಾಯನದ ಅನುವಿಷಯದ ಡಾವರ ಆಶೆಯ ಪಾಶದ ಪರಿಭ್ರಮಣವನರಿತು ಸುಖಿಯಲ್ಲದೆ, ದುಃಖಿಯಲ್ಲದೆ ಬಂದಂತೆ ಬಾಯಿಗರೆಯದೆ, ಕಂಡುದ ಬೇಡದೆ, ನಿಂದೆಗೆಡೆಗೊಡದೆ ನಿಜಲಿಂಗಾಂಗಿಯನರಿದು ಭಕ್ತಿಗೆ ಊಣಿಯವಿಲ್ಲದೆ ಅವರವರ ಒಪ್ಪಕ್ಕೆ ತಕ್ಕ ಚಿತ್ತವಿದ್ದು ಮಾಡುತ್ತಿಪ್ಪ ಭಕ್ತನ ಬಾಗಿಲೆ ಸದ್ಯೋಜಾತಲಿಂಗವ ಕಾಬುದಕ್ಕೆ ಕಾಹಿಲ್ಲದ ಪಥ.
--------------
ಅವಸರದ ರೇಕಣ್ಣ
ಪೂಜೆಯಲ್ಲಿ ಲಕ್ಷಿತವಪ್ಪವರು ಪುಣ್ಯದ ಆಗಿಂಗೆ ಒಡಲು. ದಾಸೋಹವೆಂಬ ಸೋಹವನರಿದಲ್ಲಿ ಚತುರ್ವಿಧಫಲಪದದಾಸೆಗೆ ಒಡಲು. ಇಂತೀ ಉಭಯದ ಪ್ರೀತಿಯನರಿತು ತೋರಿದ ತೋರಿಕೆ ಬಂದಂತೆ, ಅವನಾರೈದು ಗುರುವಿಂಗೆ ತನು ಹೋಯಿತ್ತು; ಲಿಂಗಕ್ಕೆ ಮನ ಹೋಯಿತ್ತು; ಜಂಗಮಕ್ಕೆ ಧನ ಹೋಯಿತ್ತು;. ಇಂತೀ ಎಲ್ಲ ಲಕ್ಷ್ಯದಲ್ಲಿ ಲಕ್ಷಿಸಿ, ನೀವು ಕೈಲಾಸಕ್ಕೆ ಹೋದೆಹೆನೆಂಬ ಕಲ್ಲೆದೆಗೆ ನಾನಂಜುವೆ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಮನವೆಂಬ ಒರಳಿಗೆ ಸಕಲಕರಣಂಗಳೆಂಬ ತಂಡುಲವ ಹಾಕಿ, ಸುಜ್ಞಾನವೆಂಬ ಒನಕೆಯ ಪಿಡಿದು ಪರಮಪರಿಣಾಮದೊಳಗೋಲಾಡುತ್ತ ಕುಟ್ಟಿ, ಅಜ್ಞಾನವೆಂಬ ತೌಡ ಕೇರಿ ಚಿತ್ಕರಣಂಗಳೆಂಬ ಅಕ್ಕಿಯ ತೆಗೆದುಕೊಂಡು ಸದ್ಭಾವವೆಂಬ ಭಾಂಡದಲ್ಲಿ ತುಂಬಿ ಪರಮಾನಂದ ಜಲವೆಂಬ ಎಸರನಿಟ್ಟು, ತ್ರಿಪುಟಿಯೆಂಬ ಒಲೆಯ ಹೂಡಿ ಚಿದಗ್ನಿಯೆಂಬ ಬೆಂಕಿಯ ಪುಟವನಿಕ್ಕಿ ಅರಿಷಡ್ವರ್ಗಗಳೆಂಬ ಸೌದೆಯ ಹೊತ್ತಿಸಿ, ಮಹಾಜ್ಞಾನವೆಂಬ ಪಾಕವ ಮಾಡಿ ಪರಿಪೂರ್ಣವೆಂಬ ಪರಿಯಾಣದಲ್ಲಿ ಗಡಣಿಸಿಕೊಂಡು, ಅಖಂಡಪರಿಪೂರ್ಣ ಮಹಾಘನಲಿಂಗಕ್ಕೆ ಸಲಿಸಬಲ್ಲಾತನೆ ಶರಣನು. ಆತನೆ ನಿಜಾನುಭಾವಿ, ಆತನೆ ಲಿಂಗೈಕ್ಯನು. ಇಂತೀ ಭೇದವನರಿಯದೆ ಮಣ್ಣಪರಿಯಾಣ, ಲೋಹಪಾತ್ರೆಯಲ್ಲಿ ಮನಬಂದ ಪರಿಯಲ್ಲಿ ಹಾಯ್ಕಿ ಹಾಯ್ಕಿ ಒಟ್ಟಿಸಿಕೊಂಡು ಬಾಯಿಗೆ ಬಂದಂತೆ ತಿಂಬುವ ಜೀವಗಳ್ಳ ಭವಭಾರಕರಿಗೆ ಏಕಭಾಜನವೆಲ್ಲಿಯದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಗದ ವರ್ತಕದ ಇರವು ಎಂತೆಂದಡೆ: ಶೈವ ನೇಮಸ್ಥ ಎರಡೆ ಭೇದ. ದಿವಾರಾತ್ರಿ ಉಭಯ ಕೂಡಿ ದಿನ ಲೆಕ್ಕಕ್ಕೆ ಬಂದಂತೆ, ಶಕ್ತಿ ಸಾಕಾರವಾಗಿ, ನಿಶ್ಶಕ್ತಿ ವಸ್ತುರೂಪಾಗಿ, ಉಭಯವು ಕೂಡಿ ಘಟ ನಡೆವಂತೆ ನಡೆವುದು ಜಗ ಸಂಬಂಧ, ಭಯಕ್ಕೆ ಹೊರಗಾದುದು, ಸದಾಶಿವಮೂರ್ತಿಲಿಂಗದ ಭಾವಸಂಬಂಧ.
--------------
ಅರಿವಿನ ಮಾರಿತಂದೆ
ಆಚಾರವಿಲ್ಲದ ಗುರು ಭೂತಪ್ರಾಣಿ ಆಚಾರವಿಲ್ಲದ ಲಿಂಗ ಶಿಲೆ. ಆಚಾರವಿಲ್ಲದ ಜಂಗಮ ಮಾನವ. ಆಚಾರವಿಲ್ಲದ ಪಾದೋದಕ ನೀರು. ಆಚಾರವಿಲ್ಲದ ಪ್ರಸಾದ ಎಂಜಲು. ಆಚಾರವಿಲ್ಲದ ಭಕ್ತ ದುಃಕರ್ಮಿ. ಇದು ಕಾರಣ, ಅಟ್ಟವನೇರುವುದಕ್ಕೆ ನಿಚ್ಚಣಿಗೆಯೆ ಸೋಪಾನವಯ್ಯ. ಹರಪದವನೆಯ್ದುವರೆ ಶ್ರೀ ಗುರು ಹೇಳಿದ ಸದಾಚಾರವೆ ಸೋಪಾನವಯ್ಯ. ಗುರುಪದೇಶವ ಮೀರಿ, ಮನಕ್ಕೆ ಬಂದಂತೆ ವರ್ತಿಸುವ ಪಾಪಿಗಳ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಸ್ತಕದಲ್ಲಿ ರುದ್ರಾಕ್ಷಿಯಂ ಧರಿಸಿ ಅನ್ಯದೈವದ ಗುಡಿಯ ಹೊಗಲಾಗದು ಶರಣ. ಕರಣಂಗಗಳಲ್ಲಿ ರುದ್ರಾಕ್ಷಿಯಂ ಧರಿಸಿ ಹರನಿಂದೆ ಗುರುನಿಂದೆಯ ಕೇಳಲಾಗದು ಶರಣ. ತೋಳುಗಳಲ್ಲಿ ರುದ್ರಾಕ್ಷಿಯಂ ಧರಿಸಿ ಪರಸತಿಯನಪ್ಪಲಾಗದು ಶರಣ. ಮುಂಗೈಯಲ್ಲಿ ರುದ್ರಾಕ್ಷಿಯಂ ಧರಿಸಿ ಅನ್ಯರಿಗೆ ಕೈಮುಗಿಯಲಾಗದು ಶರಣ. ಇದನರಿದು ಧರಿಸಿದಡೆ ಶ್ರೀರುದ್ರಾಕ್ಷಿಯಹುದು. ಅಂತಲ್ಲದಿರ್ದಡೆ, [ಡ]ಂಬ ಹಗರಣವ ಹೊತ್ತು ಬಂದಂತೆ ಎಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಗುರುದೀಕ್ಷೆಯ ಪಡೆದು, ಗುರುಲಿಂಗವ ಶಿರದಲ್ಲಿ ಧರಿಸಿ, ಗುರುಮಂತ್ರವ ಕರ್ಣದಲ್ಲಿ ಕೇಳಿ, ಗುರುಕುಮಾರ ತಾನಾಗಿ, ಮುಂಡೆಗೆ ಮುತ್ತೈದೆತನ ಬಂದಂತೆ ಭವದಂಡಲೆಯ ಕಳೆದು, ಶಿವಭಕ್ತನ ಮಾಡಿದ ಗುರುದೈವವನರಿಯದೆ, ಅನ್ಯದೈವವ ಹೊಗಳುವ ಕುನ್ನಿ ಮಾನವ ನೀ ಕೇಳಾ ! ಗರುದೇವರಲ್ಲದನ್ಯದೇವರ ಹೊಗಳಿದರೆ ನರಕವೆಂಬುದನರಿಯಾ. ಗುರುವೆ ಪರಬ್ರಹ್ಮ, ಪರಶಿವ. ಗುರುವಿನಿಂದ ಪರಮಾತ್ಮನ ನೆನಹು ಅಂಗದೊಳು ನೆಲೆಗೊಂಡಿತಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪತಿಭಕ್ತೆಯಾದರೆ, ತನ್ನ ಪತಿಗೆ ಸರ್ವೋಪಚಾರಂಗಳ ಮಾಡಿ ಸಮಸ್ತ ಪದಾರ್ಥವನಾತಂಗೆ ನೀಡಿ ಆತನುಂಡು ಮಿಕ್ಕುದನುಂಬುದೇ ಪತಿವ್ರತಾಭಾವವೆಂಬ ಲೋಕದ ದೃಷ್ಟಾಂತದಂತೆ ಶರಣಸತಿ ಲಿಂಗಪತಿಯೆಂಬುದನು ಗುರೂಪದೇಶದಿಂದರಿದು ಆ ಗುರುವಚನಪ್ರಮಾಣಂಗಳಿಂದವೆ ಸಮಸ್ತ ಪದಾರ್ಥವ ತನ್ನ ಕರಸ್ಥಲದಲ್ಲಿರ್ಪ ಇಷ್ಟಲಿಂಗಕ್ಕೆ ಕೊಟ್ಟು ಕೊಂಬುದೆ ಆಚಾರ. ಇದು ಕಾರಣ, ಇಷ್ಟಲಿಂಗಕ್ಕೆ ಕೊಡದೆ ಅಂತರಂಗದಲ್ಲಿ ಪ್ರಾಣಲಿಂಗವುಂಟೆಂದು ಮನಕ್ಕೆ ಬಂದಂತೆ ತಿಂಬ ಶ್ವಾನಜ್ಞಾನಿಗಳಿಗೆ ನಾಯಕನರಕ ತಪ್ಪದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಷಡುರುಚಿಪದಾರ್ಥಂಗಳ ಇಷ್ಟಲಿಂಗಕೆ ತೋರದೆ ಬಾಯಿಗೆ ಬಂದಂತೆ ತಿಂಬ ನರಕಿಗಳ ಕಂಡು, ನಮ್ಮ ಶಿವಶರಣರು ಮೆಚ್ಚುವರೇನಯ್ಯ ? ಅಂತಪ್ಪ ನರಕಿ ಕೀಳರ ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಂಡಮಂಡಲದಲ್ಲಿ ಕಂಡವರೆಂದು ಕಾಲಿಗೆ ಬಂದಂತೆ ನಡೆವರಯ್ಯಾ ; ಬಾಯಿಗೆ ಬಂದಂತೆ ಆಡುವರಯ್ಯಾ ; ಮನಕ್ಕೆ ಬಂದಂತೆ ಮಾಟಕೂಟದೊಳಿರ್ದು, ಶರಣಪದ ಬೆಳಗ ಸುಖಮಯರೆಂದರೆ ನಗುವರಯ್ಯಾ ನಿಮ್ಮ ಶರಣರು, ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->