ಅಥವಾ

ಒಟ್ಟು 55 ಕಡೆಗಳಲ್ಲಿ , 15 ವಚನಕಾರರು , 46 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಿನ್ನವಿಲ್ಲದೆ ಶರಣೆಂಬೀ ಚನ್ನಭಕ್ತರು ಎನ್ನರಸುತ್ತ ಬಂದರೆ ಬೆನ್ನ ಹತ್ತಿ ಬಂದ ಎನ್ನಯ್ಯ ಸಾಕ್ಷಿಯಾಗಿ. ಎಲ್ಲವೂ ನಿಮ್ಮದೆಂಬೆಯೆಂದಲ್ಲಿ ವಂಚನೆಯುಳ್ಳರೆ ಬಂಧನ ಬಪ್ಪುದು ತಪ್ಪದು. ಅಂದಂದಿನ ಮಾತು ಇಂದುಳಿವನಲ್ಲ, ಸಂದುಸಂಶಯ ನಿಂದುರುಹಿದ ನಿಷೆ*ಯೆನಗುಂಟು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿರಾಕಾರ ಪರಬ್ರಹ್ಮವಸ್ತು ಎನ್ನ ಕರಸ್ಥಲಕೆ ಆಕಾರವಾಗಿ ಬಂದರೆ ಹೊಗಳಲಮ್ಮೆ, ಹೊಗಳದಿರಲಮ್ಮೆ. ಅದೇನು ಕಾರಣವೆಂದರೆ : ಬ್ರಹ್ಮ ವಿಷ್ಣು ರುದ್ರರ ಸ್ತುತಿಗೆ ನಿಲುಕದ ವಸ್ತುವೆನ್ನ ನೆಮ್ಮಲು ನಾ ಬದುಕಿದೆನಯ್ಯಾ ನಾ ಬದುಕಿದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಊರಿಗೆ ಹೊಸಬರು ಬಂದರೆ ಪುರದೊಳಗಣ ಶ್ವಾನ ನೋಡಿ ಬಗುಳದೆ ಸುಮ್ಮನೆ ಬಿಡುವುದೆ ಊರಿಗೆ ಹೊರಗಾದ ಶರಣರು ಊರುಗಳ ಮಧ್ಯದೊಳಿರಲು ದೂಷಕರು ದೂಷಿಸದಿಪ್ಪರೇ ಅಯ್ಯ ? ದೂಷಕರ ಧೂಮಕೇತುಗಳು ನಿಮ್ಮ ಶರಣರು, ಕೂಡಲಸಂಗಮದೇವಾ.
--------------
ಬಸವಣ್ಣ
ಶಿವಭಕ್ತನಾದ ಬಳಿಕ ಅನ್ಯಭಜನೆಯ ಮಾಡದಿರಬೇಕು. ಶಿವಭಕ್ತನಾದ ಬಳಿಕ ಪರಸತಿ, ಪರನಿಂದೆ, ಪರಧನವ ಹಿಡಿಯದಿರಬೇಕು. ಶಿವಭಕ್ತನಾದ ಬಳಿಕ ಲಿಂಗಕ್ಕೆ ತೋರದೆ ಪ್ರಸಾದವ ಮುಟ್ಟದಿರಬೇಕು. ಅಂಗಲಿಂಗವು ಸಮರಸವಾಗಿರಬೇಕು. ದಾರಿದ್ರ್ಯವು ಬಂದರೆ ಅಂಗವೇ ನಿನ್ನದೆಂದರಿಯಬೇಕು. ಸಂಪತ್ತು ಬಂದರೆ ನಿನ್ನದೆಂದು ಭಾವಿಸಬೇಕು. ಲಿಂಗಬಾಹ್ಯರಿಗೆ ನರಕ ತಪ್ಪದು. ಇಷ್ಟಲಿಂಗಮವಿಶ್ವಸ್ಯ ಅನ್ಯಲಿಂಗಮುಪಾಸತೇ ಶ್ವಾನಯೋನಿಶತಂ ಗತ್ವಾ ಚಂಡಾಲಗೃಹಮಾಚರೇತ್ ಇದು ಕಾರಣ, ಪ್ರಾಣಲಿಂಗದ ಭಕ್ತಿಯ ಮರೆದು ಯಮಪಟ್ಟಣಕ್ಕೆ ಹೋಹರೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಅಯ್ಯಾ, ಗುರುಲಿಂಗವೆನ್ನ ಕುರಿತು ಕರಸ್ಥಲಕ್ಕೆ ಬಂದ ಬಳಿಕ ನೆರೆಹೊರೆಯವರತ್ತ ಸಾರಿ, ಕೆಂಚಕೆಡಿಗರತ್ತ ಸಾರಿ, ಬಿಳಿಯ ಬೆಂಗಡಿಗರತ್ತ ಸಾರಿ, ಕರಿಯಗೊಂದಣಿಗರತ್ತ ಸಾರಿ, ಮುಂದೆ ಹುಣ್ಣಿವೆಗಮ್ಮಯ್ಯನ ಯಾತ್ರೆ ಬೇಕಾದರೆ ಅಮಾವಾಸ್ಯೆಯ ಕಳೆದು ಅಂಗ ಮಡಿಯಾಗಿ ಕಂಗಳ ಮುಂದೆ ಬಂದರೆ ಸಂಗಯ್ಯನ ತೇರು ಸುಖದಿಂದೆ ರಂಗಮಂಟಪಕ್ಕೆ ಸಾಗಿ, ಧರೆಯಾಕಾಶ ತುಂಬಿದ ಪರಿಸೆ ಹರಹರ ಶಿವಶಿವ ಜಯಜಯ ಚಾಂಗು ಭಲೆಯೆಂದು ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಓಲ್ಯಾಡುವ ಬನ್ನಿರಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಂಗಸಹಿತ ಶರಣರು ಬಂದರೆ ನಂಬುವುದೆನ್ನ ಮನವು, ನಚ್ಚುವುದೆನ್ನ ಮನವು. ಹಾವು ನೇಣೆಂಬ ಭ್ರಾಂತುಳ್ಳನ್ನಕ್ಕ ನಾನು ಭಕ್ತನೆಂತಪ್ಪೆನು ಅಂಗಲಿಂಗ ಸನ್ನಿಹಿತವಾಗಿ ಬಂದಡೆ, ಸಂಗ ನೀನೆಂದು, ಮತ್ತೆ ಮನದಲ್ಲಿ ಸಂದೇಹ ಹೊಳೆದಡೆ ಬೆಂದೆನಲ್ಲಾ ನಾನು, ಕೂಡಲಸಂಗಮದೇವಾ. 404
--------------
ಬಸವಣ್ಣ
ಏಕೋದೇವ ಶಿವನದ್ವಿತೀಯ. ಶಿವನಲ್ಲದೆ ಬೇರೆ ದೈವವಿಲ್ಲವೆಂದು ಸಾರಿ ನುಡಿವುತ್ತಿ(ವೆ), ಶ್ರುತಿ ಶಾಸ್ತ್ರ ಪುರಾಣ ಆಗಮಂಗಳೆಲ್ಲವು. ಶಿವನಲ್ಲದೆ ಬೇರೆ ದೈವವಿಲ್ಲವೆಂದು ಸಾರಲು, ಮರಳಿ ವಿಷ್ಣು ದೇವರೆಂದು ನುಡಿವುತ್ತಿಪ್ಪರು. ದೈವಕ್ಕೆ ಉತ್ಪತ್ತಿ ಸ್ಥಿತಿ ಲಯಂಗಳೆಂಬುದುಂಟೆ. ದೃಷ್ಟಾಂತರ ಜಾಯತೆ ಅಷ್ಟಮಿ ಸಾಕ್ಷಿ. ಆ ವಿಷ್ಣುವಿಂಗೆ ಲಯವುಂಟೆಂಬುದಕ್ಕೆ ಕಾಡಬೇಡನೆಚ್ಚಂಬು ಅಂಗಾಲಲ್ಲಿ ನೆಟ್ಟು ಪ್ರಾಣವ ಬಿಟ್ಟುದೇ ಸಾಕ್ಷಿ. ಅಚ್ಯುತಂಗೆ ಅನೇಕ ಭವವುಂಟೆಂಬುದಕ್ಕೆ ಮತ್ಸ್ಯ ಕೂರ್ಮ ವರಾಹವತಾರವಾದುದೇ ಸಾಕ್ಷಿ. ಆ ಹರಿ, ಹರನ ಭೃತ್ಯನೆಂಬುದಕ್ಕೆ ರಾಮೇಶ್ವರ ಆದಿಯಾದ ಪ್ರತಿಷೆ*ಗಳೇ ಸಾಕ್ಷಿ. ಇಂತಪ್ಪ ಹರಿಯನು ಹರಂಗೆ ಸರಿಯೆಂದು ನುಡಿವರು ಅಜ್ಞಾನಿಗಳು. ಆತಂಗಿಲ್ಲದ ಮಹತ್ವದ ತಾವು ನುಡಿವುತ್ತಿಹರು. ಬಲಿಯ ಮೂರಡಿ ಭೂಮಿಯ ಸ್ಥಾನವ ಬೇಡಿದಲ್ಲಿ ಪಂಚಾಶತಕೋಟಿ ಭೂಮಿ ಸಾಲದೆ ಹೋಯಿತೆಂದು ನುಡಿವುತ್ತಿಹರು. ಮಗಧನೆಂಬ ರಾಕ್ಷಸನನಟ್ಟುವಲ್ಲಿ ಅದೆಲ್ಲಿ ಬಂದಿತೊ, ಓಡುವುದಕ್ಕೆ ಭೂಮಿ. ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲಾ ಇದ್ದೀತೆಂದು ನುಡಿವುತ್ತಿಹರು. ಆ ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲವು ಇದ್ದರೆ, ಸೀತೆ ಹೋದಳೆಂದು ಅರಸಿ ಸೇತುವೆ ಕಟ್ಟಿ ದಣಿಯಲೇಕೊ. ವಿಷ್ಣುವಿನ ಬಾಣದ ಮೊನೆಯಲ್ಲಿ ಸಪ್ತಸಮುದ್ರಂಗಳೆಲ್ಲವೂ ಬಂದವೆಂದು ನುಡಿವುತ್ತಿಹರು. ಆ ವಿಷ್ಣುವಿನ ಬಾಣದ ಮೊನೆಯಲ್ಲಿ ಸಪ್ತಸಮುದ್ರಂಗಳೆಲ್ಲವು ಬಂದರೆ, ಕಪಿಗಳ ಕೂಡಿ ಸೇತುವೆ ಕಟ್ಟುವುದಕ್ಕೇನು ಕಾರಣ. ಇಂತಪ್ಪ ಹರಿಯನು ಹರಗೆ ಸರಿಯೆಂದು ನುಡಿವ ದ್ವಿಜರ ನುಡಿಯನು ಪ್ರಮಾಣಿಸಿದರೆ, ಅಘೋರ ನರಕದಲ್ಲಿ ಇಕ್ಕದೆ ಮಾಣ ನಿಜಗುರು ಶಾಂತಮಲ್ಲಿಕಾರ್ಜುನ.
--------------
ನಿಜಗುರು ಶಾಂತಮಲ್ಲಿಕಾರ್ಜುನ
ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು ಪರರ ಮುಂದೆ ತಮ್ಮ ಬಿಂಕವ ತೋರುವರು. ತೋರಿದಂತೆ ಆಚರಣೆಯ ತೋರರು. ಅದೆಂತೆಂದಡೆ : ತನ್ನ ದೀಕ್ಷೋಪದೇಶವ ಮಾಡಿದಂಥ ಗುರು ಮನೆಗೆ ಬಂದರೆ ಮನ್ನಿಸರು. ನಯನುಡಿಯ ಮಾತನಾಡರು. ಒಂದು ಹೊನ್ನು ವಸ್ತ್ರವ ಬೇಡಿದರೆ ಇಲ್ಲೆಂಬರಲ್ಲದೆ ಕೊಟ್ಟು ಸಂತೋಷಪಡಿಸುವವರಿಲ್ಲ. ಗ್ರಾಮದ ಮಧ್ಯದಲ್ಲಿ ಆವನೊಬ್ಬ ಜಾತಿಹಾಸ್ಯಕಾರನು ಬಂದು, ಡೋಲು ಡಮಾಮಿಯ ಹೊಡೆದು, ಬೊಬ್ಬಿಯ ರವಸದಿಂದ ಮಣ್ಣವರಸಿ, ರಟ್ಟಿ ಮಂಡಿಯ ತಿಕ್ಕಿ, ತೊಡೆಯ ಚಪ್ಪರಿಸಿ, ಕೋ ಎಂದು ಕೂಗಿ, ಭೂಮಿಗೆ ಕೈ ಹಚ್ಚಿ, ಲಾಗದ ಮೇಲೆ ಲಾಗ ಹೊಡೆದು, ಅಂತರಪುಟಕಿಯಲ್ಲಿ ಮೂರು ಹೊರಳಿಕೆಯ ಹೊರಳಿ, ಮುಂದೆ ಬಂದು ನಿಂತು, ಮಜುರೆಯ ಮೇಲೆ ಮಜುರೆಯ ಹೊಡೆದು, ಅವರ ಹೆಸರೆತ್ತಿ ಕೊಂಡಾಡಲು, ಅವರ ಲಾಗಕ್ಕೆ ಮೆಚ್ಚಿ ಶಾಲು ಶಕಲಾತಿ ಮೊದಲಾದ ವಸ್ತ್ರವ ಕೊಟ್ಟು, ಕಾಲತೊಡರು ಮುಂಗೈಸರಪಳಿ ಛತ್ರ ಚಾಮರ ಜಲ್ಲಿ ಮೊದಲಾದ ಚಾಜವ ಕೊಟ್ಟು, ಸಂತೋಷಪಡಿಸುವರಲ್ಲದೆ ಇಲ್ಲೆಂಬರೇ? ಇಲ್ಲೆನ್ನರಯ್ಯ. ಮತ್ತಂ, ಲಿಂಗಪೂಜೆಯ ಮಾಡೆಂದಡೆ ಎನ್ನಿಂದಾಗದೆಂಬರು. ಲಿಂಗಕ್ಕೆ ಸಕಲಪದಾರ್ಥವನರ್ಪಿಸಿ ಸಲಿಸೆಂದಡೆ ಎನ್ನಿಂದಾಗದೆಂದು, ಬಂದ ಪದಾರ್ಥವ ಲಿಂಗಕ್ಕೆ ತೋರದೆ ಬಾಯಿಗೆಬಂದಂತೆ ತಿಂಬುವರು. ಜಟ್ಟಿಂಗ ಹಿರಿವಡ್ಯಾ ಲಕ್ಕಿ ದುರ್ಗಿ ಚಂಡಿ ಮಾರಿಯ ಪೂಜಿಸೆಂದಡೆ ತನುಮನವು ಹೊಳೆಯುಬ್ಬಿದಂತೆ ಉಬ್ಬಿ, ಹೊತ್ತಾರೆ ಎದ್ದು ಪತ್ರಿ ಪುಷ್ಪವ ತಂದು, ಒಂದೊತ್ತು ಉಪವಾಸ ಮಾಡಿ, ಮೈಲಿಗೆಯ ಕಳೆದು ಮಡಿಯನುಟ್ಟು, ಮನಪೂರ್ವಕದಿಂ ಪೂಜೋಪಚಾರವ ಮಾಡಿ, ಭೂಮಿಯಲ್ಲಿ ಕಾಯಕಷ್ಟವ ಮಾಡಿ ಬೆಳೆದಂಥ ಹದಿನೆಂಟು ಜೀನಸಿನ ಧಾನ್ಯವ ತಂದು ಪಾಕ ಮಾಡಿ, ಆ ದೇವತೆಗಳಿಗೆ ನೈವೇದ್ಯವ ಕೊಟ್ಟು, ಮರಳಿ ತಾವು ಉಂಬುವರಲ್ಲದೆ, ಅಂತಪ್ಪ ದೇವತೆಗಳಿಗೆ ಕೊಡದ ಮುನ್ನವೆ ಸಾಯಂಕಾಲಪರಿಯಂತರವಾದಡೂ ಒಂದು ಬಿಂದು ಉದಕ ಒಂದಗಳನ್ನವ ಕೊಳ್ಳದೆ, ತನು-ಮನ ಬಳಲಿಸುವರಯ್ಯಾ. ಮತ್ತಂ, ಜಂಗಮಲಿಂಗವು ಹಸಿವು ತೃಷೆ ಆಪ್ಯಾಯನವಾಗಿ ಮಧ್ಯಾಹ್ನ ಸಾಯಂಕಾಲದೊಳಗೆ ಭಿಕ್ಷಕ್ಕೆ ಬಂದಡೆ, ಅನುಕೂಲವಿಲ್ಲ, ಮನೆಯೊಳಗೆ ಹಡದಾರ ಗದ್ದಲುಂಟು ಮನೆಯೊಳಗೆ ಗೃಹಸ್ಥರು ಬಂದಾರೆ, ಘನಮಾಡಿಕೊಳ್ಳಿರಯ್ಯಾ ಮುಂದಕ್ಕೆ ಎಂಬರಲ್ಲದೆ, ಅಂತಪ್ಪ ಆಪ್ಯಾಯನವಾದ ಜಂಗಮವ ಕರೆದು ಅನ್ನೋದಕವ ನೀಡಿ, ತೃಪ್ತಿಯ ಬಡಿಸುವರೆ ? ಬಡಿಸುವದಿಲ್ಲ. ಊರೊಳಗೆ ಒಬ್ಬ ಜಾರಸ್ತ್ರೀಯಳು ಉಂಡು ವೀಳ್ಯವಕೊಂಡು ಸಹಜದಲ್ಲಿ ತಮ್ಮ ಗೃಹಕ್ಕೆ ಬಂದಲ್ಲಿ ಆ ಜಾರಸ್ತ್ರೀಗೆ ಮನೆಯವರೆಲ್ಲರು ಉಣ್ಣು ಏಳು ಉಂಬೇಳೆಂದು ಆಕೆಯ ಕರವ ಪಿಡಿದು ಕರೆವರಯ್ಯಾ. ಅವಳು ಎನಗೆ ಹಸುವಿಲ್ಲೆಂದು ತಮ್ಮ ಗೃಹಕ್ಕೆ ಹೋಗಲು, ಅವಳು ಹೋದಮೇಲೆ ದೇವರಿಗೆ ಎಡಿಯ ಕಳಿಸಿದಂತೆ ಕಳುಹುವರಯ್ಯ. ಇಂತಪ್ಪ ತ್ರಿವಿಧಭ್ರಷ್ಟ ಹೊಲೆ ಮಾದಿಗರಿಗೆ ಗುರು-ಲಿಂಗ-ಜಂಗಮದ ಪ್ರೇಮಿಗಳಾದ ಸದ್ಭಕ್ತರೆಂದಡೆ, ಶಿವಜ್ಞಾನಿಗಳಾದ ಶಿವಶರಣರು ಕಂಡು ತಮ್ಮೊಳಗೆ ತಾವೇ ನಕ್ಕು ಅರಿಯದವರಂತೆ ಶಬ್ದಮುಗ್ಧರಾಗಿ ಸುಮ್ಮನೆ ಇರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಣ್ಣಿನಲ್ಲಿ ಕಂಡು ಮನದಲ್ಲಿ ಬಯಸಿ ಬಣ್ಣಗುಂದಿ ಬಳಲುವರಯ್ಯ. ಬಂದರೆ ಹೆಚ್ಚಿ, ಬಾರದಿದ್ದರೆ ಕುಂದಲೇತಕೆ? ಕುಂದಿದರೆ ಬಪ್ಪುದೆ? ಹಿರಿದು ಜರಿದು ಹೇಡಿಗೊಂಡು ಕರಗಿ ಕೊರಗಿ ಕೋಡಿವರಿದು[ದೆಂದು] ನಿಂದುರಿದು ಕಡುನೊಂದು ಭವಬಡುತ್ತಿಪ್ಪರಯ್ಯ. ಒಂದು ನಿಮಿಷ ನಿಮಿಷಾರ್ಧ ನಿಮ್ಮ ನೆನಹಿಲ್ಲ ನೋಡಾ! ಆಶೆಯೆಂಬ ಮಾಯಾಪಾಶದೊಳಗೆ ಸಿಕ್ಕಿ ದೋಷ ದುರ್ಗುಣದಿಂದ ಬಿದ್ದುರುಳುವ ಪಾಶಬದ್ಧರ ಈಶ ಲಾಂಛನಧಾರಿಗಳೆಂತೆಂಬೆನಯ್ಯಾ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮುದ್ದುಮುಖದ ಮಾನಿನಿಯ ಮಸ್ತಕದ ಮೇಲೆ ಅಗ್ನಿವರ್ಣದ ಪಂಜರದಲ್ಲಿ ಶ್ವೇತವರ್ಣದ ಒಂದು ಗಿಳಿ ಇಹುದು. ಆ ಗಿಳಿಯ ಕೊಳ್ಳಬೇಕೆಂದು ಆನೆ, ಕುದುರೆ, ವೈಲಿ, ಪಲ್ಲಕ್ಕಿಯನೇರಿಕೊಂಡು ಹೋದವರಿಗೆ ಆ ಗಿಳಿಯ ಕೊಡಳು. ದ್ರವ್ಯವುಳ್ಳವರಿಗೆ ಆ ಗಿಳಿಯ ತೋರಳು. ಕೈ ಕಾಲು ಕಣ್ಣು ಇಲ್ಲದ ಒಬ್ಬ ಬಡವ್ಯಾಧನು ಬಂದರೆ, ಆ ಗಿಳಿಯ ಕೊಟ್ಟು ಸುಖಿಸುವಳು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹರಂಗೆಯೂ ತನಗೆಯೂ ಏಕೋಭಾಜನವೆಂಬರು, ಗುರುಲಿಂಗ ಬಂದರೆ ಮತ್ತೊಂದು ಭಾಜನವ ತನ್ನಿಯೆಂಬ[ರಿಗೆ] ಲಿಂಗವುಂಟೆ ? ಲಿಂಗವ ಮುಟ್ಟಿ ಹಿಂಗುವ ಭವಿಗಳಿಗೆ ಲಿಂಗವುಂಟೆ ? ಲಿಂಗ ಜಂಗಮವನು ಮಹಾಪ್ರಸಾದವನು ಏಕವ ಮಾಡಿದವಂಗಲ್ಲದೆ. ಏಕೋಭಾಜನವಿಲ್ಲ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಜಂಗಮ ಬರಬೇಕೆಂದು ಲಿಂಗಾರ್ಚನೆಯ ಮಾಡೂದು. ಆ ಜಂಗಮ ಬಂದರೆ ತನ್ನ ಲಿಂಗಾರ್ಚನೆಯ ಮಾಣಬೇಕು, ಮಾದು ಜಂಗಮಾರ್ಚನೆಯ ಮಾಡಬೇಕು. ಲಿಂಗದಲೇನುಂಟು, ಜಂಗಮದಲೇನುಂಟೆಂದರೆ: ಲಿಂಗದಲ್ಲಿ ಫಲವುಂಟು ಪದವುಂಟು ಛಲವುಂಟು ಭವವುಂಟು. ಜಂಗಮದಲ್ಲಿ ಫಲವಿಲ್ಲ ಪದವಿಲ್ಲ ಕುಲವಿಲ್ಲ ಛಲವಿಲ್ಲ ಭವವಿಲ್ಲ. ಇದು ಕಾರಣ ಕೂಡಲಚೆನ್ನಸಂಗಮದೇವಾ ಜಂಗಮವೇ ಲಿಂಗವೆಂದು ನಂಬಿದನಾಗಿ ಬಸವಣ್ಣ ಸ್ವಯಲಿಂಗವಾದ.
--------------
ಚನ್ನಬಸವಣ್ಣ
ಆದಿಯ ನಲ್ಲನು ಹಾದಿಗೆ ಬಂದರೆ ಸಾಧಿಸಿ ಕರೆತಂದುಕೊಡಿರಮ್ಮ. ಎನಗೆ ಕುಸುಮಾಳಿ ಕಸ್ತೂರಿ ಚಂದನ ತೈಲವ ತಾನರಿದು ಧರಿಸಿ ಮುಡಿಸಲಿ, ಚಲುವಾಭರಣವ ತಾ ಮುಟ್ಟಿ ಧರಿಸಲಿ, ಸೌಖ್ಯಗೀತ ನೂತನಾದಿಗಳ ತಾ ನೋಡಿ, ಕೇಳಿ, ತೋರಿ ತಿಳಿಸಲಿ. ಸುಷಡುರಸವ ತಾ ರುಚಿಸೀಯಲಿ, ಎನ್ನ ಸಕಲ ಸುಖಾನಂದವ ತಾ ಭೋಗಿಸೆನಗಿತ್ತರೆ ಸಕಳೆಯರೊಲವೆನಗೆಂಬೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕ್ಷೀರದಿಂದಾದ ತುಪ್ಪ ಕ್ಷೀರವಪ್ಪುದೇ ? ನೀರಿನಿಂದಾದ ಮುತ್ತು ನೀರಪ್ಪುದೇ ? ವಿೂರಿ ಪೂರ್ವಕರ್ಮವನು ಹರಿದ ಭಕ್ತಗೆ ಬೇರೆ ಮತ್ತೆ ಜನ್ಮವುಂಟೆ ಲಿಂಗವಲ್ಲದೆ ? ಕಟ್ಟಿಹೆ ಬಿಟ್ಟಿಹೆವೆಂಬ ದಂದುಗ ನಿಮಗೇಕೆ ? ತೆರನನರಿಯದೆ ಹಲವು ತೊಪ್ಪಲ ತರಿತಂದು ಮೇಲೊಟ್ಟಲೇಕೊ ? ಜಂಗಮ ಬಂದರೆ ತೆರನರಿತು ಅರ್ಪಿಸಬಲ್ಲಡಲ್ಲಿ ಶಿವ ತೆರಹಿಲ್ಲದಿಪ್ಪನೆಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎಲಾ, ಪರಮ ಪಾವನಚರಿತ ಪಾರ್ವತೀಶ ಪಾಪನಾಶ ಪರಮೇಶ ಈಶ. ಇಂತಪ್ಪ ಈಶನು ಭಕ್ತನಾ ಕರಸ್ಥಲದಲ್ಲಿ ಬಂದ ಬಳಿಕ ಭಕ್ತನೇ ದೊಡ್ಡಿತ್ತು ಕಾಣೆಲಾ ! ಇಂತಪ್ಪ ಭಕ್ತನಾ ಶರೀರಕ್ಕೆ ರೋಗ ಬಂದರೆ, ಬಳಿಕ ವೈದ್ಯನಾ ಕರೆಸಿ, ಮಹಾವೈದ್ಯವಾ ಮಾಡಿಸಿ, ವೈದ್ಯ ಭಾಗವ ತೆಗೆದು, ವೈದ್ಯ ಸೇವಿಸಿ, ಮಿಕ್ಕ ಎಂಜಲ ತಿಂದು ಬದುಕೇನೆಂಬೋ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಇನ್ನಷ್ಟು ... -->