ಅಥವಾ

ಒಟ್ಟು 60 ಕಡೆಗಳಲ್ಲಿ , 26 ವಚನಕಾರರು , 50 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಶ್ವರ ಲೀಲಾಮೂತಿಯಾಗಿ ಏಕಾದಶ ರುದ್ರಮೂರ್ತಿಯ ಭಾವಿಸುವಲ್ಲಿ ವಾದರುದ್ರನ ಕಳುಹಿದ ಬಿಜ್ಜಳನೆಂಬ ನಾಮವ ಕೊಟ್ಟು, ಕಾಲರುದ್ರನ ಕಳುಹಿದ ಭಕ್ತಿನಾಮವ ಕೊಟ್ಟು ಬಸವೇಶ್ವರನ, ಮಾಯಾಕೋಳಾಹಳನೆಂಬ ರುದ್ರನ ಕಳುಹಿದ ಪ್ರಭುನಾಮವ ಕೊಟ್ಟು, ಮತ್ಸರವೆಂಬ ನಾಮ ಗುಪ್ತಗಣೇಶ್ವರನೆಂಬ ನಾಮವ ತಾಳ್ದು ಬಪ್ಪುದಕ್ಕೆ ಮುನ್ನವೇ ಐಕ್ಯ. ಪ್ರಮಥರುಗಳು ಪ್ರಕಟವ ಮಾಡಲಿಕ್ಕೆ ಬಂದಿತ್ತು. ಎನಗೆ ಮತ್ರ್ಯದ ಭವ. ಭವ ಬಸವನಿಂದ ಹರಿವುದು. ನಾ ಬಿತ್ತಿದ ಬೆಳೆಯೆನಗೆ ಫಲಭೋಗವನಿತ್ತು ಎನ್ನ ಅವತಾರಭಕ್ತಿ ಇನ್ನೆಂದು ಮೀರವಪ್ಪುದು, ಅಚ್ಚುತಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಹಸು ಹಯನಾಯಿತ್ತು, ಹಸು ಮನೆಗೆ ಬಂದಿತ್ತು, ಹಸುವ ಕಟ್ಟುವರೆಲ್ಲರ ಕಟ್ಟಿ, ಕಟ್ಟ ಬಂದವರ ಒಕ್ಕಲಿಕ್ಕಿ [ತು]ಳಿಯಿತ್ತು. ನಮ್ಮ ಕೂಡಲಚೆನ್ನಸಂಗಮದೇವರಲ್ಲಿ ಹಸುವ ಕಟ್ಟಿದಾತ ನಮ್ಮ ಸಿದ್ಧರಾಮಯ್ಯದೇವರೊಬ್ಬರೆ.
--------------
ಚನ್ನಬಸವಣ್ಣ
ಅಂಬುಧಿಯಲ್ಲಿ ಹಡಗು ಬರುತ್ತಿರಲಾಗಿ, ಹಡಗಿನ ಕುಕ್ಕೊಂಬಿನ ಮೇಲೆ ಒಂದು ಕರಡಿ ಬಂದಿತ್ತು. ಆ ಕರಡಿಗೆ ಕಾಲು ಮೂರು, ಕಣ್ಣು ಒಂದು, ಬಾಲ ಕಡೆಯಿಲ್ಲ. ಬಂಕೇಶ್ವರಲಿಂಗಕ್ಕೆ ಹಡಗಿನ ಸುಂಕ ಕಡೆನಡುವಿಲ್ಲ.
--------------
ಸುಂಕದ ಬಂಕಣ್ಣ
ಜಾಗ್ರಪತಿಯ ವ್ಯವಹಾರ ಕತ್ತಲ ಬೆಳಗಾಯಿತ್ತು. ಸ್ವಪ್ನಕರ್ತುವಿನ ಕಳವಳ ಸರಿದು ಸಮವೇದಿಸಿತ್ತು. ಸುಷುಪ್ತಾಳ್ದನ ಸೊಗಸುರಿದು ನಿಂದಿತ್ತು. ಮೂವರ ಹಿಂದೆ ಸಂದಲ್ಲಿ ಬಂದಿತ್ತು ಗುರುನಿರಂಜನ ಚನ್ನಬಸವಲಿಂಗದ ಬೆಳಗು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕ್ರೀಯೆಂಬ ಬೆವಹಾರವ ಮಾಡುವಾಗ, ಆಚಾರವೆಂಬ ಸೆಟ್ಟಿ ಕೊಂಬಲ್ಲಿ, ಅರಿವೆಂಬ ಸುಂಕ ಹುಟ್ಟಿತ್ತು. ತಲೆವಿಡಿ ಕೊಳುವಿಡಿ ಬಂದಿತ್ತು. ಕ್ರೀಯ ಮಾರಿದವಂಗೆ, ಆಚಾರವ ಕೊಂಡವಂಗೆ ಉಭಯದ ಸುಂಕ ಸಿಕ್ಕಿತ್ತು, ಬಂಕೇಶ್ವರಲಿಂಗದಲ್ಲಿ.
--------------
ಸುಂಕದ ಬಂಕಣ್ಣ
ಘಟಕುಂಭದಲ್ಲಿ ಜೀವನೆಂಬ ಜೇಗಟೆ ಬಂದಿತ್ತು. ದೃಷ್ಟವ ಇಷ್ಟದಲ್ಲಿ ಕುಟ್ಟಲಾಗಿ, ಮೊಳೆ ಮುರಿದು ಒಡಲೊಡೆಯಿತ್ತು. ಅಂಗದ ಅಗ್ನಿಯಲ್ಲಿ ಬೇಯಿಸಿ, ಮೂರುಸಂಗವಡೆದ ಮಡಕೆಯ ಓಡಿನಲ್ಲಿ ಶ್ರುತ ದೃಷ್ಟ ಅನುಮಾನವೆಂಬ ಕೋಲಿನಲ್ಲಿ ಕಡೆಯಲಾಗಿ, ರಸ ಒಳಗಾಗಿ ಹಿಪ್ಪಿ ಹೊರಗಾಯಿತ್ತು, ಆ ಸುಧೆಯ ತುಂಬಿ ತಂದೆ. ಒಮ್ಮೆಗೆ ಕೊಂಡಲ್ಲಿ ಬ್ರಹ್ಮಕಲ್ಪವ ಕೆಡಿಸಿತ್ತು. ಮತ್ತೊಮ್ಮೆ ಕೊಂಡಲ್ಲಿ ವಿಷ್ಣುವಿನ ಗೊತ್ತ ಕಿತ್ತಿತ್ತು. ಮೂರೆಂದು ಮೊದಲ ಹಾಗವ ಮೀರಿದ ರುದ್ರನ ಅಗಡವ ಕಿತ್ತಿತ್ತು. ಅರೆದು ಕೊಂಡಲ್ಲಿ ಸುಧೆ, ಮರೆದು ಕೊಂಡಲ್ಲಿ ಸುರೆಯಾಗಿ, ಅರುಹಿರಿಯರ ಮರವೆಯ ಮಾಡಿತ್ತು. ನಾ ತಂದ ಬೆವಹಾರವ ಅಹವರೆಲ್ಲರೂ ಕೊಳ್ಳಿ, ಧಮೇಶ್ವರಲಿಂಗವನರಿಯಬಲ್ಲಡೆ.
--------------
ಹೆಂಡದ ಮಾರಯ್ಯ
ಶುಕ್ಲ ಶ್ರೋಣಿತದ ಆಶ್ರಯದಲ್ಲಿ ಕುಕ್ಕುಟ ಮರೆದಿರಲಾಗಿ, ಬೆಕ್ಕು ನುಂಗ ಬಂದಿತ್ತು. ಬೆಕ್ಕಿನ ಕುಕ್ಕುಟನ ಕುಕ್ಕುರ ನಂದಿಸಿತ್ತು. ಕುಕ್ಕುರನ ಬೆಕ್ಕ ಕಾಲಜ್ಞಾನಿ ಎಚ್ಚತ್ತು, ಅರ್ಕೇಶ್ವರಲಿಂಗವನರಿದ ಕಾರಣ.
--------------
ಮಧುವಯ್ಯ
ಕಾಣುತವೆ ಬಂದುದನರಿದು, ಕಂಡಾತನ ಮನಧರ್ಮದ ಚಂದವ ಕಂಡು, ಬಂದಿತ್ತು ಬಾರದೆಂಬ ಸಂದೇಹ ನಿಂದು, ಇದೆಲ್ಲವೂ ಲಿಂಗಾಣತಿಯೆಂಬ ಸಂದನರಿದು ವರ್ಮದ ಮಾಟದವಂಗೆ ತಾ ವರ್ಮಿಗನಾಗಿದ್ದು, ಗಂಡಭೇರುಂಡನ ಪಕ್ಷಿಯಂತೆ ಒಡಲೊಂದೆ ಉಭಯ ಶಿರ ಬೇರಾದ ತೆರ. ಇದು ಕಲಕೇತನ ಒಲವಿನ ತೆರ. ಉಭಯಸ್ಥಲದ ಹೊಲದ ನಲವಿನ ಪಥ. ಮೇಖಲೇಶ್ವರಲಿಂಗದ ಒಲವಿನ ಕುಲ.
--------------
ಕಲಕೇತಯ್ಯ
ನಾನಾಕೋಶವಾಸ ಕಳಾಧರ ಸಮಖಂಡನ ದಿಗ್ವಳಯ ರಣಭೂಮಿಯಲ್ಲಿ ಒಂದು ಅರಿದ ತಲೆ ಬಂದಿತ್ತು. ಪಂಚಾಶತ್ಕೋಟಿ ವಿಸ್ತೀರ್ಣದವರಿಗೆ ಮುಂಡವಿಲ್ಲದೆ ಬಂದೆನೆಂದು ಹೇಳುತ್ತಿದೆ. ಮುಂಡ ತಲೆಯೊಳಡಗಿ, ತಲೆ ಮುಂಡವೆರಡೂ ಒಂದೆಲೆಯೊಳಗಡಗಿತ್ತು. ಆ ಎಲೆಗೆ ತೊಟ್ಟು, ಮೊನೆ ನಾರಿಲ್ಲಾ ಎಂದು, ನಾ ಬಂದೆ ಹೊಂದಿದೆನೆಂದು ನಸುನಗುತ್ತಿದ್ದಿತ್ತು ತಲೆ ! ತಲೆಹದಲ್ಲಿ ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿ ಕುರುಹಿಲ್ಲದ ಶರಣಂಗೆ.
--------------
ಸಗರದ ಬೊಮ್ಮಣ್ಣ
ಜಲದೈವವೆಂದಡೆ ಶೌಚವ ಮಾಡಲಿಲ್ಲ. ನೆಲದೈವವೆಂದಡೆ ಕಾಲೂರಿ ನಡೆಯಲಿಲ್ಲ. ಅಗ್ನಿದೈವವೆಂದಡೆ ತರಿದು ಮೆಲಲಿಲ್ಲ. ಅಗ್ನಿದೈವವೆಂದಡೆ ಮನೆಗಳು, ತೃಣಾದಿಗಳು ಬೆಂದು ಕೆಟ್ಟೆವೆನಲಿಲ್ಲ. ವಾಯುದೈವವೆಂದಡೆ ಕೆಟ್ಟಗಾಳಿ ಮನೆಗೆ ಬಂದಿತ್ತು, ಬಾಗಿಲಿಕ್ಕಿ ಎನಲಿಲ್ಲ. ಆಕಾಶದೈವವೆಂದಡೆ ಆಕಾಶವ ಹೊರಗುಮಾಡಿ, ಒಳಗೆ ಮನೆಯ ಕಟ್ಟಲಿಲ್ಲ. ಚಂದ್ರದೈವವೆಂದಡೆ ಶೀತಗೊಂಡು ಕೆಟ್ಟೆವೆನಲಿಲ್ಲ. ಸೂರ್ಯದೈವವೆಂದಡೆ ಉಷ್ಣಗೊಂಡು ಕೆಟ್ಟೆವೆನಲಿಲ್ಲ. ಆತ್ಮದೈವವೆಂದಡೆ ಸಾವು ಕೇಡು ಇಲ್ಲದಿರಬೇಕು. ಇದು ಕಾರಣ, ನೆಲದೈವವಲ್ಲ, ಜಲದೈವವಲ್ಲ, ಅಗ್ನಿದೈವವಲ್ಲ, ವಾಯುದೈವವಲ್ಲ, ಆಕಾಶದೈವವಲ್ಲ, ಚಂದ್ರಸೂರ್ಯ ಆತ್ಮರು ದೈವವಲ್ಲ. ಕಲಿದೇವಾ, ನಿಮ್ಮ ಶರಣ ಬಸವಣ್ಣನೊಬ್ಬನೆ ದೈವವೆಂದ, ಮಡಿವಾಳನು.
--------------
ಮಡಿವಾಳ ಮಾಚಿದೇವ
ಅಯ್ಯಾ, ಎನ್ನಲ್ಲಿ ಅರುಹಿನ ಮುಖವನರಿದೆನಾಗಿ ಕುಲಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಪ್ರಾಣನ ಮುಖವನರಿದೆನಾಗಿ ಛಲಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಜ್ಞಾನಮುಖವನರಿದೆನಾಗಿ ಧನಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ನೇತ್ರಮುಖವನರಿದೆನಾಗಿ ರೂಪಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಅಂಗಮುಖವನರಿದೆನಾಗಿ ಯವ್ವನಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಜಿಹ್ವೆಮುಖವನರಿದೆನಾಗಿ ವಿದ್ಯಾಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಶ್ರೋತ್ರಮುಖವನರಿದೆನಾಗಿ ರಾಜಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಘ್ರಾಣಮುಖವನರಿದೆನಾಗಿ ತಪಮದವಳಿದುಳಿದು ಬಂದಿತ್ತು. ಇಂತು ಅಷ್ಟಸ್ಥಲವನರಿದೆನಾಗಿ ಅಷ್ಟಮದವಳಿದುಳಿದು ಬಂದಿತ್ತು. ಅಷ್ಟಾವರಣವಾಗಿ ಉಳಿದು ಎನ್ನ ವಿರಳಕ್ರಿಯಾಜ್ಞಾನಕ್ಕೆ ಆಸ್ಪದವಾಯಿತ್ತು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗಸ್ಥಲ ಮೂವತ್ತಾರು ಕಲ್ಪನಾಡಿಭೇದಮಂ ಭೇದಿಸುತ್ತ ವಾಕು ಪಾಣಿ ಪಾದ ಪಾಯು ಗುಹ್ಯವೆಂಬ ಕರ್ಮೇಂದ್ರಿಯಂಗಳ ವರ್ಮದಲ್ಲಿರಿಸಿ ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಂಚೇಂದ್ರಿಯ[ವಿಷಯಂ]ಗಳ ಪೂರ್ವನಾಮವಿಮೋಚನೆಯಂ ಮಾಡುವ ಪರಿ : ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣವೆಂಬ ಪಂಚೇಂದ್ರಿಯಂಗಳ ಬಾಹ್ಯಾಭ್ಯಂತರವನರಿವ ಪರಿ, ಆದ್ಯಕ್ಷರವೊಂದಾದಡೆ ಅಂತ್ಯಕ್ಷರ ಶೂನ್ಯ, ಅದಕ್ಕೆ ಶಾಸ್ತ್ರಕ್ರಮದೊಳಗಾಡುವ ಭೇದಖಂಡದಿಂದ ಲಿಂಗಪ್ರಸಾದವ ಛೇದಿಸಿ, ಆ ಲಿಂಗವಂ ಭೂಮಿಯ ಬಿಡಿಸುವುದು. ಕಳಾವಿಧಸ್ಥಾನಕ್ಕೆ ತಂದಲ್ಲಿ ಸರ್ಪನು ಹಲವ ರುಚಿಸುವುದು. ಆ ರುಚಿಸುವ ಸರ್ಪನನು ತನ್ನಿಚ್ಛೆಗೆ ಹರಿಯಲೀಯದೆ ಅರಿವೆ ಪ್ರಾಣವಾಗಿ ಆ ಅರಿವಿನಿಂ ದೃಢವಿಡಿದು, ಹರಿವ ಹತ್ತುವ ಪರಿಯನೊಡೆದು ಮೂವತ್ತೆರಡು ಜವೆಯ ತೊರೆದಲ್ಲಿ ತೋರುವ, ನಾಡಿ ಮಧ್ಯಮಸ್ವರ ಮಹಿತಸ್ವರ, ಭೂಸ್ವರವೆಂಬ ಮಧ್ಯನಾಡಿ ಮಥನಂಗಳಂ ಮಥಿಸುವುದು. ಅಂಗಕ್ಕೆ ಲಿಂಗ ಬಂದಡೆ ಅಂಗದಾಪ್ಯಾಯನವನರಿವುದು. ಗುರುವಿನಿಂದ ಕರಣಾದಿಗಳು ಶುದ್ಧವಹವು, ಆದಿಪ್ರಭೆಯ ಕಿರಣಂಗಳು ಶುದ್ಧವಹವು, ಕರಣಂಗಳ ಆರತವಡಗುವುದು, ಕಾದ್ರಮಾ ಕಾದು ಕಾವುದು; ಆ ಲಿಂಗವನು ಉದಯದಲ್ಲಿ ನಾಲ್ಕು ಘಳಿಗೆ ತನಕ ಲಿಂಗಾರ್ಚನೆಯಂ ಮಾಡುವುದು. ಆ ಲಿಂಗವನು ವಾಮಕ್ಕೆ ಆ ಲಿಂಗವನು ದಕ್ಷಿಣಕ್ಕೆ ಆ ಲಿಂಗವನು ಪೂರ್ವಕ್ಕೆ, ಆ ಲಿಂಗವನು ಪಶ್ಚಿಮಕ್ಕೆ ಆ ಲಿಂಗವನು ಅಧಕ್ಕೆ, ಆ ಲಿಂಗವನು ಊಧ್ರ್ವಕ್ಕೆ ಆ ಲಿಂಗವನು ಜಡಿವುದು. ಪ್ರಭಾಲಿಂಗವೆಂಬ ಭಾವವನು ಭಾವಿಸಿ, ವಾತ ಪಿತ್ತ ಶ್ಲೇಷ್ಮವೆಂಬ ತ್ರಿಧಾತುವನರಿವುದು. ವಾತೋದ್ರೇಕವಾದಡೆ ಶೀತೋಷ್ಣಂಗಳ ಲಿಂಗಕ್ಕೆ ಸಮ ಮಾಡುವುದು, ಪಿತ್ತೋದ್ರೇಕವಾದಡೆ ಶೈತ್ಯವಂ ಮಾಡಿ ಕಾವುದು. ಶ್ಲೇಷ್ಮೋದ್ರೇಕವಾದಡೆ ಬಿಗಿದು ಲಿಂಗಾರ್ಚನೆಯಂ ಮಾಡುವುದು. ವಾತಪ್ರಕೃತಿಯಲ್ಲಿ ಲಿಂಗದ ಮೊದಲು ದೊಡ್ಡ ತುದಿ ಸಣ್ಣದಾಗಿಹುದು ಪಿತ್ತಪ್ರಕೃತಿಯಲ್ಲಿ ತುದಿ ಮೊದಲು ಸಣ್ಣದಾಗಿ ನಡು ದೊಡ್ಡದಾಗಿಹುದು. ಶ್ಲೇಷ್ಮಪ್ರಕೃತಿಯಲ್ಲಿ ಲಿಂಗತುದಿ ಮೊದಲೊಂದಾಗಿ ದೊಡ್ಡದಾಗಿಹುದು. ಇಂತು ತ್ರಿಧಾತುವನರಿದು ಲಿಂಗಾರ್ಚನೆಯ ಮಾಡುವುದು- ಇದು ವರ್ತನಾಕ್ರಮ. ಆದಿಕ್ರಮ ಅಂತ್ಯಕ್ರಮ ಅನ್ವಯಕ್ರಮ ನಿನಾದಾದಿಕ್ರಮವೆಂಬ ಭೇದಾದಿ ಭೇದಂಗಳಂ ಭೇದಿಸುವುದು. ಶಾಸ್ತ್ರಸಂಧಿಯಲ್ಲಿ ಬಾಹ್ಯಂಗಳನರಿವುದು, ಕ್ರಮಾದಿಕ್ರಮಂಗ?ಂ ತಿಳಿವುದು. ವಿನಾದದಲ್ಲಿ ಚಿತ್ರಪತ್ರಂಗಳನರಿವುದು, ಕರಣಂಗಳಂ ಶುದ್ಧಮಂ ಮಾಡುವುದು. ಹಿರಿದು ನಡೆಯದೆ, ಹಿರಿದು ನುಡಿಯದೆ ಹಿರಿದುಂ ದಿವಾರಾತ್ರಿಯಲ್ಲಿ ಶೀತೋಷ್ಣಾದಿಗಳಂ ಮುಟ್ಟಿಸಿಕೊ?್ಳದೆ ಮಹಾಮಾರ್ಗವ ತಿಳಿವುದು. ಇದರಿಂಗೆ ತನ್ನ ಮಾರ್ಗಮಂ ತೋರದೆ ಮಹಾಮಾರ್ಗದಲ್ಲಿ ಮಾರ್ಗಿಯಾಗಿ ಇದರ ಭೇದಸಂಬಂಧದಲ್ಲಿ ಉಚ್ಛ್ವಾಸ ನಿಶ್ವಾಸಕ್ರಮವನು ಓದಿ ಭರತಕ್ರಮವನು ಅನುಕ್ರಮಿಸಿ ಮೂಲಕಸ್ಥಾನದಲ್ಲಿ ಹೊರೆಹೊಗದೆ ಇಕ್ಕುವ ಚಿತ್ರಕ್ರಮದಲ್ಲಿ ಹೊರೆಹೊಗದೆ ಇಂತಿವನರಿತು ಲಿಂಗಾರ್ಚನೆಯಂ ಮಾಡುವ ಪ್ರಕರಣ : ಭ್ರಾಹ್ಮೀ ಮಹಾಮುಹೂರ್ತದಲ್ಲಿ ಎದ್ದು, ಅಂಗಪ್ರಕ್ಷಾಲನಮಂ ಮಾಡಿ ಕಂಬುವಂ ವಿಸರ್ಜಿಸಿ, ಶಿಶು ಪ್ರಕಾರವಂ ಮಾಡಿ ಶಮೆಯೆಂಬ ಸಮಾಧಿಯಲ್ಲಿ ಕುಳ್ಳಿರ್ದು, ದಮೆಯೆಂಬ ಪೀಠವನಿಕ್ಕಿ, ಶಾಂತಿಯೆಂಬ ನಿಜವಸ್ತ್ರವ ತಂದು, ಆದಿ ಶಿಶುವಿಂಗೆ ಅನುಬಂಧವಂಮಾಡಿ ತಲೆವಲದಲ್ಲಿ ಶಿಶುವಂ ತೆಗೆದು ಕರವೆಂಬ ತೊಟ್ಟಿಲಲ್ಲಿಕ್ಕಿ ಜೋಗೈಸಿ ಕೈಗೆ ಬಾಯಿಗೆ ಬಂದಿತ್ತು ನೋಡಾ, ಬಾಯಿಗೆ ಬಂದಲ್ಲಿ ಭಾವ ಶುದ್ಧವಾಯಿತ್ತು, ಕೈಗೆ ಬಂದಲ್ಲಿ ಆದಿ ಶುದ್ಧವಾಯಿತ್ತು, ಭಾವಲಿಂಗ ಜೀವಕರವಾಯವೆಂಬ ಪಟ್ಟಣದಲ್ಲಿ ಸೀಮೆ ಸಂಬಂಧವಂ ಮೀರಿ, ಮಂತ್ರಮಯವಾಯಿತ್ತು ನೋಡಾ ! ಮಂತ್ರಲಿಂಗವೊ ! ಅಮಂತ್ರ ಲಿಂಗವೊ ಹೇಳಾ ! ಮತ್ರದಿಂ ವಸ್ತ್ರ, ಅಮಂತ್ರದಿಂ ಹಸ್ತ ಇಂತು ಮಂತ್ರ ಆಮಂತ್ರಗಳೆರಡನು ಕೂಡಿ ರಕ್ಷಿಸುತ್ತಿದ್ದಿತ್ತು ನೋಡಾ ! ಶಿರಸ್ಸೆಂಬ ಧೇನು ಲಿಂಗವೆಂಬ ಮೊಲೆಯ ಕರವೆಂಬ ವತ್ಸ ತೊರೆಯಿತ್ತು ನೋಡಾ! ಮಂತ್ರವೆಂಬ ಅಮೃತವ ಕರೆಯಿತ್ತು ನೋಡಾ ! ಬಸವಯ್ಯ ನೋಡಾ ಊಡದ ಹಸು, ಉಣ್ಣದ ಕರು, ಆರೂಢದ ಭಾಂಡ ! ಅಂಗದಲ್ಲಿ ಹುಟ್ಟಿದ ಅಮೃತಜಲವನು ಲಿಂಗಕ್ಕೆ ಕೊಡದೆ ಧರೆಯಲ್ಲಿ ಬಿಟ್ಟಡೆ ಎಂತೊ ಲಿಂಗೋದಯವಹುದು ? ಎಂತೋ ಪಾದೋದಕ ಪ್ರಸಾದಜೀವಿಯಹನು ? ಜೀವ ಪರಮರ ಐಕ್ಯಬಾವವನರಿದ(ವ?)ಡೆ ಲಿಂಗೋದಯದಲಲ್ಲದೆ ಅರಿಯಬಾರದು ನಿಜಭಾವ ನಿಜಭಕ್ತಿ ನಿಜಸಮರಸವಾದಲ್ಲದೆ ಲಿಂಗೋದಯವಾಗದು. ನಿಜಮತ್ರ್ಯದಲ್ಲಿ ಜನಿಸಿದ ಅಂಗ ಅಂಗಿಗಳೆಲ್ಲರು ಪ್ರಾಣಲಿಂಗ ಸಂಬಂಧವನರಿಯರು. ಅಂತು ಅಂಗಲಿಂಗಿಗಳು ಪ್ರಾಣಲಿಂಗಿಗಳಿಗೆ ಭವಿಗಳು ಅಂತು ಪ್ರಾಣಲಿಂಗಿಗಳು ಅಂಗಲಿಂಗಿಗಳನೊಲ್ಲರು. ಅದು ಹೇಗೆಂದಡೆ: ಅವರಿಗೆ ಪ್ರಸಾದ ಪ್ರಾಣಲಿಂಗವಾಗಿ ನಾಮಗೋಪ್ಯ ಮಂತ್ರಗೋಪ್ಯಂಗಳಲ್ಲಿ ಆ ಮಹಾಮಾರ್ಗವನರಿಯರಾಗಿ, ಅಂಗಲಿಂಗಿಗಳಲ್ಲದೆ ಪ್ರಾಣಲಿಂಗಿಗಳಲ್ಲ ಪ್ರಸಾದಸೇವನಧ್ಯಾನಾದರ್ಚನಾದರ್ಪಣಾತ್ ಶುಚಿಃ ಪ್ರಸಾದಹೀನಸ್ಯಾಂಗೇ ತು ಲಿಂಗಂ ನಾಸ್ತಿ ಪುನಃ ಪುನಃ ಎಂದುದಾಗಿ ಇಂತು ಲಿಂಗಾರ್ಚನೆಯಂ ಮಾಡುವುದು ಲಿಂಗಪಾದೋದಕ ಪ್ರಸಾದವನು ಬಾಹ್ಯಾಂತರಂಗದಲ್ಲಿ ವಿರ?ವಿಲ್ಲದೆ ಅವಿರಳಭಾವಸಂಬಂಧದಲ್ಲಿ ಧರಿಸುವುದು; ಧರಿಸುವಾತ ಲಿಂಗವಂತನು. ಅಂಗಲಿಂಗಿ ಪ್ರಾಣಲಿಂಗಿ ಪ್ರಸಾದಲಿಂಗಿ ನಿಜನಿಂದ ಮಾರ್ಗವಿರಳ ಪಂಚಕನಾಡಿಯಲ್ಲಿ ಹೊರಹೊಗದೆ ನಿರ್ನಾದಮಂ ಆಶ್ರಯಿಸುವುದು. ಇದು ಮಹಾಮಾರ್ಗ ಪುರಾತನರ ಪೂರ್ವ; ಅಪರದಲ್ಲಿ ಅಂಥ ಲಿಂಗವನರಿ, ಆದಿಯಲ್ಲಿ ಅನಾಹತಲಿಂಗವನರಿ. ಲಿಂಗವಾರು ಅಂಗಾಂಗಲಿಂಗ ಸರ್ವಾಂಗಲಿಂಗ, ಲಿಂಗಸನುಮತವಾಯಿತ್ತು, ಮಹಾವೃತ್ತಿಗೆ ಅನುಮತವಾಯಿತು, ನಿರ್ವಿಕಲ್ಪ ಪರಮಪದಕ್ಕೆ ತಾನೆ ಆಯಿತ್ತು. ಇನ್ನು ಮಾನಸ ವಾಚಕ ಕಾಯಕದಲ್ಲಿ ಅವಿತಥವಿಲ್ಲದೆ ಲಿಂಗಾರ್ಚನೆಯಂ ಮಾಡುವರ ತೋರಿ ಬದುಕಿಸಾ ಕೂಡಲಚೆನ್ನಸಂಗಮದೇವಯ್ಯ.
--------------
ಚನ್ನಬಸವಣ್ಣ
ಕೈ ಗರ್ಭವಾಗಿ ನವಮಾಸ ತುಂಬಿತ್ತು. ಕಂಗಳಲ್ಲಿ ಬೆಸನಾಯಿತ್ತು. ಬೆನ್ನಿನಲ್ಲಿ ಮೊಲೆ ಹುಟ್ಟಿ, ನಡುನೆತ್ತಿಯಲ್ಲಿ ಹಾಲು ಬಂದಿತ್ತು. ನಾಲಗೆಯಿಲ್ಲದ ಶಿಶುವಿಂಗೆ ಹಾಲು ಎಯ್ದದೆ ಬಾಯ ಬಿಡುತ್ತಿದ್ದಿತ್ತು. ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವ ಗರ್ಭೀಕರಿ[ಸೆನೆಂ]ದು.
--------------
ಮನುಮುನಿ ಗುಮ್ಮಟದೇವ
ಲಿಂಗಗೂಡಿ ಭರಿತಾರ್ಪಣವ ಅಂಗೀಕರಿಸುವಲ್ಲಿ, ಭರಿತ ಲಿಂಗಕ್ಕೊ ತನಗೊ ಎಂಬುದನರಿದು, ಲಿಂಗವೆಂತೆ, ತನ್ನಂಗವಂತೆ, ಬಂದಿತ್ತು ಬಾರದೆಂಬ ಆರೈಕೆಯನರಿತು, ಸಂದಿತ್ತು ಸಲ್ಲದೆಂಬ ಸಂದೇಹವ ತಿಳಿದು, ಸ್ವಯವಾಗಿ ನಿಂದುದು ನಿಜಭರಿತಾರ್ಪಣ. ಹೀಗಲ್ಲದೆ ಸಕಲವಿಷಯದಲ್ಲಿ ಹರಿದಾಡುತ್ತ ಆಮಿಷ ತಾಮಸ ರಾಗ ದ್ವೇಷದಲ್ಲಿ ಬೇವುತ್ತ ಇಂತಿವನರಿಯದ ತಮಗೆ ಸಂದುದಲ್ಲದೆ ಮರೆದೊಂದು ಬಂದಡೆ, ಆ ಲಿಂಗಪ್ರಸಾದವ ಇರಿಸಬಹುದೆ ? ನೇಮ ತಪ್ಪಿ ಸೋಂಕಿದಲ್ಲಿ ಕೊಳ್ಳಬಹುದೆ ? ಇಂತೀ ಅರ್ಪಿತದ ಸೋಂಕ, ಭರಿತಾರ್ಪಣದ ಪರಿಭಾವವ ನಿಮ್ಮ ನೀವೆ ನಿಶ್ಚೈಸಿಕೊಳ್ಳಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ
ತಾಯಿಯ ತನ್ನೆದೆಯಲ್ಲಿ ಕಂಡು ತಾಯಿಯ ಗಂಡನಾಗಿ ಬಂದರೆ ಮೂರುಕೂಟಕ್ಕೊಬ್ಬ ಮಗ ಹುಟ್ಟಿ, ಕೈ ಬಾಯಿಯೊಳಗೆ ಬಂದಿತ್ತು ನೋಡಾ. ಸಾಲುಮನೆಯೊಳು ಸಂಗವ ಮಾಡಿ ಮೇಲುಮನೆಯೊಳಿರ್ದ ಗುರುನಿರಂಜನ ಚನ್ನಬಸವಲಿಂಗವ ಹೊಕ್ಕು ಬೆರಸಿದೆ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->