ಅಥವಾ

ಒಟ್ಟು 63 ಕಡೆಗಳಲ್ಲಿ , 26 ವಚನಕಾರರು , 57 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿನ್ನದೊಳಗಣ ಬಣ್ಣದಂತೆ, ಬಣ್ಣ ನುಂಗಿದ ಬಂಗಾರದಂತೆ, ಅನ್ಯ ಭಿನ್ನವಿಲ್ಲದ ಲಿಂಗೈಕ್ಯವು. ಲಿಂಗಾಂಗವಾದಲ್ಲಿ, ಅಂಗ ಲಿಂಗವಾದಲ್ಲಿ ಹಿಂಗದ ಭಾವ ಚಿನ್ನ ಬಣ್ಣದ ತೆರ. ಇದು ಪ್ರಾಣಲಿಂಗಯೋಗ, ಸ್ವಾನುಭಾವ ಸಮ್ಮತ. ಉಭಯ ನಾಶನ ಐಕ್ಯಲೇಪ ನಾರಾಯಣಪ್ರಿಯ ರಾಮನಾಥಾ
--------------
ಗುಪ್ತ ಮಂಚಣ್ಣ
ಒಳ್ಳಿಹ ಮೈಲಾರನ ಒಳಗೆಲ್ಲ ಸಣಬು, ಹೊರಗಣ ಬಣ್ಣ ಕರ ಲೇಸಾುತ್ತಯ್ಯಾ. ಶ್ವಾನನ ನಿದ್ರೆ, ಅಜ್ಞಾನಿಯ ತಪದಂತೆ ಆುತ್ತಯ್ಯಾ ಎನ್ನ ಮತಿ, ಕೂಡಲಸಂಗಮದೇವಾ. 281
--------------
ಬಸವಣ್ಣ
ಶಿಶು ತಾಯ ಮೊಲೆವಾಲನೊಸೆದುಂಡು ತೃಪ್ತನಾಗಿ ಹೆಸರ ಬೆಸಗೊಂಬಡದು ಉಪಮೆಗೆ ಸಾಧ್ಯವಿಲ್ಲಯ್ಯಾ. ಕಣ್ಣಾಲಿ ಕಪ್ಪ ನುಂಗಿ ಸಣ್ಣ ಬಣ್ಣಗಳುಡಿಗೆನಯಫ ಬಣ್ಣದೊಳಗಣ ಭ್ರಮೆ ಇನ್ನಾರಿಗಳವಡದು. ಬಣ್ಣ ಸಮುಚ್ಚಯವಾಗಿ ಬಣ್ಣ ಬಗೆಯನೆ ನುಂಗಿ ಗುಹೇಶ್ವರನೆಂಬ ನಿಲವ ನಿಜದ ನಿಷ್ಪತ್ತಿ ನುಂಗಿತ್ತು.
--------------
ಅಲ್ಲಮಪ್ರಭುದೇವರು
ತತ್ತ್ವಾತತ್ವವೆಂಬ ಮಿಥ್ಯಾ ಛಾಯೆಯಿಲ್ಲದ ಬಚ್ಚಬರಿಯ ಬಯಲ ಬಣ್ಣ ಶೃಂಗರಿಸಿ ಪರತತ್ತ್ವವಾಯಿತ್ತು ನೋಡಾ. ಆ ಪರತತ್ತ್ವ ತನ್ನ ಶಕ್ತಿ ಸಾಮಥ್ರ್ಯದಿಂದ ವಿಭಜಿಸಿ ಅಂಗ ಲಿಂಗವಾಯಿತ್ತು ನೋಡಾ. ಅಂಗವೆಂದರೆ ಶರೀರ; ಲಿಂಗವೆಂದರೆ ಪ್ರಾಣ. ಇದು ಕಾರಣ ಶರಣ ಲಿಂಗಕ್ಕೆ ಭಿನ್ನವೆಲ್ಲಿಯದು? ಭೇದವೆಲ್ಲಿಯದು ಬಿಡಾ ಮರುಳೆ. ಶರಣನೇ ಲಿಂಗವೆಂಬುದು ಸತ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಿರಿಯ ಭೂಮಿಯ ಮಧ್ಯದಲ್ಲಿ ಉರಿಯ ಮಡು ಹುಟ್ಟಿತ್ತು. ಆ ಮಡುವಿನ ಮಧ್ಯದಲ್ಲಿ ಐದು ಸರಗೂಡಿದ ಬಾವಿ. ಆ ಬಾವಿಯೊಳಗೆ ಮೂರು ಮುಖದ ಹುಲಿ ಹುಟ್ಟಿತ್ತು. ಒಂದು ಕೊಂದು ತಿಂಬುದು, ಒಂದು ಕೊಲ್ಲದೆ ತಿಂಬುದು, ಒಂದು ಎಲ್ಲರ ನೋಡಿ ತಿಂಬುದು, ಅಲ್ಲಾ ಎಂಬುದು, ಹುಲಿಯ ಬಣ್ಣ ಮೊದಲು ಕಪ್ಪು, ನಡುವೆ ಭಾಸುರ, ತುದಿಯಲ್ಲಿ ಬಿಳಿದು. ಹಗೆವಣ್ಣ ಸಹಿತಾಗಿ ಹುಟ್ಟಿದ ಹುಲಿ, ಉರಿಯ ಮಡುವನೀಂಟಿ, ಸರಬಾವಿಯ ಕುಡಿದು, ತಿಂಬವೆರಡು ಮುಖ ತಿನ್ನದ ಮುಖದಲ್ಲಿ ಅಡಗಿ, ಕಡೆ ಕಪ್ಪು, ನಡುವಣ ಭಾಸುರ, ತುದಿಯ ಬಿಳುಪಿನಲ್ಲಿ ಅಡಗಿ ಒಡಗೂಡಿತ್ತು. ಅದರ ತೊಡಿಗೆಯ ಕೇಳಿಹರೆಂದಂಜಿ, ಅಡಗಿದೆಯಾ, ಅಲೇಖನಾದ ಶೂನ್ಯ ಕಲ್ಲಿನೊಳಗಾಗಿ ?
--------------
ವಚನಭಂಡಾರಿ ಶಾಂತರಸ
ಧರೆಯ ಮೇಲಣ ಮರದಲ್ಲಿ, ಹಿರಿದಿಹ ಕೊಂಬಿನ ತುದಿಯಲ್ಲಿ, ಅರಿಬಿರಿದಿನ ಪಕ್ಷಿ ಬಂದಿತ್ತು ನೋಡಾ. ಆ ಪಕ್ಷಿಯ ವರ್ಣ, ಹಾರುವ ರಟ್ಟೆ ಕೆಂಪು, ತೋರಿಹ ರಟ್ಟೆ ಕಪ್ಪು. ಮೀರಿಹ ರಟ್ಟೆಯ ತುಟ್ಟತುದಿಯಲ್ಲಿ ನಾನಾ ವರ್ಣದ ಬಣ್ಣ. ಆ ಹಕ್ಕಿಯ ಗಳದಲ್ಲಿ ಹೇಮವರ್ಣ, ಆ ಹಕ್ಕಿಯ ತುದಿಯಲ್ಲಿ ಧವಳವರ್ಣ. ಆ ಹಕ್ಕಿಯ ಹಾರುವ ರಟ್ಟೆಯ ಕಳೆದು, ತೋರಿಹ ರಟ್ಟೆಯ ಮುರಿದು, ಮೀರಿಹ ರಟ್ಟೆ[ಯ] ಬೆಂದು, ಕೊರಳಿನ ಹಳದಿ, [ಹಾರಿ], ಕೊಕ್ಕಿನ ಬೆಳ್ಪು ನಿಃಪತಿಯಾಗಿ, ನಿಃಕಳಂಕ ಮಲ್ಲಿಕಾರ್ಜುನ ಸತ್ತನೊ.
--------------
ಮೋಳಿಗೆ ಮಾರಯ್ಯ
ಬಂಗಾರದ ರೂಪಿದ್ದಲ್ಲದೆ ಬಣ್ಣ ವನವಗವಿಸದು. ಬಣ್ಣ ರಂಜನೆಯಾಗಿ ರಂಜಿಸುತ್ತಿರೆ ಎಲ್ಲರ ಕಣ್ಣಿಗೆ ಮಂಗಲ. ಇಂತೀ ಕಾಯ ಜೀವ ಜ್ಞಾನದ ಬೆಳಗು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದ ಒದಗು.
--------------
ಶಿವಲೆಂಕ ಮಂಚಣ್ಣ
ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ ? ದೇವ ದಾನವ ಮಾನವರೆಲ್ಲಾ ಜೋಳವಾಳಿಯಲೈದಾರೆ. ಜಾಣಕಲುಕುಟಿಗನನಗಲದೆ ಹೂವನೆ ಕೊಯ್ದು, ಕಲಿಯುಗದ ಕರಸ್ಥಲದೇವಪೂಜೆ ಘನ. ಮೇರುವಿನ ಕುದುರೆ ನಲಿದಾಡಲದುಭುತ. ಜಾರಜಂಗುಳಿಗಳ ಜಗಳ ಮೇಳಾಪ, ಮರುಪತ್ತದ ಮಾತು, ನಗೆ ಹಗರಣ ? ಕ್ಷೀರಸಾಗರದಲ್ಲಿ ದಾರಿಯಳವಡದಯ್ಯಾ. ನೀ ಹೇಳಬೇಕು, ಭಕ್ತರೆಂತಿಪ್ಪರೊ ? ಪಂಚವರ್ಣದ ಬಣ್ಣ ಸಂತೆಯ ಪರದಾಟವು ಚೆನ್ನಮಲ್ಲಿಕಾರ್ಜುನಯ್ಯಾ, ತ್ರಿಭುವನದ ಹೆಂಡಿರ ನೀರಹೊಳೆಯಲ್ಲಿರಿಸಿತ್ತು.
--------------
ಅಕ್ಕಮಹಾದೇವಿ
ಏನೂ ಏನೂ ಇಲ್ಲದ ಬಯಲೊಳಗೊಂದು ಬಗೆಗೊಳಗಾದ ಬಣ್ಣ ತಲೆದೋರಿತ್ತು. ಆ ಬಣ್ಣವು ಆ ಬಯಲ ಶೃಂಗರಿಸಲು, ಬಯಲು ಸ್ವರೂಪಗೊಂಡಿತ್ತು. ಅಂತಪ್ಪ ಸ್ವರೂಪಿನ ಬೆಡಗು ತಾನೆ, ನಮ್ಮ ಗುಹೇಶ್ವರಲಿಂಗದ ಪ್ರಥಮ ಭಿತ್ತಿ
--------------
ಅಲ್ಲಮಪ್ರಭುದೇವರು
ಕಾಲಿಲ್ಲದೆ ನಡೆವನು, ಕೈಯಿಲ್ಲದೆ ಹಿಡಿವನು, ಕಣ್ಣಿಲ್ಲದೆ ನೋಡುವನು ಸಹಜವಾಗಿ. ಮೈಯಿಲ್ಲದ ಬಣ್ಣ, ಮಥನವಿಲ್ಲದ ಕೂಟ. ಸೈವೆರಗಾಗಿ, ಸಿಡಿಯ ಮೇಲೆ ಒಡಲು ತನ್ನನರಿಯದು, ಒಡಲ ತಾನರಿಯನು ಬಿಡದೆ ಎನ್ನ ಬೆಂಬತ್ತಿ ಬಂದ ಪರಿಯ ನೋಡಾ. ಜಡವಿಡಿದ ಎನ್ನ ಕಾಯದ ಕಳವಳವ ತಿಳುಹಲೆಂದು, ಅಡಿಗಡಿಗೆ ಅನುಭಾವವ ತೋರುತ್ತಲಿದ್ದಾನೆ. ಕುಳ್ಳಿತ್ತೆಡೆಯಲ್ಲಿ ಕುಂಟ, ನಿಂದಿದ್ದೆಡೆಯಲ್ಲಿ ಹೆಳವ. ಎಲ್ಲಿ ನೋಡಿದಡಲ್ಲಿ ಪರಿಪೂರ್ಣನು. ಮೆಲ್ಲಮೆಲ್ಲನೆ ಒಳಗ[ನ]ರಿದು ತೋರುತ್ತೈದಾನೆ. ಬಲ್ಲವರೆಲ್ಲಾ ಬದುಕಿಯೆಂದು ಝಲ್ಲರಿಯ ಮೇಲೊಂದು ಬೆಳುಗೊಡೆಯ ಹಿಡಿದು ಬಲ್ಲಿದನಾನೆಯ ತಡೆದು ನಿಲ್ಲಿಸಬಲ್ಲನು. ಕೂಡಲಸಂಗಮದೇವರ ಮಹಾಮನೆಯಲ್ಲಿ ಪ್ರಭುದೇವರ ಮೊರೆಯ ಹೊಕ್ಕು ಬದುಕಿದೆನು.
--------------
ಬಸವಣ್ಣ
ಹೀನಬುದ್ಧಿಯ ಕರ್ಮದ ಕ್ಷೀಣ ಬಣ್ಣವ ಬಿಟ್ಟು ಪ್ರಾಣಸಂಗತವಾದ ಧಾತು ಬಣ್ಣ ವೇಳಕ್ಕೆ ಜ್ಞಾತೃ ಬಣ್ಣದಾಣಿಯನಿಕ್ಕಿ ಕಳೆದು ಜ್ಞಾನ ಕರ್ಮದ ಬಣ್ಣ ಹತ್ತಕ್ಕೆ ಜ್ಞೇಯ ಬಣ್ಣವ ಶಕವನಿಕ್ಕಿ ಕಳೆದು ಕ್ರಿಯಾ ಬಣ್ಣದ ಹಲವು ಬಣ್ಣವ ಕೊಡದೆ ಶುದ್ಧಾಶುದ್ಧ ಬಣ್ಣಕ್ಕೆ ಮುಖ್ಯ ಬಣ್ಣದಲ್ಲಿ ಚಿದ್ಬಣ್ಣವ ಕೂಡಲು ಇದಾವ ಬಣ್ಣವೆಂದರಿಯಬಾರದೆ ವರ್ಣಾತೀತವಾಯಿತ್ತು. ಇದಕ್ಕೆ ಶ್ರುತಿ: ವರ್ಣಾತೀತಂ ಮನೋತೀತಂ ಭಾವಾತೀತಂ ತು ತತ್ಪದಂ ಜ್ಞಾನಾತೀತಂ ನಿರಂಜನಂ ತತ್ಕಲಾ ಸೂಕ್ಷ್ಮಭಾವತಃ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರ ಲಿಂಗದ ಬಣ್ಣ ಅಂತರ್ಬಾಹ್ಯ ಗಮ್ಯಾಗಮ್ಯ ಭಾವಾಭಾವತೀತಾತೀತವಲ್ಲದೆ ನಿಂದಿತ್ತು.
--------------
ಆದಯ್ಯ
ಜಂಗಮಭಕ್ತನು, ಚಿನ್ನದಂತೆ ಕಬ್ಬಿನಂತೆ ಶ್ರೀಗಂಧದಂತೆ ಇರಬೇಕು. ಅದು ಹೇಂಗೆ ? ಆ ಚಿನ್ನವ ಕಾಸಿದಡೆ ಕರಗಿಸಿದಡೆ ಕಡಿದಡೆ ನಿಗುಚಿದಡೆ ಬಣ್ಣ ಅಧಿಕವಲ್ಲದೆ ಕಿರಿದಾಗದು, ಇವರು ನನ್ನನೇಕೆ ಘಾಸಿ ಮಾಡಿದರೆನ್ನದು. ಆ ಕಬ್ಬ ಕಡಿದಡೆ ಖಂಡಿಸಿದಡೆ ಗಾಣದಲಿಕ್ಕಿ ಹಿಂಡಿ, ಹಿಳಿದು, ಬಂದ ರಸವನಟ್ಟಡೆ, ನಾನಾ ಪ್ರಕಾರದಲ್ಲಿ ಸಾಯಸಗೊಳಿಸಿದಡೆಯೂ ಮಿಗೆ ಮಿಗೆ ಮಧುರವಾಗಿಪ್ಪುದಲ್ಲದೆ ವಿಷವಾಗದು, ನನ್ನನೇಕೆ ನೋಯಿಸಿದರೆಂದೆನ್ನದು. ಆ ಶ್ರೀಗಂಧವು ಕೊರೆದಡೆ ತೇದಡೆ ಹೂಸಿದಡೆ ಬೆಂಕಿಯೊಳಗೆ ಹಾಯಿಕಿದಡೆ ಪರಿಮಳ ಘನವಾಯಿತ್ತಲ್ಲದೆ ದುರ್ಗಂಧವಾಗದು, ತನ್ನಲ್ಲಿ ದುಃಖಗೊಳ್ಳದು. ಈ ತ್ರಿವಿಧದ ಗುಣದ ಪರಿಯಲ್ಲಿ; ಭಕ್ತನು ತನ್ನ ಸುಗುಣವ ಬಿಡದ ಕಾರಣ ಸದ್ಭಕ್ತನಹ ಮಾಹೇಶ್ವರನಹ ಪ್ರಸಾದಿಯಹ ಪ್ರಾಣಲಿಂಗಿಯಹ ಶರಣನಹ ಐಕ್ಯನಹ. ಇಂತು ಷಟ್‍ಸ್ಥಲದಲ್ಲಿ ಸಂಪನ್ನನಹಡೆ ಇಂತಪ್ಪ ಜಂಗಮಭಕ್ತಿಯೆ ಮೂಲವಯ್ಯ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ವಾಯುವ ನುಂಗಿದ ಬಣ್ಣ, ಬಣ್ಣವ ನುಂಗಿದ ಛಾಯೆ, ಅಂಜನ ಪ್ರವೇಶಮಧ್ಯದಲ್ಲಿ ಲೀಯವಾದೆನಯ್ಯಾ ನಿನ್ನೊಡನೆ; ಲೀಯವಾದೆನಯ್ಯಾ ಸಂಗಸಂಯೋಗ ಸ್ಥಾನದಲ್ಲಿ ನೀಸಹಿತ. ಯೋಗಿಯಾದೆನಯ್ಯಾ ಶುದ್ಧ ಸಿದ್ಧ ಪ್ರಸಿದ್ಧದಲ್ಲಿ ಪ್ರವೇಶಿಸಲೊಡನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಸೀಮೆಯ ಮೀರಿ ಸಂಬಂಧಿಯಾದೆನು
--------------
ಸಿದ್ಧರಾಮೇಶ್ವರ
ಒನಕೆಯ ಕಣ್ಣಿನಲ್ಲಿ ಒಂದು ಬೆನಕ ತಲೆದೋರಿತ್ತು. ತಲೆಯಲ್ಲಿ ಹೊಟ್ಟೆ, ಬಾಯಲ್ಲಿ ಕಣ್ಣು, ಬಾಲೆಯರ ನಳಿತೋಳಲ್ಲಿ ಕಾಲು. ಹೆಣ್ಣುಟ್ಟ ಬಣ್ಣ ಸೆರಗಿನಲ್ಲಿ ಅದೆ. ಬೆನಕನ ಹೊತ್ತವನ ಅಪ್ಪ ಸತ್ತು, ಒನಕೆಯ ಕಣ್ಣೊಡೆದು, ನಳಿತೋಳು ಮುರಿದು, ಬಣ್ಣ ಹರಿದು, ಅವರ ಅಣ್ಣನ ಮಗಳ ಗಂಡ ಬಿಣ್ಣಿದ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಒಂದು ದ್ವಾರದಲ್ಲಿ ಬಂದ ಆತ್ಮಂಗೆ, ಹಲವು ದ್ವಾರದಲ್ಲಿ ಉಂಟೆಂದು, ಹೊಲಬುದಪ್ಪಿ ನುಡಿದವರ ನೋಡಾ. ವಾಯು ಒಂದಲ್ಲದೆ ಶತವಾಯುವಿಲ್ಲೆಂದೆ, ಇಂದ್ರಿಯ ಒಂದಲ್ಲದೆ ಐದಿಲ್ಲವೆಂದೆ. ಕರಣ ಒಂದಲ್ಲದೆ ನಾಲ್ಕಿಲ್ಲವೆಂದೆ, ಮದ ಒಂದಲ್ಲದೆ ಎಂಟಿಲ್ಲವೆಂದು. ವ್ಯಸನ ಒಂದಲ್ಲವೆ ಏಳಿಲ್ಲವೆಂದೆ, ಆಧಾರ ಒಂದಲ್ಲದೆ ಷಡಾಧಾರವಿಲ್ಲವೆಂದೆ. ಒಂದು ಬೀಜದಲ್ಲಿ ಅದ ಹಣ್ಣಿನ ರುಚಿಗೆ, ನಾನಾ ಫಲದ ರಸದ ರುಚಿ ಉಂಟೆ? ಆ ಬೀಜ ಮೊಳೆತಲ್ಲಿ ಏಕರೂಪವಾಗಿ ತಲೆದೋರಿತ್ತು. ಬಲಿದು ಮತ್ತೆ ಹಲವುರೂಪಾಗಿ ಪಲ್ಲವಿಸಿತ್ತು. ನೆಲೆಯ ಕಡಿದ ಮತ್ತೆ ರೂಪೆಲ್ಲ ನೆಲೆಯೊಳಡಗಿದವು. ಸೆಲೆಸಂದ ಹೊನ್ನಿಂಗೆ ಒಟ್ಟವುಂಟೆ? ಬಲುಹು ಮುರಿದವಂಗೆ ರಣದ ಸುದ್ದಿಯೇಕೋ? ಜಲದಲ್ಲಿ ಮುಳುಗಿದವಂಗೆ ಇಳೆಯವರ ಸುದ್ದೀಯೇಕೋ? ಇದು ಕಾರಣ, ನಾನಾ ವರ್ಣದ ಹೇಮವ ಭಾವಿಸಿ, ಒಂದರಲ್ಲಿ ಕಡೆಗಾಣಿಸಿದ ಮತ್ತೆ ಭಾವನೆಯ ಬಣ್ಣ ಒಂದಲ್ಲದೆ ಮತ್ತೆ ಭಾವಿಸಲಿಲ್ಲವಾಗಿ, ಅರಿದಲ್ಲಿ ಜ್ಞಾನ, ಮರೆದಲ್ಲಿ ಅಜ್ಞಾನ, ನಾನಾರೆಂಬುದನರಿದಲ್ಲಿಯೆ ಒಂದು ಗುಣ ನಿಂದಿತ್ತು. ತನ್ನ ಮರೆದಲ್ಲಿಯೆ ನಾನಾ ಸಂಚಲನವಾಯಿತ್ತು, ಇದಕ್ಕಿದೇ ದೃಷ್ಟ. ದೇಹವಿಡಿದುದಕ್ಕೆರಡಿಲ್ಲದೆ ಮೀರಲಿಲ್ಲವಾಗಿ, ಜಗವನರಿವುದಕ್ಕೆ ದಿವರಾತ್ರಿಯದೆ ಮೀರಿ ತೋರಲಿಲ್ಲವಾಗಿ, ಸಂಸಾರ ಹರಿವುದಕ್ಕೆ ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲವಾಗಿ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->