ಅಥವಾ

ಒಟ್ಟು 41 ಕಡೆಗಳಲ್ಲಿ , 19 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸಮಾನಾಢ್ಯರಪ್ರತಿಮಸ್ವತಂತ್ರ ಸ್ವಲೀಲರಪ್ಪ ಶರಣರೆಂತಿಪ್ಪರಯ್ಯಾ? ಕಡವರವ ನುಂಗಿದ ಪೊಡವಿಯಂತೆ, ರತ್ನವ ನುಂಗಿದ ರತ್ನಾಕರನಂತೆ, ಬೆಳಗ ನುಂಗಿದ ಬಯಲಂತೆ, ಬಣ್ಣವ ನುಂಗಿದ ಚಿನ್ನದಂತೆ, ತೈಲವ ನುಂಗಿದ ತಿಲದಂತೆ, ಪ್ರಭೆಯ ನುಂಗಿದ ಪಾಷಾಣದಂತೆ, ವೃಕ್ಷವ ನುಂಗಿದ ಬೀಜದಂತೆ, ಪ್ರತಿಬಿಂಬವ ನುಂಗಿದ ದರ್ಪಣದಂತಿಪ್ಪರಯ್ಯಾ. ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರಲ್ಲಿ ನೀವಿಹ ಭೇದವ ನೀವೆ ಬಲ್ಲಿರಿ, ಆನೆತ್ತ ಬಲ್ಲೆನಯ್ಯಾ?
--------------
ಆದಯ್ಯ
ಹೀನಬುದ್ಧಿಯ ಕರ್ಮದ ಕ್ಷೀಣ ಬಣ್ಣವ ಬಿಟ್ಟು ಪ್ರಾಣಸಂಗತವಾದ ಧಾತು ಬಣ್ಣ ವೇಳಕ್ಕೆ ಜ್ಞಾತೃ ಬಣ್ಣದಾಣಿಯನಿಕ್ಕಿ ಕಳೆದು ಜ್ಞಾನ ಕರ್ಮದ ಬಣ್ಣ ಹತ್ತಕ್ಕೆ ಜ್ಞೇಯ ಬಣ್ಣವ ಶಕವನಿಕ್ಕಿ ಕಳೆದು ಕ್ರಿಯಾ ಬಣ್ಣದ ಹಲವು ಬಣ್ಣವ ಕೊಡದೆ ಶುದ್ಧಾಶುದ್ಧ ಬಣ್ಣಕ್ಕೆ ಮುಖ್ಯ ಬಣ್ಣದಲ್ಲಿ ಚಿದ್ಬಣ್ಣವ ಕೂಡಲು ಇದಾವ ಬಣ್ಣವೆಂದರಿಯಬಾರದೆ ವರ್ಣಾತೀತವಾಯಿತ್ತು. ಇದಕ್ಕೆ ಶ್ರುತಿ: ವರ್ಣಾತೀತಂ ಮನೋತೀತಂ ಭಾವಾತೀತಂ ತು ತತ್ಪದಂ ಜ್ಞಾನಾತೀತಂ ನಿರಂಜನಂ ತತ್ಕಲಾ ಸೂಕ್ಷ್ಮಭಾವತಃ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರ ಲಿಂಗದ ಬಣ್ಣ ಅಂತರ್ಬಾಹ್ಯ ಗಮ್ಯಾಗಮ್ಯ ಭಾವಾಭಾವತೀತಾತೀತವಲ್ಲದೆ ನಿಂದಿತ್ತು.
--------------
ಆದಯ್ಯ
ವಾಯುವ ನುಂಗಿದ ಬಣ್ಣ, ಬಣ್ಣವ ನುಂಗಿದ ಛಾಯೆ, ಅಂಜನ ಪ್ರವೇಶಮಧ್ಯದಲ್ಲಿ ಲೀಯವಾದೆನಯ್ಯಾ ನಿನ್ನೊಡನೆ; ಲೀಯವಾದೆನಯ್ಯಾ ಸಂಗಸಂಯೋಗ ಸ್ಥಾನದಲ್ಲಿ ನೀಸಹಿತ. ಯೋಗಿಯಾದೆನಯ್ಯಾ ಶುದ್ಧ ಸಿದ್ಧ ಪ್ರಸಿದ್ಧದಲ್ಲಿ ಪ್ರವೇಶಿಸಲೊಡನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಸೀಮೆಯ ಮೀರಿ ಸಂಬಂಧಿಯಾದೆನು
--------------
ಸಿದ್ಧರಾಮೇಶ್ವರ
ಚಿನ್ನವ ಕೊಂಬಲ್ಲಿ ಅದರ ಬಣ್ಣವ ಕಂಡು ಬಣ್ಣವಾಸಿಯ ಕುರುಹಿಟ್ಟು ಅದು ತನಗೆ ಚೆನ್ನಾದಡೆ ಕೊಂಬ ಅಲ್ಲದೊಡೊಲ್ಲ. ಇದಕ್ಕೆ ಗೆಲ್ಲ ಸೋಲವೇಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎನುತಿರ್ದೆನು.
--------------
ಘಟ್ಟಿವಾಳಯ್ಯ
ಹಲವು ಬಣ್ಣದಲ್ಲಿ ಒಬ್ಬ ಕಾಲಗಿತ್ತಿಯು ಸುತ್ತಿ ಸುತ್ತಿ ಬರುತಿಪ್ಪಳು ನೋಡಾ. ಇದು ಕಾರಣ, ಆ ಕಾಲಗಿತ್ತಿಯ ಹಿಡಿದು ಹಲವು ಬಣ್ಣವ ಕೆಡಿಸಿ, ಏಕಾಗ್ರದಲ್ಲಿ ನಿಂದು ಪರಕೆಪರವಶವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರೆಯ ಮೇಲುಳ್ಳ ಅರುಹಿರಿಯರೆಲ್ಲರು ನೆರಹಿ ಪರಿಯಾಯಪರೀಕ್ಷೆಯನೊರೆದು, ಬಣ್ಣವ ನೋಡಿ, ಸರೋವರದ ಪುಷ್ಪದೊಳು ಭರಿತ ಪರಿಮಳ ತುಂಬಿ, ಪರಮಜ್ಞಾನ ಜ್ಯೋತಿ ಪರಬ್ರಹ್ಮವನು ಮೀರಿ ಪುರುಷರತ್ನದೊಳಡಗಿ, ಗುಹೇಶ್ವರ ನಿಂದ ನಿಲುವು_ ಮೇರು ಗಗನವ ನುಂಗಿತ್ತು.
--------------
ಅಲ್ಲಮಪ್ರಭುದೇವರು
ಹೇಮ ಬಣ್ಣವ ಕೂಡಿದ ದೆಸೆಯಿಂದ ಮತ್ರ್ಯರುಗಳಿಗೆ ಆಗುಚೇಗೆಗಳಿಗೀಡಾಯಿತ್ತು. ದಿವ್ಯ ನಿರಂಜನ ನಿಜವಸ್ತು ಭವ್ಯರ ಭಕ್ತಿಗಾಗಿ ಶಕ್ತಿ ನಾಮರೂಪವಾಗಿ ತಲ್ಲೀಯವಾಗಲ್ಪಟ್ಟುದು, ಶಕ್ತಿ ಸಮೇತವಾಗಿ ಲಿಂಗವಾಯಿತ್ತು. ಅದು ರಂಜನೆಯ ಬಣ್ಣ, ಮಾಯದ ಗನ್ನ, ಅಂಬರದ ಚಾಪದ ಸಂಚದ ವಸ್ತು. ಮುನ್ನಿನಂತೆ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ವಿಷಯಾಭಿಲಾಷೆಯಲ್ಲಿ ವಿರಾಗವು ನೆಲೆಯಾಗಿ, ಅಷ್ಟಾವರಣದ ಆಚಾರವೆ ಅಂಗವಾದಡೆ; ಮರುಳುಗೊಳಿಪ ಮಾರನ ಮಾಟವು ದೂರವಾಗುವುದಯ್ಯಾ. ಅನಾಹತಶಬ್ದದ ಅನುಸಂಧಾನದಿಂದ, ಅವಸ್ಥಾತ್ರಯದಲ್ಲಿ ತೋರುವ ತನು ಮೂರರ ವಾಸನೆಯು ನಾಶವಾಗುವುದಯ್ಯಾ. ಇಷ್ಟಲಿಂಗದಲ್ಲಿಟ್ಟ ದೃಷ್ಟಿ, ಬಿಂದುವಿನ ಪರಿಪರಿಯ ಬಣ್ಣವ ನೋಡಿ ನೋಡಿ ದಣಿದು, ಶಿವಕಲಾರೂಪದಲ್ಲಿ ವ್ಯಾಪಿಸಿ, ಕಂಗಳ ಎವೆ ಮಾಟವಿಲ್ಲದೆ ಲಿಂಗಲಕ್ಷ್ಯವು ಕದಲಂತಿದ್ದಡೆ ಕಾಲನ ಕಾಟವು ತೊಲಗಿ ಹೋಗುವುದಯ್ಯಾ. ಇಂತೀ ಸಾಧನತ್ರಯವು ಸಾಧ್ಯವಾದ ಶರಣಂಗೆ ಕಾಲ_ಕಾಮ_ಪುರವೈರಿಯಾದ ನಮ್ಮ ಕೂಡಲಚೆನ್ನಸಂಗಯ್ಯನು ಮನ್ನಣೆಯ ಮುಕ್ತಿಯನೀವನು
--------------
ಚನ್ನಬಸವಣ್ಣ
ಐದು ಪರಿಯ ಬಣ್ಣವ ತಂದು ಕೊಟ್ಟಡೆ ನಾಲ್ಕು ಮೊಲೆಯ ಹಸುವಾಯಿತ್ತು. ಹಸುವಿನ ಬಸಿರಲ್ಲಿ ಕರುವು ಹುಟ್ಟಿತ್ತು. ಕರುವ ಮುಟ್ಟಲೀಯದೆ ಹಾಲು ಕರೆದುಕೊಂಡಡೆ ಕರ ರುಚಿಯಾಯಿತ್ತು. ಮಧುರ ತಲೆಗೇರಿ ಅರ್ಥವ ನೀಗಾಡಿ ಆ ಕರುವಿನ ಬೆಂಬಳಿವಿಡಿದು ಭವಹರಿಯಿತ್ತು ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ರಸ ಗಂಧ ರೂಪ ಸ್ಪರ್ಶವೆಂಬ ಪಂಚೇಂದ್ರಿಯಂಗಳಲ್ಲಿ, ಲಿಂಗಕರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ. ಅಂಗುಷ*ದಲ್ಲಿ ಸರ್ಪದಷ್ಟವಾದಡೆ, ಸರ್ವಾಂಗದಲ್ಲಿ ವಿಷಾವರ್ತಿಸುವುದಲ್ಲದೆ, ಖಂಡಿತವಾಗಿ ನಿಂದುದಿಲ್ಲ. ಸರ್ವಾಂಗಲಿಂಗಿಗೆ ಬೇರೆ ಐದು ಸ್ಥಾನದಲ್ಲಿ, ಅರ್ಪಿತವ ಮಾಡಬೇಕೆಂಬುದಿಲ್ಲ. ಇಷ್ಟಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಾ ಅಯ್ಯಾ, ಪರುಷಸರ ಕೈಯಲ್ಲಿದ್ದು ಹೇಮವನರಸಿ ತಿರುಗುವನಂತೆ. ಖೇಚರತ್ವದಲ್ಲಿ ಬಹ ಸಾಮಥ್ರ್ಯವಿದ್ದಡೇನೊ, ಅಂಬಿಗನ ಹಂಗನರಸುವನಂತೆ. ನಿತ್ಯನಿತ್ಯ ತೃಪ್ತಂಗೆ ಉಂಡೆಹೆನೆಂದು ತಳಿಗೆ ಕಂಕುಳೊಳಗಿನ ತೆರನಂತೆ. ಸ್ವಯಂಜ್ಯೋತಿಯ ಬೆಳಗುಳ್ಳವಂಗೆ, ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ. ವಾಯುಗಮನವುಳ್ಳವಂಗೆ ತೇಜಿಯನರಸುವಂತೆ. ಅಮೃತದ ಸೇವನೆಯುಳ್ಳವಂಗೆ ಆಕಳನರಸಿ ಬಳಲಿ ಬಪ್ಪವನಂತೆ. ತಾ ಬೈಚಿಟ್ಟ ನಿಕ್ಷೇಪದ ಹೊಲಬುದಪ್ಪಿ ಬಳಲುವನಂತೆ. ಇದು ಕಾರಣ, ಐದರ ಗುಣದಲ್ಲಿ ಅರ್ಪಿತವೆಂಬ, ಮೂರರ ಗುಣದಲ್ಲಿ ಮುಕ್ತಿಯೆಂಬ, ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ, ಭ್ರಾಂತ ಹರಿದು ಕಾಳಿಕೆಯೊಳಗಿಪ್ಪ ಕರಿಯ ಬಣ್ಣವ ಕಳೆದು, ಬೆಳಗಿನೊಳಗಿಪ್ಪ ಜ್ವಲಿತಮಂ ಕಡಿದು ತಾನು ತಾನಾಗಬಲ್ಲಡೆ, ಆತನೆ ನಿರ್ಮುಕ್ತ, ನಿಃಕಳಕಂ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಕ್ಕನ ಗಂಡ ಭಾವಾಂತೆಗೆ ತಂದೆ ಮುಪ್ಪಟ್ಟಿಯ ಬಣ್ಣವ ಬಿಳಿದುದಲು ಕಡೆಯಲ್ಲಿ ಕಪೋತ ಕೆಂಪು ಹುಟ್ಟಿತ್ತು. ಆ ಬಣ್ಣವ ತೊಳೆದಡೆ ಬಿಳಿದನೊಡಗೂಡುವವಾಗಿ ಅರಿವು ಮರವೆಯೆಂಬ ಕಡೆದಡಿಯ ಬಣ್ಣದಡಿ ಹರಿಯಲಾಗಿ ಬಿಳಿಯರಿವೆಯಾಯಿತ್ತು. ನಿನ್ನ ಉಡಿ ತುಂಬಿ ಉಟ್ಟುಕೊ ಎಂದು ತಂದೆ ಮೇಖಲೇಶ್ವರಲಿಂಗವನರಿಯ ಹೇಳಿ
--------------
ಕಲಕೇತಯ್ಯ
ಹಲವು ಬಣ್ಣದ ಮೃಗದ ನೆಲೆಯನರಿದೆವೆಂದು ಹಲಬರು ತಲೆವಾಲಗೆಟ್ಟರು ನೋಡಾ. ಬಣ್ಣವ ಬೇರುಮಾಡಿದವಂಗಲ್ಲದೆ, ಮೃಗದ ನೆಲೆಯ ಕಾಣಬಾರದು. ಮೃಗದ ನೆಲೆಯ ಕಂಡರೇನು, ಆ ಮರ್ಕಟನ ಕಾಟ ಬೆನ್ನ ಬಿಡದು. ಆ ಮರ್ಕಟನ ಹಿಡಿದು ಶೂಲಕ್ಕೆ ಹಾಕಿದ ಬಳಿಕ ನಿಶ್ಚಿಂತೆಯಹುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜ ಪದವನೆಯ್ದುವಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಹೊಂಬಣ್ಣವ ಹಿಮ್ಮೆಟ್ಟದೆ ಕಂಡು, ಮುಂಬಣ್ಣವ ಮುಂದರಿತು ಕಂಡು, ನಿಂದ ಬಣ್ಣವ ನಿಂದಂದಿಗೆ ಕಂಡು, ಹಲವು ಬಣ್ಣದ ಬಳಕೆಯ ಹೊಲಬುದಪ್ಪಿ, ಸಂದ ಬಣ್ಣದಲ್ಲಿ ಸಂದಿಲ್ಲದೆ ನಿಂದ ನಿರಾಳ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಧಾತುವ ಮೀರಿದ್ದ ಬಣ್ಣವ, ಅಜಾತ ನಿನ್ನ ಕೂಟವ, ಆರಿಗಯ್ಯಾ ಭೇದಿಸಲಕ್ಕು? ಅಭೇದ್ಯ ಕಾರಣ ಶಿವನೇ, ಆ ಅಕ್ಷರದಲ್ಲಿ ಅಮೋದದಾನತದ ಭೇದವ ಆ ಭೇದವ ಭೇದಿಸಲಾಹುದೆ ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಕರಗವ ಸುಟ್ಟೆ, ಕಂದಲವನೊಡದೆ, ಮರನ ಮುರಿದೆ, ಬಣ್ಣವ ಹರಿದೆ, ಭಿನ್ನಗಣ್ಣು ಕೆಟ್ಟಿತ್ತು, ಜ್ಞಾನಗಣ್ಣಿಲಿ ನಿಮ್ಮನೆ ನೋಡಿ, ಕೂಡಿ ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಇನ್ನಷ್ಟು ... -->