ಅಥವಾ

ಒಟ್ಟು 66 ಕಡೆಗಳಲ್ಲಿ , 31 ವಚನಕಾರರು , 65 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುನ್ನಿನ ಪರಿಯಂತುಟಲ್ಲ. ಆದಡೆಂತಹುದು? ಆಗದಡೆಂತಾಯಿತ್ತು ? (ಆದಡಿಂತಹುದೆ ? ಆಗದಡಿಂತಾಯಿತ್ತು) ಹಲವು ಪರಿ ಬಗೆಯ ಬಯಕೆ ತಾರ್ಕಣೆಯಾದಂತೆ ಗುಹೇಶ್ವರಲಿಂಗ, ತನುವ ತನ್ನತ್ತಲೊಯ್ದನು.
--------------
ಅಲ್ಲಮಪ್ರಭುದೇವರು
ಕಾಯದ ಕಾರ್ಪಣ್ಯವರತಿತ್ತು, ಕರಣಂಗಳ ಕಳವಳವಳಿದಿತ್ತು. ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು. ಇನ್ನೇವೆನಿನ್ನೇವೆನಯ್ಯಾ ? ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ ಬಯಕೆ ಬಯಲಾಗದು. ಇನ್ನೇವೆನಿನ್ನೇವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ, ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆರತವಡಗಿತ್ತೆನ್ನ, ಬಯಕೆ ಸಮನಿಸಿತ್ತೆನ್ನ, ಸಂಕಲ್ಪ ಸಮನಿಸಿತ್ತೆನ್ನ, ಸ್ವಯವು ದೊರೆಕೊಂಡಿತ್ತೆನ್ನ. ನಿಮ್ಮ ನೋಡಿ ಎನ್ನ ಕಂಗೆ ಮಂಗಳಮಯದ ಸುಖಸಂಗವಾಯಿತ್ತು. ಅಯ್ಯಾ, ಒಳಗು ಹೊರಗು, ಹೊರಗೊಳಗೆಂಬುದ ತಿಳಿದು, ಪ್ರಭುವಿನ ಕರುಣದಿಂದ ಕೂಡಲಸಂಗಮದೇವರಲ್ಲಿ ತೆರಹಿಲ್ಲದಿರ್ದೆನು.
--------------
ಬಸವಣ್ಣ
ಗುರುಭಕ್ತಿಯ ಮಾಡಿದ ಬಳಿಕ ಸರ್ವ ಅವಗುಣಂಗಳು ಹಿಂಗಿರಬೇಕು. ಲಿಂಗಪೂಜೆಯ ಮಾಡಿದ ಬಳಿಕ ಅಂಗದ ಪ್ರಕೃತಿ ಹಿಂಗಿರಬೇಕು. ಜಂಗಮಾರ್ಚನೆಯ ಮಾಡಿದ ಬಳಿಕ ಸಂಸಾರದಲ್ಲಿ ಮೋಹವ ತೊಲಗಿರಬೇಕು. ಪಾದೋದಕ ಪ್ರಸಾದವ ಕೊಂಡ ಬಳಿಕ ಇಹಪರ ಭೋಗ ಮೋಕ್ಷಂಗಳ ಬಯಕೆ ಅರತಿರಬೇಕು ಇದೇ ನಮ್ಮ ಅಖಂಡೇಶ್ವರಲಿಂಗದ ಕೂಟ.
--------------
ಷಣ್ಮುಖಸ್ವಾಮಿ
ಬಯಸಿದ ಬಯಕೆ ಕೈಸಾರುವಂತೆ, ನಿಧಿ ನಿಧಾನ ಮನೆಗೆ ಬಪ್ಪಂತೆ, ಪರಿಮಳವನರಿಸಿ ಬಪ್ಪ ಭ್ರಮರನಂತೆ, ಚಿಂತಾಮಣಿಯ ಪುತ್ಥಳಿ ನಡೆಗಲಿತಂತೆ, ಬಸವಪ್ರಿಯ ಕೂಡಲಚೆನ್ನಸಂಗನಲ್ಲಿ ಪ್ರಭುದೇವರ ಬರವು ಕಾಣಬರುತ್ತಿದೆ ನೋಡಾ ಸಂಗನಬಸವಣ್ಣಾ.
--------------
ಸಂಗಮೇಶ್ವರದ ಅಪ್ಪಣ್ಣ
ಬಸುರಿಲ್ಲದ ಬಯಕೆ ಇದೆತ್ತಣದೊ ! ಶಿಶುವಿಲ್ಲದ ಜೋಗುಳ ತೊಟ್ಟಿಲು ತೂಗುವುದಿದೇನೊ ! ಆಸವಲ್ಲದ ಹೊಳೆಯ ಅಂಬಿಗನ ಹುಟ್ಟುನುಂಗಿ, ಶಶಿಯಿದ್ದ ಗಗನ ಬಿಸಿಯಾಗಿಪ್ಪುದಿದೇನೊ ! ಮಸಣವ ನುಂಗಿದ ಹೆಣ, ವಿಷವ ನುಂಗಿದ ಸರ್ಪನೊ ! ಕೃಷಿ ಹೊಲನ ನುಂಗಿ, ಬೀಜಕೆ ನೆಲೆಯಿಲ್ಲ . ಆಸವಲ್ಲದ ಕೊಟ್ಟವ ಬೇಡನ ಬಲೆ ನುಂಗಿ ಎಸೆವುದಿದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭವೆ.
--------------
ಹೇಮಗಲ್ಲ ಹಂಪ
ಅಯ್ಯಾ, ಶ್ರೀಮಹಾವಿಭೂತಿಯಿಂದ ಕಂಡೆ ಆ ನಿಮ್ಮ ದಿವ್ಯ ಬೆಳಗಿನ ಹೊಳಹ, ಈ ಎನ್ನ ಕರಸ್ಥಲದೊಳಗೆ. ಅಯ್ಯಾ, ಶ್ರೀಮಹಾರುದ್ರಾಕ್ಷಿಯಿಂದ ಕಂಡೆ ಆ ನಿಮ್ಮ ದಿವ್ಯಮೂರ್ತಿಯ ಗೂಢವ, ಈ ಎನ್ನ ಕರಸ್ಥಲದೊಳಗೆ. ಅಯ್ಯಾ, ಶ್ರೀಮಹಾಪಂಚಾಕ್ಷರಿಯಿಂದ ಕಂಡೆ ಆ ನಿಮ್ಮ ದಿವ್ಯವಕ್ತ್ರಂಗಳ, ಈ ಎನ್ನ ಕರಸ್ಥಲದೊಳಗೆ. ನಾ ಬಯಸುವ ಬಯಕೆ ಕೈಸಾರಿತ್ತಿಂದು ಕೂಡಲಸಂಗಮದೇವಾ.
--------------
ಬಸವಣ್ಣ
ಬಯಕೆ ಎಂಬುದು ದೂರದ ಕೂಟ, `ಬಯಸೆ' ಎಂಬುದು ಕೂಟದ ಸಂದು. ಈ ಉಭಯವೂ ಕಪಟ ಕನ್ನಡವಲ್ಲದೆ ಸಹಜವಲ್ಲ. ಕೂಡಿ ಕಂಡ ಪರಿಯೆಂತು ಹೇಳಾ ಇನ್ನು ಲಿಂಗೈಕ್ಯವನು ? ಕೂಪಠಾವಿನಲ್ಲಿ ಪರವಶವಾದೆನೆಂಬ ಮಾತ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗ ?
--------------
ಅಲ್ಲಮಪ್ರಭುದೇವರು
ಭವಕ್ಕೆ ಬಿತ್ತುವಪ್ಪ ಬಯಕೆ ಇಹನ್ನಬರ ಕಾಮನ ಕಾಟವು ಕಡೆಗಾಣದಯ್ಯಾ. ಲಿಂಗದೇವನ ಮರಹಿನಿಂದಪ್ಪ ಮರಣಬಾಧೆ ಇಹನ್ನಬರ ಕಾಲದೂತರ ಭೀತಿಯು ತಪ್ಪದಯ್ಯಾ. ತನುತ್ರಯದ ಅಭಿಮಾನ ಇಹನ್ನಬರ ಸಂಸಾರಸಂತಾಪ ಓರೆಯಾಗದಯ್ಯಾ. ಕೂಡಲಚೆನ್ನಸಂಗಮದೇವಾ,_ ಇದು ಸೃಷ್ಟಿ ಸ್ಥಿತಿ ಸಂಹಾರರೂಪವಪ್ಪ ನಿನ್ನ ಮಾಯದ ಮಾಟವೆಂದರಿದೆನಯ್ಯಾ.
--------------
ಚನ್ನಬಸವಣ್ಣ
ಕಣ್ಣಿನೊಳಗಣ ಕಸ, ಕೈಯೊಳಗಣ [ಮೆ]ಳೆ, ಬಾಯೊಳಗಣ ಬಗದಳ, ಮನದ ಶಂಕೆ ಹರಿದಲ್ಲದೆ ಪ್ರಾಣಲಿಂಗಿಯಾಗಬಾರದು. ಕಣ್ಣಿನ ನೋಟ, ಕೈಯ ಕುರುಹು, ಬಾಯ ಬಯಕೆ, ಚಿತ್ತದ ವೈಕಲ್ಯ ನಷ್ಟವಾಗಿಯಲ್ಲದೆ ವಸ್ತುನಿರ್ದೇಶವನರಿಯಬಾರದು. ಅರಕೆ ಅರತು ಅರಿತಡೆ, ಅದೇ ವಸ್ತು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಮರಹು ಬಂದಹುದೆಂದು ಶ್ರೀಗುರು ಕರಸ್ಥಲಕ್ಕೆ ಕುರುಹ ಕೊಟ್ಟಡೆ; ಆ ಕುರುಹು ನೋಟದಲ್ಲಿ ಅಳಿದು, ಆ ನೋಟ ಮನದಲ್ಲಿ ಅಳಿದು, ಆ ಮನ ಭಾವದಲ್ಲಿ ಅಳಿದು, ಆ ಭಾವ ಜ್ಞಾನದಲ್ಲಿ ಅಳಿದು, ಆ ಜ್ಞಾನ ಸಮರಸದಲ್ಲಿ ಅಳಿದ ಬಳಿಕ_ ಇನ್ನು ಅರಿವ ಕುರುಹಾವುದು ಹೇಳಾ ? ನೀನರಸುವ ಕುರುಹು ಎನ್ನ ಕರಸ್ಥಲದ ಲಿಂಗ, ಎನ್ನ ಕರಸ್ಥಲ ಸಹಿತ ನಾನು ನಿನ್ನೊಳಗೆ ನಿರ್ವಯಲಾದೆ. ಎನ್ನ ನಿರ್ವಯಲಲಿಂಗ ನಿನಗೆ ಸಾಧ್ಯವಾಯಿತ್ತಾಗಿ; ನೀನೇ ಪರಿಪೂರ್ಣನಯ್ಯಾ. ನಿನ್ನಲ್ಲಿ ಮಹಾಲಿಂಗವು ಸಾಧ್ಯವಾಗಿ ಅದೆ. ಗುಹೇಶ್ವರ ಸಾಕ್ಷಿಯಾಗಿ, ನೀ ಬಯಸುವ ಬಯಕೆ ಸಂದಿತ್ತು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಅರಸುವ ಬಳ್ಳಿ ಕಾಲ ತೊಡರಿದಂತಾಯಿತ್ತು, ಬಯಸುವ ಬಯಕೆ ಕೈಸಾರಿದಂತಾಯಿತ್ತು, ಹಲವು ದಿವಸಕೆ ನಂಟರ ಕಂಡಂತಾಯಿತ್ತು. ಅಂದೊಮ್ಮೆ ಅನಿಮಿಷಂಗೆ ಕೋಳುಹೋದ ಲಿಂಗವೆಂದು ಉಮ್ಮಹದಿಂದ ಮಂಗಳಾರತಿಯ ಬೆಳಗಿ, ನವರತ್ನದ ಹಾರ ತೋರಣವ ಕಟ್ಟಿ, ಸಂತೋಷದಿಂದೆನ್ನ ಮನವು ತೊಟ್ಟನೆ ತೊಳಲಿ, ತಿಟ್ಟನೆ ತಿರುನಗೆಫ, ದೃಷ್ಟವ ಕಂಡೆನಯ್ಯಾ. ಬಿಟ್ಟು ಹಿಂಗಿದವೆನ್ನ ಭವಮಾಲೆಗಳು, ಗೋಹೇಶ್ವರನ ಶರಣ ಪ್ರಭುದೇವರ ಕರಸ್ಥಲದೊಳಗೆ, ಕೂಡಲಸಂಗಮದೇವರೆಂಬ ಲಿಂಗವ ಕಂಡೆನಾಗಿ.
--------------
ಬಸವಣ್ಣ
ಭಕ್ತಂಗೆ ಬಯಕೆ ಉಂಟೆ ? ನಿತ್ಯಂಗೆ ಸಾವುಂಟೆ ? ಸದ್ಭಕ್ತಂಗೆ ಮಿಥ್ಯ ತಥ್ಯ ಉಂಟೆ ? ಕರ್ತೃ ಭೃತ್ಯನಾದ ಠಾವಿನಲ್ಲಿ ಪ್ರತ್ಯುತ್ತರಂಗೆಯ್ದಡೆ ಸತ್ಯಸದಾಚಾರಕ್ಕೆ ಹೊರಗು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಣತಿ.
--------------
ಅಕ್ಕಮ್ಮ
ಮನದ ಸಂಚದೋವರಿಯೊಳಗೆ, ಮಿಂಚಿನ ಗೊಂಚಲು ಬಳ್ಳಿವರಿಯಿತ್ತಯ್ಯಾ. ಎನ್ನ ಕಾಯದ ಕರಣಂಗಳೊಳಗೆ, ನಿರುಪಮಸುಖ ಸಾಧ್ಯವಾಯಿತ್ತು. ಬಯಸುವ ಬಯಕೆ ಕೈಸಾರಿತ್ತು, ಅರಸುವ ಅರಕೆ ನಿಂದಿತ್ತು. ಆಹಾ, ಕರತಲಾಮಲಕವಾಯಿತ್ತಲ್ಲಾ ! ಸತ್ಯಶರಣರ ದರುಶನ ಏನ ಮಾಡದೊ ? ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರ ಶ್ರೀಪಾದವ ಕಂಡು, ಬದುಕಿದೆನಯ್ಯಾ.
--------------
ಸೊಡ್ಡಳ ಬಾಚರಸ
ಇನ್ನಷ್ಟು ... -->