ಅಥವಾ

ಒಟ್ಟು 78 ಕಡೆಗಳಲ್ಲಿ , 26 ವಚನಕಾರರು , 45 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕತ್ತಲೆಯ ಮನೆಯೊಳಗೊಂದು ಪಶುವಿಪ್ಪುದು ನೋಡಾ. ಆ ಪಶುವಿಂಗೆ ಏಳೆಂಟು ಕೋಣಗಳು ಸ್ನೇಹವಾಗಿರ್ಪವು ನೋಡಾ. ಆದಿಯಲ್ಲಿ ಮಹಾಜ್ಞಾನವುದೋರಲು ಕತ್ತಲೆಮನೆ ಹರಿದು, ಪಶು ಬಯಲಾಯಿತ್ತು ನೋಡಾ. ಏಳೆಂಟು ಕೋಣಗಳು ಅಡಗಿದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುಲಿಂಗಜಂಗಮವನು ಭಿನ್ನವಿಟ್ಟರಿದರೆ ಶ್ರದ್ಧೆ ನಾಚಿ ಭಕ್ತತ್ವವ ನುಂಗಿ ಬಯಲಾಯಿತ್ತು. ಪಂಚಾಕ್ಷರಿಯ ಭೀನ್ನವಿಟ್ಟರಿದರೆ ನಿಷೆ* ನಾಚಿ ಮಹೇಶ್ವರತ್ವವ ನುಂಗಿ ಬಯಲಾಯಿತ್ತು. ಪ್ರಸಾದವ ಭಿನ್ನವಿಟ್ಟರಿದರೆ ಸಾವಧಾನ ನಾಚಿ ಪ್ರಸಾದಿಸ್ವರೂಪವ ನುಂಗಿ ಬಯಲಾಯಿತ್ತು. ರುದ್ರಾಕ್ಷಿಯ ಭಿನ್ನವಿಟ್ಟರಿದರೆ ಅನುಭಾವ ನಾಚಿ ಪ್ರಾಣಲಿಂಗಿಸ್ವರೂಪವ ನುಂಗಿ ಬಯಲಾಯಿತ್ತು. ಪಾದೋದಕ ಭಿನ್ನವಿಟ್ಟರಿದರೆ ಆನಂದಭಕ್ತಿ ನಾಚಿ ಶರಣತ್ವವ ನುಂಗಿ ಬಯಲಾಯಿತ್ತು. ಶ್ರೀ ವಿಭೂತಿಯ ಭಿನ್ನವಿಟ್ಟರಿದರೆ ಸಮರಸ ನಾಚಿ ಐಕ್ಯತ್ವವ ನುಂಗಿ ಬಯಲಾಯಿತ್ತು. ಇಂತು ಅಷ್ಟಾವರಣ ಭಿನ್ನವಿಟ್ಟು ಷಟ್‍ಸ್ಥಲಬ್ರಹ್ಮಿಯಾದೆನೆಂದರೆ ಫಲಪದದತ್ತ ನಿಜಪದವರಿಯಬಾರದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿತನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಾಲುಕುಡಿದ ಶಿಶು ಸತ್ತು ವಿಷಕುಡಿದ ಶಿಶು ಬದುಕಿದುದ ಕಂಡೆ. ಬೆಣ್ಣೆಯ ತಿಂದ ಶಿಶು ಸತ್ತು ಕೆಂಡವ ತಿಂದ ಶಿಶು ಬದುಕಿದುದ ಕಂಡೆ. ಉಂಡಾಡುವ ಶಿಶು ಸತ್ತು ಉಣ್ಣದೆ ಓಡಾಡುವ ಶಿಶು ಬದುಕಿದುದ ಕಂಡೆ. ಅಂಗೈಯೊಳಗಣ ಶಿಶು ಸತ್ತು ಬೀದಿಬಾಜಾರದಲ್ಲಿರುವ ಶಿಶು ಬದುಕಿದುದ ಕಂಡೆ. ಬೆಳದಿಂಗಳೊಳಗಿನ ಶಿಶು ಸತ್ತು ಬಿಸಿಲೊಳಗಿನ ಶಿಶು ಬದುಕಿದುದ ಕಂಡೆ. ಅರಮನೆಯೊಳಗಣ ಅರಸಿಯ ಶಿಶು ಸತ್ತು ಊರೊಳಗಣ ದಾಸಿಯ ಶಿಶು ಬದುಕಿದುದ ಕಂಡೆ. ಹುಟ್ಟಿದ ಶಿಶು ಬೇನೆಯಿಲ್ಲದೆ ಸತ್ತು ಹುಟ್ಟದೆ ಬೇನೆ ಹತ್ತಿದ ಶಿಶು ಬದುಕಿದುದ ಕಂಡೆ. ಈ ಉಭಯ ಭೇದವ ಬಲ್ಲ ಶಿಶು ಚನ್ನಮಲ್ಲಯ್ಯನಲ್ಲಿ ಬಯಲಾಯಿತ್ತು. ಮತ್ತಂ, ಈ ಉಭಯ ನಿರ್ಣಯವನರಿಯದ ಶಿಶು ಮಹಾಮಲೆಯಲ್ಲಿ ಬಯಲಾಯಿತ್ತು. ಇದರಂದಚಂದ ನಿಮ್ಮ ಶರಣರೇ ಬಲ್ಲರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಲ್ಲವುಂಟೆಂಬ ಶಬ್ದನಿಃಶಬ್ದವೆಲ್ಲಾ ಮಹದಾಕಾಶದಲ್ಲಿಯೇ ಬಯಲಾಯಿತ್ತು. ಶೂನ್ಯವೆಂಬ ನಾಮರಹಿತನು ನಿಃಶೂನ್ಯವಾದ ಘನಕ್ಕೆ ಗಮನನಲ್ಲ.
--------------
ಆದಯ್ಯ
ಎನ್ನ ಪೃಥ್ವಿತತ್ತ್ವದಲ್ಲಿ ಆಧಾರಚಕ್ರವಿರ್ಪುದು. ಆ ಚಕ್ರವೇ ಭಕ್ತಸ್ಥಲ. ಆ ಸ್ಥಲವ ಬಸವಣ್ಣನಿಂಬುಗೊಂಡನಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಅಪ್ಪುತತ್ತ್ವದಲ್ಲಿ ಸ್ವಾಧಿಷಾ*ನಚಕ್ರವಿರ್ಪುದು. ಆ ಚಕ್ರವೇ ಮಹೇಶ್ವರಸ್ಥಲ. ಆ ಸ್ಥಲವ ಮಡಿವಾಳಮಾಚಯ್ಯಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಅಗ್ನಿತತ್ತ್ವದಲ್ಲಿ ಮಣಿಪೂರಕಚಕ್ರವಿರ್ಪುದು. ಆ ಚಕ್ರವೆ ಪ್ರಸಾದಿಸ್ಥಲ. ಆ ಸ್ಥಲವ ಚೆನ್ನಬಸವಣ್ಣನಿಂಬುಗೊಂಡನಾಗಿ ಎನಗಾಸ್ಥಲ ಬಯಲಾಯಿತ್ತು . ಎನ್ನ ವಾಯುತತ್ತ್ವದಲ್ಲಿ ಅನಾಹತಚಕ್ರವಿರ್ಪುದು. ಆ ಚಕ್ರವೆ ಪ್ರಾಣಲಿಂಗಿಸ್ಥಲ. ಆ ಸ್ಥಲವ ಸಿದ್ಧರಾಮಯ್ಯದೇವರಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಗಗನತತ್ತ್ವದಲ್ಲಿ ವಿಶುದ್ಧಿಚಕ್ರವಿರ್ಪುದು. ಆ ಚಕ್ರವೆ ಶರಣಸ್ಥಲ. ಆ ಸ್ಥಲವ ಉರಿಲಿಂಗಪೆದ್ದಿದೇವರಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಜೀವತತ್ತ್ವದಲ್ಲಿ ಅಜ್ಞಾನಚಕ್ರವಿರ್ಪುದು. ಆ ಚಕ್ರವೆ ಐಕ್ಯಸ್ಥಲ. ಆ ಸ್ಥಲವ ಅಜಗಣ್ಣತಂದೆಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಬ್ರಹ್ಮಚಕ್ರವೆ ಪರಮ ಆರೂಢಸ್ಥಲ. ಆ ಸ್ಥಲವ ನಿಜಗುಣಯೋಗಿಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಶಿಖಾಚಕ್ರವೆ ನಿತ್ಯನಿರುಪಮಸ್ಥಲ. ಆ ಸ್ಥಲವ ಅಕ್ಕಮಹದೇವಿಯರಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಪಶ್ಚಿಮಚಕ್ರವೆ ಪರಮನಿರಂಜನಸ್ಥಲ. ಆ ಸ್ಥಲವ ಪ್ರಭುಸ್ವಾಮಿಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಒಳಹೊರಗೆ ತೋರುವ ಎಲ್ಲ ಸ್ಥಳಕುಳಂಗಳನು ಉಳಿದ ಸಕಲಗಣಂಗಳು ಇಂಬುಗೊಂಡರಾಗಿ ಎನಗೆ ಎಲ್ಲ ಸ್ಥಲಂಗಳು ಬಯಲಾದುವು. ಇದು ಕಾರಣ, ಆದಿ ಅನಾದಿಯಿಂದತ್ತತ್ತಲಾದ ಘನಕೆ ಘನವಾದ ಮಹಕೆ ಮಹವಾದ ಮಹಾಸ್ಥಲವನಿಂಬುಗೊಂಡಿರಯ್ಯಾ ಎನಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತಾಡಿನಮರದಮೇಲೆ ತೆಂಗಿನಮರವ ಕಂಡೆ. ಟೆಂಗಿನಮರದಮೇಲೆ ಮಾವಿನಮರವ ಕಂಡೆ. ಮಾವಿನಮರದಲ್ಲಿ ಮೇಲುದೇಶದ ಪಕ್ಷಿ ಗೂಡನಿಕ್ಕಿದುದ ಕಂಡೆ. ಶ್ವೇತವರ್ಣ ಅಗ್ನಿಮುಖ ಕಿಡಿಗಣ್ಣು ಅಂಡಜಾತಪಕ್ಷಿ ಇರುವುದ ಕಂಡೆ. ತತ್ತಿಯಲ್ಲಿ ಎರಡು ಪಕ್ಷಿ ಪುಟ್ಟಿದುದ ಕಂಡೆ. ನಡುವಲ್ಲಿ ಹಲವು ಮರಿಗಳುದಯವಾದುದ ಕಂಡೆ. ಕಾಗಿಯ ಮರಿಗಳು ನುಂಗಿ ಪಕ್ಷಿಯ ಕೊಂದು ಉಭಯ ಮರ ಮೆಟ್ಟಿ ಹಾರಿ ಮಾವಿನಮರದ ಗೂಡಿನಲ್ಲಿ ಅಡಗಲು ಆ ಮರ ಬಯಲಾಯಿತ್ತು. ಅದಡಗಿದಲ್ಲಿ ಅದಡಗಿದಾತನೇ ಮಾಯಾಕೋಳಾಹಳ ಶರಣನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗವ ಲಿಂಗಮುಖದಲ್ಲಿ ಅರ್ಪಿಸಿ, ಅಂಗ ಅನಂಗವಾಯಿತ್ತು. ಮನವ ಅರಿವಿಂಗರ್ಪಿಸಿ, ಮನ ಲಯವಾಯಿತ್ತು. ಭಾವವ ತೃಪ್ತಿಗರ್ಪಿಸಿ, ಭಾವ ಬಯಲಾಯಿತ್ತು. ಅಂಗ ಮನ ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು. ಎನ್ನ ಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ, ಶರಣಸತಿ ಲಿಂಗಪತಿಯಾದೆನು. ಇದು ಕಾರಣ, ಚೆನ್ನಮಲ್ಲಿಕಾರ್ಜುನನೆಂಬ ಗಂಡನ ಒಳಹೊಕ್ಕು ಬೆರಸಿದೆನು.
--------------
ಅಕ್ಕಮಹಾದೇವಿ
ಲೀಲೆಗೆ ಹೊರಗಾದ ಲಿಂಗವೆ ಬಾರಯ್ಯಾ, ಎನ್ನ ಅಂಗದೊಳಗಾಗು. ಶ್ರುತ ದೃಷ್ಟ ಅನುಮಾನದಲ್ಲಿ ನೋಡುವವರಿಗೆಲ್ಲಕ್ಕೂ ಅತೀತವಾಗು. ಆಗೆಂಬುದಕ್ಕೆ ಮುನ್ನವೆ ಆ ಗುಂಡು ಕಾಯದ ಕರಸ್ಥಲದಲ್ಲಿ ನಿರ್ಭಾವವಾಗಿ, ಕಾಯವಡಗಿ, ಭಾವವೆಂಬ ಬಯಲಾಯಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬುದಕ್ಕೆಮುನ್ನವೆ.
--------------
ಘಟ್ಟಿವಾಳಯ್ಯ
ಅಂಗದಲ್ಲಿ ಕಟ್ಟಿದ ವಸ್ತ್ರವ ಬಿಟ್ಟು ನೋಡಲಾಗಿ, ಲಿಂಗದ ಕುರುಹು ಇಲ್ಲದಿರೆ, ಇದೇನು ಅಂಗ ನಾಸ್ತಿಯಾದೆ, ಐಘಟವ ಬಿಟ್ಟು ಘಟ ನಾಸ್ತಿಯಾದೆ ಎಂಬುದಕ್ಕೆ ಮೊದಲೇ ಅಂಗ ಬಯಲಾಯಿತ್ತು, [ಐಘಟದೂರ] ರಾಮೇಶ್ವರಲಿಂಗದಲ್ಲಿ.
--------------
ಮೆರೆಮಿಂಡಯ್ಯ
ಕಣ್ಣು ನೀರ ನುಂಗಿದಂತೆ, ಬಣ್ಣ ಛಾಯವ ನುಂಗಿದಂತೆ, ಉರಿ ಸಾರವ ಕೊಂಡಂತೆ, ನಿರುತ ನಿರ್ವಾಣವಾದಂತೆ, ಸರಶಂಕೆಯ ಬಿಟ್ಟು, ಶರಧಿಯ ಒಡಗೂಡಿದಂತೆ, ತನುವಿನ ಸುಂಕವ ಮನೆದೆರಿಗೆಯ ಕರ್ತಂಗೆ ಒಪ್ಪಿಸಿದೆ. ಸಂದಿತ್ತು , ನೀವು ಕೊಟ್ಟ ಮಣಿಹವೆಂಬುದಕ್ಕೆ ಮುನ್ನವೆ ಬಯಲಾಯಿತ್ತು , ಬಂಕೇಶ್ವರಲಿಂಗದಲ್ಲಿ.
--------------
ಸುಂಕದ ಬಂಕಣ್ಣ
ಉದಯ ಮುಖದ ಪ್ರಸಾದ ಸದಮಲದ ಬೆಳಗೇ ಸದ್ರೂಪವಾಗಿ ಸರ್ವಾಂಗವನೊಳಕೊಂಡಿತ್ತು ನೋಡಾ. ಆ ಪ್ರಸಾದ ಸರ್ವಾಂಗವನೊಳಕೊಂಡು ಮೂರ್ತಿಯಾಗಿ ಆ ಪ್ರಸಾದವೆ ತದಾಕಾರವಾಗಿ ನಿಲ್ಲಲು, ಆ ಪ್ರಸಾದದೊಳಗೆ ಆ ಅಂಗ ಬಯಲಾಯಿತ್ತು ನೋಡಾ. ಮಧ್ಯಾಹ್ನ ಮುಖದ ಪ್ರಸಾದ ಶುದ್ಧ ಸ್ವಯಂಜ್ಯೋತಿ ಚಿದ್ರೂಪವಾಗಿ ಮನವನೊಳಕೊಂಡಿತ್ತು. ಆ ಪ್ರಸಾದದಲ್ಲಿ ಆ ಮನ ಬಯಲಾಯಿತ್ತು ನೋಡಾ. ಅಸ್ತಮಯ ಮುಖದ ಪ್ರಸಾದ ಪ್ರಸನ್ನಿಕೆ ಶತಕೋಟಿ ಸೋಮ ಸೂರ್ಯರ ಉದಯದಂತೆ ಆನಂದ ಸ್ವರೂಪವಾಗಿ ಪ್ರಜ್ವಲಿಸುತ್ತಿದೆ ನೋಡಾ. ಆ ಪ್ರಸಾದವೆನ್ನ ಭಾವವ ನುಂಗಿತ್ತಾಗಿ, ಭಾವ ಬಯಲಾಯಿತ್ತು ನೋಡಾ. ಭಾವ ಬಯಲಾಯಿತ್ತಾಗಿ, ಆ ಪ್ರಸಾದ ನಿರ್ಭಾವ ಪ್ರಸಾದತ್ವನೆಯ್ದಿ, ನಿರ್ವಯಲಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಂಜಿನ ಭೂಮಿಯ ಮೇಲೆ ಸಂದೇಹದ ಕವರವ ನೆಟ್ಟು, ಮಂಜುಳದ ಮೂರಂಗದ ಮುಂಡಿಗೆಯ ನೆಟ್ಟು, ಸರಂಗದ ಸುಮನದ ಡೊಂಕರತ ಬೆಮ್ಮರನ ಹಾಕಿ, ಗತಿಮತಿಯೆಂಬ ಇಕ್ಕೆಲದ ಸೂರಿಗೆ ನಿಶ್ಚಯವೆಂಬ ಹುಲುಬಡುವ ಹಾಕಿ ಏರಿಸಿದ ಗಳು ಚಿತ್ತಶುದ್ಧವೆಂಬ ಮೂಗುತಿ ಕೋಲಿನಲ್ಲಿ ನಿಂದಿತ್ತು. ಗಳು ತೊಲಗದ ಕಟ್ಟು ವಿಶ್ವಾಸ ನಿಶ್ಚಯದಲ್ಲಿ ನಿಂದಿತ್ತು. ಸಂದೇಹ ನಿಂದು ಹಂಜರವೇರಿತ್ತು. ಕಡೆ ನಡು ಮೊದಲೆನ್ನದ ತ್ರಿಗುಣದ ಕಂಥೆ ಕಟ್ಟಿ, ಅರಿದು ಮರೆಯದ ಹುಲ್ಲು ಕವಿಸಿತ್ತು. ಮನೆಯಾಯಿತ್ತು, ಮನದ ಕೊನೆಯ ಬಾಗಿಲು ಬಯಲಾಯಿತ್ತು, ಸದಾಶಿವಮೂರ್ತಿಲಿಂಗವು ನಿರಾಳವಾಯಿತ್ತು.
--------------
ಅರಿವಿನ ಮಾರಿತಂದೆ
ಇಲ್ಲದ ಕುತ್ತವ ಕೊಂಡು ಬಲ್ಲವರ ಬಾಯ ಹೊಗಹೋದಡೆ ಆ ಬಲ್ಲ ಬಲ್ಲವರೆಲ್ಲ ಆ ಬಲ್ಲೆಯಲ್ಲಿ ಅಲ್ಲತ್ತಗೊಳುತ್ತಿದ್ದರು. ಇದೆಲ್ಲಿಯ ಕುತ್ತವೆಂದು ತಿಳಿದು ವಿಚಾರಿಸಲು ಅದಲ್ಲೇ ಬಯಲಾಯಿತ್ತು, ಗುರುಸಿದ್ಧಮಲ್ಲಾ
--------------
ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶ
ಅಯ್ಯಾ, ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು. ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ. ಜನನವಾದವರಿಗೆ ಮರಣ ತಪ್ಪದು. ಅದೇನು ಕಾರಣವೆಂದಡೆ ಮರವೆ ಮರವೆಗೆ ಮುಂದುಮಾಡಿತ್ತು; ಕರ್ಮಕ್ಕೆ ಗುರಿಮಾಡಿತ್ತು; ಕತ್ತಲೆಯಲ್ಲಿ ಮುಳುಗಿಸಿತ್ತು. ಕಣ್ಣು ಕಾಣದೆ ಅಂಧಕನಂತೆ ತಿರುಗುವುದ ನೋಡಿ, ನಾ ಹೆದರಿಕೊಂಡು ಎಚ್ಚತ್ತು ಚಿತ್ತವ ಸುಯಿದಾನವ ಮಾಡಿ, ನಿಶ್ಚಿಂತವಾಗಿ ನಿಜವ ನೆಮ್ಮಿ ಅರುಹ ಕಂಡೆ. ಅರುಹುವಿಡಿದು ಆಚಾರವ ಕಂಡೆ; ಆಚಾರವಿಡಿದು ಗುರುವ ಕಂಡೆ; ಗುರುವಿಡಿದು ಲಿಂಗವ ಕಂಡೆ; ಲಿಂಗವಿಡಿದು ಜಂಗಮವ ಕಂಡೆ; ಜಂಗಮವಿಡಿದು ಪಾದೋದಕ ಪ್ರಸಾದವ ಕಂಡೆ. ಪಾದೋದಕ ಪ್ರಸಾದವಿಡಿದು ಮಹಾಶರಣನ ಕಂಡೆ. ಆ ಮಹಾಶರಣನ ಪಾದವಿಡಿದು ಎನ್ನ ಕಾಯಗುಣವಳಿಯಿತ್ತು ಕರಣಗುಣ ಸುಟ್ಟಿತ್ತು; ಅಂಗಗುಣ ಅಳಿಯಿತ್ತು ಲಿಂಗಗುಣ ನಿಂದಿತ್ತು; ಭಾವ ಬಯಲಾಯಿತ್ತು ಬಯಕೆ ಸವೆಯಿತ್ತು. ಮಹಾದೇವನಾದ ಶರಣನ ಬರಿಯ ಬೆಳಗಲ್ಲದೆ, ಕತ್ತಲೆ ಕಾಣಬಾರದು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಜಂಬೂದ್ವೀಪದ ಮಧ್ಯದಲ್ಲಿ ಹುಟ್ಟಿ ಬೆಳೆದ ವಂಶದ ಏಕವಿಂಶತಿಗ್ರಂಥಿಯ ಕೊರೆದು ಮೇಲಕ್ಕೆ ಹೋದ ಅಗ್ನಿಯ ಒಡಲೊಳಗೆ ಈರೇಳು ಲೋಕವ ನುಂಗಿದ ತುಂಬಿಯ ಅಂಗಕ್ಕಳಿವಿಲ್ಲದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ ಬಯಲಾಯಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->