ಅಥವಾ

ಒಟ್ಟು 75 ಕಡೆಗಳಲ್ಲಿ , 17 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಆಸನದ ಭೇದವೆಂತೆಂದೊಡೆ: ಒಂದು ಹಿಮ್ಮಡದಿಂ ಯೋನಿಸ್ಥಾನವನೊತ್ತಿ , ಮತ್ತೊಂದು ಹಿಮ್ಮಡಮಂ ಮೇಢ್ರದ ಮೇಲಿರಿಸಿ, ಏಕಚಿತ್ತನಾಗಿ ಋಜುಕಾಯನಾಗಿ, ಭ್ರೂಮಧ್ಯದಲ್ಲಿ ದೃಷ್ಟಿಯುಳ್ಳಾತನಾಗಿಹುದೇ ಸಿದ್ಧಾಸನವೆನಿಸುವುದು. ಎರಡು ತೊಡೆಗಳ ಮೇಲೆ ಎರಡು ಪಾದಂಗಳ ಮೇಲುಮುಖವಾಗಿರಿಸಿ, ಎರಡು ಕರತಳಂಗಳನು ನಡುವೆ ಮೇಲುಮುಖವಾಗಿರಿಸಿ, ರಾಜದಂತಗಳನಡುವೆ ರಸನಾಗ್ರವನಿಟ್ಟು, ನಾಸಾಗ್ರದೃಷ್ಟಿಯಿಂದಿಹುದೆ ಪದ್ಮಾಸನವೆನಿಸುವುದು. ಎರಡು ತೊಡೆ ಕಿರಿದೊಡೆಗಳ ಸಂದಿಗಳಲ್ಲಿ ಎರಡು ಪಾದಂಗಳನಿರಿಸಿ, ಋಜುಕಾಯನಾಗಿಹುದೇ ಸ್ವಸ್ತಿಕಾಸನವೆನಿಸುವುದು. ಮೇಢ್ರದ ಮೇಲೆ ಎಡದ ಹಿಮ್ಮಡವನಿರಿಸಿ, ಅದರ ಮೇಲೆ ಬಲದ ಹಿಮ್ಮಡವನಿರಿಸಿ, ಋಜುಕಾಯನಾಗಿಹುದೆ ಮುಕ್ತಾಸನವೆನಿಸುವುದು. ಬಲದ ಹಿಮ್ಮಡಮಂ ಎಡದ ಪೊರವಾರಿನೊಳಿಟ್ಟು ಎಡದ ಹಿಮ್ಮಡಮಂ ಬಲದ ಪೊರವಾರಿನೊಳಿಟ್ಟು ಜಾನುಗಳೆರಡನು ಗೋಮುಖಾಕಾರಮಂ ಮಾಳ್ಪುದೇ ಗೋಮುಖಾಸನವೆನಿಸುವುದು. ಈ ಸಕಲ ಆಸನಗಳಿಂದೆ ಯೋಗಮಂ ಸಾಧಿಸುವುದೇ ಆಸನಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಏನೆಂದೆನಲ್ಲದ ಅಖಂಡ ಪರಿಪೂರ್ಣ ಪರಮಾನಂದ ಪರಬ್ರಹ್ಮವು ತಾನೆಂಬ ಅರಿವಿನ ಬಲದ ಅಹಂಕಾರವಿಲ್ಲವಾಗಿ, ಅದ್ವೆ ತಿಯಲ್ಲ; ಉಭಯವಿಟ್ಟರಸುವ ಗಜೆಬಜೆಯಲ್ಲಿ ಸಿಲುಕನಾಗಿ, ದ್ವೈತಿಯಲ್ಲಿ. ಇಂತೀ ದ್ವೆ ೈತಾದ್ವೆ ೈತವೆಂಬ ಉಭಯನಾಮ ನಷ್ಟವಾದ ಅಭೇದ್ಯಮಹಿಮನ ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಶರಣರೆ ಬಲ್ಲರು
--------------
ಸಿದ್ಧರಾಮೇಶ್ವರ
ಸರವರದೊಳಗೊಂದು ಹಿರಿದು ಕಮಳವು ಹುಟ್ಟಿ, ಪರಿಮಳವಡಗಿತ್ತನಾರೂ ಅರಿಯರಲ್ಲಾ ! ಅರಳಿಲೀಯದೆ ಕೊಯ್ದು ಕರಡಿಗೆಯೊಳಗಿರಿಸಿ ಸುರಕ್ಷಿತವ ಮಾಡಲಾರೂ ಅರಿಯರಲ್ಲಾ ! ಎಡದ ಕೈಯಲಿ ಲಿಂಗ, ಬಲದ ಕೈಯಲಿ ಪುಷ್ಪ ಎರಡನರಿದು ಪೂಜೆಯ ಮಾಡಲರಿಯರಲ್ಲಾ ! (ಇವರಲೋಗರವ) ಮಾಡಿ ಸರುವ ತೃಪ್ತಿಯ ಕೊಟ್ಟು ಭರಿತರಾಗಿಪ್ಪರಿನ್ನಾರು ಹೇಳಾ ! ಪರದೇಶಮಂಡಲವನಿರವನೊಂದನೆ ಮಾಡಿ ಪರಿಯಾಯ ಪರಿಯಾಯವನೊರೆದು ನೋಡುತ್ತ ಕರುವಿಟ್ಟ ರೂಹಿಂಗೆ ಕಣ್ಣೆರಡು ಹಳಚದಂತೆ, ಧರೆಯ ಏರಿಯ ಮೇಲೆ ಮೆಟ್ಟಿನಿಂದು ನೋಡುತ್ತ ಹರಿವ ವೃಷಭನ ಹಿಡಿದು ನೆರೆವ ಸ್ವಾಮಿಯ ಕಂಡು ಜನನ ಮರಣವಿಲ್ಲದಂತಾದೆನಲ್ಲಾ ! ಕರುಣಿ ಕೂಡಲಚೆನ್ನಸಂಗಯ್ಯಾ ಬಸವಣ್ಣನ ಕರುಣ, ಪ್ರಭುವಿಗಲ್ಲದೆ ಇನ್ನಾರಿಗೂ ಅಳವಡದು
--------------
ಚನ್ನಬಸವಣ್ಣ
ಎಡದ ಕೈಯ ಲಿಂಗವ ಬಲದ ಕೈಯಲ್ಲಿ ಮುಟ್ಟಿ, ಸ್ಪರ್ಶನವ ಮಾಡುವ ಕರ್ಮಿಯ ನಾನೇನೆಂಬೆ ! ಭವಭವದಲ್ಲಿ ಬಹ ಕರ್ಮಿಯ ನಾನೇನೆಂಬೆ ! ಸತ್ಯವೇನವದಿರ, ಮಿಥ್ಯವೇನವದಿರ ಹಿಡಿದ ಕೈ ತಾನೆ ಎಂದರಿಯರಾಗಿ. ಗುಹೇಶ್ವರಲಿಂಗವು ಬೆರಗಾದನು !
--------------
ಅಲ್ಲಮಪ್ರಭುದೇವರು
ಪ್ರಣವದ ಪ್ರಣವವೆ ನಕಾರ, ಪ್ರಣವದ ದಂಡಕವೆ ಮಕಾರ, ಪ್ರಣವದ ಕುಂಡಲಿಯೆ ಶಿಕಾರ, ಪ್ರಣವದ ಅರ್ಧಚಂದ್ರವೆ ವಕಾರ, ಪ್ರಣವದ ಬಿಂದುವೆ ಯಕಾರ. ನಕಾರದ ದಂಡಕವೆ ಮಕಾರ, ನಕಾರದ ಬಲದ ಕೋಡೆ ಶಿಕಾರ, ನಕಾರದ ಎಡದ ಕೋಡೆ ವಕಾರ, ನಕಾರದ ಬಿಂದುವೆ ಯಕಾರ, ನಕಾರದ ತಾರಕವೆ ಒಂಕಾರ. ಮಕಾರದ ದಂಡಕವೆ ನಕಾರ, ಮಕಾರದ ಬಲದ ಕೋಡೆ ಶಿಕಾರ, ಮಕಾರದ ಎಡದ ಕೋಡೆ ವಕಾರ, ಮಕಾರದ ಬಿಂದುವೆ ಯಕಾರ, ಮಕಾರದ ತಾರಕವೆ ಒಂಕಾರ. ಶಿಕಾರದ ದಂಡಕವೆ ನಕಾರ, ಶಿಕಾರದ ಬಲದ ಕೋಡೆ ಮಕಾರ, ಶಿಕಾರದ ಎಡದ ಕೋಡೆ ವಕಾರ, ಶಿಕಾರದ ಬಿಂದುವೆ ಯಕಾರ, ಶಿಕಾರದ ತಾರಕವೆ ಒಂಕಾರ. ವಕಾರದ ದಂಡಕವೆ ನಕಾರ, ವಕಾರದ ಬಲದ ಕೋಡೆ ಮಕಾರ, ವಕಾರದ ಎಡದ ಕೋಡೆ ಶಿಕಾರ, ವಕಾರದ ಬಿಂದುವೆ ಯಕಾರ, ವಕಾರದ ತಾರಕವೆ ಒಂಕಾರ. ಯಾಕಾರದ ದಂಡಕವೆ ನಕಾರ, ಯಕಾರದ ಬಲದ ಕೋಡೆ ಮಕಾರ, ಯಕಾರದ ಎಡದ ಕೋಡೆ ಶಿಕಾರ, ಯಕಾರದ ಬಿಂದುವೆ ವಕಾರ, ಯಕಾರದ ತಾರಕವೆ ಒಂಕಾರ. ಇಂತಪ್ಪ ಮೂವತ್ತಾರು ಮೂಲಪ್ರಣವಂಗಳೆ, ಪ್ರಥಮಗುರು ಬಸವಣ್ಣನಾದುದಂ, ಸೊಡ್ಡಳ ಲಿಂಗದಲ್ಲಿ ಕಂಡು ಸುಖಿಯಾಗಿ, ನಾನು ಬಸವಾ ಬಸವಾ ಎಂದು ಜಪಿಸುತಿರ್ದೆನಯ್ಯಾ.
--------------
ಸೊಡ್ಡಳ ಬಾಚರಸ
ಎನ್ನ ಬ್ರಹ್ಮರಂಧ್ರದಲ್ಲಿ ಅಖಂಡಿತನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಉತ್ತಮಾಂಗದಲ್ಲಿ ಗಂಗಾಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಲಲಾಟದಲ್ಲಿ ಮಹಾದೇವನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಪಶ್ಚಿಮ[ಚಕ್ರ]ದಲ್ಲಿ ಪಂಚಮುಖನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಕರ್ಣದಲ್ಲಿ ಶ್ರುತಿಪುರಾಣಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಕರ್ಣದಲ್ಲಿ ಪಾರ್ವತೀಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ ಎನ್ನ ಬಲದ ನಯನದಲ್ಲಿ ತ್ರಿಪುರಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ನಯನದಲ್ಲಿ ಕಾಮಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ನಾಸಿಕದಲ್ಲಿ ನಾಗಭೂಷಣನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಜಿಹ್ವೆಯಲ್ಲಿ ಭವಹರರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಕಂಠದಲ್ಲಿ ಲೋಕೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಭುಜದಲ್ಲಿ ಸದಾಶಿವನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಭುಜದಲ್ಲಿ ಮೃತ್ಯುಂಜಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ತೋಳಿನಲ್ಲಿ ಶೂಲಪಾಣಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ತೋಳಿನಲ್ಲಿ ಕೋದಂಡನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮೊಳಕೈಯಲ್ಲಿ ಪರಬ್ರಹ್ಮಸ್ವರೂಪನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮೊಳಕೈಯಲ್ಲಿ ವಿಶ್ವಕುಟುಂಬಿ ಎಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮುಂಗೈಯಲ್ಲಿ ಕರೆಕಂಠನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮುಂಗೈಯಲ್ಲಿ ಶ್ರೀಕಂಠನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅಂಗೈಯಲ್ಲಿ ನಿಧಾಂಕನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅಂಗೈಯಲ್ಲಿ ವೇದಾಂಕನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಹೃದಯದಲ್ಲಿ ಮಾಹೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಪಾಶ್ರ್ವದಲ್ಲಿ ದಕ್ಷಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಪಾಶ್ರ್ವದಲ್ಲಿ ಕಾಲಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬೆನ್ನಿನಲ್ಲಿ ಭೂತೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ನಾಭಿಯಲ್ಲಿ ಶಂಕರನೆಂಬ ರುದ್ರನಾಗಿ, ಬಂದು ನಿಂದಾತ ಬಸವಣ್ಣನಯ್ಯಾ, ಎನ್ನ ಗುಹ್ಯದಲ್ಲಿ ವಿಷ್ಣುಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಗುದದಲ್ಲಿ ಬ್ರಹ್ಮಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ತೊಡೆಯಲ್ಲಿ ಪ್ರಕಾಶನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ತೊಡೆಯಲ್ಲಿ ಸ್ಫಟಿಕಪ್ರಕಾಶನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮಣಿಪಾದದಲ್ಲಿ ಫಣಿಭೂಷಣನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮಣಿಪಾದದಲ್ಲಿ ರುಂಡಮಾಲಾಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಹದಡಿನಲ್ಲಿ ಕಪಾಲಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಹದಡಿನಲ್ಲಿ ಭಿಕ್ಷಾಟನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅಂಗುಷ*ದಲ್ಲಿ ಭೃಂಗಿಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅಂಗುಷ*ದಲ್ಲಿ ನಂದಿಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅರೆಪಾದದಲ್ಲಿ ಪೃಥ್ವೀಪತಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅರೆಪಾದದಲ್ಲಿ ಸಚರಾಚರಪತಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಸರ್ವಾಂಗದಲ್ಲಿ ಸರ್ವೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಇಂತೀ ಮೂವತ್ತೆಂಟು ಸ್ಥಾನಂಗಳಲ್ಲಿ, ಕೂಡಲಚೆನ್ನಸಂಗಯ್ಯಾ ಬಸವಸಾಹಿತ್ಯವಾಗಿಪ್ಪುದಯ್ಯಾ.
--------------
ಚನ್ನಬಸವಣ್ಣ
ಒಂದು ಬಾಲೆ ಕಂದನ ಹೊತ್ತು ಬಂದಿತ್ತು. ಕಂದ ಹುಟ್ಟಿ, ಎಡದ ಕೈಯಲ್ಲಿ ಗಡಿಗೆ, ಬಲದ ಕೈಯಲ್ಲಿ ಕಟ್ಟಿಗೆ. ಮಂಡೆಯ ಮೇಲೆ ಕಿಚ್ಚು ಸಹಿತವಾಗಿ ಅಟ್ಟುಂಬುದಕ್ಕೆ ನೆಲಹೊಲನ ಕಾಣದೆ, ತಿಟ್ಟನೆ ತಿರುಗಿ, ಗಟ್ಟದ ಒತ್ತಿನಲ್ಲಿ, ಕಟ್ಟಕಡೆಯಲ್ಲಿ, ಒಂದು ಬಟ್ಟಬಯಲು ಮಾಳವಿದ್ದಿತ್ತು. ಕೈಯಕಂದನನಿರಿಸಿ ಕಟ್ಟಿಗೆಯ ಹೊರೆಯ ಕಟ್ಟ ಬಿಟ್ಟು, ಮಸ್ತಕದ ಬೆಂಕಿಯ ಕಟ್ಟಿಗೆಯ ಒತ್ತಿನಲ್ಲಿರಿಸಿ, [ಒತ್ತಿನ ಕಾಲ] ಕಾಣದೆ ಹೊಲಬುದಪ್ಪಿ, ಆ ಹೊಲದೊಳಗೆ ತಿರುಗಿನೋಡಿ, ಪಶ್ಚಿಮದಲ್ಲಿ ಕಂಡ ಪಚ್ಚೆಯ ಕಲ್ಲ, ಉತ್ತರದಲ್ಲಿ ಕಂಡ ಪುಷ್ಕರದಲ್ಲಿ ಕಲ್ಲ, ಪೂರ್ವದಲ್ಲಿ ಕಂಡ ಬಿಳಿಯಕಲ್ಲ ಮೂರೂ ಕೂಡಿ, ಮಡಕೆಯ ಮಂಡೆಯ ಮೇಲಿರಿಸಲಾಗಿ, ಕಂಡಿತ್ತು ಕಲ್ಲಿನ ಇರವ. ಉದಕವನರಸಿ ಅ[ಳಲು] ತ್ತಿರ್ದಿತ್ತು [ಬೆಂಕಿ.ಆ] ಬೆಂಕಿ ಬೇಗೆಗಾರದೆ, ಉದಕ ಒಡೆದು ಮಡಕೆ ನಿಂದಿತ್ತು. ನಿಂದ ಮಡಕೆಯ ಅಂಗವ ಕಂಡು, ಇದರ ಹಂಗೇನೆಂದು ಕೈ ಬಿಡಲಾಗಿ, ಮಡಕೆಯಡಗಿತ್ತು ಮೂರುಕಲ್ಲಿನ ಮಧ್ಯದಲ್ಲಿ ಕಟ್ಟಿಗೆ ಸುಟ್ಟ [ವನ] ಮಕ್ಕಳುಂಡರು ಮಿಕ್ಕವರೆಲ್ಲಾ ಹಸಿದರು. ಹಸಿದವರ ಸಂಗ ಗಸಣೆಗೊಳಿಸಿತ್ತು. ಇಂತೀ ಹುಸಿಯ ದೇಹವ ತೊಟ್ಟು ದೆಸೆಗೆಟ್ಟೆನಯ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೆಲೆಯಿಲ್ಲದ ಮಹಾಜಲದೊಳಗೆ ಮಲಗಿರ್ದ ಸರ್ಪನ ಫಣವ ನೋಡಲು, ಬೆಳಬೆಳಗುತ್ತಿರ್ದವು ರಜತ ಹೇಮವೆಂಬ ಎರಡು ಕುಲಗಿರಿಗಳು. ಎಡದ ಕೈಯಲ್ಲಿ ರಜತಗಿರಿಯಂ ಪಿಡಿದು ಬಲದ ಕೈಯಲ್ಲಿ ಹೇಮಾದ್ರಿಯಂ ಪಿಡಿದು ಮಹಾದಂಡಿಯ ಫಣಿಯ ಒದೆಯಲು ನೆಗಹಿತ್ತು ಈರೇಳು ಭುವನವ. ಅಲ್ಲಿಂದ ಮೇಲೆ, ಗಿರಿ ಎರಡು ವರ್ಣವಳಿದು ಅಡಗಿದವು ಚಿಕ್ಕಾಡಿನ ಹೃದಯದಲ್ಲಿ ! ಚಿಕ್ಕಾಡು ಕಂದೆರೆದು ಕಂಡಿತ್ತು ಚಿದಾಕಾಶವೆಂಬ ಶಿವಾಲಯವ ! ಅಂಗವಿಲ್ಲದ ಶೃಂಗಾರಕ್ಕೆ ಭಂಗ ಉಂಟೆ ?_ಇಲ್ಲವಾಗಿ, ಗುಹೇಶ್ವರನೆಂಬ ಶಬ್ದಬ್ರಹ್ಮಕ್ಕೆ ಮುದ್ರಿಕೆಯಾಯಿತ್ತು.
--------------
ಅಲ್ಲಮಪ್ರಭುದೇವರು
ಗುರುಕಾರುಣ್ಯವ ಪಡೆದು ಅಂಗದ ಮೇಲೆ ಲಿಂಗಧಾರಣವಾಗಿ, ಶ್ರೀ ವಿಭೂತಿಯ ಧರಿಸಿದ ಮಹಾತ್ಮನು ಮುಂದೆ ಶಿವನ ಜ್ಞಾನಚಕ್ಷುವಿನಿಂದುದಯಿಸಿದ ರುದ್ರಾಕ್ಷಿಯ ಧರಿಸುವ ಭೇದವೆಂತೆಂದೊಡ ಃ ಶಿಖಾಸ್ಥಾನದಲ್ಲಿ ಏಕಮುಖವನುಳ್ಳಂಥ ಒಂದು ರುದ್ರಾಕ್ಷಿಯ `` ಓಂ ಸದಾಶಿವಾಯ ನಮ ಃ '' ಎಂಬ ಮಂತ್ರದಿಂದ ಧಾರಣಮಾಡುವುದು. ಮಸ್ತಕದಲ್ಲಿ ಎರಡುಮುಖ ಮೂರುಮುಖ ಹನ್ನೆರಡುಮುಖಂಗಳನುಳ್ಳಂಥ ಮೂರು ರುದ್ರಾಕ್ಷಿಗಳ `` ಓಂ ವಹ್ನಿಸೂರ್ಯಸೋಮಾಧಿಪಾಯ ಶಿವಾಯ ನಮಃ '' ಎಂಬ ಮಂತ್ರದಿಂದ ಧಾರಣಮಾಡುವುದು. ಶಿರವ ಬಳಸಿ ಹನ್ನೊಂದುಮುಖಂಗಳನುಳ್ಳಂಥ ಮೂವತ್ತಾರು ರುದ್ರಾಕ್ಷಿಗಳ ``ಓಂ ಷಟ್‍ತ್ರಿಂಶತತ್ತಾ ್ವತ್ಮಕಾಯ ಪರಶಿವಾಯ ನಮಃ '' ಎಂಬ ಮಂತ್ರದಿಂದ ಧಾರಣಮಾಡುವುದು. ಕರ್ಣಯುಗದಲ್ಲಿ ಐದುಮುಖ ಹತ್ತುಮುಖ ಏಳುಮುಖಂಗಳನುಳ್ಳಂಥ ಒಂದೊಂದು ರುದ್ರಾಕ್ಷಿಯ ``ಓಂ ಸೋಮಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಕಂಠಸ್ಥಾನದಲ್ಲಿ ಎಂಟುಮುಖ, ಆರುಮಖಂಗಳನುಳ್ಳಂಥ ಮೂವತ್ತೆರಡು ರುದ್ರಾಕ್ಷಿಗಳ ``ಓಂ ತ್ರಿಯಂಬಕಕಲಾತ್ಮನೇ ಶ್ರೀಕಂಠಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಉರಸ್ಥಾನದಲ್ಲಿ ನಾಲ್ಕುಮುಖಂಗಳನುಳ್ಳಂಥ ಐವತ್ತುನಾಲ್ಕು ರುದ್ರಾಕ್ಷಿಗಳ ``ಓಂ ಶ್ರೀಕಂಠಾದಿಮುಕ್ತ್ಯಾತ್ಮಕಾಯ ಶ್ರೀ ಸರ್ವಜ್ಞಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಬಾಹುದ್ವಯದಲ್ಲಿ ಹದಿಮೂರುಮುಖಂಗಳನುಳ್ಳಂಥ ಹದಿನಾರು ಹದಿನಾರು ರುದ್ರಾಕ್ಷಿಗಳ ``ಓಂ ಸುಖಾಸನಾದಿ ಷೋಡಶಮೂರ್ತ್ಯಾತ್ಮಕಾಯ ಶ್ರೀಕಂಠಾಯ ನಮಃ'' ಎಂಬ ಮಂತ್ರದಿಂದ ಬಲದ ತೋಳಿನಲ್ಲಿ ಧಾರಣಮಾಡುವುದು. ``ಓಂ ಸೋಮಕಲಾತ್ಮಕಾಯ ಸೋಮಾಯ ನಮಃ'' ಎಂಬ ಮಂತ್ರದಿಂದ ಎಡದ ತೋಳಿನಲ್ಲಿ ಧಾರಣಮಾಡುವುದು. ಮುಂಗೈ ಎರಡರಲ್ಲಿ ಒಂಬತ್ತು ಮುಖಂಗಳನುಳ್ಳಂಥ ಹನ್ನೆರಡು ಹನ್ನೆರಡು ರುದ್ರಾಕ್ಷಿಗಳ ``ಓಂ ದ್ವಾದಶಾದಿತ್ಯಾಕ್ಷಾಯ ಶ್ರೀ ಮಹಾದೇವಾಯ ನಮಃ'' ಎಂಬ ಮಂತ್ರದಿಂದ ಬಲದ ಮುಂಗೈಯಲ್ಲಿ ಧಾರಣಮಾಡುವುದು. ``ಓಂ ಕೇಶವಾದಿತ್ಯಾಯ ಉಮಾಪತಯೇ ನಮಃ'' ಎಂಬ ಮಂತ್ರದಿಂದ ಎಡದ ಮುಂಗೈಯಲ್ಲಿ ಧಾರಣಮಾಡುವುದು. ಕಕ್ಷಸ್ಥಾನದಲ್ಲಿ ಯಜ್ಞೋಪವೀತರೂಪವಾಗಿ ಹದಿನಾಲ್ಕುಮುಖಂಗಳನುಳ್ಳಂಥ ನೂರೆಂಟು ರುದ್ರಾಕ್ಷಿಗಳ ``ಓಂ ಶತರುದ್ರವಿದ್ಯಾಸ್ವರೂಪಾತ್ಮಕಾಯ ಶ್ರೀ ವಿಶ್ವೇಶ್ವರಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಇಂತೀ ಸ್ಥಾನಗಣನೆ ಮುಖಮಂತ್ರಂಗಳ ಭೇದವನರಿದು, ಶ್ರೀ ರುದ್ರಾಕ್ಷಿಯ ಧರಿಸಿದ ಶರಣ ತಾನೇ ಸಾಕ್ಷಾತ್ ಪರಶಿವನಲ್ಲದೆ ಬೇರಲ್ಲವಯ್ಯ. ಅದೆಂತೆಂದೊಡೆ :ಪರಮರಹಸ್ಯದಲ್ಲಿ- ``ಭಾಲೇ ತ್ರೈಪುಂಡ್ರಕಂ ಯಸ್ಯ ಗಲೇ ರುದ್ರಾಕ್ಷಮಾಲಿಕಾ | ವಕ್ತ್ರೇ ಷಡಕ್ಷರಂ ಮಂತ್ರಂ ಶಿವಃ ನಾ ಸಂಶಯಃ ||'' ಎಂದುದಾಗಿ, ಅಂತಪ್ಪ ಮಹಿಮಂಗೆ ಶರಣೆಂದವರೆ ಧನ್ಯರಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎಡದ ಕೈಯಲ್ಲಿ ಲಿಂಗವ ಹಿಡಿದುಕೊಂಡು, ಬಲದ ಕೈಯಲ್ಲಿ ಮುದ್ದೆಯ ಮಾಡಿ, `ಉಣ್ಣು ಉಣ್ಣೆಂ'ದು ಊಡಿಸಿದರೆ ಒಲ್ಲದು ಕಾಣಿರಯ್ಯ. ದೇವರುಂಡಿತೆಂದು ಬಿಗಿಬಿಗಿದು ಕಟ್ಟಿಕೊಂಬರಯ್ಯ. ದೇವರಿಗೆ ಹಿಪ್ಪೆಯ ತೋರಿ, ರಸವ ನೀವು ಉಂಡು, ದೇವರನೇಕೆ ದೂರುವಿರಯ್ಯ? ದೇವರು ಹೀಂಗೆ ಒಲ್ಲದು. ಉಂಬ ಕ್ರಮವ ಹೇಳಿಹೆ ಕೇಳಿರಯ್ಯ. ಇಷ್ಟಲಿಂಗಕ್ಕೆ ರೂಪ ಕೊಟ್ಟಲ್ಲಿ, ನೋಡಿ ಪರಿಣಾಮಿಸುವದಲ್ಲದೆ ಸವಿದು ಪರಿಣಾಮಿಸುವುದಲ್ಲ. ಸವಿದು ಪರಿಣಾಮಿಸುವುದೆಲ್ಲಿಯೆಂದರೆ; ಜಿಹ್ವೆಯ ಕೊನೆಯ ಮೊನೆಯಲ್ಲಿ ತಟ್ಟುವ ಮುಟ್ಟುವ ಷಡುರಸ್ನಾನದ ರುಚಿಯ ತಾನೆನ್ನದೆ ಲಿಂಗವೇ ಸ್ವೀಕರಿಸುತ್ತದೆಯೆಂಬ ನಿಶ್ಚಯವುಳ್ಳರೆ ಸವಿದು ಪರಿಣಾಮಿಸುವದಯ್ಯ. ನಾಸಿಕದ ಕೊನೆಯ ಮೊನೆಯಲ್ಲಿ ವಾಸಿಸುವ ಷಡ್ವಿಧಗಂಧಂಗಳ ಭೋಗವನರಿದು ಭೋಗಿಸುವದು ಲಿಂಗ ತಾನೆ. ನೇತ್ರದ ಕೊನೆಯ ಮೊನೆಯಲ್ಲಿ ತಟ್ಟುವ ಷಡ್ವಿಧರೂಪಿನ ಭೋಗಂಗಳ ಭೋಗಿಸಿ ಸುಖಿಸುವುದು ಲಿಂಗ ತಾನೆ, ನೋಡಾ. ತ್ವಕ್ಕಿನ ಕೊನೆಯ ಮೊನೆಯಲ್ಲಿ ಸೋಂಕುವ ಷಡ್ವಿಧ ಸ್ಪರ್ಶನದ ಭೋಗಂಗಳ ಭೋಗಿಸಿ ಸುಖಿಸುವದು ಲಿಂಗ ತಾನೆ, ನೋಡಾ. ಶ್ರೋತ್ರದ ಕೊನೆಯ ಮೊನೆಯಲ್ಲಿ ತಟ್ಟುವ ಷಡ್ವಿಧ ಶಬ್ದಂಗಳ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ ಪರಿಣಾಮಿಸುವದು ಲಿಂಗ ತಾನೆ ನೋಡಾ. ಭಾವದ ಕೊನೆಯ ಮೊನೆಯಲ್ಲಿ ತೀವಿ ಪರಿಪೂರ್ಣವಾಗಿರ್ಪ ಷಡ್ವಿಧತೃಪ್ತಿಯ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ, ಪರಿಣಾಮಿಸುವಾತನು ಲಿಂಗದೇವನೆಂದರಿದು, ಸರ್ವೇಂದ್ರಿಯಮುಖದಲ್ಲಿ ಬಂದ ಸರ್ವತೋಮುಖಪದಾರ್ಥವ, ಸರ್ವತೋಮುಖಲಿಂಗಕ್ಕೆ ಅರ್ಪಿಸಿ, ಸರ್ವಾಂಗವೆಲ್ಲವು ಬಾಯಾಗಿ, ಸರ್ವತೋಮುಖಪ್ರಸಾದವ ಕೊಂಡು, ಆ ಸರ್ವಜ್ಞಪ್ರಸಾದದೊಳಡಗಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಡದ ಕೈಯಲ್ಲಿ ನಿಗಳ ಕಂಕಣನಿಕ್ಕಿ, ಬಲದ ಕೈಯ ಕಡಿದುಕೊಂಡಡೆ, ನೋವಿನ್ನಾವುದು ಹೇಳಾ. ಒಡಲೊಂದೆ ಪ್ರಾಣವೊಂದೆಯಾಗಿ, ನೋವಿನ್ನಾರದು ಹೇಳಾ. ಲಿಂಗ ಜಂಗಮವನಾರಾಧಿಸಿ, ನಿಂದೆಗೆ ತಂದಡೆ ನೊಂದೆನಯ್ಯಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಎನ್ನ ಪಶ್ಚಿಮದಲ್ಲಿ ನಿರಂಜನಪ್ರಣಮವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಶಿಖೆಯಲ್ಲಿ ಬಸವತ್ರಯಾಕ್ಷರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಬ್ರಹ್ಮರಂಧ್ರದಲ್ಲಿ ಅಉಮಾಕ್ಷರ ಪ್ರಸಾದ ಪಂಚಾಕ್ಷರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಆಜ್ಞಾಚಕ್ರದಲ್ಲಿ ಓಂಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ವಿಶುದ್ಧಿಯಲ್ಲಿ ಯಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಅನಾಹತದಲ್ಲಿ ವಾಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಮಣಿಪೂರಕದಲ್ಲಿ ಶಿಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಸ್ವಾಧಿಷಾ*ನದಲ್ಲಿ ಮಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಆಧಾರದಲ್ಲಿ ನಕಾರವಾಗಿ ನಿಂದಾತ ನಮ್ಮ ಬಸವಣ್ಣ. ಮತ್ತಂ, ಮಸ್ತಕದಲ್ಲಿ ಹಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಬಲದ ಬದಿಯಲ್ಲಿ ಓಂಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಎಡದ ಬದಿಯಲ್ಲಿ ಅಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಹೃದಯದಲ್ಲಿ ಉಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಬೆನ್ನಿನಲ್ಲಿ ಮಕಾರವಾಗಿ ನಿಂದಾತ ನಮ್ಮ ಬಸವಣ್ಣ. ಸಾಕ್ಷಿ : 'ಅಕಾರಂ ವಾಮಭಾಗಂ ಚ ಉಕಾರಂ ಪೂರ್ವಮೇವ ಚ | ಮಕಾರಂ ಪಶ್ಚಿಮಶ್ಚೈವ ಓಂಕಾರಂ ದಕ್ಷಿಣಸ್ತಥಾ | ಹಕಾರಂ ಊಧ್ರ್ವಭಾಗಂ ಚ ಪಂಚ ಪ್ರಣವ ಕೀರ್ತಿತಾ ||' ಎಂದುದಾಗಿ, ಎನ್ನ ಲಲಾಟದಲ್ಲಿ ಓಂಕಾರವಾಗಿ ನಿಂದಾತ ಬಸವಣ್ಣ. ಎನ್ನ ಬಲದ ಭುಜದಲ್ಲಿ ನಕಾರವಾಗಿ ನಿಂದಾತ ಬಸವಣ್ಣ. ಎನ್ನ ಎಡದ ಭುಜದಲ್ಲಿ ಮಕಾರವಾಗಿ ನಿಂದಾತ ಬಸವಣ್ಣ. ಎನ್ನ ನಾಭಿಯಲ್ಲಿ ಶಿಕಾರವಾಗಿ ನಿಂದಾತ ಬಸವಣ್ಣ. ಎನ್ನ ಬಲದ ತೊಡೆಯಲ್ಲಿ ವಕಾರವಾಗಿ ನಿಂದಾತ ಬಸವಣ್ಣ. ಎನ್ನ ಎಡದ ತೊಡೆಯಲ್ಲಿ ಯಕಾರವಾಗಿ ನಿಂದಾತ ಬಸವಣ್ಣ. ಸಾಕ್ಷಿ : 'ಓಂಕಾರಂ ವದನಂ ದೇವಿ ನಮಸ್ಕಾರಂ ಭುಜದ್ವಯಂ | ಶಿಕಾರಂ ದೇಹಮಧ್ಯಸ್ತು ವಾಕಾರಂ ಚ ಪದದ್ವಯಂ ||' ಎಂದುದಾಗಿ, ಎನ್ನ ಪಂಚಭೂತಾತ್ಮದಲ್ಲಿ ಓಂಕಾರವಾಗಿ ನಿಂದಾತ ಬಸವಣ್ಣ. ಎನ್ನ ದಶ ಇಂದ್ರಿಯದಲ್ಲಿ ನಕಾರವಾಗಿ ನಿಂದಾತ ಬಸವಣ್ಣ. ಎನ್ನ ಮನಪಂಚಕದಲ್ಲಿ ಮಕಾರವಾಗಿ ನಿಂದಾತ ಬಸವಣ್ಣ. ಎನ್ನ ಪ್ರಾಣದಲ್ಲಿ ಶಿಕಾರವಾಗಿ ನಿಂದಾತ ಬಸವಣ್ಣ. ಎನ್ನ ದಶವಾಯುಗಳಲ್ಲಿ ವಾಕಾರವಾಗಿ ನಿಂದಾತ ಬಸವಣ್ಣ. ಎನ್ನ ತ್ರಿಗುಣದಲ್ಲಿ ಯಕಾರವಾಗಿ ನಿಂದಾತ ಬಸವಣ್ಣ. 'ಓಂಕಾರಂ ಪಂಚಭೂತಾತ್ಮಕಂ ನಕಾರಂ ದಶ ಇಂದ್ರಿಯಂ | ಮಕಾರಂ ಮನಪಂಚಕಂ ಶಿಕಾರಂ ಪ್ರಾಣನಾಯಕಂ | ವಾಕಾರಂ ದಶವಾಯೂನಾಂ ಯಕಾರಂ ತ್ರಿಗುಣಂ ಭವೇತ್ ||' ಎಂದುದಾಗಿ, ಶಿವನ ಆರು ಮುಖದಿಂದ ಆರು ಪ್ರಣವಂಗಳು ಪುಟ್ಟಿದವು. ಈ ಆರು ಪ್ರಣವಂಗಳನರಿಯದೆ ಪೂಜೆಯ ಮಾಡಿದಡೆ ಆ ಪೂಜೆ ನಿಷ್ಫಲಂ. ಸಾಕ್ಷಿ : 'ಷಡಕ್ಷರ ಸಮಾಖ್ಯಾತಂ ಷಡಾನನ ಸಮನ್ವಿತಂ | ಷಡ್ಭೇದಂ ಯೋ ನ ಜಾನಾತಿ ಪೂಜಾ [ಸಾ] ನಿಷ್ಫಲಂ ಭವೇತ್ ||' ಎಂದುದಾಗಿ, ಎನ್ನ ಸರ್ವಾಂಗದಲ್ಲಿ ಸರ್ವಮಯ ಮಂತ್ರಮೂರ್ತಿಯಾಗಿ ನಿಂದಾತ ನಮ್ಮ ಬಸವಣ್ಣನೆಂದು ಎನ್ನೊಳಗೆ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಎಡದ ಕೈಯಲು ಹಾಲ ಬಟ್ಟಲು, ಬಲದ ಕೈಯಲು ಓಜುಗಟ್ಟಿಗೆ, ಆವಾಗ ಬಂದಾನೆಮ್ಮಯ್ಯ, ಬಡಿದು ಹಾಲ ಕುಡಿಸುವ ತಂದೆ. ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ ಅತಿಭಕ್ತ್ಯಾ ಲಿಂಗತ್ಟುರಪಹಾಸ್ಯಾದ್ಯಮದಂಡನಮ್! ಎಂದುದಾಗಿ, ಕೂಡಲಸಂಗಮದೇವಯ್ಯ, ತಾನೆ ಭಕ್ತಿಯ ಪಥವ ತೋರುವ ತಂದೆ. 389
--------------
ಬಸವಣ್ಣ
ಪ್ರಥಮದಲ್ಲಿ ನಾಮ ರೂಪು ಕ್ರೀ ಏನೂ ಏನೂ ಇಲ್ಲದ ಮಹಾಘನ ಶೂನ್ಯಬ್ರಹ್ಮವು. ಆ ಶೂನ್ಯಬ್ರಹ್ಮದಿಂದ ಶುದ್ಧ ಪ್ರಣವ. ಆ ಶುದ್ಧ ಪ್ರಣವಧಿಂದ ಚಿತ್ತು ಭಾವದಕ್ಷರ. ಆ ಚಿತ್ತು ಭಾವದಕ್ಷರದಿಂದ ಪರಶಕ್ತಿ. ಆ ಪರಾಶಕ್ತಿಯಿಂದ ಅಕ್ಷರತ್ರಯಂಗಳು. ಆ ಅಕ್ಷರತ್ರಯಂಗಳಿಂದ ಓಂಕಾರ. ಆ ಓಂಕಾರವೆ ಬಸವಣ್ಣನು. ಆ ಬಸವಣ್ಣನೆ ಎನ್ನ ವದನಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬಲದ ಭುಜಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಎಡದ ಭುಜಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದೇಹಮಧ್ಯಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ ಎನ್ನ ಬಲದ ತೊಡೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಎಡದ ತೊಡೆಗೆ ಯಕಾರಾವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಥೂಲತನುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸೂಕ್ಷ ್ಮತನುವಿಂಗೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕಾರಣತನುವಿಂಗೆ ಆಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಯತಕ್ಕೆ ಬಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಾಯತಕ್ಕೆ ಸಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸನ್ನಿಹಿತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕ್ರೀಗೆ ಅವಾಚ್ಯ ಸ್ವರೂಪಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಮಹಾಶೂನ್ಯ ಸ್ವರೂಪನಾಗಿ ಬಂದನಯ್ಯ ಬಸವಣ್ಣ. ಎನ್ನ ರುಧಿರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಂಸಕ್ಕೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮೇದಸ್ಸಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಸ್ಥಿಗೆ ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಜ್ಜೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತ್ವಗಮಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದೇಹಭಾವ ಕೊಂದಹೆನೆಂದು ಬಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಹೊನ್ನು ಹೆಣ್ಣು ಮಣ್ಣೆಂಬ ಸಕಲಾಸೆಯ ಕೊಂದಹೆನೆಂದು ಸಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಇಂದ್ರಿಯ ವಿಷಯಂಗಳ ಕೊಂದಹೆನೆಂದು ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಾದಕ್ಕೆ ಆಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬಿಂದುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕಳೆಗೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಶ್ವಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ತೈಜಸಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ ಎನ್ನ ಪ್ರಜ್ಞೆಗೆ ತೃಪ್ತಿಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸತ್ವಕ್ಕೆ ಶುದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ರಜಕ್ಕೆ ಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ತಮಕ್ಕೆ ಪ್ರಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನಗೆ ಬಕಾರವೆ ಗುರುವಾಗಿ ಬಂದನಯ್ಯ ಬಸವಣ್ಣ. ಎನಗೆ ಸಕಾರವೆ ಲಿಂಗವಾಗಿ ಬಂದನಯ್ಯ ಬಸವಣ್ಣ. ಎನಗೆ ವಕಾರವೆ ಜಂಗಮವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸೂಕ್ಷ ್ಮತನುವಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಕಾರಣತನುವಿಂಗೆ ಭಾವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಶಿವ ಕ್ಷೇತ್ರಜ್ಞ ಕರ್ತಾರ ಭಾವ ಚೈತನ್ಯ ಅಂತರ್ಯಾಮಿಯೆಂಬ ಷಡುಮೂರ್ತಿಗಳಿಗೆ ನಕಾರ ಮಃಕಾರ ಶಿಕಾರ ವಾಕಾರ ಯಕಾರ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ತಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಬುದ್ಧಿಗೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮನಸ್ಸಿಂಗೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಭಾವಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಬ್ರಹ್ಮತತ್ವಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಷ್ಣುತತ್ವಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ರುದ್ರತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಈಶ್ವರತತ್ವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸದಾಶಿವತತ್ವಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಹಾಶ್ರೀಗುರುತತ್ವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪೃಥ್ವಿಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಪ್ಪುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಗ್ನಿತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಕಾಶಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆತ್ಮಂಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣವಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಪಾನವಾಯುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವ್ಯಾನವಾಯುವಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಉದಾನವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸಮಾನವಾಯುವಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ ಎನ್ನ ಪಂಚವಾಯುವಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಧಾರಚಕ್ರಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಾಧಿಷಾ*ನಚಕ್ರಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮಣಿಪೂರಚಕ್ರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅನಾಹತಚಕ್ರಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಶುದ್ಧಿಚಕ್ರಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಆಜ್ಞಾಚಕ್ರಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಚತುರ್ದಳಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷಡುದಳಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶದಳಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶದಳಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಿದಳಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚತುರಾಕ್ಷರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷಡಾಕ್ಷರಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದಶಾಕ್ಷರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶಾಕ್ಷರಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶಾಕ್ಷರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಿಯಾಕ್ಷರಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಮ. ಎನ್ನ ಕೆಂಪುವರ್ಣಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನೀಲವರ್ಣಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕುಂಕುಮವರ್ಣಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪೀತವರ್ಣಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ವೇತವರ್ಣಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಣಿಕ್ಯವರ್ಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ರಾಗ್ರಾವಸ್ಥೆಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಪ್ನಾವಸ್ಥೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸುಷುಪ್ತಾವಸ್ಥೆಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತೂರ್ಯಾವಸ್ಥೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅತೀತಾವಸ್ತೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಿರಾವಸ್ಥೆಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಂತಃಕರಣಂಗಳಿಗೆ ಚತುರ್ವಿಧ ಬಿಂದು ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅರಿಷಡ್ವರ್ಗಂಗಳಿಗೆ ಷಡ್ವಿಧಧಾತು ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ದಶವಾಯುಗಳಿಗೆ ದಶವಿದ ಕ್ಷೇತ್ರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶೇಂದ್ರಿಯಂಗಳಿಗೆ ದ್ವಾದಶ ವಿಕೃತಿಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶಕಲೆಗೆ ಷೋಡಶಕಲಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರ ಮಮಕಾರಗಳಿಗೆ ವಿದ್ಯಾಲಿಂಗವಾಗಿ ಬಂದನಯ್ಯಬಸವಣ್ಣ. ಎನ್ನ ಭಕ್ತಿಸ್ಥಲಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಹೇಶ್ವರಸ್ಥಲಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಸಾದಿಸ್ಥಲಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣಲಿಂಗಿಸ್ಥಳಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಶರಣಸ್ಥಲಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಐಕ್ಯಸ್ಥಲಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬುದ್ಧಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮನಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಭಾವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕ್ರಿಯಾಶಕ್ತಿಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಶಕ್ತಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಇಚ್ಛಾಶಕ್ತಿಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆದಿಶಕ್ತಿಗೆ ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪರಶಕ್ತಿಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ಶಕ್ತಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ರದ್ಧೆಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಿಷೆ*ಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅವಧಾನಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅನುಭಾವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆನಂದಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸಮರಸಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶಬ್ದಕ್ಕೆ ಗುರುವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಪರುಶನಕ್ಕೆ ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ರೂಪಿಂಗೆ ಶಿವಲಾಂಛನವಾಗಿ ಬಂದನಯ್ಯ ಬಸವಣ್ಣ. ಎನ್ನ ರಸಕ್ಕೆ ಶಿವಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ಗಂಧಕ್ಕೆ ಶಿವಾನುಭಾವವಾಗಿ ಬಂದನಯ್ಯ ಬಸವಣ್ಣ ಎನ್ನ ನಾಸಿಕಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜಿಹ್ವೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನೇತ್ರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತ್ವಕ್ಕಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ರೋತ್ರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಹೃದಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಾಕ್ಕಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾಣಿಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾದಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಗುಹ್ಯಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಇಂತೀ ಪಂಚೇಂದ್ರಿಯಂಗಳೆ ಪಂಚಮಹಾಯಜ್ಞ. ಆ ಪಂಚಮಹಾಯಜ್ಞದಲ್ಲಿ ಎನ್ನ ಮನ ಹಾರೈಸಿ ಪೂರೈಸಿ ಒಲಿದು ಕೇಳಿತ್ತು ಮುಟ್ಟಿತ್ತು ನೋಡಿತ್ತು ರುಚಿಸಿತ್ತು ವಾಸಿಸಿತ್ತು. ಎನ್ನ ಮಾನಸ ವಾಚಕ ಕಾಯಕ ಕರಣಂಗಳೆಲ್ಲವು ಪಂಚಮಹಾಯಜ್ಞ ಸೋಂಕಿ ಪಂಚಮಹಾಯಜ್ಞವಪ್ಪುದು ತಪ್ಪದು. ಅದೆಂತೆಂದಡೆ- ಮಹಾಜ್ಯೋತಿಯ ಸೋಂಕಿದ ಉತ್ತಮ ಅಧಮ ತೃಣ ಮೊದಲಾದವೆಲ್ಲವು ಮಹಾ ಅಗ್ನಿಯ ಸೋಂಕಿ ಮಹಾ ಅಗ್ನಿಯಪ್ಪುದು ತಪ್ಪದು. ಇಂತಪ್ಪ ಮಹಾಯಜ್ಞವನೊಳಕೊಂಡಿಪ್ಪ ಮೂಲಾಗ್ನಿಯೇ ಬಸವಣ್ಣ. ಆ ಬಸವಣ್ಣನೆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿಯೇ ಚಿದ್ಬ ್ರಹ್ಮ. ಆ ಚಿದ್ಬ ್ರಹ್ಮವೇ ಬಸವಣ್ಣ. ಆ ಬಸವಣ್ಣನೇ ಎನಗೆ ಅಷ್ಟಾವರಣ ಸ್ವರೂಪನಾದ ಸಚ್ಚಿದಾನಂದ ಬಸವಣ್ಣ. ನಿತ್ಯಪರಿಪೂರ್ಣ ಬಸವಣ್ಣ. ಅಖಂಡಾದ್ವಯ ಬಸವಣ್ಣ. ನಿರಂಜನ ಬಸವಣ್ಣ. ನಿರ್ಮಾಯ ಬಸವಣ್ಣ, ನಿರಾಚರಣ ಬಸವಣ್ಣ. ನಿರ್ಜನಿತ ಬಸವಣ್ಣ. ನಿರ್ಲೇಪ ಬಸವಣ್ಣ. ನಿಃಕಪಟಿ ಬಸವಣ್ಣ. ಅಸಾಧ್ಯ ಸಾಧಕ ಬಸವಣ್ಣ. ಅಭೇದ್ಯ ಭೇದಕ ಬಸವಣ್ಣ. ಚಿತ್ಪ್ರಕಾಶ ಬಸವಣ್ಣ. ಇಂತಪ್ಪ ಬಸವಣ್ಣನ ಅಂಗವೆ ಚಿದಾಕಾಶ. ಆ ಚಿದಾಕಾಶದ ಮಧ್ಯದಲ್ಲಿ ಚಿತ್ಪ್ರಾಣವಾಯು. ಆ ಚಿತ್ಪ್ರಾಣವಾಯುವಿನ ಮಧ್ಯದಲ್ಲಿ ಚಿದಾಗ್ನಿ. ಆ ಚಿದಾಗ್ನಿಯ ಮಧ್ಯದಲ್ಲಿ ಚಿಜ್ಜಲ. ಆ ಚಿಜ್ಜಲದ ಮಧ್ಯದಲ್ಲಿ ಚಿದ್ಭೂಮಿ. ಆ ಚಿದ್ಭೂಮಿಯ ಮಧ್ಯದಲ್ಲಿ ಹೃದಯ. ಆ ಹೃದಯದ ಮಧ್ಯದಲ್ಲಿ ಆಕಾರ ಉಕಾರ ಮಕಾರ ಪ್ರಣಮಪೀಠ. ಆ ಪ್ರಣವಪೀಠದ ಮಧ್ಯದಲ್ಲಿ ಜಂಗಮ ಆ ಜಂಗಮವ ಮಕುಟದಲ್ಲಿ ಶೂನ್ಯಲಿಂಗ. ಆ ಶೂನ್ಯಲಿಂಗದಲ್ಲಿ ಚಿದಂಬರ, ಆ ಚಿದಂಬರರಲ್ಲಿ ಶಿವಶಕ್ತಿ. ಆ ಶಿವಶಕ್ತಿಯಲ್ಲಿ ಪಂಚಶಕ್ತಿ. ಆ ಪಂಚಶಕ್ತಿಯಲ್ಲಿ ಪಂಚನಾದ. ಆ ಪಂಚನಾದದಲ್ಲಿ ಪಂಚಸಾದಾಖ್ಯ. ಆ ಪಂಚಸಾದಾಖ್ಯದಲ್ಲಿ ಈಶ್ವರ. ಆ ಈಶ್ವರನಲ್ಲಿ ಮಾಹೇಶ್ವರ. ಆ ಮಾಹೇಶ್ವರನಲ್ಲಿ ರುದ್ರ. ಆ ರುದ್ರನಲ್ಲಿ ತ್ರಯವಯ ಹಿರಣ್ಯಗರ್ಭ ವಿರಾಟ್‍ಮೂರ್ತಿ. ಇಂತೀ ಎಂಬತ್ತುಮೂರು ಮೂರ್ತಿಗಳೊಳಗೆ ಎಂಬತ್ತೆರಡೆ ಬಸವಣ್ಣನಂಗವೊಂದೆ ಪ್ರಾಣ. ಆ ಪ್ರಾಣ ಚೈತನ್ಯ ಶೂನ್ಯವೆ ಗೋಳಕ ಗೋಮುಖ ವೃತ್ತಾಕಾರವಾಗಿ ಕರಸ್ಥಲದಲ್ಲಿ ಪಿಡಿದು ಆ ಲಿಂಗದ ಆದಿಪ್ರಣಮವೆ ಪೀಠ, ಆಕಾರವೆ ಕಂಠ, ಉಕಾರವೆ ಗೋಮುಖ, ಮಕಾರವೆ ವರ್ತುಳ, ನಾಳ ಬಿಂದು ಮಹಾತೇಜ. ನಾದವೆ ಅಖಂಡಲಿಂಗ. ಇಂತಪ್ಪ ಬಸವಣ್ಣನ ನಿತ್ಯತ್ವವೆ ಲಿಂಗ; ಪೂರ್ಣತ್ವವೆ ಗುರು. ಚಿತ್ಪ್ರಕಾಶವೆ ಜಂಗಮ. ಆನಂದವೆ ಪ್ರಸಾದ, ಚಿದ್ರಸದ ಪ್ರವಾಹವೆ ಪಾದತೀರ್ಥ. ಇಂತಪ್ಪ ಬಸವಣ್ಣ ಅನಂತಕೋಟಿ ಬ್ರಹ್ಮಾಂಡಗಳ ರೋಮಕೂಪದಲ್ಲಿ ಸಂಕಲ್ಪಿಸಿ ಅಲ್ಲಿದ್ದಾತ್ಮಂಗೆ ಸುಜ್ಞಾನ ಕ್ರೀಯನಿತ್ತು ತದ್ ಭೃತ್ಯ ಕರ್ತೃ ತಾನಾಗಿ ಇಷ್ಟಾರ್ಥಸಿದ್ಧಿಯನೀವುತಿಪ್ಪ ಬಸವಣ್ಣನ ಭೃತ್ಯರ ಭೃತ್ಯರ ತದ್‍ಭೃತ್ಯನಾಗಿರಿಸಿ ಬಸವಣ್ಣನ ಪಡುಗ ಪಾದರಕ್ಷೆಯ ಹಿಡಿವ ಭಾಗ್ಯವಯೆನಗೀವುದಯ್ಯ, ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಬಸವಣ್ಣನ ಅರುಹಿಕೊಟ್ಟ ಸಿದ್ಧೇಶ್ವರನ ಶ್ರೀಪಾದಪದ್ಮದಲ್ಲಿ ಭೃಂಗನಾಗಿರ್ದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
`ಓಂ' ಕಾರವೆ ಬಸವಣ್ಣನ ಶಿರಸ್ಸು, `ನ' ಕಾರವೆ ಬಸವಣ್ಣನ ನಾಸಿಕ, `ಮ' ಕಾರವೆ ಬಸವಣ್ಣನ ಜಿಹ್ವೆ, `ಶಿ' ಕಾರವೆ ಬಸವಣ್ಣನ ನಾಭಿ, `ವ' ಕಾರವೆ ಬಸವಣ್ಣನ ತ್ವಕ್ಕು, `ಯ' ಕಾರವೆ ಬಸವಣ್ಣನ ಶ್ರೋತ್ರ. ಮತ್ತೆ : `ಓಂ' ಕಾರವೆ ಬಸವಣ್ಣನ ವದನ, `ನ' ಕಾರವೆ ಬಸವಣ್ಣನ ಬಲದ ಭುಜ, `ಮ' ಕಾರವೆ ಬಸವಣ್ಣನ ಎಡದ ಭುಜ, `ಶಿ' ಕಾರವೆ ಬಸವಣ್ಣನ ನೇತ್ರ, `ವಾ' ಕಾರವೆ ಬಸವಣ್ಣನ ಬಲದ ಪಾದ, `ಯ` ಕಾರವೆ ಬಸವಣ್ಣನ ಎಡದ ಪಾದ. ಅದೆಂತೆಂದಡೆ : ``ಓಂಕಾರಂ ವದನಂ ದೇವಿ ನಮಃಕಾರಂ ಭುಜದ್ವಯಂ ಶಿಕಾರಂ ದೇಹಮಧ್ಯಸ್ತು ವಾಯಕಾರಂ ಪದದ್ವಯಂ ಇತಿ ಷಡ್ವರ್ಗರೂಪಂ ಚ ಭಕ್ತರೂಪಂ ಮಯೋದಿತಂ ಇಂತೆಂದುದಾಗಿ, ಕೂಡಲಚೆನ್ನಸಂಗಯ್ಯನಲ್ಲಿ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ಇನ್ನಷ್ಟು ... -->