ಅಥವಾ

ಒಟ್ಟು 252 ಕಡೆಗಳಲ್ಲಿ , 43 ವಚನಕಾರರು , 221 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ, ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ, ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರಸ್ತ್ರೀಯರ ಸಂಗವ ಮಾಡಿ, ದುರ್ಗುಣ ದುರಾಚಾರದಲ್ಲಿ ನಡೆದು, ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ. ಇದು ಲಿಂಗದ ನಡೆಯಲ್ಲ, ಲಿಂಗದ ನುಡಿಯಲ್ಲ. ಇದ ನಮ್ಮ ಶಿವಶರಣರು ಮೆಚ್ಚರು. ಲಿಂಗವಂತನ ಪರಿ ಬೇರೆ ಕಾಣಿರೆ. ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಸಂಗವಾಗಿ[ರಲು]ಬಲ್ಲ, ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಕರಣ ನಿರ್ಮುಕ್ತನ ಸರ್ವನಿರ್ವಾಣಿಕಾಯೆಂಬೆನು. ಇಂತಪ್ಪ ಮಹಾಮಹಿಮನ ನಿಲವು ಎಲಗಳೆದ ವೃಕ್ಷದಂತೆ, ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ, ಮತ್ತೆ ಉಳಿದಾದ ಅಜ್ಞಾನ ಸಂದೇಹಿಮಾನವರೆತ್ತ ಬಲ್ಲರಯ್ಯಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ನಿರಾಮಯವೆಂಬ ಭಕ್ತನ ಅಂಗದಲ್ಲಿ ಝೇಂಕಾರವೆಂಬ ಜಂಗಮವು ಜಂಗಿಟ್ಟು ನಡೆಯಲೊಡನೆ ನಿರಂಜನವಾಯಿತ್ತು. ಆ ನಿರಂಜನದೊಡನೆ ನಿರಾಕಾರವಾಯಿತ್ತು. ಆ ನಿರಕಾರದೊಡನೆ ಆಕಾರಲಿಂಗವಾಗಿ, ಮಂತ್ರಘೋಷವ ಘೋಷಿಸುತಿರ್ಪುದು ನೋಡಾ. ಆ ಲಿಂಗದ ಬೆಳಗಿನೊಳಗೆ ನಾದಪ್ರಭೆ, ಬಿಂದುಪ್ರಭೆ, ಕಳಾಪ್ರಭೆ ಇಂತೀ ತ್ರಿವಿಧಪ್ರಭೆಗಳು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು ನೋಡಾ. ನಾದಪ್ರಭೆಯು ಭಕ್ತ-ಮಹೇಶ್ವರ, ಬಿಂದು ಪ್ರಭೆಯು ಪ್ರಸಾದಿ-ಪ್ರಾಣಲಿಂಗಿ, ಕಳಾಪ್ರಭೆಯು ಶರಣ-ಐಕ್ಯ. ಇಂತೀ ಷಡ್ವಿಧಮೂರ್ತಿಗಳಿಗೆ ಷಡ್ವಿಧಲಿಂಗವು. ಅವು ಆವಾವುಯೆಂದೊಡೆ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ ಮಹಾಲಿಂಗ. ಈ ಷಡ್ವಿಧಲಿಂಗಕು ಷಡ್ವಿಧ ಶಕ್ತಿಯರು ಅವು ಆವಾವುಯೆಂದೊಡೆ: ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಫಾಶಕ್ತಿ, ಆದಿಶಕ್ತಿ, ಪರಾಶಕ್ತಿ, ಚಿತ್‍ಶಕ್ತಿ. ಇಂತೀ ಶಕ್ತಿಯರಿಗೂ ಷಡ್ವಿಧಭಕ್ತಿ. ಅವು ಆವಾವುಯೆಂದೊಡೆ: ಸದ್ಭಕ್ತಿ, ನೈಷ್ಠಿಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ, ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೂ ಷಡ್ವಿಧಹಸ್ತ. ಅವು ಆವಾವುಯೆಂದೊಡೆ: ಸುಚಿತ್ತಹಸ್ತ, ಸುಬುದ್ಧಿಹಸ್ತ, ನಿರಹಂಕಾರಹಸ್ತ, ಸುಮನಹಸ್ತ, ಸುಜ್ಞಾನಹಸ್ತ, ನಿರ್ಭಾವಹಸ್ತ, ಈ ಷಡ್ವಿಧಹಸ್ತಗಳಿಗೂ ಷಡ್ವಿಧ ಕಲೆಗಳು. ಅವು ಆವಾವುಯೆಂದೊಡೆ: ನಿವೃತ್ತಿಕಲೆ, ಪ್ರತಿಷ್ಠಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರ ಕಲೆ. ಈ ಷಡ್ವಿಧಕಲೆಗಳಿಗೂ ಷಡ್ವಿಧಪರಂಗಳು. ಅವು ಆವಾವುಯೆಂದೊಡೆ: ಶುದ್ಧಜ್ಞಾನವೇ ಪರ, ಬದ್ಧಜ್ಞಾನವೇ ಪರ, ನಿರ್ಮಲಜ್ಞಾನವೇ ಪರ, ಮನೋಜ್ಞಾನವೇ ಪರ, ಸುಜ್ಞಾನವೇ ಪರ, ಪರಮಜ್ಞಾನವೇ ಪರ. ಈ ಷಡ್ವಿಧಪರಗಳಿಂದತ್ತತ್ತ ಮಹಾಜ್ಞಾನದ ಬೆಳಗು, ಸ್ವಯಜ್ಞಾನದ ತಂಪು, ನಿರಂಜನದ ಸುಖ. ಆ ನಿರಂಜನದ ಸುಖದೊಳಗೆ ಸುಳಿದಾಡುವ ಝೇಂಕಾರವೆಂಬ ಜಂಗಮವ ನಿರಾಮಯವೆಂಬ ಭಕ್ತನೇ ಬಲ್ಲ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ರಿಪುಗಳ ಕಾಳಗ ಕೊಳುಗುಳದನುಭಾವ ಅತಿಶಯದ ಬಾಣ ತಾಗಿದುದಕೆ ಹೋಗಿ ನಿಂದ ಮುಮ್ಮರಿಯಂತೆ ಜಗಕ್ಕೆಲ್ಲಾ ಕನ್ನಡಿಗೆ ನೋಡಾ! ಮಹಾಲಿಂಗ ಗಜೇಶ್ವರನ ಅರಿಯನೆ ಬಲ್ಲ ಕನ್ನಡಿಗೆ ಮರದೊಡಕು.
--------------
ಗಜೇಶ ಮಸಣಯ್ಯ
ಕಂಚಗಾರನ ಕೈಯ ಮೈಣವಿದ್ದಡೆ, ನಾನೆಂತು ಉಪಮಿಸುವೆ ? ಅದರ ಸಂಚವ ಕಂಚಗಾರನೆ ಬಲ್ಲ. ಸಂಚಿತಕರ್ಮ ಪ್ರಾರಬ್ಧವೆಂಬಿವ ಮುಂದಕ್ಕೆ ನಾನೇನ ಬಲ್ಲೆ. ಹಿಂಗಿದ್ದ ದೇಹದ ಸಂಚವನರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕುರುಹಿನ ರೂಹಿನ ಕೈಯಲ್ಲಿ ದರ್ಪಣವಿದ್ದಲ್ಲಿ ಫಲವೇನು ? ಒಂದಕ್ಕೆ ಜೀವವಿಲ್ಲ , ಒಂದಕ್ಕೆ ತೇಜವಿಲ್ಲ . ಕಾರಣವರಿಯದ ನಿಃಕಾರಣ ಮನುಜರ ಕೈಯಲ್ಲಿ ಲಿಂಗವಿದ್ದು ಫಲವೇನು ? ಅಂಗರಹಿತವಾದ ಸಂಗವನರಿಯರು. ಸಂಗರಹಿತವಾದ ಸುಖವನರಿಯರು. ನಿಸ್ಸಂಗಿ ನಿಂದ ನಿಲವ, ಸಕಳೇಶ್ವರದೇವಾ, ನಿಮ್ಮ ಶರಣ ಬಲ್ಲ .
--------------
ಸಕಳೇಶ ಮಾದರಸ
ಕರದ ಮಹಾತ್ಮೆಯನು ಹೊಗಳುವರೆ ಎನ್ನಳವೆ? ಕರುಣಾಕರನೆ ಬಲ್ಲ ಗುರುರಾಯನು. ಹಲವು ಬ್ರಹ್ಮಾಂಡವನು ಒಳಗಿಟ್ಟ ಘನವನು ಧರಿಸಿಪ್ಪುದದು ಭಕ್ತಿಕರವು ನೋಡಾ. ಆ ಶರಣರ ಕರವನು ಹೊಗಳುವವು ವೇದಂಗಳಯ್ಯ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಶಿಷ್ಯನ ಪೂರ್ವಾಶ್ರಯವ ಕಳೆವುದು ಗುರುವಿಗೆ ಸಹಜ. ಶಿಷ್ಯನು ತನ್ನ ಪೂರ್ವಾಶ್ರಯವ ಕಳೆದು ಶ್ರೀಗುರುಲಿಂಗವ ಮುಟ್ಟುವ ಪರಿ ಎಂತೋ ? ಅರ್ಪಿತ ಹೋಗಿ, ಪ್ರಸಾದವನರಸುವುದೊ ? ಕೂಡಲಚೆನ್ನಸಂಗಯ್ಯನಲ್ಲಿ, ಮಹಾಪ್ರಸಾದಿಯೆ ಬಲ್ಲ.
--------------
ಚನ್ನಬಸವಣ್ಣ
ಶರಣರಿಗೆ ಭವವುಂಟೆಂದು ಮತ್ರ್ಯದಲ್ಲಿ ಹುಟ್ಟಿದ ಭವಭಾರಿಗಳು ನುಡಿದಾಡುವರು. ತಮ್ಮ ಹುಟ್ಟ ತಾವರಿಯರು, ತಾವು ಮುಂದೆ ಹೊಂದುವದನರಿಯರು. ಇವರು ಬಂದ ಬಂದ ಭವಕ್ಕೆ ಕಡೆಮೊದಲಿಲ್ಲ . ಇಂತಪ್ಪ ಸಂದೇಹಿಗಳು ನಮ್ಮ ಶರಣರ ಹುಟ್ಟ ಬಲ್ಲೆನೆನಬಹುದೆ ? ತನ್ನ ನರಿದವನಲ್ಲದೆ ಇದಿರನರಿಯರು. ಈ ಉದರಪೋಷಕರೆಲ್ಲರೂ ಇದ ಬಲ್ಲೆನೆಂಬುದು ಹುಸಿ. ಇದ ಬಲ್ಲವರು ಬಲ್ಲರಲ್ಲದೆ, ಸೊಲ್ಲಿಗಭೇದ್ಯನ ನಾನೆತ್ತ ಬಲ್ಲೆ ? ಎನ್ನ ಗುರು ಚೆನ್ನಮಲ್ಲೇಶ್ವರನೇ ಬಲ್ಲ . ಇನ್ನು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ .
--------------
ಹಡಪದ ಅಪ್ಪಣ್ಣ
ನೇಹದ ಸುಖವ ನೋಟ ನುಂಗಿತ್ತು, ನೋಟದ ಸುಖವ ಕೂಟ ನುಂಗಿತ್ತು, ಕೂಟದ ಸುಖವ ಆಲಿಂಗನ ನುಂಗಿತ್ತು, ಆಲಿಂಗದ ಸುಖವ ಸಂಗ ನುಂಗಿತ್ತು, ಸಂಗದ ಸುಖವ ಪರವಶ ನುಂಗಿತ್ತು, ಪರವಶದ ಸುಖವ ಕೂಡಲಸಂಗಯ್ಯ ತಾನೆ ಬಲ್ಲ.
--------------
ಬಸವಣ್ಣ
ಕರುಣಜಲ ವಿನಯಜಲ ಸಮತಾಜಲ : ಕರುಣಜಲವೆ ಗುರುಪಾದೋದಕ: ವಿನಯಜಲವೆ ಲಿಂಗಪಾದೋದಕ; ಸಮತಾಜಲವೆ ಜಂಗಮಪಾದೋದಕ. ಗುರುಪಾದೋದಕದಿಂದ ಸಂಚಿತಕರ್ಮನಾಸ್ತಿ. ಲಿಂಗಪಾದೋದಕದಿಂದ ಪ್ರಾರಬ್ಧಕರ್ಮನಾಸ್ತಿ. ಜಂಗಮಪಾದೋದಕದಿಂದ ಆಗಾಮಿಕರ್ಮನಾಸ್ತಿ. ಇಂತೀ ತ್ರಿವಿಧೋದಕದಲ್ಲಿ ತ್ರಿವಿಧಕರ್ಮನಾಸ್ತಿ. ಇದು ಕಾರಣ- ಕೂಡಲಚೆನ್ನಸಂಗಮದೇವಾ ತ್ರಿವಿಧೋದಕವ ನಿಮ್ಮ ಶರಣನೆ ಬಲ್ಲ.
--------------
ಚನ್ನಬಸವಣ್ಣ
ಭೂತಿಕನ ಸೀರೆಯ ಸಾತ್ವಿಕ ನೆರೆ ಉಟ್ಟಡೆ ಭೂತಿಕ ಸಾತ್ವಿಕನಾದ, ಸಾತ್ವಿಕ ಭೂತಿಕನಾದ; ಈ ಮಾತು ಬಿದ್ದುದು ನೋಡಾ, ರಾಜಬೀದಿಯಲ್ಲಿ. ಅಯ್ಯಾ, ಭೂತ ಕೆಣಕಿದಡಿಲ್ಲ, ಮಾತ ಮುಚ್ಚಿದಡಿಲ್ಲ ಓತು ಕೂಡುವ ಅನುವ, ಕೂಡಲಸಂಗಮದೇವ ತಾನೆ ಬಲ್ಲ.
--------------
ಬಸವಣ್ಣ
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂದು ಶಿವಲಿಂಗದ ಮೇಲೆ ಪಂಚವಕ್ತ್ರವ ಸ್ಥಾಪಿಸುವ ಅನಾಚಾರಿಯ ಮಾತ ಕೇಳಲಾಗದು. ಇಂತಪ್ಪ ಲಿಂಗದ್ರೋಹಿಯ ತೋರದಿರಯ್ಯಾ, ಸಕಲ ನಿಃಕಲದಂತಹನೆ ಲಿಂಗವು ? ಕೂಡಲಚೆನ್ನಸಂಗಯ್ಯನಲ್ಲಿ ಸರ್ವಾಂಗಲಿಂಗಿ ಬಸವಣ್ಣ ಬಲ್ಲ.
--------------
ಚನ್ನಬಸವಣ್ಣ
ಉನ್ಮನಿಜ್ಞಾನದ ಗಮನ (ದ ಭಾವವು) ಲೌಕಿಕದ ನಿಷ್ಠೆಯ ದೃಷ್ಟಿ. ಶಾಂಭವಜ್ಞಾನದ (ಗಮನದ) ಭಾವವು ಪ್ರಾಣದ ಪರಿಣಾಮದ ನಿಲವು. ಸುಜ್ಞಾನದ ಗಮನದ ಭಾವವು ಉಪದೇಶ ಪ್ರಸೂತದ ಭಾವಭೇದ. ಈ ತ್ರಿವಿಧ ಚರಿತ್ರ, ಸಂಭಾಷಣೆಯ ಕೂಡಲಚೆನ್ನಸಂಗಾ. ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಅಯ್ಯಾ ನಾನು ದಿಟ್ಟಿಸಿ ನೋಡಿ ನಿಂದು ಬಟ್ಟಬಯಲ ಕಂಡೆ. ಬಟ್ಟಬಯಲೊಳಗೊಂದು [ಮುಟ್ಟಬಾರದ] ಮೃಗವ ಕಂಡೆ. ಆ ಮೃಗ ಹೋದ ಹೆಜ್ಜೆಯ ಕಾಣಬಾರದು, ಮೇದ ಮೋಟನರಿಯಬಾರದು. ಈ ಭೇದವ ನೋಡಿ ಸಾದ್ಥಿಸಿಕೊಂಡು ಬರುವನ್ನಕ್ಕ ಆ ಮೃಗವೆನ್ನ ಬಲೆಗೊಳಗಾಯಿತ್ತು. ಆ ಬಲೆಯೊಳಗಣ ಮೃಗದ ತಲೆಯ ಹಿಡಿದು, ನೆಲೆಗೆಟ್ಟು ಹೋದೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಇದರನುವ ಬಲ್ಲ ಶರಣರೆಲ್ಲರೂ ತಲೆಹೊಲನ ಹತ್ತಿ ಬಯಲಾದರು. ಇದಕ್ಕೆ ನೀವೇ ಸಾಕ್ಷಿ.
--------------
ಹಡಪದ ಅಪ್ಪಣ್ಣ
ಹಾಹಾ ! ವೇದವೆ ತತ್ವವಾದಡೆ, ಮಾದಾರನ ಮನೆಯಲುಂಡನೊಬ್ಬ. ನಿಧಾನವುಳ್ಳ ಉಪಾಧ್ಯಾಯರಾರೂ ಇಲ್ಲದಾದಡೆ, ಶಾಸ್ತ್ರವೆ ತತ್ವವಾದಡೆ ಶಿವರಾತ್ರಿಯನೊಬ್ಬ ಬೇಡಂಗಿತ್ತುದನೊಬ್ಬ ಶ್ರೋತ್ರಿಯಂಗೀಯಲಾಗದೆ ? ಆಗಮವಿದ್ಥಿಯಲ್ಲಿ ಮಂತ್ರ ಮೂರುತಿಯೆಂಬ ಮಾತಂತಿರಲಿ. ಆದ ಕೇಳಲಾಗದು ಭ್ರಾಂತು ಬೇಡ. ಭಾವಮೂರುತಿ ಬಲ್ಲ ಪ್ರಮಾಣವಿದೆ. ಆ ಕುಲವೆಂದಡೆ ಹೊಕ್ಕ ಕಕ್ಕಯ್ಯಗಳ ಮನೆಯ. ಅಕ್ಕಟಾ, ನಿಮ್ಮ ತರ್ಕ ಮುಕ್ಕಾಯಿತ್ತು, ಲೋಕವರಿಯದೆ ? ಕಲ್ಲಲಿಟ್ಟು ಕಾಲಲೊದೆದಡೆ, ಅಲ್ಲಿ ಮೂರುತಿ ನುಡಿಯಿತ್ತಲ್ಲಯ್ಯಾ. ಬಲ್ವದನು ದ್ವಿಜರು ನೀವೆಲ್ಲರೂ ಹೇಳಿರೆ, ಸಲ್ಲದು, ನಿಮ್ಮ ವಾದ ನಿಲ್ಲಲಿ, ಬಲ್ಲಿದ ನಡೆದುದೇ ಬಟ್ಟೆ. ಮಹಾಲಿಂಗ ಕಲ್ಲೇಶ್ವರಾ, ಲಿಂಗಾಚಾರಿಗಳು ನಿಸ್ಸೀಮರಯ್ಯಾ.
--------------
ಹಾವಿನಹಾಳ ಕಲ್ಲಯ್ಯ
ಇನ್ನಷ್ಟು ... -->