ಅಥವಾ

ಒಟ್ಟು 68 ಕಡೆಗಳಲ್ಲಿ , 15 ವಚನಕಾರರು , 39 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರುಜನ್ಮದವರೆಂಬರು ಬಸವಣ್ಣನ. ಈ ಗಾರುಮಾತ ಕೇಳಲಾಗದು. ಆರುಸ್ಥಲ ಆರುಪಥವ ತೋರಲು, ಪರಶಿವ ತಾ ಮೂರುಮೂರ್ತಿಯಾದ. ಆರಾರುತತ್ವಂಗಳ ಮೇಲಣಾತ ಆ ಬಸವಣ್ಣನೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಆದಿ ಅನಾದಿಯೆಂಬವು ನಾದಕ್ಕೆ ಬಾರದ ಮುನ್ನ, ಶೂನ್ಯ ನಿಃಶ್ಶೂನ್ಯ ಸುರಾಳವೆಂಬವು ಸುಳುಹುದೋರದ ಮುನ್ನ, ಬೆಳಗು ಕತ್ತಲೆಯಿಲ್ಲದ ಮುನ್ನ, ಅಳಿವು ಉಳಿವು ಸುಳುವು ಸೂತ್ರ ಜಂತ್ರ ಜಡ ಅಜಡವಿಲ್ಲದ ಮುನ್ನ, ಕಡೆ ನಡು ಮೊದಲಿಲ್ಲದ ಅಡಿಯಲಾಧಾರ ಹಿಡಿವರೆ ರೂಹಿಲ್ಲದ ಮುನ್ನ, ಒಡೆಯನಿಲ್ಲ ಬಂಟನಿಲ್ಲ ನಡೆಯಿಲ್ಲ ನುಡಿಯಿಲ್ಲ ಬೆಡಗಿಲ್ಲ ಒಡಲಿಲ್ಲದ ಮುನ್ನ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯರು ತಲೆದೋರದ ಮುನ್ನ, ದೇವನಿಲ್ಲ ಭಕ್ತನಿಲ್ಲದ ಮುನ್ನ, ನೀನು ನಾನುಯಿಲ್ಲದ ಮುನ್ನ, ಆಕಾರ ನಿರಾಕಾರವೇನೂಯಿಲ್ಲದ ಮುನ್ನ, ತಾನು ತಾನೆಂಬ ತಲ್ಲಣವಿಲ್ಲದಂದು, ಆ ಬಟ್ಟಬಯಲ ಬ್ರಹ್ಮವೆ ಘಟ್ಟಿಯಾದ ಘನವೆಂತೆಂದಡೆ: ನಿಮ್ಮನುವ ನೀವರಿದ ಘನಮಹಿಮರು ತಿಳಿದು ನೋಡಿರಣ್ಣ. ಆ ಬಟ್ಟಬಯಲೆಂದಡಾರು ಬಸವ, ಆ ಬಸವನೆಂದಡಾರು ಬಟ್ಟಬಯಲು. ಆ ಬ್ರಹ್ಮನೆಂದಡಾರು ಬಸವ, ಬಸವನೆಂದಡಾರು ಬ್ರಹ್ಮ. ಅಂತಪ್ಪ ಬಸವನ ಆ ಮೂಲವ ಬಲ್ಲವರು ನೀವು ಕೇಳಿರಣ್ಣ. ಬಸವ ಎಂಬ ಮೂರಕ್ಷರವೆ ಮೂಲಪ್ರಣವ. ಅದೆಂತೆಂದಡೆ:ಬಯೆಂಬುದೆ ಚಿನ್ನಾದ ಆಕಾರವಾಯಿತ್ತು, ಸಯೆಂಬುದೆ ಚಿದ್ಬಿಂದುವಾಯಿತ್ತು, ಮತ್ತಂ ಬಯೆಂಬುದೆ ಅಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾ ಯೆಂಬುದೆ ಚಿತ್ಕಳೆಯಾಯಿತ್ತು. ಮತ್ತಂ ಬಯೆಂಬುದೆ ಆಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾಯೆಂಬುದೆ ಮಕರವಾಯಿತ್ತು. ಮತ್ತೆ ಬಯೆಂಬುದೆ ನಾದವಾಯಿತ್ತು, ಸಯೆಂಬುದೆ ಬಿಂದುವಾಯಿತ್ತು, ವಾಯೆಂಬುದೆ ಕಳೆಯಾಯಿತ್ತು. ಮತ್ತೆ ಬ ಎಂಬುದೆ ಗುರುವಾಯಿತ್ತು, ಸಯೆಂಬುದೆ ಅಂಗವಾಯಿತ್ತು, ವಾ ಎಂಬುದೆ ಜಂಗಮವಾಯಿತ್ತು. ಬ ಎಂಬ ನಾದವೆತ್ತಲು, ಸ ಎಂಬ ಬಿಂದು ಕೂಡಲು, ವಾಯೆಂಬ ಕಳೆ ಬೆರೆಯಲು, ಗೋಳಕಾಕಾರವಾಗಿ ಆದಿಪ್ರಣಮವೆನಿಸಿತ್ತು. ಆದಿಪ್ರಣಮ, ಅನಾದಿಪ್ರಣಮ, ಅಂತ್ಯಪ್ರಣಮವೆಂಬವು ನಮ್ಮ ಬಸವಣ್ಣನ ಸ್ಥೂಲ ಸೂಕ್ಷ್ಮ ಕಾರಣ ಕಾಣಿರೆ. ಇಂತಪ್ಪ ಬಸವಣ್ಣ ಬಯಲಬ್ರಹ್ಮವನೆ ಮೆಯಿದು, ಮೆಲುಕಿರಿದು ಗೋಮಯವಿಕ್ಕಲು ಪೃಥ್ವಿಯಾಯಿತ್ತು. ಇಂತಪ್ಪ ಬಸವಣ್ಣ ಜಲವ ಬಿಡಲು ಅಪ್ಪುಮಯವಾಯಿತ್ತು. ಇಂತಪ್ಪ ಬಸವಣ್ಣನ ತೇಜವೆ ಅಗ್ನಿಯಾಯಿತ್ತು. ಇಂತಪ್ಪ ಬಸವಣ್ಣನ ಉಚ್ಛ್ವಾಸ ನಿಶ್ವಾಸವೆ ವಾಯುವಾಯಿತ್ತು. ಇಂತಪ್ಪ ಬಸವಣ್ಣನ ಶಬ್ದವೆ ಆಕಾಶವಾಯಿತ್ತು. ಇಂತಪ್ಪ ಬಸವಣ್ಣನ ಕಂಗಳ ಬೆಳಗೆ ಚಂದ್ರ ಸೂರ್ಯರಾದರು. ಇಂತಪ್ಪ ಬಸವಣ್ಣನ ಬುದ್ಧಿಯೆ ಆತ್ಮವೆನಿಸಿ, ಅಷ್ಟತನುಮೂರ್ತಿಯೆ ತನುವೆನಿಸಿ, ಪಿಂಡ ಬ್ರಹ್ಮಾಂಡ ಕೋಟ್ಯಾನುಕೋಟಿ ಅಂಡಪಿಂಡಾಂಡಂಗಳಿಗೆ ಒಡಲಾಗಿ, ಅಡಿಮುಡಿಗೆ ತಾನೆ ಆದಿಯಾಗಿ, ಸರ್ವವೂ ನಮ್ಮ ಬಸವಣ್ಣನ ಒಡಲಲ್ಲಿ ಹುಟ್ಟುತ್ತ ಬೆಳೆಯುತ್ತ ಅಳಿವುತಿಪ್ಪವು ಕಾಣಿರೆ. ಇಂತಪ್ಪ ಸಕಲಪ್ರಾಣಿಗಳಿಗೆ ನಮ್ಮ ಬಸವಣ್ಣನ ಗೋಮಯದಲ್ಲಿ ಹುಟ್ಟಿದ ಪೃಥ್ವಿಯೆ ಪದಾರ್ಥವೆ ಆದಿಜಲದಿಂದ ಹುಟ್ಟಿದ ಉದಕವೆ ಸಾರ. ತೇಜದಿಂದ ಹುಟ್ಟಿದ ಅಗ್ನಿಯೆ ಕಳೆ. ಉಚ್ಛ್ವಾಸ ನಿಶ್ವಾಸದಿಂದ ಹುಟ್ಟಿದ ಚಂದ್ರಸೂರ್ಯರೇ ಅರಿವು ಮರವೆ. ಬುದ್ಧಿಯಿಂದ ಹುಟ್ಟಿದ ಆತ್ಮನೆ ಚೈತನ್ಯಾತ್ಮ. ಇಂತೀ ಸರ್ವಪ್ರಾಣಿಗಳಿಗೆ ನಮ್ಮ ಬಸವಣ್ಣನೆ ಆದಿ ಕಾಣಿರೇ. ಆದಿಯಲ್ಲಿ ಹುಟ್ಟಿ, ಮಧ್ಯದಲ್ಲಿ ಬೆಳೆದು, ಅಂತ್ಯದಲ್ಲಿ ಲಯವನೆಯ್ದಿದರೆ, ಮತ್ತೆ ನಿಲ್ಲುವದಕ್ಕೆ ನಮ್ಮ ಬಸವಣ್ಣನೆ ಆದಿ ಕಾಣಿರೆ. ಇಂತೀ ಒಳ ಹೊರಗೆ ಕೈಕೊಂಬರೆ, ದೇವರು ಬೇರೊಬ್ಬರುಂಟಾದರೆ ಬಲ್ಲರೆ ನೀವು ಹೇಳಿ ತೋರಿರೆ. ಅಲ್ಲದಿರ್ದರೆ ನಿಮ್ಮ ವೇದಾಗಮಶಾಸ್ತ್ರಪುರಾಣಗಳ ಕೈಯಲ್ಲಿ ಹೇಳಿಸಿರೆ. ಇಂತೀ ಅನಾದಿಸಂಸಿದ್ಧ ಬಟ್ಟಬಯಲಬ್ರಹ್ಮವೆ ಬಸವನೆಂಬುದಂ ಕಾಣುತಿರ್ದು ಕೇಳುತಿರ್ದು ಹೇಳುತಿರ್ದು ಅರಿದಿರ್ದು, ಮತ್ತೆ ಕೀಳುದೈವಂಗಳನಾರಾಧಿಸಿ ಅರ್ಚನೆ ಪೂಜೆಯ ಹಲವು ಚಂದದಲ್ಲಿ ಮಾಡಿ, ಹಲವು ಜಾತಿ ಹಲವುದರುಶನವೆನಿಸಿಕೊಂಡುಸ ಹೊಲಬುದಪ್ಪಿದಿರಿ, ಹುಲುಮನುಜರಿರಾ. ಇನ್ನಾದರೂ ಅರಿದು ನೆನದು ಬದುಕಿ, ನಮ್ಮ ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವನ ಶ್ರೀಪಾದಪದ್ಮವ.
--------------
ಸಂಗಮೇಶ್ವರದ ಅಪ್ಪಣ್ಣ
ಕಾಮಿಯಾಗಿ ನಿಃಕಾಮಿಯಾದಳು. ಸೀಮೆಯಲ್ಲಿರ್ದು ನಿಸ್ಸೀಮೆಯಾದಳು. ಭವಿಯ ಸಂಗವ ತೊರೆದು ಭವಬಾಧೆಯ ಹರಿದಳು. ಬಸವಣ್ಣನೆ ಗತಿಯೆಂದು ಬರಲು, ನಾನು ಮಡಿಯ ಹಾಸಿ ನಡೆಸಿದೆ. ನಡೆವುದಕ್ಕೆ ಹಾಸಿದ ಮಡಿಯ ಸರ್ವಾಂಗಕ್ಕೆ ಹೊಯ್ದಳು. ಆ ಮಡಿಯ ಬೆಳಗಿನೊಳಗೆ ನಿರ್ವಯಲಾದಳು. ಕಲಿದೇವರದೇವಾ, ಮಹಾದೇನಿಯಕ್ಕಗಳ ನಿಲವ ಬಸವಣ್ಣನಿಂದ ಕಂಡು ಬದುಕಿದೆನಯ್ಯಾ ಪ್ರಭುವೆ.
--------------
ಮಡಿವಾಳ ಮಾಚಿದೇವ
ಎನ್ನ ಮೂವತ್ತಕ್ಷರಸ್ವರೂಪವನೊಳಕೊಂಡು ಆಚಾರಲಿಂಗವಾಗಿ ಎನ್ನ ಭಕ್ತಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಇಪ್ಪತ್ತೆ ೈದುಕ್ಷರಸ್ವರೂಪವನೊಳಕೊಂಡು ಗುರುಲಿಂಗ ಸ್ವರೂಪಾಗಿ ಎನ್ನ ಮಾಹೇಶ್ವರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಇಪ್ಪತ್ತಕ್ಷರಸ್ವರೂಪವನೊಳಕೊಂಡು ಶಿವಲಿಂಗ ಸ್ವರೂಪಾಗಿ ಎನ್ನ ಪ್ರಸಾದಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಹದಿನೈದಕ್ಷರಸ್ವರೂಪವನೊಳಕೊಂಡು ಜಂಗಮಲಿಂಗ ಸ್ವರೂಪಾಗಿ ಎನ್ನ ಪ್ರಾಣಲಿಂಗಿಸ್ಥಳದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ದಶಾಕ್ಷರಸ್ವರೂಪವನೊಳಕೊಂಡು ಪ್ರಸಾದಲಿಂಗ ಸ್ವರೂಪಾಗಿ ಎನ್ನ ಶರಣಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಏಕಾಕ್ಷರಸ್ವರೂಪವನೊಳಕೊಂಡು ಮಹಾಲಿಂಗ ಸ್ವರೂಪಾಗಿ ಎನ್ನ ಐಕ್ಯಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಇಂತೀ ನಾನಾವಿಧ ಪ್ರಕಾರವನೊಳಕೊಂಡ ಬಸವಣ್ಣನೆ ಇಷ್ಟಬ್ರಹ್ಮವೆನಗೆ. ಈ ಇಷ್ಟಬ್ರಹ್ಮವೆ ಎನ್ನ ಭಾವ ಮನ ದೃಕ್ಕಿನಲ್ಲಿ ತೊಳಗಿ ಬೆಳಗುತ್ತಿರ್ದೆ ಭೇದವನು ಸಿದ್ಧೇಶ್ವರನು ಅರುಹಿ ಕೊಟ್ಟ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಸಿದ್ಧೇಶ್ವರನ ಕೃಪೆ ಎನಗೆ ಸಾಧ್ಯವಾಯಿತ್ತಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ದೇವಲೋಕದವರಿಗೂ ಬಸವಣ್ಣನೆ ದೇವರು. ಮರ್ತ್ಯಲೋಕದವರಿಗೂ ಬಸವಣ್ಣನೆ ದೇವರು. ನಾಗಲೋಕದವರಿಗೂ ಬಸವಣ್ಣನೆ ದೇವರು. ಮೇರುಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆದೇವರು.
--------------
ಅಕ್ಕಮಹಾದೇವಿ
ಪ್ರಸಾದಿಗಳು ಪ್ರಸಾದಿಗಳು ಎಂದೆಂಬಿರಿ ಅಂದು ಇಂದು ಎಂದೂ, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಆದಿ ಅನಾದಿ ಇಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ವೇದಶಾಸ್ತ್ರಂಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಅಜಾಂಡ ಬ್ರಹ್ಮಾಂಡಕೋಟಿಗಳುದಯವಾಗದಂದು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ತ್ರೈಮೂರ್ತಿಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಉಮೆಯ ಕಲ್ಯಾಣವಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಗಂಗೆವಾಳುಕರಿಲ್ಲದಂದು, ಚೆನ್ನಬಸವಣ್ಣನೊಬ್ಬನೇ ಪ್ರಸಾದಿ. ಲಿಂಗವೆಂಬ ನಾಮ ಜಂಗಮವೆಂಬ ಹೆಸರಿಲ್ಲದಂದು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಗುಹೇಶ್ವರಾ ನೀನೆ ಲಿಂಗ, ಬಸವಣ್ಣನೆ ಗುರು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಮತ್ತಾರನು ಕಾಣೆನಯ್ಯಾ.
--------------
ಅಲ್ಲಮಪ್ರಭುದೇವರು
ಬಸವಣ್ಣನೆ ಗುರುಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಚೆನ್ನಬಸವಣ್ಣನೆ ಲಿಂಗಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಸಿದ್ಧರಾಮಯ್ಯನೆ ಜಂಗಮಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಮರುಳಶಂಕರದೇವರೆ ಪ್ರಸಾದಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದರಯ್ಯಾ. ಪ್ರಭುದೇವರೆ ಜ್ಞಾನಮೂರ್ತಿಯಾಗಿ ಎನ್ನ ಹೃದಯಸ್ಥಲಕ್ಕೆ ಬಂದರಯ್ಯಾ. ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳು, ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು, ಸರ್ವತೋಮುಖವಾಗಿ. ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ, ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ. ಹರಹರಾ, ಶಿವಶಿವಾ ಮಹಾದೇವಾ ಮಹಾದೇವಾ, ತ್ರಿಕಾಲದಲ್ಲಿಯೂ ನಿಮ್ಮ ಶರಣರ ಶ್ರೀಪಾದವ ನೆನೆವುತಿರ್ದೆನಯ್ಯಾ, ವೀರಬಂಕೇಶ್ವರಾ.
--------------
ಸುಂಕದ ಬಂಕಣ್ಣ
ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು. ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು. ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುವೆ ಬೋನ, ಶಿಷ್ಯನೆ ಮೇಲೋಗರ. ಲಿಂಗಕ್ಕೆ ಪದಾರ್ಥವರ್ಪಿತವಯ್ಯಾ ! ಘನಕ್ಕೆ ಮನವೆ ಅರ್ಪಿತ, ಮನಕ್ಕೆ ಮಹವೆ ಅರ್ಪಿತ ! ಘನದೊಳಗೆ ಮನವು ತಲ್ಲೀಯವಾದ ಬಳಿಕ ಅರ್ಪಿಸುವ ಭಕ್ತನಾರು ? ಆರೋಗಿಸುವ ದೇವನಾರು ? ನಿತ್ಯತೃಪ್ತ ಉಣಕಲಿತನೆಂದಡೆ ಅರ್ಪಿಸಲುಂಟೆ ದೇವಾ ಮತ್ತೊಂದನು ? ಕೂಡಲಚೆನ್ನಸಂಗಮದೇವಾ, ಬಸವಣ್ಣನೆ ಬೋನ, ನಾನೆ ಪದಾರ್ಥ; ಸುಚಿತ್ತದಿಂದ ಆರೋಗಿಸಯ್ಯಾ ಪ್ರಭುವೆ
--------------
ಚನ್ನಬಸವಣ್ಣ
ಎಲೆ ಸಿದ್ಧರಾಮಯ್ಯಾ, ಬಸವಣ್ಣನೆ ಶಿವನು, ಶಿವನೆ ಬಸವಣ್ಣನಾದನಯ್ಯಾ. ಬಸವಣ್ಣ ಚನ್ನಬಸವಣ್ಣ ಪ್ರಭುದೇವರು ಮಡಿವಾಳಯ್ಯ ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳ ಶ್ರೀಪಾದಕ್ಕೆ ಅಹೋರಾತ್ರಿಯಲ್ಲಿ ನಮೋ ನಮೋ ಎನುತಿರ್ದೆನಯ್ಯಾ, ಬಸವಣ್ಣಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಕೇಳು ಕೇಳಾ, ಎಲೆ ಅಯ್ಯಾ, ಆದಿ ಅನಾದಿ ಇಲ್ಲದಂದು ಬಸವಣ್ಣನೆ ಭಕ್ತ; ನಾದ ಬಿಂದು ಕಳೆಗಳಿಲ್ಲದಂದು ನೀನೆ ಜಂಗಮ. ಶಿವ-ಶಕ್ತಿಗಳುದಯವಾಗದ ಮುನ್ನ ಬಸವಣ್ಣನೆ ಭಕ್ತ. ಸುರಾಳ-ನಿರಾಳವೆಂಬ ಶಬ್ದ ಹುಟ್ಟದ ಮುನ್ನ ನೀನೆ ಜಂಗಮ. ಈ ಉಭಯ ಭಾವದಲ್ಲಿ ಭೇದವುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ? ಬಸವಣ್ಣನಾರೆಂಬುದ ನಿಮ್ಮ ನೀವೆ ತಿಳಿದು ನೋಡಿ ಕೃಪೆಮಾಡಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಭಂಡಾರಿ ಬಸವಣ್ಣನೆ. ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ನಂಬಿಯಣ್ಣನೆ. ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಜಗದೇವನೆ. ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಚೆನ್ನಬಸವಣ್ಣನೆ. ಆನೆ ಮುರಿದಲ್ಲಿ ಸುಂಡಾಳವೆ ಹೇಳಾ? ನಾನಿಲ್ಲದಿರ್ದಡೆ ನೀನಿಲ್ಲ, ನೀನಿಲ್ಲದಿರ್ದಡೆ ನಾನಿಲ್ಲ. ನಾನು ನೀನೆಂಬುದಂತಿರಲಿ. ಹಿಡಿಯೊ, ಮುಡಿಯೊ ಮಾಡಿದಂತೆಯಪ್ಪೆನು. ನಗುವುದು ಕೆಲಕಡೆ ನೋಡಾ. ಸಾತ್ವಿಕ ಸಜ್ಜನ ಸದ್ಗುರುವಿನಿಂದ ಬದುಕಿದೆ ನಾನು, ನಿನಗಂಜೆ ಮಹಾಲಿಂಗ ಚೆನ್ನರಾಮಾ.
--------------
ಮೈದುನ ರಾಮಯ್ಯ
ಶರಣು ಶರಣಾರ್ಥಿ ಮಹಾದೇವಾ, ಶರಣು ಶರಣಾರ್ಥಿ ಪರಬ್ರಹ್ಮಸ್ವರೂಪಾ, ಶರಣು ಶರಣಾರ್ಥಿ ನಿರಾಕಾರತತ್ವವೆ, ನೀವೆ ಗತಿ ನಿಮ್ಮ ಚರಣಕ್ಕೆ ಶರಣಯ್ಯಾ ಪ್ರಭುವೆ. ಸತಿಪತಿಯ ಒಲುಮೆಯ ಮುನಿಸು, ಅತಿಬೇಟವೆಂಬುದು ತಪ್ಪದು ನೋಡಾ. ನಿಮ್ಮ ಶರಣ ಬಸವಣ್ಣನೊಡತಣ ಮುನಿಸು ಎನ್ನ ಮನಕ್ಕೆ ಸಂಶಯ ತೋರದು ನೋಡಾ. ಸಂತೆಯ ನೆರವಿಯಲ್ಲಿ ಅಭಿಮಾನದ ಮಾತ ಮಾರಬಹುದೆ ? ಬೀದಿಯಲ್ಲಿ ನಿಂದು ನುಡಿವ ಅನುಭಾವದ ರಚ್ಚೆ ನಗೆಗೆಡೆ ನೋಡಯ್ಯಾ. ಸಂಗನಬಸವಣ್ಣನೊಳಗೆ ನಿಮ್ಮೊಳಗೆ ಭೇದವಿಲ್ಲೆಂಬುದ ನೀವೆ ಅರಿದರಿದು; ಮತ್ತೆ ಬಾರೆವೆಂಬುದುಚಿತವೆ ? ಕೂಡಲಚೆನ್ನಸಂಗನ ಶರಣ ಬಸವಣ್ಣನೆ ನಿಮ್ಮ ಪ್ರಾಣವಾಗಿರಲು ಇನ್ನಾರೊಡನೆ ಮುನಿವಿರಿ? ಕೃಪೆ ಮಾಡಾ ಪ್ರಭುವೆ.
--------------
ಚನ್ನಬಸವಣ್ಣ
ಆಚಾರಭಕ್ತ ಹನ್ನೆರಡು ಪ್ರಕಾರವನೊಳಕೊಂಡು ಆಚಾರಲಿಂಗವಾಗಿ ಲಿಂಗದ ಪೀಠದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಗೌರವಮಾಹೇಶ್ವರ ಹನ್ನೆರಡು ಪ್ರಕಾರವನೊಳಕೊಂಡು ಗುರುಲಿಂಗವಾಗಿ ಲಿಂಗದ ಮಧ್ಯದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಲೈಂಗಿಪ್ರಸಾದಿ ಹನ್ನೆರಡು ಪ್ರಕಾರವನೊಳಕೊಂಡು ಶಿವಲಿಂಗವಾಗಿ ಲಿಂಗದ ವರ್ತುಳದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಚರಪ್ರಾಣಲಿಂಗಿ ಹನ್ನೆರಡು ಪ್ರಕಾರವನೊಳಕೊಂಡು ಜಂಗಮಲಿಂಗವಾಗಿ ಲಿಂಗದ ಗೋಮುಖದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಪ್ರಸಾದಶರಣ ಹನ್ನೆರಡು ಪ್ರಕಾರವನೊಳಕೊಂಡು ಮಹಾಲಿಂಗವಾಗಿ ಲಿಂಗದ ಗೋಳಕದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಇಂತಪ್ಪ ಬಸವಣ್ಣನೆ ಸಚ್ಚಿದಾನಂದ ಬ್ರಹ್ಮವು. ಆ ಸಚ್ಚಿದಾನಂದ ಬ್ರಹ್ಮವೆ ತನ್ನ ಲೀಲೆದೋರಿ ಒಂದು ಎರಡು ಮೂರು ಆರು ಒಂಬತ್ತು ಹದಿನೆಂಟು ಮೂವತ್ತಾರು ನೂರೊಂದು ನೂರೆಂಟು ಇನ್ನೂರಹದಿನಾರು ಮಿಗೆ ಮಿಗೆ ತೋರುವ ಬ್ರಹ್ಮವೆ ಬಸವಣ್ಣನು. ಈ ಬಸವಣ್ಣನೆ ಎನಗೆ ಇಷ್ಟಬ್ರಹ್ಮ. ಈ ಇಷ್ಟಬ್ರಹ್ಮದಲ್ಲಿ ಷೋಡಶ ದ್ವಿಶತ ಅಷ್ಟಾಶತ ಏಕಶತ ಛತ್ತೀಸ ಅಷ್ಟಾದಶ ನವ ಇಂತಿವೆಲ್ಲವು ಆರರೊಳಗಡಗಿ ಆರು ಮೂರರೊಳಗಡಗಿ ಆ ಮೂರು ಲಿಂಗದ ಗೋಳಕ ಗೋಮುಖ ವೃತ್ತಾಕಾರದಲ್ಲಿ ಅಡಗಿದ ಭೇದವನು ಸಿದ್ಧೇಶ್ವರನು ಎನಗರುಹಿದ ಕಾರಣ ದ್ವೆ ೈತಾದ್ವೆ ೈತವೆಲ್ಲವು ಸಂಹಾರವಾಗಿ ಹೋದವು. ನಾನು ದ್ವೆ ೈತಾದ್ವೆ ೈತವ ಮೀರಿ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದದೊಳಗೆ ಸತ್ತು ಪರಂಜ್ಯೋತಿ ಮಹಾಲಿಂಗಗುರು ಸಿದ್ಧ[ಲಿಂಗ] ಪ್ರಭುವಿನಲ್ಲಿ ಕೆಟ್ಟು ಬಟ್ಟಬಯಲಾದೆನಯ್ಯಾ, ಬೋಳಬಸವೇಶ್ವರ ನಿಮ್ಮಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಅಯ್ಯ, ಸದ್ಗುರು ಬಸವಣ್ಣನೆ ಜಗತ್ಪಾವನ ನಿಮಿತ್ಯಾರ್ಥವಾಗಿ ಮಾದಲಾಂಬಿಕೆಯ ಹೃನ್ಮಂದಿರದಲ್ಲಿ ನೆಲಸಿರುವ ನಿಷ್ಕಲ ಕೂಡಲಸಂಗಮೇಶ್ವರಲಿಂಗದ ಚಿದ್ಗರ್ಭದಿಂದ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ದವನದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ. ಅಯ್ಯ, ಚೆನ್ನಬಸವರಾಜದೇವನೆ ಪ್ರಮಥಗಣನಿಮಿತ್ಯಾರ್ಥವಾಗಿ ಅಕ್ಕನಾಗಲೆದೇವಿಯ ಚಿದಾಕಾಶದ ವರಚೌಕಮಧ್ಯದಲ್ಲಿ ನೆಲಸಿರ್ಪ ನಿಶ್ಶೂನ್ಯ ಕೂಡಲಚೆನ್ನಸಂಗನ ಚಿದ್ಗರ್ಭದಿಂದ ಸ್ವಾನುಭಾವಸದ್ವಾಸನೆಯನೆ ಬೀರುತ್ತ ಮರುಗದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ. ಅಯ್ಯ, ಪ್ರಭುಸ್ವಾಮಿಗಳೆ ಇವರಿಬ್ಬರ ಪರಿಣಾಮಕ್ಕೋಸ್ಕರವಾಗಿ ಕರವೂರ ಸುಜ್ಞಾನಿಗಳ ಪಶ್ಚಿಮಸ್ಥಾನದಲ್ಲಿ ನೆಲಸಿರುವ ನಿರಂಜನ ಗುರುಗುಹೇಶ್ವರನ ಚಿದ್ಗರ್ಭದಿಂದ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ಪಚ್ಚೇದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ. ಅಯ್ಯ, ನೀಲಲೋಚನೆ, ಮುಕ್ತಾಯಕ್ಕಗಳು, ಮಹಾದೇವಿಯಕ್ಕಗಳು ಮತ್ರ್ಯಲೋಕದ ಮಹಾಗಣಂಗಳಿಗೆ ಭಕ್ತಿಜ್ಞಾನವೈರಾಗ್ಯ ಸತ್ಕ್ರಿಯಾ ಸದಾಚಾರದ ಪರಿವರ್ತನೆಯ ತೋರಬೇಕೆಂದು ಪರಶಿವಲಿಂಗದ ಚಿದ್ಗರ್ಭದಿಂದ ಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ಕಸ್ತೂರಿ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮದ ಲೀಲೆಯಿಂದ ಮತ್ರ್ಯಕ್ಕವತರಿಸಿದರು ನೋಡಾ. ಅಯ್ಯ, ಸಿದ್ಭರಾಮೇಶ್ವರ, ಘಟ್ಟಿವಾಳ ಶರಣ, ಮೋಳಿಗೆಮಾರಯ್ಯ ಶರಣ ಮೊದಲಾದ ಸಮಸ್ತ ಪ್ರಮಥಗಣಂಗಳೂ ಜಗತ್ಪಾವನಾರ್ಥ ಮಹಿಮಾ ಷಟ್ಸ್ಥಲಮಾರ್ಗ ನಿಮಿತ್ಯಾರ್ಥವಾಗಿ, ಬಸವೇಶ್ವರಸ್ವಾಮಿಗಳ ಆಜ್ಞಾಮಂಟಪ ತ್ರಿಕೂಟಸಂಗಮ ಸಿಂಹಾಸನದ ಮಧ್ಯದಲ್ಲಿ ನೆಲಸಿರ್ದ ಚಿದ್ಘನಮಹಾಲಿಂಗದ ಚಿದ್ಬೆಳಗಿನೊಳಗೆ ಅನಂತಕೋಟಿ ಬರಸಿಡಿಲೊಗೆದೋಪಾದಿಯಲ್ಲಿ ಸ್ವಾನುಭಾವ ಸದ್ವಾಸನೆಯ ಪ್ರಕಾಶದಿಂದ ಸಂಪಿಗೆ, ಮೊಲ್ಲೆ, ಮಲ್ಲಿಗೆ, ಜಾಜಿ, ಬಕುಳ, ಕರವೀರ, ಸುರಹೊನ್ನೆ, ಪಾರಿಜಾತ, ತಾವರೆ, ನೈದಿಲು ಮೊದಲಾದ ಸಮಸ್ತ ಪುಷ್ಪಂಗಳುದಯದಂತೆ, ಬಳಸಿ ಬ್ರಹ್ಮವಾಗಿ ಪರಶಿವನಪ್ಪಣೆವಿಡಿದು ಮತ್ರ್ಯಲೋಕಕ್ಕವತರಿಸಿದರು ನೋಡ. ಅಯ್ಯ, ವರಕುಮಾರದೇಶಿಕೇಂದ್ರನೆ, ಗುರುಬಸವೇಶ್ವರಸ್ವಾಮಿಗಳೆ ನಿಮ್ಮ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಚೆನ್ನಬಸವಸ್ವಾಮಿಗಳೆ ನಿಮ್ಮ ಮನಸ್ಥಲದಲ್ಲಿ ಪ್ರಾಣಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಅಲ್ಲಮಪ್ರಭುವೆ ನಿಮ್ಮ ಭಾವಸ್ಥಲದಲ್ಲಿ ಭಾವಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ನೀಲಾಂಬಿಕೆ-ಮುಕ್ತಾಯಕ್ಕ-ಮಹಾದೇವಿಯಕ್ಕಗಳೆ ನಿಮ್ಮ ತ್ರಿವಿಧಚಕ್ಷುವಿನಲ್ಲಿ ಕರುಣಾಜಲ-ವಿನಯಜಲ-ಸಮತಾಜಲ ಮೊದಲಾದ ಹತ್ತುತೆರದಿಂದ ಪರಮಗಂಗಾತೀರ್ಥವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಸಿದ್ಭರಾಮೇಶ್ವರ, ಘಟ್ಟಿವಾಳಯ್ಯ, ಶರಣ ಮೋಳಿಗಪ್ಪ ಮೊದಲಾದ ಸಮಸ್ತ ಪ್ರಮಥಗಣಂಗಳೆಲ್ಲ ನಿನ್ನ ಹೃದಯಕಮಲ ಮಧ್ಯದಲ್ಲಿ ಶುದ್ಧ-ಸಿದ್ಧ-ಪ್ರಸಿದ್ಧ ಮೊದಲಾದ ಹನ್ನೊಂದು ತೆರದಿಂದ ಮಹಾಚಿದ್ಘನ ಪ್ರಸಾದವಾಗಿ ಚುಳಕಮಾತ್ರದಿಂದ ನೆಲಪಿರ್ಪರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಇನ್ನಷ್ಟು ... -->