ಅಥವಾ

ಒಟ್ಟು 139 ಕಡೆಗಳಲ್ಲಿ , 10 ವಚನಕಾರರು , 50 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಸವಣ್ಣಾ, ನಿಮ್ಮಂಗದಾಚಾರವ ಕಂಡು ಎನಗೆ ಲಿಂಗಸಂಗವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಮನದ ಸುಜ್ಞಾನವ ಕಂಡು ಎನಗೆ ಜಂಗಮಸಂಬಂಧವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಸದ್ಭಕ್ತಿಯ ತಿಳಿದು ಎನಗೆ ನಿಜವು ಸಾಧ್ಯವಾಯಿತ್ತಯ್ಯಾ. ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ.
--------------
ಅಕ್ಕಮಹಾದೇವಿ
ಧ್ಯಾನದಲ್ಲಿ ಕುಳ್ಳಿರ್ದು, ಜ್ಞಾನದಲ್ಲಿ ನೋಡಿ, ಮೌನ ಮುಗ್ಧವ ಮಾಡಿ, ಸ್ವಾನುಭಾವದಿಂದರಿದು, ಮತ್ತೇನೇನು ಹೊದ್ದಲೀಯದೆ, ತಾನು ತಾನಾಗಿ, ಜ್ಞಾನಕ್ಕತೀತನಾಗಿ, ಧ್ಯಾನ ಧಾರಣ ಸಮಾಧಿಯ ಮೆಟ್ಟಿ ನಿಂದ ನಿಜಲಿಂಗೈಕ್ಯಂಗೆ ನಮೋ ನಮೋ ಎಂಬೆ. ಇಂದೆನ್ನ ಭವ ನಷ್ಟವಾಗಿ ಹೋದವು ಕಾಣಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ಬಸವಣ್ಣಾ ಎಂದಡೆ, ಚೆನ್ನಬಸವಣ್ಣಾ ಎಂದಡೆ, ಪ್ರಭುದೇವಾ ಎಂದಡೆ, ಮಹಾದೇವಾ ಎಂದಡೆ, ಮಹಾಸ್ಥಾನದಲ್ಲಿರ್ದು ಕರೆದಡೆ, ಓ ಎನುತಿರ್ದೆ ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಅಯ್ಯಾ ಲಿಂಗವ ಪೂಜಿಸಿಹೆನೆಂದು ಅಂಗದ ಕುರುಹ ಮರೆದೆ. ಜಂಗಮವ ಪೂಜಿಸಿಹೆನೆಂದು ಪ್ರಾಣದ ಕುರುಹ ಮರೆದೆ. ಪ್ರಸಾದವ ಕೊಂಡಿಹೆನೆಂದು ಪರವ ಮರೆದೆ. ಈ ತ್ರಿವಿಧದ ಭೇದವನು ಶ್ರುತಿ ಸ್ಮೃತಿಗಳರಿಯವು. ಹರಿ ಹರ ಬ್ರಹ್ಮದೇವ ದಾನವ ಮಾನವರು ಅರಿಯರು. ನಮ್ಮ ಶರಣರೆ ಬಲ್ಲರು. ಇವ ಬಲ್ಲ ಶರಣ ಚೆನ್ನಮಲ್ಲೇಶ್ವರ ಹೋದ ಹಾದಿಯಲ್ಲದೆ ಎನಗೆ ಬೇರೊಂದು ಹಾದಿ ಇಲ್ಲವಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ. ಇದಕ್ಕೆ ಮತ್ರ್ಯಲೋಕದ ಮಹಾಗಣಂಗಳೇ ಸಾಕ್ಷಿ.
--------------
ಹಡಪದ ಅಪ್ಪಣ್ಣ
ಕುಂಡಲಿಗನ ಕೀಟದಂತೆ, ಮೈ ಮಣ್ಣಾಗದಂತೆ ಇದ್ದೆಯಲ್ಲಾ ಬಸವಣ್ಣಾ. ಜಲದೊಳಗಣ ತಾವರೆಯಂತೆ ಹೊದ್ದಿಯೂ ಹೊದ್ದದಂತೆ ಇದ್ದೆಯಲ್ಲಾ ಬಸವಣ್ಣಾ. ಜಲದಿಂದಲಾದ ಮೌಕ್ತಿಕದಂತೆ, ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣಾ. ಗುಹೇಶ್ವರಲಿಂಗದ ಆಣತಿವಿಡಿದು, ತನುಗುಣ ಮತ್ತರಾಗಿದ್ದ ಐಶ್ವರ್ಯಾಂಧಕರ ಮತವನೇನ ಮಾಡಬಂದೆಯಯ್ಯಾ, ಸಂಗನ ಬಸವಣ್ಣಾ ?
--------------
ಅಲ್ಲಮಪ್ರಭುದೇವರು
ನಾನುಣ್ಣದ ಮುನ್ನವೆ ಜಂಗಮಕ್ಕೆ ಅಮೃತಾನ್ನಾದಿ ನೈವೇದ್ಯವ ನೀಡುವೆ. ನಾನುಡದ ಮುನ್ನವೆ ಜಂಗಮಕ್ಕೆ ದೇವಾಂಗಾದಿ ವಸ್ತ್ರವನುಡಿಸುವೆ. ನಾನು ಹೂಸದ ಮುನ್ನವೆ ಜಂಗಮಕ್ಕೆ ಸುಗಂಧಾದಿ ಪರಿಮಳದ್ರವ್ಯವ ಹೂಸುವೆ. ನಾನು ಮುಡಿಯದ ಮುನ್ನವೆ ಜಂಗಮಕ್ಕೆ ಪರಿಪರಿಯ ಪುಷ್ಪವ ಮುಡಿಸುವೆ. ನಾನು ತೊಡದ ಮುನ್ನವೆ ಜಂಗಮಕ್ಕೆ ತೊಡಿಗೆಯ ತೊಡಿಸುವೆ. ನಾನಾವಾವ ಭೋಗವ ಭೋಗಿಸುವದ ಜಂಗಮಕ್ಕೆ ಭೋಗಿಸಲಿತ್ತು, ಆ ಶೇಷಪ್ರಸಾದವ ಲಿಂಗಕ್ಕಿತ್ತು ಭೋಗಿಸಿದ ಬಳಿಕಲಲ್ಲದೆ ಭೋಗಿಸಿದಡೆ ಬಸವಣ್ಣಾ, ನಿಮ್ಮಾಣೆಯಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಓಂಕಾರದಲ್ಲಿ ಉಗ್ಘಡಿಸುತ್ತಿರಲಾಗಿ, ಕೆಲಬಲದವರು ಓಡರಿನ್ನೆಂತೊ ? ಅದು ಎನ್ನಾಜ್ಞೆಯಲ್ಲ; ಎನ್ನೊಡೆಯನ ಹಂದೆತನ. ಸುಮ್ಮನಿರ್ದಡೆ ಎನ್ನ ಕೇಡು, ಹೇಳಿದಡೆ ಒಡೆಯಂಗೆ ಹಾನಿ. ಕೂಡಲಸಂಗಮದೇವರಲ್ಲಿ ಬಸವಣ್ಣಾ ಹಿಂಗದಿರು ನಿನ್ನ ಭೃತ್ಯನೆಂದು.
--------------
ಉಗ್ಘಡಿಸುವ ಗಬ್ಬಿದೇವಯ್ಯ
ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ ! ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು ? ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ. ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ. ಮತ್ರ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ. ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ. ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ ಪ್ರಾಣಲಿಂಗವಾಗಿ ಹೋದೆಯ ಸಂಗನಬಸವಣ್ಣಾ ?
--------------
ನಾಗಲಾಂಬಿಕೆ
ಅಮೃತದ ಸವಿ ಸ್ವಾದಿಸುವರಿಗಲ್ಲದೆ ಅಮೃತ ತನ್ನ ತಾ ಸ್ವಾದಿಸದ ಪರಿಯಂತೆ ನಿತ್ಯತೃಪ್ತಂಗೆ ಅಪ್ಯಾಯನ ಉಂಟೇ ಬಸವಣ್ಣಾ ? ಏಳ್ನೂರೆಪ್ಪತ್ತಮರಗಣಂಗಳ ಕಟ್ಟಳೆಯ ನೇಮದ ಕಟ್ಟು ನಿನ್ನದು ಬಸವಣ್ಣಾ. ನಿನಗೆ ಭಾವ ನಿರ್ಭಾವವೆಂಬುದುಂಟೇ ಬಸವಣ್ಣಾ ? ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ, ನಿನ್ನ ಪಾದಕ್ಕೆ ನಮೋ ನಮೋ ಎಂಬೆನು.
--------------
ಆಯ್ದಕ್ಕಿ ಮಾರಯ್ಯ
ನೆನೆವೆನಯ್ಯಾ ಬಸವಣ್ಣ, ನಿಮ್ಮ ಚರಣವೆನ್ನ ಮನದಲ್ಲಿ ಸಾಹಿತ್ಯವಹನ್ನಕ್ಕ. ನೋಡುವೆನಯ್ಯಾ ಬಸವಣ್ಣ, ನಿಮ್ಮ ಮೂರ್ತಿ ಎನ್ನನವಗವಿಸುವನ್ನಕ್ಕ. ಪೂಜಿಸುವೆನಯ್ಯಾ ಬಸವಣ್ಣ, ನಿಮ್ಮ ಪ್ರಸಾದವೆನ್ನ ತನುವಹನ್ನಕ್ಕ. ನಿಮ್ಮ ಆಹ್ವಾನಿಸುವೆನಯ್ಯಾ ಬಸವಣ್ಣ, ಅನಿಮಿಷ ನಿಮಿಷ ನಿಮಿಷಗಳಿಲ್ಲವೆಂದೆನಿಸುವನ್ನಕ್ಕ. ನಿಮ್ಮ ಧ್ಯಾನಿಸುವೆನಯ್ಯಾ ಬಸವಣ್ಣ, ಜ್ಞಾನಜ್ಞಾನವಿಲ್ಲವೆನಿಸುವನ್ನಕ್ಕ. ನಿಮ್ಮ ಮೂರ್ತಿಗೊಳಿಸುವೆನಯ್ಯಾ ಬಸವಣ್ಣ, ಅಹಂ ಸೋಹಂ ಎಂಬ ಶಬ್ದವುಳ್ಳನ್ನಕ್ಕ. ಬಸವಣ್ಣಾ ಎಂದು ಹಾಡುವೆನಯ್ಯ,
--------------
ಮಡಿವಾಳ ಮಾಚಿದೇವ
ಅಹುದಹುದು ಬಸವಣ್ಣಾ ನೀನೆಂದುದನಲ್ಲೆನಬಹುದೆ ? ಎನ್ನ ಮನದ ಕಪ್ಪ ಕಳೆದು ನಿರ್ಲೇಪನ ಮಾಡಿ ಎನ್ನ ನಿರವಯಲಲ್ಲಿ ನಿಲಿಸಿ ಪ್ರತಿಷೆ*ಯ ಮಾಡುವಾತನು ನೀನೆಂಬುದು ಸತ್ಯವಚನ ನೋಡಾ. ಗುಹೇಶ್ವರನ ಮಹಾಗಣಂಗಳಿದ್ದಲ್ಲಿಗೆ ಹೋಗಿ ತಿಳುಹಿಕೊಂಡು ಬಾರಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಯೋಗಭೂಷಣನೆ, ನಿಮ್ಮ ನೆರೆಯಲು ಬೇಕು ಬೇಕೆಂಬ ಸದ್ಭಕ್ತರ ಮನದ ಕೊನೆಯಲ್ಲಿ ತಿಳುಹುವೆ ಅಕ್ಷರವ. ಬಸವ ಬಸವ ಬಸವ ಎಂಬ ಮಧುರಾಕ್ಷರತ್ರಯದೊಳಗೆ ತಾನೆ ತೆಂಗ ಒಪ್ಪಿಕ್ಕು ಘನಗುರುವೆ ಬಸವಣ್ಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕಂಡೆಯಾ ಬಸವಣ್ಣಾ, ಕಣ್ಣಿನೊಳಗಣ ಬೊಂಬೆಯ ಸೂತ್ರದ ಇರವಿನಂತೆ, ಕುಂದಣದೊಳಗಡೆಗೆ ತೋರುವ ಮೃದು ಛಾಯದಂತೆ, ನವನೀತದೊಳಗಡಗಿದ ಸಾರದ ಸವಿಯಂತೆ ಅಂಗವಿಲ್ಲದ ಕುರುಹು, ಭಾವವಿಲ್ಲದ ಬಯಲು, ಬೆಳಗನರಿಯದ ಜ್ಯೋತಿಯ ಕಂಡೆಯಾ ಸಂಗನಬಸವಣ್ಣಾ, ಗುಹೇಶ್ವರಲಿಂಗದಲ್ಲಿ ಮರುಳು ಶಂಕರದೇವರ ?
--------------
ಅಲ್ಲಮಪ್ರಭುದೇವರು
ಬಸವಣ್ಣಾ ನಿನಗೇಳು ಜನ್ಮ, ನನಗೆ ನಾಲ್ಕು ಜನ್ಮ, ಚನ್ನಬಸವಣ್ಣಗೊಂದೆ ಜನ್ಮ. ನೀನು ಗುರುವೆನಿಸಿಕೊಳಬೇಡ, ನಾನು ಜಂಗಮವೆನಿಸಿಕೊಳಬೇಡ, ನಾವಿಬ್ಬರು ಚೆನ್ನಬಸವಣ್ಣನ ಒಕ್ಕುಮಿಕ್ಕ ಪ್ರಸಾದವ ಕೊಳ್ಳದಡೆ ನಮ್ಮ ಗುಹೇಶ್ವರ ಸಾಕ್ಷಿಯಾಗಿ ಭವಂ ನಾಸ್ತಿಯಾಗದು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಆರಾಧಿಸಿ ವಿರೋಧಿಸುವರೆ ? ಪೂಜಿಸಿ ಪೂಜೆಯ ಮರೆಯುವರೆ ? ಜಂಗಮಲಿಂಗವೆಂದರಿದವರು ಸಂಚ ತಪ್ಪುವರೆ ? ಗಾಳಿಯೂ ಗಂಧವೂ ಕೂಡಿದಂತೆ ಜಗದೊಳಗೆ ಇದೆ ! ಕೀರ್ತಿವಾರ್ತೆಯ ಹಡೆದೆಯಲ್ಲಾ ಬಸವಣ್ಣಾ. ನಿನ್ನ ಶಿಶುವಿನೊಡತಣ ತೆರಹುಮರಹ ಪ್ರಮಥರು ಮೆಚ್ಚುವರೆ ? ತಿಳಿದು ನೋಡುವಡೆ ಗುಹೇಶ್ವರನ ಶರಣ ಅಲ್ಲಯ್ಯಂಗೆ ನೀನು ಪರಮಾರಾಧ್ಯ ಕಾಣಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->