ಅಥವಾ

ಒಟ್ಟು 318 ಕಡೆಗಳಲ್ಲಿ , 13 ವಚನಕಾರರು , 102 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಾ ಪುರಾತರ ಚರಣಕೆ ಇಲ್ಲಿರ್ದೆ ಶರಣೆಂದಡೆ ಸಾಲದೆ ? ಬಸವಾ, ಬಸವಪ್ಪ, ಬಸವಯ್ಯ ಶರಣೆಂದಡೆ ಸಾಲದೆ ? ಎಲ್ಲರ ಹೃದಯದಲ್ಲಿ ಜ್ಯೋತಿಯಂತೆ ಬೆಳಗುತಿಪ್ಪ ಮಹಾಮಹಿಮ ನೀನಾಗಿ, ಎನಗಿದೇ ದಿವ್ಯಮಂತ್ರ. ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಬಸವಾ, ಬಸವಾ, ಬಸವಾ ಶರಣೆಂದ[ಡೆ]ಸಾಲದೆ ?
--------------
ಸಂಗಮೇಶ್ವರದ ಅಪ್ಪಣ್ಣ
ನೆನೆವೆನಯ್ಯಾ, ಲೋಹ ಪರುಷದ ಸಂಗದಂತಾಯಿತ್ತಾಗಿ. ಬಸವಾ ಬಸವಾ ಬಸವಾ ಎಂಬ ಶಬ್ದದೊಳಗೆ
--------------
ಮಡಿವಾಳ ಮಾಚಿದೇವ
``ಯೋ ದೇಹಿರೂಪಃ ಪರಮಸ್ಸುಖೋಪಿ ಯೋ ಭೂಷಭೂಷಃ ಪರಮಾತ್ಮಂಗಂ! ಯೋ ಲೋಕನಾಥೋ ಮಮ ಲೋಕದಾಯೀ ಯೋ ದೇಹಿದೇಹೋ ಮಮ ದೇಹಶೇಷಃ||' ಎಂದೆನಿಸಿದ ಬಸವಾ. ಎಲ್ಲ ಲೋಕತ್ರಯಪ್ರತಿಪಾತ ಶಬ್ದದಲ್ಲಿ ಘನಗಂಬ್ಥೀರವಾದ ಬಸವಾ. ಬಕಾರಸಂಬಂಧ ಬಹುಧಾಮರೂಪ ಬಸವಾ, ನೀನೆಲ್ಲಡಗಿದೆಯೊ ಬಸವಾ? ಕಾಲಕಲ್ಪಿತನಷ್ಟವಾಗಿ ಕಾಲಕಲ್ಪಿತಂಗಳನರಿದೆಯೊ ಬಸವಾ, ಅರಿದ ಮೂರ್ತಿಯ ನಿಮ್ಮ ಕುರುಹಿಟ್ಟುಕೊಂಡಿರೆ ಬಸವಾ. ಇಷ್ಟ ಬ್ರಹ್ಮಾಂಡವ ಘಟ್ಟಿಗೊಳಿಸಿದಿರಿ ಬಸವಾ, ಲಿಂಗದೃಷ್ಟಿಯ ರೂಪ ನಷ್ಟವ ಮಾಡಿದಿರಿ ತಂದೆ ಗುರುಬಸವಾ, ಗುಣವೆಲ್ಲಡಗಿದವೊ ಬಸವ ಗುರುವೆ, ಮನವೆಲ್ಲಡಗಿತ್ತೊ ಮಹಾಬಸವಾ? ಕಾಯಗುಣ ಮನಸುಮನಂಗಳು ನಿಮ್ಮಲ್ಲಡಗಿದವೆ ಬಸವ ತಂದೆ? ಎಲೆ ಬಸವಲಿಂಗವೆ, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ, ಬಸವಾ ಬಸವಾ ಬಸವಾ!
--------------
ಸಿದ್ಧರಾಮೇಶ್ವರ
ಮಡದಿ ಎಂಬ ಶಬ್ದ ನಿಶ್ಶಬ್ದವಾದಡೆ ನಾನೀಗ ನಿಜಸುಖಿ ಬಸವಾ. ಬಸವನಂಗವ ಕಂಡಡೆ ನಾನು ಪರಿಣಾಮಿ, ಬಸವನ ಹರುಷವ ಕಂಡರಿದಡೆ ನಾನೈಕ್ಯಸಂಪನ್ನೆಯಯ್ಯಾ ಸಂಗಯ್ಯಾ.
--------------
ನೀಲಮ್ಮ
ಜಯಸಮಯವನಪ್ಪಿದ ಕರ ಬಸವಾ, ಕರುಣಗೃಹ, ವಿಮಲ ಶುದ್ಧಸಮಯ ಭಾವಭರಿತ, ಭರಿತಪೂರ ಪುರೋಪಜೀವ, ನಮೋ ಬಸವಾ, ನಮೋ ಪ್ರಾಣಲಿಂಗಿ ಬಸವಾ, ಕಪಿಲಸಿದ್ಧಮಲ್ಲಿನಾಥಾ, ನಮೋ ಬಸವಾ.
--------------
ಸಿದ್ಧರಾಮೇಶ್ವರ
ಆಗಮವಿಚಾರ ಅಪ್ರಮಾಣ, ನಮೋ ಬಸವಾ ಬಸವಾ, ನಮೋ ಜಯತು ಜಯತು ಕರುಣಾಕರ, ಪಾಹಿಮಾಂ ಬಸವಾ ಬಸವಾ, ಮಾರ್ಗವಲಯ ನಿಯಮಾಚಾರ ಸಮಯಭಕ್ತ ಭಕ್ತ ನಮೋ ಬಸವಾ, ಕಪಿಲಸಿದ್ಧಮಲ್ಲಿನಾಥಯ್ಯಾ
--------------
ಸಿದ್ಧರಾಮೇಶ್ವರ
ಆವ ಕಳೆಯೆಂಬುದು ನೀನೆಯಾದೆ, ಬಸವಲಿಂಗವೆ. ಮುಕ್ತಿಗೆ ಮೂಲಸ್ವರೂಪು ನೀನಾಗಿ ನಿಂದ ರೂಪು. ನಿನ್ನ್ಲಲ್ಲಿಯೆ ತ್ಲೀಯವಾಯಿತ್ತು, ಬಸವಗುರುವೆ. ನಿಯಮಾಚಾರದ ರೂಪು ನಿನ್ನ್ಲಲ್ಲಿಯೆ ತಲ್ಲಿಯವಾಯಿತ್ತಯ್ಯಾ, ಕಪಿಲಸಿದ್ಧಮ್ಲನಾಥನ ಗುರು ಬಸವಾ.
--------------
ಸಿದ್ಧರಾಮೇಶ್ವರ
ನಿಧಾನವ ಸಾಧಿಸಿದವರಿಗೆ ವಿಗುರ್ಬಣೆ ಕಾಡುವುದು. ಅದಕ್ಕಂಜಲಾಗದು ಬೆಚ್ಚಲಾಗದು ಬೆದರಲಾಗದು. ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧಮಾಯವ ತೋರಿ, ಹೆರತೆಗೆಸುವನಾಗಿ ! ಸತಿಪುರುಷಸಂಯೋಗದ ವೇಳೆಯಲ್ಲಿ ಜೀವಧನ ಬಿಟ್ಟುಕೊಂಡು ಮಡಕೆಯನೂಕುವುದು. ಇದಿರ ಜೀವಧನ ಬಿಟ್ಟುಕೊಂಡು ಮನೆಯ ಹಿಂದನುಚ್ಚುವುದು. ಬೆಕ್ಕು ನೆಲಹಿಗೆ ತುಡುಕುವುದು. ನಾಯಿ ಮನೆಯ ಹೊರಗ ಹೊಂಚಿಕೊಂಡಿಹುದು. ಮಗುವು ಮೊಲೆಗೆ ಅಳುವುದ ಕೇಳಿ_ ಇವೆಲ್ಲವ ಸಂತವಿಟ್ಟು ಬಂದು ಪುರುಷನ ನೆರೆವಳು, [ಇದು ಸಜ್ಜನಸ್ತ್ರೀಯ ಲಕ್ಷಣವು ! ಇಂತಪ್ಪ ಆ ತವಕ ನಿನಗಳವಟ್ಟಿತ್ತು ಬಸವಾ ಆ ಗುಹೇಶ್ವರನ ಸಂಯೋಗದ ವೇಳೆಯಲ್ಲಿ !
--------------
ಅಲ್ಲಮಪ್ರಭುದೇವರು
ಬಸವಾ ಬಸವಾ ಎಂಬ ಶಬ್ದವಡಗಿತ್ತು. ಬಸವಾ ಬಸವಾ ಎಂಬ ಕಂಬ ಮುರಿಯಿತ್ತು. ಬಸವಾ ಬಸವಾ ಎಂಬ ಮಾಟ ನಷ್ಟವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ 
--------------
ಸಿದ್ಧರಾಮೇಶ್ವರ
ಸಂಗವಪ್ಪ ಬಸವಾ, ನಿಸ್ಸಂಗ ನಿರಾಲಂಬಿಯಾದೆಯಾ ಬಸವಾ. ಅಪ್ರತಿಮ ಅನುಪಮ ಬಸವಾ, ಅನಾದಿಸ್ವಭಾವವಾದನಯ್ಯಾ. ಸಂಗಯ್ಯಾ, ನಿಮ್ಮ ಬಸವ ಎನ್ನಲ್ಲಿ ಅಡಗಿದನು.
--------------
ನೀಲಮ್ಮ
ಎಸೆವಾಕ್ಷರದ ಕುರುಹ ಕಂಡು ಆನು ಬಸವಾ ಬಸವಾ ಬಸವಾ ಎನುತಿರ್ದೆನಯ್ಯಾ. ಬ್ರಹ್ಮವನರಿದು ಮೂರ್ತಿಯ ಇರವನರಿದೆನಯ್ಯಾ. ಸಂಗಯ್ಯನಲ್ಲಿ ಕುರುಹನಳಿದೆನು.
--------------
ನೀಲಮ್ಮ
ಕಾಲ್ಲದವಂಗೆ ಕಾಲ ಕೊಟ್ಟೆ ಬಸವಾ; ಕಣ್ಣಿಲ್ಲದವಂಗೆ ಕಣ್ಣ ಕೊಟ್ಟೆ ಬಸವಾ; ಎನ್ನ ಕಣ್ಣು ಕಾಲಿಂಗೆ ನೀನೆಯಯ್ಯಾ ಬಸವಾ, ಕಪಿಲಸಿದ್ಧಮಲ್ಲಿನಾಥಯ್ಯಾ
--------------
ಸಿದ್ಧರಾಮೇಶ್ವರ
ತನು ಶುದ್ಧವಾಯಿತ್ತು ಬಸವಾ ಇಂದೆನ್ನ. ಮನ ಶುದ್ಧವಾಯಿತ್ತು ಬಸವಾ ಇಂದೆನ್ನ. ಭಕ್ತಿ ಯುಕ್ತಿ ಮುಕ್ತಿ ಶುದ್ಧವಾಯಿತ್ತು ಬಸವಾ ಇಂದೆನ್ನ. ಇಂತೀ ಸರ್ವವೂ ಶುದ್ಧವಾಯಿತ್ತು ಬಸವಾ ಇಂದೆನ್ನ. ನಮ್ಮ ಗುಹೇಶ್ವರಲಿಂಗಕ್ಕೆ ಆದಿಯಾಧಾರವಾದೆಯೆಲ್ಲಾ ಬಸವಣ್ಣಾ ನೀನಿಂದು.
--------------
ಅಲ್ಲಮಪ್ರಭುದೇವರು
ಬೆಳಗಿನಪ್ರಭೆ ಥಳಥಳಿಸಿ ಹೊಳೆಯಲು, ಆ ಬೆಳಗಿನೊಳಗೆ ಬೆಳೆದ ಶಿಶುವಾನಯ್ಯಾ. ಕಳೆಯರಿಯದೆ ಬೆಳೆದೆನು, ತಿಳುಹಿಲ್ಲದೆ ನಿಂದೆನು. ಸಂಗಯ್ಯನಲ್ಲಿ ಬಸವಾ ಬಸವಾ ಬಸವಾ ಎನುತಿರ್ದೆನು.
--------------
ನೀಲಮ್ಮ
ಎಲೆ ಅಯ್ಯಾ ಎಲೆ ಅಯ್ಯಾ ಏಕಾಕ್ಷರ ರೂಪ ಬಸವಾ, ಎಲೆ ಅಯ್ಯಾ ಎಲೆ ಅಯ್ಯಾ ನಿರಕ್ಷರರೂಪ ಬಸವಾ, ಎಲೆ ಅಯ್ಯಾ ಎಲೆ ಅಯ್ಯಾ ಮುನಿಮಾರ್ಗಶೀಲ ಬಸವಾ, ಸಂಗಯ್ಯಾ, ಎಲೆಯಿಲ್ಲದ ವೃಕ್ಷವಾದ ಬಸವಯ್ಯನು.
--------------
ನೀಲಮ್ಮ
ಇನ್ನಷ್ಟು ... -->