ಅಥವಾ

ಒಟ್ಟು 86 ಕಡೆಗಳಲ್ಲಿ , 27 ವಚನಕಾರರು , 68 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದ ಕರ್ತ ಜಗದ ಸ್ಥಿತಿ-ಗತಿಯ ನಡೆಸುವ ಪರಿಯನು ಆವಂಗೆ ಆವಂಗೆಯೂ ಅರಿಯಬಾರದು. ಅಕಟಕಟಾ ದೇವದಾನವ ಮಾನವರೆಲ್ಲ ಅಹಂ ಎಂದು ಅಹಂಕಾರದಿ ಕೆಟ್ಟರಲ್ಲ. ಆ ಮಹಾಕರ್ತನು ತನ್ನ ಶಕ್ತಿಯ ವಿನೋದಕ್ಕೆ ರಚಿಸಿದ ರಚನೆ: ಮೂವರು ಪ್ರಧಾನರು, ಒಂಬತ್ತು ಪ್ರಜೆ ಪಸಾಯಿತರು, ಪದಿನಾಲ್ಕು ನಿಯೋಗಿಗಳು, ಇಪ್ಪತ್ತೇಳು ಅನುಚರರು, ಅಷ್ಟತನುಗಳಿಂದಾದ ಜಗಸ್ಥಿತಿಯ ನಡೆಸುವರು. ಆ ಮಹಾಕರ್ತನು ಕಟ್ಟಿದ ಕಟ್ಟಳೆಯಲು, ಆಯುಷ್ಯ ನಿಮಿಷ ಮಾತ್ರ ಹೆಚ್ಚಿಸ ಬಾರದು, ಕುಂದಿಸಬಾರದು ನೋಡಾ. ಭಾಷೆಯಲಿ ಅಣು ಮಾತ್ರ ಹೆಚ್ಚಿಸಬಾರದು, ಕುಂದಿಸಬಾರದು ನೋಡಾ. ಇದನಾವಂಗೆಯೂ ಅರಿಯಬಾರದು. ಇದ ಬಲ್ಲರೆ ಎಮ್ಮ ಶರಣರೆ ಬಲ್ಲರು. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ವಸ್ತುವಿಪ್ಪ ಭೇದವೆಂತೆಂದಡೆ: ಪರ್ಣದೊಳಗಿಪ್ಪ ಪಚ್ಚೆಯಂತೆ, ಹೊನ್ನಿನೊಳಗಿಪ್ಪ ಬಣ್ಣದಂತೆ, ಶುಕ್ತಿಯೊಳಗಿಪ್ಪ ಅಪ್ಪುವಿನಂತೆ, ಅದು ಒಪ್ಪವಲ್ಲದೆ ನೆಪ್ಪಿಂಗೆ ಬಾರದು. ಆ ವಸ್ತುವನಪ್ಪುವರನಾರನೂ ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮೋಹಮನವೆಂಬ ಒಂದಾಗರದಲ್ಲಿ ಬಾಳೆ ಹುಟ್ಟಿತ್ತು. ಕಣ್ಣೆಲೆ ಒಂದು, ಹೊಡೆ ಮೂರಾಗಿ ಮೂಡಿ, ಹೂವಿನ ಎಲೆ ಬಿಳಿದು, ಕುಸುಮ ಉದುರದು, ಚಿಪ್ಪು ಲೆಕ್ಕಕ್ಕೆ ಬಾರದು, ಬಾಳೆಯ ಸಾಕಿದಣ್ಣ ಬಾಳಲಾರ. ಬಾಳೆ ತರಿವುದಕ್ಕೆ ಮೊದಲೆ ಕೊಳೆಯಿತ್ತು, ಅಂಗನಷ್ಟಕ್ಕೆ ಮೊದಲೆ ಮನನಷ್ಟವಾಯಿತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ.
--------------
ಸಗರದ ಬೊಮ್ಮಣ್ಣ
ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ ಮಾಡುವ ಸತ್ಕ್ರಿಯೆುಂದ ಭಕ್ತನೆನಿಸಲು ಬಾರದು. ಅರ್ಥಪ್ರಾಣಾಭಿಮಾನವಾರಿಗೆಯೂ ಸಮನಿಸದು, ಲಿಂಗಮುಖದಲುದಯವಾದ ಶರಣಂಗಲ್ಲದೆ ಅಯ್ಯಾ. ಕೂಡಲಸಂಗನ ಶರಣರ ಭಕ್ತಿಭಂಡಾರವು ಎನಗೆಂತು ಸಾಧ್ಯವಪ್ಪುದು ಹೇಳೆನ್ನ ತಂದೆ. 319
--------------
ಬಸವಣ್ಣ
ಭಕ್ತರೆಲ್ಲರೂ ಲಂದಣಿಗರಾಗಿ ಹೋಯಿತ್ತು. ಜಂಗಮಗಳೆಲ್ಲರೂ (ಜಂಗಮವೆಲ್ಲ?) ಉಪಜೀವಿಗಳಾಗಿ, ಹೋದರು (ಹೋಯಿತ್ತು?). ಇದೇನೊ? ಇದೆಂತೊ? ಅರಿಯಲೆ ಬಾರದು. ಕಾಯಗುಣ ನಾಸ್ತಿಯಾದಾತ ಭಕ್ತ, ಪ್ರಾಣಗುಣ ನಾಸ್ತಿಯಾದಾತ ಜಂಗಮ, ಉಳಿದವೆಲ್ಲವ ಸಟೆಯೆಂಬೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಸಕಲಜೀವಕ್ಕೆಲ್ಲಕ್ಕೂ ಜೀವವೆ ಆಧಾರ. ಜೀವವ ತಪ್ಪಿಸಿ ಜೀವಿಸಲಿಕ್ಕಾರಿಗೆಯೂ ಬಾರದು. ವಿಕೃತಿಯಿಂದ ನೋಡಿದಡಾರೂ ಸ್ವತಂತ್ರರಿಲ್ಲ. ಸಕಳೇಶ್ವರದೇವಂಗುಪಹಾರ ಕೊಡಲು ಅದು ಶುದ್ಧಭಕ್ತಿಪ್ರಸಾದ.
--------------
ಸಕಳೇಶ ಮಾದರಸ
ಭಿತ್ತಿ ಮೂರರ ಮೇಲೆ ಚಿತ್ರ ಬರೆಯಿತ್ತು; ಪ್ರಥಮ ಭಿತ್ತಿಯ ಚಿತ್ರ ಚಿತ್ರದಂತೆ ಇದ್ದಿತ್ತು; ಎರಡನೆಯ ಭಿತ್ತಿಯ ಚಿತ್ರ ಹೋಗುತ್ತ ಬರುತ್ತ ಇದ್ದಿತ್ತು, ಮೂರನೆಯ ಭಿತ್ತಿಯ ಚಿತ್ರ ಹೋಯಿತ್ತು ಮರಳಿ ಬಾರದು. ಗುಹೇಶ್ವರಾ_ನಿಮ್ಮ ಶರಣ ತ್ರಿವಿಧದಿಂದತ್ತತ್ತಲೆ !
--------------
ಅಲ್ಲಮಪ್ರಭುದೇವರು
ಬಾರದು ಬಾರದು, ಭಕ್ತಂಗೆ ಪರಧನ ಪರಸತಿ, ಬಾರದು ಬಾರದು, ವಿಷಯಿಗೆ ಪಶುಪತಿಬ್ರತವು, ಬಾರದು ಬಾರದು, ಭವಭಾರಿಗೆ ಕೂಡಲಸಂಗಮದೇವನ ಒಕ್ಕುದ ಕೊಳಬಾರದು.
--------------
ಬಸವಣ್ಣ
ಕೆಟ್ಟುದನರಸ ಹೋಗಿ ತಾನೆ ಕೆಟ್ಟಿತ್ತು. ಹೇಳಲೆಂತೂ ಬಾರದು ಕೇಳಲೆಂತೂ ಬಾರದು. ಎಂತಿರ್ದುದಂತೆ ! ಸಹಜ ಸ್ವಾನುಭಾವದ ಸಮ್ಯಕ್ ಜ್ಞಾನವ, ಅಜ್ಞಾನಿ ಬಲ್ಲನೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕಾಣಬಾರದ ಘನವೆಂದು, ಜಗವೆಲ್ಲ ಹೇಳುತ್ತಿದೆ. ಈ ಕಾಣಬಾರದ ಘನವ ನಾನಾರ ಕೇಳಲಯ್ಯ! ಗುರು ಹೇಳಲಿಲ್ಲ, ಲಿಂಗ ಹೇಳಲಿಲ್ಲ, ಜಂಗಮ ಹೇಳಲಿಲ್ಲ. ಅದು ಹೇಗೆ ಎಂದರೆ:ಗುರು ಒಂದು ಲಿಂಗವ ಕೊಟ್ಟು, ತನ್ನ ಅಂಗದ ಕುರಿತು, ಆ ಲಿಂಗಕ್ಕೆ ಬೆಲೆಯ ತಕ್ಕೊಂಡು ಹೋದನಲ್ಲದೆ, ಆ ಕಾಣಬಾರದ ಘನವ ಹೇಳಿದುದು ಇಲ್ಲ. ಇದ ಲಿಂಗವೆಂದು ಪೂಜಿಸಿದರೆ, ಕಂಗಳ ಕಾಮ ಘನವಾಯಿತ್ತಲ್ಲ ! ಎರಡರ ಸಂಗಸುಖವ ಹೇಳಲರಿಯದೆ, ಜಂಗಮವೆಂದು ಪೂಜೆಯ ಮಾಡಿದರೆ, ಈ ಜಗದೊಳಗೆ ಹುಟ್ಟಿದ ಪದಾರ್ಥಕ್ಕೆ ಒಡೆಯನಾದನಲ್ಲದೆ, ಈ ಕಾಣಬಾರದ ಘನವ, ಹೇಳಿದುದಿಲ್ಲ. ಅದೇನು ಕಾರಣವೆಂದರೆ: ಆ ಕಾಣಬಾರದ ಘನವ, ತಾನೊಬ್ಬ ಕೇಳಲು ಬಾರದು, ತಾನೊಬ್ಬರಿಗೆ ಹೇಳಲು ಬಾರದು. ಏಕೆ? ನಾಮರೂಪಿಲ್ಲವಾಗಿ, ನುಡಿಯಿಲ್ಲ. ಇಂತಪ್ಪ ಘನ ತಾನೆ, ಒಂದು ರೂಪ ತೊಟ್ಟು, ತನ್ನ ಲೀಲೆಯ ಎಲ್ಲ ಶರಣರೊಳು ನಟಿಸಿ, ತನ್ನ ತಾನೆ ಸಾಕಾರ ನಿರಾಕಾರವಾಗಿ, ಏಕವಾದ ಭೇದವನರಿಯದೆ ಈ ಲೋಕದಲ್ಲಿ ಇದ್ದರೇನು? ಆ ಲೋಕದಲ್ಲಿ ಹೋದರೇನು? ಹದಿನಾಲ್ಕುಲೋಕವು ತಾನೆಯಾದ ಚಿನ್ಮಯನ ಹೇಳಿಹೆನೆಂದರೆ ಎನ್ನಳವಲ್ಲ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ಕಂಡೆನಯ್ಯಾ, ಕಂಗಳೊಳಗೊಂದು ಹೆಸರಿಡಬಾರದು ಮಸ್ತುವ. ಅದು ನಿಂದಲ್ಲಿ ನಿಲ್ಲದು, ಬಂದಲ್ಲಿ ಬಾರದು, ಹೊದ್ದಿದಲ್ಲಿ ಹೊದ್ದದು. ಇದರ ಸಂದುಸಂಶಯದಿಂದ ನಂಬಿಯೂ ನಂಬದಿನ್ನೇವೆ? ಕಾಬಡೆ ಕಂಗಳಲ್ಲಿ ನಿಲ್ಲದು, ನೆನೆವಡೆ ಮನದಲ್ಲಿ ನಿಲ್ಲದು, ಹೊಡೆವಡೆ ಕೈಯೊಳಗಲ್ಲ. ಇದರ ಕೂಟ ಕುಶಲವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜನನ ಮರಣಂಗಳಲ್ಲಿ ಬರಿಸಬಾರದ ಭಾಷೆ, ನಿತ್ಯ ನೀನೆಂದು ಮರೆಹೊಕ್ಕ ಕಾರಣ. ಇಹದಲ್ಲಿ ಪರದಲ್ಲಿ ಇರಿಸಬಾರದ ಭಾಷೆ, ತನ್ನಲ್ಲಿ ತನಗೆ ವಿವರಣೆ ಇಲ್ಲದ ಕಾರಣ. ಪುಣ್ಯಪಾಪಂಗಳ ಉಣಿಸಬಾರದ ಭಾಷೆ, ತನ್ನ ಪಾದೋದಕ ಪ್ರಸಾದಜೀವಿಯಾಗಿ. ತಾ ಸಹಿತ ನಾನಿಪ್ಪೆ, ನಾ ಸಹಿತ ತಾನಿಪ್ಪ ಕಾರಣ, ವಂಚನೆ ಬಾರದು ಎನಗೆ ತನಗೆ. ಶಂಭುಜಕ್ಕೇಶ್ವರದೇವಾ, ಸದ್ಗುರು ಅಪ್ಪಣೆಯಿಂದ ನೀನೊಲಿದು ಸಲಹು ಎನ್ನ ಪ್ರಾಣಲಿಂಗವಾಗಿ.
--------------
ಸತ್ಯಕ್ಕ
ಆತ್ಮನೆ ಲಿಂಗವೆಂಬರು, ಆತ್ಮನ ದೇಹರಹಿತವಾಗಿ ಕಾಬವರುಂಟೆ ಪ್ರಾಣವೆ ಲಿಂಗವೆಂಬರು, ಪ್ರಾಣವನು ಕಾಯವ ಬಿಟ್ಟು ಬೇರೆ ಕಾಣಬಹುದೆ ಕಂಡೆಹೆನೆಂದಡೆ ಅದು ನಿರವಯ, ನಿರಾಕಾರವಾದುದು, ಭಾವಕ್ಕೆ ಬಾರದು. ಭಾವಕ್ಕೆ ಬಾರದುದ ಪೂಜಿಸಬಹುದೆ ಅದು ಕಾರಣ, ಕಾಯದ ಕರಸ್ಥಲದಲ್ಲಿ ಕ್ರಿಯಾಲಿಂಗವಿಡಿದು ನೋಡಲು ಪ್ರಾಣ ಆತ್ಮನೆಂಬವು ಬೇರಿಲ್ಲ. ಇದು ಕಾರಣ, ಇಷ್ಟವ ಬಿಟ್ಟು ಬಟ್ಟಬಯಲೆ ವಸ್ತುವೆಂಬ ಮಿಟ್ಟಿಯ ಭಂಡರ ನಮ್ಮ ಕೂಡಲಸಂಗನ ಶರಣರು ಮೆಚ್ಚರು.
--------------
ಬಸವಣ್ಣ
ಲಿಂಗಿನಾ ಸಹವರ್ತಿತ್ವಂ ಲಿಂಗಿನಾ ಸಹ ವಾದಿತಾ ಲಿಂಗಿನಾ ಸಹಚಿಂತಾ ಚ ಲಿಂಗಯೋಗೋ ನ ಸಂಶಯಃ ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ಮರ್ಮವನು ಶಿವಲಿಂಗದ ನಿಶ್ಚಯವನು ಇದಾರಯ್ಯ ಬಲ್ಲವರು ? ಆರಯ್ಯ ಅರಿವವರು, ಶ್ರೀಗುರು ಕರುಣಿಸಿ ತೋರಿ ಕೊಡದನ್ನಬರ ? `ಸರ್ವೈಶ್ವರ್ಯಸಂಪನ್ನಃ ಸರ್ವೇಶತ್ವಸಮಾಯುತಃ' ಎಂದುದಾಗಿ, `ಅಣೋರಣೀಯಾನ್ ಮಹತೋ ಮಹಿಮಾನ್' ಎಂದುದಾಗಿ, `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂದುದಾಗಿ, ವೇದಪುರುಷರಿಗೂ ಅರಿಯಬಾರದು, ಅರಿಯಬಾರದ ವಸ್ತುವ ಕಾಣಿಸಬಾರದು, ಕಾಣಿಸಬಾರದ ವಸ್ತುವ ರೂಪಿಸಲೆಂತೂ ಬಾರದು, ರೂಪಿಸಬಾರದ ವಸ್ತುವ ಪೂಜಿಸಲೆಂತೂ ಬಾರದು. ಪೂಜೆಯಿಲ್ಲಾಗಿ ಭಕ್ತಿ ಇಲ್ಲ, ಭಕ್ತಿ ಇಲ್ಲಾಗಿ ಪ್ರಸಾದವಿಲ್ಲ, ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಮುಕ್ತಿ ಇಲ್ಲಾಗಿ ದೇವದಾನವಮಾನವರೆಲ್ಲರೂ ಕೆಡುವರು. ಕೆಡುವವರನು ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು ಮದ್ಗುರು ಶ್ರೀಗುರು. `ನ ಗುರೋರಧಿಕಂ ನ ಗುರೋರಧಿಕಂ ಎಂದುದಾಗಿ, ಮಹಾಗುರು ಶಾಂತಮೂರ್ತಿ ಕೃಪಾಮೂರ್ತಿ ದಯಾಮೂರ್ತಿ ಲಿಂಗಪ್ರತಿಷೆ*ಯ ಮಾಡಿದನು. ಅದೆಂತೆನಲು ಕೇಳಿರೆ : ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಸಹ ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಸದ್ಗುರೋರ್ಭಾವಲಿಂಗಂ ತು ಸರ್ವಬ್ರಹ್ಮಾಂಡಗಂ ಶಿವಂ ಸರ್ವಲೋಕಸ್ಯ ತ್ರಾಣತ್ವಾತ್ ಮುಕ್ತಿಕ್ಷೇತ್ರಂ ತದುಚ್ಯತೇ ಎಂದುದಾಗಿ, `ಗುರುಣಾ ದೀಯತೇ ಲಿಂಗಂ' ಸರ್ವಲೋಕಕ್ಕೆಯೂ ಸರ್ವರಿಗೆಯೂ ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು ಅರೂಪೇ ಭಾವನಂ ನಾಸ್ತಿ ಯದ್ದೃಶ್ಯಂ ತದ್ವನಶ್ಯತಿ ಅದೃಶ್ಯಸ್ಯ ತು ರೂಪತ್ವೇ ಸಾದಾಖ್ಯಮಿತಿ ಕಥ್ಯತೇ ಎಂದುದಾಗಿ, ನಿಷ್ಕಳರೂಪ ನಿರವಯ ಧ್ಯಾನಪೂಜೆಗೆ ಅನುವಲ್ಲ. ಸಕಲತತ್ತ್ವ ಸಾಮಾನ್ಯವೆಂದು `ಸಕಲಂ ನಿಷ್ಕಲಂ ಲಿಂಗಂ ಎಂದುದಾಗಿ, `ಲಿಂಗಂ ತಾಪತ್ರಯಹರಂ ಎಂದುದಾಗಿ, `ಲಿಂಗಂ ದಾರಿದ್ರ್ಯನಾಶನಂ ಎಂದುದಾಗಿ, `ಲಿಂಗಂ ಪ್ರಸಾದರೂಪಂ ಚ ಲಿಂಗಂ ಸರ್ವಾರ್ಥಸಾಧನಂ ಎಂದುದಾಗಿ, `ಲಿಂಗಂ ಪರಂಜ್ಯೋತಿಃ ಲಿಂಗಂ ಪರಬ್ರಹ್ಮಂ ಎಂದುದಾಗಿ, ಲಿಂಗವನು ಪೂಜಿಸಿ ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು ಮಹಾದಾನಿ ಗುರುಲಿಂಗವು ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಸರ್ವೇ ಲಿಂಗಾರ್ಚನಂ ಕೃತ್ವಾ ಜಾತಾಸ್ತೇ ಲಿಂಗಪೂಜಕಾಃ ಗೌರೀಪತಿರುಮಾನಾಥೋ ಅಂಬಿಕಾಪಾರ್ವತೀ ಪತಿಃ ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ ಎಂದುದಾಗಿ, ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು ಬ್ರಹ್ಮವಿಷ್ಣ್ವಾದಿ ದೇವದಾನವಮಾನವರುಗಳು ಮಹಾಲಿಂಗವ ಧ್ಯಾನಿಸಿ ಪೂಜಿಸಿ ಪರಮಸುಖ ಪರಿಣಾಮವ ಪಡೆಯಲೆಂದು ಮಾಡಿದನು ಕೇವಲ ಸದ್ಭಕ್ತಜನಕ್ಕೆ. `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಏಕಂ' ಎಂದುದಾಗಿ, ಆ ಸದ್ಗುರು, ಆ ಪರಶಿವನನು ಆ ಸತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷೆ*ಯ ಮಾಡಿ ಪ್ರಾಣಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. `ಏಕಮೂರ್ತಿಸ್ತ್ರಿಧಾ ಭೇದೋ' ಎಂದುದಾಗಿ, ಶ್ರೀಗುರುಲಿಂಗ ಪರಶಿವಲಿಂಗ ಜಂಗಮಲಿಂಗ ಒಂದೇ; `ದೇಶಿಕಶ್ಯರಲಿಂಗೇ ಚ ತ್ರಿವಿಧಂ ಲಿಂಗಮುಚ್ಯತೇ' ಎಂದುದಾಗಿ, ಲಿಂಗದ ಮರ್ಮವನು, ಲಿಂಗದ ಸಂಜ್ಞೆಯನು, ಲಿಂಗದ ನಿಶ್ಚಯವನು ಆದಿಯಲ್ಲೂ ಧ್ಯಾನ ಪೂಜೆಯ ಮಾಡಿದವರನೂ ಭಕ್ತಿಪ್ರಸಾದ ಮುಕ್ತಿಯ ಪಡೆದವರನೂ ವೇದ ಶಾಸ್ತ್ರ ಪುರಾಣ ಆಗಮಂಗಳು ಹೇಳುತ್ತಿವೆ, ಶಿವನ ವಾಕ್ಯಂಗಳಿವೆ. ಇದು ನಿಶ್ಚಯ, ಮನವೇ ನಂಬು ಕೆಡಬೇಡ. ಮಹಾಸದ್ಭಕ್ತರನೂ ನಂಬುವುದು, ಶಿವಲಿಂಗಾರ್ಚನೆಯ ನಿರಂತರ ಮಾಡುವುದು, ಇದು ನಿಶ್ಚಯ, ಶಿವನು ಬಲ್ಲನಯ್ಯಾ. ಈ ಕ್ರೀಯಲ್ಲಿ ಲಿಂಗವನರಿದು ವಿಶ್ವಾಸಂ ಮಾಡಿ ಕೇವಲ ಸದ್ಭಕ್ತಿಯಿಂದ ಪೂಜಿಸುವುದು ನಿರ್ವಂಚಕತ್ವದಿಂದ ತನು ಮನ ಧನವನರ್ಪಿಸುವುದು, ಕ್ರೀಯರಿದು ಮರ್ಮವರಿದು ಸದ್ಭಾವದಿಂ ಲಿಂಗಾರ್ಚನೆಯಂ ಮಾಡುವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಬಿದಿರೆಲೆಯ ಮೆಲಿದಡೆ ಮೆಲಿದಂತಲ್ಲದೆ, ರಸವ ಹಡೆಯಲು ಬಾರದು, ಮಳಲ ಹೊಸೆದಡೆ ಹೊಸೆದಂತಲ್ಲದೆ, ಸರವಿಯ ಹಡೆಯಲುಬಾರದು. ನೀರ ಕಡೆದಡೆ ಕಡೆದಂತಲ್ಲದೆ, ಬೆಣ್ಣೆಯ ಹಡೆಯಲುಬಾರದು. ನಮ್ಮ ಕೂಡಲಸಂಗಮದೇವನಲ್ಲದೆ ಅನ್ಯದೈವಕ್ಕೆರಗಿದಡೆ ಹೊಳ್ಳ ಕುಟ್ಟಿ ಕೈ ಹೊಟ್ಟೆಯಾದಂತೆ ಆಯಿತ್ತಯ್ಯಾ.
--------------
ಬಸವಣ್ಣ
ಇನ್ನಷ್ಟು ... -->