ಅಥವಾ

ಒಟ್ಟು 50 ಕಡೆಗಳಲ್ಲಿ , 17 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಬಿಚ್ಚಿ ಮೂರಾದುದ ಕಂಡೆನಯ್ಯ. ಮೂರು ಬಿಚ್ಚಿ ಆರಾದುದ ಕಂಡೆನಯ್ಯ. ಆರು ಬಿಚ್ಚಿ ಮೂವತ್ತಾರಾದುದ ಕಂಡೆನಯ್ಯ. ಮೂವತ್ತಾರರಲ್ಲಿ ಒಬ್ಬ ಸತಿಯಳಿಪ್ಪಳು. ಆ ಸತಿಯಳು ಆರು ಕೇರಿಯ ಪೊಕ್ಕು, ಮೂರು ಬಾಗಿಲ ಮುಚ್ಚಿ, ಮೀರಿದ ಲಿಂಗದಲ್ಲಿ ತಾನು ತಾನಾಗಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಏರುವಡೆ ಮೊಲನಾಗನ ಗದ್ದುಗೆ ಕಪಾಲ ಕೈಯಲ್ಲಿ, ಹೇಳುವಡೆ ಹರಿಯ ಹೆಗಲಲ್ಲಿ ನೋಡಾ. ಬಿಚ್ಚಿ ಹೊದೆವಡೆ ನಾರಸಿಂಹನ ಹಸಿಯ ತೊವಲು. ಉಬ್ಬಿ ಹಿಡಿವಡೆ ನಿನಗಾದಿ ವರಹನ ದಾಡೆ. ನಲಿದು ಪಿಡಿವಡೆ ನಿನಗೆ ತ್ರಿವಿಕ್ರಮನ ನಿಟ್ಟೆಲುವು. ಕಲಿಗಳ ತಲೆಗಳ ಮಾಲೆಗಳಾರಾದಡೇನು [ಯೋಗ್ಯವೆ] ? ಸುಡು ಬಿಡು, ಎಲುವುಗಳ ಮುಟ್ಟುವರೆ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಗುರು-ಲಿಂಗ-ಜಂಗಮವೆಂಬ ಭೇದವನೆ ಕಳೆದು, ಗುರು ಲಿಂಗವ ಏಕವ ಮಾಡಿ ತೋರಿದನಾಗಿ, ತನು, ಮನ, ಪ್ರಾಣ ಮೊದಲಾಗಿಪ್ಪ ಕರಣೇಂದ್ರಿಯಂಗಳನು, ತನು ಮುಟ್ಟಿದ ಸುಖಂಗಳನು ಲಿಂಗಕ್ಕೆ ಕೊಟ್ಟು, ಅದ ಬಗೆಗೆತ್ತಿ ಬಿಚ್ಚಿ ಬೇರೆ ಮಾಡ, ಕೂಡಲಚೆನ್ನಸಂಗಾ ಲಿಂಗೈಕ್ಯನು.
--------------
ಚನ್ನಬಸವಣ್ಣ
ಅಂಗವಿಡಿದಂಗಿಯನೇನೆಂಬೆ ? ಆರನೊಳಕೊಂಡ ಅನುಪಮನು ನೋಡಾ ! ಮೂರರ ಹೊಲಿಗೆಯ ಬಿಚ್ಚಿ, ಎಂಟಾತ್ಮ ಹರಿಗಳ ತನ್ನಿಚ್ಛೆಯೊಳ್ ನಿಲಿಸಿದ ನಿಜಸುಖಿಯು ನೋಡಾ. ತತ್ತ್ವ ಮೂವತ್ತಾರ ಮೀರಿ, ಅತ್ತತ್ತವೆ ತೋರ್ಪ ಆಗಮ್ಯನು ನೋಡಾ ! ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ ಪರಮಪ್ರಸಾದಿ ಮರುಳಶಂಕರದೇವರ ನಿಲವ ಬಸವಣ್ಣನಿಂದ ಕಂಡೆ ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಜಂಗಮಸ್ಥಲಕ್ಕೆ ಲಕ್ಷಣವಾವುದೆಂದಡೆ ಹೇಳಿಹೆ ಕೇಳಿರಣ್ಣಾ : ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಬೇಕು. ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಬೇಕು, ಐದರ ಮುಸುಕನುಗಿದು, ಐದರ ಕಳೆಯ ಕೆಡಿಸಿ ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು ನಾಲ್ಕರೊಳಗೆ ನಿಲ್ಲದೆ, ಮೂರು ಮುಖವು ಒಂದು ಭಾಗವಾಗಿ ಇರಬೇಕು ! ಈ ಭೇದವನರಿಯದೆ ಸುಳಿವರ ಕಂಡು ಬೆರಗಾದೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗಸಂಸಾರ ಲಿಂಗದಲ್ಲಿತ್ತು ಅರತು ಕಾಯವೆಂಬ ಸಂಬಂಧ ಸಂಶಯವಳಿದು ನಿಸ್ಸಂದೇಹಿಯಾಗಿಪ್ಪನು ನೋಡಾ ಬಸವಣ್ಣನು. ಪ್ರಾಣ ಭಾವವೆಂಬ ಶಂಕೆ ತಲೆದೋರದೆ ನಿಶ್ಶಂಕನಿಜೈಕ್ಯನಾಗಿಪ್ಪನು ನೋಡಾ ಬಸವಣ್ಣನು. ಆ ಬಸವಣ್ಣನ ಅಂತರಂಗದಲ್ಲಿ ನಿಶ್ಚಿಂತನಿವಾಸಿಯಾಗಿದ್ದೆನು. ಆ ಬಸವಣ್ಣನ ಅಂತರಂಗದಲ್ಲಿ ನಿರಾಲಂಬಜ್ಞಾನಿಯಾಗಿದ್ದೆನು. ಆ ಬಸವಣ್ಣನೊಳಗೆ ನಾನು ಅಳಿದುಳಿದೆನು. ಬಸವಣ್ಣನೆನ್ನ ಅಂತರಂಗದೊಳಗೆ ನಿಜನಿವಾಸಿಯಾಗಿದ್ದನು. ಇದು ಕಾರಣ:ಒಂದಕ್ಕೊಂದ ಬಿಚ್ಚಿ ಬೇರು(ರೆ?) ಮಾಡಬಾರದು ನೋಡಾ. ಗುಹೇಶ್ವರಲಿಂಗದಲ್ಲಿ `ಸಂಗನಬಸವ-ಪ್ರಭು'ವೆಂಬ ಎರಡು ಭಾವಭ್ರಾಂತಿಯಳಿದು, ನಿಭ್ರಾಂತಿ ಎಡೆಗೊಂಡಿತ್ತು ನೋಡಾ ಚನ್ನಬಸವಣ್ಣಾ
--------------
ಅಲ್ಲಮಪ್ರಭುದೇವರು
ಕೈಗಳ ಬಿಚ್ಚಿ ಬಿಸಾಟಡೆ ಬಿಡೆನು ! ಮೈಗಳ ಕಡಿದು ಹರಹಿದಡೆ ಬೆಡೆನು, ಬಿಡೆ ನಿಮ್ಮ ಚರಣವ. ತನುವಳಿದಡೆ ಜಾÐನತನುವಿನಿಂದ ಕೊಡುವೆ ಕಪಿಲಸಿದ್ಧಮಲ್ಲಿಕಾರ್ಜುನಾ ನಿಮ್ಮ .
--------------
ಸಿದ್ಧರಾಮೇಶ್ವರ
ಮುಚ್ಚಿದ ಕಣ್ಣು ತೆರದುದ ಕಂಡೆ; ಕಿಚ್ಚಿನ ಜ್ವಾಲೆ ಕರವುದ ಕಂಡೆ; ಮೃತ್ಯುಗಳ ಮೊತ್ತ ಕಿತ್ತೋಡುವುದ ಕಂಡೆ; ಕತ್ತಲೆ ಬೆಳಗಾದುದ ಕಂಡೆ; ಬಿಚ್ಚಿ ಬೇರಿಲ್ಲದ ಬೆಳಗೆನ್ನನೊಳಕೊಂಡು ನಿತ್ಯ ಪ್ರಸನ್ನನಾದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಯಲ ಪೀಠದಲ್ಲಿ ನಿರ್ವಯಲ ಕಂಡಿಹೆನೆಂದಡೆ,_ `ಅತ್ಯತಿಷ*ದ್ದಶಾಂಗುಲ' ಎಂಬ ಶ್ರುತಿಯ ನೋಡಲು, ಮತ್ತೆ `ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ' ಎಂಬುದ ವಿಚಾರಿಸಿ ನೋಡೆ ಸ್ಥಾನಮಾನಕ್ಕೆ ಬಂದಿತೆಂಬ ಶ್ರುತಿಯುಂಟೆ ? ಕಾಯದ ಜೀವದ ಹೊಲಿಗೆಯ ಬಿಚ್ಚಿ, ನಾದ ಬಿಂದುವಂ ತಿಳಿದು ಪರಿಪೂರ್ಣ ಜ್ಞಾನಿಯಾಗಿ, ಪರಿಪೂರ್ಣಶಿವನನೊಳಕೊಳ್ಳಬಲ್ಲ ಶರಣನೆ, ಗುಹೇಶ್ವರಲಿಂಗದಲ್ಲಿ ಸಹಜ ಶಿವಯೋಗಿ ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಮಿಕ್ಕು ಅವರಿಗೆ ಲೆಕ್ಕಕ್ಕೆ ಕಡೆಯಿಲ್ಲದೆ ಮಾಡಿ, ಹೊಕ್ಕು ಭಕ್ತಿಯಲ್ಲಿ, ಲೆಕ್ಕ ತಪ್ಪದೆ ಅವತಾರದಲ್ಲಿ ಬಂದು, ಮತ್ರ್ಯಕ್ಕೆ ಬಸವೇಶ್ವರನೆಂಬ ಗಣನಾಥನಾಮಮಂ ಪಡೆದು, ಭಕ್ತರಿಗೆ ಮುಖ್ಯವಾಗಿ ಭಕ್ತಿಯಂ ತೋರಿ, ಸತ್ಯದ ಬಟ್ಟೆಯಂ ಕಾಣದೆ, ಚಿದ್ಘನಲಿಂಗವ ಹೊಗಲರಿಯದೆ, ಬದ್ಧಕತನವನು ಸುಬದ್ಧವ ಮಾಡದೆ, ಶುದ್ಧಶೈವ ಕಪ್ಪಡಿಯ ಸಂಗಮನಾಥನಲ್ಲಿ, ಐಕ್ಯವಾದ ಚಿದ್ರೂಪ ಚಿತ್ಪ್ರಕಾಶಘನಲಿಂಗ, ಕೈಯಲ್ಲಿದ್ದಂತೆ ಹೊದ್ದಿದನೇಕರುದ್ರಮೂರ್ತಿಯಲ್ಲಿ. ರಜತಾದ್ರಿಯಲಿರ್ದು ಸುಬದ್ಧವಾಗಿ ಪ್ರಳಯವಾಗಿತ್ತು ರುದ್ರಲೋಕವೆಲ್ಲಾ. ರುದ್ರಗಣಂಗಳೆಲ್ಲರೂ ಮರ್ದನಂಗೆಯ್ದಲ್ಲಿ, ಸುದ್ದಿಯ ಹೇಳುವರನಾರನೂ ಕಾಣೆ. ಇನ್ನಿದ್ದವರಿಗೆ ಬುದ್ಧಿ ಇನ್ನಾವುದೊ ? ಶುದ್ಧಶೈವವ ಹೊದ್ದದೆ, ಪೂರ್ವಶೈವವನಾಚರಿಸದೆ, ಮಾರ್ಗಶೈವವ ಮನ್ನಣೆಯ ಮಾಡದೆ, ವೀರಶೈವವನಾರಾಧಿಸದೆ, ಆದಿಶೈವವನನುಕರಿಸದೆ, ಭೇದಿಸಬಾರದ ಲಿಂಗ ಕರದಲ್ಲಿದ್ದು, ಕಂಗಳಿನಲ್ಲಿ ನಿಂದು, ಮನದಲ್ಲಿ ಸಿಂಹಾಸನಂಗೆಯ್ದು, ಸಕಲೇಂದ್ರಿಯವ ಮರೆದು, ಕಾಯಜೀವನ ಹೊಲಿಗೆಯ ಬಿನ್ನಾಣದಿಂ ಬಿಚ್ಚಿ, ಬೇರೊಂದರಸಲಿಲ್ಲವಾಗಿ ಬಯಕೆಯರತು, ಭವಹಿಂಗಿ, ತಾನೆನ್ನದೆ ಇದಿರೆನ್ನದೆ, ಏನೂ ಎನ್ನದ ಲಿಂಗೈಕ್ಯಂಗೆ ಸ್ವಾನುಭಾವದಿಂದ ನಮೋ ನಮೋ [ಎಂಬೆ ] ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಲು ಆರೂರೊಳಗಾಡುವ ಪಕ್ಷಿ ಐವತ್ತೆರಡು ವೃಕ್ಷಂಗಳ ಹತ್ತುತ್ತ ಇಳಿಯುತ್ತ ಇರಲಾಗಿ ಉಲುಹು ಘನವಾಯಿತ್ತು ನೋಡಾ. ಒಂಬತ್ತು ಬಾಗಿಲೊಳಗೆ ಹೋಗುತ್ತ ಬರುತ್ತಿಪ್ಪುದಯ್ಯ. ಇದುಕಾರಣ, ಒಂಬತ್ತು ಬಾಗಿಲ ಮುಚ್ಚಿ ಐವತ್ತೆರಡು ವೃಕ್ಷಂಗಳ ಉಲುಹನಡಗಿಸಿ ಏಕವೃಕ್ಷದಲ್ಲಿ ಸ್ವಸ್ಥಿರವಾಗಿ ನಿಲಿಸಿ ಆರೂರಲಾಡುವ ಪಕ್ಷಿಯ ಪ್ರಳಯವ ತಪ್ಪಿಸಬಲ್ಲರೆ ಪ್ರಾಣಲಿಂಗಿಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉದಕದಂತೆ? ಕರ್ತೃವಿಲ್ಲಾಗಿ ಕರ್ಮವಿಲ್ಲ, ಕರ್ಮವಿಲ್ಲಾಗಿ ಜನನವಿಲ್ಲ, ಜನನವಿಲ್ಲಾಗಿ ಭೂತಾದಿ ಚರಿತ್ರ ಕರಣಾದಿ ಗುಣಂಗಳು ಮುನ್ನವೆ ಇಲ್ಲ. ಹಿಂದಣ ಜನನವಿಲ್ಲ, ಇಂದಿನ ಸ್ಥಿತಿಯಿಲ್ಲ, ಮುಂದಣ ಲಯವಿಲ್ಲ, ಆದಿ ಮಧ್ಯ ಅವಸಾನವಿಲ್ಲ, ಬಿಚ್ಚಿ ಬೇರಿಲ್ಲ, ಬೆರಸಿ ಒಂದಿಲ್ಲ. ಉಪಮಾತೀತ ಕೂಡಲಚೆನ್ನಸಂಗಾ ನಿಮ್ಮ ಶರಣನು
--------------
ಚನ್ನಬಸವಣ್ಣ
ಭಕ್ತರ ಹೆಚ್ಚು ಕುಂದು ಜಂಗಮದ ಹೆಚ್ಚು ಕುಂದೆಂಬುದನರಿಯಾ ಪ್ರಭುವೆ ? ನಿಮ್ಮ ಪ್ರಾಣವೆ ಬಸವಣ್ಣನ ಪ್ರಾಣ, ಬಸವಣ್ಣನ ಪ್ರಾಣವೆ ನಿಮ್ಮ ಪ್ರಾಣ ನಿಮ್ಮ ಕಾಯವೆ ಬಸವಣ್ಣನ ಕಾಯ, ಬಸವಣ್ಣನ ಕಾಯವೆ ನಿಮ್ಮ ಕಾಯ. ನೀವಿಲ್ಲದಿರೆ ಬಸವಣ್ಣನಿಲ್ಲ, ಬಸವಣ್ಣನಿಲ್ಲದಿರೆ ನೀವಿಲ್ಲ. ಇಂತಿದನೊಂದು ಬಿಚ್ಚಿ ಬೇರೆ ಮಾಡಬಾರದೆಂಬುದನರಿದು ಮತ್ತೆ ಬರಿದೆ ಮುನಿವರೆ ಬಲ್ಲವರು ? ನಡೆವ ವಾರುವ ಮುಗ್ಗಿದಡೆ ನಡೆಸಿಕೊಂಬುದಲ್ಲದೆ ಮಿಡಿ ಹರಿಯೆ ಹೊಯ್ದವರುಂಟೆ ಲೋಕದೊಳಗೆ ? ಮರಹಿಂದ ಬಂದ ಅವಗುಣವ ಸಂಪಾದಿಸದೆ ಜಿಜಯಂಗೈಯ್ವುದಯ್ಯಾ ನಿಮ್ಮ ಗೃಹಕ್ಕೆ ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಬಸವಣ್ಣನಾರೆಂಬುದ ನೀನೊಮ್ಮೆ ತಿಳಿದು ನೋಡಾ ಪ್ರಭುವೆ.
--------------
ಚನ್ನಬಸವಣ್ಣ
ಒಂದೆಂಬೆನೆ ? ಎರಡಾಗಿದೆ; ಎರಡೆಂಬೆನೆ ? ಒಂದಾಗಿದೆ. ಒಂದೆರಡೆಂಬ ಸಂದೇಹವಿದೇನೊ ? ಅಗಲಲಿಲ್ಲದ ಕೂಟಕ್ಕೆ ಬಿಚ್ಚಿ ಬೇರಾಗದ ಉಪದೇಶ ! ಗುರು ಶಿಷ್ಯರೆಂಬ ಭಾವಕ್ಕೆ ಭೇದವುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಸುಡುಗಾಡ ನಡುವೆ ಕೆಂದಾವರೆಯ ಕಮಲ ನೋಡಾ. ಆ ಕಮಲಕರ್ಣಿಕಕುಹರದಲ್ಲಿ ಹೊಗೆಯುಳಿದ ಬೆಂಕಿ ಭುಗಿಲೆಂದರಿಸಿತು ನೋಡಾ. ಬೆಕ್ಕು ಬಂದು ಕಪ್ಪೆಯ ಹೊತ್ತು ವೈದಿಕನ ಚೀಲದಲಿರ್ದ ಪರಿಮಳದ ಗಂಟಹಿಡಿದು ನೋಡಿ ಬಿಚ್ಚಿ ಸಚ್ಚಿನ್ನಾಟವ ಧರೆಯಾದಿ ಗಗನವ ಸೋಂಕಿಯಾಡುತ್ತಿರಲು ನೂರೊಂದುಕುಲ ಹದಿನೆಂಟು ಜಾತಿಯೊಳಗೆ ನಿಂದು ಪುರುಷ ಪತ್ನಿಯ ನುಂಗಿ ಗುರುನಿರಂಜನ ಚನ್ನಬಸವಲಿಂಗವು ಕುಲ ಜಾತಿ ಸ್ಥಲದ ಗಲಭೆಯನರಿಯದಿರ್ದ ತಾನಾಗಿ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->