ಅಥವಾ

ಒಟ್ಟು 27 ಕಡೆಗಳಲ್ಲಿ , 14 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂಮಿಯ ನೆಳಲಲ್ಲಿ ಉಂಬುತ ತಾಯ ಬೆಳಗಿನಲ್ಲಿರ್ದು ಮೂರು ಬಣ್ಣದ ಗಿರಿಯನೇರಿ, ಮೂರೈದು ಗತಿಯಿಂದೆ ಉರಿಯಮಂದಿರದೊಳಗಿರ್ಪ ಬಯಲಶೃಂಗಾರವ ಕಾಣಬಹುದೆ? ಭೂಮಿಯ ನೆಳಲ ಸುಟ್ಟು, ಊಟವ ಮೀರಿ, ತಾಯ ಕೊಂದು, ಬೆಳಗನುರುಹಿ, ಗಿರಿಯಬಣ್ಣವ ಕಳೆದು, ಮೇಲಕ್ಕೆ ನೋಡಿ ನಿಂದಲ್ಲಿ ಬಿಳಿಯ ಕುರುಹ ಕಂಡುಕೊಂಡು ಮೂರೈದು ಗತಿಯನರಿದು, ಎರಡು ಕಾಣದೆ ನಡೆದು ನಿಂದಲ್ಲಿ ಉರಿಯಮಂದಿರದೊಳಗಿರ್ಪ ಬಯಲಶೃಂಗಾರವ ಕಾಣಬಹುದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅವಿದ್ಯಾಪಟ್ಟಣದ ಹೊರಕೇರಿಯಲ್ಲಿ ಅಂಗವಿಲ್ಲದ ಉರಿಮಾರಿ ಬಿಳಿಯ ಸೀರೆಯನುಟ್ಟು ಹೆಂಡವ ಹೊತ್ತು ಮಾರುತ್ತಿಹಳು. ಆ ಹೆಂಡವ ಕುಡಿಯಬೇಕೆಂದು ಅವಿದ್ಯಾನಗರದ ಅರಸು ಮಂತ್ರಿಗಳು ಮೊದಲಾದ ಜನಂಗಳು ಪೋಗುತಿರ್ಪರು. ಹೆಂಡವ ಮಾಡಿ ಕಂಡವ ಕೊಡಳು. ಹೊನ್ನು ಇದ್ದವರಿಗೆ, ಸತಿಸಂಗದಲ್ಲಿದ್ದವರಿಗೆ, ಇಬ್ಬರ ಸಂಗದಲ್ಲಿ ವರ್ತಿಸಿದವರಿಗೆ ಸಂಗಮಾಡಳು. ಹೆಂಡ ಕೊಡಳು, ಕಂಡ ಮಾರಳು. ಕೈಕಾಲು ಕಣ್ಣು ಇಲ್ಲದ ಬಡವರು ಬಂದರೆ ಕಂಡವ ತಿನಿಸಿ, ಹೆಂಡ ಕುಡಿಸಿ, ಸಂಗಸುಖದಲ್ಲಿ ಅಗಲದೆ ಇರ್ಪಳು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಪ್ಪತ್ತೈದು ಬಿಳಿಯ ಮೂರುಗಾಲಿಯ ರಥದ ಮೇಲೆ ಮುತ್ತಿನ ಚಂಡು ಕೈಯಲ್ಲಿ ಹಿಡಿದು ಕಾಸಭೋಗದ ತೋಂಟದೊಳಗೆ ಕದಳಿಯ ಬನವ ಸುತ್ತಿ ವಯ್ಯಾಳಿಯ ಮಾಡುವ ವೀರಮಾಹೇಶ್ವರ ರಾಹುತನ ನೋಡಲು ಕಾಲಿಲ್ಲದೆ ನಡೆವರಿಗೆ ಪ್ರಿಯ, ಕೈಯಿಲ್ಲದೆ ಮುಟ್ಟುವರಿಗೆ ಸ್ನೇಹ, ಕಣ್ಣಿಲ್ಲದೆ ನೋಡುವರಿಗೆ ಪ್ರೀತ, ಕಿವಿಯಿಲ್ಲದೆ ಕೇಳುವರಿಗೆ ಸುಖ, ಬಾಯಿಲ್ಲದೆ ಸವಿವರಿಗೆ ಮಚ್ಚು, ಗುರುನಿರಂಜನ ಚನ್ನಬಸವಲಿಂಗದಂಗಕ್ಕೆ ಅಚ್ಚು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕರಿಯ ಕಂಬಳಿಯ ಮೇಲೆ ಬಿಳಿಯ ಪಾವಡವ ಹಾಕಿ, ಮಲತ್ರಯಯುಕ್ತವಾದ ಒಬ್ಬ ಹೊಲಸು ಪೃಷ*ದ ನರಮನುಜನ ಜಂಗಮನೆಂದು ಕರತಂದು ಗದ್ದುಗೆಯ ಮೇಲೆ ಕುಳ್ಳಿರಿಸಿ, ಅವರ ಎದುರಿಗೆ ತಪ್ಪುತಡಿಯ ಮಾಡಿದ ಪಾತಕರ ಅಡ್ಡಗೆಡವಿ ಮೂಗಿನ ದಾರಿ ತೆಗೆವರಂತೆ, ಹೊಟ್ಟೆಗಿಲ್ಲದೆ ಒಬ್ಬ ಬಡವನು ಧನಿಕನ ಮುಂದೆ ಅಡ್ಡಬಿದ್ದು ಬೇಡಿಕೊಳ್ಳುವಂತೆ, ಇಂತೀ ದೃಷ್ಟಾಂತದಂತೆ ಆಶೆ ಆಮಿಷ ತಾಮಸದಿಂದ ಮಗ್ನರಾದ ಭೂತದೇಹಿಗಳ ಮುಂದೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ಕಚ್ಚಿ, ಸಂಸಾರವಿಷಯದಲ್ಲಿ ಮಗ್ನರಾದ ಪಾತಕ ಮನುಜರು ಅಡ್ಡಬಿದ್ದು ಪಾದಪೂಜೆಯ ಮಾಡಿ ಪಾದೋದಕಪ್ರಸಾದ ಕೊಂಬುವರು. ಇವರು ಭಕ್ತರಲ್ಲ, ಅವನು ಜಂಗಮನಲ್ಲ. ಇಂತವರು ಕೊಂಬುವದು ಪಾದೋದಕಪ್ರಸಾದವಲ್ಲ. ಇಂತಪ್ಪ ದೇವಭಕ್ತರ ಆಚರಣೆ ನಡತೆಯೆಂತಾಯಿತೆಂದೊಡೆ ದೃಷ್ಟಾಂತ: ಒಬ್ಬ ಜಾರಸ್ತ್ರಿ ತನ್ನ ಉದರಪೋಷಣಕ್ಕೆ ಆಶೆಯ ಮಾಡಿ, ಒಬ್ಬ ವಿಟಪುರುಷನ ಸಂಗವಮಾಡಿದರೆ ಅವನು ಪರುಷನಾಗಲರಿಯನು, ಅವಳು ಸತಿಯಾಗಲರಿಯಳು. ಅದೇನು ಕಾರಣವೆಂದೊಡೆ ಹೊನ್ನಿಗಲ್ಲದೆ. ಮತ್ತಂ, ಆವನೊಬ್ಬ ಜಾತಿಹಾಸ್ಯಗಾರನು ರಾಜರ ಮುಂದೆ ತನ್ನ ಜಾತಿಆಟದ ಸೋಗನ್ನೆಲ್ಲ ತೋರಿ ಆ ರಾಜರ ಮುಂದೆ ನಿಂತು ಮಜುರೆಯ ಮಾಡಿ ಮಹಾರಾಜಾ ಎನ್ನೊಡೆಯ ಎನ್ನ ತಂದೆಯೇ ಎಂದು ಹೊಗಳಿ ನಿಮ್ಮ ಹೆಸರು ತಕ್ಕೊಂಡು ದೇಶದಮೇಲೆ ಕೊಂಡಾಡೇನೆಂದು ಬೇಡಿಕೊಂಡು ಹೋಗುವನಲ್ಲದೆ ಅವನು ತಂದೆಯಾಗಲರಿಯನು, ಇವನು ಮಗನಾಗಲರಿಯನು. ಅದೇನು ಕಾರಣವೆಂದೊಡೆ: ಒಡಲಕಿಚ್ಚಿಗೆ ಬೇಡಿಕೊಳ್ಳುವನಲ್ಲದೆ. ಇಂತೀ ದೃಷ್ಟಾಂತದಂತೆ ಒಡಲ ಉಪಾಧಿಗೆ ಪೂಜೆಗೊಂಬರು ವ್ರತನಿಯಮನಿತ್ಯಕ್ಕೆ ಪೂಜೆಯ ಮಾಡುವರು ಅವರು ದೇವರಲ್ಲ, ಇವರು ಭಕ್ತರಲ್ಲ. ಅದೇನು ಕಾರಣವೆಂದೊಡೆ- ಉಪಾಧಿ ನಿಮಿತ್ಯಕಲ್ಲದೆ. ಇಂತಪ್ಪ ವೇಷಧಾರಿಗಳಾದ ಭಿನ್ನ ಭಾವದ ಜೀವಾತ್ಮರ ಪ್ರಸಾದವೆಂತಾಯಿತೆಂದಡೆ ತುರುಕ ಅಂತ್ಯಜರೊಂದುಗೂಡಿ ಸರ್ವರೂ ಒಂದೇ ಆಗಿ ತೋಳ ಬೆಕ್ಕು ನಾಯಿಗಳ ತಿಂದ ಹಾಗೆ, ಸರ್ವರೂ ತಿಂದು ಹೋದಂತೆ ಆಯಿತಯ್ಯ. ಇಂತಪ್ಪವರಿಗೆ ಭವಹಿಂಗದು ಮುಕ್ತಿದೋರದು. ಮತ್ತಂ, ಅದೆಂತೆಂದೊಡೆ: ತನುವೆಂಬ ಭೂಮಿಯ ಮೇಲೆ ಮನವೆಂಬ ಕರಿಕಂಬಳಿಯ ಗದ್ದುಗೆಯ ಹಾಕಿ, ಅದರ ಮೇಲೆ ಪರಮಶಾಂತಿ ಜ್ಞಾನವೆಂಬ ಮೇಲುಗದ್ದುಗೆಯನಿಕ್ಕಿ, ಅಂತಪ್ಪ ಪರಮಶಾಂತಿಯೆಂಬ ಮೇಲುಗದ್ದಿಗೆಯ ಮೇಲೆ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತವಾದ ಪರಮನಿರಂಜನವೆಂಬ ಜಂಗಮವ ಮೂರ್ತವ ಮಾಡಿಸಿ, ಪಾದಪೂಜೆಯ ಮಾಡಿ ಪಾದೋದಕ ಪ್ರಸಾದವ ಕೊಳ್ಳಬಲ್ಲರೆ ಆತ ಆನಾದಿ ಭಕ್ತ. ಇಂತೀ ಭೇದವ ತಿಳಿದು ಕೊಡಬಲ್ಲರೆ ಆತ ಅನಾದಿ ಜಂಗಮ. ಇಂತಪ್ಪವರಿಗೆ ಭವಬಂಧನವಿಲ್ಲ, ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವದು. ಇಂತಪ್ಪ ವಿಚಾರವನು ಸ್ವಾನುಭಾವಜ್ಞಾನದಿಂ ತಿಳಿಯದೆ ಅಜ್ಞಾನದಿಂದ ಮಾಡುವ ಮಾಟವೆಲ್ಲ ಜೊಳ್ಳು ಕುಟ್ಟಿ ಹೊಳ್ಳು ಗಾಳಿಗೆ ತೂರಿದಂತೆ ಆಯಿತ್ತು ನೋಡೆಂದ ನಿಮ್ಮ ಶರಣ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಧರೆಯಗಲದ ಜಲಕ್ಕೆ ಕರಿಯ ನೂಲಿನ ಜಾಲ, ಕರಿಯ ಕಬ್ಬಿಲ ಹೊಕ್ಕು ಸೇದುತ್ತಿರಲು, ಕರದ ಕೈಯಲಿ ಗಾಳ, ಸೂಕ್ಷ್ಮವಿಚಾರದಲ್ಲಿ, ಅರಿದುಕೊಂಬಡೆ ಗಾಳ ಹೊರಗಾಯಿತ್ತು. ಹರಿವ ಜಲಗಳು ಬತ್ತಿ ಕೆಲಕೆ ಉಷ್ಣವು ತೋರಿ ಬಿಳಿಯ ಮಳಲಲ್ಲಿಗಲ್ಲಿಗೆ ಕಾಣಬರಲು, ಕರಿಯ ಕಬ್ಬಿಲ ಬಂದು, ಉರಿಯ ಮೆಟ್ಟಿ ನೋಡಿ ಕಾಣದೆ, ಜಾಲವ ಹೊತ್ತುಕೊಂಡು ಹೋಹಾಗ, ಹೊಂಗರಿಯ ಬಿಲ್ಲಕೋಲನೊಂದು ಕೈಯಲಿ ಹಿಡಿದು, ಒಂದು ಕೈಯಲಿ ಬಿದಿರಕ್ಕಿವಿಡಿದು, ದಂಗಟನ ಪುಣುಜೆಯರು ಮುಂದೆ ಬಂದಾಡಲು, ಕಂಗಳ ಮುತ್ತು ಸಡಿಲಿ ಪಾದದ ಮೇಲೆ ಬೀಳಲು, ಅಂಗಯ್ಯ ಒಳಗೊಂದು ಅರಿದಲೆ ಮೂಡಿರಲು ದಂಗಟನ ಹೊತ್ತುಕೊಂಡಾಡುವಾಗಲ್ಲಿ ಶೃಂಗಾರ ಸಯವಾಯಿತ್ತು, ಕೂಡಲಚೆನ್ನಸಂಗಯ್ಯನಲ್ಲಿ ಭಕ್ತ್ಯಂಗನೆಯ ನಾವು ಕಂಡೆವಯ್ಯಾ.
--------------
ಚನ್ನಬಸವಣ್ಣ
ಬಿಳಿಯ ಮುಗಿಲ ನಡುವಣ ಕರಿಯನಕ್ಷತ್ರ ಮಧ್ಯದಲ್ಲಿ ಉರಿಯ ಅಂಕುರ ಹುಟ್ಟಿ ಒಂದೆರಡೆಂಬಂತೆ ತೋರುತ್ತದೆ, ಹೊಸ್ತಿಲ ಜ್ಯೋತಿಯಂತೆ ಒಳಹೊರಗೆ ಬೆಳಗುತ್ತದೆ. ಅದು ನೋಡಿದಡೆ ಘನ, ನೋಡದಿದ್ದಡೆ ಸಹಜ. ಈ ಭೇದವ ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣ ಬಲ್ಲನು. ಬೆಸಗೊಂಬ ಬಾರಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ನಿರ್ವಯಲ ಸ್ಥಲದಲ್ಲಿ ಬಿಳಿಯ ತಾವರೆ ಶತಸಹಸ್ತ್ರ ದಳದಿಂದ ಪ್ರಭಾವಿಸುತ್ತಿಹುದು ನೋಡಾ. ಅದು ಎಳೆ ಮಿಂಚು ಶತಕೋಟಿಗಳ ಬೆಳಗ ಕೀಳ್ಪಡಿಸುವ ಅಮಲ ಬ್ರಹ್ಮ ನೋಡಾ. ಆ ಬ್ರಹ್ಮದಂಗವ ಬಗಿದುಹೊಕ್ಕು, ದೀಪ ದೀಪವ ಬೆರಸಿದಂತೆ, ಏಕರಸಮಯವಾದ ಅಚ್ಚ ಲಿಂಗೈಕ್ಯನು, ಅಚಲಿತ ನಿರಾಳನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿಯ ಲಿಂಗವ ಮೇದಿನಿಗೆ ತಂದು, ಮರ್ತ್ಯಲೋಕದಲ್ಲಿ ಮಹಾಮನೆಯ ಕಟ್ಟಿದನಯ್ಯಾ ಸಂಗನಬಸವಣ್ಣನು. ಆ ಮನೆಯ ನೋಡಲೆಂದು ಹೋದಡೆ, ಆ ಗೃಹ ಹೋಗದ ಮುನ್ನವೆ ಎನ್ನ ನುಂಗಿತ್ತಯ್ಯಾ ! ಅದಕ್ಕೆ ಕಂಭ ಒಂದು, ತೊಲೆ ಆರು, ಜಂತೆವಲಗೆ ಮೂವತ್ತಾರು ಧರೆಯಾಕಾಶವ ಹೊದ್ದದ ಕೆಸರುಗಲ್ಲು ಒಂಬತ್ತು ಬಾಗಿಲು, ಬಿಯ್ಯಗವಿಕ್ಕಿಹವು. ಬೇರೊಂದು ಬಾಗಿಲು ಉರಿಯನುಗುಳುತಿರ್ಪುದು. ಮುತ್ತಿನ ಕಂಭದ ಮೇಲುಕಟ್ಟಿನ ಮೇಲೆ ಮಾಣಿಕ್ಯದ ಶಿಖರಿ ! ಆ ಶಿಖರಿಯ ತುದಿಯಲ್ಲಿ ಬಿಳಿಯ ಹೊಂಗಳಸವಿಪ್ಪುದು. ಅದು ಕಾಬವರಿಗೆ ಕಾಣಬಾರದು. ಕಾಣಬಾರದವರಿಗೆ ಕಾಣಬಪ್ಪುದು. ಅಲ್ಲಿ ಹತ್ತು ಮಂದಿ ಪರಿಚಾರಕರು ಎಡೆಯಾಡುತಿಪ್ಪರು. ಇಬ್ಬರು ದಡಿಕಾರರು ಬಾಗಿಲ ಕಾಯ್ದಿಪ್ಪರು. ಒಬ್ಬಾಕೆ ಎಡೆಯಾಡುತ್ತಿಪ್ಪಳು. ಒಬ್ಬಾಕೆ ಲಿಂಗಾರ್ಚನೆಗೆ ನೀಡುತ್ತಿಪ್ಪಳು. ಒಬ್ಬಾಕೆ ಸುಯಿಧಾನಂಗಳೆಲ್ಲವನು ಶೋಧಿಸಿ ತಂದುಕೊಡುತ್ತಿಪ್ಪಳು. ಒಬ್ಬಾಕೆ ಉರಿಯಿಲ್ಲದಗ್ನಿಯಲಿ ಪಾಕವ ಮಾಡುತ್ತಿಪ್ಪಳು. ಒಬ್ಬಾಕೆ ಲಿಂಗಜಂಗಮಕ್ಕೆ ಮಾಡಿ, ನೀಡಿ, ಊಡಿ, ಉಣಿಸಿ ತೃಪ್ತಿಯ ಮಾಡುತ್ತಿಪ್ಪಳು_ ಒಂದಡ್ಡಣಿಗೆಯ ಮೇಲೆ, ಐದು ಅಗಲೊಳಗೆ ಇಟ್ಟ ಬೋನವನು ಒಬ್ಬನುಂಡಡೆ, ಪ್ರಮಥಗಣಂಗಳೆಲ್ಲರೂ ಆತನ ಒಕ್ಕುದ ಕೊಳಲೆಂದು ಬಂದು, ಆ ಮನೆಯ ಹೊಕ್ಕು ನಿಶ್ಚಿಂತನಿವಾಸಿಗಳಾದರು. ಗುಹೇಶ್ವರನ ಶರಣ ಸಂಗನಬಸವಣ್ಣನ ಮಹಾಮನೆಯ ಕಂಡು ಧನ್ಯನಾದೆನು ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
-->