ಅಥವಾ

ಒಟ್ಟು 26 ಕಡೆಗಳಲ್ಲಿ , 17 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಶಿಷ್ಯ ಸಂಬಂಧವೆಂದು ನುಡಿಯುತಿರ್ಪರೆಲ್ಲರು; ಗುರುಶಿಷ್ಯ ಸಂಬಂಧವನಾರೂ ಅರಿಯರಲ್ಲ ! ಗುರುಶಿಷ್ಯ ಸಂಬಂಧವೆಂತೆಂದೊಡೆ ಹೇಳಿಹೆವು ಕೇಳಿರೋ ಸದ್ಭಕ್ತ ಶರಣಜನಂಗಳೆಲ್ಲರು. ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವ ಕಾಲದಲ್ಲಿ ಆ ಶಿಷ್ಯನ ಸ್ಥೂಲತನು ಸೂಕ್ಷ್ಮತನು ಕಾರಣತನುವೆಂಬ ತನುತ್ರಯಂಗಳಲ್ಲಿ ಮುಸುಕಿದ ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳ ಕಳೆದು, ಮಾಯಾಪ್ರಕೃತಿಕಾಯದ ಪೂರ್ವಾಶ್ರಯವನು ಚಿದಗ್ನಿಯಿಂದೆ ಸುಟ್ಟು ಚಿತ್ಕಾಯವೆಂದೆನಿಸಿ, ಆ ಚಿತ್ಕಾಯಸ್ವರೂಪವಾದ ಶಿಷ್ಯನ ಮಸ್ತಕದ ಮೇಲೆ ಹಸ್ತವನಿರಿಸಿ ಮಥನವ ಮಾಡಿ, ಶಿಷ್ಯನ ಭಾವದ ಘಟ್ಟಿಯನೆ ಕರದಲ್ಲಿ ಕೊಡುವುದು. ಅದೆಂತೆಂದೊಡೆ : ``ಜ್ವಲತ್ಕಾಲಾನಲಾಭಾಸಾ ತಟಿತ್ಕೋಟಿ ಸಮಪ್ರಭಾ | ತಚ್ಚೋಧ್ರ್ವಂತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಳಾ || ಯಥಾಕಲಾಸ್ತಥಾಭಾವೋ ಯಥಾಭಾವಸ್ತಥಾ ಮನಃ | ಯಥಾಮನಸ್ತಥಾ ದೃಷ್ಟಿಃ ಯಥಾದೃಷ್ಟಿಸ್ತಥಾ ಸ್ಥಲಂ || ಏವಂ ಭೇದಾಃ ಕಳಾದೇವಿ ಸದ್ಗುರುಶಿಷ್ಯಮಸ್ತಕೇ | ಹಸ್ತಾಬ್ಜಮಥನಗ್ರಾಹ್ಯಂ ತಸ್ಯ ಭಾವಃ ಕರೋದಿತಃ || ಏತೇ ಗುರುಕರಾಜಾಜತಾಃ ಲಿಂಗಭಕ್ತಾ ವಿಭೇದತಃ | ನಾದಬಿಂದುಕಳಾತೀತಂ ಗುರೂಣಾಂ ಲಿಂಗಮುದ್ಭವಂ ||'' -ಪರಮರಹಸ್ಯ ಎಂಬ ಶಿವಾಗಮೋಕ್ತವಾಗಿ, ಆ ಶಿಷ್ಯನ ಪಶ್ಚಿಮದಿಶೆಯಲ್ಲಿ ಬೆಳಗುತಿರ್ಪ ನಿತ್ಯನಿರಂಜನ ಪರಮಕಳೆಯ ಧ್ಯಾನಿಸಿ ಭಾವಸ್ಥಲಕ್ಕೆ ತಂದು, ಆ ಭಾವಸ್ಥಲದಿಂದೆ ಮನಸ್ಥಲಕ್ಕೆ ತಂದು, ಆ ಮನಸ್ಥಲದಿಂದೆ ದೃಷ್ಟಿಸ್ಥಲಕ್ಕೆ ತಂದು, ಆ ದೃಷ್ಟಿಸ್ಥಲದಿಂದೆ ಕರಸ್ಥಲಕ್ಕೆ ತಂದು, ಸಾಕಾರಲಿಂಗಮೂರ್ತಿಯಲ್ಲಿ ತುಂಬಿ ಇಷ್ಟಲಿಂಗವೆನಿಸಿ ಕರಸ್ಥಲದಲ್ಲಿ ಮೂರ್ತಿಗೊಳಿಸಿ ಆ ಲಿಂಗಕ್ಕೆ ಜಂಗಮದ ಪಾದತೀರ್ಥ ಪ್ರಸಾದವನೆ ಪ್ರಾಣಕಳೆಯೆಂದರ್ಪಿಸಿ, ಮತ್ತಂ, ಆ ಇಷ್ಟಲಿಂಗವೆ ಅನಿಷ್ಟಪಂಚಕಂಗಳೆಂಬ ಕತ್ತಲೆಯನೋಡಿಸುವುದಕ್ಕೆ ಚಿತ್ಸೂರ್ಯನೆಂದು ನಂಬುಗೆಯನಿಂಬುಗೊಳಿಸಿ, ಮತ್ತಮಾಲಿಂಗದಲ್ಲಿ ವೃತ್ತ ಕಟಿ ವರ್ತುಳ ಗೋಮುಖ ನಾಳ ಗೋಳಕವೆಂಬ ಆರು ಸ್ಥಾನಂಗಳ ತೋರಿ, ಆ ಆರು ಸ್ಥಾನಂಗಳಲ್ಲಿ ನಕಾರ ಮಕಾರ ಶಿಕಾರ ವಕಾರ ಯಕಾರ ಓಂಕಾರ ಎಂಬ ಆರು ಪ್ರಣವಂಗಳನೆ ಬೋಧಿಸಿ, ಆ ಆರು ಪ್ರಣವಂಗಳನೆ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಎಂಬ ಆರು ಲಿಂಗಗಳೆಂದರುಹಿ, ಆ ಆರು ಲಿಂಗಂಗಳಿಗೆ ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ ಎಂಬ ಆರು ಇಂದ್ರಿಯಂಗಳನೆ ಆರು ಮುಖಗಳೆಂದು ತಿಳುಹಿ, ಆ ಆರು ಮುಖಂಗಳಿಗೆ ಗಂಧ ರುಚಿ ರೂಪು ಸ್ಪರ್ಶನ ಶಬ್ದ ತೃಪ್ತಿ ಎಂಬ ಆರು ಪದಾರ್ಥಂಗಳನು ಶ್ರದ್ಧೆ ನಿಷೆ* ಸಾವಧಾನ ಅನುಭಾವ ಆನಂದ ಸಮರಸ ಎಂಬ ಆರು ಭಕ್ತಿಗಳಿಂದರ್ಪಿಸುವ ಸಕೀಲದ ವಿವರವ ತೋರಬಲ್ಲಾತನೇ ಗುರು. ಆ ಗುರುವಿನ ಕರುಣದಿಂದೆ ಪಡೆದ ಇಷ್ಟಲಿಂಗವನು ಕರಸ್ಥಲ ಮನಸ್ಥಲ ಭಾವಸ್ಥಲಮಂಟಪದಲ್ಲಿ ಮೂರ್ತಿಗೊಳಿಸಿ, ಸಗುಣಪೂಜೆ ನಿರ್ಗುಣಪೂಜೆ ಕೇವಲ ನಿರ್ಗುಣಪೂಜೆಯ ಮಾಡಿ, ಆ ಲಿಂಗದ ಮಹಾಬೆಳಗಿನೊಳಗೆ ತನ್ನಂಗದ ಕಳೆಯನಡಗಿಸಿ, ಉರಿ-ಕರ್ಪುರ ಸಂಯೋಗದಂತೆ ಅವಿರಳ ಸಮರಸವಾಗಿರ್ಪಾತನೆ ಶಿಷ್ಯನು. ಇಂತೀ ಅರುಹು ಆಚಾರಸನ್ನಿಹಿತ ಗುರುಶಿಷ್ಯರಿಬ್ಬರು ಬಯಲು ಬಯಲ ಬೆರದಂತೆ ನಿರವಯಲ ಪರಬ್ರಹ್ಮದಲ್ಲಿ ನಿಷ್ಪತ್ತಿಯನೈದಿರ್ಪರು ನೋಡಾ ! ಇಂತೀ ಅರುಹಿನ ವಿಚಾರವನರಿಯದೆ ಮಾಡುವ ಮಾಟವೆಲ್ಲ ಅಜ್ಞಾನಗಡಣದೊಳಗು. ಈ ಅಜ್ಞಾನಗುರುಶಿಷ್ಯರ ವಿಧಿಯೆಂತಾಯಿತ್ತೆಂದಡೆ, ಹುಟ್ಟುಗುರುಡನ ಕೈಯ ಕೆಟ್ಟಗಣ್ಣವ ಹಿಡಿದು ಬಟ್ಟೆಯ ಕಾಣದೆ ಕಮರಿಯ ಬಿದ್ದು ಸತ್ತಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತುತ್ತಿನಾಸೆಗೆ ಲಿಂಗವ ಕೊಟ್ಟುಹೋಹ ವ್ಯರ್ಥ ಮೂಳ ನಿಮಗೆ ಗುರುವಾದನೈಸೆ? ಸತ್ಯಸದಾಚಾರವ ಬಲ್ಲಡೆ ತತ್ವಜ್ಞಾನವ ಬೋಧಿಸಿ, ಆ ಮಹಾಲಿಂಗಕ್ಕೂ ನಿಮಗೂ ಸಂಬಂಧವ ಮಾಡದಿಹ ಕತ್ತೆ ಗುರುವಿನ ಪಾದವ ಹಿಡಿದು ಕೆಟ್ಟಿರಲ್ಲಾ! ಹತ್ತಿಲಿದ್ದ ಲಿಂಗವ ಕಿರಿದು ಮಾಡಿ, ಕ್ಷೇತ್ರದ ಲಿಂಗವ ಹಿರಿದು ಮಾಡಿ; [ಕಂಕುಳ ಹತ್ತಿದ]ಲಿಂಗವ ಕಿರಿದು ಮಾಡಿ, ಕೊಂಕಣ ಹತ್ತಿ ಲಿಂಗವ ಹಿರಿದು ಮಾಡಿ; ಎಂತುಟೋ ನಿನ್ನ ಲಿಂಗವ ಕೊಡಲಾರದಿದ್ದಡೆ! ಹರುಗೋಲು ಹೊರಲಾರ, ಭೋಂಕನೆ ಮುಳುಗುವನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆದಿ ಅನಾದಿಯಿಂದತ್ತತ್ತಲಾದ ಆ ಮಹಾಘನ ಬ್ರಹ್ಮವ ತಂದೆನ್ನಂಗೈಯೊಳಗಿರಿಸಿದ ನೋಡಾ. ಮೂದೇವರರಿಯದ ಅಸಮ ಚಿತ್ಪ್ರಣವಲಿಂಗವ ಬೋಧಿಸಿ ತಂದೆನ್ನ ಮನದಕೈಯೊಳಗಿರಿಸಿದ ನೋಡಾ. ನಾದ ಬಿಂದು ಕಲಾತೀತ ಗಮನಾಗಮನ ನಿರಂಜನ ಚನ್ನಬಸವಲಿಂಗನ ತಂದೆನ್ನಭಾವದಕೈಯೊಳಗಿರಿಸಿದ ನೋಡಾ. ಎನ್ನ ಸರ್ವಾಂಗದೊಳಹೊರಗೆ ತಾನೇ ಪರಿಪೂರ್ಣನಾಗಿರ್ದ ನಿರಂಜನ ಚನ್ನಬಸವಲಿಂಗವು ಬೆಳಗಿನ ಮಂಟಪದೊಳಗಿರ್ದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಸ್ಥೂಲ ಪಂಚಭೂತಕಾಯದ ಪಂಚತತ್ವಂಗಳ ವಿವರಿಸಿ ಬೋಧಿಸಿ ಕಳೆದು, ಸೂಕ್ಷ್ಮ ಪಂಚಭೂತಕಾಯದ ತನ್ಮಾತ್ರಗುಣಂಗಳ ವಿವರದ ಭೇದವ ಭೇದಿಸಿ ತೋರಿ ಕಳೆದು, ಕಾರಣಪಂಚಭೂತ ಕಾಯದ ಕರಣವೃತ್ತಿಗಳ ಮಹಾವಿಚಾರದಿಂದ ತಿಳುಹಿ ವಿವರಿಸಿ ಕಳೆದು, ಸ್ಥೂಲಪಂಚಾಚಾರದಿಂದ ತಿಳುಹಿ ವಿವರಿಸಿ ಕಳೆದು, ಸ್ಥೂಲಪಂಚಭೂತಕಾಯದಲ್ಲಿ ಇಷ್ಟಲಿಂಗವ ಪ್ರತಿಷೆ*ಯ ಮಾಡಿ ಸದಾಚಾರಸ್ಥಳಕುವ ನೆಲೆಗೊಳಿಸಿ, ಸೂಕ್ಷ್ಮಪಂಚಭೂತಕಾಯದಲ್ಲಿ ಪ್ರಾಣಲಿಂಗ ಪ್ರತಿಷೆ*ಯ ಮಾಡಿ, ಮಹಾವಿಚಾರದ ಅನುಭಾವವ ನೆಲೆಗೊಳಿಸಿ, ಕಾರಣಪಂಚಭೂತಕಾಯದಲ್ಲಿ ತೃಪ್ತಿಲಿಂಗವ ಪ್ರತಿಷೆ*ಯ ಮಾಡಿ ಪರಮಾನಂದಸುಜ್ಞಾನವ ನೆಲೆಗೊಳಿಸಿ;_ ಇಂತೀ ಸ್ಥೂಲಸೂಕ್ಷ್ಮ ಕಾರಣವೆಂಬ ತನುತ್ರಯಂಗಳನೇಕೀಭವಿಸಿ ತೋರಿ, ಪೂರ್ವಜನ್ಮದ ನಿವೃತ್ತಿಯ ಮಾಡಿ, ಲಿಂಗಜನ್ಮದ ಪ್ರತಿಷೆ*ಯ ಮಾಡಿ ಎನ್ನ ಕೃತಾರ್ಥನ ಮಾಡಿದ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಭವಿಯ ಕಳೆದು, ಭವಿಯ ಬೋಧಿಸಿ ಬೇಡುವರು ಸಂಬಂಧಿಗಳಲ್ಲ. ರವಿಯ ಕಪ್ಪ ಕಳೆಯಲರಿಯದವರು ಸಂಬಂಧಿಗಳಲ್ಲ. ಭವಿಯ ಕಳೆದು ಭಕ್ತನ ಮಾಡುವವರು ಭಕ್ತರಲ್ಲ, ಸಂಬಂಧಿಗಳಲ್ಲ. ಇಂತೀ ಸಾರಾಯವಾರಿಗೂ ಅಳವಡದಾಗಿ ಕೊಂಡ ವ್ರತವನನುಸರಿಸಿ ನಡೆದು, ನಿಂದೆಗೆ ಬಂದ ಸಂದೇಹಿಯನೆಂತು ಸಂಬಂಧಿಯೆಂಬೆ ಕೂಡಲಚೆನ್ನಸಂಗಯ್ಯಾ?
--------------
ಚನ್ನಬಸವಣ್ಣ
ಅಯ್ಯಾ, ದುರುಳಕಾಮಿನಿಯರಿಗೆ ಎರಗುವ ಹೊಲೆಮನಸೆ, ಗುರುವಿಂಗೆ ಎರಗಿ ಎರಕಡರ್ದಡಾತನ ಗುರುಕರಜಾತನೆಂಬೆ. ಉದರದ ನೆಲೆಯನರಿದಾತನ ಉದಾಸಿಯೆಂಬೆ. ಜನನದ ನೆಲೆಯನರಿದಾತನ ಜಂಗಮವೆಂಬೆ. ಮರಣದ ನೆಲೆಯನರಿದಾತನ ಮಹಾಂತಿನೊಳಗಣ ಹಿರಿಯನೆಂಬೆ. ಸಕಲದ ಹಸಿಗೆಯ ನೆಲೆಯನರಿದಾತನ ಹಂಚು ಕಂತೆಯೆಂಬೆ. ಅತ್ಯತಿಷ*ದ್ದಶದಿಂದತ್ತತ್ತ ಬೆಳಗುವ ಮಹಾಬೆಳಗನರಿದಾತನ ಅತೀತನೆಂಬೆ. ಅರುಹು ಅರತು, ಮರಹು ನಷ್ಟವಾಗಿ ಅರುಹು ಕರಿಗೊಂಡಾತನ ಮಂಕು ಮರುಳು ಎಂಬೆ. ತನುಧರ್ಮ ತರಹರಿಸಿ, ಮನದ ಸಂಚಲವಳಿದು ಒಳಗೆ ನುಣ್ಣಗಾಗಬಲ್ಲಡೆ ಬೋಳಕಾಕಾರ, ಬೋಳನಿರ್ವಾಣಿಗಳೆಂಬೆ. ಹೀಂಗಲ್ಲದೆ ತಾಯಿಸತ್ತ ತಬ್ಬಲಿಯಂತೆ, ಹಲಬರಿಗೆ ಹಲ್ಲದೆರೆದು, ಹಲಬರಿಗೆ ಬೋಧಿಸಿ ತನ್ನ ಉದರವ ಹೊರೆವ ಸಂದೇಹಿಗಳ ಕಂಡು ಎನ್ನ ಮನ ಸಂದೇಹಿಸಿತ್ತು ಕಾಣಾ ಮಹಾಗುರು ಶಾಂತೇಶ್ವರಪ್ರಭುವೆ.
--------------
ಗುರುವರದ ವಿರೂಪಾಕ್ಷ
ಬೇವಿನಮರಕ್ಕೆ ಬೆಲ್ಲದ ಕಟ್ಟೆಯ ಕಟ್ಟಿ, ಚಿನ್ನಿ ಸಕ್ಕರೆಯ ಖಾತವ ಹಾಕಿ, ಜೇನುತುಪ್ಪ ನೊರೆವಾಲೆಂಬ ನೀರೆರೆದರೆ, ಬೇವಿನಮರವಳಿದು ಬೆಲ್ಲದ ಮರವಾಗಬಲ್ಲುದೆ ? ಮಾವಿನಮರಕ್ಕೆ ವಿಷದ ಕಟ್ಟೆಯ ಕಟ್ಟಿ, ಉಪ್ಪಿನ ಖಾತವ ಹಾಕಿ, ಬೇವಿನ ಈಚಲ ತಾಡಿನ ಹಣ್ಣು ಮೊದಲಾದ ತ್ರಿವಿಧ ಹಣ್ಣಿನ ರಸವೆಂಬ ನೀರೆರೆದರೆ ಮಾವಿನಮರವಳಿದು ಬೇವು ಈಚಲ ತಾಡ ಮೊದಲಾದ ತ್ರಿವಿಧ ವೃಕ್ಷವಾಗುವುದೆ ? ಇಂತೀ ದೃಷ್ಟಾಂತದಂತೆ ಲೋಕದ ಮಧ್ಯದಲ್ಲಿ ಸಂಸಾರವಿಷಯರಸಪೂರಿತವಾದ ಕಡುಪಾತಕ ಜಡಜೀವಿಗಳಾದ ಕುರಿಮನುಜರ ತಂದು ಭಿನ್ನಜ್ಞಾನಿಗಳಾದ ಆಶಾಬದ್ಭ ಗುರುಮೂರ್ತಿಗಳು ಅಂತಪ್ಪ ಜಡಮತಿಗಳಿಗೆ ವಿಭೂತಿಯ ಪಟ್ಟವಗಟ್ಟಿ, ರುದ್ರಾಕ್ಷಿಯ ಧರಿಸಿ, ಅವನ ಮಸ್ತಕದ ಮೇಲೆ ಪತ್ರಿ ಪುಷ್ಪವನಿಟ್ಟು, ಮೂರೇಳು ಪೂಜೆಯ ಮಾಡಿ, ಇದಕ್ಕೆ ದೃಷ್ಟಾಂತ : ಹಸಿಯ ಕುಳ್ಳಲ್ಲಿ ಬೆಂಕಿಯನಿಟ್ಟು ಊದಿ ಪುಟುಮಾಡುವ ಮರುಳರಂತೆ, ಬರಡು ಆವಿನ ಹಾಲ ಕರಸಿಹೆನೆಂಬ ಅಧಮನಂತೆ, ದುಮ್ಮಡಿಯ ಹಚ್ಚಿ ಊದಿ ಕಿವಿಯೊಳಗಣ ತೊನಸಿ ತೆಗೆವ ಗಂಧಿಗಾರನಂತೆ, ಅಂತಪ್ಪ ಮಲತ್ರಯಯುಕ್ತವಾದ ಜೀವಾತ್ಮರ ದಕ್ಷಿಣ ವಾಮಭಾಗದ ಕರ್ಣದಲ್ಲಿ ತಾರಕಮಂತ್ರದುಪದೇಶವನು ತಮ್ಮ ನಿಲವ ತಾವರಿಯದ ಭಿನ್ನಭಾವದ ಗುರುಮೂರ್ತಿಗಳು ಊದಿ ಊದಿ ಬಾಯಾರಿ ಗಂಟಲೊಣಗಿ ಧ್ವನಿಬಿದ್ದು ದಣಿದು ಹೋದರಲ್ಲದೆ ಸದ್ಭಕ್ತ ಶರಣಜನಂಗಳು ಮಾಡಲರಿಯರು. ಮತ್ತಂ, ಚಿದಂಶಿಕನಾದಾತ್ಮನು ಶಿವಕೃಪೆಯಿಂ ಸುಜ್ಞಾನೋದಯವಾಗಿ, ಸಕಲಪ್ರಪಂಚವನ್ನೆಲ್ಲ ನಿವೃತ್ತಿಯ ಮಾಡಿ, ಶ್ರೀಗುರುಕಾರುಣ್ಯವ ಪಡೆದ ಲಿಂಗಾಂಗಸಂಬಂಧಿಯಾದ ಸದಾಚಾರಸದ್ಭಕ್ತ ಶರಣಜನಂಗಳಿಗೆ ವೇದಾಂತಿ, ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ ಸಕಲ ಭಿನ್ನಭಾವದ ಜೀವಾತ್ಮರು ವೇದಾಗಮ ಶಾಸ್ತ್ರ ಪುರಾಣ ತರ್ಕ ತಂತ್ರಗಳೆಲ್ಲವು ತಮ್ಮ ವೇದಾಗಮ ಬೋಧಿಸಿ ಶಿವಾಗಮವನೋದಿದ ಶಿವಶರಣರಿಗೆ ಹೇಳಿ ಹೇಳಿ ತಾವೇ ಬೇಸತ್ತು ಬಳಲಿ ಬೆಂಡಾಗಿ ಮುಖಭಂಗಿತರಾಗಿ ಹೋದರಲ್ಲದೆ ಅವರೇನು ಮರಳಿ ಜಡಮತಿಜೀವರಾಗಲರಿಯರು. ಅಂತಪ್ಪ ಶಿವಜ್ಞಾನಸಂಪನ್ನರಾದ ಶರಣಜನಂಗಳು ಎಷ್ಟು ಪ್ರಪಂಚವ ಮಾಡಿದಡೂ ಮಲತ್ರಯಯುಕ್ತವಾದ ಜೀವರಾಗಲರಿಯರು. ಅವರು ಎಷ್ಟು ಕ್ರೀಯವನಾಚರಿಸಿದೊಡೆಯು ಫಲಪದವಿಯ ಪಡೆದು ಭವಭಾರಕ್ಕೆ ಬರುವ ಜಡಮತಿ ನರಕಜೀವಿಗಳಾಗಲರಿಯರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಈ ಲೋಕದಲ್ಲಿ ಸತ್ಕಿ ್ರೀಯನೆ ಪ್ರತಿಷೆ*ಯ ಮಾಡುತ್ತಿಪ್ಪರು. ಗೋವಿನ ದೇಹದಲ್ಲಿ ಘೃತವಿಪ್ಪುದು. ಆ ಗೋವಿಂಗೆ ಪುಷ್ಟಿಯಾಗಲರಿಯದು. ಆ ಗೋವ ಬೋಧಿಸಿ ಹಾಲ ಕರೆದು ಕಾಸಿ ಹೆಪ್ಪನಿಕ್ಕಿ ಆ ದಧಿಯ ಮಥನವ ಮಾಡಿ ಬೆಣ್ಣೆಯ ತೆಗೆದು ಆ ನವನೀತದೆ ತುಪ್ಪವ ಕಾಸಿ ಆ ಗೋವಿಂಗೆ ಕುಡಿಸಲಾಗಿ ದಿನದಿನಕ್ಕೆ ಪುಷ್ಟಿಯಪ್ಪುದು ತಪ್ಪದಯ್ಯ. ಈ ಪ್ರಕಾರದಲ್ಲಿ ಲಿಂಗೋಪಚಾರವ ಮಾಡಲಾಗಿ ಜ್ಞಾನವಹುದು. ಜ್ಞಾನವಾಗಲಿಕ್ಕೆ ಸಮ್ಯಜ್ಞಾನವಹುದು. ಸಮ್ಯಜ್ಞಾನವಾಗಲಾಗಿ ಪ್ರಾಣವೆ ಲಿಂಗವಪ್ಪುದು ತಪ್ಪದು. ಸಂದೇಹವಿಲ್ಲವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
'ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ' ಎಂಬ ಶ್ರುತಿಯುಂಟಾಗಿ, ಹರ ಮುನಿದರೆ ಗುರು ಕಾಯ್ವ, ಗುರು ಮುನಿದರೆ ಹರ ಕಾಯನೆಂಬ ವಾಕ್ಯ ದಿಟ. ಅದೆಂತೆಂದೊಡೆ : ಪರಶಿವನಾಣತಿವಿಡಿದೈತಂದು ತನುಸಂಗ ಮರವೆಯಾವರಿಸಿದಂದು, ತನ್ನತ್ತ ತಾನೊಯ್ವ ಸತ್ವ ತನಗಿಲ್ಲ. ಮತ್ತೆ ಸುಜ್ಞಾನಗುರುವಾಗಿ ಬಂದೆನ್ನೆಚ್ಚರಿಸಿ, ಕ್ರಿಯಾಘನಗುರುವಾಗಿ ಬಂದೆನ್ನ ಬೋಧಿಸಿ ಅತ್ತಲಾ ಪರಶಿವನ ತಂದೆನ್ನ ಕರ ಮನ ಭಾವದಲ್ಲಿ ತೋರಿ ಕಾಣಿಸಿದ ನಿರಂಜನ ಚನ್ನಬಸವಲಿಂಗ ತಾನೆಂಬ ಭಾವವನು.
--------------
ದೇಶಿಕೇಂದ್ರ ಸಂಗನಬಸವಯ್ಯ
-->