ಅಥವಾ

ಒಟ್ಟು 215 ಕಡೆಗಳಲ್ಲಿ , 49 ವಚನಕಾರರು , 172 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಕ್ಕುದ ಕೊಂಬನ್ನಬರ ಭೃತ್ಯಾಚಾರ ಭಕ್ತಂಗೆ. ಉಕ್ಕುದನಿಕ್ಕಿದಲ್ಲಿ ಅವನ ಅರ್ಥಪ್ರಾಣ ಅಬ್ಥಿಮಾನಕ್ಕೆ ತಪ್ಪುವನಾದಡೆ ಕರ್ತೃತ್ವ ಮೊದಲೆ ಕೆಟ್ಟಿತ್ತು, ಜಂಬುಕಫಲದ ನೇಮವ ಹಿಡಿದಂತಾಯಿತ್ತು, ಅದರಂಗವ ಕಂಡು ನಿಂದಿಸಿದ ಭಕ್ತಂಗೆ. ಬಾಗಿಲ ಪೂಜಿಸಿದ ಜಾರೆ ಲಕ್ಷಣದಂತಾಗಬೇಡ. ನೆರೆ ನಂಬು ಏನ ಹಿಡಿದಲ್ಲಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಮಾಡುವ ಭಕ್ತಂಗೆ, ಒಲಿದ ದೇವಂಗೆ ಭೇದವುಂಟೆ ಅಯ್ಯಾ ? ಕಾಯದೊಳಗೆ ಕಾಯವಾಗಿಪ್ಪ, ಪ್ರಾಣದೊಳಗೆ ಪ್ರಾಣವಾಗಿಪ್ಪ. ಅರಿದೆಹೆನೆಂದಡೆ ತಾನೆಯಾಗಿಪ್ಪ. ಅರಸಿ ಬಯಸಿದಡೆ ನಡೆದುಬಹನು. ಕಲಿದೇವರದೇವನ ಬರವನೀಗಳೆ ತೋರಿ ಕೊಟ್ಟಿಹೆನು ಕೇಳಾ, ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಇಷ್ಟಲಿಂಗದ ವೀರಶೈವ, ಪ್ರಾಣಲಿಂಗದ ವೀರಶೈವ, ಭಾವಲಿಂಗದ ವೀರಶೈವ. ತ್ರಿವಿಧ ಲಿಂಗದಲ್ಲಿ ನೈಷ್ಠೆವರಿಯಾದ ಶರಣನ ನೀವು ನೋಡಣ್ಣ. ಇಷ್ಟಲಿಂಗವ ಕಾಯಕರದಲ್ಲಿ ಹಿಡಿದ ಮೇಲೆ ಅನ್ಯದೈವಕೆ ತಲೆವಾಗದ ವೀರಶೈವಬೇಕು ಭಕ್ತಂಗೆ, ಮನದ ಕೈಯಲ್ಲಿ ಪ್ರಾಣಲಿಂಗವ ಹಿಡಿದ ಮೇಲೆ ಮಾಯಾ [ಮೋಹನಿರಸನೆಯಾಗಿ]ರುವ ವೀರಶೈವಬೇಕು ಭಕ್ತಂಗೆ. ಭಾವದ ಕೈಯಲ್ಲಿ ಭಾವಲಿಂಗವ ಹಿಡಿದ ಮೇಲೆ ಪರಧನ ಪರವಧು ಪರಾನ್ನವ ಬಯಸದ ವೀರಶೈವಬೇಕು ಭಕ್ತಂಗೆ. ಇಂತೀ ತ್ರಿವಿಧಲಿಂಗದ ವೀರಶೈವದೊಳಿಂಬುಗೊಂಡ ತ್ರಿಕರಣಶುದ್ಧವಾದ ತ್ರಿವಿಧಸಂಪನ್ನ ಶರಣಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭಕ್ತನೊಂದು ಕುಲ, ಭವಿಯೊಂದು ಕುಲವೆಂದೆಂಬರು. ಭಕ್ತಂಗೆ ಕುಲಛಲಂಗಳುಂಟೆ ? ಭಕ್ತಂಗೆ ಯಾಚಕತ್ವವುಂಟೆ ? ಭಕ್ತಂಗೆ ಆಶಾಪಾಶಂಗಳುಂಟೆ ? ಭಕ್ತಂಗೆ ಶೋಕ ಮೋಹ ಭಯ ಲಜ್ಜೆ ಸೇವೆ ರೋಷ ಹರುಷ ಆದ್ಥಿವ್ಯಾದ್ಥಿ ಆಶೆ ಆಮಿಷ ತಾಮಸಂಗಳುಂಟೆ ? ಇಲ್ಲವಾಗಿ, ಇದಕ್ಕೆ ಶ್ರುತಿ: ಯಾಚಕೋ ಲೋಭರಹಿತಃ ಆಶಾಪಾಶಾದಿವರ್ಜಿತಃ ಶೋಕಮೋಹಭಯತ್ಯಾಗೀ ಮದ್ಭಕ್ತಶ್ಚ ಪ್ರಕೀರ್ತಿತಃ ಸೇವಕೋ ರೋಷಹµõ್ರ್ಞ ಚ ಆಶಾಯಾಮಿಷತಾಮ¸õ್ಞ ಆದ್ಥಿವ್ಯಾದ್ಥಿ ಗತೋ ದೂರಂ ಮದ್ಭಕ್ತಶ್ಚ ಪ್ರಕೀರ್ತಿತಃ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಸಹಜಭಕ್ತಿ ಅಪೂರ್ವವಯ್ಯಾ.
--------------
ಆದಯ್ಯ
ಕಾಮವಿಲ್ಲ ಭಕ್ತಂಗೆ ಪರಸ್ತ್ರೀಯರ ಮೇಲೆ. ಕ್ರೋಧವಿಲ್ಲ ಭಕ್ತಂಗೆ ಗುರುಲಿಂಗಜಂಗಮದಲ್ಲಿ. ಲೋಭವಿಲ್ಲ ಭಕ್ತಂಗೆ ಹೊನ್ನು ಹೆಣ್ಣು ಮಣ್ಣಿನಲ್ಲಿ. ಮೋಹವಿಲ್ಲ ಭಕ್ತಂಗೆ ತನುಮನಧನದಲ್ಲಿ. ಮದವಿಲ್ಲ ಭಕ್ತಂಗೆ ಸಜ್ಜನಸದ್ಭಾವಿಗಳಲ್ಲಿ. ಮತ್ಸರವಿಲ್ಲ ಭಕ್ತಂಗೆ ಯಾಚಕರ ಮೇಲೆ. ಇಂತು ಷಡ್ಗುಣವಿರಹಿತನಾದ ಭಕ್ತನಲ್ಲಿ ಸನ್ನಿಹಿತನಾಗಿರುವ ನಮ್ಮ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಲ್ಲವರೆಂದು ಎಲ್ಲಕ್ಕೂ ಹೇಳಿ, ಅಲ್ಲಿ ಎಲ್ಲಿಯೂ ಬೋದ್ಥಿಸಬಲ್ಲವ ನಾನೆಂದು ನುಡಿವ ಕಲ್ಲೆದೆಯವನೆ ಕೇಳಾ. ಲಿಂಗವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಜಂಗಮವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಪ್ರಸಾದವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಸಾಮ್ಯಸಂಬಂಧಕ್ಕೆ ಕರ್ತೃಭೃತ್ಯತ್ವವಲ್ಲದೆ, ಜ್ಞಾನಾತೀತಂಗೆ ಸಾಮ್ಯಸಂಬಂಧವ ಭಾವಿಸಲಿಲ್ಲ. ಇಕ್ಕಿದ ಕರುವಿಂಗೆ ಲೆಪ್ಪಣವಲ್ಲದೆ, ಮನಸ್ಸಿನಲ್ಲಿ ಒಪ್ಪವುಂಟೆ ಅಯ್ಯಾ ? ಇದು ತಪ್ಪದು. ಕ್ರಿಯಾನಿರತವಾದ ಭಕ್ತಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಲಿಂಗಕ್ಕೆ ಗಿಣ್ಣಿಲ ಓಗರ, ಭಕ್ತಂಗೆ ತಳಿಗೆ ತುಂಬಿದ ಓಗರ, ಆನಿನ್ನೇವೆನಯ್ಯಾ! ಲಿಂಗವ ಕಿರಿದು ಮಾಡಿ, ಅಂಗವ ಹಿರಿದು ಮಾಡಿ, ನಾನಿನ್ನೇವೆನಯ್ಯಾ! ಲಿಂಗಕ್ಕೆ ಬಾರದ ರುಚಿ ಕೃತಕಿಲ್ಬಿಷ, ಆನಿನ್ನೇವೆನಯ್ಯಾ! ಲಿಂಗಕ್ಕೆ ಬಾರದ ಭೋಗವ ಭೋಗಿಪರ ತೋರದಿರಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನಿಮ್ಮ ಭಕ್ತಂಗೆ ಮಲತ್ರಯವಿಲ್ಲ; ಅದೇನು ಕಾರಣವೆಂದಡೆ; ತನುವ ಸದಾಚಾರಕ್ಕರ್ಪಿಸಿ, ಮನವ ಮಹಾಲಿಂಗಭಾವದಲಿರಿಸಿ, ಧನವ ನಿಮ್ಮ ಶರಣರ ದಾಸೋಹಕ್ಕೆ ಸವೆಯಬಲ್ಲವನಾಗಿ_ ಇಂತೀ ತ್ರಿವಿಧವ ತ್ರಿವಿಧಕ್ಕೆ ಕೊಟ್ಟಬಳಿಕ ಆ ಭಕ್ತನ ತನು ನಿರ್ಮಲ, ಆ ಭಕ್ತನ ಮನ ನಿಶ್ಚಿಂತ, ಆ ಭಕ್ತನ ಧನ ನಿರ್ವಾಣ. ಇಂತಪ್ಪ ಭಕ್ತ ಪ್ರಸಾದಕಾಯನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮಾಡಿದ ಮಾಟದೊಳಗೆ ನುಡಿ ಘನವಾಡದೆ ಭಕ್ತನೆ ? ಅಲ್ಲ. ಶೀಲವ ಹೇಳಿ ಮಾಡಿಸಿಕೊಂಬನ್ನಕ್ಕರ ಶೀಲವಂತನೆ ? ಅಲ್ಲ. ನೋಡಿ ಸಯಿಧಾನಬೇಕೆಂಬನ್ನಕ್ಕರ ನಿತ್ಯನೇಮಿಯೆ ? ಅಲ್ಲ. ಶೀಲ, ಮೀಸಲು, ಭಾಷೆ ಲಿಂಗದೊಡಲು, ಪ್ರಾಣ ಜಂಗಮವಾಗಿಪ್ಪ ಭಕ್ತಂಗೆ ಮಹಾಲಿಂಗ ಕಲ್ಲೇಶ್ವರಲಿಂಗ ತಾನೆ ಪ್ರಾಣವಾಗಿಪ್ಪನು.
--------------
ಹಾವಿನಹಾಳ ಕಲ್ಲಯ್ಯ
ಪ್ರಾಣಲಿಂಗ, ಲಿಂಗಪ್ರಾಣ `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಚೈಕಂ ಎಂದುದಾಗಿ ಪಂಚಭೂತಕಾಯವಳಿದು ಪ್ರಸಾದಕಾಯವ ಮಾಡಿ ಭಕ್ತದೇಹಿಕನೆನಿಸಿದನು. ಈ ಸತ್ಕ್ರೀಯನು ಶ್ರೀಗುರು ಕರುಣಿಸಿ ಮಾಡಿದನಾಗಿ ಪ್ರಾಣಲಿಂಗ, ಕಾಯಭಕ್ತನು ಇದೂ ಸ್ವಭಾವ. ದಾಸೋಹಿಯಾಗಿ ಅರ್ಚನೆ ಪೂಜನೆ ಸರ್ವದ್ರವ್ಯ ಸಕಲಭೋಗವನೂ ಅರ್ಪಿತವ ಮಾಡುತ್ತಿಹನು, ಪ್ರಸಾದವ ಭೋಗಿಸುತ್ತಿಹನು. ಸತ್ಕ್ರೀಯಲ್ಲಿ ಲಿಂಗಕ್ಕೆ ಕಾಯಶೂನ್ಯನಾಗಿ ಭಕ್ತಕಾಯ ಮಮಕಾಯನೆಂದು ಅವಗ್ರಹಿಸಿಕೊಂಡ ಭಕ್ತಂಗೆ ಬೇರೆ ಪ್ರಾಣವಿಲ್ಲಾಗಿ ಪ್ರಾಣವೆಂದು ಅವಗ್ರಹಿಸಿಕೊಂಡ. ಇಂತಹ ಪ್ರಾಣಲಿಂಗವು, ಕಾಯಭಕ್ತನು ತನ್ನೊಳಗೆ ತಾನೇ ಐಕ್ಯವಾಯಿತ್ತು. ಭಕ್ತನೇ ಲಿಂಗ, ಲಿಂಗವೇ ಭಕ್ತನು, ದಾಸೋಹಕ್ರೀಯೆ ಸೋಹಕ್ರೀ, ಸೋಹಕ್ರೀಯೆ ದಾಸೋಹಕ್ರೀ. ಈ ಕ್ರೀಯನು ಅದ್ವೈತವೆನ್ನಿ, ಸೋಹವೆನ್ನಿ, ದಾಸೋಹವೆನ್ನಿ ಬಲ್ಲವರುಗಳು ಬಲ್ಲಂತೆ ನಿಮ್ಮ ನಿಮ್ಮ ಅರಿವಿನ ಹವಣಿಂಗೆ ನುಡಿಯಿರಿ. ಆ ಲಿಂಗಾಯತವ, ಆ ಲಿಂಗದ ಮರ್ಮವ ಅರ್ಪಿತದ ಮರ್ಮವ, ಪ್ರಸಾದದ ಮಹಿಮೆಯ ಮಹಾಪರಿಣಾಮದ ಕ್ರೀಯು ಸಾಮಾನ್ಯರಿಗೆ ಅರಿಯಬಾರದು. ಈ ಮಹಾ ಕ್ರೀ ವಾಙ್ಮನೋತೀತ. ಈ ಮಹಾಕುಳವ ಮಹಾನುಭಾವರೇ ಬಲ್ಲರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವಚನದ ರಚನೆಯ ನುಡಿವ ಬರುಬಾಯ ಭುಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ? ಮಾಡುವ ದಾಸೋಹದಿಂದ ಭಕ್ತಂಗೆ ಅವಗುಣಂಗಳಿಲ್ಲದಿರಬೇಕು. ಕೋಪದ ಕೆಚ್ಚಂ ಕಡಿದು, ಲೋಭಲಂಪಟಮಂ ಕೆದರಿ, ಮೋಹದ ಮುಳ್ಳುಮೊನೆಯ ತೆಗೆದು, ಮದದಚ್ಚಂ ಮುರಿದು, ಮಚ್ಚರಿಪ ಸರ್ಪನಂ ಸಮತೆಯೆಂಬ ಗಾರುಡದಲ್ಲಿ ಗಾರುಡಿಸಿ, ಕರಣಾದಿ ಗುಣಂಗಳಿಚ್ಛೆಗೆ ಹರಿಯಲೀಯದೆ, ವಿಶ್ರಮಿಸಿಪ್ಪ ಭಕ್ತನ ಕಾಯವೆ ಕೈಲಾಸ. ಅಂತಲ್ಲದೆ ಬರಿಯಮಾತಿಂಗೆ ಮಾತನೆ ಕೊಟ್ಟು, ತಾನಾಡಿದುದೆ ನೆಲೆಯೆಂಬಾತ ಭಕ್ತನೆ ? ಅಲ್ಲ, ಉಪಜೀವಿ. ಹೇಮದಿಚ್ಛೆಗೆ ಹರಿದು ಕಾಮರತಿಗಳುಪವ, ಕೋಪದುರಿಯ ಹೊದ್ದುಕೊಂಬ, ಲೋಭಮೋಹದ ಕೆಚ್ಚ ಕೂಡಿಕೊಂಡು, ನರಕದೊಳಗೋಲಾಡುವಾತ ಭಕ್ತನೆ ? ಅಲ್ಲ. ಆದಿಯಲ್ಲಿ ನಮ್ಮವರು ಹೊನ್ನು ಹೆಮ್ಣು ಮಣ್ಣು, ಈ ತ್ರಿವಿಧವ ಬಿಟ್ಟಿದರೆ ? ಇಲ್ಲ. ಆವ ತಲೆಯೆತ್ತಲೀಯರಾಗಿ, ಅನ್ಯಸಂಗವ ಹೊದ್ದರು. ಭವಿಮಿಶ್ರವ ಮುಟ್ಟರು, ಹಮ್ಮುಬಿಮ್ಮುಯಿಲ್ಲದಿಪ್ಪ ಇಂತಪ್ಪರೆ ನಮ್ಮ ಭಕ್ತರು. ನಮ್ಮ ಭಕ್ತರ ನೆಲೆಯ, ಮಹಾದಾನಿ ಸೊಡ್ಡಳಾ, ನೀನೆ ಬಲ್ಲೆಯಲ್ಲದೆ, ಉಳಿದ ಜಡಜೀವಿಗಳೆತ್ತ ಬಲ್ಲರು ?
--------------
ಸೊಡ್ಡಳ ಬಾಚರಸ
ಲಿಂಗ ಜಂಗಮ ಒಂದಾದ ಬಳಿಕ ಲಿಂಗಾರ್ಚನೆ ಸಲ್ಲದು ಜಂಗಮಕ್ಕೆ. ಲಿಂಗಾರ್ಚನೆ ಬೇಕು ಭಕ್ತಂಗೆ. ಲಿಂಗಾರ್ಚನೆ ವಿರಹಿತ ಭಕ್ತನ ಮುಖ ನೋಡಲಾಗದು, ನುಡಿಸಲಾಗದು, ಅವನ ಹೊರೆಯಲ್ಲಿರಲಾಗದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ ಷಡ್ವಿಧಮೂರ್ತಿಗಳಿಗೂ ಷಡ್ವಿಧಲಿಂಗವ ಕಂಡೆನಯ್ಯ ಅದು ಹೇಗೆಂದಡೆ: ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ. ಈ ಷಡ್ವಿಧಲಿಂಗಕೂ ಷಡ್ವಿಧಶಕ್ತಿಯ ಕಂಡೆನಯ್ಯ ಅದು ಹೇಗೆಂದಡೆ: ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ, ಶಿವಲಿಂಗಕ್ಕೆ ಇಚ್ಚಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ, ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಚಕ್ತಿ. ಈ ಷಡ್ವಿಧಶಕ್ತಿಯರಿಗೂ ಷಡ್ವಿಧಭಕ್ತಿಯ ಕಂಡೆನಯ್ಯ. ಅದು ಹೇಗೆಂದಡೆ: ಕ್ರಿಯಾಶಕ್ತಿಗೆ ಸದ್ಭಕ್ತಿ, ಜ್ಞಾನಶಕ್ತಿಗೆ ನೈಷ್ಠಿಕಭಕ್ತಿ, ಇಚ್ಚಾಶಕ್ತಿಗೆ ಸಾವಧಾನ ಭಕ್ತಿ, ಆದಿಶಕ್ತಿಗೆ ಅನುಭಾವಭಕ್ತಿ, ಪರಾಶಕ್ತಿಗೆ ಸಮರತಿಭಕ್ತಿ, ಚಿತ್‍ಶಕ್ತಿಗೆ ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೆ ಷಡ್ವಿಧಹಸ್ತವ ಕಂಡೆನಯ್ಯ. ಅದು ಹೇಗೆಂದಡೆ: ಸದ್ಭಕ್ತಿಗೆ ಸುಚಿತ್ತಹಸ್ತ, ನೈಷ್ಠಿಕಭಕ್ತಿಗೆ ಸುಬುದ್ಧಿಹಸ್ತ, ಸಾವಧಾನಭಕ್ತಿಗೆ ನಿರಹಂಕಾರಹಸ್ತ, ಅನುಭಾವ ಭಕ್ತಿಗೆ ಸುಮನಹಸ್ತ, ಸಮರತಿಭಕ್ತಿಗೆ ಸುಜ್ಞಾನಹಸ್ತ, ಸಮರಸಭಕ್ತಿಗೆ ನಿರ್ಭಾವಹಸ್ತ. ಈ ಷಡ್ವಿಧ ಹಸ್ತಂಗಳಿಗೂ ಷಡ್ವಿಧಕಲೆಗಳ ಕಂಡೆನಯ್ಯ. ಅದು ಹೇಗೆಂದಡೆ: ಸುಚಿತ್ತಹಸ್ತಕ್ಕೆ ನಿವೃತ್ತಿಕಲೆ, ಸುಬುದ್ಧಿ ಹಸ್ತಕ್ಕೆ ಪ್ರತಿಷ್ಠಾಕಲೆ, ನಿರಹಂಕಾರಹಸ್ತಕ್ಕೆ ವಿದ್ಯಾಕಲೆ, ಸುಮನಹಸ್ತಕ್ಕೆ ಶಾಂತಿಕಲೆ, ಸುಜ್ಞಾನಹಸ್ತಕ್ಕೆ ಶಾಂತ್ಯತೀತಕಲೆ, ನಿರ್ಭಾವಹಸ್ತಕ್ಕೆ ಶಾಂತ್ಯತೀತೋತ್ತರಕಲೆ, ಈ ಷಡ್ವಿಧಕಲೆಗಳಿಗೂ ಷಡ್ವಿಧ[ಜ್ಞಾನ]ಸಂಬಂಧವ ಕಂಡೆನಯ್ಯ. ಅದು ಹೇಗೆಂದಡೆ: ನಿವೃತ್ತಿಕಲೆಗೆ ಶುದ್ಧಜ್ಞಾನವೇ ಸಂಬಂಧ, ಪ್ರತಿಷ್ಠಾಕಲೆಗೆ ಬದ್ಧಜ್ಞಾನವೇ ಸಂಬಂಧ, ವಿದ್ಯಾಕಲೆಗೆ ನಿರ್ಮಲಜ್ಞಾನವೇ ಸಂಬಂಧ, ಶಾಂತಿಕಲೆಗೆ ಮನಜ್ಞಾನವೇ ಸಂಬಂಧ, ಶಾಂತ್ಯತೀತಕಲೆಗೆ ಸುಜ್ಞಾನವೇ ಸಂಬಂಧ, ಶಾಂತ್ಯತೀತೋತ್ತರಕಲೆಗೆ ಪರಮಜ್ಞಾನವೇ ಸಂಬಂಧ. ಈ ಷಡ್ವಿಧಸಂಬಂಧಗಳಿಂದತ್ತ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನಲಿಂಗ ತಾನೇ ನೋಡಾ ಂ್ಞhiೀಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತವನಿದ್ಥಿಯ ಬೆಳೆವಂಗೆ ಕಣಜದ ಹಂಗುಂಟೆ ? ವಿರಕ್ತಂಗೆ ಆರೈಕೆಗೊಂಬವರುಂಟೆ ? ಕಾಯಕವ ಮಾಡುವ ಭಕ್ತಂಗೆ ಇನ್ನಾರುವ ಕಾಡಲೇತಕ್ಕೆ ? ಆ ಗುಣ ಅಮರೇಶ್ವರಲಿಂಗಕ್ಕೆ ದೂರ.
--------------
ಆಯ್ದಕ್ಕಿ ಮಾರಯ್ಯ
ಸಂದುಸಂಶಯವನಳಿದಲ್ಲದೆ ಮುಂದುದೋರದು ಭಕ್ತಿಸ್ಥಲ. ಗಂಧ ಗರಗಸದಿಂದ ಕೊರದು ಅರದು ಸುಟ್ಟರೆ ಪರಿಮಳ ಮಾಣ್ಬುದೆ ? ವೃಂದ ವನದಿ ವೃಕ್ಷ ಫಲವಾಪಕಾಲಕ್ಕೆ ಪಾಷಾಣದಲ್ಲಿಯಿಡುವೆಡೆ ನೊಂದೆನೆಂದು ನೋವ ತಾಳ್ದ ಮರನು ವರುಷಕೆ ಆಪುದೆ ? ಅಂದು ಏನು, ಇಂದು ಏನು ಭಕ್ತಂಗೆ ಕುಂದು ನಿಂದೆ ಸ್ತುತಿ ಒಂದೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಇನ್ನಷ್ಟು ... -->