ಅಥವಾ

ಒಟ್ಟು 50 ಕಡೆಗಳಲ್ಲಿ , 18 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಸ್ಮವ ಹೂಸಿದ್ಲ ಶರಣನೆ? ಅಲ್ಲಲ್ಲ ; ಮಾಡುವ ಕ್ರಿಯೆ ಭಸ್ಮವಾದಡೆ ಶರಣ. ನೋಡುವ ಕೃತ್ಯ ರುದ್ರಾಕ್ಷಿಯಾದಡೆ ಶರಣ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತಾಪತ್ರಯಾದಿಗಳಳಿಯವು; ಕೋಪ ಮೋಹಾದಿಗಳ ಸುಟ್ಟುರುಹಲರಿಯರು; ಅಷ್ಟಮದಂಗಳ ಹಿಟ್ಟುಗುಟ್ಟಲರಿಯರು. ಬಟ್ಟಬಯಲ ತುಟ್ಟಿ ತುದಿಯಣ ಮಾತನೇಕೆ ನುಡಿವಿರಣ್ಣ? ಕರಕಷ್ಟ ಕರಕಷ್ಟ ಕಾಣಿಭೋ! ಇಂದ್ರಿಯಂಗಳ ಮುಸುಕುನುಗಿಯದೆ ವಿಷಯಂಗಳ ಶಿರವನರಿಯದೆ ಕರಣಂಗಳ ಕಳವಳವ ಕೆಡಿಸದೆ ಕರ್ಮೇಂದ್ರಿಯಂಗಳ ಮೂಲದ ಬೇರ ಕಿತ್ತು ಭಸ್ಮವ ಮಾಡದೆ ಕಷ್ಟಕಾಮನ ನಷ್ಟವ ಮಾಡಲರಿಯದೆ ಲಿಂಗನಿಷ*ರೆಂಬ ಕಷ್ಟವನೇನೆಂಬೆನಯ್ಯ? ಮೃತ್ಯುಗಳ ಮೊತ್ತವ ಕಿತ್ತೆತ್ತಿ ಕೆದರದೆ ಸತ್ವರಜತಮಂಗಳ ನಿವೃತ್ತಿಯ ಮಾಡದೆ ನಿತ್ಯ ನಿಶ್ಚಿಂತ ನಿರ್ಮಲರೆಂಬ ಕಷ್ಟಯೋಗಿಗಳನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಕ್ಕವಿಲ್ಲದ ಹಕ್ಕಿ ಮಿಕ್ಕು ಮೀರಿ ಹಾರಿಯಾಡುತ್ತಿರಲು, ಹಿಡಿದವರ ಹಿಡಿಯನೊಡೆದು, ಹರಿಯ ಹೃದಯವನೊಡೆದು, ಬ್ರಹ್ಮನ ಬ್ರಹ್ಮಾಂಡವನೊಡೆದು, ರುದ್ರನ gõ್ಞದ್ರವ ಭಸ್ಮವ ಮಾಡಿ, ದ್ವೈತಾದ್ವೈತವೆಂಬ ಮೇಹಕೊಂಡು, ಘನಕ್ಕೆ ಘನವೆಂಬ ಘುಟಿಕೆಯನೆ ನುಂಗಿ, ಇದ್ದುದೆಲ್ಲವಂ ನಿರ್ದೋಷವಂ ಮಾಡಿ ಮಿಕ್ಕಿನ ಘನವ ಹೇಳಲೊಲ್ಲದೆ ಇದಕ್ಕಿನ್ನಾರೆಂದಡೆ: ಕೂಡಲಚೆನ್ನಸಂಗಯ್ಯನ ಶರಣರಲ್ಲದೆ ಮತ್ತಾರು ಮತ್ತಾರು ಇಲ್ಲವೆಂದು ಘೂ ಘೂ ಘೂಕೆಂದಿತ್ತು !
--------------
ಚನ್ನಬಸವಣ್ಣ
ಇಂತಪ್ಪ ಶ್ರೀವಿಭೂತಿಯ ಧರಿಸಲರಿಯದೆ ಶ್ವೇತ, ಪೀತ, ಕಪೋತ, ಮಾಂಜಿಷ್ಟ, ಮಾಣಿಕ್ಯವೆಂಬ ಪಂಚವರ್ಣದ ಗೋವಿಗೆ ಭೂಮಿಯ ಸಾರಿಸಿ ಆ ಭೂಮಿಯಲ್ಲಿ ಪಂಚಗೋವುಗಳ ಕಟ್ಟಿ, ಪೂಜೋಪಚಾರ ಮಾಡಿ, ಮಂತ್ರದಿಂದ ಅನ್ನ ಉದಕವ ಹಾಕಿ, ಆ ಗೋವಿನ ಸಗಣಿ ಭೂಮಿಗೆ ಬೀಳದೆ ಅಂತರದಲ್ಲಿಯೇ ಪಿಡಿದು, ಕುಳ್ಳು ಮಾಡಿ ಬಿಸಿಲಿಲ್ಲದೆ ನೆರಳಲ್ಲಿ ಒಣಗಿಸಿ, ಮಂತ್ರದಿಂದ ನೆಲ ಸಾರಿಸಿ, ಮಂತ್ರದಿಂದ ಸುಟ್ಟು ಭಸ್ಮವ ಮಾಡಿ, ಆ ಭಸ್ಮಕ್ಕೆ ಜಂಗಮಾರ್ಚನೆಯ ಮಾಡಿ, ಜಂಗಮದ ಪಾದೋದಕದಿಂದ ಆ ಭಸ್ಮವ ಮಂತ್ರದಿಂದ ಶುದ್ಧಸಂಸ್ಕಾರವ ಮಾಡಿ, ಇಂತಪ್ಪ ವಿಭೂತಿಯ ತ್ರಿಕಾಲದಲ್ಲಿ ಕ್ರೀಯವಿಟ್ಟು ಧರಿಸಿ ಲಿಂಗಾರ್ಚನೆಯ ಮಾಡಿದವರಿಗೆ ಸಕಲ ಕಂಟಕಾದಿಗಳ ಭಯ ಭೀತಿ ನಷ್ಟವಾಗಿ ಚತುರ್ವಿಧಫಲಪದಪ್ರಾಪ್ತಿ ದೊರಕೊಂಬುವದು. ಆ ಫಲಪದ ಪಡೆದವರು ವೃಕ್ಷದ ಮೇಲೆ ಮನೆಯ ಕಟ್ಟಿದವರು ಉಭಯರು ಒಂದೆ. ಅದೆಂತೆಂದಡೆ: ವೃಕ್ಷದ ಮೇಲೆ ಮನೆ ಕಟ್ಟಿದವರು ಆ ವೃಕ್ಷವಿರುವ ಪರ್ಯಂತರವು ಆ ಮನೆಯಲ್ಲಿರುವರು. ಆ ವೃಕ್ಷವು ಮುಪ್ಪಾಗಿ ಅಳಿದುಹೋದಲ್ಲಿ ನೆಲಕ್ಕೆ ಬೀಳುವರಲ್ಲದೆ, ಅಲ್ಲೆ ಸ್ಥಿರವಾಗಿ ನಿಲ್ಲಬಲ್ಲರೆ? ನಿಲ್ಲರೆಂಬ ಹಾಗೆ. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚತುರ್ವಿಧಫಲಪದವ ಪಡೆದವರು ಆ ಫಲಪದವಿ ಇರುವ ಪರ್ಯಂತರವು ಸ್ಥಿರವಾಗಿ ಇರುವರಲ್ಲದೆ, ಆ ಫಲಪದವಿ ಕಾಲೋಚಿತದ ಮೇಲೇರಿ ಅಳಿದು ನಾಶವಾದ ಮೇಲೆ ಮರಳಿ ಭವಕ್ಕೆ ಬೀಳುವರಲ್ಲದೆ, ಅಲ್ಲಿ ಸ್ಥಿರವಾಗಿ ನಿಲ್ಲಲರಿಯರೆಂದು ನಿಮ್ಮ ಶರಣ ಕಂಡು ಅದು ಮಾಯಾಜಾಲವೆಂದು ತನ್ನ ಪರಮಜ್ಞಾನದಿಂ ಭೇದಿಸಿ ಚಿದ್‍ವಿಭೂತಿಯನೇ ಸರ್ವಾಂಗದಲ್ಲಿ ಧರಿಸಿ, ಶಿಖಿ-ಕರ್ಪುರದ ಸಂಯೋಗದ ಹಾಗೆ ಆ ಚಿದ್ಭಸ್ಮದಲ್ಲಿ ನಿರ್ವಯಲಾದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯಾ, ನಿಮ್ಮ ಶರಣರನುಭಾವಕ್ಕೆ ಪ್ರತಿಸಾಕ್ಷಿಯೆಂದು ಬೆರೆಸಿ ಹೇಳುವರು ಹಾದಿ ಹತ್ತಿಕೆಯ ನುಡಿಗಳ. ಅದು ಎನಗೆಂದೂ ಸೊಗಸದು ಕಾಣಾ. ಎನ್ನ ನಿಜರತ್ನಪ್ರಕಾಶ ನಿಮ್ಮ ಶರಣರ ವಚನ. ಇವಕ್ಕೆ ಸಾಕ್ಷಿ ತಂದು ಹೇಳುವ ಭಾವವ ದಹಿಸಿ ಭಸ್ಮವ ಮಾಡಿ ಧರಿಸಿರ್ದೆನಾಗಿ ಕಾಣಿಸದು. ಶರಧಿಗೆ ತೊರೆಗಾವಲಿ, ಮೇರುವಿಗೆ ಮೊರಡಿ, ಗಗನಕ್ಕೆ ಕೊಪ್ಪರಿಗೆ ತೋರಿದರೆ ಸರಿಯಪ್ಪುದೆ ? ಆ ಕುರಿಗಳ ನುಡಿ ಅತ್ತಿರಲಿ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರ ನುಡಿಬೆಳಗನಗಲದಿರ್ದೆನು ನಿಮ್ಮೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಕ್ಷೇಪನಿಧಿಯ ಸಾಧ್ಯವ ಮಾಡಲೆಂದು ಅಂಜನಕ್ಕೆ ಭಸ್ಮವ ಮಾಡಿ, ಕೃಪಾಮೃತದಿಂ ಮರ್ದಿಸಿ ಅಂಜನವನಿಕ್ಕಿಕೊಂಡು ನಿಧಾನವ ತೆಗೆದುಕೊಂಡು ಸರ್ವಭೋಗವ ಮಾಡಬೇಕು. ಆ ಧನವನೆ ಭಸ್ಮವ ಮಾಡಿದ ಬಳಿಕ ಆ ಅಂಜನವ ಪ್ರಯೋಗಿಸುವ ಪರಿ ಎಂತಯ್ಯಾ? ಆ ನಿಧಾನವ ಗ್ರಹಿಸಿಕೊಂಡು ಇರ್ದ ಮಹಾಭೂತವು ನಾಥನನೇ ಬಲಿಯ ಬೇಡಿದಡೆ, ಆ ನಿಧಾನವ ತಂದು ಭೋಗಿಸುವವರಿನ್ನಾರಯ್ಯಾ? ಭಕ್ತಿಯನೂ ಪೂಜೆಯನೂ ಮಾಡಿಸಿಕೊಂಡು ಪ್ರಸಾದವ ಕರುಣಿಸಿ ಮುಕ್ತಿಯ ಕೊಡುವ ಶ್ರೀಗುರುಲಿಂಗಜಂಗಮವನೂ ಆಜ್ಞೆಯ ಮಾಡಿ ಆಯಸಂ ಬಡಿಸಿ, ಅವರನಪಹರಿಸಿ ದ್ರವ್ಯಮಂ ಕೊಂಡು ಅದಾರಿಗೆ ಭಕ್ತಿಯ ಮಾಡುವದು? ಅದಾರಿಗೆ ಪೂಜಿಸುವದುರಿ ಅದಾರಿಗೆ ಅರ್ಪಿಸುವದುರಿ ಹೇಳಿರೆ. ಪೂಜೆಗೊಂಬ ಲಿಂಗವ ಅಪೂಜ್ಯವಾಗಿ ಕಂಡಡೆ ಆ ಮಹಾಪಾಪಿಗೆ ಸದ್ಯವೇ ನರಕ, ಸಂದೇಹವಿಲ್ಲಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅರಣ್ಯವ ಸುಟ್ಟು ಭಸ್ಮವ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ಪರ್ವತವ ಸುಟ್ಟು ಭಸ್ಮವ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ನೀರ ಸುಟ್ಟು ಭಸ್ಮವ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ವಾಯುವ ಸುಟ್ಟು ಭಸ್ಮವ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ಸಮುದ್ರವ ಸುಟ್ಟು ಭಸ್ಮವ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ಇಂತಪ್ಪ ಭಸ್ಮವ ಧರಿಸಬಲ್ಲವರಿಗೆ ಮೋಕ್ಷವೆಂಬುವದು ಕರತಳಾಮಳಕ ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತಾಪತ್ರಯದಲ್ಲಿ ಬೇವ ಒಡಲ ಹಿಡಿದು ತಂದು ಜ್ಞಾನವೆಂಬ ಉರಿಗೆ ಆಹುತಿಯ ಕೊಟ್ಟವನ, ಜ್ಞಾನವೆಂಬ ಕಾಯವ ಹಿಡಿದು ತಂದು ನಿಶ್ಶೂನ್ಯವೆಂಬ ತೇಜದಲ್ಲಿ ಸುಟ್ಟವನ, ನಿಶ್ಶೂನ್ಯವೆಂಬ ಶಬ್ದವ ಸುಟ್ಟು, ಭಸ್ಮವ ಧರಿಸಿದ ಲಿಂಗೈಕ್ಯನ, ಲೋಕದ ಸ್ಥಿತಿ_ಗತಿಯ ಮರೆದು, ನಿರ್ವಾಣದಲ್ಲಿ ನಿಂದವನ, ಗುಹೇಶ್ವರಲಿಂಗದಲ್ಲಿ ತನ್ನ ಮರೆದ ಅಲ್ಲಯ್ಯನ ಕೋಪದಲ್ಲಿ ಕಿಚ್ಚಿನಲ್ಲಿ ಸುಟ್ಟಿಹೆನೆಂಬ ಸಿದ್ಧರಾಮಯ್ಯನನೇನೆಂಬೆನು ?
--------------
ಅಲ್ಲಮಪ್ರಭುದೇವರು
ಮಹಾಂತನ ಕೂಡಿದ ದೇವರುಗಳೆಂಬ ಭ್ರಾಂತಿಗುಣದ ಭ್ರಷ್ಟರನೇನೆಂಬೆನಯ್ಯಾ. ಮಹಾಂತೆಂದಡೆ, ಗುರುಮಹಾತ್ಮೆ, ಲಿಂಗಮಹಾತ್ಮೆ , ಜಂಗಮಮಹಾತ್ಮೆ , ಪಾದೋದಕಮಹಾತ್ಮೆ , ಪ್ರಸಾದಮಹಾತ್ಮೆ, ವಿಭೂತಿಮಹಾತ್ಮೆ , ರುದ್ರಾಕ್ಷಿಮಹಾತ್ಮೆ, ಮಂತ್ರಮಹಾತ್ಮೆ , ಎಂಬ ಅಷ್ಟಾವರಣದ ಘನಮಹಾತ್ಮೆಯನರಿದು, ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಅನಂತ ಸ್ಥಳಕುಳಂಗಳನೊಳಕೊಂಡು ಪರಬ್ರಹ್ಮವ ಕೂಡುವ ಸಮರಸಭಾವ ಸಕೀಲದ ಭೇದವನರಿಯದೆ, ಆಶಾಕ್ಲೇಶಂಗಳಲ್ಲಿ ಕಟ್ಟುವಡೆದು ಕಾಸು ವಿಷಯ ಮಠ ಮನೆಗೆ ಬಡಿದಾಡುವ ಭಾಷೆಭ್ರಷ್ಟರಿಗೆ ಮಹಾಂತಿನ ಘನವಿನ್ನೆಲ್ಲಿಯದೊ ? ಇಂತಪ್ಪ ಮಹಾಂತಿನ ಅರುಹು ಕುರುಹಿನ ಘನವನರಿಯದೆ ನಾನು ಮಹಾಂತಿನ ಕೂಡಿದ ದೇವರೆಂದು ಹೊರಗೆ ಆಡಂಬರ ವೇಷವ ತಾಳಿ ಜಡೆಯ ಬಿಟ್ಟಡೇನು ? ಆಲದ ಮರಕ್ಕೆ ಬೇರಿಳಿದಂತೆ. ಸರ್ವಾಂಗಕ್ಕೆ ಭಸ್ಮವ ಹೂಸಿದಡೇನು ? ಚಪ್ಪರದ ಮೇಲೆ ಕಗ್ಗುಂಬಳಕಾಯಿ ಬಿದ್ದಂತೆ. ಸ್ಥಾನ ಸ್ಥಾನಕ್ಕೆ ರುದ್ರಾಕ್ಷಿಯನಲಂಕರಿಸಿದಡೇನು ? ಹೇರಂಡಲಗಿಡ ಗೊನೆಯ ಬಿಟ್ಟಂತೆ ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
`ಶತಮಾನಃ ಪುರುಷಃ ಶತೇಂದ್ರಿಯ' ಎಂಬ ಶ್ರುತಿವಚನದಿಂ ನೂರು ಸಂಖ್ಯೆಯುಳ್ಳ ಆ ವಿರಾಟ್ಪುರುಷನು ಅನುಭವಕಾರಣಮಾದ ವಯೋರೂಪಮಾದ ಷೋಡಶ ಸಂಖ್ಯೆಯೇ ತಾನಾಗಿ ಉಳಿದ ಚೌರಾಸೀತಿ ಸಂಖ್ಯೆಯೇ ಪಂಚಭೂತಂಗಳೆಂಬ ಪಂಚಶೂನ್ಯಂಗಳೊಳಗೆ ಕೂಡಿ ಚೌರಾಶೀತಿ ಲಕ್ಷ ಭೇದಂಗಳಾದ ಜೀವಜಾಲಂಗಳಾಗಿ ಉಳಿದಂಶವೆ ಪರಮನಾಗಿ, ಆ ಜೀವಜಾಲಂಗಳಿಗೆ ಆ ಪರಮವೆ ಕಾರಣಮಾಗಿರ್ಪುದು. ಪಂಚಶೂನ್ಯಂಗಳಾದ್ಯಂತಂಗಳಲ್ಲಿರ್ಪ ಚೌರಾಶೀತಿ ಲೆಕ್ಕದಲ್ಲಿ ಎಂಬತ್ತುಲಕ್ಷ ಜೀವಂಗಳು ಆದಿಯಾಗಿರ್ಪಲ್ಲಿ ಚಾತುರ್ಲಕ್ಷ ಭೇದವಡೆದ ಮನುಷ್ಯ ಜೀವಂಗಳೆ ಕಡೆಯಾಗಿಪ್ಪವೆಂತೆಂದರೆ : ಸಕಲ ಜನ್ಮಂಗಳಿಗೂ ಮನುಷ್ಯನೇ ಕಡೆ. ಈ ಮನುಷ್ಯಜನ್ಮದಲ್ಲಿ ಮಾಡಿದ ಕರ್ಮದಿಂ ಸಕಲ ಜನ್ಮಂಗಳನೆತ್ತಿ ಅನುಭವಿಸುತ್ತಿರ್ಪುದರಿಂ ಅದೇ ಆದಿ ಇದೇ ಅಂತ್ಯಮಾಯಿತ್ತು. ಮಧ್ಯೆ ಇರ್ಪ ಪಂಚಭೂತಂಗಳೆಂಬ ಪಂಚ ಶೂನ್ಯಂಗಳಳಿಯಲು ಎಂಬತ್ತುನಾಲ್ಕು ಹದಿನಾರರೊಳಗೆ ಕೂಡಿ ನೂರಾಯಿತ್ತು. ಸೃಷ್ಟಿ ಸ್ಥಿತಿಗಳೆಂಬ ಮಿಥ್ಯ ಶೂನ್ಯಂಗಳೊಳಗೆ ಕೂಡಿದ ಸಂಹಾರಮೊಂದೆ ನಿಜಮಾಯಿತ್ತು. ಆ ನೂರ ಹತ್ತರಿಂದ ಕಳೆಯೆ ನಿಂತುದು ಹತ್ತಾಯಿತ್ತು ಹತ್ತ ಒಂದರಿಂದ ಕಳೆಯೆ ನಿಂತವಸ್ತು ಒಂದೆಯಾಯಿತ್ತು. ಅದ ಕಳೆವುದಕ್ಕೆ ಒಂದು ವಸ್ತು ಇಲ್ಲದಿರ್ಪುದರಿಂ ಕೂಡತಕ್ಕವಸ್ತುವಲ್ಲದೆ ಕಳೆಯತಕ್ಕ ವಸ್ತುವಲ್ಲವಾಯಿತ್ತು. ಕೂಡುವುದೆಲ್ಲ ಮಿಥ್ಯವಾಗಿ ಕಳೆವುದಕ್ಕೆ ಬೇರೊಂದು ವಸ್ತುವಿಲ್ಲದಿರ್ಪುದರಿಂ ತಾನೊಂದೆ ನಿಜಮಾಯಿತ್ತು. ಆ ನಿಜವೊಂದೆ ಉಂಟಾದುದು ಮಿಕ್ಕುದಿಲ್ಲವಾದುದರಿಂ ಆ ತಥ್ಯಮಿಥ್ಯಗಳೆರಡೂ ನಿತ್ಯಮಾಯಿತ್ತು. ಆ ಸತ್ಯದಿಂ ಕಾಣಬರುತ್ತಿರ್ಪುದೆ ಮಿಥ್ಯ. ಆ ಮಿಥ್ಯದಿಂ ಪ್ರಕಾಶಿಸುತ್ತಿರ್ಪುದೆ ಸತ್ಯ. ಒಂದರ ಗುಣವನೊಂದು ಪ್ರಕಾಶವಮಾಡುತ್ತಿರ್ಪುದರಿಂ ಅವಕ್ಕವೆ ಗುಣಂಗಳಾಯಿತ್ತು. ಅಂತಪ್ಪ ಸತ್ಯವೆ ನಿಜ. ನಿಜದಲ್ಲಿ ಪ್ರಕಾಶಮಾಗಿರ್ಪುದೆ ಜ್ಞಾನ. ಸತ್ಯ ಜ್ಞಾನಸಂಗದಲ್ಲಿ ಪರಿಪೂರ್ಣಮಾಗಿ ಪ್ರಕಾಶಿಸುತ್ತಿರ್ಪುದೆ ಆನಂದ. ಅಂತಪ್ಪ ಸಚ್ಚಿದಾನಂದಮಯನಾಗಿ ಮೂರು ಮೂಲೆಯುಳ್ಳ ಒಂದು ವಸ್ತು ತಾನಾಗಿರ್ಪ ಬ್ರಹ್ಮ ತನ್ನ ಮಹಿಮಾಪ್ರಕಟನ ನಿಮಿತ್ಯ ತನ್ನಲ್ಲಿಯೇ ಭಿನ್ನಮಾಗಿರ್ಪ. ನಿಜ ಛಾಯಾಮಿಥ್ಯ ಮಾಯಾ ಸಂಗಮಾದಲ್ಲಿ ಸತ್ಯ ಮಿಥ್ಯದೊಳಗೆ ಕೂಡಿ ಉಂಟಾಗಿಯಿಲ್ಲಮಾಗುತ್ತಿರ್ಪ ಶರೀರಮಾಯಿತ್ತು. ಜ್ಞಾನ ಮಿಥ್ಯದೊಳಗೆ ಕೂಡಲು ಜ್ಞಾನ ಜ್ಞಾನರೂಪಮಾದ ಜೀವಮಾಯಿತ್ತು. ಆನಂದ ಮಿಥ್ಯದೊಳಗೆ ಕೂಡಲು ಸುಖದುಃಖಕಾರಣಮಾದ ಮನಸ್ಸಾಯಿತ್ತು. ಇಂತಪ್ಪ ಮಿಥ್ಯದೊಳಗೆ ಕೂಡಿ ಆ ಬ್ರಹ್ಮವೇ ಚಿದ್ರೂಪಮಾದನಂತಗಳಾಗಿ ಹೆಚ್ಚಿ ಆ ಮಿಥ್ಯಾಕ್ರೀಡೆಗಳನನುಭವಿಸುತ್ತಿರ್ಪ ಮಿಥ್ಯಾಭವವನ್ನು ಉಪಸಂಹರಿಸಿ ಕಳದು ಆ ಮಿಥ್ಯವ ಮಿಥ್ಯವ ಮಾಡುವುದಕ್ಕೆ ತಾನೆ ಕಾರಣಮಾಗಿ ನಿಂತ ಅಖಂಡ ಸತ್ಯಜ್ಞಾನಾನಂದ ಪದಾರ್ಥ ತಾನೊಂದೆಯಾಗಿರ್ಪ ಮಹಾಲಿಂಗವೇ ಇಷ್ಟಮಾದಲ್ಲಿ ಶರೀರ ಮಿಥ್ಯ ಕಳೆದು ಲಿಂಗದೊಳಗೆ ಬೆರೆದ ತನುವೆ ಸತ್ತಾಯಿತ್ತು. ಆ ಲಿಂಗವೆ ಪ್ರಾಣಲಿಂಗಮಾದಲ್ಲಿ ಆ ಪ್ರಾಣದ ಮಿಥ್ಯವಳಿದು ಆ ಲಿಂಗದೊಳಗೆ ಲೀನಮಾದ ಜ್ಞಾನವೇ ಚಿತ್ತಾಯಿತ್ತು. ಎರಡರ ಸಂಗದಿಂದುದಿಸಿದ ಆನಂದ ಮಹಿಮೆಯೆ ಭಾವಲಿಂಗಮಾದಲ್ಲಿ ಮನಸ್ಸಿನ ಮಿಥ್ಯವಳಿದು ಆ ಭಾವಲಿಂಗದಲ್ಲಿ ಬೆರೆದ ಮನವೆ ಆನಂದರೂಪಮಾಯಿತ್ತು. ಇಂತಪ್ಪ ಸಚ್ಚಿದಾನಂದ ಮೂರ್ತಿಯಾದ ಗುರುರೂಪಮಾದ ಮಹಾಲಿಂಗಕ್ಕೆ ಅಷ್ಟೋತ್ತರ ಶತವಚನಂಗಳೆಂಬ ಸುವಾಸನೆವಿಡಿದಷ್ಟೋತ್ತರ ಶತದಳಂಗಳಿಂ ಸುವಾಕ್ಯಂಗಳೆಂಬ ಕೇಸರಂಗಳಂ ಪಂಚಾಕ್ಷರಿ ಬೀಜಂಗಳಿಂ ಪ್ರಕಾಶಿಸುತ್ತಿಪ್ಪ ಪ್ರಣವ ಕರ್ಣಿಕೆಯಿಂ ವಿರಾಜಿಸುತ್ತಿರ್ಪ ಚಿನ್ನದ ಪುಂಡರೀಕ ಭಕ್ತಿರಸ ಪೂರಿತಮಾಗಿರ್ಪ ಹೃದಯ ಸರಸಿಯೊಳು ವಿವೇಕ ಬಿಸದೊಳಗೆ ಕೂಡಿ ಬೆಳದು ಮಹಾಗುರೂಪದೇಶವೆಂಬ ಭಾಸ್ಕರೋದಯದಿಂ ಜಿಹ್ವಾಮುಖದಲ್ಲಿ ವಿಕಸನಮಾಗಿ ಜಗದ್ಭರಿತಮಾದ ದಿವ್ಯವಾಸನೆಯಿಂ ಮೀಸಲಳಿಯದ ಪರಮ ಪವಿತ್ರಮಾಗಿರ್ಪ ದಿವ್ಯ ಕಮಲಮಂ ಮಹಾಲಿಂಗಕರ್ಪಿಸಿ ತತ್ಕರ್ಣಿಕಾಮಧ್ಯದಲ್ಲಿ ಭಾವಹಸ್ತದಲ್ಲಿ ತಲ್ಲಿಂಗಮಂ ತಂದು ಪ್ರತಿಷೆ*ಯಂ ಮಾಡಿ ತದ್ವಚನಾಮೃತ ರಸದಿಂದಭಿಷೇಕಮಂ ಮಾಡಿ ತತ್ ಜ್ಞಾನಾಗ್ನಿಯಿಂ ಮಿಥ್ಯಾಗುಣಂಗಳಂ ದಹಿಸಿ ಆ ಸತ್ವಸ್ವರೂಪಮಾಗಿರ್ಪ ಭಸ್ಮವಂ ಧರಿಸಿ ತನ್ಮಹಿಮಾವರ್ಣನೀಯಮಾಗಿರ್ಪಾಭರಣಂಗಳಿಂದಲಂಕರಿಸಿ ಸತ್ಕೀರ್ತಿಯೆಂಬ ವಸ್ತ್ರಮಂ ಸಮರ್ಪಿಸಿ ವೈರಾಗ್ಯ ಧರ್ಮವುಳ್ಳ ಹೃದಯವೆಂಬ ಶಿಲೆಯೊಳಗೆ ವಚನಮೆಂಬ ಸುಗಂಧದ ಕೊರಡಂ ಭಕ್ತಿರಸಯುಕ್ತಮಾಗಿ ತೆಯ್ದು ಅಲ್ಲಿ ಲಭ್ಯಮಾದ ಪರಮ ಶಾಂತಿಯೆಂಬ ಗಂಧಮಂ ಸಮರ್ಪಿಸಿ ತದ್ಬೀಜ ರೂಪಮಾಗಿರ್ಪ ತತ್ವವೆಂಬಕ್ಷತೆಯನಿಟ್ಟು ಮನವೆಂಬ ಕಾಷ*ದಲ್ಲಿ ಹೊತ್ತಿರ್ಪ ಜ್ಞಾನಾಗ್ನಿಯಲ್ಲಿ ಪಲವಿಧ ಗುಣಂಗಳೆಂಬ ದಶಾಂಗಧೂಪಮಂ ಬೆಳಗಿ ಊಧ್ರ್ವಮುಖಮಾಗಿರ್ಪ ತದ್ವಾಸನಾ ಧೂಪ ಧೂಮಮಂ ಸಮರ್ಪಿಸಿ ತದ್ವಚನ ಮುಖದಲ್ಲಿ ಸಕಲವು ಅಖಂಡಮಯಮಾಗಿ ಪ್ರಕಾಶಿಸುತ್ತಿರ್ಪ ಚಿಜ್ಯೋತಿ ನೀಲಾಂಜನಮಂ ಮಂಗಳಮಯಮಾಗಿ ಬೆಳಗಿ, ವದನವೆಂಬ ಘಂಟೆಯಲ್ಲಿ ನಾಲಗೆಯೆಂಬ ಕುಡುಹನು ಮೂಲಾಧಾರಮಾರುತನ ಮೊದಲನು ಭಾವದಲ್ಲಿ ಪಿಡಿದು ನುಡಿಸಿ ತನ್ಮುಖದಲ್ಲಿ ಪ್ರಕಾಶಮಾನಮಾಗಿ ಜಗದ್ಭರಿತಮಾದ ವಚನಾಘೋಷಂಗಳೆಂಬ ಘಂಟಾನಾದಮಂ ಸಮರ್ಪಿಸಿ ವಚನಾರ್ಥಂಗಳೆಂಬ ಪಲವಿಧ ಶುಚಿರುಚಿಗಳುಳ್ಳ ಪದಾರ್ಥಂಗಳಿಂ ತನ್ಮಧ್ಯದಲ್ಲಿ ಪ್ರಕಾಶಿಸುತ್ತಿರ್ಪ ಪರಮಾನಂದಾಮೃತವನು ತೃಪ್ತಿ ಪಾತ್ರೆಯಲ್ಲಿಟ್ಟು ನೈವೇದ್ಯಮಂ ಸಮರ್ಪಿಸಿ ನಿರ್ಮಳ ಭಕ್ತಿ ರಸವೆಂಬ ಶುದ್ಧೋದಕಮಂ ನಿವೇದಿಸಿ ತನುಮನಃಪ್ರಾಣಂಗಳೆಂಬ ತಾಂಬೂಲಮಂ ಸತ್ಯ ಜ್ಞಾನಾನಂದ ರೂಪಮಾದ ಮಹಾಶಿವಲಿಂಗಮುಖದಲ್ಲಿ ಸಮರಸಾನುರಾಗದಿಂ ಪ್ರಕಾಶಮಾಗಿರ್ಪ ದಿವ್ಯತಾಂಬೂಲಮಂ ಸಮರ್ಪಿಸಿ ಲಿಂಗದೊಳಗುಪಭೋಗಿಸುತ್ತಿರ್ಪ ಅಷ್ಟ ಭೋಗಂಗಳೆ ಅಷ್ಟ ವಿಧಾರ್ಚನಂಗಳಾಗಿ ಆ ಲಿಂಗದೊಳಗೆ ಬೆರದು ಭೇದದೋರದಿರ್ಪ ಷೋಡಶ ಕಳೆಗಳೆ ಷೋಡಶೋಪಚಾರವಾಗಿ ತಲ್ಲಿಂಗ ಸಂಗವೆ ರತಿಯಾಗಿ ಎರಡೂ ಏಕಮಾಗಿರ್ಪ ನಿರ್ವಾಣ ಸುಖಮೆ ಪರಮಸುಖಮಾಗಿ ನೀನು ನಾನೆಂಬ ಭೇದವಳಿದು ಎರಡೂ ಒಂದಾಗಿ ಅಭೇದಾನಂದದಲ್ಲಿ ಬೇರೆವಾಂಛೆ ಇಲ್ಲಮಾಗಿ, ನೀನಲ್ಲದೆ ನಾನೇನೂವಲ್ಲೆ ಇದ ಬರದೋದಿ ಕೇಳಿ ಅರ್ಥವಂ ಮಾಡಿ ಆನಂದಿಸುವ ತದೀಯ ಭಕ್ತರ ವಾಂಛಿತವಂ ಸಲಿಸಿ ಮಿಥ್ಯಾಭ್ರಮೆಯಂ ನಿವೃತ್ತಿಯಂ ಮಾಡಿ ಪುನರಾವೃತ್ತಿ ರಹಿತ ಶಾಶ್ವತ ದಿವ್ಯಮಂಗಳಮಯ ನಿಜಾನಂದ ಸುಖವನಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಮಾಯಾಕೋಳಾಹಳನೆಂಬ ಬಿರುದ ಸೂರೆಗೊಂಡರು ಪ್ರಭುದೇವರು. ಯೋಗಾಂಗವ ಸೂರೆಗೊಂಡರು ಸಿದ್ಧರಾಮೇಶ್ವರದೇವರು. ಭಕ್ತಿಸ್ಥಲವ ಸೂರೆಗೊಂಡು, ನಿತ್ಯಪವಾಡವ ಗೆದ್ದರು ಬಸವೇಶ್ವರದೇವರು. ಷಟ್‍ಸ್ಥಲವ ಸೂರೆಗೊಂಡರು ಚನ್ನಬಸವೇಶ್ವರದೇವರು. ಐಕ್ಯಸ್ಥಲವ ಸೂರೆಗೊಂಡರು ಅಜಗಣ್ಣದೇವರು. ಶರಣಸತಿ ಲಿಂಗಪತಿಯಾದರು ಉರಿಲಿಂಗದೇವರು. ಪ್ರಸಾದಿಸ್ಥಲವ ಸೂರೆಗೊಂಡರು ಬಿಬ್ಬಿ ಬಾಚಯ್ಯಂಗಳು, ಜ್ಞಾನವ ಸೂರೆಗೊಂಡರು ಚಂದಿಮರಸರು. ನಿರ್ವಾಣವ ಸೂರೆಗೊಂಡರು ನಿಜಗುಣದೇವರು. ಪ್ರಸಾದಕ್ಕೆ ಸತಿಯಾದರು ಅಕ್ಕನಾಗಮ್ಮನವರು. ಉಟ್ಟುದ ತೊರೆದು ಬಟ್ಟಬಯಲಾದರು ಮೋಳಿಗಯ್ಯನ ರಾಣಿಯರು. ಪರಮ ದಾಸೋಹವ ಮಾಡಿ, ಲಿಂಗದಲ್ಲಿ ನಿರವಲಯನೈದಿದರು ನೀಲಲೋಚನೆಯಮ್ಮನವರು. ಪರಮವೈರಾಗ್ಯದಿಂದ ಕಾಮನ ಸುಟ್ಟ ಭಸ್ಮವ ಗುಹ್ಯದಲ್ಲಿ ತೋರಿಸಿ ಮೆರೆದರು ಮಹಾದೇವಿಯಕ್ಕಗಳು. ಗಂಡ ಸಹಿತ ಲಿಂಗದಲ್ಲಿ ಐಕ್ಯವಾದರು ತಂಗಟೂರ ಮಾರಯ್ಯನ ರಾಣಿಯರು. ಇಂತಿವರು ಮುಖ್ಯವಾದ ಏಳುನೂರೆಪ್ಪತ್ತು ಅಮರ ಗಣಂಗಳ ಶ್ರೀಪಾದವ ಅಹೋರಾತ್ರಿಯಲ್ಲಿ ನೆನೆನೆದು ಬದುಕಿದೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಹಸ್ತಾಬ್ಜ ಮಥನದಿಂದೊತ್ತಿ ಭಸ್ಮವ ಮಾಡಿ ಮತ್ತೆ ಪಂಚಾಕ್ಷರಿಯ ಜಪಾವಳಿಯ ಚಿತ್ತ ಶ್ರೊತ್ರದೊಳು ಮತ್ತೆ ಧಾರೆಯನೆರೆಯೆ ಸತ್ಯವದು ನಿನ್ನಂತೆ, ರಾಮನಾಥ.
--------------
ಜೇಡರ ದಾಸಿಮಯ್ಯ
ಜಗದೊಳಗೆ ಜಗ ಹುಟ್ಟಿ ಜಗಮಯವಾಗಿದ್ದುದ ಕಂಡೆನು. ಜಗವನಾಳುವ ದೊರೆ ರಾಕ್ಷಿಗವಿಯಲ್ಲಿ ಸಿಲ್ಕಿ, ಘಾಸಿಯಾಗುತಿರ್ದನು ನೋಡಾ. ಆ ರಾಕ್ಷಿ ಬ್ರಹ್ಮನ ಚರ್ಮವ ಹೊತ್ತು, ವಿಷ್ಣುವಿನ ರಕ್ತವ ಕುಡಿದು, ರುದ್ರನ ಭಸ್ಮವ ಮಾಡಿ, ಈಶ್ವರನ ಗಾಳಿಯಾಗಿ ಹಾರಿಸಿ, ಸದಾಶಿವನ ಆಕಾಶದ ಗುರಿಯನೆ[ಚ್ಚಿ] ಆಡುತಾಡುತ ಬಂದವಳು. ಅರಸಿನ ಪ್ರಜೆ-ಪರಿವಾರ, ಆನೆ-ಸೇನೆ ಎಲ್ಲವ ನುಂಗಿ ತೇಗಿ, ಜಗದೊಳಗಣ ಜಗ ಹಿರಿದಪ್ಪ ಜಗವಾಗಿ ಜಲದ ಕೊಣದಲ್ಲಿ ಹೊರಟು ದೃಷ್ಟವಾಗಿ ನಿಂದುದ ಕಂಡು ರಕ್ಷಿ ನಗುತಿದೆ. ಈ ಭೇದವ ಹಳೆಯ ಮನೆಯ ಸುಟ್ಟು ಹೊಸ ಮನೆಯಾದಲ್ಲಿ ಕಂಡೆ, ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭೂತಳದ ಮತಿವಂತರು ಆತ್ಮನ ಸ್ಥಲವಿಡಲು ಮಾತು ಮಾಣಿಕವ ನುಂಗಿ; ಜಾತಿ ಧರ್ಮವನುಡುಗಿ, ವ್ರತದ ಭ್ರಮೆಗಳ ಸುಟ್ಟು, ಚಿತ್ತ ಭಸ್ಮವ ಧರಿಸಿ ಅಣಿಮಾದಿ ಗುಣಂಗಳ ಗತಿಯ ಪಥವನೆ ಮೀರಿ, ಭ್ರಾಂತಳಿದು ಜ್ಯೋತಿ ಬೆಳಗುತ್ತಿದೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಗುರುಪಾದೋದಕವೆಂದು, ಕ್ರಿಯಾಪಾದೋದಕವೆಂದು. ಜ್ಞಾನಪಾದೋದಕವೆಂದು ಮೂರು ತೆರನುಂಟು. ಗುರುಪಾದೋದಕವೆಂದಡೆ, ಅಯ್ಯಗಳ ಪಾದಗಳ ಎರಡಂಗುಲಿಗಳಲ್ಲಿ, ಪಾದಗಳೆರಡರ ಮೂಲಾಂಗುಲಿ ಹಿಮ್ಮಡಗಳ ಅಗ್ರದಲ್ಲಿ ತನ್ನ ಪಂಚಾಂಗುಲಿಯಿಂದ ಉದಕನದ್ದಿ, ಮಂತ್ರವಳಹುವುದೆ ಗುರುಪಾದೋದಕ. ಕ್ರಿಯಾಪಾದೋದಕವೆಂದಡೆ, ಪಾದದ್ವಯದ ಅಂಗುಗಳಲ್ಲಿ ಶಿವನ ಶಕ್ತಿಯ ಪ್ರಣವವ ಬರೆದು, ಭಸ್ಮವ ಧರಿಸಿ, ನೇತ್ರದಳಗಳ ಅರ್ಪಣಂಗೈದು, ತನ್ನ ತರ್ಜನಿಯ, ಮೂರು ವೇಳೆ ಪ್ರಣವಸಹಿತ ಪಂಚಾಕ್ಷರೀಮಂತ್ರಂ ಗುರುಪಾದೋದಕವನದ್ದಿ ಎಳೆಯುವುದೆ ಕ್ರಿಯಾಪಾದೋದಕ. ಜ್ಞಾನಪಾದೋದಕವೆಂದಡೆ, ದಶಾಂಗುಗಳಲ್ಲಿ ದಶಪ್ರಣವ ಮಂತ್ರದಿಂದ ಭಸ್ಮಂ ಲಿಖಿಸಿ, ಷೋಡಶೋಪಚಾರಂ ಪೂಜೆಯ ಮಾಡಿ, ಎರಡಂಗುಲಿ ಮಧ್ಯದಲ್ಲಿ ಮೂರು ಸ್ಥಾನಂಗಳಲ್ಲಿ, ಪಂಚಾಕ್ಷರೀಮಂದಿಂದ ಎರೆಯುವುದೆ ಜ್ಞಾನಪಾದೋದಕ. ಇಂತಪ್ಪ ಪಾದೋದಕತ್ರಯಂಗಳ ಸೇವಿಸಿ ಸುಖಿಸಬಲ್ಲಡೆ ಆತನೆ ಪರಾತ್ಪರವಸ್ತು, ಕಪಿಲಸಿದ್ಧಮಲ್ಲಿಕಾರ್ಜುನದೇವಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->