ಅಥವಾ

ಒಟ್ಟು 30 ಕಡೆಗಳಲ್ಲಿ , 11 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಾಸ್ತ್ರವೆಂಬುದು ಮನ್ಮಥಶಸ್ತ್ರವಯ್ಯಾ. ವೇದಾಂತವೆಂಬುದು ಮೂಲ ಮನೋವ್ಯಾಧಿಯಯ್ಯಾ. ಪುರಾಣವೆಂಬುದು ಮೃತವಾದವರ ಗಿರಾಣವಯ್ಯಾ. ತರ್ಕವೆಂಬುದು ಮರ್ಕಟಾಟವಯ್ಯಾ. ಆಗಮವೆಂಬುದು ಯೋಗದ ಘೋರವಯ್ಯಾ. ಇತಿಹಾಸವೆಂಬುದು ರಾಜರ ಕಥಾಭಾಗವಯ್ಯಾ. ಸ್ಮøತಿಯೆಂಬುದು ಪಾಪಪುಣ್ಯವಿಚಾರವಯ್ಯಾ. ಆದ್ಯರ ವಚನವೆಂಬುದು ಬಹುವೇದ್ಯವಯ್ಯಾ, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ತಿಳಿಯಕ್ಕೆ.
--------------
ಸಿದ್ಧರಾಮೇಶ್ವರ
ಯೋಗದ ಲಾಗನರಿದು ಯೋಗಿಸಿಹೆನೆಂಬ ಯೋಗಿಗಳು ನೀವು ಕೇಳಿ. ನೆಲವಾಗಿಲ ಮುಚ್ಚಿ, ಜಲವಾಗಿಲ ಮುಚ್ಚಿ, ತಲೆವಾಗಿಲ ತೆಗೆದು ಗಗನಗಿರಿಯ ಪೂರ್ವಪಶ್ಚಿಮ ಉತ್ತರ ದಕ್ಷಿಣದ ನಡುವೆ ಉರಿವ ಅಗ್ನಿಯ ಕಂಡು, ಆ ಅಗ್ನಿಯ ಮೇಲೆ ಸ್ವರನಾಲ್ಕರ ಕೀಲುಕೂಟದ ಸಂಚಯವ ಕಂಡು, ಆ ಸಂಚಯದಲ್ಲಿ ಆಮೃತಸ್ವರವ ಹಿಡಿದು ಕೂಡುವುದೇ ಪರಮಶಿವಯೋಗ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಅದೇ ಪರಮನಿರ್ವಾಣ.
--------------
ಸ್ವತಂತ್ರ ಸಿದ್ಧಲಿಂಗ
ಶಿವಲಿಂಗಾರ್ಚನಾಕ್ರಿಯಾಶಕ್ತಿಗೆ ಅಭ್ಯಾಸದ ಯೋಗದ ರತಿ ಸರಿಯಲ್ಲ ನೋಡ, ಯೋಗದ ಬಲದಿಂದ ಸೇವಿಸುವ ಶ್ಲೇಷಾಮೃತವು ಶಿವಪ್ರಸಾದಾಮೃತಕೆ ಸರಿಯಲ್ಲ ನೋಡ, ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು ಪ್ರಾಣಲಿಂಗೈಕ್ಯ ಸಂಬಂಧಸಂಯೋಗಕ್ಕೆ ಸರಿಯಲ್ಲ ನೋಡ. ಶಿವಾನುಭಾವಕ್ಕೆ ಯೋಗಕ್ಕೆ ಇನಖದ್ಯೋತದಂತರವು ನೋಡಯ್ಯ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಪಾತಕರಟ್ಟಿ ಪುಣ್ಯಪುರುಷರಿಗರುಹುವಲ್ಲಿ ತಮ್ಮಪ್ಪಣೆಯೆ ಅಯ್ಯಾ? ಆರೂ ಅರಿಯದ ಬೋಧೆಯನರುಹಬೇಕೆಂಬಪೇಕ್ಷೆ ಲಿಂಗದಲ್ಲಿ ತೋರಿದುದು ಎನ್ನ ಸುಕೃತವಲ್ಲ ಎನ್ನ ಯೋಗದ ಬಲವಲ್ಲ ನಿಮ್ಮ ಪಾದದ ಮಹಾಕೃಪೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಅಪ್ಪುವಿನ ಯೋಗದ ಕಾಷ* ಹೊತ್ತುವಲ್ಲಿ, ಮೆಚ್ಚನೆ ತಮದ ಧೂಮ, ಶುಷ್ಕದ ಅಪ್ಪುವಿನ ಗುಣ. ಅಪ್ಪುವರತು ಶುಷ್ಕ [ತೊ]ಟ್ಟಾರೆ, ಕಿಚ್ಚು ಮುಟ್ಟುವುದಕ್ಕೆ ಮುನ್ನವೆ, ಹೊತ್ತಿ ಬೇವುದದು ಕಿಚ್ಚೋ, ಮತ್ತೊಂದೋ ? ಇಂತೀ ಉಭಯವನರಿತು, ಒಂದರಲ್ಲಿ ಒಂದು ಅದೆಯೆಂಬ ಸಂದೇಹವ ನೋಡಾ. ಅಲ್ಲಾ ಎಂದಡೆ ಭಿನ್ನಭಾವ, ಅಹುದೆಂದಡೆ ಇಷ್ಟದ ದೃಷ್ಟವೊಂದೆಯಾಗಿದೆ. ಜನ ಜಾತ್ರೆಗೆ ಹೋದವನಂತೆ ಕೂಟದಲ್ಲಿ ಗೋಷಿ* ಹ[ರಿ]ದಲ್ಲಿ, ತಮ್ಮ ತಮ್ಮ ಮನೆಯ ಇರವಿನ ಹಾದಿ. ಇಂತಿವನರಿದು ಬಾಡಗೆಯ ಮನೆಗೆ ಹೊಯ್ದಾಡಲೇತಕ್ಕೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜೂಜಿನ ವೇಧೆಯುಂಟು ಜಾಗರದ ಬಲವಿಲ್ಲ; ಆಗಲೂ ಗೆಲಲುಂಟೆ ಪ್ರಾಣಪದತನಕ? ರತುನದ ಸರ ಹರಿದು ಸೂಸಿ ಬಿದ್ದಡೆ ಮಾಣಿಕವ ಬೆಲೆಯಿಟ್ಟು ಬಿಲಿತವರಿಲ್ಲ, ಸರ್ಪಿಣಿ ಸರ್ಪನ ನುಂಗಿ [ದೀಪ] ನುಂಗಿತ್ತು ಇದು, ಯೋಗದ ದೃಷ್ಟಾಂತ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಣ್ಣ ಕಪ್ಪರದ ಕಾಳಿಕೆಯ ಕಳೆದು, ತನ್ನ ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ. ನಾಸಿಕ ಕಪ್ಪರದ ಅವಗಂಧವ ಕಳೆದು, ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ. ಜಿಹ್ವೆ ಕಪ್ಪರದಲ್ಲಿ ಅವರುಚಿಯ ಕಳೆದು ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗ ಪ್ರಸಾದಿ. ಸ್ಪರ್ಶ ಕಪ್ಪರದಲ್ಲಿ ಸೊಪ್ಪಡಗಿದಂತೆ ಯೋಗದ ಪೂರ್ವಾಶ್ರಯವ ಕಳೆದು, ತನ್ನ ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ. ಜಿಹ್ವಾಗ್ರೇ ಲಿಂಗಂ ಭಕ್ತಸ್ಯ ಲಿಂಗಸ್ಯಾಗ್ರೇ ತಥಾ ರುಚಿಃ ರುಚ್ಯಗ್ರೇ ತು ಪ್ರಸಾದೋ[s]ಸ್ತಿ ಪ್ರಸಾದೋ ಮೋಕ್ಷಸಾಧನಂ ಇದು ಕಾರಣ ಕೂಡಲಚೆನ್ನಸಂಗಯ್ಯಾ, ನಿಮ್ಮ ಪ್ರಸಾದಿಗೆ ನಮೋಯೆಂಬೆನು.
--------------
ಚನ್ನಬಸವಣ್ಣ
ಯುವತಿಯರ ವ್ಯವಹಾರವೆಂಬ ವಿಕಳತೆ ಹತ್ತಿ ಯೋಗದ ಸಮತೆ ಸಡಿಲಿತ್ತು ನೋಡಾ. ಸತ್ಯ ಸತ್ತಿತ್ತು, ಭಕ್ತಿಯರತಿತ್ತು. ಮಾಯಾವಿಲಾಸವೆಂಬ ಮೃತ್ಯು ಮುಟ್ಟದ ಮುನ್ನ, ನಿಮ್ಮತ್ತ ಹಿಡಿದು ಎತ್ತಿಕೊಳ್ಳಯ್ಯಾ, ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೀರ, ಧಾರುಣಿಯೊಳಗೆ ನಾರಿ ಶೃಂಗಾರವ ಮಾಡಿ, ಈರೇಳು ಭವನವನಮಳೋಕ್ಯವ ಮಾಡಿ, ಬಿಂದು ಶಕ್ತಿಯ ಭೇದ ಸಂದ ಯೋಗದ ಸುಖವ ತಂದು ಮೂರ್ತಿಗೊಳಿಸಿದವರಾರು ? ಒಂದೆರಡರ ನುಡಿಯ ಮತ್ತೊಂದು ಗ್ರಹಿಸಿತ್ತ ಕಂಡೆ. ಬಿಂದುವಿನ ರಸದ ಪರೀಕ್ಷೆಯ ಭೇದವ ಚಂದ್ರಕಾಂತದ ಗಿರಿಗೆ ಅರುಣ ಚಂದ್ರನೊಡನೆ ಇಂಬಿನಲ್ಲಿಪ್ಪ ಪರಿಯ ನೋಡಾ ! ಅಂಗಯ್ಯ ತಳದೊಳು ಮೊಲೆ ಕಂಗಳಲ್ಲಿ ಕರಸನ್ನೆಗೆಯ್ದಿಂಬಿನಲ್ಲಿ ನೆರೆವ ಸುಖ ಅಂದಿನಾದಿಯ ಪ್ರತಿಬಿಂಬ ಇಂದೆನಗೆ ತೋರಿತ್ತು. ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ಶರಣೆನುತಿರ್ದೆನು.
--------------
ಅಲ್ಲಮಪ್ರಭುದೇವರು
ಉರಿ ನೀರು ಕುಂಭದಂತೆ ಆಗಬಲ್ಲಡೆ, ಕಾಯಲಿಂಗಸಂಬಂಧಿ. ತರು ಧರಿಸಿದ ನೀರು ಉರಿಯಂತಾಗಬಲ್ಲಡೆ, ಭಾವಲಿಂಗಸಂಬಂಧಿ. ಕರ್ಪುರ ಧರಿಸಿದ ಅಪ್ಪು ಉರಿಯ ಯೋಗದಂ [ತಾಗಬಲ್ಲಡೆ] ಪ್ರಾಣಲಿಂಗ ಸಂಬಂಧಿ. ಇಂತೀ ಇವನಿಪ್ಪ ಭೇದವನರಿದು ನಿಶ್ಚಯಿಸಿದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಯೋಗತಾಣವನರಿದು ಯೋಗಿಸಿಹೆನೆಂಬ ಯೋಗಿಗಳಿಗೆ ಯೋಗದ ಕ್ರಮವ ಹೇಳಿಹೆವು ಕೇಳಿರಯ್ಯಾ. ಸುಷುಮ್ನೆಯ ನಾಲ್ದೆಸೆಯಲ್ಲಿ, ಆತ್ಮಕಲೆ ವಿದ್ಯಾಕಲೆ ನಾದಕಲೆ ಬಿಂದುಕಲೆಗಳನರಿಯಬೇಕು. ಆ ಕಲೆ ನಾಲ್ಕು ಸುತ್ತಿ, ಅಗ್ನಿಕಲೆಗಳ ಹತ್ತಿನರಿವುದು. ಪಿಂಗಳೆಯಲ್ಲಿ ಭಾನುಕಲೆಗಳ ಹನ್ನೆರಡನರಿವುದು. ಇಡೆಯಲ್ಲಿ ಚಂದ್ರಕಲೆಗಳು ಹದಿನಾರು ಕ್ಷಯ ವೃದ್ಧಿಯಾಗಿ ನಡೆವುದನರಿವುದು. ಈ ಮೂವತ್ತೆಂಟು ಕಲೆಗಳ ಕೂಡಿಹ ಚಂದ್ರಸೂರ್ಯಾಗ್ನಿಗಳ ಮಧ್ಯದಲ್ಲಿ ತತ್ವಮೂರು ಕೂಡೆ ಬೆಳಗುವ ಪರಜ್ಯೋತಿರ್ಲಿಂಗವನರಿದು ಯೋಗಿಸಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬಳಿಕ ಕೂಡುವುದು ಕಾಣಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯ, ಒಂದು ಕೋಟಿ ವರುಷ ತಲೆ ಕೆಳಗಾಗಿ ತಪವ ಮಾಡಿದಕಿಂದಲು ಒಂದು ದಿನ ಶಿವಭಕ್ತರಲ್ಲಿ ನಿರಹಂಕಾರವಾಗಿರ್ದಡೆ ಸಾಕು ನೋಡಾ. ಒಂದು ಕೋಟಿ ವರುಷ ಊಧ್ರ್ವಮುಖವಾಗಿ ಸೂರ್ಯನ ನೋಡಿದ ಫಲವು ಒಂದು ದಿನ ಸದಾಚಾರ ಸದ್ಧರ್ಮರಪ್ಪ ಶಿವಭಕ್ತರ ನೋಡಿದುದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಅಖಿಳ ದೇವತೆಗಳ ಸ್ತೋತ್ರವ ಮಾಡಿದ ಫಲವು ಒಂದು ದಿನ ಶರಣರಿಗೆ ಶರಣು ಮಾಡಿದುದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಅರವತ್ತಾರು ಕೋಟಿ ನದಿಗಳ ಮಿಂದು ಮುಡಿಯಿಟ್ಟ ಫಲವು, ಒಂದು ದಿನ ಸದ್ಭಕ್ತ_ಜಂಗಮ_ಶರಣಗಣ ತೀರ್ಥಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಚಾಂದ್ರಾಯಣವ್ರತ ಮೊದಲಾದ ಸರ್ವವ್ರತಂಗಳ ನಡಸಿದ ಫಲವು ಒಂದು ದಿನ ಗುರು_ಲಿಂಗ_ಜಂಗಮ_ಪ್ರಸಾದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ವೇದಾಗಮ ಪುರಾಣಶಾಸ್ತ್ರ ಮಂತ್ರಂಗಳ ಓದಿದ ಫಲವು ಒಂದು ದಿನ ಶಿವಭಕ್ತಶರಣರ ಸಂಭಾಷಣಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಮಹಾಯೋಗವ ಮಾಡಿದ ಫಲವು ಒಂದು ದಿನ ಶ್ರೀಗುರು_ಲಿಂಗ_ಜಂಗಮ ಧ್ಯಾನಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಷೋಡಶ ಮಹಾದಾನಂಗಳ ಮಾಡಿದ ಫಲವು ಒಂದು ದಿನ ಸದ್ಧರ್ಮಿ ಶಿವಯೋಗಿಗೆ ನೀಡಿದ ತೃಪ್ತಿಯ ಮಾಡಿದುದಕ್ಕೆ ಸರಿಯಲ್ಲ ನೋಡಾ. ಅಖಿಳ ಕ್ರಿಯೆಗಳು ಲಿಂಗಜಂಗಮಾರ್ಚನೆ ಕ್ರಿಯೆಗಳೆಗೆ ಸರಿಯಲ್ಲ ನೋಡಾ. ಯೋಗದ ಬಲದಿಂದ ಸಮಸ್ತ ಭೋಗವ ಪಡೆದ ಫಲವು ಒಂದು ವೇಳೆ ಗುರು_ಲಿಂಗ_ಜಂಗಮಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ ಸನ್ನಿಧಿಯಲ್ಲಿ ಭೃತ್ಯನಾಗಿರ್ದುದಕ್ಕೆ ಸರಿಯಲ್ಲ ನೋಡಾ. ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು ಪ್ರಾಣಲಿಂಗ ಸಂಬಂಧಕ್ಕೆ ಸರಿಯಲ್ಲ ನೋಡಾ [ಗುಹೇಶ್ವರ]
--------------
ಅಲ್ಲಮಪ್ರಭುದೇವರು
ಯೋಗದ ನೆಲೆಯನರಿದೆನೆಂಬಾತ ಲಿಂಗಾರ್ಚನೆಯ ಮಾಡಯ್ಯ. ಮನತ್ರಯ ಮದತ್ರಯ ಮಲತ್ರಯಂಗಳ ಕಳೆದು ತನುತ್ರಯಂಗಳನೇಕೀಭವಿಸಿ ಲಿಂಗತ್ರಯದಲ್ಲಿ ಶಬ್ದಮುಗ್ಧನಾಗಿ ಲಿಂಗಾರ್ಚನೆಯ ಮಾಡಯ್ಯಾ. ಅದು ನಿಸ್ತಾರ ಸಮಸ್ತ ಯೋಗಿಗಳ ಮೀರಿದದು ನಿಮ್ಮ ಕೂಡಿ ಬೆರಸುವ ಶಿವಯೋಗವಿಂತುಟಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
-->