ಅಥವಾ

ಒಟ್ಟು 35 ಕಡೆಗಳಲ್ಲಿ , 12 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಬ್ಬ ಶಿವಶರಣನು ಶಿವರಾತ್ರಿಯಲ್ಲಿ ನಿತ್ಯ ಶಿವಯೋಗವ ಮಾಡುವುದ ಕಂಡೆನಯ್ಯ. ಅದು ಹೇಗೆಂದಡೆ: ಅರುಹೆಂಬ ಸಮ್ಮಾರ್ಜನೆಯ ಮಾಡಿ, ಕುರುಹೆಂಬ ಗದ್ದುಗೆಯ ನೆಲೆಯಂಗೊಳಿಸಿ, ಸುಜ್ಞಾನವೆಂಬ ರಂಗವಾಲಿಯ ತುಂಬಿ, ಚಂದ್ರಸೂರ್ಯಾದಿಗಳೆಂಬ ದೀವಿಗೆಯ ಮುಟ್ಟಿಸಿ, ಮಹಲಿಂಗವೆಂಬ ಮೂರ್ತಿಯಂ ನೆಲೆಯಂಗೊಳಿಸಿ, ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವಂ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಳವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಒಬ್ಬ ಮೂರ್ತಿ ನವರತ್ನದ ಹರಿವಾಣದಲ್ಲಿ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ, ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಿಂದಿನ ಕೊಡನ ಹೊತ್ತಾಡುವ ಅಂಗನೆಯ ಒಂದಾಗಿ ಹುಟ್ಟಿದರೈವರು ಸ್ತ್ರೀಯರು. ಚಂದ ಚಂದದ ಮನೆಯ ರಚಿಸಿ ಅಲ್ಲಿ ಸರ್ವರ ಒಂದುಗೂಡುವುದ ಕಂಡೆನಯ್ಯಾ. ಬಿಂದಿನ ಕೊಡ ತುಳುಕಿ ಚಂದ್ರಾಮೃತವೊಗಲು ಚಂದಚಂದದ ಮನೆಯಳಿದು ಒಂದಾಗಿ ಹುಟ್ಟಿದವರೈವರು ಒಬ್ಬನ ನೆರೆದು ನಿಬ್ಬೆರಗಾದುದ ಕಂಡು ನಾನು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಂಬತ್ತು ಬಾಗಿಲ ಮನೆಯೊಳಗೆ ಒಂದು ಪಕ್ಷಿ ಇಂಬನರಿತು ಗೂಡನಿಕ್ಕುವುದ ಕಂಡೆನಯ್ಯ. ಅದು ಹೇಗೆಂದಡೆ: ಅದಕ್ಕೆ ಬುಡವೊಂದು, ಕೊನೆ ಮೂರು, ಆರು ಕಂಬದ ಶಿವಾಲಯವ ರಚಿಸಿ, ಇಪ್ಪತ್ತೈದು ಸೋಪಾನಂಗಳ ಮಾಡಿ, ಐವತ್ತೆರಡು ಎಸಳಿನಿಂದ ರಚಿಸಿ ಆಡುವ ಹಂಸನ ಒಬ್ಬ ಸತಿಯಳು ಹಿಡಿದು, ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಯ್ಯ, ಎನ್ನ ಕರ-ಮನ-ಭಾವ-ಕಂಗಳ ಕೊನೆಯಲ್ಲಿ ಬೆಳಗುವ ಪರಂಜ್ಯೋತಿಮೂರ್ತಿ ಕೇಳ ! ನಿತ್ಯನಿಜಾನಂದ ಪರಿಪೂರ್ಣದರಿವೆ! ಆದಿಯಲ್ಲಿ ಪ್ರಸಾದವಯ್ಯ, ಅಂತ್ಯದಲ್ಲಿ ಪ್ರಸಾದವಯ್ಯ, ಮಧ್ಯದಲ್ಲಿ ಪದಾರ್ಥವಯ್ಯ. ಈ ಪ್ರಸಾದ-ಪದಾರ್ಥವನರಿಯದವರೆಲ್ಲ ಹುಟ್ಟಂಧಕರೆಂಬೆನಯ್ಯ. ಈ ಪ್ರಸಾದ-ಪದಾರ್ಥವ ಭೇದಿಸಿ ಬಸವಣ್ಣ ಬಯಲಾದ. ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ, ಅಜಗಣ್ಣ, ಮರುಳಶಂಕರ, ನೀಲಲೊಚನೆ, ಅಕ್ಕಮಹಾದೇವಿ, ಮುಕ್ತಾಯಕ್ಕ ಮೊದಲಾದ ಮಹಾಚಿದ್ಘನಗಣಂಗಳೆಲ್ಲ ಜ್ಯೋತಿರ್ಮಯಾದರು ನೋಡ. ಮತ್ತಂ, ಸಚ್ಚಿದಾನಂದನಿಜದಿಂದ ಭೇದಿಸಿ, ಹರುಷಾನಂದಿಜಲವುಕ್ಕಿ, ಅತಿಮೋಹದಿಂದ ಪದವನೆ ನೂರೆಂಟೆಳೆಯದಾರವ ಮಾಡಿ, ಅರ್ಥವನೆ ನವವರ್ಣಯುಕ್ತವಾದ ಮಣಿಯ ಮಾಡಿ, ಮಹಾಪರಿಪೂರ್ಣಜ್ಞಾನವೆಂಬ ರಂಧ್ರÀ್ರವ ರಚಿಸಿ, ಮಹಾಚಿದ್ಘನಪ್ರಕಾಶವೆಂಬ ಬಣ್ಣವನ್ನಿಟ್ಟು, ಒಂದು ದಾರದಲ್ಲಿ ಹನ್ನೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಮೂವತ್ತಾರು ಮಣಿಯ ಪವಣಿಸಿದರಯ್ಯ. ಮಿಗಿಲೊಂದು ದಾರದಲ್ಲಿ ನಾಲ್ವತ್ತೆಂಟು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಅರುವತ್ತು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಪ್ಪತ್ತೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಂಬತ್ತುನಾಲ್ಕು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ತೊಂಬ್ತಾರು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ನೂರೆಂಟು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಇನ್ನೂರಹದಿನಾರು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ನಾಲ್ಕುನೂರಮೂವತ್ತೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಂಟುನೂರ ಅರುವತ್ತುನಾಲ್ಕು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಸಾವಿರದಏಳೂನೂರ ಇಪ್ಪತ್ತೆಂಟು ಮಣಿಯ ಪವಣಿಸಿದರಯ್ಯ. ಈ ಪ್ರಕಾರದಿಂದ ಹದಿಮೂರೆಳೆಯ ಮಣಿಗಳ ಸರಗೊಳಿಸಿ, ಆಯಾಯ ಸರದ ಎಸಳುಗಳ ಮಧ್ಯದಲ್ಲಿ ಮುತ್ತು ಮಾಣಿಕ್ಯ ನವರತ್ನಪ್ರಕಾಶಕ್ಕೆ ಮಿಗಿಲಾದ ಮಹಾಜ್ಯೋತಿರ್ಮಯ ಶ್ರೀಗುರುಲಿಂಗಜಂಗಮವೆಂಬ ಮಹಾಪ್ರಸಾದವ ಪದಕವ ಮಾಡಿ ರಚಿಸಿ, ಅಂಗ-ಲಿಂಗ, ಪ್ರಾಣ-ಲಿಂಗ, ಭಾವ-ಲಿಂಗವೆಂಬ ಉಭಯಚಿಹ್ನವಳಿದು ಮಹಾಬೆಳಗಿನೊಳಗೆ ನಿಂದು, ಸರ್ವಾವಸ್ಥೆಗಳಿಲ್ಲದೆ ಕಂಠಾಭರಣವ ಮಾಡಿ ಧರಿಸಿ ಮಹಾಪರಿಪೂರ್ಣಪ್ರಕಾಶವೆಂಬ ಮಹಾಚಿದ್ಘನ ಪ್ರಸಾದಭಾಜನದಲ್ಲಿ ಪರಿಪೂರ್ಣರಾಗಿ, ಸತ್ಯ ಸದಾಚಾರ ಸತ್ಕಾಯಕ ಸದ್ಭಕ್ತಿಯಾನಂದ ಸತ್ಕ್ರಿಯಾ ಸಮ್ಯಜ್ಞಾನದ ಬೆಳಗಿನೊಳಗಣ ಮಹಾಬೆಳಗ ಸಾಧಿಸಿ, ಆನಾದಿಬಯಲೊಳಗಣ ಮಹಾಬಯಲೊಳಗೆ ಜನಿತರಾಗಿ, ಚತುರ್ಮುಖನ ಜಡಸಂಸಾರಕ್ಕೊಳಗಾಗದೆ, ಯದೃಷ್ಟಂ ತನ್ನಷ್ಟಂ ಎಂದುದಾಗಿ, ಮತ್ತಂ ಮರಳಿ ಬಯಲೊಳಗಣ ಮಹಾಬಯಲಾದರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಲೋಕ ಹದಿನಾಲ್ಕರ ಏಕೈಕ ಸಮತೆಯನು ಠಾವರಿದು ಗ್ರಾಮವನು ನೋಡಿ ರಚಿಸಿ, ಸೀಮೆ ಸಾಯುಜ್ಯದ ತರಳ ನದಿ ಹರಿವುತ್ತಿರೆ, ತರುಣಿಯ ಮಸ್ತಕದ ನದಿಯು ಅರತು, ಅತಿಶಯದ ಆನಂದಗಾಳಿ ಬೀಸಲು ತಂದ ಪರಿಮಳವು ನೇತ್ರ ಊಧ್ರ್ವವಾಗಿ ಅತಿಶಯದ ರೂಪ ಕಪಿಲಸಿದ್ಧಮಲ್ಲಿಕಾರ್ಜುನನ ಅವಗ್ರಹಿಸಿದ ರೂಪು ಸಮತೆ ತಾನೆ.
--------------
ಸಿದ್ಧರಾಮೇಶ್ವರ
ತನ್ನಿಂದ ತಾನಾದವನು, ಉನ್ಮನಿಯ ಬಾಗಿಲ ಮುಂದೆ ನಿಂದು ಬತ್ತಲೆಯಾದ ಭಾಮಿನಿಯ ಕರೆದು, ಮಹಾಜ್ಞಾನವೆಂಬ ಹಸ್ತದಿಂದ ಹವಳ ನೀಲ ರತ್ನ ಪಚ್ಚೆ ಮುತ್ತು ಮಾಣಿಕ್ಯದ ಗದ್ದುಗೆಯ ಮೇಲೆ ಮಹಾಲಿಂಗವೆಂಬ ಮೂರ್ತಿಯ ನೆಲೆಯಂಗೊಳಿಸಿ ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾ ಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆಯ ಮೇಲೆ, ಮಹೇಶ್ವರನೆಂಬ ಹರಿವಾಣವನಿಕ್ಕಿ, ಮಹಾಪ್ರಸಾದವ ನೆಲೆಯಂಗೊಂಡು ಪ್ರಾಣಲಿಂಗಿಯೆಂಬ ತುಪ್ಪವನೆರೆದು ಶರಣನೆಂಬ ಸಕ್ಕರೆಯ ತಳೆದು ಆ ಲಿಂಗಕ್ಕೆ ತೃಪ್ತಿಯನೆಯ್ದಿಸುತಿರ್ಪಳು ನೋಡಾ! ನವರತ್ನದ ಹರಿವಾಣದೊಳಗೆ ಸಪ್ತದ್ವೀಪಂಗಳ ರಚಿಸಿ ಓಂ ನಮೋ ಓಂ ನಮೋ, ಓಂ ನಮೋ ಶಿವಾಯಯೆಂದು ಬೆಳಗುತಿಪ್ಪಳು ನೋಡಾ. ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಲ್ಲಿಂದ ಲಿಂಗಾಂಗಸಂಬಂಧದ ಆಚರಣೆಗಳರಿವಿಂ ಕಟಿಸ್ಥಾನ, ಮಂಡೆಯ ಸ್ಥಾನಗಳಲ್ಲಿ ತೀವಿದ ಲಿಂಗಧ್ಯಾನದಿಂದೆ ಸರ್ವಾಂಗಸ್ನಾನಂಗೆಯ್ದು, ಪ್ರಕ್ಷಾಲನಂ ಮಾಡಿ, ಪರಿಣಾಮೋದಕದಲ್ಲಿ ತೊಳೆದಂಥ ಕೌಪ ಮೊದಲಾದ ಮಡಿಗಳನ್ನು ಪಾದೋದಕ ಲಿಂಗಸ್ಪರಿಶನಗಳಿಂದ ಧಾರಣಂಗೈದು, ಪರಿಣಾಮವಾದ ದಿಕ್ಕುಗಳಲ್ಲಿ ನಾರು ರೋಮ ಹುಲ್ಲು ಅರಳೆ ಮೊದಲಾದ್ದರಲ್ಲಿ ಹುಟ್ಟಿದಂಥಾದ್ದಾವುದಾದರೂ ಪರಿಣಾಮವಾದ ಶಾಟಿಯ ಆಸನವ ರಚಿಸಿ, ಜಂಗಮವು ತಾವು ಸಮರಸಭಾವದಿಂದೆ ಉಪಚಾರಗಳೊದಗಿದಂತೆ ನೆರವಿಕೊಂಡು, ಕರಸ್ಥಲದಲ್ಲಿ ಮೂಲಪ್ರಣಮವನರ್ಚಿಸಿ, ಕ್ರಿಯಾಭಸಿತವನ್ನು ಕರಸ್ಥಲದಲ್ಲಿ ಇಟ್ಟುಕೊಂಡು, ಅನಾದಿ ಚಿದ್ಭಸಿತವ ಧ್ಯಾನಿಸಿ, ಮೂಲಷಡಕ್ಷರವ ಲಿಖಿತಂಗೈದು, ಅರ್ಚಿಸಿ, ಪೂಜೆಯನಿಳುಹಿ, ಸಮಸ್ತಕಾರಣಕ್ಕೆ ಇದೆ ಚೈತನ್ಯವೆಂದು ಭಾವಭರಿತವಾಗಿ, ಗುರುಪಾದೋದಕದಿಂದ ತೊಳೆದು, ಲಿಂಗಪಾದೋದಕಪ್ರಣಮಸಂಬಂಧ ಭಸ್ಮದಿಂದ ಪವಿತ್ರವಾದ ದ್ರವ್ಯಗಳೆ ಶುದ್ಧಪ್ರಸಾದವೆಂದು ಭಾವಿಸಿ, ಲಿಂಗಜಂಗಮಾರಾಧನೆಯ ಮಾಡುವುದೊಳಗೆ ಕ್ರಿಯಾಶಕ್ತಿಯರು ಶುದ್ಧೋದಕದಿಂದ ಪವಿತ್ರಕಾಯರಾಗಿ, ಲಿಂಗಬಾಹ್ಯರ ಸ್ಪರಿಶನವನುಳಿದು, ಸುಯಿಧಾನದಿಂದ, ಉದಕವೆ ಮೊದಲು ಧಾನ್ಯ ಕಾಯಿಪಲ್ಯ ಕ್ಷೀರವೆ ಕಡೆಯಾದ ಸಮಸ್ತ ದ್ರವ್ಯಂಗಳು ಶುಚಿಯಾಗಿ ಲಿಂಗಜಂಗಮಾರಾಧಕರೆ ನಿರವಯಪ್ರಭು ಮಹಾಂತಗಣಂಗಳೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಮೂಗಿಲ್ಲದ ಸತಿಗೆ ಪತಿಯಾದಾತ ಚಂದ್ರಸಾಲೆಯ ರಚಿಸಿ, ಮಲವ ಭುಂಜಿಸಿದಾತ ರಂಗಮಂಟಪವ ರಚಿಸಿ, ಪುತ್ರರು ಇಲ್ಲದ ಸತಿಯರಿಗೆ ಪತಿಯಾದಾತ ಗರ್ಭಮಂಟಪವ ರಚಿಸಿ, ಈ ಮೂವರು ಕೂಡಿ ರಚಿಸಿದ ಅರಗಿನ ದೇವಾಲಯದೊಳಗೆ ಒಂದು ಉರಿಲಿಂಗ ಉದ್ಭವಿಸಿ, ಆಲಯದ ತೊಲಿ ಕಂಬ ಬೋದು ಜಂತಿಯೆಲ್ಲವನು ದಹಿಸಿ, ಆಲಯವನುಳುಹಿ, ಗೊರವನ ನುಂಗಿ ಮೂವರ ಕೊಂದು ಮೂರುಗೂಡಿದ ಠಾವಿನಲ್ಲಿ ನಿಃಪತಿಯಾಯಿತು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಬುವೆ, ಈ ಭೇದವನು ನಿಮ್ಮ ಶರಣರೇ ಬಲ್ಲರಲ್ಲದೆ ಈ ಲೋಕದ ಮೂಢಾತ್ಮರೆತ್ತ ಬಲ್ಲರಯ್ಯ ?
--------------
ಕಾಡಸಿದ್ಧೇಶ್ವರ
ನಾದಮೂರ್ತಿಗಳು ತಮ್ಮ ನಿಲವು ಕಾಣಬಾರದಂದಿಗೆ, ಬಿಂದುಮೂರ್ತಿಗಳು ನೆಲೆಗೊಳ್ಳದಂದಿಗೆ, ಕಲಾಮೂರ್ತಿಗಳು ತಮ್ಮ ಪ್ರಕಾಶದೋರದಂದಿಗೆ, ಅತ್ತತ್ತಲೆ ತಾನೇ ಲಿಂಗವಾಗಿರ್ದನಯ್ಯ. ತನ್ನ ನೆನವಿನಿಂದ ಒಬ್ಬ ಸತಿಯಳು ಪುಟ್ಟಿದಳು ನೋಡಾ ! ಆಕೆಯ ಸಂಗದಲ್ಲಿ ಐವರು ಕನ್ನೆಯರ ಕಂಡೆನಯ್ಯ. ಆ ಐವರು ನವರತ್ನದ ಹರಿವಾಣದೊಳಗೆ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ ಪಂಚದೀಪವ ರಚಿಸಿ, ಆ ಲಿಂಗಕ್ಕೆ ಓಂ ನಮೋ ಓಂ ನಮೋ ಓಂ ನಮೋಯೆಂದು ಮಂಗಳಾರ್ತಿಯನೆತ್ತಿ ಬೆಳಗುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಯ್ಯಾ, ಗುರುಲಿಂಗಜಂಗಮ ಕರುಣಕಟಾಕ್ಷದಿಂದ ಚಿದ್ವಿಭೂತಿ ರುದ್ರಾಕ್ಷಿ ಚಿನ್ಮಂತ್ರಗಳ ಗುರುವಚನ ಪ್ರಮಾಣದಿಂದ ನಿರಂತರವು ಆಚರಿಸಿ, ಚಿದ್ಘನ ಇಷ್ಟ ಮಹಾಲಿಂಗವ ಉರಸ್ಥಲದಲ್ಲಿ ಧರಿಸಬೇಕಾದಡೆ, ದಾರದಿಂದ ಹುಟ್ಟಿದ ಸಜ್ಜೆಯ ಕರಕಮಲವಟುವ ನೂಲಕಾಯಿ, ಬಿಲ್ವಕಾಯಿ, ಗಂಧದ ಮನೆ, ನಾರಂಗದ ಕಾಯಿ, ರಜತ, ಹೇಮ, ತಾಮ್ರ, ಹಿತ್ತಾಳೆ, ಮೃತ್ತಿಕೆ ಮೊದಲಾದ ಆವುದು ತನಗೆ ಯೋಗ್ಯವಾಗಿ ಬಂದ ಚಿದ್ಘನಲಿಂಗದೇವಂಗೆ ಪರಿಣಾಮ ಕಟ್ಟುವಂತೆ, ಮೂವತ್ತಾರೆಳೆಯ ದಾರವಾದಡೆಯೂ ಸರಿಯೆ, ನಾಲ್ವತ್ತೆರಡೆಳೆಯ ದಾರವಾದಡೆಯೂ ಸರಿಯೆ, ಐವತ್ತಾರೆಳೆಯಾದಡೆಯೂ ಸರಿಯೆ, ಅರುವತ್ತುಮೂರಾದಡೆಯೂ ಸರಿಯೆ, ನೂರೆಂಟು ಇನ್ನೂರ ಹದಿನಾರು, ಮುನ್ನೂರರುವತ್ತು ಎಳೆ ಮೊದಲಾಗಿ ಲಿಂಗಾಣತಿಯಿಂದ ಒದಗಿ ಬಂದಂತೆ ಶಿವಲಾಂಛನಸಂಯುಕ್ತದಿಂದ ದಾರವ ಕೂಡಿ ಜ್ಞಾನಕ್ರಿಯಾಯುಕ್ತವಾದ ಎರಡೆಳೆಯಾದಡೆಯೂ ಸರಿಯೆ, ಪರಿಪೂರ್ಣ ಅವಿರಳ ಪರಂಜ್ಯೋತಿ ಎಂಬ ಮಹಾಜ್ಞಾನಸೂತ್ರಯುಕ್ತವಾದ ಮೂರೆಳೆಯಾದಡೆಯೂ ಸರಿಯೆ. ಸತ್ತು ಚಿತ್ತು ಆನಂದ ನಿತ್ಯವೆಂಬ ಸ್ವಾನುಭಾವ ಸೂತ್ರಯುಕ್ತವಾದ ನಾಲ್ಕೆಳೆಯಾದಡೆಯೂ ಸರಿಯೆ. ಆ ಲಿಂಗಗೃಹಂಗಳಿಗೆ ಮಂತ್ರಧ್ಯಾನದಿಂದ ಸೂತ್ರವ ರಚಿಸಿ ಲಾಂಛನಯುಕ್ತವಾದ ಪಾವಡ ಯಾವುದಾದಡೆಯೂ ಸರಿಯೆ, ಗುರುಪಾದೋದಕದಲ್ಲಿ ತೊಳೆದು ಮಡಿಕೆಯ ಮಾಡಿ, ಬೆಳ್ಳಿ ಬಂಗಾರ ತಾಮ್ರ ಹಿತ್ತಾಳೆ ಕರತಾಳವೋಲೆ ಮೊದಲಾಗಿ ತಗಡ ಮಾಡಿ. ಪ್ರಮಾಣಯುಕ್ತವಾಗಿ ಪಾವಡವ ಮಡಿಚಿ ಹುದುಗಿ, ಪೂರ್ವ ಗಳಿಗೆಯಲ್ಲಿ ತ್ರಿವಿಧಪ್ರಣವ, ಪಶ್ಚಿಮ ಗಳಿಗೆಯಲ್ಲಿ ತ್ರಿವಿಧಪ್ರಣವ ಮಧ್ಯ ಗಳಿಗೆಯಲ್ಲಿ ತ್ರಿವಿಧಪ್ರಣವ, ಎತ್ತುವ ಹುದುಗದಲ್ಲಿ ಪಂಚಪ್ರಣವ, ಉತ್ತರ ಭಾಗದರಗಿನಲ್ಲಿ ಚಿಚ್ಛಕ್ತಿಪ್ರಣವ, ದಕ್ಷಿಣ ಭಾಗದರಗಿನಲ್ಲಿ ಚಿಚ್ಛಿವಪ್ರಣವ, ಇಂತು ಹದಿನಾರು ಪ್ರಣವಂಗಳ ಷೋಡಶವರ್ಣಸ್ವರೂಪವಾದ ಷೋಡಶಕಗಳೆಂದು ಭಾವಿಸಿ, ಕ್ರಿಯಾಭಸಿತದಿಂದ ಆಯಾಯ ನಸ್ಧಲದಲ್ಲಿಫ ಸ್ಥಾಪಿಸಿ, ಆ ಮಂತ್ರಗೃಹದಲ್ಲಿ ಚಿದ್ಘನಮಹಾಪರತತ್ವಮೂರ್ತಿಯ ಮೂರ್ತವ ಮಾಡಿಸುವುದಯ್ಯಾ, ಆಮೇಲೆ ನಿರಂಜನಜಂಗಮದ ಪಾದಪೂಜೆಯ ಮಾಡಬೇಕಾದಡೆ ರೋಮಶಾಟಿಯಾಗಲಿ ಪಾವಡವಾಗಲಿ, ಆಸನವ ರಚಿಸಿ, ಮಂತ್ರಸ್ಮರಣೆಯಿಂದ ಗುರುಪಾದೋದಕದ ವಿಭೂತಿಯಿಂದ ಸಂಪ್ರೋಕ್ಷಣೆಯ ಮಾಡಿ ಪುಷ್ಪಪತ್ರೆಗಳ ರಚಿಸಿ, ಆ ಮಹಾಪ್ರಭುಜಂಗಮಕ್ಕೆ ಅಘ್ರ್ಯಪಾದ್ಯಾಚಮನವ ಮಾಡಿಸಿ, ಪಾವುಗೆಯ ಮೆಟ್ಟಿಸಿ ಮಂತ್ರಸ್ಮರಣೆಯಿಂದ ಪಾಣಿಗಳನೇಕಭಾಜನವ ಮಾಡಿ, ಬಹುಪರಾಕೆಂದು ಆ ಸಿಂಹಾಸನಕ್ಕೈತಂದು ಮೂರ್ತವ ಮಾಡಿದ ಮೇಲೆ ಪಾದಾಭಿಷೇಕಜಲವ ಶಿವಗೃಹಕ್ಕೆ ತಳಿದು, ಪಾದೋದಕ ಪುಷ್ಪೋದಕ ಗಂಧೋದಕ ಭಸ್ಮೋದಕ ಮಂತ್ರೋದಕದಿಂದ ಲಿಂಗಾಭಿಷೇಕವ ಮಾಡಿಸಿ, ಸಾಕಾರ ನಿರಾಕಾರ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಸಮ್ಮುಖದಲ್ಲಿ ಗರ್ದುಗೆಯ ಹಾಕಿ, ಅಷ್ಪಾಂಗಹೊಂದಿ ಶರಣುಹೊಕ್ಕು, ಗರ್ದುಗೆಯ ಮೇಲೆ ಮೂರ್ತವ ಮಾಡಿ, ಆ ಲಿಂಗಜಂಗಮವ ಮೂಲಮಂತ್ರದಿಂದ ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ ತನ್ನ ವಾಮಕರದ ಪಂಚಾಂಗುಲಿಗಳಲ್ಲಿ ಪಂಚಪ್ರಣವವ ಲಿಖಿಸಿ ಮಧ್ಯಸಿಂಹಾಸನದಲ್ಲಿ ಮೂಲಪ್ರಣವ ಸ್ಥಾಪಿಸಿ ಅರ್ಚಿಸಿ, ಮಹಾಪ್ರಭುಜಂಗಮದ ಶ್ರೀಪಾದವ ಮೂರ್ತವ ಮಾಡಿ ಬಹಿರಂಗದ ಕ್ರೀ ಅಂತರಂಗದ ಕ್ರೀಯಿಂದರ್ಚಿಸಿ ಪ್ರಥಮ ತಳಿಗೆಯಲ್ಲಿ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ತ್ರಿಪುಂಡ್ರರೇಖೆಗಳ ರಚಿಸಿ, ಪಂಚದಿಕ್ಕುಗಳಲ್ಲಿ ಪ್ರಣವವ ಲಿಖಿಸಿ, ದ್ವಿತೀಯ ಬಟ್ಟಲೊಳಗೆ ಮೂಲಪ್ರಣವವ ಲಿಖಿಸಿ ಗುರುಪಾದೋದಕದ ಪಾತ್ರೆಯಲ್ಲಿ ಬಿಂದುಯುಕ್ತವಾಗಿ ಮೂಲಪ್ರಣವವ ಲಿಖಿಸಿ ತ್ರಿವಿಧಲಿಂಗಸ್ವರೂಪವಾದ ಸ್ಥಾನವನರಿದು ಪಂಚಾಕ್ಷರ, ಷಡಕ್ಷರ, ನವಾಕ್ಷರ ಸ್ಮರಣೆಯಿಂದ ಪಡಕೊಂಡು ಮಂತ್ರಸ್ಮರಣೆಯಿಂದ ಲಿಂಗ ಜಂಗಮ ಭಕ್ತ ಶರಣಗಣಂಗಳಿಗೆ ಸಲಿಸಿ, ಮುಕ್ತಾಯವ ಮಾಡಿ ಪ್ರಸಾದಭೊಗವ ತಿಳಿದಾಚರಿಸೆಂದಾತ ನಮ್ಮ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಅಯ್ಯ ! ನಿರಾಳ ನಿಃಶೂನ್ಯ ಪರಮ ಭಕ್ತ_ಜಂಗಮ ತಾನಾಗಲರಿಯದೆ ಬರಿದೆ ಅಹಂಕರಿಸಿ ಮುಂದುಗೊಂಡು ಮೂರು ಮಲಗಳ ಸ್ವೀಕರಿಸಿ, ನಾವೆ ಭಕ್ತ_ಜಂಗಮವೆಂದು ನುಡಿವ ಕರ್ಮಕಾಂಡಿಗಳು ಕಾಶಿ, ಕೇತಾರ, ಶ್ರೀಶೈಲ, ಗಯಾ, ಪ್ರಯಾಗ, ಶಿವಗಂಗೆ, ಕಂಚಿ, ಕಾಳಹಸ್ತಿ, ಪಂಪಾಕ್ಷೇತ್ರ, ವೀರಣ್ಣ, ಬಸವಣ್ಣ, ಕಲ್ಲಣ್ಣ, ಮಲ್ಲಣ್ಣ, ಕಂಥೆ, ಕಮಂಡಲ, ಗದ್ದಿಗೆ, ಪಾವುಗೆ, ಭಸ್ಮ, ಘಂಟಿಕೆ, ಪುರಾಣ, ದಂಡಾಗ್ರ, ಗಿಳಿಲು, ಶಂಖು, ತಿಥಿ, ವಾರ, ನಕ್ಷತ್ರ, ಹುಣ್ಣಿವೆ, ಅಮಾವಾಸ್ಯೆ, ಸೂರ್ಯ, ಚಂದ್ರಾಗ್ನಿ, ದೀಪಾರತಿ ಗಂಗೆ, ಗೌರಿ, ವಿಘ್ನೇಶ್ವರ ಮೊದಲಾದವು ಇವು ದೈವಂಗಳೆಂದು ಕಲ್ಲು, ಮಣ್ಣು, ಮರದಿಂದ ರಚಿಸಿ, ಸಂದಿ-ಗೊಂದಿ_ಮಾಡು- ಜಗುಲಿಯ ಮಾಡಿಟ್ಟು, ಅದರ ತೊಳೆದ ನೀರು, ಎಂಜಲವ ತಿಂಬವರ ದೇವ_ಭಕ್ತರೆನಬಹುದೆ ? ಇಂತಪ್ಪ ಅನಾಚಾರಿ ಶ್ವಪಚರ, ಭಕ್ತ_ಜಂಗಮ_ದೇವರೆಂದು ಪೂಜಿಸಲಾಗದು. ನಿರಾಭಾರಿ ವೀರಶೈವಾಚಾರ ಕ್ರಿಯಾಜ್ಞಾನ ವೈರಾಗ್ಯ ಸದ್ಭಕ್ತಿಯುಳ್ಳ ಸದ್ಭಕ್ತ ಶಿವಶರಣನ ಪೂಜಿಸಿ ಪಾದೋದಕ_ಪ್ರಸಾದವ ಕೊಂಡಡೆ ಭವಪಾಶಕರ್ಮಂಗಳು ಮಾಣ್ಬವು ಕಾಣಾ ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
-->