ಅಥವಾ

ಒಟ್ಟು 162 ಕಡೆಗಳಲ್ಲಿ , 40 ವಚನಕಾರರು , 123 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೈಕನೆಂ....... ಅನೇಕ ವಿಧ ಸದ್ಭಕ್ತಿ ಪದವನರಿದು ಆ ಗುರುವಿನಾ ಮನದ ಮತಿಯ ಬೆಳಗುವ ನಿರ್ಮಳಾಂಗನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಸ್ಥೂಲತನುವಿನಲ್ಲಿ ಆಕಾರಸ್ವರೂಪವಾದ ದೀಕ್ಷಾಗುರುವನರಿದರ್ಚಿಸಬಲ್ಲಾತನೆ ಶಿಷ್ಯ. ಸೂಕ್ಷ್ಮ ತನುವಿಲ್ಲಿ ಬಕಾರಸ್ವರೂಪವಾದ ಶಿಕ್ಷಾಗುರುವನರಿದರ್ಚಿಸಬಲ್ಲಾತನೆ ಶಿಷ್ಯ. ಕಾರಣತನುವಿಲ್ಲಿ ಹಂಕಾರಸ್ವರೂಪವಾದ ಮೋಕ್ಷಗುರುವನರಿದರ್ಚಿಸಬಲ್ಲಾತನೆ ಶಿಷ್ಯ. ಈ ತ್ರಿವಿಧವನರಿದರ್ಚಿಸಬಲ್ಲಾತಂಗಲ್ಲದೆ ಶಿಷ್ಯಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರೀಗುರುಸೋಂಕಿದ ಶಿಷ್ಯ ತಾನಾ ಗುರುವಾಗದೆ ಮಾಣನು. ಅದೆಂತೆಂದಡೆ: ಜ್ಯೋತಿಯಿಂದಾದ ಜ್ಯೋತಿಯಂತೆ ಭ್ರಮರನಿಂದ ಕೀಟ ಭ್ರಮರನಾದಂತೆ ಶಿಷ್ಯನು ಗುರುವಿ[ಗೆ] ಭೇದವಾಗಿರನು. ಇಂತಪ್ಪ ಶಿಷ್ಯನು ಸದ್ಗುರುವಿನ ಮೂರ್ತಿಯ ಧ್ಯಾನಿಸಿ, ಗುರುಪದವ ಪೂಜಿಸಿ, ಗುರುವಾಕ್ಯವೇ ಮಂತ್ರವೆಂದು ನಂಬಿ, ಗುರುವಿನ ಕೃಪೆಯೇ ಮುಕ್ತಿಯೆಂದು ಅರಿದಿಪ್ಪನು. ಅದೆಂತೆಂದಡೆ: ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಂ ಮಂತ್ರಮೂಲಂ ಗುರೋರ್ವಾಕ್ಯಂ ಮುಕ್ತಿಮೂಲಂ ಗುರೋಃ ಕೃಪಾ ಇಂತೆಂದುದಾಗಿ, ಗುರುವಿನ ಕರುಣದಿಂದ ಷಟ್‍ತ್ರಿಂಶತ್ತತ್ವಂಗಳ ಸ್ವರೂಪವನರಿತು ತತ್ವಾತೀತವಾದ ಪರವಸ್ತು ವಾಙ್ಮನಾತೀತವಾಗಿ ತನ್ನ ಭಾವಾಬ್ಥೀಷ್ಟಲಿಂಗದ ನೆನಹು ಸೋಂಕುಗಳಿಂದಭ ಸೌರಾಷ್ಟ್ರ ಸೋಮೇಶ್ವರಲಿಂಗವಪ್ಪುದು ತಪ್ಪದಯ್ಯಾ.
--------------
ಆದಯ್ಯ
ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ. ಏಕೆ? ಆತನ ಧನಕ್ಕೆ ತಂದೆಯಾದನಲ್ಲದೆ ಆತನ ಮನಕ್ಕೆ ತಂದೆಯಾದನೆ ? ಏಕೆ? ಆತನ ಮನವನರಿಯನಾಗಿ, ಆತನ ಧನಕ್ಕೆ ತಂದೆಯಾದನು. ತನ್ನಲ್ಲಿರ್ದ ಭಕ್ತಿಯ ಮಾರಿಕೊಂಡುಂಬವರು ನಿಮ್ಮ ನಿಜಭಕ್ತರಲ್ಲವಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ ! ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ. ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ, ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ. ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು. ತನ್ನ ನೇತ್ರಕ್ಕಿಂಪಾದುದೆ ಸುವರ್ಣಸುವಸ್ತು, ತನ್ನ ಶ್ರೋತಕ್ಕೆ ಸೊಂಪಾದುದೆ ವೇದಶಾಸ್ತ್ರ, ಪುರಾಣ. ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ, ತನ್ನ ಮನ ಮುಳುಗಿದುದೆ ಲಿಂಗ. ತನ್ನ ನೆತ್ತಿಯಲ್ಲಿ ಸತ್ಯರ್ಲೋಕ, ಪಾದದಲ್ಲಿ ಪಾತಾಳಲೋಕ, ನಡುವೆ ಹನ್ನೆರಡು ಲೋಕ. ಅಂಡಜ ಪಿಂಡಜ ಉದ್ಭಿಜ ಜರಾಯುಜವೆಂಬ ಎಂಬತ್ತು ನಾಲ್ಕುಲಕ್ಷ ಜೀವರಾಶಿಗಳು. ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು, ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ದವು. ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನರಿದು ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ. ಈ ಘಟದೇವತೆಯ ಸಟೆಯೆಂದು ಬಿಸುಟು ಮುಂದೆ ತಾ ದಿಟವಪ್ಪುದಿನ್ನೆಲ್ಲಿಯದೊ ? ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು. ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು. ತೇಜವಳಿದಂದೆ ಹಸಿವು ತೃಷೆಗಳಳಿದವು. ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು. ಆಕಾಶವಳಿದಂದೆ ಅವು ಅಲ್ಲಿಯೆ ಲೀಯವಾಯಿತ್ತು. ಇದು ಕಾರಣ ಉರಿಕೊಂಡ ಕರ್ಪುರದ ಕರಿ ಕಂಡವರುಂಟೆ ? ಅಪ್ಪುವುಂಡ ಉಪ್ಪಿನ ಹರಳ ಮರಳಿ ಹೊರೆಯ ಕಟ್ಟಿ ಹೊತ್ತವರುಂಟೆ ? ವಾಯುಕೊಂಡ ಜ್ಯೋತಿಯ ಬೆಳಗ ಕಂಡವರುಂಟೆ ? ಹರಿ ಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ. ಮಣ್ಣಿನ ಸಾರಾಯದಿಂದ ಮರನುತ್ಪತ್ಯ. ಮರದ ಸಾರಾಯದಿಂದ ಎಲೆಯುತ್ಪತ್ಯ ಎಲೆಯ ಸಾರಾಯದಿಂದ ಹೂವ ಉತ್ಪತ್ಯ ಹೂವ ಸಾರಾಯದಿಂದ ಕಾಯಿ ಉತ್ಪತ್ಯ ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ ರುಚಿಯಿಂದತ್ತ ಇಲ್ಲವೆಂಬ ತತ್ವ. ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ? ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ; ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ. ಸಿದ್ಧರಾಮಯ್ಯ.
--------------
ಅಲ್ಲಮಪ್ರಭುದೇವರು
ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ; ಶಿಷ್ಯನೆಂಬ ಪ್ರತಿಭಾವವಿಲ್ಲದ ಗುರು; ಏನೆಂಬೆನೇನೆಂಬೆ ಎರಡಿಲ್ಲದ ಘನವನೇನೆಂಬೆನೇನೆಂಬೆ ! ಉಭಯವಳಿದು ಒಂದಾದುದನೇನೆಂಬೆನೇನೆಂಬೆ: ಕೂಡಲಚೆನ್ನಸಂಗಯ್ಯನಲ್ಲಿ ಗುರುಶಿಷ್ಯಸಂಬಂಧವಪೂರ್ವ
--------------
ಚನ್ನಬಸವಣ್ಣ
ಬಳಿಕ್ಕಂ ಶಿವಲಿಂಗಸ್ಥಲಮೆ, ಕಾಯಾನುಗ್ರಹ ಇಂದ್ರಿಯಾನುಗ್ರಹ ಪ್ರಾಣಾನುಗ್ರಹ ಕಾಯಾರ್ಪಿತ ಕರಣಾರ್ಪಿತ ಭಾವಾರ್ಪಿತ ಶಿಷ್ಯ ಶುಶ್ರೂಷಾ ಸೇವ್ಯಂಗಳೆಂದೊಂಬತ್ತಾದುದದೆ ತ್ವದೀಯ ರೂಪವಯ್ಯಾ, ಪರಮ ಶಿವಲಿಂಗ ಪರಾಪರ ಪಾಣಿಕುರಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಈ ಪೊಡವಿಯ ಮಡದಿಯ ನಡುನಯನದ ಬೆಡಗಿನ ಬೆಳಗಿನೊಳೆಸೆವಾ ಬಾಳೇಹಳ್ಳಿ ಸಿಂಹಾಸನಾದ್ಥೀಶ ಪೊಡವಿಡಿ ರುದ್ರಮುನಿಸ್ವಾಮಿಗಳ ಕರಕಂಚೋದ್ಭವರಾದ ಚಿಕ್ಕರೇವಣಸಿದ್ಧಸ್ವಾಮಿಗಳು ಎನಿಸಿದರು. ಆ ಚಿಕ್ಕ ರೇವಣಸಿದ್ಧಸ್ವಾಮಿಗಳ ಶಿಷ್ಯ ಗುರುನಂಜಸ್ವಾಮಿ, ಆ ಗುರುನಂಜಸ್ವಾಮಿಗಳ ಶಿಷ್ಯ ರಾಚೋಟಿಸ್ವಾಮಿ, ಆ ರಾಚೋಟಿಸ್ವಾಮಿಗಳ ಶಿಷ್ಯ ನಿಡುಮಾಮಿಡಿ ಕರಿಬಸವಸ್ವಾಮಿ, ಆ ಕರಿಬಸವಸ್ವಾಮಿಗಳ ಶಿಷ್ಯ ಮಲಘಣ ಶಾಂತಸ್ವಾಮಿಗಳು, ಆ ಮಲಘಣದ ಶಾಂತಸ್ವಾಮಿಗಳ ಶಿಷ್ಯ ಜಡೆಶಾಂತಸ್ವಾಮಿಗಳು ಆ ಜಡೆಶಾಂತಸ್ವಾಮಿಗಳ ಶಿಷ್ಯ ಮಹಾಂತಸ್ವಾಮಿಗಳು, ಆತನ ಶಿಷ್ಯ ಮಡಿವಾಳಸ್ವಾಮಿ, ಆತನ ಶಿಷ್ಯ ರಾಚೋಟಿಸ್ವಾಮಿಗಳು, ಆತನ ಶಿಷ್ಯ ಮಹಾಂತಸ್ವಾಮಿ, ಆತನ ಶಿಷ್ಯ ಅತೀತವ ಕೈಕೊಂಡು ಸರ್ವಕ್ಕೆ ಅತೀತನಾದ ಚಿಣಮಗೇರಿ ಚೌಡಾಪೂರ ನಡುಸೀಮಿ ಗುಡ್ಡದ ಯೋಗಿಯೆನಿಸಿದ ಮಹಾಂತಸ್ವಾಮಿಗಳು, ಆತನ ಶಿಷ್ಯ ಮಡಿವಾಳಸ್ವಾಮಿ, ಆತನ ಶಿಷ್ಯ ಮರಿಸ್ವಾಮಿಗಳು, ಆತನ ಶಿಷ್ಯ ಗುರುಬಸವದೇವರು. ಆ ಗುರು ಬಸವದೇವರ ಕನ್ನೆ ಶಿಷ್ಯ ಬಿದನೂರ ಮಡಿವಾಳಾಖ್ಯನು. ಆ ಮಡಿವಾಳಾಖ್ಯನೆಂಬ ನಾಮವಿಡಿದು ನಿರ್ನಾಮಲೀಲಾ ನಟಿಸಬೇಕೆಂಬ ಅರವಿನೊಳಗೆ ಮರವಾಗಿರ್ದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಆತ ಬಂದಾನಂದ ಅಕ್ಷರ ದೀಕ್ಷೆಯನು ಗೋಪ್ಯತರಂದದನು ಸಂಭವಿಸಲು, ಖ್ಯಾತ ಮೂವತ್ತಾರು ಬೆರಸಿ ಬೆರೆಯದ ತತ್ವ, ಆ ಗುರುವ ಪಾಲಿಸಿದ ಶಿಷ್ಯ ಜ್ಯೋತಿರ್ಮಯನೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮಂಗಳಾಂಗನ ಬೆಳಗು ಹೊಂಗಹ ಭೇದವನು ಜಂಗಮಸ್ಥಾವರದೊಳೇಕವೆಂದು ಂಗ ಸಂಗದಲ್ಲಿದ್ದ ಮಂಗಳ ಪ್ರಸಾದ ತೆಂಗ ಮೂಲನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಸದ್ಗುರುವಪ್ಪ ಅಂಡದಲ್ಲಿ ಸದಾತ್ಮವಪ್ಪ ಶಿಷ್ಯ ಪಿಂಡಿತವಾಗಿ, ಆ ಪಿಂಡಕ್ಕೆ ದಿವ್ಯತೇಜೋಪ್ರಕಾಶವಪ್ಪ ಆತ್ಮ ಪುಟ್ಟಲಿಕ್ಕಾಗಿ, ಗುರುವಿನ ಕರಂಡವಳಿದು ಆ ಶಿಷ್ಯನ ಪಿಂಡವಳಿದು, ಮರದಲ್ಲಿ ಉರಿಹುಟ್ಟಿ ಮರನೆಂಬುದು ಕೆಟ್ಟು ಕೆಂಡವಾದಂತೆ, ಕೆಂಡದ ಬೆಂಬಳಿಯಲ್ಲಿ ನಂದದ ದೀಪವ ಕಂಡು . ಕುಂದದ ಬೆಳಗಿನಲ್ಲಿ ಕೂಡಬೇಕು ಸದ್ಯೋಜಾತಲಿಂಗವ.
--------------
ಅವಸರದ ರೇಕಣ್ಣ
ಪಟ್ಟವ ಕಟ್ಟಿದ ಮೇಲೆ ಲಕ್ಷಣವನರಸಲುಂಟೇನಯ್ಯಾ ? ಕೊಡುಂಡು ಜಾತಿಭೇದವನರಸಲುಂಟೇನಯ್ಯಾ ? ಅನ್ಯಭವಿಗೆ ಲಿಂಗುಪದೇಶವ ಕೊಟ್ಚು, ಅವನಲ್ಲುಣಬಾರದೆಂದು ಕುಲಕಂಜಿ, ಒಣ ಪಡಿಯ ತಂದು, ಬೆರಸಿ ಪಾಕವ ಮಾಡಿ ಉಂಬ ಅಜ್ಞಾನಿ ಗುರು ನೀ ಕೇಳಾ. ನಿನ್ನ ಚಿತ್ಕಳಾಪರಬ್ರಹ್ಮಲಿಂಗವನವರಿಗೆ ಕುಡುವಾಗ `ಅವರು ಮಾಡಿದ ದೋಷ ಎನ್ನನಂಡಲೆವವು ಕೊಡಲಮ್ಮೆ' ಎಂಬ ಭಾವ ನಿನ್ನಲ್ಲರಿಯದೆ, ಕಾಂಚಾಣ ಕಪ್ಪಡದಾಸೆಗೆ ದೀಕ್ಷವ ಮಾಡಿ, ಹಿಂದೆ ಉಣಬಾರದೆಂಬ ಶೀಲವ ಹಿಡಿದರೆ, ಮುಂದೆ ಯಮದಂಡನೆ ಬರುವುದನರಿಯಾ ? ಇಂತೀ ಅಜ್ಞಾನಿಗಳ ಗುರು ಶಿಷ್ಯ ಸಂಬಂಧಕ್ಕೆ ಎಂತು ಮೆಚ್ಚುವನಯ್ಯಾ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂಗದ ಮೇಲೆ ಲಿಂಗವ ಧರಿಸಿದ ಬಳಿಕ ಸರ್ವಾಂಗಲಿಂಗವಾಗದಿದ್ದರೆ ಆ ಲಿಂಗವ ಏತಕ್ಕೆ ಧರಿಸಲಿ ? ಪ್ರಸಾದ ಕೊಂಡ ಕಾಯ ಪ್ರಸಾದವಾಗದಿದ್ದರೆ ಆ ಪ್ರಸಾದ ಏತಕ್ಕೆ ಕೊಳ್ಳಲಿ ? ಇದು ಕೊಟ್ಟವನ ಗುಣದಿಂದಾದುದು. ಅದನ್ನು ವಿಚಾರಿಸದೆ ಏತಕ್ಕೆ ಲಿಂಗವ ಧರಿಸಿದಿರಿ ? ಏತಕ್ಕೆ ಪ್ರಸಾದವ ಕೊಂಬುವಿರಿ ? ಇದಕ್ಕೆ ಸಾಕ್ಷಿ: 'ಸರ್ವದ್ರವ್ಯವಂಚ ವೇದಯಂ ತದ್ವಾಹಾನ ವಿಖವತೆ' ಇಂತಪ್ಪ ಶ್ರುತಿ ಹುಸಿ ಎನ್ನಿರೊ ವೇಷಧಾರಿಗಳಿರಾ. ನಿಮಗೆ ಪಂಚಾಕ್ಷರ ಸಂಯುಕ್ತವ ಮಾಡಿದ ಗುರುವಿನ ನಡೆಯಲ್ಲಿ ನಿಮ್ಮ ನಡೆ ಎಂತೆಂದಡೆ: ಸಾಕ್ಷಿ: 'ನಾಮಧಾರಕ ಗುರು ನಾಮಧಾರಕಃ ಶಿಷ್ಯಃ | ಅಂಧ ಅಂಧಕಯುಕ್ತಾಃ ದ್ವಿವಿಧಂ ಪಾತಕಂ ಭವೇತ್ ||' ಎಂದುದಾಗಿ, ನಮ್ಮ ಶಿವಗಣಂಗಳ ಸುವಾಚ್ಯ ಸಾಹಿತ್ಯವೆಂದರೆ ಉರಿಕರ್ಪುರ ಸಂಯೋಗವಾದಂತೆ, ವಾಯು ಗಂಧವನಪ್ಪಿದಂತೆ ಶಿವಗಣಂಗಳ ಪಂಚೇಂದ್ರಿಯ ಶಿವನ ಪಂಚಮುಖವಾಗಿದ್ದಿತು. ಪಂಚಾಚಾರವೆ ಪಂಚಬ್ರಹ್ಮ ಪರಿಪೂರ್ಣ ತಾನೆ. ಗುರು, ಲಿಂಗ, ಜಂಗಮ, ತೀರ್ಥಪ್ರಸಾದ ಪಂಚಬ್ರಹ್ಮಮೂರ್ತಿ ನಿಮ್ಮ ಶರಣ. ಇಂತೀ ಶರಣನ ನಿಲವನರಿಯದೆ ನುಡಿವ ವೇಷಧಾರಿಗಳ ಷಡುಸ್ಥಲಬ್ರಹ್ಮಜ್ಞಾನಿಗಳೆಂದರೆ ಕೆಡೆಹಾಕಿ ಮೂಗ ಕೊಯ್ದು, ಇಟ್ಟಂಗಿಯ ತಿಕ್ಕಿ, ಸಾಸಿವೆಯ ಪುಡಿ ತಳೆದು, ನಿಂಬಿಹಣ್ಣು ಹಿಂಡಿ, ಕೈಯಲ್ಲಿ ಕನ್ನಡಿಯ ಕೊಟ್ಟು, ನಿಮ್ಮ ನಿಲವ ನೋಡೆಂದು ಮೂಡಲ ಮುಂದಾಗಿ ಅಟ್ಟದೆ ಬಿಡುವನೆ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಗುರುಶಿಷ್ಯಸಂಬಂಧವೆಂತಿಪ್ಪುದೆಂದಡೆ, ಹೇಳಿಹೆ ಕೇಳಿರೋ, ಅರಿಮರುಳುಗಳಿರಾ. ಕಾಯಗುಣವಳಿದುದೇ ಗುರು, ಜೀವಗುಣವಳಿದುದೇ ಲಿಂಗ, ಪ್ರಾಣಗುಣವಳಿದುದೇ ಜಂಗಮ. ಈ ತ್ರಿವಿಧವನರಿದು ಆ ತ್ರಿವಿಧ ನಿಕ್ಷೇಪವನರುಹಿಸಿಕೊಟ್ಟವನೀಗ ಗುರು. ಅಲ್ಲಿ ಉಪದೇಶವ ಕೊಂಡವನೀಗ ಶಿಷ್ಯ. ಹೀಗಿರುವುದೀಗ ಗುರುಶಿಷ್ಯಸಂಬಂಧ. ಅದಕ್ಕೆ ನಮೋ ನಮೋ ಎಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಚೌಪೀಠದ ಮಂಟಪದಲ್ಲಿ ಗುರು ಕುಳ್ಳಿರ್ದು, ದ್ವಿದಳಮಂಟಪದಲ್ಲಿರ್ದ ಶಿಷ್ಯಂಗೆ, ತ್ರಿಕೂಟಸ್ಥಾನದ ಲಿಂಗವನುಪದೇಶಿಸಿ ತೋರಿ, ಗುರುಲಿಂಗದೊಳಗಾದನು. ಇದು ಕರಚೋದ್ಯ ನೋಡಾ. ಶಿಷ್ಯ ಲಿಂಗವ ಗ್ರಹಿಸಿ ಲಿಂಗವಾದ ಪರಿಯನು ಇತರರ್ಗರಿಯಬಹುದೇ?, ಜ್ಞಾನೋಪದೇಶದ ಬಗೆಯನು, ನಿಜಗುರು ಸಿದ್ಧಲಿಂಗೇಶ್ವರ ನಿಮ್ಮ ಶರಣ ಬಲ್ಲನು.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->