ಅಥವಾ

ಒಟ್ಟು 54 ಕಡೆಗಳಲ್ಲಿ , 25 ವಚನಕಾರರು , 51 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋಗಾಂಗ ಭೋಗಾಂಗ ಜ್ಞಾನಾಂಗ ಈ ತ್ರಿವಿಧವನು ಮರೆದು, ಭಕ್ತಿಯೋಗದ ಮೇಲೆ ನಿಂದು, ವೈರಾಗ್ಯಯೋಗದ ಮೇಲೆ ನಿಂದು, ನಡೆದು ನುಡಿದು ತೋರುವರು ಎಮ್ಮೆ ಶರಣರು, ಗುರುಲಿಂಗಜಂಗಮ ಈ ತ್ರಿವಿಧವನು. ಸುಖ ದುಃಖ ಚಿಂತೆ ಸಂತೋಷವೆಂಬುವಂ ಕಳೆದು, ಉತ್ಪತ್ತಿಸ್ಥಿತಿಲಯವೆಂಬುವ ಸುಟ್ಟು, ದೃಕ್ಕು, [ದರ್ಶನ], ದೃಶ್ಯವೆಂಬ ತ್ರಿಕರಣವ ಏಕವಮಾಡಿ, ಪಿಂಡಾಂಡವಾ ಬ್ರಹ್ಮಾಂಡವೊಂದೆಂಬುದ ಅರಿದು, ಸಂದ ಹರಿದು, ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ, ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ ಎನ್ನ ಬಂಧನ ಹರಿಯಿತ್ತು, ನಾನು ಬಟ್ಟಬಯಲಾದೆನಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಜೀವಕುಳವಳಿಯಿತ್ತು, ಜ್ಞಾನಕುಳ ಉಳಿಯಿತ್ತು. ಭವಪಾಶ ಹರಿಯಿತ್ತು, ಅಜ್ಞಾನ ಹಿಂಗಿತ್ತು. ಎಲೆ ಗೋಪತಿನಾಥ ವಿಶ್ವೇಶ್ವರಲಿಂಗಾ, ನಿನ್ನತ್ತ ಮನವಾಯಿತ್ತೆನಗೆ ಕೃಪೆಮಾಡು ಕೃಪೆಮಾಡು ಶಿವಧೋ ಶಿವಧೋ.
--------------
ತುರುಗಾಹಿ ರಾಮಣ್ಣ
ಅರುಹಿನ ಜ್ಯೋತಿಯೆದ್ದಿತ್ತು, ಶರೀರವನೆಲ್ಲ ತುಂಬಿತ್ತು, ಮರವೆಯ ತಮ ಹರಿಯಿತ್ತು, ಕರಣಂಗಳ ತುಂಡಿಸಿತ್ತು, ವಿಷಯಂಗಳ ಶಿವನರಿಯಿತ್ತು. ದಶವಿಧೇಂದ್ರಿಯಂಗಳ ದಾಳಿಯ ನಿಲಿಸಿತ್ತು. ಪಂಚಮಹಾಭೂತಂಗಳಂಗಳ ಪ್ರಪಂಚುವ ಪರಿಹರಿಸಿತ್ತು. ಬ್ರಹ್ಮವೇ ತಾನೆಂಬ ಕುರುಹ ಮೈಗಾಣಿಸಿತ್ತು. ತಾನೆಂಬ ಕುರುಹನಳಿದ ಅವಿರಳ ಸಹಜನು ಭಕ್ತನು ನೋಡಾ, ಮಹಾಲಿಂಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮನ ಮಂಕಾಯಿತ್ತು; ತನು ಮರೆಯಿತ್ತು; ವಾಯು ಬರತಿತ್ತು. ಉರಿ ಎದ್ದಿತ್ತು, ಹೊಗೆ ಹರಿಯಿತ್ತು, ಸರೋವರವೆಲ್ಲ ಉರಿದು ಹೋಯಿತ್ತು. ಒಳಕ್ಕೆ ಹೊಕ್ಕು ಕದವ ತೆಗೆದು ಬಯಲು ನೋಡಿ ಬೆಳಗ ಕೂಡಿದಲ್ಲದೆ ನಿಜಮುಕ್ತಿ ಇಲ್ಲವೆಂದರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕೋಡಗದ ತಲೆಯ ಚಂಡಿನ ಮೇಲೆ ಮೂರುಕವಲಿನ ಸೂಜೆ. ಮೂರರ ಮನೆಯಲ್ಲಿ ಐದು ಬೆಟ್ಟವಡಿಗಿದವು. ಬೆಟ್ಟದ ತುತ್ತತುದಿಯಲ್ಲಿ ಮಟ್ಟಿಲ್ಲದ ಬಾವಿ. ಬಾವಿಯೊಳಗೊಂದು ಹಾವು ಹುಟ್ಟಿತ್ತು. ಆ ಹಾವಿನ ಮೈಯೆಲ್ಲವೊ ಬಾಯಿ. ಬಾಲದಲ್ಲಿ ಹೆಡೆ ಹುಟ್ಟಿ, ಬಾಯಲ್ಲಿ ಬಾಲ ಹುಟ್ಟಿ, ಹರಿವುದಕ್ಕೆ ಹಾದಿಯಿಲ್ಲದೆ, ಕೊಂಬುದಕ್ಕೆ ಆಹಾರವಿಲ್ಲದೆ ಹೊಂದಿತ್ತು. ಆ ಹಾವು ಬಾವಿಯ ಬಸುರಿನಲ್ಲಿ ಬಾವಿಯ ಬಸುರೊಡೆದು ಹಾವಿನ ಇಲು ನುಂಗಿ ಬೆಟ್ಟ ಚಿಪ್ಪು ಬೇರಾಗಿ ಸೂಜಿಯ ಮೊನೆ ಮುರಿದು ಕೋಡಗದ ಚಂಡು ಮಂಡೆಯ ಬಿಟ್ಟು ಹಂಗು ಹರಿಯಿತ್ತು. ಆತ್ಮನೆಂಬ ಲಿಂಗ ನಾಮ ರೂಪಿಲ್ಲ ನಾರಾಯಣಪ್ರಿಯ ರಾಮನಾಥನಲ್ಲಿ ಶಬ್ದಮುಗ್ಧನಾದ ಶರಣಂಗೆ.
--------------
ಗುಪ್ತ ಮಂಚಣ್ಣ
ಸಾಕಯ್ಯಾ, ಲೋಕದ ಹಂಗು ಹರಿಯಿತ್ತು ತನುವಿನಾಸೆ ಬಿಟ್ಟಿತ್ತು ಮನದ ಸಂಚಲ ನಿಂದಿತ್ತು. ನುಡಿಗಡಣ ಹಿಂಗಿತ್ತು ಘನವಬೆರೆಯಿತ್ತು, ಬೆಳಗಕೂಡಿತ್ತು. ಬಯಲಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅವಳನವನೇರಿ ಕಳಚಿತ್ತ ಬಿಂದು ನಿಲುವುದಕ್ಕೆ ನೆಲೆಯಿಲ್ಲದೆ, ರೂಪಿಂಗೊಡಲಿಲ್ಲದೆ ಕೂಸು ಸತ್ತಿತ್ತು, ಅವರಿಬ್ಬರ ಆಸೆ ಹರಿಯಿತ್ತು. ನಾ ಮಾತಿನ ಮರೆಯವನಲ್ಲ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಬಯಲ ಸ್ತ್ರೀಯಳ ನಿರವಯಲ ಪುರುಷ ಬಂದು ಕೂಡಲು ಚಿದ್‍ಬಯಲೆಂಬ ಶಿಶು ಹುಟ್ಟಿತ್ತು. ಆ ಶಿಶುವನು ಮಹಾಬಯಲೆಂಬ ತೊಟ್ಟಿಲಲ್ಲಿ ಮಲಗಿಸಿ ನಿರಾಳ ನಿಃಶೂನ್ಯವೆಂಬ ನೇಣ ಕಟ್ಟಿ ತೂಗಿ ಜೋಗುಳವಾಡಲು, ಆ ಶಿಶುವು ತನ್ನಿಂದ ತಾನೇ ತಂದೆ ತಾಯಿಗಳಿಬ್ಬರನೂ ನುಂಗಿತ್ತು. ಆ ತಂದೆ ತಾಯಿಗಳ ನುಂಗಲೊಡನೆ ಜೋಗುಳದ ಉಲುಹು ಅಡಗಿತ್ತು. ಆ ಜೋಗುಳದ ಉಲುಹು ಅಡಗಿದೊಡನೆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಿತ್ತು. ಆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಲೊಡನೆ ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಯಿತ್ತು. ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಗಲೊಡನೆ ಅಖಂಡೇಶ್ವರನೆಂಬ ಬಯಲಿನ ಬಯಲ ಬಚ್ಚಬರಿಯ ಘನಗಂಭೀರ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.
--------------
ಷಣ್ಮುಖಸ್ವಾಮಿ
ಅತ್ತಲಿಂದ ಬಂದವನ ಇತ್ತಳವ ಕಂಡು, ಇತ್ತಲಿಂದ ಹೋದವನ ಅತ್ತಳವ ಕಂಡು, ಇದೆತ್ತಣ ಸುದ್ದಿಯೆಂದು ನಾ ಕೇಳಲಾಗಿ, ಕತ್ತೆ ಸತ್ತಿತ್ತು, ಕುದುರೆ ಹರಿಯಿತ್ತು, ಬೇಹಾರ ನಷ್ಟವಾಯಿತ್ತು. ಮಧುಕೇಶ್ವರಲಿಂಗವೇ ಎಂದು ಬಾಯಾರುವ ಚಿತ್ತ ಬಟ್ಟಬಯಲಾಯಿತ್ತು
--------------
ದಾಸೋಹದ ಸಂಗಣ್ಣ
ಎನಗೆ ಹರಿಯಿತ್ತು ತಮವೆಂಬ ಸಂಸಾರದ ಬಂಧನ. ಅಡಗಿಯೂ ಉಡುಗಿಯೂ ಕಂಡೆಹೆನೆಂದೆಂಬ ಸಂಶಯ. ಸಂಕಲ್ಪ ಸಂದೇಹ ಭ್ರಾಂತು ಭ್ರಮೆಯ ಭಾವಕ್ಕೆ ಬಯಲಾಯಿತ್ತು. ನಿತ್ಯನಿರಂಜನ ಪರಂಜ್ಯೋತಿ ಪ್ರಕಾಶವೆನಗೆ ತಲೆದೋರಿತ್ತು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನ ದೇವಯ್ಯಾ, ಕಾಣಬಂದಿತ್ತು ಕಾಣಾ, ಪ್ರಭುದೇವರ ಕಾರುಣ್ಯ ಪ್ರಸಾದದಿಂದ ಬಸವಣ್ಣ.
--------------
ಮರುಳಶಂಕರದೇವ
ಬಸವ ಹರಿಯಿತ್ತು, ಬಸವ ಹರಿಯಿತ್ತು, ಬಸವ ಹರಿಯಿತ್ತು ಕಾಣಿಭೋ. ತೊತ್ತಳದುಳಿಯಿತ್ತು, ತೊತ್ತಳದುಳಿಯಿತ್ತು. ಮೀಮಾಂಸಕರ ಮಿತ್ತುವ ಮಿರಿಯಿತ್ತು, ಬೌದ್ಧ ಜೈನರ ಕೋಡಿನಲ್ಲಿರಿಯಿತ್ತು, ಕೊಳಗಿನಲ್ಲರೆಯಿತ್ತು ನೋಡಾ, ಸೊಡ್ಡಳಾ ಸಂಗನಬಸವ.
--------------
ಸೊಡ್ಡಳ ಬಾಚರಸ
`ಬ' ಎಂಬಲ್ಲಿ ಎನ್ನ ಭವ ಹರಿಯಿತ್ತು. `ಸ' ಎಂಬಲ್ಲಿ ಸರ್ವಜ್ಞನಾದೆನು. `ವ' ಎಂಬಲ್ಲಿ ವಚಿಸುವಡೆ ಚೈತನ್ಯಾತ್ಮಕನಾದೆನು. ಇಂತೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ ತೊಳಗಿ ಬೆಳಗುವ ಭೇದವನರಿದು ಆನೂ ನೀನೂ `ಬಸವಾ' `ಬಸವಾ' `ಬಸವಾ' ಎನುತಿರ್ದೆವಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬಿತ್ತು ರಸವ ಮೆದ್ದಾಗ ಹಣ್ಣಿನ ಹಂಗು ಹರಿಯಿತ್ತು. ಬಲ್ಲವ ಗೆಲ್ಲ ಸೋಲವ ನುಡಿಯಲಾಗಿ ಬಲ್ಲತನ ಅಲ್ಲಿಯೇ ಅಡಗಿತ್ತು. ಬೆಲ್ಲದ ಸಿಹಿಯಂತೆ ಬಲ್ಲವನ ಇರವು, ಎಲ್ಲಕ್ಕೂ ಸರಿ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ವ್ರತಸ್ಥನಾದಲ್ಲಿ, ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಂಗಳಲ್ಲಿ ತಲೆದೋರದೆ, ತನ್ನ ಆತ್ಮ ಸತಿ, ಲಿಂಗ ಪುರುಷನಾಗಿ, ತನ್ನ ಸುಕಾಯಕದಿಂದಾದ ದ್ರವ್ಯಂಗಳ ಗುರುಲಿಂಗಜಂಗಮದ ಮುಂದಿಟ್ಟು ಅರ್ಪಿತವಹನ್ನಕ್ಕ, ದೃಕ್ಕು ತುಂಬಿ ನೋಡಿ, ಮನದಣಿವನ್ನಕ್ಕ ಹರುಷಿತನಾಗಿ, ಮಿಕ್ಕ ಶೇಷವ, ಇಷ್ಟಪ್ರಾಣಲಿಂಗಕ್ಕೆ ತೃಪ್ತಿಯ ಮಾಡಿಪ್ಪ ಮಹಾಭಕ್ತಂಗೆ, ಸಂಸಾರವೆಂಬ ತೊಟ್ಟು ಹರಿಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ವ್ರತವೆಂಬ ನಾಮಕ್ಕೆ ಒಳಗಾಯಿತ್ತು.
--------------
ಶಿವಲೆಂಕ ಮಂಚಣ್ಣ
ನಿಂದೆ, ಎಂಬುದು ಬಂದ ಭವದಲ್ಲಿಯೆ ಹೋಯಿತ್ತು. ಮುಂದೆ ಗುರುಕಾರುಣ್ಯವಾದಲ್ಲಿಯೇ `ಹಿಂದು' ಹರಿಯಿತ್ತು. ಮರ್ತ್ಯಲೋಕದ ಮಹಾಗಣಂಗಳು ಮೆಚ್ಚೆ, ದಾಸೋಹವ ಮಾಡಿದಲ್ಲಿಯೆ ಪ್ರಮಥಗಣಂಗಳು ತಮ್ಮೊಳಗೆ ನಿಮ್ಮನು ಇಂಬಿಟ್ಟುಕೊಂಡು. ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದರಿದು, ನಿನ್ನ ಸರ್ವಾಂಗದಲ್ಲಿ ಲಿಂಗಸನ್ನಹಿತವಾದಲ್ಲಿಯೆ ಪ್ರಾಣಲಿಂಗಸಂಬಂಧವಳವಟ್ಟಿತ್ತು. ಲಕ್ಷದ ಮೇಲೆ ತೊಂಬತ್ತಾರುಸಾವಿರ ಪ್ರಮಥರಿಗೆ ಮಾಡಿದ ಸಯದಾನವ ನಿಮ್ಮ ಲಿಂಗಕ್ಕೆ ಆರೋಗಿಸಲಿತ್ತು ತೃಪ್ತಿಪಡಿಸಿದಲ್ಲಿಯೆ ನಿನ್ನ ತನು ಮನ ಪ್ರಾಣಗಳು ಅರ್ಪಿತವಾದಲ್ಲಿ ಮಹಾಪ್ರಸಾದ ಸಾಧ್ಯವಾಯಿತ್ತು. ಆದಿಯ ಲಿಂಗವಿಡಿದು ನಾನು ನಿಮ್ಮಲ್ಲಿ ಅಡಗಿದ ಬಳಿಕ ಹಿಂದಣ ಸಂಕಲ್ಪವಳಿಯಿತ್ತು. ಸರ್ವಾಚಾರಸಂಪತ್ತು ನಿನ್ನಲ್ಲಿ ಸಯವಾದಲ್ಲಿ ಸರ್ವಸೂತಕ ತೊಡೆಯಿತ್ತು. ಗುಹೇಶ್ವರಲಿಂಗವು ನಿನ್ನ ಹೃದಯಕಮಲದಲ್ಲಿ ನೆಲೆಗೊಂಡು ನಿನ್ನ ಕರಸ್ಥಲದೊಳಗೆ ತೊಳಗೆ ಬೆಳಗುತ್ತೈದಾನೆ. ಇನ್ನೊಮ್ಮೆ ತಿಳಿದು ನೋಡಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->