ಅಥವಾ

ಒಟ್ಟು 38 ಕಡೆಗಳಲ್ಲಿ , 16 ವಚನಕಾರರು , 38 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತರಂಗದಲ್ಲಿದ್ದ ನಿರ್ಮಲ ಪರಂಜ್ಯೋತಿ ಪ್ರಾಣಲಿಂಗವನರಿಯದೆ ಬಹಿರಂಗದಲ್ಲಿ ಬಳಲುತ್ತಿದ್ದರಲ್ಲಾ! ಒಳಗೆ ತೊಳಗಿ ಬೆಳಗಿ ತೋರುವ ಚಿದಾಕಾರ ಪರಬ್ರಹ್ಮ ಪ್ರಾಣಲಿಂಗವನವರೆತ್ತ ಬಲ್ಲರು? ಮಹಾನುಭಾವದಿಂದ ತಿಳಿದು ನೋಡಲು ತನ್ನಲ್ಲಿಯೇ ತೋರುತ್ತಿದೆ. ಹೇಳಿಹೆ ಕೇಳಿಹೆನೆಂದಡೆ ನುಡಿಗೊಳಗಾಗದು. ತಿಳಿದುನೋಡಲು ತಾನಲ್ಲದೆ ಮತ್ತೇನೂ ಇಲ್ಲ. ಅದೇ ಆದಿಪ್ರಾಣಮಯಲಿಂಗ. ತಾನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಜಂಗಮಸ್ಥಲಕ್ಕೆ ಲಕ್ಷಣವಾವುದೆಂದಡೆ ಹೇಳಿಹೆ ಕೇಳಿರಣ್ಣಾ : ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಬೇಕು. ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಬೇಕು, ಐದರ ಮುಸುಕನುಗಿದು, ಐದರ ಕಳೆಯ ಕೆಡಿಸಿ ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು ನಾಲ್ಕರೊಳಗೆ ನಿಲ್ಲದೆ, ಮೂರು ಮುಖವು ಒಂದು ಭಾಗವಾಗಿ ಇರಬೇಕು ! ಈ ಭೇದವನರಿಯದೆ ಸುಳಿವರ ಕಂಡು ಬೆರಗಾದೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವಸ್ತುವಿನ ಸ್ವರೂಪ ಹೇಳಿಹೆ ಕೇಳು, ಹೊಳೆವುತ್ತಿದ್ದ ಕಾಲಾಗ್ನಿಯೋಪಾದಿಯ ಕಾಂತಿಯನುಳ್ಳುದು; ಅನಂತಕೋಟಿ ಮಿಂಚುಗಳ ಪ್ರಭೆಯ ಪ್ರಕಾಶವನುಳ್ಳುದು; ಅನಂತಕೋಟಿ ಸೋಮ ಸೂರ್ಯರ ಪ್ರಭೆಯ ಪ್ರಕಾಶವನುವುಳ್ಳದು; ಮುತ್ತು ಮಾಣಿಕ್ಯ ನವರತ್ನದ ಕಿರಣಂಗಳ ಪ್ರಭೆಯ ಪ್ರಕಾಶವನುಳ್ಳುದು; ನಿನ್ನ ಪಿಂಡದ ಮಧ್ಯದಲ್ಲಿ ಉದಯವಾಗಿ ತೋರುವ ಪಿಂಡಜ್ಞಾನದ ಮಹದರುಹೆ ಪರಬ್ರಹ್ಮವೆಂದು ಅರಿಯಲು ಯೋಗ್ಯವೆಂದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನುವಿಂಗೆ ಲಿಂಗ ಬಾಹಾಗ ಕಂಕುಳ ಕೂಸೆ ? ಮನಕ್ಕೆ ಲಿಂಗ ಬಾಹಾಗ ತೊಂಡಿನ ದನವೆ ? ಕಂಡಕಂಡವರಂಗದಲ್ಲಿ ಹಿಂಗಿಹನೆಂದಡೆ, ಬಂಧುಗಳ ಮನೆಯ ಲಂದಣಗಾರನೆ ? ಇವರಂದದ ಮಾತು ಸಾಕು. ಲಿಂಗವಿಪ್ಪೆಡೆಯ ಹೇಳಿಹೆ ಕೇಳಿರಣ್ಣಾ. ಸುಖಿಯಲ್ಲದೆ ದುಃಖಿಯಲ್ಲದೆ, ಆಗಿಗೆ ಮನಗುಡದೆ, ಚೇಗೆಗೆ ದುಃಖಿತನಾಗದೆ, ಕಂಡಕಂಡವರಲ್ಲಿ ಭಂಡ ಗೆಲಿಯದೆ, ತೊಂಡಿನ ಜೀವದನದಂತೆ, ಬಂದು ಹೊಯ್ವವರನರಿಯದೆ, ಇವರಂದವನರಿಯ ಮತ್ತೆ ಉಭಯದ ಸಂದಳಿದು, ಒಂದೂ ಎನ್ನದಿಪ್ಪುದೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಷ್ಟೋತ್ತರಶತವ್ಯಾಧಿಗಳ ಧರಿಸಿಕೊಂಡಿಪ್ಪುದು ಆತ್ಮನೊ, ಘಟನೊ ? ಆತ್ಮನೆಂದಡೆ ಸಾಯದು ಚಿತ್ತ , ಘಟವೆಂದಡೆ ಆತ್ಮನಿಲ್ಲದೆ ಅರಿಯದು ದೇಹ. ಇಂತೀ ಒಂದ ಕಳೆದು, ಒಂದಕ್ಕೆ ಔಷಧಿಯ ಕೊಟ್ಟಿಹನೆಂದಡೆ, ಆ ಎರಡರ ಸಂಗದಿಂದ ರುಜೆ ಪ್ರಮಾಣು. ಇಂತೀ ಶರೀರಾತ್ಮ ಆದಿಯಾಗಿ ಬಂದ ವ್ಯಾಧಿಗೆ ನಾನೊಂದು ಔಷಧಿಯ ಭೇದವ ಹೇಳಿಹೆ. ಆಧಾರದಲ್ಲಿಪ್ಪ, ಮೂಲಿಕೆಯ ಬೇರನರದು, ಐದಿಂದ್ರಿಯವ ಕೂಡಿಕೊಂಡು. ಮೂರು ಮುಟ್ಟದ ತಟ್ಟೆಯಲ್ಲಿ ಬೇಗ ತೆಗೆದುಕೊಳ್ಳಿ. ಆ ಮದು ವಾಂತಿಗೆ ಸಲ್ಲ, ವಿರೋಚನವಿಲ್ಲ. ನಾನಾ ವೈದ್ಯರ ಭೇದಗಾಹಿನ ಕ್ರಮವಲ್ಲ. ಇದು ಸಿದ್ಧಾಂತ ಮೂಲಿಕೆ, ಇದ ಸಾಧಿಸಿಕೊಳ್ಳಿ. ಎಂದೆಂದಿಗೂ ರುಜೆಯಿಲ್ಲ, ಸಂದುಸಂಶಯವಿಲ್ಲ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿ.
--------------
ವೈದ್ಯ ಸಂಗಣ್ಣ
ಜಂಗಮದ ಗುಣವನು, ಜಂಗಮದ ಭೇದವನು ಜಂಗಮದ ರೂಪವನು ಹೇಳಿಹೆ ಕೇಳಿರಣ್ಣ. ಜಂಗಮವೆಂದರೆ ಪರಮಜ್ಞಾನ ಸ್ವರೂಪನು. ಒಂದಿನ ಉಂಟಾಗಿ, ಒಂದಿನ ಇಲ್ಲ[ವಾಗಿಪ್ಪ] ಉಪಜೀವನಕನಲ್ಲ ಕಾಣಿರಣ್ಣ. ಉಪಾಧಿ[ಕ], ನಿರೂಪಾಧಿಕನೆಂಬ ಸಂದೇಹಭ್ರಾಂತನಲ್ಲ ಕಾಣಿಭೋ. ಸತ್ತು ಚಿತ್ತಾನಂದಭರಿತನು. ಭಕ್ತನ ಪ್ರಾಣವೇ ತಾನಾಗಿಪ್ಪ ನಿತ್ಯ ಪರಿಪೂರ್ಣನೆ, ಜಂಗಮದೇವನೆಂದರಿಯಲು ಯೋಗ್ಯ ಕಾಣಿಭೋ. ಆ ಘನ ಚೈತನ್ಯವೆಂಬ ಜಂಗಮವ ಮನೋಭಾವದಲ್ಲಿ ಆರಾಧಿಸಿ ಸುಖಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರು ಲಿಂಗ ಜಂಗಮದ ಭಕ್ತರೆಂದು ಗುಣಕಥನವ ನುಡಿದುಕೊಂಡು ಎಮಗೆ ಅನ್ಯದೈವವಿಲ್ಲವೆಂಬ ಸೋರೆಯ ಬಣ್ಣದ ಅಣ್ಣಗಳು ನೀವು ಕೇಳಿಭೋ. ನೀವರಿಯದಿದ್ದರೆ ನಾ ಹೇಳಿಹೆ ಕೇಳಿಭೋ. ಹೆಣ್ಣೊಂದು ಭೂತ; ಮಣ್ಣೊಂದು ಭೂತ; ಹೊನ್ನೊಂದು ಭೂತ. ಹೆಣ್ಣು ನಿಮ್ಮದೆಂಬಿರಿ; ಮಣ್ಣು ನಿಮ್ಮದೆಂಬಿರಿ; ಹೊನ್ನು ನಿಮ್ಮದೆಂಬಿರಿ. ಅವೇ ಪ್ರಾಣವಾಗಿ ಸಾವುತ್ತ ಹುಟ್ಟುತ್ತಿಪ್ಪಿರಿ. ಆ ಭೂತ ನಿಮ್ಮಹಿಡಿದು, ಹಿಸಿಕಿ ಕೊಂದು ಕೂಗಿ, ತಿಂದು ತೇಗಿ, ಹೀರಿ ಹಿಪ್ಪೆಯ ಮಾಡಿ ಗಾರುಮಾಡುತಿಪ್ಪವು ಕಾಣಿಭೋ. ಅ[ವ] ನೀವು ಹಿಡಿದು ಕೀರ್ತಿಸುತಿರ್ದು ಎಮಗೆ ಅನ್ಯದೈವವಿಲ್ಲೆಂಬ ಕುನ್ನಿಮನುಜರ ಮೆಚ್ಚುವನೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸ್ಥೂಲ ಸೂಕ್ಷ ್ಮ ಕಾರಣನೆಂದೆಂಬರಲ್ಲಾ ನಿನ್ನನು. ಅದರ ಹಿಂದು ಮುಂದನರಿಯರು:ಬಂದ ಹಾಂಗೆ ನುಡಿವರು. ಸ್ಥೂಲಕ್ಕೆ ನೆಲೆ ಯಾವುದು, ಹೇಳಿಹೆ ಕೇಳಿರಾ ಮನುಜರಿರಾ. ಸ್ಥೂಲವದು ಅನೇಕ ಬ್ರಹ್ಮಾಂಡಗಳ ಮೀರಿಪ್ಪುದು; ಅದು ಸ್ಥೂಲವೆ? ಅಲ್ಲ, ಹಾಂಗಿರಲಿ. ಶ್ರೀ ಗುರುಸ್ವಾಮಿ ವಿಸ್ತಾರ ವಿಸ್ತಾರ ವಿಸ್ತಾರವೆಂದು ಕೊಟ್ಟ ಲಿಂಗವೀಗ ಸ್ಥೂಲ. ಆ ಲಿಂಗವು ಸಕಲ ವ್ಯಾಪ್ತಿಯ ತನ್ನೊಳಗೆ ಇಂಬಿಟ್ಟುಕೊಂಡ ಕಾರಣ ಸೂಕ್ಷ ್ಮವಾದ. ಶಿಷ್ಯಕಾರಣ ಪರಶಿವಮೂರ್ತಿಯಾದ ಕಾರಣ ಕಾರಣವಾದ. ಎಲೆ ಗುರುವೆ, ಲಿಂಗವೆ, ಜಂಗಮವೆ, ನೀವು ಒಂದಾದ ಭೇದವ ಲೋಕದ ಜಡರೆತ್ತ ಬಲ್ಲರು? ಬಸವಣ್ಣ ಬಲ್ಲ. ಆ ಬಸವಣ್ಣ ಅವ್ವೆಯ ಮನೋನಾಥ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ ಬದುಕಿದೆನು.
--------------
ಸಿದ್ಧರಾಮೇಶ್ವರ
ಸಹಜ ಸಂಬಂಧಾಚಾರದ ನಿರ್ಣಯವನಿಲ್ಲಿ ಹೇಳಿಹೆ ಕೇಳಿರಯ್ಯಾ: ಪ್ರತ್ಯಕ್ಷವಾಗಿ ಜಂಗಮವೆ ಭಕ್ತನ ಮಠಕ್ಕೆ ಬಿಜಯಂಗೈಯೆ ನೂರು ಮಂದಿಯಲ್ಲಿ ಮೂರು ಮಂದಿ ಇರ್ಪರೆಂಬಂತೆ, ಆ ಜಂಗಮದಲ್ಲಿ ಗುರು ಲಿಂಗಗಳುಂಟೆಂದು ತಿಳಿದು ತ್ರಿವಿಧ ಪಾದೋದಕವನಲ್ಲಿ ಪಡೆವುದು_ ಇದೇ ಸದಾಚಾರ. ಆ ಜಂಗಮವಿಲ್ಲದೆ ಗುರು ಒರ್ವನೆ ಬಿಜಯಂಗೈಯೆ, ಆ ಗುರುವಿನಲ್ಲಿ ವಿಧಿಗನುಗುಣವಾಗಿ ಜಂಗಮವನನುಸಂಧಾನಿಸಿ ಗುರುವಿನಲ್ಲಿ ಲಿಂಗವು ಸಹಜವಾಗಿರ್ಪುದರಿಂದ ಅಲ್ಲಿ ತ್ರಿವಿಧೋದಕವ ಪಡೆವುದು_ಇದೊಂದು ಸಹಜಸಂಬಂಧವು. ಗುರುಜಂಗಮರಿರ್ವರೂ ಸಮಯಕ್ಕೊದಗದಿರ್ಪಲ್ಲಿ ಆ ಗುರುಜಂಗಮವ ತನ್ನ ಇಷ್ಟಲಿಂಗದಲ್ಲಿ ಕ್ರಮವರಿತು ಅನುಸಂಧಾನಿಸಿ ಅಲ್ಲಿ ತ್ರಿವಿಧೋದಕವ ಪಡೆವುದು_ ಇದೊಂದು ಕೇವಲ ಸಂಬಂಧವು. ಇಂತೀ ಸಹಜಸಂಬಂಧದ ಭೇದವನರಿದು, ಅರಿದಂತಾಚರಿಸಿ ನಮ್ಮ ಶರಣರು ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಸುಖಿಗಳಾದರು.
--------------
ಚನ್ನಬಸವಣ್ಣ
ಆಚಾರ ಅನಾಚಾರವೆಂದು ಎರಡು ಪ್ರಕಾರವಾಗಿಪ್ಪುದು. ಆಚಾರವೆಂದಡೆ ಹೇಳಿಹೆ ಕೇಳಿರೊ: ಸರ್ವಪದಾರ್ಥಂಗಳು ಇದಿರಿದ್ದಲ್ಲಿ ಆ ಪದಾರ್ಥಂಗಳ ಶುದ್ಧವ ಮಾಡಿ ಲಿಂಗಕ್ಕೆ ಸಮರ್ಪಿಸುವಲ್ಲಿ ಭೋಜ್ಯಭೋಜ್ಯಕ್ಕೆ ಶಿವಮಂತ್ರಯುಕ್ತನಾಗಿ ಪ್ರಸಾದಗ್ರಾಹಕನಾಗಿರಬಲ್ಲಡೆ ಆತನೆ ಪ್ರಸಾದಿ, ವೀರಮಾಹೇಶ್ವರನೆಂಬೆ. ತಟ್ಟುವ ಮುಟ್ಟುವ ತಾಗು[ವ] ನಿರೋಧವೆಲ್ಲವನು ಹಲ್ಲುಕಡ್ಡಿ ದರ್ಪಣ ಮೊದಲಾದ ಸರ್ವವ್ಯವಹಾರದಲ್ಲಿ ಆವುದಾನೊಂದು ಭೋಗಿಸಲು, ಆವುದಾನೊಂದು ಕ್ರೀಡಿಸಲು ಲಿಂಗವೆ ಪ್ರಾಣವಾಗಿರಬಲ್ಲಡೆ ಆ ಮಹಾಂತನೆ ಸರ್ವಾಚಾರಸಂಪನ್ನನೆಂಬೆ. ಅಂತಪ್ಪ ಮಹಾತ್ಮನ ತ್ರಿವಿಧಮುಖವನರಿದು ಕರುಣಪೂರಿತನಾಗಿ ಪ್ರಸಾದವ ಕೊಂಡಡೆ ಪಾವನವೆಂಬೆ ಆತನ ಕೇವಲ ಮಹಾನುಭಾವ ಪರಮಜ್ಞಾನಪರಿಪೂರ್ಣನೆಂಬೆ, ಆ ಮಹಾತ್ಮನೆ ತ್ರೈಜಗದೊಡೆಯನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪಂಚಮುದ್ರೆ ಪಂಚಮುದ್ರೆಯೆಂದೇನೋ? ಹೇಳಿಹೆ ಕೇಳಿ; ಸರ್ವಾಂಗವನು ಸಮತೆಯೆಂಬ ಸದಾಚಾರದಲ್ಲಿಯೆ ನೆಲೆಗೊಳಿಸಿದ್ದುದೇ ಕಂಥೆಯಯ್ಯ. ಸುಬುದ್ಧಿಯೆಂಬ ಮಕುಟಕ್ಕೆ ಅರುಹೆಂಬ ಬಟ್ಟಪಾವಡೆ, ಕ್ರೀಯೆಂಬ ಪಾಗ. ವಿಚಾರದಿಂದ ಬಳಸಿ ಸುತ್ತಬೇಕು ಕಾಣಿರಣ್ಣ. ದೃಢವೆಂಬ ದಂಡ, ವಿವೇಕವೆಂಬ ಕಪ್ಪರವ ಹಿಡಿಯಬೇಕು ಕಾಣಿರಯ್ಯ. ಜ್ಞಾನವೆಂಬ ಭಸ್ಮಘುಟಿಕೆ ಸುಮನವೆಂಬ ಗಮನ, ಸುಚಿತ್ತವೆಂಬ ಸುಳುಹು, ಪರತತ್ವ ಸದ್ಭಾವದಿಂದ ಪರಮದೇಹಿಯೆಂದು ಸುಳಿವ ಪರದೇಶಿಕನ ತೋರಿ ಬದುಕಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಡದ ಕೈಯಲ್ಲಿ ಲಿಂಗವ ಹಿಡಿದುಕೊಂಡು, ಬಲದ ಕೈಯಲ್ಲಿ ಮುದ್ದೆಯ ಮಾಡಿ, `ಉಣ್ಣು ಉಣ್ಣೆಂ'ದು ಊಡಿಸಿದರೆ ಒಲ್ಲದು ಕಾಣಿರಯ್ಯ. ದೇವರುಂಡಿತೆಂದು ಬಿಗಿಬಿಗಿದು ಕಟ್ಟಿಕೊಂಬರಯ್ಯ. ದೇವರಿಗೆ ಹಿಪ್ಪೆಯ ತೋರಿ, ರಸವ ನೀವು ಉಂಡು, ದೇವರನೇಕೆ ದೂರುವಿರಯ್ಯ? ದೇವರು ಹೀಂಗೆ ಒಲ್ಲದು. ಉಂಬ ಕ್ರಮವ ಹೇಳಿಹೆ ಕೇಳಿರಯ್ಯ. ಇಷ್ಟಲಿಂಗಕ್ಕೆ ರೂಪ ಕೊಟ್ಟಲ್ಲಿ, ನೋಡಿ ಪರಿಣಾಮಿಸುವದಲ್ಲದೆ ಸವಿದು ಪರಿಣಾಮಿಸುವುದಲ್ಲ. ಸವಿದು ಪರಿಣಾಮಿಸುವುದೆಲ್ಲಿಯೆಂದರೆ; ಜಿಹ್ವೆಯ ಕೊನೆಯ ಮೊನೆಯಲ್ಲಿ ತಟ್ಟುವ ಮುಟ್ಟುವ ಷಡುರಸ್ನಾನದ ರುಚಿಯ ತಾನೆನ್ನದೆ ಲಿಂಗವೇ ಸ್ವೀಕರಿಸುತ್ತದೆಯೆಂಬ ನಿಶ್ಚಯವುಳ್ಳರೆ ಸವಿದು ಪರಿಣಾಮಿಸುವದಯ್ಯ. ನಾಸಿಕದ ಕೊನೆಯ ಮೊನೆಯಲ್ಲಿ ವಾಸಿಸುವ ಷಡ್ವಿಧಗಂಧಂಗಳ ಭೋಗವನರಿದು ಭೋಗಿಸುವದು ಲಿಂಗ ತಾನೆ. ನೇತ್ರದ ಕೊನೆಯ ಮೊನೆಯಲ್ಲಿ ತಟ್ಟುವ ಷಡ್ವಿಧರೂಪಿನ ಭೋಗಂಗಳ ಭೋಗಿಸಿ ಸುಖಿಸುವುದು ಲಿಂಗ ತಾನೆ, ನೋಡಾ. ತ್ವಕ್ಕಿನ ಕೊನೆಯ ಮೊನೆಯಲ್ಲಿ ಸೋಂಕುವ ಷಡ್ವಿಧ ಸ್ಪರ್ಶನದ ಭೋಗಂಗಳ ಭೋಗಿಸಿ ಸುಖಿಸುವದು ಲಿಂಗ ತಾನೆ, ನೋಡಾ. ಶ್ರೋತ್ರದ ಕೊನೆಯ ಮೊನೆಯಲ್ಲಿ ತಟ್ಟುವ ಷಡ್ವಿಧ ಶಬ್ದಂಗಳ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ ಪರಿಣಾಮಿಸುವದು ಲಿಂಗ ತಾನೆ ನೋಡಾ. ಭಾವದ ಕೊನೆಯ ಮೊನೆಯಲ್ಲಿ ತೀವಿ ಪರಿಪೂರ್ಣವಾಗಿರ್ಪ ಷಡ್ವಿಧತೃಪ್ತಿಯ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ, ಪರಿಣಾಮಿಸುವಾತನು ಲಿಂಗದೇವನೆಂದರಿದು, ಸರ್ವೇಂದ್ರಿಯಮುಖದಲ್ಲಿ ಬಂದ ಸರ್ವತೋಮುಖಪದಾರ್ಥವ, ಸರ್ವತೋಮುಖಲಿಂಗಕ್ಕೆ ಅರ್ಪಿಸಿ, ಸರ್ವಾಂಗವೆಲ್ಲವು ಬಾಯಾಗಿ, ಸರ್ವತೋಮುಖಪ್ರಸಾದವ ಕೊಂಡು, ಆ ಸರ್ವಜ್ಞಪ್ರಸಾದದೊಳಡಗಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜೀವನ್ಮುಕ್ತಿ ಯಾವುದೆಂದಡೆ ಹೇಳಿಹೆ ಕೇಳಿರಯ್ಯಾ. ಜೀವನ ಬುದ್ಧಿಯ ಬಿಟ್ಟುದು ಜೀವನ್ಮುಕ್ತಿ. ಜೀವನ ಬುದ್ಧಿ ಯಾವುದೆಂದಡೆ : ಜ್ಞಾನಗುರುಗಳಿಂದ ಜ್ಞಾನವ ಪಡೆದು ಅಂಗಲಿಂಗಸಂಗ ಸಮರಸವಾದುದೇ ಜೀವನ್ಮುಕ್ತಿ. ಇಂಥದ ಬಿಟ್ಟು ತಾನು ಮಂಗಬುದ್ಧಿಯಿಂದ ನಡೆದು ಜ್ಞಾನಪ್ರಕಾಶವ ಕಾಣಲಿಲ್ಲವೆಂದು ಮತ್ತೊಬ್ಬ ಗುರುಗಳಲ್ಲಿ ತಿಳಿಯಬೇಕೆಂಬರು. ಅವರಲ್ಲಿ ಏನು ಇದ್ದಿತೊ ! ಹೀಗೆಂಬುದೇ ಜೀವನ ಬುದ್ದಿಯು. ಹೊಲವ ಬಿತ್ತುವ ಒಕ್ಕಲಿಗ ಯಾವನಾದಡೆ ಆಗಲಿ ಬೀಜವ ಬಿತ್ತುವ ಪರಿ ಒಂದೇ. ಮತ್ತೆ ಗೊಲ್ಲಾಳಯ್ಯಂಗೆ ಕುರಿಯ ಹಿಕ್ಕೆಯ ದೃಢದಿಂದ ಪೂಜಿಸಿ ಗುರು ಪ್ರಸನ್ನತೆಯ ಹಡೆದುದಿಲ್ಲವೆ ? ಅವಿಶ್ವಾಸದಿಂದೆ, ಅಂಗಬುದ್ಧಿಯಿಂದೆ ಹಲವು ಗುರು, ಹಲವು ಲಿಂಗ ಅರ್ಚಿಸಿ ಪೂಜಿಸಿ ಹಲವು ಭವದಲ್ಲಿ ಬಂದರು ನೋಡಾ ! ಜೀವನ ಬುದ್ಧಿ ಎಂತೆಂದಡೆ : ಆಶೆ ರೋಷ ಅಹಂಕಾರ ಅರಿಷಡ್ವರ್ಗಂಗಳು ಅಷ್ಟಮದಂಗಳು, ಅನೃತ, ಪರಧನ, ಪರಸ್ತ್ರೀ, ಪರನಿಂದೆ, ಪರಹಿಂಸೆ ಇವೆಲ್ಲವೂ ಜೀವನಬುದ್ಧಿ. ಇಂತಿವೆಲ್ಲವ ಒಳಗಿಟ್ಟುಕೊಂಡು ನಾವು ಜೀವನ್ಮುಕ್ತರೆಂಬರು ಎಂತಹರೋ ನೋಡಾ! ದೀಪವೆಂದಡೆ ಕತ್ತಲೆ ಹೋಯಿತ್ತೆ ? ಅಮೃತವೆಂದಡೆ ಹಸಿವು ಹೋಯಿತ್ತೆ ? ಉದಕವೆಂದಡೆ ತೃಷೆ ಹೋಯಿತ್ತೆ ? ಇಂಥವರಿಗೆ ಮುಕ್ತಿಯಿಲ್ಲವಯ್ಯಾ. ಮತ್ತೆ ಜೀವನ್ಮುಕ್ತಿ ಹೇಗೆಂದಡೆ - ಶರಣಸತಿ ಲಿಂಗಪತಿಯೆಂಬ ಭೇದವ ತಿಳಿದಡೆ ಜೀವನ್ಮುಕ್ತಿ. ಈ ತ್ರಿವಿಧತನವು ಮೀಸಲಾಗಿ ತ್ರಿವಿಧಲಿಂಗಕ್ಕೆ ಅರ್ಪಿಸಬಲ್ಲಾತನೆ ಜೀವನ್ಮುಕ್ತನು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣ ಈ ಷಡೂರ್ಮಿಗಳು, ಕೆಡುವುದಕೊಂದು ವಿವರವ ಹೇಳಿಹೆ ಕೇಳಿರಯ್ಯ. ಅಂಗದಾಪ್ಯಾಯನವಳಿದು, ಲಿಂಗದಾಪ್ಯಾಯನ ಉಳಿದಡೆ ಕ್ಷುತ್ತು ಕೆಟ್ಟುದು. ಪಾದೋದಕವೆಂಬ ಪರಮಾನಂದಜಲವನೀಂಟಿದಲ್ಲಿ ಪಿಪಾಸೆ ಕೆಟ್ಟುದು. ಲಿಂಗಪೂಜೆಪರದಲ್ಲಿ ಗದ್ಗದುಕೆಗಳು ಪುಟ್ಟಿ ಆನಂದಾಶ್ರುಗಳು ಸೂಸಿದಲ್ಲಿ ಶೋಕ ಕೆಟ್ಟುದು. ಲಿಂಗ ಮೋಹಿಯಾಗಿ, ದೇಹ ಮೋಹವ ಮರೆದಲ್ಲಿ, ಮೋಹ ಕೆಟ್ಟದು. ಶಿವಲಿಂಗದಲ್ಲಿ ಕರಗಿ ಕೊರಗಿ, ಸರ್ವ ಕರಣೇಂದ್ರಿಯಂಗಳು ಲಿಂಗದಲ್ಲಿ ಲೀಯ್ಯವಾಗಿ, ಶಿಥಿಲತ್ವವನೆಯ್ದಿದಲ್ಲಿ, ಜರೆ ಕೆಟ್ಟುದು. ಮಹಾಲಿಂಗದಲ್ಲಿ ತಾನೆಂಬುದಳಿದು ಲಿಂಗೈಕ್ಯವಾದಲ್ಲಿ, ಮರಣ ಕೆಟ್ಟುದು. ಇಂತೀ ಷಡೂರ್ಮಿಗಳನು ಈ ಪರಿ ಲಿಂಗಾವಧಾನದಲ್ಲಿ ಕೆಡಿಹಸಿದಾತನೆ, ಭಕ್ತನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಎಲ್ಲರೂ ಓದುವುದು ವಚನಂಗಳು; ಎಲ್ಲರೂ ನುಡಿವರು ಬೊಮ್ಮವ. ಎಲ್ಲರೂ ಕೇಳುವುದು ವಚನಂಗಳು ; ಹೇಳುವಾತ ಗುರುವಲ್ಲ, ಕೇಳುವಾತ ಶಿಷ್ಯನಲ್ಲ. ಹೇಳಿಹೆ ಕೇಳಿಹೆನೆಂಬನ್ನಕ್ಕರ ವಿರಕ್ತಿಸ್ಥಲಕ್ಕೆ ಭಂಗನೋಡಾ, ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಇನ್ನಷ್ಟು ... -->