ಅಥವಾ

ಒಟ್ಟು 65 ಕಡೆಗಳಲ್ಲಿ , 33 ವಚನಕಾರರು , 57 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೂಡಿನೊಳಗಿಪ್ಪ ಪಕ್ಷಿಗೆ ಗೂಡಿನ ಹೊರಗೆ ಪಕ್ಕ ಬಂದಿವೆ. ನೋಡಿದರೆ ಪಕ್ಷಿ ಒಳಗೆ, ರೆಕ್ಕೆ ಹೊರಗೆ. ಪಕ್ಷಿಯ ಎರಡು ರೆಕ್ಕೆಯೊಳು, ಒಂದು ರೆಕ್ಕೆಯೊಳು ಚಂದ್ರನಡಗಿಪ್ಪ, ಒಂದು ರೆಕ್ಕೆಯೊಳು ಸೂರ್ಯನಡಗಿಪ್ಪ. ಪಕ್ಷಿಯ ಕೊಂದು ಗೂಡಿನ ಹೊರಗಣ ರೆಕ್ಕೆಯೊಳಿಪ್ಪ ಚಂದ್ರ ಸೂರ್ಯರ ಶೀತ ಉಷ್ಣವ ತೆಗೆಸಿ ರೆಕ್ಕೆಯ ಮುರಿದಾತನಲ್ಲದೆ ಶಿವಶರಣನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಯ್ಯಾ, ಗುರುಲಿಂಗಜಂಗಮದ ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದಡೆ ತನ್ನ ಪವಿತ್ರಸ್ವರೂಪವಾದ ಗುರುಲಿಂಗಜಂಗಮಕ್ಕೆ ನಿಂದ್ಯಕುಂದ್ಯಗಳ ಕಲ್ಪಿಸಿ, ಅರ್ಥಪ್ರಾಣಾಬ್ಥಿಮಾನವ ಕೊಂಡ ಗುರುಲಿಂಗಜಂಗಮದ್ರೋಹಿಗಳ ಸಮಪಙÂ್ತಯಲ್ಲಿ ಅರ್ಚನಾರ್ಪಣಗಳ ಮಾಡ ನೋಡಾ. ಆ ದ್ರೋಹಿಗಳಿಗೆ ಪಾದೋದಕ ಪ್ರಸಾದವ ಕೊಟ್ಟು ಕೊಳ್ಳ ನೋಡಾ. ಆ ದ್ರೋಹಿಗಳ ಸರ್ವಾವಸ್ಥೆಯಲ್ಲಿ ಧ್ಯಾನಕ್ಕೆ ತಾರ ನೋಡಾ. ಆ ದ್ರೋಹಿಗಳಿಗೆ ಶರಣೆಂದು ನುಡಿದು ವಂದಿಸ ನೋಡಾ. ಈ ವಿಚಾರವನರಿದಡೆ ಮಹಾಚಿದ್ಘನಪ್ರಸಾದಿಯೆಂಬೆನಯ್ಯಾ. ಈ ವಿಚಾರವನರಿಯದ ವೇಷಧಾರಕ ಉದರಪೋಷಕ ನುಡಿಜಾಣರ ನೋಡಿ, ಮನ ಭಾವಂಗಳಲ್ಲಿ ಊರಿಂದ ಹೊರಗಣ ಹಿರಿಯಕುಲದವರ ಮನೆಯ ಹೊರಬಳಕೆಯ ಬೋಕಿಯೆಂದು ಬಿಡುವೆ ನೋಡಾ, ಕಲಿದೇವರ ದೇವ. ಇಂತು ಗುರುವಾಕ್ಯವ ಮೀರಿ ತನ್ನ ಅಂಗವಿಕಾರದಾಸೆಗೆ ಚರಿಸುವಾತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪಾದೋದಕ ಪ್ರಸಾದ ಮುನ್ನವೆ ಇಲ್ಲ ನೋಡಾ, ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ, ಗಗನದಿಂದ ಮೇಲೆ ಅನುಭಾವ ತಾನಿಲ್ಲ. ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ; ಹೊರಗಣ ಹೊರಗನು ಅರಿಯಬಲ್ಲವರಿಲ್ಲ. ಹಿಂದಣ ಹಿಂದನು, ಮುಂದಣ ಮುಂದನು, ತಂದು ತೋರಿದ ನಮ್ಮ ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಊರೊಳಗಿನ ಬೆಂಕಿ ಅಬ್ಬರಿಸಿ ಆವರಿಸಿದಲ್ಲಿ ಒಬ್ಬರೂ ಮುಖವಂತರಿಲ್ಲ ನೋಡಾ. ಊರಡವಿವೊಂದಾಗಿ ಉರಿಯುತ್ತಿರಲು ವ್ಯಾಘ್ರನ ಪ್ರಾಯವಳಿಯದು ನೋಡಾ. ಮೂರು ದೊರೆಗಳು ಮುಂತಾದ ಸಕಲರ ಸಂಬಂಧವ ನೋಡಾ. ಇದನೊಂದು ಮುಖದಲ್ಲಿ ನೋಡಲು ಹೊರಗಣ ಬೆಂಕಿ ಒಳಗೆದ್ದು ಉರಿವಲ್ಲಿ ಹೊಳಪಗೆಡಿಸಿ ಒಳಹೊರಗೆ ತಾನಲ್ಲದೆ ನೆಳಲಿಲ್ಲದ ಸುಖರೂಪ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕ್ರಿಯಾಲಿಂಗ ಜ್ಞಾನಲಿಂಗಂಗಳೆಂಬಲ್ಲಿ, ಉಭಯವೆರಡು ಲಿಂಗವೆಂದು ಕಲ್ಪಿಸುವಲ್ಲಿ ಅದಕ್ಕೆ ಭಿನ್ನಭಾವವಾವುದು ? ಕುಂಭಂಗಳೊಳಗೆ ಹುದುಗಿಕ್ಕಿದ ಕಿಚ್ಚು, ಆ ಕುಂಭಂಗಳಿಗೆ ಒಳಗೆ ಮುಟ್ಟಿದಡೂ ಹೊರಗೆ ಮುಟ್ಟಿದಡೂ ಪಾಕಪ್ರಯತ್ನ ತಪ್ಪದಾಗಿ. ಇಂತೀ ದೃಷ್ಟದ ಲಕ್ಷಿತದಂತೆ ಹೊರಗಣ ಕ್ರಿಯಾಸಂಬಂಧ, ಒಳಗಣ ಜ್ಞಾನಸಂಬಂಧವು; ಉಭಯದ ತತ್ತಿಲ್ಲ. ಸಕ್ಕರೆಯ ರಾಶಿಗೆ ಕಿಸೆಯ ಕೆಲನುಂಟೆ ? ನಿಶ್ಚಯದ ಲಿಂಗಾಂಗಿಗೆ ಉಭಯದ ತಟ್ಟುಮುಟ್ಟೆಂಬ ಗುಟ್ಟಿನ ಕುಲವಿಲ್ಲ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು ಸ್ವಯಾನುಭಾವಸಿದ್ಧನಾದ ಕಾರಣ.
--------------
ಮೋಳಿಗೆ ಮಹಾದೇವಿ
ಊರೊಳಗಣ ಹೊಲೆಯ, ಊರ ಹೊರಗಣ ಕುಲಜ. ಇವರಲ್ಲಿ ಆರು ಹಿರಿ[ಯರೆಂಬುದ] ಬಲ್ಲಡೆ ಲಿಂಗಪ್ರಾಣಸಂಬಂಧಿಯೆಂಬೆ. ಅರಿಯದಿರ್ದಡೆ ಪ್ರಾಣಲಿಂಗಸಂಬಂಧಿಯೆಂಬೆ. ಇಂತೀ ಉಭಯವನರಿದ ಶರಣ ಸರ್ವಾಂಗಲಿಂಗಸಂಬಂಧಿ. ಆತಂಗೆ ತತ್ತುಗೊತ್ತಿಲ್ಲ, ಇಷ್ಟ ಪ್ರಾಣವೆಂಬ ಗುತ್ತಗೆಯವನಲ್ಲ. ಕರ್ಪುರ ಉರಿ ಉಭಯರೂಪು ತನ್ಮಯವಾದಂತೆ ಕಮಠೇಶ್ವರಲಿಂಗದಲ್ಲಿ ಸದಾಸನ್ನದ್ಭನಾದ ಶರಣನು.
--------------
ಬಾಲಸಂಗಣ್ಣ
ಒಳ್ಳಿಹ ಮೈಲಾರನ ಒಳಗೆಲ್ಲ ಸಣಬು, ಹೊರಗಣ ಬಣ್ಣ ಕರ ಲೇಸಾುತ್ತಯ್ಯಾ. ಶ್ವಾನನ ನಿದ್ರೆ, ಅಜ್ಞಾನಿಯ ತಪದಂತೆ ಆುತ್ತಯ್ಯಾ ಎನ್ನ ಮತಿ, ಕೂಡಲಸಂಗಮದೇವಾ. 281
--------------
ಬಸವಣ್ಣ
ಶೀಲ ಶೀಲವೆಂದು ನುಡಿವುತಿರ್ಪರೆಲ್ಲರು. ಶೀಲದ ಹೊಲಬನಾರೂ ಅರಿಯರಲ್ಲ. ಕೆರೆ ಬಾವಿ ಹಳ್ಳ ಕೊಳ್ಳ ಹೊಳೆಗಳ ನೀರ ಬಳಸದಿರ್ದಡೆ ಶೀಲವೆ ? ಕೊಡಕ್ಕೆ ಪಾವಡವ ಹಾಕಿ ಚಿಲುಮೆಯ ಶೀತಳವ ತಂದಡೆ ಶೀಲವೆ ? ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಟ್ಟಡೆ ಶೀಲವೆ ? ಬೆಳೆದ ಬೆಳೆಸು ಕಾಯಿಹಣ್ಣುಗಳ ಬಿಟ್ಟಡೆ ಶೀಲವೆ ? ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಟ್ಟಡೆ ಶೀಲವೆ ? ಪರಪಾಕವ ಬಿಟ್ಟು ಸ್ವಯಪಾಕದಲ್ಲಿರ್ದಡೆ ಶೀಲವೆ ? ಅಲ್ಲಲ್ಲ. ಭವಿಕಾಣಬಾರದಂತಿರ್ದಡೆ ಶೀಲವೆ ? ಅಲ್ಲಲ್ಲ. ಅದೇನು ಕಾರಣವೆಂದೊಡೆ : ಇಂತಿವೆಲ್ಲವು ಹೊರಗಣ ವ್ಯವಹಾರವು. ಇನ್ನು ಅಂತರಂಗದ ಅರಿಷಡ್ವರ್ಗಂಗಳೆಂಬ ಭವಿಯ ಕಳೆಯಲಿಲ್ಲ. ಮಾಯಾಮೋಹವೆಂಬ ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಡಲಿಲ್ಲ. ಸಂಸಾರವಿಷಯರಸವೆಂಬ ಹಳ್ಳ ಕೊಳ್ಳ ಕೆರೆ ಬಾವಿಗಳ ನೀರ ನೀಗಲಿಲ್ಲ. ಅಷ್ಟಮದಂಗಳೆಂಬ ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಡಲಿಲ್ಲ. ಸಕಲ ಕರಣಂಗಳೆಂಬ ಬೆಳಸು ಫಲಂಗಳ ಬಿಡಲಿಲ್ಲ. ಮನವೆಂಬ ಕೊಡಕ್ಕೆ ಮಂತ್ರವೆಂಬ ಪಾವಡವ ಮುಚ್ಚಿ ಚಿತ್‍ಕೋಣವೆಂಬ ಚಿಲುಮೆಯಲ್ಲಿ ಚಿದಾಮೃತವೆಂಬ ಶೀತಳವ ತಂದು ಚಿನ್ಮಯಲಿಂಗಕ್ಕೆ ಅಭಿಷೇಕವ ಮಾಡಲಿಲ್ಲ. ಇಂತೀ ಅಂತರಂಗದ ಪದಾರ್ಥಂಗಳ ಬಿಟ್ಟು ಮುಕ್ತಿಯ ಪಡೆವೆನೆಂಬ ಯುಕ್ತಿಗೇಡಿಗಳಿಗೆ ಭವಬಂಧನಂಗಳು ಹಿಂಗಲಿಲ್ಲ, ಜನನಮರಣಂಗಳು ಜಾರಲಿಲ್ಲ, ಸಂಸಾರದ ಮಾಯಾಮೋಹವ ನೀಗಲಿಲ್ಲ. ಇಂತಪ್ಪ ಅಜ್ಞಾನಜೀವಿಗಳ ವಿಧಿಯೆಂತಾಯಿತ್ತೆಂದಡೆ : ಹುತ್ತದೊಳಗಣ ಹಾವ ಕೊಲುವೆನೆಂದು ಮೇಲೆ ಹುತ್ತವ ಬಡಿದ ಅರೆಮರುಳನಂತಾಯಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರಸಿನ ಭಕ್ತಿ, ಅಹಂಕಾರದಲ್ಲಿ ಹೋಯಿತ್ತು. ವೇಶಿಯ ಭಕ್ತಿ, ಎಂಜಲ ತಿಂದಲ್ಲಿ ಹೋಯಿತ್ತು. ಬ್ರಾಹ್ಮಣನ ಭಕ್ತಿ, ಮುಟ್ಟುತಟ್ಟಿನಲ್ಲಿ ಹೋಯಿತ್ತು. ಶೀಲವಂತನ ಭಕ್ತಿ, ಪ್ರಪಂಚಿನಲ್ಲಿ ಹೋಯಿತ್ತು. ಸೆಟ್ಟಿಯ ಭಕ್ತಿ, ಕುಟಿಲವ್ಯಾಪಾರದಲ್ಲಿ ಹೋಯಿತ್ತು. ಇಂತಿವರ ಭಕ್ತಿಗೆ ಊರಿಂದ ಹೊರಗಣ ಡೊಂಬನೆ ಸಾಕ್ಷಿ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಪಟ ಬಾಲಸರವು ಕೂಡಿರ್ದಡೇನು ? ಸೂತ್ರ ಕಿಂಚಿತ್ತು ತಪ್ಪಿದಡೆ ಖೇಚರತ್ವದಲ್ಲಿ ಆಡಲರಿಯದಂತೆ, ಹೊರಗಣ ಮಾತಿನಿಂ ಗುರುವೆಂದು ಶರಣೆಂದಡೇನಾಯಿತ್ತು ? ಕೈಯಲ್ಲಿ ಲಿಂಗವ ಹಿಡಿದುಕೊಂಡು, ಕಣ್ಣಿನಲ್ಲಿ ನೋಡಿ, ಮನಮುಟ್ಟದಿರ್ದಡೇನಾಯಿತ್ತು ? ಖ್ಯಾತಿ ಲಾಭಕ್ಕೆ ಜಂಗಮಕ್ಕೆ ಧನವ ಕೊಟ್ಟಡೇನಾಯಿತ್ತು? ಇದು, ಉಸಿರ ಹಿಡಿದಡೆ, ದ್ವಾರಂಗಳೆಲ್ಲವೂ ಮುಚ್ಚುವ ತೆರನಂತೆ, ಮಹಾಘನವನರಿದಲ್ಲಿಯೆ ತ್ರಿವಿಧವೂ ಸಮರ್ಪಣ. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸ್ಥಲನಿರ್ದೇಶ.
--------------
ಮೋಳಿಗೆ ಮಾರಯ್ಯ
ಶಿವಶಿವಾ, ಏನೆಂಬೆನಯ್ಯಾ ಶಿವಶರಣರ ಘನವನು ! ಶಿವಶರಣರ ಮಹಿಮೆಯನು, ಶಿವಶರಣರ ಚಾರಿತ್ರವನು, ಶಿವನೇ ಬಲ್ಲನಲ್ಲದೆ ಉಳಿದವರದನೆಂತು ತಿಳಿವರಯ್ಯಾ ? ಹೊರಗಣ ಕ್ರಿಯೆಯು ಹಲವು ಪ್ರಕಾರವಾದಡೂ ಒಳಗೆ ನೀರು ನೀರ ಕೂಡಿದಂತೆ, ಕ್ಷೀರ ಕ್ಷೀರವ ಬೆರೆದಂತೆ, ಮಾರುತಾಂಬರ ಸಂಯೋಗವಾದಂತೆ, ಶಿಖಿಕರ್ಪುರದ ನಿಷ್ಪತ್ತಿಯಂತೆ, ಸಚ್ಚಿದಾನಂದಪರಬ್ರಹ್ಮವ ಕೂಡಿ ಬಿಚ್ಚಿ ಬೇರಾಗದಿರ್ಪ ಭವರಹಿತ ಶರಣರೆ ಕೇವಲಜ್ಞಾನಸ್ವರೂಪರು, ಜೀವನ್ಮುಕ್ತರು. ಅವರೇ ನಿಮ್ಮ ಶರಣರು, ಅವರೇ ಮಹಾಜ್ಞಾನಘನವ ನುಂಗಿದ ಮಹಾಂತರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಳಗಣ ಗಂಡನಯ್ಯಾ, ಹೊರಗಣ ಮಿಂಡನಯ್ಯಾ. ಎರಡನೂ ನಡೆಸಲು ಬಾರದಯ್ಯಾ. ಲೌಕಿಕ ಪಾರಮಾರ್ಥವೆಂಬೆರಡನೂ ನಡೆಸಲು ಬಾರದಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ಬಿಲ್ವ ಬೆಳವಲಕಾಯಿ ಒಂದಾಗಿ ಹಿಡಿಯಲು ಬಾರದಯ್ಯಾ.
--------------
ಅಕ್ಕಮಹಾದೇವಿ
ಹೊರಗಣ ಒಂಬತ್ತು ಬಾಗಿಲವ ಮುಚ್ಚಿ ಒಳಗಣ ಅಂಬರದ ಬಾಗಿಲ ಬೀಗವ ತೆಗೆದು ಒಳಹೊಕ್ಕು ನೋಡಲು, ಗಂಗೆ ಸರಸ್ವತಿ ಯಮುನೆಯೆಂಬ ತ್ರಿನದಿಗಳು ಕೂಡಿದ ಠಾವಿನಲ್ಲಿ ಸಂಗಮಕ್ಷೇತ್ರವೆಂಬ ರಂಗಮಂಟಪವುಂಟು. ಆ ರಂಗಮಂಟಪದಲ್ಲಿ ರವಿಕೋಟಿಪ್ರಭೆಯಿಂದೆ ರಾಜಿಸುವ ಮಹಾಲಿಂಗವ ಕಂಡು, ಆ ಮಹಾಲಿಂಗಕ್ಕೆ ತನ್ನಾತ್ಮಸಂಬಂಧವಾದ ದ್ರವ್ಯಂಗಳಿಂದರ್ಚಿಸಿ, ಆ ಮಹಾಲಿಂಗದ ಬೆಳಗನು ಕಂಗಳು ತುಂಬಿ ನೋಡಿ ಮನ ಸಂತೋಷಗೊಂಡು, ಅಲ್ಲಿಂದತ್ತ ಪಶ್ಚಿಮದಿಕ್ಕಿನಲ್ಲಿ ಮಹಾಕೈಲಾಸವಿರ್ಪುದನು ತನ್ನ ಸ್ವಾತ್ಮಜ್ಞಾನದಿಂದ ತಿಳಿದು ನೋಡಿ, ಎಡಬಲದ ಬಟ್ಟೆಯ ಮೆಟ್ಟದೆ ನಟ್ಟನಡುಮಧ್ಯಮಾರ್ಗವಿಡಿದು ಹೋಗಿ, ಕೈಲಾಸದ ಪೂರ್ವದಿಕ್ಕಿನ ಹೆಬ್ಬಾಗಿಲ ಉಪ್ಪರ ಗೋಪುರವ ಕಂಡು ಒಳಹೊಕ್ಕು ಹೋಗಿ ಕಂಗಳಿಗೆ ಮಂಗಳವಾದ ಶಿವಮಹಾಸಭೆಯ ಕಂಡು, ಅಲ್ಲಿ ಹೊಡೆವ ಭೇರಿಯನಾದ, ತುಡುಮು ತಾಳ ಮದ್ದಳೆಯನಾದ, ಗಡಗಡ ಝಲ್ಲೆಂಬ ಸಮಾಳ ಕರಡಿ ಕೌಸಾಳನಾದ ನುಡಿಸುವ ವೀಣೆ ಕಿನ್ನರಿ ಸ್ವರಮಂಡಲ ತಂಬೂರಿ ಕಾಮಾಕ್ಷಿಯನಾದ, ಭೋರಿಡುವ ಶಂಖ ಘಂಟೆಯನಾದ, ಸ್ವರಗೈವ ನಾಗಸ್ವರ ಕೊಳಲು ಸನಾಯದ ನಾದ, ಕೂಗಿಡುವ ಕಹಳೆ ಹೆಗ್ಗಹಳೆ ಚಿನಿಕಹಳೆ ಕರಣೆಯನಾದ, ಇಂತಿವು ಮೊದಲಾದ ನಾನಾ ತೆರದ ನಾದಂಗಳನು ಕಿವಿದುಂಬಿ ಕೇಳಿ ಮನದುಂಬಿ ಸಂತೋಷಿಸಿ, ಅಲ್ಲಿಂದ ಮುಂದಕ್ಕೆ ಹೋಗಿ ಸೂರ್ಯವೀಥಿಯ ಕಂಡು ಪೊಕ್ಕು, ಅಲ್ಲಿ ನಿಂದು ಓಲಗಂಗೊಡುವ ಮೂವತ್ತೆರಡು ತೆರದ ತೂರ್ಯಗಣಂಗಳಂ ಕಂಡು, ಅಲ್ಲಿಂದ ಮುಂದಕ್ಕೆ ಹೋಗಿ ಸೋಮವೀಥಿಯ ಕಂಡು ಪೊಕ್ಕು, ಅಲ್ಲಿ ನಿಂದು ಓಲಗಂಗೊಡುವ ಹದಿನಾರು ತೆರದ ಪ್ರಮಥಗಣಂಗಳ ಕಂಡು ಅಲ್ಲಿಂದ ಮುಂದಕ್ಕೆ ಹೋಗಿ ಅನಲವೀಥಿಯ ಕಂಡು ಪೊಕ್ಕು, ಅಲ್ಲಿ ಅಷ್ಟದಿಕ್ಕುಗಳಲ್ಲಿ ನಿಂದು ಓಲಗಂಗೊಡುವ ಅಷ್ಟ ತೆರದ ಅಮರಗಣಂಗಳ ಕಂಡು, ಅಲ್ಲಿಂದ ಮುಂದೆ ಹೋಗಿ ಚತುರ್ದಿಕ್ಕಿನಲ್ಲಿ ನಿಂದು ಓಲಗಂಗೊಡುವ ಚತುಃಶಕ್ತಿಯರ ಸಮ್ಮೇಳವ ಕಂಡು, ಅಲ್ಲಿಂದ ಮುಂದಕ್ಕೆ ಹೋಗಿ ನಟ್ಟನಡುವಿರ್ದ ಶೃಂಗಾರಮಂಟಪದ ಮಹಾಸದರಿನಲ್ಲಿ ಮೂರ್ತಿಗೊಂಡಿರ್ದ ನಿಷ್ಕಲ ಪರಶಿವನ ಕಂಡು ತನು ಉಬ್ಬಿ ಮನ ಕರಗಿ, ಕಂಗಳಲ್ಲಿ ಪರಿಣಾಮಜಲ ಉಕ್ಕಿ ಕಡೆಗೋಡಿವರಿವುತ್ತ, ಉರಿಕರ್ಪುರ ಸಂಯೋಗದಂತೆ ಆ ನಿಷ್ಕಲಪರಶಿವನೊಡನೆ ಬೆರೆದು ಪರಿಪೂರ್ಣವಾದ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಉದಕದ ತಂಪವ ತಾವರೆಯಲ್ಲದೆ ಹೊರಗಣ ಕೊರಡೆತ್ತಬಲ್ಲುದೊ ? ಹೂವಿನ ಪರಿಮಳವ ತುಂಬಿಯಲ್ಲದೆ ಹೊರಗಣ ನೊಣನೆತ್ತಬಲ್ಲುದೊ ? ಕ್ಷೀರದ ರುಚಿಯ ಹಂಸೆಯಲ್ಲದೆ ಕೆಲದಲ್ಲಿ ಬಕನೆತ್ತವಬಲ್ಲುದೊ ? ಮಾವಿನ ಹಣ್ಣಿನ ರುಚಿಯನರಗಿಳಿಗಳು ಬಲ್ಲವಲ್ಲದೆ ಹೊರಗಣ ಕೋಳಿಗಳೆತ್ತ ಬಲ್ಲವೊ ? ಊಟದ ರುಚಿಯನು ನಾಲಗೆಯಲ್ಲದೆ ಕಲಸುವ ಕೈ ತಾನೆತ್ತ ಬಲ್ಲುದೊ? ಕೂಟದ ಸುಖವನು ಯೌವನೆಯಲ್ಲದ ಬಾಲೆ ತಾನೆತ್ತ ಬಲ್ಲಳೊ ? ಚಂದ್ರಸೂರ್ಯರÀಂತರಾಂತರವÀ ಖೇಚರರು ಬಲ್ಲರಲ್ಲದೆ ಗಗನದೊಳಗಾಡುವ ಹದ್ದುಗಳು ತಾವೆತ್ತ ಬಲ್ಲವೊ ? ಎಲೆ ಮಹಾಲಿಂಗ ಕಲ್ಲೇಶ್ವರಯ್ಯಾ. ನಿಮ್ಮ ನಿತ್ಯನಿಜೈಕ್ಯರ ನಿಲುವನು ಮಹಾನುಭಾವಿಗಳು ಬಲ್ಲರಲ್ಲದೆ ಲೋಕದ ಜಡಜೀವಿಗಳೆನಿಸುವ ಮಾನವರೆತ್ತ ಬಲ್ಲರೊ ?
--------------
ಹಾವಿನಹಾಳ ಕಲ್ಲಯ್ಯ
ಪುರುಷನೆಂದು ಕರೆವುತಿರ್ಪುದು ಜಗದವರೆಲ್ಲ ಎನ್ನ ; ನಾನು ಪುರುಷನಲ್ಲವಯ್ಯಾ. ಅದೆಂತೆಂದೊಡೆ : ಹೊರಗಣ ಸಾಕಾರವೆ ನೀನು, ಒಳಗಣ ನಿರಾಕಾರವೆ ನಾನು. ಹೊರಗಣ ಸಾಕಾರದ ಪುರುಷರೂಪೇ ನೀವಾಗಿ, ಒಳಗಣ ನಿರಾಕಾರ ಸ್ತ್ರೀರೂಪೇ ನಾನಾಗಿ, ನಿಮಗೆ ರಾಣಿವಾಸವಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->