ಅಥವಾ

ಒಟ್ಟು 318 ಕಡೆಗಳಲ್ಲಿ , 13 ವಚನಕಾರರು , 102 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ ? ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ ? ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ ? ಪರಿಣಾಮಮೂರ್ತಿ ಬಸವನರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ ?
--------------
ನೀಲಮ್ಮ
ಸದಾಚಾರದ ಬೆಂಬಳಿವಿಡಿದು ನಿಯತತ್ವದಲ್ಲಿ ನಡೆಯಬಹುದಲ್ಲದೆ, ಭಕ್ತನೆನಿಸಿಕೊಳಲುಬಾರದು. ಜ್ಞಾನದ ಉದಯದ ಸೌಕರ್ಯದ ನುಡಿಯ ನುಡಿಯಬುಹುದಲ್ಲದೆ, ಭಕ್ತನೆನಿಸಿಕೊಳಲುಬಾರದು. ಅತಿಶೀಲಸಂಬಂಧಿಯೆನಿಸಿಕೊಳಲುಬಹುದಲ್ಲದೆ, ಭಕ್ತನೆನಿಸಿಕೊಳಲುಬಾರದು. ಈ ತ್ರಿವಿಧವೂ ನಿಮ್ಮಲ್ಲಿ ಹೊದ್ದದೆ, ಬಸವಾ ಶರಣೆಂದು ಬದುಕಿದೆನಯ್ಯಾ, ಸಕಳೇಶ್ವದೇವಾ.
--------------
ಸಕಳೇಶ ಮಾದರಸ
ಬಸವನರಿವು ನಿರಾಧಾರವಾಯಿತ್ತು. ಬಸವನ ಮಾಟ ನಿರ್ಮಾಟವಾಯಿತ್ತು. ಬಸವನಭಕ್ತಿ ಬಯಲನೆ ಕೂಡಿ ನಿರ್ವಯಲಾಯಿತ್ತು. ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ ನಿಶ್ಶಬ್ದವಾಯಿತ್ತಯ್ಯಾ ಸಂಗಯ್ಯಾ.
--------------
ನೀಲಮ್ಮ
ಲಿಂಗದ ನಿಧಿಯೆ ಬಸವಾ. ಜಂಗಮದ ವಾರಿಧಿಯೆ ಬಸವಾ. ಪ್ರಸಾದದ ತವನಿಧಿಯೆ ಬಸವಾ. ಅನುಭಾವದ ಮೇರುವೆ ಬಸವಾ. ಮಹವನೊಡಗೂಡಿದ ತನು ಬಸವಣ್ಣನೊ, ಕಲಿದೇವನೋ ?
--------------
ಮಡಿವಾಳ ಮಾಚಿದೇವ
ಮಧ್ಯಕಲ್ಪ ನಾಸ್ತಿಯಾಯಿತ್ತೆ ಬಸವಾ ? ಪ್ರಾಣ ಪ್ರಸಾದದಲ್ಲಿ ಅಡಗಿತ್ತೆ ಬಸವಾ ? ಭಕ್ತಿ ಬಯಲಾಯಿತ್ತೆ ಬಸವಾ ? ಭಾವ ನಿರ್ಭಾವವಾಯಿತ್ತೆ ಬಸವಾ ? ಕಲ್ಪಿತಗುಣ ನಾಸ್ತಿಯಾಯಿತ್ತೆ ಬಸವಾ ? ಮನೋಮುಕ್ತವಾಯಿತ್ತೆ ಸಂಗಯ್ಯನ ಗುರುಬಸವಾ ?
--------------
ನೀಲಮ್ಮ
ಬಸವನೆ ಮಖಸೆಜ್ಜೆ, ಬಸವನೆ ಅಮಳೋಕ್ಯ. ಬಸವನ ನಾನೆತ್ತಿ ಮುದ್ದಾಡಿಸುವೆನು. ಬಸವಾ, ಸಂಗನಬಸವಿದೇವಾ ಜಯತು. ಬಸವಾ, ಸಂಗನಬಸವಲಿಂಗಾ ಜಯತು. ಬಸವಗೂ ಎನಗೂ ಭಾವಭೇದವಿಲ್ಲ ಬಸವಗೂ ಎನಗೂ ರಾಸಿಕೂಟವುಂಟು. ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ಬಸವನ ಬೆಸಲಾದ ಬಾಣತಿ ನಾನಯ್ಯಾ ಬಸವಾ, ಬಸವಾ, ಬಸವಾ!
--------------
ನಾಗಲಾಂಬಿಕೆ
ಅಂಡಜವಳಿದ ಬಸವಾ; ಪಿಂಡಜವಳಿದ ಬಸವಾ; ಆಕಾರವಳಿದ ಬಸವಾ; ನಿರಾಕಾರವಳಿದ ಬಸವಾ; ಸಂಗವಳಿದ ಬಸವಾ; ನಿಸ್ಸಂಗವಳಿದ ಬಸವಾ; ಸಂಗಯ್ಯನಲ್ಲಿ ಸ್ವಯಲಿಂಗವಾದ ಬಸವಾ.
--------------
ನೀಲಮ್ಮ
ಶರಣಾರ್ಥಿ ಶರಣಾರ್ಥಿ ಬಸವ ಬಸವಾ ಗುರುವೆ, ಗುರುವೆ ಬಸವ ಬಸವ ಬಸವಾ. ಕಪಿಲಸಿದ್ಧಮಲ್ಲಿನಾಥಯ್ಯಾ, ನನ್ನಂಗ ನಿನ್ನಂಗ ಬಸವಣ್ಣಂಗರ್ಪಿತವಯ್ಯಾ.
--------------
ಸಿದ್ಧರಾಮೇಶ್ವರ
ಲಿಂಗದ ಹಂಗಿಗಳಲ್ಲ ನಾನು ಬಸವಾ. ಜಂಗಮದ ಹಂಗಿಗಳಲ್ಲ ನಾನು ಬಸವಾ. ಪ್ರಸಾದದ ಹಂಗಿಗಳಲ್ಲ ನಾನು ಬಸವಾ. ಉಭಯಸುಖದ ಪರಿಣಾಮವಿಡಿದು ನಿಂದವಳಲ್ಲ ನಾನು ಬಸವಾ. ಏನುವನರಿತವಳಲ್ಲ ನಾನು ಬಸವಾ. ಎಲ್ಲವ ನನ್ನಲ್ಲಿ ನೆಲೆಗೊಳಿಸಿದ ಬಸವ. ಪ್ರಸನ್ನಮೂರ್ತಿಯಲಡಗಿದ ಬಸವನ ಇರವ ಕಂಡು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಸಮಯಾಚಾರವಡಗಿದ ಬಸವಾ, ಸಂಗ ನಿಸ್ಸಂಗವಾದ ಬಸವಾ, ಶಬ್ದವಡಗಿದ ಬಸವಾ, ಶೂನ್ಯವಳಿದ ಬಸವಾ, ಪ್ರಸಾದ ಹಿಂಗಿದ ಬಸವಾ, ಪ್ರಸನ್ನಮೂರ್ತಿಯ ಕಂಡ ಬಸವಾ. ಪ್ರಭೆಯಳಿದ ಬಸವಾ, ಪ್ರಸನ್ನರೂಪ ಬಸವಾ, ಕಾಯವನಳಿದನಯ್ಯಾ ಸಂಗಯ್ಯನ ಗುರುಬಸವ.
--------------
ನೀಲಮ್ಮ
ಮಾತಿಲ್ಲದ ಮಥನವ ಮಾಡಿ ಮೆರೆದೆ ಬಸವಾ. ನೀತಿಯಿಲ್ಲದೆ ನಿಜವ ತೋರಿ ಮೆರೆದೆ ಬಸವಾ. ಅನಿತನಿತು ತೃಪ್ತಿಯಮಾಡಿ ತೋರಿದೆಯಯ್ಯಾ. ನಿಮ್ಮಂಗ ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಲ್ಲಾ ಬಸವಾ.
--------------
ನೀಲಮ್ಮ
ಏಹೆ ಎಲೆ ಅಭವ ಬಸವಾ, ಏಹೆ ಎಲೆ ಪರಿಣಾಮಿ ಬಸವಾ, ಏಹೆ ವಿಚಾರಿ ಬಸವಾ, ವಿಚಾರ ಸಂಗನನರಿದು ಹೇಳಲಿಲ್ಲವೆನಗೆ ಬಸವಾ. ಹೇ ಹೇ ಎನಲೊಂದೆ ಸಂಗ ಸಂಗ, ನಿರಂಗ ನಿರಂಗ ಬಸವ ಬಸವ ಎಲೆ ಬಯಲು ?
--------------
ನೀಲಮ್ಮ
ಸಮಯ ಸಮಯೋಚಿತ ಭಾವ ಭಾವನಷ್ಟವಾಗಿ ಕಾಲಕರ್ಮವಿಲ್ಲದೆ ಹೋಯಿತ್ತು; ತತ್ವಜ್ಞಾನ ಪ್ರಕಾಶಿಕೆಯಡಗಿತ್ತು; ಆಧಾರಾಧೇಯವಡಗಿತ್ತಯ್ಯಾ; ನಿರಾಧಾರ ಸಮಯವಾಯಿತ್ತಯ್ಯಾ. ಬಸವ ಬಸವಾ ಬಸವಾ ಎಂಬ ಅನುಭಾವ ಬಯಲಾಯಿತ್ತಯ್ಯಾ. ಎಸಳೆಂಟರ ಹಸನಳಿಯಿತ್ತಯ್ಯಾ ಬಸವಾ ನಿಮ್ಮಲ್ಲಿ ನಿಜಯೋಗ ಸಮಾಧಿಯಾಯಿತ್ತಯ್ಯಾ ಬಸವಾ ನಿಮ್ಮಲ್ಲಿ, ಕಪಿಲಸಿದ್ಧಮಲ್ಲಿನಾಥಯ್ಯಾ, ಬದುಕಿದೆನು ನಾನಿಂದು.
--------------
ಸಿದ್ಧರಾಮೇಶ್ವರ
ಎನಗಿನ್ನೇತರಭಕ್ತಿ ಬಸವಾ ? ಎನಗಿನ್ನೇತರ ಮುಕ್ತಿ ಬಸವಾ. ಎನಗಿನ್ನು ಶಬ್ದ ನಿಶ್ಶಬ್ದಸೂಚನೆಯಾಯಿತ್ತಯ್ಯಾ ಬಸವಾ, ಸಂಗಯ್ಯಾ, ಬಸವನ ಗಮನದರಿವು ಎನಗೆಲ್ಲಿಯದು ?
--------------
ಅಶ್ವಥರಾಮ
ಕಾಮಿಯಾನಾಗಿ ಕಾಮದ ಹಂಗಹರಿದೆನು ಬಸವಾ. ಕಾಮ ನಿಃಕಾಮವಾಗಿ ಬಸವನ ಹೆಸರಲ್ಲಿ ಬಲವಂತರ ಕಂಡೆ. ಬಲವಂತರ ಬಲುಹ ಕಂಡು ಬಲುಹನಳಿದು, ಬಸವನಲ್ಲಿ ನಿರಾಲಂಬಿಯಾದೆ ನಾನು. ನಿರಾಕುಳದ ಹಂಗ ಹರಿದು ನಾನು ಸುಖಿಯಾದೆನಯ್ಯಾ, ಸಂಗಯ್ಯಾ, ಬಸವನಲ್ಲಿ.
--------------
ನೀಲಮ್ಮ
ಇನ್ನಷ್ಟು ... -->