ಅಥವಾ

ಒಟ್ಟು 65 ಕಡೆಗಳಲ್ಲಿ , 33 ವಚನಕಾರರು , 57 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಷ್ಕಲ ಷಟ್‍ಸ್ಥಲಲಿಂಗದ ಮೂಲಾಂಕುರವೆನಿಸುವ ಪರಮ ಕಳೆ, ಆ ಪರಮ ಕಳೆಯ ಪರಬ್ರಹ್ಮ ಪರಂಜ್ಯೋತಿ ಪರಾತ್ಪರ ಪರತತ್ವ ಪರಮಾತ್ಮ ಪರಮಜ್ಞಾನ ಪರಮಚೈತನ್ಯ ನಿಷ್ಕಲ ಚರವೆನಿಸುವ ಪರವಸ್ತು ಅದೆಂತೆಂದಡೆ: ವಾಚಾತೀತಂ ಮನೋತೀತಂ ಭಾವಾತೀತಂ ಚ ತತ್ಪರಂ ಜ್ಞಾನಾತೀತಂ ನಿರಂಜನಂ ನಿಃಕಲಾಃ ಸೂಕ್ಷ್ಮಭಾವತಃ ಎಂತೆಂದುದಾಗಿ, ನಿರವಯವಹ ಚರಲಿಂಗದ ಚೈತನ್ಯವೆಂಬ ಪ್ರಸನ್ನಪ್ರಸಾದಮಂ ಇಷ್ಟಲಿಂಗಕ್ಕೆ ಕಳಾಸಾನ್ನಿಧ್ಯವಂ ಮಾಡಿ ಆ ಚರಲಿಂಗದ ಸಮರಸ ಚರಣಾಂಬುವಿಂ ಮಜ್ಜನಕ್ಕೆರೆದು ನಿಜಲಿಂಗೈಕ್ಯವನೆಯ್ದಲರಿಯರು. ಅದೆಂತೆಂದಡೆ: ಹಸ್ತಪೀಯೋಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲೀನ ಮನಃ ಪ್ರಚಾರಃ ಬಾಹ್ಯಕ್ರಿಯಾಸಂಕುಲನಿಃಸ್ಪೃಹಾತ್ಮಾ ಸಂಪೂಜಯತ್ಯಂಗ ಸ ವೀರಶೈವಃ ಆವನಾನೋರ್ವನು ಕರಪೀಠದಲ್ಲಿ ತನ್ನ ಶ್ರೀಗುರು ಕೊಟ್ಟ ಪ್ರಾಣಲಿಂಗವನ್ನು ಇರಿಸಿ, ಆ ಶಿವಲಿಂಗದಲ್ಲಿ ಮನವನೆಯ್ದಿದ ಮನಃಸಂಚಾರವುಳ್ಳಾತನಾಗಿ ಹೊರಗಣ ಕ್ರಿಯಾಸಮೂಹದಲ್ಲಿ ಬಯಕೆಯಳಿದು ಬುದ್ಧಿಯುಳ್ಳಾತನಾಗಿ ತನ್ನ ಪ್ರಾಣಲಿಂಗಮಂ ಪೂಜಿಸುತ್ತಿಹನು. ಆ ಪ್ರಾಣಲಿಂಗಾರ್ಚಕನಾದ ಲಿಂಗಾಂಗಸಂಬಂಧಿಯೇ ವೀರಶೈವನೆಂದರಿವುದು. ಅದೆಂತೆಂದಡೆ: ಕಂಡವರ ಕಂಡು ತೀರ್ಥದಲ್ಲಿ ಮಂಡೆಯ ಬೋಳಿಸಿಕೊಂಬ ಭಂಡರ ಮೆಚ್ಚುವರೆ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ಊರ ಹೊರಗಣ ಮನೆಯೊಳಗೊಂದು ಉರಿಗಣ್ಣು ಹುಟ್ಟಿ, ಈರೇಳುಲೋಕವ ನುಂಗಿ ಊರೆಲ್ಲವ ಸುಟ್ಟಿತ್ತು ನೋಡಾ. ಊರ ಸುಟ್ಟ ಉರಿಗಣ್ಣು ಅದು ಆರಿಗೂ ಕಾಣಬಾರದು. ಅದು ಮಾರಾರಿ ತಾನೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಯಲೊಳಗಣ ರೂಪು, ರೂಪಿನೊಳಗಣ ಬಯಲು, ಉಭಯವ ವಿಚಾರಿಸಿ ನೋಡುವಲ್ಲಿ, ಕುಂಭದೊಳಗೆ ನೀರ ತುಂಬಿ, ಸಿಂಧುವಿನೊಳಗೆ ಮುಳುಗಿಸಲಾಗಿ, ಅದರೊಳಗೂ ನೀರು, ಹೊರಗೂ ನೀರು. ಹೊರಗಣ ನೀರು ಒಳಗಾಯಿತ್ತು, ಒಳಗಣ ನೀರು ಹೊರಗಾಯಿತ್ತು. ಕುಂಭದೊಳಗಣ ನೀರಂಗಕ್ಕೆ ಒಳಗೋ ಹೊರಗೋ ಎಂಬುದ ವಿಚಾರಿಸಿ ತಿಳಿದು, ಅಂಗದ ಮೇಲಿಹ ಲಿಂಗ, ಲಿಂಗವ ಧರಿಸಿಹ ಅಂಗ, ಆ ಅರುಹಿನ ಕುರುಹಿಂಗೆ ಒಳಗೋ ಹೊರಗೋ ಎಂಬುದ ವಿಚಾರಿಸಿ, ಕರ್ಪುರದ ಹೊಗೆಯೊಳಗೆ ಉಭಯ ಬಯಲಾಗಿ, ಮಡಕೆ ಉಳಿಯಿತ್ತದೇಕೆ ? ಘಟ ಉಳಿದು ಆತ್ಮ ಬಯಲಾಯಿತ್ತದೇಕೆ ? ಉಭಯ ನಿರಂತವಾದಲ್ಲಿ, ಉರಿಯಿಂದ ಕರ್ಪುರ ನಷ್ಟ, ಕರ್ಪುರದಿಂದ ಉರಿ ನಷ್ಟವಾದಂತೆ. ಇಂತೀ ಉಭಯಸ್ಥಲದೊಳಗೆ ಅಂಗಲಿಂಗ, ಪ್ರಾಣಲಿಂಗ ಉಭಯವನೊಂದು ಮಾಡಿ ತಿಳಿದು, ನಿಜದಲ್ಲಿ ನಿಂದ ಲಿಂಗಾಂಗಿಯ ಕೂಗಿನ ಕುಲವಿಲ್ಲ, ಮಹಾಮಹಿಮ ಮಾರೇಶ್ವರಾ
--------------
ಮಾರೇಶ್ವರೊಡೆಯರು
ಹೊರಗಣ ಸಿಪ್ಪೆ ಒಳಗೆ ಮೆಲುವನ್ನಕ್ಕ ಉಭಯದ ಕೂಟ. ಅಗಲಿಗೆ ಬಂದ ಮತ್ತೆ ರಸಾನ್ನವಲ್ಲದೆ ಹಿಪ್ಪೆಗೆ ಚಿತ್ತ ಒಪ್ಪಬಲ್ಲುದೆ ? ಅರಿವನ್ನಬರ ಸ್ಥಲಕುಳಂಗಳ ಹೊಲಹೊಲದ ಹೊಲಬ ತಿಳಿದಲ್ಲಿ , ಭಕ್ತಿಜ್ಞಾನವೈರಾಗ್ಯಗಳೆಂಬ ತ್ರಿವಿಧದ ಗೊತ್ತು ನಷ್ಟವಾದ ಶರಣ, ತಥ್ಯಮಿಥ್ಯಕ್ಕೆ ಸಿಕ್ಕ ಮತ್ತಾವ ಗುಣಂಗಳಲ್ಲಿಯೂ ಹೊರದೃಷ್ಟಕ್ಕೆ ಬಾರ. ಆತ ನಿಶ್ಚಿಂತ ನೋಡಾ, ನಿಃಕಳಂಕ ಕೂಡಲಚೆನ್ನಸಂಗಮದೇವ ತಾನಾದ ಶರಣ.
--------------
ಹಡಪದ ರೇಚಣ್ಣ
ತೆಂಗಿನೊಳಗಣ ತಿರುಳು ಸೇವಿಸಬರ್ಪುದಲ್ಲದೆ ಹೊರಗಣ ಪರಟೆ ಸೇವಿಸಲು ಬಾರದು. ಚಾಂಡಾಲಂಗೆ ಜ್ಞಾನವಂಕುರಿಸಿದಡೆ ಆತನ ಅಂತರಂಗದ ವೃತ್ತಿಗೆ ಪೂಜ್ಯತೆಯಲ್ಲದೆ ಬಹಿರಂಗದ ತನುವಿಗೆ ಪೂಜ್ಯತೆಯಾಗದು. ಒಳಹೊರಗೆಂಬ ಭೇದವಿಲ್ಲದೆ ಸೇವಿಸಲುಚಿತವಪ್ಪಂತೆ ಶಿವಕುಲಪ್ರಸೂತಂಗೆ ಶಿವಜ್ಞಾನವಾಗಲು ಆತನ ತನುವೃತ್ತಿಗಳೆರಡೂ ಸೇವ್ಯವಾಗಿರ್ಪವು._ ಇಂತಿದು ಸಾಧಕರ ಸ್ಥಿತಿಯಯ್ಯಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಘಟಸ್ಥಾವರದೊಳಗನೊಡೆದು ಕಿಚ್ಚಿನ ಹೊರೆಯ ಕಂಡೆ. ಕಾಣಿಸಿ ಮಿಕ್ಕಾದ ಹೊರಗಣ ಹೊರೆಯ ತಿಗುಡಂ ಕೆತ್ತಿ ಕಂಬವ ಶುದ್ಧೈಸಿ ನೆಲವಟ್ಟಕ್ಕೆ ಚದುರಸವನಿಂಬುಗೊಳಿಸಿ ಮೇಲಣವಟ್ಟಕ್ಕೆ ಎಂಟುಧಾರೆಯ ಏಣಂ ಮುರಿದು ಕಡಿಗೆವಟ್ಟ ವರ್ತುಳಾಕಾರದಿಂ ಶುದ್ಧವ ಮಾಡಿ ಏಕೋತ್ತರಶತಸ್ಥಲವನೇಕೀಕರಿಸಿ ಒಂದು ದ್ವಾರದ ಬೋದಿಗೆಯಲ್ಲಿ ಕಂಬವ ಶುದ್ಧೈಸಿ ಕಂಬ ಎರವಿಲ್ಲದೆ ನಿಂದ ಮತ್ತೆ ಚದುರಸಭೇದ. ಅಷ್ಟದಿಕ್ಕಿನ ಬಟ್ಟೆಕೆಟ್ಟು ನವರಸ ಬಾಗಿಲು ಮುಚ್ಚಿ, ತ್ರಿಕೋಣೆಯನುಲುಹುಗೆಟ್ಟು, ಮುಂದಣ ಬಾಗಿಲು ಮುಚ್ಚಿ ಹಿಂದಣ ಬಾಗಿಲು ಕೆಟ್ಟು, ನಿಜವೊಂದೆ ಬಾಗಿಲಾಯಿತ್ತು. ಈ ಕೆಲಸವ ಆ ಕಂಬದ ನಡುವೆ ನಿಂದು ನೋಡಲಾಗಿ ಮಂಗಳಮಯವಾಗಿ, ಇದು ಯೋಗಸ್ಥಲವಲ್ಲ. ಇದು ಘನಲಿಂಗ ಯೋಗಸ್ಥಲ, ಇಂತೀ ಭೇದವ ತಿಳಿದಡೆ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದಿಲ್ಲಾ ಎಂದೆ.
--------------
ಬಾಚಿಕಾಯಕದ ಬಸವಣ್ಣ
ವೇದ ವೇದಾಂತವನೋದಿದಡೇನು ಮನಸ್ಸೂತಲವಳಿಯದನ್ನಕ್ಕ ? ಸಿದ್ಧ ಸಿದ್ಧಾಂತವ ಶ್ರಮಬಟ್ಟಡೇನು ಸಾಧಿಸು ಕೀರ್ತಿಯ ಪಡೆಯದನ್ನಕ ? ಇವೆಲ್ಲ ಹೊರಗಣ ಮಾತು. ಮಾತೊಂದೆ ನಮ್ಮ ಕಪಿಲಸಿದ್ಧಮಲ್ಲೇಶನಲ್ಲಿ ಸದಾಚಾರ ಸನ್ಮಾರ್ಗವಯ್ಯಾ.
--------------
ಸಿದ್ಧರಾಮೇಶ್ವರ
ವೇದ ವೇದಾಂತವನೋದಿದಡೇನು ಮನಸ್ಸೂತಕವಳಿಯದನ್ನಕ್ಕ? ಸಿದ್ಧ ಸಿದ್ಧಾಂತವ ಶ್ರಮಬಟ್ಟಡೇನು ಸಾಧಿಸಿ ಕೀರ್ತಿಯ ಪಡೆಯದನ್ನಕ ? ಇವೆಲ್ಲ ಹೊರಗಣ ಮಾತು. ಮಾತೊಂದೆ ನಮ್ಮ ಕಪಿಲಸಿದ್ಧಮಲ್ಲೇಶನಲ್ಲಿ ಸದಾಚಾರ ಸನ್ಮಾರ್ಗವಯ್ಯಾ.
--------------
ಸಿದ್ಧರಾಮೇಶ್ವರ
ಹೊರಗಣ ಮಾತ ಹೇಳಿ, ಒಳಗು ಶುದ್ಧವನರಿಯದೆ, ಕೂಷ್ಮಾಂಡ ಕೊಳೆತಂತೆ ಬಯಲ ಬಹಿರೂಪವಂ ತೊಟ್ಟು, ಹಿರಿಯರು, ವಿರಕ್ತರೆಂದು ಹೆಣ್ಣು ಹೊನ್ನು ಮಣ್ಣಿಗಾಗಿ ಜಗದ ಹುದುವಿನ ಒಡವೆಗೆ ಹೊಡೆದಾಡಲೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಲಿಂಗಾಂಗ ಸಂಬಂಧದ ಭೇದವನರಿಯದೆ ನಾವು ಲಿಂಗಾಗಿಸಂಬಂಧಿಗಳೆಂದು ಅಂದಚಂದವಾಗಿ ನುಡಿದುಕೊಂಬ ಕ್ರಿಯಾಭ್ರಾಂತರು ನೀವು ಕೇಳಿರೋ ಲಿಂಗಾಂಗ ಸಂಬಂಧದ ಉತ್ತರೋತ್ತರದ ನಿರ್ಣಯವ. ಹೊರಗಣ ಹೂವನ್ನೆ ತಂದು ಸ್ಥೂಲತನುವಿನ ಮೇಲಿಪ್ಪ ಆಚಾರಲಿಂಗಮಂ ಪೂಜೆಮಾಡಿ ತನುವ ಸಮರ್ಪಿಸಿ ಬೇಡಿಕೊಂಡು ಹೊರಗಣ ಹೊನ್ನು ಹೆಣ್ಣು ಮಣ್ಣು ಷಟ್ಕರ್ಮಂಗಳ ಬಿಟ್ಟುದೇ ಇಷ್ಟಲಿಂಗಪೂಜೆ. ಒಳಗಣ ಹೂವನ್ನೆ ತಂದು ಸೂಕ್ಷ ್ಮತನುವಿನ ಮೇಲಿಪ್ಪ ಜಂಗಮಲಿಂಗಮಂ ಪೂಜೆಮಾಡಿ ಮನವ ಸಮರ್ಪಿಸಿ ಉಪಾವಸ್ಥೆಯಂ ಮಾಡಿ ಒಳಗಣ ಅಂತಃಕರಣಂಗಳಂ ಸುಟ್ಟುದೇ ಪ್ರಾಣಲಿಂಗಪೂಜೆ. ಮನೋಮಧ್ಯದೊಳಿಪ್ಪ ಭಾವಪುಷ್ಪವನ್ನೆ ತಂದು ಕಾರಣತನುವಿನ ಮೇಲಿಪ್ಪ ತೃಪ್ತಿಲಿಂಗಮಂ ಪೂಜೆ ಮಾಡಿ ಸಂತೋಷವಂ ಸಮರ್ಪಿಸಿ ದೈನ್ಯಂಬಟ್ಟು ಜ್ಞಾನ ಕ್ರಿಯೆಗಳಳಿದುದೇ ಭಾವಲಿಂಗಪೂಜೆ. ಈ ಪ್ರಕಾರದ ಲಿಂಗಾಂಗ ಸಾಧಕತ್ವಮಂ ಶಿವರಾತ್ರಿಯ ಸಂಕಣ್ಣಂಗೊಲಿದಂತೆ ಎನಗೊಲಿದು ಕರುಣಿಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮಜ್ಜನಕ್ಕೆರೆಯ ಹೇಳಿದಡೆ ನಾನೇನ ಮಜ್ಜನಕ್ಕೆರೆವೆನು? ಒಳಗೊಂದು ಪ್ರಾಣಲಿಂಗವ ಕಂಡೆನಯ್ಯಾ. ಹೊರಗಣ ಹೂವ ಕೊಯ್ದು, ಹೊರಗನೆ ಮಜ್ಜನಕ್ಕೆರೆವರು; ಉಪಚಾರದ ನೇಮವ ನಾನೊಲ್ಲೆನಯ್ಯಾ. ಸ್ವಾನುಭಾವವನರಿಯದವನೇತರ ಸುಖಿಯೊ? ಕಪಿಲಸಿದ್ಧಮಲ್ಲಿನಾಥನವನನೊಲ್ಲನಯ್ಯಾ
--------------
ಸಿದ್ಧರಾಮೇಶ್ವರ
ಬಹುಜಲವಂ ಬಿಟ್ಟಲ್ಲಿ ಅದು ಶೀಲವಲ್ಲ. ಪರಪಾಕ ಮುಂತಾದ ದ್ರವ್ಯವ ಬಿಟ್ಟಲ್ಲಿ ಶೀಲವಂತನಲ್ಲ. ಅದೆಂತೆಂದಡೆ ; ಅದು ಮನದ ಅರೋಚಕ, ಆ ಗುಣ ಜಗದ ಮಚ್ಚು, ಸರ್ವರ ಭೀತಿ, ದ್ರವ್ಯದ ಒದಗು ; ಈ ಗುಣ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ; ಪರಾಪೇಕ್ಷೆಯ ಮರೆದು, ಪರಸತಿಯ ತೊರೆದು, ಗುರುಲಿಂಗಜಂಗಮದಲ್ಲಿ ತಾಗು ನಿರೋಧಮಂ ತಾಳದೆ, ಹೆಣ್ಣು ಹೊನ್ನು ಮಣ್ಣಿಗಾಗಿ ತಪ್ಪಿ ನುಡಿಯದೆ, ಒಡೆಯರು ಭಕ್ತರಲ್ಲಿ ತನ್ನ ಕುರಿತ ಗೆಲ್ಲ ಸೋಲಕ್ಕೆ ಹೋರದೆ, ತನಗೊಂದು ಬೇಕೆಂದು ಅನ್ಯರ ಕೈಯಲ್ಲಿ ಹೇಳಿಸದೆ, ಬಹು ಢಾಳಕತನವಂ ಬಿಟ್ಟು ಸರ್ವರ ಆತ್ಮ ಚೇತನವನರಿತು, ತಾ ಮರೆದುದ ಅರಿದು ಎಚ್ಚತ್ತು ನೋಡಿ, ಅಹುದಾದುದ ಹಿಡಿದು ಅಲ್ಲದುದ ಬಿಟ್ಟು, ಬಹುದುಃಖಮಂ ಮರೆದು ಇಂತೀ ಸರ್ವಗುಣಸಂಪನ್ನನಾಗಿ ಆತ್ಮಂಗೆ ಅರಿವಿನ ಶೀಲವ ಮಾಡಿ, ಕಾಯಕ್ಕೆ ಮರವೆ ಇಲ್ಲದ ಆಚಾರವನಂಗೀಕರಿಸಿ, ಇಂತೀ ಕಾಯ, ಮನ, ಅರಿವಿನ ಆಚಾರದಲ್ಲಿ ನಿಂದಲ್ಲಿ ನಿಂದು, ಏತಕ್ಕೂ ಮರವೆಯಿಲ್ಲದೆ ಸರ್ವ ಅವಧಾನಂಗಳಲ್ಲಿ ಹೊರಗಣ ಮಾಟ ಒಳಗಣ ಕೂಟ ಉಭಯ ಶುದ್ಧವಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಜಿಡ್ಡು ಹರಿಯಿತ್ತು.
--------------
ಅಕ್ಕಮ್ಮ
-->