ಅಥವಾ

ಒಟ್ಟು 177 ಕಡೆಗಳಲ್ಲಿ , 24 ವಚನಕಾರರು , 173 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಂಡಾರದೊಳಗಿರ್ಪ ಸುವರ್ಣವೇ ಪ್ರಾಣಲಿಂಗವಾಗಿ, ಆಭರಣರೂಪಮಾದ ಸುವರ್ಣವೇ ಇಷ್ಟಲಿಂಗರೂಪಮಾಗಿ ಸಕಲಪ್ರಪಂಚದಲ್ಲೆಲ್ಲಾ ತಾನೇ ತುಂಬಿ, ತನ್ನ ಮಹಿಮೆಯಿಂದಲ್ಲೇ ಸಕಲಪ್ರಪಂಚವನಾಡಿಸುವ ಸುವರ್ಣವೇ ಭಾವಲಿಂಗಮಾಗಿ, ಪ್ರಪಂಚದಲ್ಲೆಲ್ಲಾ ತುಂಬಿರ್ಪಲ್ಲಿ ಮಹಾಲಿಂಗಮಾಗಿ, ಅದೇ ಆದಾಯಮುಖದಲ್ಲಿ ಒಮ್ಮುಖಕ್ಕೆ ಬಂದು ತನಗಿದಿರಿಟ್ಟಲ್ಲಿ ಪ್ರಸಾದಲಿಂಗಮಾಗಿ, ತನ್ನ ಸಂಸಾರಮುಖದಲ್ಲಿ ಸಂಚರಿಸುತ್ತಾ ತನಗೆ ಸೇವನಾಯೋಗ್ಯಮಾದಲ್ಲಿ ಜಂಗಮಲಿಂಗಮಾಗಿ, ಮುಂದೆ ತನ್ನ ಸಂರಕ್ಷಣಕಾರಣ ಕೋಶಭರಿತಮಾದಲ್ಲಿ ಶಿವಲಿಂಗಮಾಗಿ, ಅದೇ ಅಲಂಕಾರಮುಖದಲ್ಲಿ ದೊಡ್ಡಿತಾದಲ್ಲಿ ಗುರುಲಿಂಗಮಾಗಿ, ಈ ವಿಧದಲ್ಲೆಲ್ಲವು ತದಾಚರಣೆವಿಡಿದಿರ್ಪುದರಿಂ ಒಂದು ಸುವರ್ಣವೇ ಹಲವು ರೂಪಮಾಗಿ, ಪ್ರಪಂಚ ಸೃಷ್ಟಿ ಸ್ಥಿತಿ ಸಂಹಾರಕ್ಕೂ ಬ್ರಹ್ಮಾಂಡಕ್ಕೂ ತಾನೇ ಕಾರಣಮಾಗಿರ್ಪಂತೆ, ಒಂದು ಲಿಂಗವೇ ಹಲವು ರೂಪವಾಗಿ, ಭಕ್ತನ ಸೃಷ್ಟಿ ಸ್ಥಿತಿ ಸಂಹಾರಕ್ಕೂ ಬ್ರಹ್ಮಾಂಡಕ್ಕೂ ತಾನೇ ಕಾರಣಮಾಗಿರ್ಪುದು , ಪ್ರಪಂಚಕ್ಕೆ ತಾನು ಚೇತನಮಾಗಿ ಪ್ರಪಂಚವನಾಡಿಸುತ್ತಾ, ಆ ಪ್ರಪಂಚಕ್ಕೆ ತಾನೇ ಸುಖಪ್ರದನಾಗಿರ್ಪಂತೆ, ಲಿಂಗವು ನಿರ್ಗುಣಮಾದರೂ ಗುಣರೂಪಮಾದ ಭಕ್ತಿನಿಗೆ ತಾನು ಗುಣಮಾಗಿ, ಭಕ್ತಸುಖಪ್ರದಮಾಗಿರ್ಪುದು. ಸುವರ್ಣದಿಂ ಸುವರ್ಣವೇ ಜೀವನಮಾಗಿರ್ಪ ಅಧಿಕಬಲಮಂ ಸಂಪಾದಿಸಿ, ಆ ಬಲದಿಂದ ಶತ್ರುಸಂಹಾರಮಂ ಮಾಡಿ, ರಾಜ್ಯವನ್ನು ಸಂಪಾದಿಸಿ, ಅದೆಲ್ಲಕ್ಕೂ ತಾನೇ ಕರ್ತೃವಾಗಿ ತನ್ನಧೀನಮಾಗಿರ್ಪ ಆ ಆರಾಜ್ಯಾದಿಭೋಗವಂ ತಾನನುಭವಿಸುತ್ತಾ ನಿಶ್ಚಿಂತನಾಗಿ, ಐಶ್ವರ್ಯಕ್ಕೂ ತನಗೂ ಅಭೇದರೂಪಮಾಗಿರ್ಪ ಅರಸಿನಂತೆ, ಲಿಂಗದಿಂ ಲಿಂಗವೇ ಜೀವಿತಮಾಗಿರ್ಪ ನಿಜಬಲವಂ ಸಂಪಾದಿಸಿ, ತದ್ಬಲದಿಂ ತಮೋಗುಣ ಶತ್ರುಸಂಹಾರವಂ ಮಾಡಿ, ಮನೋರಾಜ್ಯಮಂ ಸಾಧಿಸಿ, ಎಲ್ಲಕ್ಕೂ ತಾನೇ ಕರ್ತೃವಾಗಿ, ತನ್ನಧೀನಮಾಗಿರ್ಪ ಮನೋಮುಖದಿಂದ ಬಂದ ಸುಖವನ್ನು ಉಪಾಧಿಯಿಲ್ಲದೆ ನಿಶ್ಚಿಂತಮಾಗನುಭವಿಸುತ್ತಾ, ದೀಪಪ್ರಭೆಯೋಪಾದಿಯಲ್ಲಿ ಲಿಂಗಕ್ಕೂ ತನಗೂ ಭೇದವಿಲ್ಲದೆ, ಐಶ್ವರ್ಯವಂತನು ತನ್ನ ಮುನ್ನಿನ ಗುಣವಳಿದು ಐಶ್ವರ್ಯಗುಣವೇ ನಿಜಮುಖ್ಯಗುಣಮಾಗಿ ಸಂಚರಿಸುತ್ತಿರ್ಪಂತೆ, ಲಿಂಗವಂತನು ತನ್ನ ಪೂರ್ವದ ಗುಣವಳಿದು ಲಿಂಗದಗುಣಮೆ ನಿಜಗುಣಮಾಗಿರ್ಪುದೇ ಲಿಂಗೈಕ್ಯವು. ಇಂತಪ್ಪ ಸಕೀಲವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇಷ್ಟಲಿಂಗದಲ್ಲಿ ತನುವನಡಗಿಸಿ, ಪ್ರಾಣಲಿಂಗದಲ್ಲಿ ಮನವನಡಗಿಸಿ, ಭಾವಲಿಂಗದಲ್ಲಿ ಜೀವನನಿಕ್ಷೇಪಿಸಿ, ಆ ಇಷ್ಟ ಪ್ರಾಣ ಭಾವಲಿಂಗವು ಒಂದಾದ ಮಹಾಘನ ಪರಬ್ರಹ್ಮದಲ್ಲಿ ತಾನೆಂಬ ನೆನಹಡಗಿ, ದ್ವಂದ್ವಕರ್ಮಂಗಳ ನೀಗಿ, ಆ ಪರಿಪೂರ್ಣ ಪರಬ್ರಹ್ಮವೆ ತಾನಾದುದು ಮಹಾಶೀಲವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರ್ಪಿತ ಭುಂಜಕನ, ಪ್ರಸಾದ ಭುಂಜಕನ ಪರಿ ಬೇರೆ, ಅರ್ಪಿತವೆಂದು ಸ್ಥೂಲ ಸೂಕ್ಷ್ಮವೆಂದೆನ್ನದೆ ಘನಕ್ಕೆ ಘನ ಮಹಾಘನ ಕಾಯ ಜೀವವೊಂದಯ್ಯಾ. ಅರ್ಥ ಪ್ರಾಣ ಅಭಿಮಾನ ಸವೆದಡೆ ಸಮಭೋಗರುಚಿಪ್ರಸಾದಿ. ಈ ಉಭಯಲಿಂಗದ ಮಹಿಮೆಯನು ಇನ್ನುಪಮಿಸಬಾರದು. ರೂಹಿಸಿ ಭಾವಿಸಿ ಗುಣಪ್ರಪಂಚವನತಿಗಳೆದು ನಿರ್ವಿಕಲ್ಪಿತನಾದಾತ ಆನೆಂಬ ಶಬ್ದವಳಿದುಳಿದ ಪ್ರಸಾದಗ್ರಾಹಕ ನಿಂದ ನಿಲುವು, ಪರತಂತ್ರ ಪರಿಭಾವ ಪ್ರಪಂಚುವ ಬಿಟ್ಟು ಘನರವಿಲೋಚನನಾಗಿ, ಅರ್ಪಿತ ಭುಂಜಕನಲ್ಲ, ಆದಿವಿಡಿದಾಗಮನಲ್ಲ. ಅರ್ಪಿತ ಅನರ್ಪಿತರಹಿತ ಕೂಡಲಚೆನ್ನಸಂಗನಲ್ಲಿ ಆತ ದಿಟಪ್ರಸಾದಿ.
--------------
ಚನ್ನಬಸವಣ್ಣ
ಆತ್ಮದೃಕ್ಕಿಂದ ಈಶ್ವರನ ತಿಳಿದಲ್ಲದೆ, ಜಾತಿಸ್ಮರತ್ವವ ಕಾಣಬಾರದು; ಜ್ಯೋತಿರ್ಮಯಲಿಂಗದಿಂದೊಗೆದ ಶರಣನ, ಏತರಿಂದ ಕಂಡು ಹೇಳುವಿರಣ್ಣ? ಮಾತಿನಿಂದ ಹೇಳಿಹೆನೆಂದಡೆ, ವಾಚಾತೀತ ಶಿವಶರಣನು. ವಾಙ್ಮನಕ್ಕಗೋಚರವಾದ ಮಹಾಘನ ಪರತತ್ವದಲುದಯವಾದ ಶರಣನ ಮಾತಿಗೆ ತಂದು ನುಡಿವ ಮರುಳುಮಾನವರನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪೃಥ್ವಿಯಲ್ಲಿ ಜನನವೂ, ಆಕಾಶದಲ್ಲಿ ಮರಣವೂ, ಧರೆಯಲ್ಲಿ ಸಂತೋಷವೂ, ಗಗನದಲ್ಲಿ ದುಃಖವೂ, ಇಳೆಯಲ್ಲಿ ಅಹಂಕಾರವೂ, ಬಯಲಲ್ಲಿ ಜ್ಞಾನವೂ, ಬಯಲಲ್ಲಿ ಧರ್ಮವೂ, ಧರಣಿಯಲ್ಲಿ ಕರ್ಮವೂ, ಆಕಾಶದಲ್ಲಿ ಭಕ್ತಿಯೂ, ಧರಣಿಯಲ್ಲಿ ಶಕ್ತಿಯೂ, ಭೂಮಿಯಲ್ಲಿ ಜಾಗ್ರವೂ, ಆಕಾಶದಲ್ಲಿ ಸುಷುಪ್ತಿಯೂ, ಅಲ್ಲಿ ನೀನೂ ಇಲ್ಲಿ ನಾನೂ ಇರಲಾಗಿ, ನೀನೆಂತು ನನಗೊಲಿದೆ ? ನಾನೆಂತು ನಿನ್ನ ಕೂಡುವೆ ? ಬಯಲಲ್ಲಿರ್ಪ ಗುಣಗಳಂ ನಾನು ಕೊಂಡು, ಪೃಥ್ವಿಯಲ್ಲಿರ್ಪ ಗುಣಂಗಳಂ ನಿನಗೆ ಕೊಟ್ಟು, ಅಲ್ಲಿ ಬಂದ ನಿರ್ವಾಣಸುಖಲಾಭವನ್ನು ಪಡೆದರೆ ನೀನು ಮೆಚ್ಚುವೆ ನಾನು ಬದುಕುವೆ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ದೀಕ್ಷಿತನು ಯಜನಾರ್ಥಿಯಾಗಿ, ಭೂಶುದ್ಧಿಯಂ ಮಾಡಿ, ಯೂಪಸ್ತಂಭವಂ ಪ್ರತಿಷೆ*ಯಂ ಮಾಡಿ, ಋತ್ವಿಜರಂ ಕೂಡಿ, ಮಹಾಘೋರಾಟವಿಯಲ್ಲಿ ಕಳಪುಲ್ಲಂ ತಿಂದು ಕೊಳಕುನೀರಂ ಕುಡಿದು ಅಧೋಮುಖಗಳಾಗಿ ಸಂಚರಿಸುವ ಪಶುಸಮೂಹಗಳೊಳೊಂದು ಸಲಕ್ಷಣಮಾದ ಪಶುವಂ ಪಿಡಿದು, ಯೂಪಸ್ತಂಭದಲ್ಲಿ ಹರಿಯದ ಹಗ್ಗದಲ್ಲಿ ಕಟ್ಟಿ, ಅತಿಖಾತಮಪ್ಪ ಯಜ್ಞಕುಂಡವಂ ಚೆನ್ನಾಗಿ ಸಮೆದು, ಒಣಗಿಯೊಣಗದ ಕಾಷ*ಂಗಳಿಂದಗ್ನಿಯ ಹೊತ್ತಿಸಿ, ಅತಿಸುಗಂಧಮಾದ ಘೃತಮಂ ಮಂತ್ರಘೋಷದಿಂದಾಹುತಿಗೊಡುತ್ತಿರೆ, ಅಗ್ನಿಯು ಪಟುವಾಗಿ, ನಿಜವಾಸನಾಧೂಪದಿಂ ಸಕಲದೇವತೆಗಳಂ ತೃಪ್ತಿಬಡಿಸಿ ಋತ್ವಿಕ್ಕುಗಳನೊಳಕೊಂಡು ದೀಕ್ಷಿತನಂ ವಿೂರಿ, ಪಾಶಮಂ ದಹಿಸಿ, ಕಂಭದಲ್ಲಿ ಬೆರೆದು ಪರಮಶಾಂತಿಯನೆಯ್ದಿದ ತಾನೇ ಸೋಮಯಾಜಿಯಾಯಿತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಸ್ಫಟಿಕದ ಘಟದೊಳಗಿರ್ದ ಜ್ಯೋತಿಯ ಪ್ರಕಾಶವು ಆ ಘಟವನಾವರಿಸಿ ಪರೋಪಕಾರಕ್ಕೆ ಪ್ರವರ್ತಿಸುವಂತೆ, ಮಹಾಘನ ಗಂಭೀರ ಶರಣನ ಧವಲಾಂಗದಲ್ಲಿರ್ಪ ಜ್ಯೋತಿರ್ಮಯಲಿಂಗವು ಅಂಗವನಾವರಿಸಿ ಮಹಾಜ್ಞಾನವನೈದಿ ದಿವ್ಯಾನುಭಾವಪ್ರಕಾಶವನು ಸಹಜೋಪಕಾರಕ್ಕೆ ಪ್ರಭಾಮಯವಾಗಿ ಪ್ರವರ್ತಿಸುತ್ತಿಹನು ಗುರುನಿರಂಜನ ಚನ್ನಬಸವಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ವಾಚಾತೀತವೂ ಮನೋತೀತವೂ ಭಾವಾತೀತವೂ ಆದ ಮಹಾಲಿಂಗವು ಸತ್ಯಜ್ಞಾನಾನಂದ ಸ್ವರೂಪಮಾದಲ್ಲಿ, ಸತ್ಯವೇ ಭಕ್ತ, ಜ್ಞಾನವೇ ಗುರು, ಆನಂದವೇ ಜಂಗಮಸ್ವರೂಪವಾಗಿ ನಟಿಸುತಿರ್ಪ ಮಹಾಲಿಂಗವು ತನ್ನ ಲೀಲೆಗೋಸುಗ ಆನಂದವನ್ನು ಮರೆವಿಡಿದು, ಅದರಲ್ಲಿಯೇ ದುಃಖಸ್ವರೂಪಮಾಗಿ ಮಹಾರುದ್ರನಂ ಸೃಜಿಸಿ, ಜ್ಞಾನಮಂ ಮರೆವಿಡಿದು, ಅದರಲ್ಲಿಯೇ ಅಜ್ಞಾನವೆಂಬ ವಿಷ್ಣುವಂ ಕಲ್ಪಸಿ, ಸತ್ಯವಂ ಮರೆವಿಡಿದು, ಅದರಲ್ಲಿ ಮಿಥ್ಯೆಯೆಂಬ ಬ್ರಹ್ಮನು ಕಲ್ಪಿಸಲು, ಸರ್ಗಸ್ಥಿತಿ ಸಂಹಾರಂಗಳಿಗಿದೇ ಕಾರಣಮಾಗಿ, ಆ ರುದ್ರನಲ್ಲಿ ಜಾಗ್ರವೂ, ವಿಷ್ಣುವಿನಲ್ಲಿ ಸುಷುಪ್ತಿಯೂ, ಬ್ರಹ್ಮನಲ್ಲಿ ಸ್ವಪ್ನವೂ ಉತ್ಪನ್ನವಾಗಿ, ಆ ಜಾಗ್ರದಲ್ಲಿ ತೇಜವೂ, ಸುಷುಪ್ತಿಯಲ್ಲಿ ವಾಯ್ವಾಕಾಶಂಗಳೂ, ಸ್ವಪ್ನದಲ್ಲಿ ಪೃಥ್ವಿಯಪ್ಪುಗಳೂ ಆಗಿ, ಅವುಗಳೇ ಒಂದಕ್ಕೊಂದಾವರಣಂಗಳಾಗಿರ್ಪ ಈ ಪ್ರಪಂಚದಲ್ಲಿ ಕ್ರೀಡಾನಿಮಿತ್ತವಾಗಿ ಜೀವಪರಮರೂಪುಗಳಂ ಧರಿಸಿ, ಇದಕ್ಕೆ ಹೊರಗಾಗಿ, ತಾನು ಪರಮರೂಪದಲ್ಲಿ ನಿಂದು, ತನ್ನೊಳ್ತಾನೆ ಕಲ್ಪಿಸಿದ ಜೀವಕೋಟಿಗಳನ್ನು ಇದಕ್ಕೊಳಗುಮಾಡಲು, ಅವೆಲ್ಲವೂ ಒಂದಕ್ಕೊಂದು ಸುತ್ತಿಮುತ್ತಿ ಮಿಥ್ಯೆಯೇ ಸ್ಥೂಲಮಾಗಿ, ಅಜ್ಞಾನವೇ ಸೂಕ್ಷ್ಮವಾಗಿ, ದುಃಖವೇ ಕಾರಣಮಾಗಿ, ಜಾಗ್ರತ್ಸ್ವಪ್ನಸುಷುಪ್ತ್ಯವಸ್ಥೆಗಳನನುಭವಿಸುತ್ತಾ. ನಿಜವಂ ಮರತು ನಿಜಾವಸ್ಥೆಯಂ ತೊರೆದು, ತ್ರಿಮೂರ್ತಿಗಳ ಬಲೆಗೆ ಸಿಕ್ಕಿ ದಾಂಟಲಾರದೆ, ಕೋಟಲೆಗೊಳುತತಿಪ್ರ್ಮದಂ ನೋಡಿ ನೋಡಿ, ಆನಂದಿಸುತ್ತಿರ್ಪನೆಂತೆಂದೊಡೆ: ಮದ್ದಂ ಮೆಲುವಾತಂಗದೇ ಸಾಧಕಮಾಗಿ, ಆ ಲಹರಿಯೊಳಗೆ ಕೂಡಿ, ನಿಜಾವಸ್ಥೆಯಂ ತೊರೆದು, ತದವಸ್ಥೆಯೊಳು ಬದ್ಧನಾಗಿ, ಆ ಲಹರಿಯಳಿದಲ್ಲಿ ಮರಣವೇ ಕಾರಣಮಾಗಿ, ತಿರಿಗಿ ಶರೀರಮಂಪೊಂದಿ, ಅವಸ್ಥಾತ್ರಯಂಗಳನನುಭವಿಸುತ್ತಿಪ್ರ್ಮದಂ ನೋಡಿ, ಪರಮಾನಂದಿಸುತ್ತಿಪುನು. ಇಂತಪ್ಪ ಭ್ರಮೆಯಂ ಕಳೆದು, ತನ್ನ ನಿಜಸ್ವರೂಪಮಪ್ಪ ತೂರ್ಯಾವಸ್ಥೆಯಂ ಹೊಂದುವನೆಂದೊಡೆ, ಹೊಂದತೀರದೆ ಸ್ವಲ್ಪಕಾಲವೇ ಮಹಾತ್ಕಾಲಮಾಗಿ, ಪೃಥ್ವಿವ್ಯಪ್ತೇಜೋವಾಯ್ವಾಕಾಶಾದಿ ಪಂಚಭೂತಂಗಳು ದಾಂಟಲಾರದೆ, ಆ ಪಂಚಭೂತಗುಣಗಂಗಳಂ ಪಂಚೇಂದ್ರಿಯಮುಖಗಳಿಂದ ತನ್ನತಃಕರಣದಿಂ ಕೊಂಡುಂಡು, ಭಾವವಂ ಮುಟ್ಟಲೊಲ್ಲದೆ, ಪಂಚೇದ್ರಿಯಂಗಳಲ್ಲಿರ್ಪ ಬ್ರಹ್ಮನ, ಅಂತಃಕರಣದಲ್ಲಿರ್ಪ ವಿಷ್ಣುವಿನ, ಭಾವದಲ್ಲಿರ್ಪ ರುದ್ರನ ಕಾಟದಲ್ಲಿ ಕೋಟಲೆಗೊಳುತ್ತಿರ್ಪುದಂ ತಪ್ಪಿಸುವುದಕ್ಕುಪಾಯಮಂ ಕಾಣದಿರ್ಪ ಜೀವನಿಗೆ ತಾನೇ ದಯೆಯಿಂ ಗುರುರೂಪನಾಗಿ ಬಂದು, ತನ್ನ ನಿಜವನ್ನೇ ಇದಿರಿಟ್ಟು ತೋರಿದಲ್ಲಿ, ಆ ವಸ್ತುವಂ ನೋಡಿ ನೋಡಿ, ತನ್ನ ಅಂತರಂಗದಲ್ಲಿರ್ಪ ಅಜ್ಞಾನವು ಹರಿದು, ಅಲ್ಲೊಂದು ಸೂಕ್ಷ್ಮದ್ವಾರವು ಕಾಣಿಸಲಲ್ಲಿ ಪ್ರವೇಶಿಸಲೆಸದಿರ್ಪ ಅನೇಕ ದುರ್ಗುಣಗಳಿಗಂಜದೆ ಆತ್ಮಾನಮಾತ್ಮನಾವೇತ್ತಿ ಎಂಬ ಶ್ರುತಿವಚನದಿಂ ತನ್ನಿಂದುತ್ಪನ್ನಮಾದ ಪಂಚಭೂತಗಳಲ್ಲಿ ತಾನೇ ಕಾರಣಭೂತಮಾಗಿ ಕೂಡಲು, ಆ ಗುಣಂಗಳು ಆತ್ಮಸ್ವರೂಪಮಾಗಿ, ಆತ್ಮನಿಂದಲೇ ಉಧ್ಭವಿಸಿ, ಆತ್ಮನಿಗೆ ಸುಖವನ್ನೂ ವಾಯುರೂಪಮಾದ ಜೀವನಿಗೆ ದುಃಖವನ್ನೂ ಉಂಟುಮಾಡುತ್ತಿರ್ಪವೆಂತೆಂದೊಡೆ: ಅರಸಿನಲ್ಲಿ ಹುಟ್ಟಿದ ಗ್ರಹವು ಅರಸಿಂಗೆ ಸುಖಮಂ ಪರರಿಗೆ ದುಃಖಮಂ ಮಾಡುವಂದದಿ, ಆಧಿಯಲ್ಲಾಕಾಶಾತ್ಮಸಂಗದಿಂ ಜ್ಞಾನವು ಹುಟ್ಟಿ, ಅದು ಅಭೇದಮಾಗಿರ್ಪ ಆಕಾಶಾತ್ಮಂಗಳಲ್ಲಿ ಇದಾಕಾಶವಿದಾತ್ಮವೆಂಬ ಭೇದಮಂ ಪುಟ್ಟಿಸಿ, ಜೀವರ ಸೃಷ್ಟಿ ಸ್ಥಿತಿ ಸಂಹಾರಂಗಳಿಗೆ ಕಾರಣಮಾಯಿತ್ತು. ಉಳಿದ ನಾಲ್ಕು ಭೂತಂಗಳಲ್ಲಂತಃಕರಣಚತುಷ್ಟಯಂಗಳು ಹುಟ್ಟಿ, ಅವೇ ನಾಲ್ಕುಮುಖಂಗಳಾಗಿ, ಜ್ಞಾನವು ಮಧ್ಯಮುಖಮಾಗಿ, ತದ್ಬಲದಿಂ ಅಹಂ ಬ್ರಹ್ಮವೆಂದಹಂಕರಿಸುತ್ತಿರ್ಪ ಬ್ರಹ್ಮನಂ ನೋಡಿ, ಆತ್ಮರೂಪಮಾದ ಶಿವನು ಭಾವಹಸ್ತದಲ್ಲಿ ಅಂತಃಕರಣಮಧ್ಯದಲ್ಲಿರ್ಪ ಜ್ಞಾನವೆಂಬ ಬ್ರಹ್ಮಕಪಾಲವಂ ಪರಿಗ್ರಹಿಸಲು, ಉಳಿದ ನಾಲ್ಕು ಶಿರಸ್ಸುಗಳಿಂ ಸೃಷ್ಟಿಕರ್ತನಾದ ಬ್ರಹ್ಮನು ಸಂಹಾರರೂಪಮಾದ ಜ್ಞಾನಮುಖದಲ್ಲಿ ಸಕಲ ಪದಾರ್ಥಗಳನ್ನು ಪರಿಗ್ರಹಿಸುತ್ತಿರ್ಪನು. ಅಂತಪ್ಪ ಆತ್ಮರೂಪಮಾದ ಶಿವನೊಳಗೆ ಆಕಾಶಮೆಂತೈಕ್ಯಮಪ್ಪುದೆಂದೊಂಡೆ : ಆಕಾಶವೂ ವಾಯುರೂಪು. ಭಸ್ತ್ರಿಯಲ್ಲಿ ಪ್ರವೇಶಿಸಿರ್ಪ ವಾಯುವಿನಿಂದ ಆಕಾಶಮಧಿಕಮಾಗಲು. ವಾಯುವಡಗಲಾಕಾಶವೂ ಕೂಡ ಅಡಗುವಂದದಿ, ಅಂತಪ್ಪ ವಾಯುವೇ ಜೀವನು, ಆ ಜೀವನಿಗವಸಾನಸ್ಥಾನವೇ ಆತ್ಮನು, ಆ ಆತ್ಮನಲ್ಲಿ ಕೂಡಿ ತನ್ನ ಮುನ್ನಿನ ವಾಯುರೂಪಮಳಿದಲ್ಲಿ ಅದಕಿಂತ ಮೊದಲೇ ಆಕಾಶವಳಿವುತ್ತಿರ್ಪುದು. ಅಂತಪ್ಪ ಆತ್ಮಸ್ವರೂಪವೆಂತೆಂದೊಂಡೆ : ಆತ್ಮವಂ ವಿಚಾರಿಸಿ ಆತ್ಮಸ್ವರೂಪವನರಿಸಿದ ಜೀವನು ತಾನಾತ್ಮನಾಗುತ್ತಿರಲು ಆತ್ಮಸ್ವರೂಪಮಿತೆಂದು ಮರಳಿಯೋರ್ವರೊಳುಸುರುವುದೆಂತಯ್ಯಾ! ಸತ್ತವನು ಬಂದು ತನ್ನ ವೃತ್ತಾಂತವಂ ಹೇಳಬಲ್ಲನೆ? ಉರಿಯೊಳ್ಕೂಡಿದ ಕರ್ಪುರವು ಉರಿಯಪ್ಪುದಲ್ಲದೆ ಕರ್ಪುರವಪ್ಪುದೆ? ಅಂತಪ್ಪ ಅಭೇದಾನಂದ ಪರಮಾತ್ಮಸಂಗದೊಳೇಕಮಾಗಿರ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಭಂಗದ ಬೆಂಬಳಿಯಲು ಭಂಗವೆಂದರಿಯರು. ಭಂಗದ ಬೆಂಬಳಿಯಲಾದ ಪ್ರಸಾದಿಯು ಅರ್ಪಿತವನರಿಯ. ಪ್ರಸಾದದಲ್ಲಿ ಪರಿಣಾಮಿಯಾಗಿ, ಮಹಾಘನ ಸೋಮೇಶ್ವರನು ಮುಂತಾಗಿ, ಅರಿವೇ ಅನುಭಾವವಾದ ಪ್ರಸಾದಿ.
--------------
ಅಜಗಣ್ಣ ತಂದೆ
ಅಂಗದಾಶ್ರಯವ ಕಳೆದು, ಲಿಂಗದಾಶ್ರಯವ ಮಾಡಿದ ಗುರುವೆ ಶರಣು, ಶ್ರೀಗುರುಲಿಂಗವೆ ಶರಣು, ಪರಮಸುಖವ ತೋರಿದೆಯಾಗಿ. ಮಹಾಘನ ಸೋಮೇಶ್ವರನ ಸಾಹಿತ್ಯವ ಮಾಡಿ ನಿಜ ನಿವಾಸದಲ್ಲಿರಿಸಿದೆಯಾಗಿ ಗುರುವೆ ಶರಣು.
--------------
ಅಜಗಣ್ಣ ತಂದೆ
ಇಂದ್ರಿಯಸ್ವರೂಪಮಾದ ತನುವೇ ಜಾಗ್ರವು, ವಿಷಯಸ್ವರೂಪಮಾದ ಮನವೇ ಸ್ವಪ್ನವು, ಅನುಭವಸ್ವರೂಪಮಾದ ಜೀವನಲ್ಲಿ ಸುಷುಪ್ತಿಯು. ಪಾಪವೆಂಬ ಪಂಕದಲ್ಲಿ ಹುಟ್ಟಿ ಆಸೆಯೆಂಬ ಬಿಸದೊಳಗೆ ಕೂಡಿ ಅಷ್ಟಭೂತಂಗಳೆಂಬಷ್ಟದಳಂಗಳಿಂ ಚಿತ್ತವೆಂಬ ಮೇರುವಿನಿಂ ಯುಕುತಮಾಗಿರ್ಪ ಹೃತ್ಕಮಲದಲ್ಲಿ ಜೀವನು ಸುಷುಪ್ತಿಯಂ ಹೊಂದಿ, ತನುವಿನ ಜಾಗ್ರವು ಮನದ ಸ್ವಪ್ನವಲ್ಲದೆ, ತನ್ನ ನಿಜವೆಲ್ಲವೂ ಸುಷುಪ್ತಿಯಂ ಹೊಂದಿ ತನು ಸೋಂಕಿದಲ್ಲಿ ತಿಳುವುತ್ತಂ, ಮರಳಿ ನಿದ್ರಾರೂಪದಿಂ ಮರವುತ್ತಲಿರ್ಪ ಜೀವನ ಪರಿಯ ನೋಡಾ. ಇಂತು ಭವಭವಂಗಳಲ್ಲಿ ತೊಳಲುವ ಜೀವಂಗೆ ಗುರುಸಂಸ್ಕಾರದಿ ಲಿಂಗವೆಂಬ ಪೂರ್ವಾಚಲದಲ್ಲಿ ಜ್ಞಾನಾರ್ಕೋದಯಮಾಗಿ, ಭಾವವೆಂಬ ಮೋಹ ಬಯಲಲ್ಲಿ ಗಮಿಸುತ್ತಿರಲು, ಹೃತ್ಕಮಲಂ ವಿಕಸಿತಮಾಗಿ ಆನಂದಮಕರಂದದೊಡನೆ ಕೂಡಿ, ಗುರುಮಂತ್ರಮಲಯಾನಿಲನು ನಿಜವಾಸನೆವಿಡಿದು ಬೀಸುತ್ತಿರಲು, ಜೀವ ಸುಷುಪ್ತಿಭ್ರಾಂತಿಯಳಿದು, ಪರಮಜಾಗ್ರತ್ಸ್ವರೂಪನಪ್ಪ ಪರಮಾತ್ಮನಾಗಿ, ತನುವಿನ ಜಾಗ್ರ, ಮನದ ಸ್ವಪ್ನಗಳಳಿದು, ಪರಮನ ಮಧ್ಯಾವಸ್ಥೆಯಲ್ಲಿ ಲೀನಮಾಗಲು, ಅಷ್ಟಭೂತಂಗಳುಂ ಅಷ್ಟಾವರಣಂಗಳಾದವದೆಂತೆಂದೊಡೆ : ಪೃಥ್ವಿಯೇ ಭಸ್ಮವು, ಜಲವೇ ಪಾದೋದಕವು, ಅಗ್ನಿಯೇ ರುದ್ರಾಕ್ಷವು, ವಾಯುವೇ ಪ್ರಸಾದವು, ಆಕಾಶವೇ ಮಂತ್ರವು, ಅಹಂಕಾರವೇ ಲಿಂಗವು, ಮಹವೇ ಗುರುವು, ಚಿತ್ತವೇ ಜಂಗಮವು, ನಿಜವು ಪ್ರಸನ್ನಮಾಗಿ ಮನವೇ ವೃಷಭೇಶ್ವರನಾಗಿ ತನುವೇ ಕೈಲಾಸಪರ್ವತಮಾಗಿ ಸಕಲ ಗುಣಂಗಳೇ ಶಿವಗಣಂಗಳಾಗಿ; ಸಕಲಜನ್ಮಕರ್ಮಪ್ರಪಂಚಪರದೊಳಡಗಿತ್ತೆಂತೆಂದೊಡೆ ಕಾಲದಲ್ಲಿ ಬ್ರಹ್ಮಾಂಡಂಗಳಡಗಿ ರೂಪುದೋರದಿರ್ಪಂತೆ, ಚಿದಾಕಾಶದಲ್ಲಿ ಲೀನಮಾಗೆ, ತಾನೇ ಶಿವನಾಗಿ, ಅಭೇದ ಬ್ರಹ್ಮವಾಯಿತ್ತೆಂತೆಂದೊಡೆ : ವಸ್ತುಸ್ವರೂಪಮಾದ ಸುವರ್ಣವ ಕಾಸಿ, ಕರಗಿಸಿ ; ಉಳಿದ ನಿಜಮಂ ತೆಗೆದು, ಬೆಳುಗಾರ ಮಿಕ್ಕಿ, ಮಹದೊಳಗೆ ಬೆರಸಿ, ಎರಡನ್ನೂ ಒಂದುಮಾಡಿ, ತಾನದರೊಳಗೆ ಬೆರೆದು ಭೇದದೋರದಿರ್ಪಂತೆ, ಮನಸ್ಸು ಜೀವ ಪರಮರನೊಂದುಮಾಡಿ, ತಾನದರೊಳಗೆ ಬೆರೆದು, ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ. ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪುರುಷನ ವೀರ್ಯವೇ ಸ್ತ್ರೀಗೆ ಶಕ್ತಿಯಾಗಿ, ತದ್ದಾರಣಬಲದಿಂ ಅದೇ ಸಾಕಾರಮಾಗಿ ಸೃಷ್ಟಿಯಾದಲ್ಲಿ, ಆ ಶಿಶುವನು ರಕ್ಷಿಸುವುದಕ್ಕೆ ಆ ಸತಿಯೇ ಕಾರಣಮಾಗಿರ್ಪಂತೆ, ಸದಾಶಿವನ ವೀರ್ಯರೂಪಸುವರ್ಣವೇ ವಿಷ್ಣುವಿಗೆ ಶಕ್ತಿಯಾಗಿ, ತದ್ಧಾರಣಬಲದಿಂದ ತದ್ರೂಪಮಾಗಿರ್ಪ ರಜೋಗುಣಮೂರ್ತಿಯಾದ ಬ್ರಹ್ಮಾದಿಸಕಲಪಂಚಮಂ ಸೃಷ್ಟಿಸಿ, ತದ್ರಕ್ಷಣಕ್ಕೆ ತಾನೇ ಕಾರಣಮಾಗಿರ್ಪನು. ಇಂತಪ್ಪ ಶಿವಶಕ್ತಿಗಳ ಮಹಿಮೆಯಂ ನಾನೆಂಬ ರಜೋಗುಣವೇ ಮೆರೆಗೊಂಡಿರ್ಪುದು. ತತ್ಸಂಗಕ್ಕೂ ತಾನೇ ಉಪಾಧಿಕಾರಣಮಾಗಿರ್ಪ ಭೇದಮಂ ಗುರುಮುಖದಿಂದ ತಿಳಿದು ನೋಡಿದಲ್ಲಿ, ಅವರಿಬ್ಬರ ಕ್ರೀಡೆಯನ್ನು ನೋಡಿ ನಾನಿಲ್ಲವಾದೆನು, ನಾನಿಲ್ಲವಾದಲ್ಲಿ ಅವೆರಡೂ ಒಂದೆಯಾಯಿತ್ತು. ದರ್ಪಣವಿಲ್ಲವಾದಲ್ಲಿಬಿಂಬ ಪ್ರತಿಬಿಂಬಗಳೇಕವಾದಂತೆ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಅಯ್ಯಾ, ಕುಶಬ್ದ, ಹಿಂಸೆಶಬ್ದ, ಹೊಲೆಶಬ್ದ, ಭಾಂಡಿಕಾಶಬ್ದ, ವಾಕರಿಕೆ ಶಬ್ದ, ಗುರುಚರಪರಭಕ್ತಗಣನಿಂದ್ಯದ ನುಡಿ, ಕುಟಿಲ ಕುಹಕ ಶಬ್ದ, ಭಂಡ ಅಪಭ್ರಷ್ಟರ ನುಡಿ, ಸೂಳೆ ದಾಸ ಷಂಡರ ನುಡಿ, ಹೊನ್ನು-ಹೆಣ್ಣು-ಮಣ್ಣು-ಐಶ್ವರ್ಯಕ್ಕೆ ಹೊಡದಾಡಿ ಸತ್ತವರ ಕzsಥ್ರಸಂಗದ ಶಬ್ದ, ವೇಶ್ಯಾಂಗನೆಯರ ರಾಗ ಮೊದಲಾಗಿ ಭವದ ಕುಶಬ್ದಕ್ಕೆ ಎಳೆ ಮೃಗದೋಪಾದಿಯಲ್ಲಿ ಮೋಹಿಸಿ, ಭ್ರಷ್ಟತನದಿಂದ ತೊಳಲಿತಯ್ಯ ಎನ್ನ ಶ್ರೋತ್ರೇಂದ್ರಿಯವು. ಇಂಥ ಕುಶಬ್ದರ ಸಂಗದಿಂದ ನಿಮ್ಮ ಶರಣರ ಮಹತ್ವದ ಮಹಾಘನ ಶಬ್ದವ ಮರದೆನಯ್ಯ. ಮಂತ್ರಮೂರ್ತಿ ಸರ್ವ ಸೂತ್ರಾಧಾರ ಪರಬ್ರಹ್ಮವೆ ಎನ್ನಪರಾಧವ ನೋಡದೆ, ನಿಮ್ಮ ಸದ್ಭಕ್ತ ಶರಣಗಣಂಗಳ ವಚನಾಮೃತವ ಕೇಳಿ ಬೆರಗು ನಿಬ್ಬೆರಗಾಗುವಂತೆ ಮಾಡಯ್ಯ ಕರುಣಾಂಬುಧಿ ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಸತ್ತು ಹೋಗುವರೆಲ್ಲ ಸ್ವರ್ಗಪದಸ್ಥರೆ ? ಅಲ್ಲಲ್ಲ. ಕೈದುವ ಪಿಡಿವರೆಲ್ಲ ಮಹಾಕಲಿಗಳೆ ? ಅಲ್ಲಲ್ಲ. ಲಿಂಗವ ಧರಿಸುವರೆಲ್ಲ ಲಿಂಗಪ್ರಾಣಿಗಳೆ ? ಅಲ್ಲಲ್ಲ. ಅದೇನು ಕಾರಣವೆಂದಡೆ : ಕಪಿಯ ಕೈಯಲ್ಲಿ ರತ್ನವ ಕೊಟ್ಟಡೆ ಅದು ಹಣ್ಣೆಂದು ಕಡಿದು ನೋಡಿ ಕಲ್ಲೆಂದು ಬಿಸುಟುವುದಲ್ಲದೆ, ಆ ರತ್ನದ ದಿವ್ಯಬೆಳಗನರಿವುದೆ ಅಯ್ಯಾ ? ಇಂತೀ ದೃಷ್ಟದಂತೆ ಮಡ್ಡಜೀವಿಗಳ ಕೈಯಲ್ಲಿ ದೊಡ್ಡಲಿಂಗವಿರ್ದಡೇನು ? ಆ ಲಿಂಗದಲ್ಲಿ ಮಹಾಘನ ಪರಮಕಲೆಯನರಿಯದ ಬಳಿಕ ಅದು ಒಡ್ಡುಗಲ್ಲಿನಂತೆ ಕಂಡೆಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಹಠಯೋಗ ಲಂಬಿಕಾಯೋಗ ಆತ್ಮಯೋಗ ಸಿದ್ಧಯೋಗ ಪಿಶಾಚಯೋಗ ಅಷ್ಟಾಂಗಯೋಗಂಗಳೆಂಬ ಷಡುವಿಧ ಕರ್ಮಯೋಗಂಗಳೊಳು ಶೋಷಣೆ, ದಾಹನೆ, ಪ್ಲಾವನೆ, ಚಾಲನೆ ಖಾಳಾಪಖಾಳಮಂ ಮಾಡಿ ತ್ರಿದೋಷಾದಿಗಳಂ ಪ್ರವರ್ತಿಸಲೀಯದೆ ಮಲಯುಗಮಂ ನೆಲೆಗೊಳ್ಳಲೀಯದೆ ಗಜಕರಣಂಗಳಿಂ ಪವನಧಾರಣೆಯಿಂ ಕಲ್ಪಯೋಗಂಗಳಿಂ ಮೂಲಿಕಾಬಂಧದಿಂ ಬಂಧಿಸಿ, ಘಟಮಂ ನಟಿಸುವುದು ಹಠಯೋಗ. ಪವನಾಭ್ಯಾಸಂಗಳಿಂದಭ್ಯಾಸಯೋಗ, ಕ್ರಮಕ್ರಮಂಗಳಿಂ ಜಿಹ್ವೆಯಂ ಬೆಳಸಿ ಹಠಸಮ್ಮಿಶ್ರದಿಂ ಷಡಾಧಾರದ ಪಶ್ಚಿಮಪಥವಿಡಿದು ಪ್ರಾಣಪವನನ ಮಸ್ತಕಕ್ಕೇರಿಸಿ ಜಿಹ್ವೆಯ ಸುಷುಮ್ನೆಯಲ್ಲಿಟ್ಟು ಸೋಮಪಾನಮಂ ಸೇವಿಸಿ ಸಪ್ತಸ್ಥಾನ ನವಚಕ್ರದಲ್ಲಿ ನಿಂದು ಮುಕ್ತ್ಯಂಬಿಕೆಯೊಡಗೂಡುನವುದು ಲಂಫಬಿಕಾಯೋಗ. ಆತ್ಮನಂ ಭೇದಿಸಿ ಪ್ರಾಣವಾಯು ನಾಡಿಗಳನರಿತು ಹಿಡಿವ ಭೇದಮಂ ತಿಳಿದು, ತೆಗೆವ ಬಿಗಿವ ಸಂಚಮಂ ಕಂಡು ಒಡ್ಡಿಯಾಣಬಂಧ ಜಾಳಾಂಧರಬಂಧ ಠಾಣಿಕಾಮುದ್ರೆ ಭ್ರೂಸಂಕೋಚ ಬ್ರಹ್ಮಸ್ಥಾನದುತ್ತರನಾಡಿಯಿಂದ ಆತ್ಮನನಾತ್ಮಲಿಂಗದಲ್ಲಿ ಸಂಯೋಗಮಾಡುವದಾತ್ಮಯೋಗ. ಅಂಜನಾಸಿದ್ಧಿ ಘುಟಿಕಾಸಿದ್ಧಿ ಶರೀರಸಿದ್ಧಿ ಪರಕಾಯಪ್ರವೇಶ ತ್ರಿಕಾಲಜ್ಞಾನ ದೂರಶ್ರವಣ ದೂರದೃಷ್ಟಿಯೊಳಗಾದ ಅಷ್ಟಮಹಾಸಿದ್ಧಿಯಂ ಪಡೆದು, ರಸಸಿದ್ಧಿ ಪಾಷಾಣಸಿದ್ಧಿ ಲೋಹಸಿದ್ಧಿ ವಯಸ್ತಂಭ ಸ್ವರವಂಚನೆ ಕಾಯವಂಚನೆ ವೇದಶಾಸ್ತ್ರಸಿದ್ಧಿ ಭರತಸಿದ್ಧಿ ಗಾಂಧರ್ವಸಿದ್ಧಿ ಕಿನ್ನರಸಿದ್ಧಿ ವಾಚಾಸಿದ್ಧಿ ಖೇಚರತ್ವ ಮಹೇಂದ್ರಜಾಲದೊಳಗಾದ Zõ್ಞಷಷ್ಟಿವಿದ್ಯಾಸಿದ್ಧಿ ಅಣಿಮಾದಿ ಮಹಿಮಾ ದಿ ಈಶಿತ್ವ ವಶಿತ್ವ ಪ್ರಾಪ್ತಿ ಪ್ರಾಕಾಮ್ಯವೆಂಬ ಅಷ್ಟೈಶ್ವರ್ಯಸಿದ್ಧಿ ವ್ಯಾಳಿ ಚರ್ಪಟಿ ಕೋರಾಂಟ ರತ್ನಘೋಷ ಭೂತನಾಥ ನಾಗಾರ್ಜುನ ಮಚ್ಚೇಂದ್ರ ಗೋರಕ್ಷ ಮಂಜಿನಾಥ ನವನಾಥ ಸಿದ್ಧರೊಳಗಾದ ಸಮಸ್ತ ಸಿದ್ಧಿಬುದ್ಧಿಗಳಿಂ ಲಿಂಗವನರಿಸಿ ಅಟ್ಟಿಮುಟ್ಟಿ ಹಿಡಿದೆಹೆನೆಂಬುದು ಸಿದ್ಧಯೋಗ. ಪಿಶಾಚತ್ವದಿಂ ತ್ರಿಭುವನಿಯಂ ಸೇವಿಸಿ ಅಮರಿಗಳಂ ಸೇವಿಸಿ ಅಮರೀ ಭ್ರಮರಾದೇವಿ ಅಮರೀ ತ್ರಿಪುರಾಂತಕೀ ಅಮರೀ ಕಾಲಸಂಹಾರೀ ಅಮರೀ ತ್ರೈಲೋಕ್ಯಸಾಧನೀ ಇಂತೆಂಬ ಶ್ರುತಿಗೇಳ್ದು, ವಜ್ರಿ ಅಮರಿಗಳನಂಗಲೇಪಂ ಮಾಡಿ ಶುಕ್ಲಮಂ ಸೇವಿಸಿ ಭೂತಸಂಕುಳಂಗಳೊಡನಾಡಿ ಅಜ್ಞಾನವಶದಿಂ ಲಿಂಗವನೇನೆಂದರಿಯದ ಕ್ಷೀಣವೃತ್ತಿಯ ಪಿಶಾಚತ್ವದಿಂದಿಪ್ಪುದು ಪಿಶಾಚಯೋಗ. ಹಿಂಸೆಯನುಳಿದ ±õ್ಞಚತ್ವದಿಂ ಬ್ರಹ್ಮಚರ್ಯದಿಂ ತತ್ವಂಗಳನಾಹ್ವಾನಿಸುತ್ತಿಪ್ಪುದು ಯಮಯೋಗ. ವಿವೇಕ ವಿಚಾರದಿಂ ತತ್ವಂಗಳನರಿತು ಆಚರಿಸಿ ಅಡಿುಟ್ಟು ನಡೆವುದು ನಿಯಮಯೋಗ. ಪದ್ಮಾಸನ ಸಿದ್ಧಾಸನ ಬದ್ಧಾಸನ ವಜ್ರಾಸನ ಮಯೂರಾಸನ ಕೂರ್ಮಾಸನ ಕಕ್ಕುಟಾಸನ ಅರ್ಧಾಸನ ವೀರಾಸನ ಶ್ಮಶಾನಾಸನ ಹಸ್ತಾಸನ ಮಸ್ತಕಾಸನ ಕುಠಾರಾಸನ ಸಿಂಹಾಸನ ಮಧ್ಯಲವಣಿ ಶಿರೋಲವಣಿಯೊಳಗಾದ ಆಸನಬಂಧಂಗಳಿಂದಾಚರಿಸುವುದಾಸನಯೋಗ. ತತ್ವ ಮೂವತ್ತಾರಕ್ಕೆ ಪ್ರಣವ ಮೂಲವೆಂದರಿತು ಷಡಾಧಾರಚಕ್ರಂಗಳ ಅಕ್ಷರವರ್ಣಂಗಳಿಂ ತಿಳಿದು ಮೇರಣ ಅಜನಾಳ ಬ್ರಹ್ಮಸ್ಥಾನ ತುರೀಯಾತೀತದ ಓಂಕಾರಮಪ್ಪ ಪ್ರಣವವನರಿವುದು ಪ್ರಾಣಾಯಾಮಯೋಗ. ಪ್ರತ್ಯಾಹಾರಯೋಗಕ್ರಮಗಳಿಂದ ಸತ್ಪ್ರಣವವನಾಹಾರಿಸುವುದು ಪ್ರತ್ಯಾಹಾರಯೋಗ. ಪ್ರಣವಕ್ಕೆ ಅತೀತವಾದ ಪರಶಿವಮೂರ್ತಿ ಮನದಲ್ಲಿ ಚಿಗುರ್ತು ಅಂತರಂಗದಲ್ಲಿ ಧ್ಯಾನಾರೂಢನಾಗಿ ಧ್ಯಾನಿಸುವುದು ಧ್ಯಾನಯೋಗ. ಆ ಪರಶಿವಮೂರ್ತಿಯೆ ಇಷ್ಟಲಿಂಗವೆಂಬ ಭಾವನೆಯಿಂದ ಅಷ್ಟವಿಧಾರ್ಚನೆ ಷೋಡಶೋಪಚರ್ಯಂಗಳಿಂದಿಷ್ಟಲಿಂಗಧಾರಣದಿಂದ ಇಪ್ಪುದು ಧಾರಣಯೋಗ. ಅಪ್ರಶಿಖಾಸ್ಥನದಿಂದುತ್ತರವಿಭಾಗೆಯ ಅಜಪೆಯಿಂದತ್ತಣ ಚಿತ್‍ಪ್ರಭೆಯಿಂದುಜ್ವಳತೇಜ ಸ್ವಯಂಪ್ರಕಾಶ ದಿವ್ಯತೇಜದಿಂದೊಪ್ಪಿಪ್ಪ ಮಹಾಘನ ಪರವಸ್ತುವನಿದಿರಿಟ್ಟೀಕ್ಷಿಸಿ ಆಮಹಾಪ್ರಕಾಶದಲ್ಲಿ ಒಡಗೂಡಿ ತಾನು ತಾನಾಗಿ ಜಗದ್ವಿಹರಣೀಯನೇನೆಂದರಿಯದ ಪರಮಕಾಷೆ*ಯ ಸಮಾಧಿಯಲ್ಲಿಪ್ಪುದು ಸಮಾಧಿಯೋಗ. ಇಂತಪ್ಪ ಅಷ್ಟಾಂಗವೊಳಗಾದ ಷಡುವಿಧಕರ್ಮಯೋಗಂಗಳಂ ಮೆಟ್ಟಿ ಚತುರ್ವಿಧಪದವಿಯಂ ಹೊದ್ದದೆ ಫಲಭೋಗಂಗಳಂ ಮುಟ್ಟದೆ ಖ್ಯಾತಿ ಲಾಭ ಪೂಜೆಯಂ ತಟ್ಟದೆ ಇಹಪರಂಗಳಂ ಸಾರದೆ, ಭವಬಂಧನಕ್ಕೆ ಬಾರದೆ ಗೆಲ್ಲ ಸೋಲಕ್ಕೆ ಹೋರದೆ, ತನುವಿನಿಚ್ಛೆಯಲ್ಲಿ ಸುಳಿಯದೆ ಮನದಿಚ್ಛೆಯಲ್ಲಿ ಹರಿಯದೆ, ಪ್ರಾಣನ ಸುಳುಹಿನಲ್ಲಿ ಸಿಕ್ಕದೆ ಪ್ರಕೃತಿವಶಕ್ಕೊಳಗಾಗದೆ, ಇಂದ್ರಿಯಂಗಳಿಗೆ ಮೈಯೊಡ್ಡದೆ ಸರ್ವಸಂದೇಹನಿವೃತ್ತಿಯಾಗಿ, ನಿಂದಲ್ಲಿ ನಿರಾಳ, ನಡೆದಲ್ಲಿ ನಿರ್ಗಮನಿ, ನುಡಿದಲ್ಲಿ ನಿಶ್ಶಬ್ದಿ, ಸುಳಿದಲ್ಲಿ ಒಡಲಿಲ್ಲದುಪಾಧಿಯರತು ಅಂಗವೆ ಲಿಂಗವಾಗಿ ಲಿಂಗವೆ ಪ್ರಾಣವಾಗಿ ಪ್ರಾಣವೆ ಪ್ರಸಾದವಾಗಿ, ಪ್ರಸಾದವೆ ಪರಿಪೂರ್ಣವಾಗಿ ನಿಜಲಿಂಗೈಕ್ಯವಾಗಿ ನಿಜಸುಖಸಂಬಂಧಿಯಾಗಿ ನಿಜಯೋಗ ಸನ್ನಿಹಿತವಾಗಿ ಕಾಯವಿದ್ದಂತೆ ಬಯಲಾಗಿಪ್ಪರಯ್ಯಾ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಇನ್ನಷ್ಟು ... -->