ಅಥವಾ

ಒಟ್ಟು 330 ಕಡೆಗಳಲ್ಲಿ , 62 ವಚನಕಾರರು , 263 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರುಷ ಸೋಂಕಲು ಅವಲೋಕದ ಗುಣ ಕೆಟ್ಟು ಚಿನ್ನವಾಗದಿಹುದೆ? ಹಲವು ತೃಣಂಗಳೆಲ್ಲವು ಅಗ್ನಿಯ ಮುಟ್ಟಲು ಭಸ್ಮವಾಗದಿಹವೆ? ಹಳ್ಳಕೊಳ್ಳದ ನೀರೆಲ್ಲಾ ಬಂದು ಅಂಬುಧಿಯನೆಯ್ದಿ ಅಂಬುಧಿಯಪ್ಪುದು ತಪ್ಪದು ನೋಡಾ. ಹಲವು ವರ್ಣದ ಪದಾರ್ಥವನೆಲ್ಲವ ತಂದು ಶಿವಲಿಂಗಾರ್ಪಣವ ಮಾಡಲು ಆ ಪದಾರ್ಥದ ಪೂರ್ವಾಶ್ರಯವಳಿದು ಪ್ರಸಾದವಪ್ಪುದು ತಪ್ಪದು ನೋಡಾ. ಆ ಪ್ರಸಾದವ ಕೊಂಬ ಪ್ರಸಾದಿ ಪವಿತ್ರಕಾಯನು ನೋಡಾ. ಆತನು ಶುದ್ಧ ನಿರ್ಮಲನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಧುರದ ಗುಣ ಬದರಿಯಿಂದಳಿಯಿತ್ತು, ಶರಧಿಯ ಗುಣ ಸಾಗಲಾಗಿ ಅಳಿಯಿತ್ತು, ಬೇಟದ ಗುಣ ಕೂಟದಿಂದಳಿಯಿತ್ತು, ಸಾರದ ಗುಣ ಕಠಿನದಿಂದಳಿಯಿತ್ತು, ಕಠಿನದ ಗುಣ ಪಾಕದಿಂದಳಿಯಿತ್ತು, ಕಾಯದ ಗುಣ ಪ್ರಾರಬ್ಧದಿಂದಳಿಯಿತ್ತು, ವಿಷದ ಗುಣ ನಿರ್ವಿಷದಿಂದಳಿಯಿತ್ತೆಂಬುದಜನ ಸಿದ್ಧಾಂತವಾಗಿ ನುಡಿವುತ್ತಿದೆ. ಎನ್ನ ಗುಣ ನಿನ್ನಿಂದಲ್ಲದೆ ಅಳಿಯದಯ್ಯಾ. ಕಾಲಕ್ಕಂಜಿ, ಕರ್ಮಕಂಜಿ, ವಿಧಿವಿಧಾಂತನಿಗಂಜಿ, ಹಿರಿಯರೆನಿಸಿಕೊಂಬ ಗ್ರಾಸವಾಸಿಗಳು ನೀವು ಕೇಳಿರಯ್ಯಾ. ರುದ್ರನ ಪಸರವ ಹೊತ್ತು, ಆಶೆಯೆಂಬ ಕಂಥೆಯಂ ತೊಟ್ಟು, ಜಗದಾಟವೆಂಬ ವೇಷವ ಧರಿಸಿ, ಈಶನ ಶರಣರೆಂದು ಭವಪಾಶದಲ್ಲಿ ತಿರುಗುವ ದೇಶಿಗರ ಕಂಡು ನಾಚಿದೆ. ಭಾಷೆಗೆ ತಪ್ಪದ ನಿರ್ಗುಣ ನಿರಾಶಕ, ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲ, ನಿಲ್ಲು ಮಾಣಿರೊ.
--------------
ಮೋಳಿಗೆ ಮಾರಯ್ಯ
ಪೂರ್ವ ಆದಿಯಂತ ಸಿದ್ಧಾಂತವಾದ ತೆರ: ಆವ ಬೀಜವೂ ಅಪ್ಪುಸಾರವಿಲ್ಲದೆ ಪ್ರತ್ಯಕ್ಷ ದೃಷ್ಟವುಂಟೆ ? ಸರ್ವಕ್ರೀಗಳೆಲ್ಲವೂ ಜ್ಞಾನವಿಲ್ಲದಿರೆ ಕ್ರೀದೃಷ್ಟಸತ್ಯವಪ್ಪವೆ ? ಇಂತೀ ಜ್ಞಾನಸರ್ವಗುಣನಾಗಿ ಸತ್ಕ್ರೀಮಾರ್ಗಗಳಿಂದ ಒಪ್ಪಲ್ಪಟ್ಟುದು ಲಿಂಗದ ಅಂಗದ ಸೋಂಕಿನ ಸಂಗ, ಈ ಗುಣ ಭೋಗಬಂಕೇಶ್ವರಲಿಂಗದೊಲವು.
--------------
ಶ್ರೀ ಮುಕ್ತಿರಾಮೇಶ್ವರ
ಸರ್ಪನ ಹಿಡಿವಲ್ಲಿ ಅಧಮತ್ವವ ಮಾಡುವ ಮಂತ್ರವಿರಬೇಕು. ಶಸ್ತ್ರವ ಹಿಡಿವಲ್ಲಿ ರಣಕ್ಕೆ ನಿಶ್ಚಯನಾಗಿರಬೇಕು. ಭಕ್ತಿಯ ಹಿಡಿವಲ್ಲಿ ತ್ರಿವಿಧಕ್ಕೆ ಮುಚ್ಚಳವನಿಕ್ಕದಿರಬೇಕು. ಇಂತೀ ಗುಣ, ನಿಶ್ಚಟರಿಗಲ್ಲದೆ, ಮಿಕ್ಕಿನ ಪುಕ್ಕಟನಾಥರಿಗೆಲ್ಲಿಯದೊ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಸಂಚದ ಸರಾಗದಂತೆ, ಮಿಂಚಿನ ಕುಡಿವೆಳಗಿನ ಸಂಚಾರದಂತೆ, ಉರಿಯ ನಾಲಗೆಯ ದ್ರವದ ತರಂಗದಂತೆ, ಪನ್ನಗನ ಜಿಹ್ವೆಯ ನಿಳಿವಳಿಯಂತೆ, ಚಮತ್ಕಾರದ ಅಸಿಯ ಗುಣಮೊನೆಯಂತೆ, ಅಶ್ವಪರ್ಣದ ಅಗ್ರದ ಬಿಂದುವಿನ ಅಂದದಾತ್ಮನ ತಿಳಿದು, ಸರ್ವೇಂದ್ರಿಯದಲ್ಲಿ ಮುಂಚುವುದಕ್ಕೆ ಮುನ್ನವೆ ಆತ್ಮನ ಉಚಿತವನರಿದು, ರಸ ಬೆಂಕಿಯಲ್ಲಿ ಬೆರೆದಂತಾಗಬೇಕು; ಈ ಗುಣ ಸಾವಧಾನಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 91 ||
--------------
ದಾಸೋಹದ ಸಂಗಣ್ಣ
ನಿಜ ಬೋಳಿಂಗೆ ಲೋಚು ಮಾಡಲೇತಕ್ಕೆ? ಚಿದ್ಘನ ಬೋಳಿಂಗೆ ವೈಭವದ ಮದನನ ಶೃಂಗಾರದ ಹಾರವೇತಕ್ಕೆ? ಸಕಲಸುಖ ಬೋಳಿಂಗೆ ಅಖಿಳ ಸುಖಗೋಷಿ* ಏತಕ್ಕೆ? ಸರ್ವಸಂಗಪರಿತ್ಯಾಗ ನಿರ್ಮಲ ಪರಮನಿರ್ವಾಣಿಗೆ ತ್ರಿಬಂಧದಲ್ಲಿ ಸಿಲುಕಿ ಕಂಡವರಿಗೆ ಕಾರ್ಪಣ್ಯಬಡಲೇತಕ್ಕೆ? ಇಂತೀ ಗುಣದಲ್ಲಿ ತಾವು ತಾವು ಬಂದುದನರಿಯದೆ ತಮಗೆ ವಂದಿಸಿ ನಿಂದಿಸುವರಂಗವನರಿಯದೆ ಮತ್ತೆ ಲಿಂಗಾಂಗಿಗಳೆಂದು ನುಡಿವ ಜಗ ಸರ್ವಾಂಗ ಭಂಡರ ಕಂಡು ನುಡಿದಡೆ ಸಮಯಕ್ಕೆ ಹಾನಿ. ಸುಮ್ಮನಿದ್ದಡೆ ಜ್ಞಾನಕ್ಕೆ ಭಂಗ. ಉಭಯವನೂ ಪ್ರತಿಪಾದಿಸದಿದ್ದಡೆ, ತನ್ನಯ ಭಕ್ತಿಗೆ ಇದಿರೆಡೆಗೇಡು. ಇದು ಚುನ್ನವಲ್ಲ, ಎನ್ನಯ ಕೇಡು. ಈ ಗುಣ ಚೆನ್ನಬಸವಣ್ಣಪ್ರಿಯ ಕಮಳೇಶ್ವಲಿಂಗ ಸಾಕ್ಷಿಯಾಗಿ.
--------------
ಶ್ರೀಗುರು ಪ್ರಭುನ್ಮುನೀಶ್ವರ
ಅ[ಜಾ]ಮಲ ಲಿಂಗವಾದಲ್ಲಿ, ಲೆಕ್ಕದ ಬುಡ ನಿಶ್ಚಯಲಿಂಗವಾದಲ್ಲಿ ಮತ್ತೆ ಕಾಷ*ದ ವೇಷ ಗುರುಚರ[ಲಿಂಗ]ವಾದಲ್ಲಿ, ಎನ್ನ ಕಾಯಕದ ಕಾಷ* ಚಿನ್ನವಾದಲ್ಲಿ, ಮತ್ತಾವಾವ ಗುಣ ಅವಗುಣ ಹಿಂಗಿ ಲೇಸಾದಲ್ಲಿ, ಅದು ತನ್ನಯ ವಿಶ್ವಾಸದಿಂದ, ತನಗೆ ಆರೆಂಬುದನರಿತು, ಕುರಿತು ಆ ಭಾವಕ್ಕೆ ಬಲೋತ್ತ[ರ]ನಾಗಿದ್ದಾತನ ಇರವು, ಎಂತಿದ್ದಡಂತೆ ಸುಖ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತತ್ವಂಗಳ ಗೊತ್ತ ಗುಟ್ಟೆಂದು ಬಿಡಬಾರದು ಇಷ್ಟಲಿಂಗದ ಪೂಜೆಯ ಆತ್ಮನ ಗೊತ್ತನರಿತೆನೆಂದು ಮರೆಯಲಾಗದು ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಲಾಗದು. ಈ ಗುಣ ಅಂಗವನರಿವನ್ನಕ್ಕ ಒಂದೂ ಇಲ್ಲಾ ಎಂದು ಬಿಡಬಹುದೆ? ನಾನೆಂಬುದ ಇದೇನೆಂದು ಅರಿವನ್ನಕ್ಕ ಶ್ರುತಕ್ಕೆ ದೃಷ್ಟ, ದೃಷ್ಟಕ್ಕೆ ಅನುಮಾನ, ಅನುಮಾನಕ್ಕೆನಿಶ್ಚಯ. ನಿಶ್ಚಯ ನಿಜವಾದಲ್ಲಿ, ಗೋಪತಿನಾಥ ವಿಶ್ವೇಶ್ವರಲಿಂಗನ ಕ್ರಿಯಾನಿರ್ವಾಹ.
--------------
ತುರುಗಾಹಿ ರಾಮಣ್ಣ
ಅಂಧಕಾರದ ಗಿರಿ ಅರಿವೇರಿತು ಅನುವಿಡಿದು ಸುಖವ ಕಂಡು ಅನುಭವದವಳಿಗೆ ಕೆಂಪುವರ್ಣ ಸುಖವನೇಕೀಕರಿಸಿ ನೋಡಲು ಆಯತವಾಯಿತ್ತು ಈ ಅಂಧಕಾರದ ಎರಡೆಸಳಪೀಠ ಆ ಪೀಠದಲ್ಲಿ ಸಮಯಾಚಾರಿಯೆಂಬವ ನಿಂದು ಪರಿಣಾಮವಿಡಿದು ನಡೆಯೆ, ಆತ್ಮನ ಗುಣ ಕೆಟ್ಟು ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನ ಧರ್ಮಂ ಬದುಕಿದೆನು
--------------
ಸಿದ್ಧರಾಮೇಶ್ವರ
ಭೂವಳಯ ಮಧ್ಯದ ಎಂಟೆಸಳ ಪದ್ಮದ ಮೇಲೆ ಸುಳಿವನ ಎಚ್ಚರಲೀಯ, ಕಂಟಕ ವಿರಹಿತನು, ನಂಟರಿಗೆ ವಿರೋಧಿಸಿ, ಇಳೆಯ ಗುಣ ರಹಿತನು, ಗಗನಕಮಲಕುಸುಮ ಪರಿಣಾಮದೊಳಗೆ ಪರಿಣಾಮಿ ನೋಡಾ ! ತಾನೆಂಬುದ ಹುಸಿ ಮಾಡಿ, ಲಿಂಗಜಂಗಮ ದಿಟವೆಂದು ಸಕಲ ಸುಖಭೋಗಂಗಳನರ್ಪಿಸಿದ. ಗುಹೇಶ್ವರಾ [ಅದು], ನಿಮ್ಮ ಶರಣ ಬಸವಣ್ಣಂಗಲ್ಲದೆ ಇನ್ನಾರಿಗೂ ಅಳವಡದು.
--------------
ಅಲ್ಲಮಪ್ರಭುದೇವರು
ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ. ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ. ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ. ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ. ಹೀಗಲ್ಲದೆ ತ್ರಿವಿಧವ ಕಳೆಯಬಾರದು. ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು. ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು, ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ, ಓಂಕಾರವಪ್ಪ ಪ್ರಣಮವ ಪರಿಣಾಮಿಸಿ, ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು, ಪರ್ವಿ ಪ್ರಕಾರದಿಂದ ಉರ್ವಿಯ ಸುತ್ತಿಮುತ್ತಿ ಬೆಳೆದ ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು, ಕಾಳೋರಗನಂ ಬೇರು ಮಾಡಿ, ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ, ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ, ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ, ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ, ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ, ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ, ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು, ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗದಲ್ಲಿ ನಿರ್ಲೇಪವಾ[ದುದೇ] ಶರಣಸ್ಥಲ.
--------------
ಮೋಳಿಗೆ ಮಾರಯ್ಯ
ಕೈವಲ್ಯ ವೈಕುಂಠ ಮೋಕ್ಷಗಾಮಿನಿಗಳಪ್ಪ ತೆರನ ತಿಳಿವುದಕ್ಕೆ ಶೈವ ವೈಷ್ಣವ ಅಧ್ಯಾತ್ಮ ತ್ರಿವಿಧಕರ್ಮಂಗಳಲ್ಲಿ ಷಡ್ದರ್ಶನ ಸಂಪದವಾಯಿತ್ತು. ಈ ಭೇದ ವಿಭೇದವಾದಲ್ಲಿ ಶಕ್ತಿರೂಪು ವೈಷ್ಣವ ಅಸ್ತಿಭೇದ ಶಿವಾಧಿಕ್ಯ, ಉಭಯಚೇತನ ವಸ್ತುವಾಗಿ ಘಟ ಬುಡಂಗಳಲ್ಲಿ ಚರಸ್ಥಾವರಂಗಳಲ್ಲಿ ಖಲ್ವಿದಂ ಬ್ರಹ್ಮ ವಸ್ತುಮೂರ್ತಿ ಅಳಿವು ಉಳುಮೆಗೆ ತೆರಪಿಲ್ಲದ ಸಂಗ ವೀರಶೈವ. ವಿ ಎಂಬ ಯುಕ್ತಿ, ರ ಎಂಬ ರಜಸ್ಸು, ವ ಎಂಬ ಬಿಂದುವಿನ ಶಾಖೆ ನಿಂದಲ್ಲಿ ಲೀಯಲ್ಪಟ್ಟುದು ಕೂಟಸ್ಥ ಗೋಳಕಾಕಾರ. ಅದು ಪಂಚಾಕ್ಷರೀ ಪ್ರಣಮ, ಷಡಕ್ಷರದ ಸದನ. ಏಕಾಕ್ಷರದ ಲೇಖನವಳಿದ ಅಲೇಖ. ಅಯಿವತ್ತೆರಡನೆಯ ಸರಹರಿದ ಸಂಬಂಧ. ಇದು ಸ್ವಯ ಚರ ಪರದ ಸುಮುದ್ರೆ. ಶ್ರುತಿಸ್ಮೃತಿತತ್ವದ ಶೋಧನೆ. ಆ ಗುಣ ಪ್ರಸನ್ನವಪ್ಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದ ಲೀಲಾಭಾವ.
--------------
ಪ್ರಸಾದಿ ಭೋಗಣ್ಣ
ಅಪ್ಪುವಿನ ಉತ್ಕಟದ ಮಣಿಯಂತೆ ಚಿತ್ರದ ಎಸುಗೆಯ ಲಕ್ಷಣದಂತೆ ಸೂತ್ರದ ಲೆಪ್ಪದ ಭಿತ್ತಿ ಕಡೆಗಾಣಿಸಿದಂತೆ ದೀಪದ ಮೊತ್ತ ಕೆಟ್ಟು ಮೃತ್ತಿಕೆಯ ಘಟ ಒಪ್ಪವಿದ್ದಂತೆ ರಾಜ ಚಿತ್ರದ ಗೃಹ ಹೊತ್ತಿ ಬೆಂದು ಭಸ್ಮಗುಪ್ಪೆಯಿದ್ದಂತೆ ಇದು ಕ್ರಿಯಾಪಥ ಮುಕ್ತನ ಭೇದ. ಅರಿದು ಮರೆದವನ ಚಿತ್ತದ ಗೊತ್ತು. µಟ್ಕರ್ಮ ವಿರಕ್ತನ ನಷ್ಟ, ಸರ್ವಗುಣಿ ಸಂಪನ್ನನ ಮುಟ್ಟಿನ ಭೇದ; ನಿರುತ ಸ್ವಯ ಸಂಗದ ಕೂಟ, ಈ ಗುಣ ಸಾವಧಾನಿಯ ಬೇಟ, ಸರ್ವಾಂಗಲಿಂಗಿಯ ಕೂಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಧನಶೀಲ ಮನಶೀಲ ತನುಶೀಲ ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲ. ಇಂತೀ ವ್ರತಸಂಪದವೆಲ್ಲವು ಅದಾರ ಕುರಿತು ಮಾಡುವ ನೇಮ ಎಂಬುದ ತಾನರಿಯಬೇಕು. ಗುರುವಿಂಗೆ ತನುವನರ್ಪಿಸಿ, ಲಿಂಗಕ್ಕೆ ಮನವನರ್ಪಿಸಿ, ಜಂಗಮಕ್ಕೆ ಧನವನರ್ಪಿಸಿ, ತ್ರಿವಿಧಕ್ಕೆ ತ್ರಿವಿಧವ ಕೊಟ್ಟು, ತನ್ನ ವ್ರತಕ್ಕೆ ಭಿನ್ನಭಾವವಿಲ್ಲದೆ ನಿಂದುದೆ ವ್ರತ. ಹೀಗಲ್ಲದೆ, ಇದಿರ ಮಾತಿಂಗಂಜಿ ಕೊಡುವ ಕೊಂಬುವರ ನಿಹಿತಕ್ಕಂಜಿ ನಡೆವನ ವ್ರತ ಜಂಬುಕ ಶೀಲವಹಿಡಿದು ನಾಲಗೆಮುಟ್ಟದೆ ನುಂಗುವ ತೆರದಂತೆ ಸರ್ವವ ತಾ ಮುಟ್ಟುವಲ್ಲಿ ಜಂಗಮಮುಟ್ಟದೆ ತಾ ಮುಟ್ಟಿದನಾದಡೆ ಸಜ್ಜನಸ್ತ್ರೀ ಕೆಟ್ಟುನಡೆದಂತೆ. ಬಾಯಿಯಿದ್ದು ಬಯ್ಯಲಾರೆ, ಕಯ್ಯಿದ್ದು ಪೊಯ್ಯಲಾರೆ, ಕಾಂಬುದಕ್ಕೆ ಮೊದಲೆ ಕಣ್ಣ ಮುಚ್ಚುವೆನು. ಈ ಗುಣ ತಪ್ಪದು ನಿಮ್ಮಾಣೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ.
--------------
ಅಕ್ಕಮ್ಮ
ಎಲ್ಲವ ಮೀರಿ ಶೀಲವಂತನಾದಲ್ಲಿ ರೋಗವೆಲ್ಲಿಂದ ಬಂದಿತು ? ಆ ಗುಣ ತನುವಿನಲ್ಲಿಯ ತೊಡಕು ; ರುಜೆ ಪ್ರಾಣವ ಕೊಳ್ಳಲರಿಯದು. ಅಂಗದ ಡಾವರಕ್ಕೆ ಸೈರಿಸಲಾರದೆ, ಮದ್ದ ತಾ ಲಿಂಗಕ್ಕೆ ತೋರಿ, ಜಂಗಮಕ್ಕೆ ಕೊಟ್ಟು, ಜಂಗಮಪ್ರಸಾದವೆಂದು ಲಿಂಗ ಜಂಗಮವ ಹಿಂಗದೆ ಕೊಳ್ಳೆಂದು ಹೇಳುವ ಅನಂಗಿಗಳಿಗೆ ಗುರು ಲಿಂಗ ಜಂಗಮ ಮೂರರಲ್ಲಿ ಒಂದೂ ಇಲ್ಲ ಎಂದೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ತಪ್ಪನೊಪ್ಪಗೊಳ್ಳೆ.
--------------
ಅಕ್ಕಮ್ಮ
ಇನ್ನಷ್ಟು ... -->