ಅಥವಾ

ಒಟ್ಟು 177 ಕಡೆಗಳಲ್ಲಿ , 24 ವಚನಕಾರರು , 173 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೃಥ್ವಿಯೇ ಸ್ಥಾವರ, ಜಲವೇ ಜಂಗಮ, ಅಗ್ನಿಯೇ ಸ್ಥಾವರ, ವಾಯುವೇ ಜಂಗಮ. ಆಕಾಶವೇ ಸ್ಥಾವರ, ಜೀವನೇ ಜಂಗಮ. ಪೃಥ್ವಿಯೇ ಸ್ಥೂಲ, ಜಲವೇ ಸೂಕ್ಷ್ಮ. ಅಗ್ನಿಯೇ ಸ್ಥೂಲ, ವಾಯುವೇ ಸೂಕ್ಷ್ಮ ಆಕಾಶವೇ ಸ್ಥೂಲ, ಆತ್ಮನೇ ಸೂಕ್ಷ್ಮ. ಸ್ಥೂಲವಸ್ತುಗಳಿಂದ ಸೂಕ್ಷ್ಮ ವಸ್ತುಗಳೇ ಪ್ರಾಣಮಾಗಿಹವು. ತತ್ಸಂಗಂಗಳಿಂ ಬಿಂದುಕಳಾನಾದಗಳು ಸೃಷ್ಟಿಯಾಗುತ್ತಿಹವು. ಸ್ಥೂಲವಸ್ತುಗಳು ಆ ಸೂಕ್ಷ್ಮವಸ್ತುಗಳಲ್ಲೇ ಸೃಷ್ಟಿ ಸ್ಥಿತಿ ಸಂಹಾರಂಗಳಂ ಹೊಂದುತ್ತಿಹವು. ಪೃಥಿವ್ಯಾದಿ ಪಂಚಭೂತಂಗಳೇ ಘ್ರಾಣಾದಿ ಪಂಚೇಂದ್ರಿಯಂಗಳಾಗಿ, ಆಯಾ ಗುಣಂಗಳಂ ಗ್ರಹಿಸುವಂತೆ ಆತ್ಮನಿಗೆ ಮನಸ್ಸೇ ಇಂದ್ರಿಯಮಾಗಿ, ಆತ್ಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು. ಪರಮಾತ್ಮನಿಗೆ ಭಾವೇಂದ್ರಿಯಮಾಗಿ, ಆ ಪರಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು. ಮುಖಂಗಳಾವುವೆಂದೊಡೆ: ಘ್ರಾಣಕ್ಕೇ ವಾಯುವೇ ಮುಖ, ಜಿಹ್ವೆಗೆ ಅಗ್ನಿಯೇ ಮುಖ, ನೇತ್ರಕ್ಕೆ ಜಲವೇ ಮುಖ, ತ್ವಕ್ಕಿಗೆ ಪೃಥ್ವಿಯೇ ಮುಖ, ಶ್ರೋತ್ರಕ್ಕಾತ್ಮವೇ ಮುಖ, ಮನಸ್ಸಿಗೆ ಚಿದಾಕಾಶವೆ ಮುಖ, ಭಾವಕ್ಕೆ ನಿಜವೇ ಮುಖವಾದಲ್ಲಿ. ಪಂಚೇದ್ರಿಯಂಗಳು ಪಂಚಭೂತಗುಣಂಗಳಂ ಗ್ರಹಿಸುವಂತೆ, ಮನಸ್ಸು ಆತ್ಮಗುಣವನ್ನು ಜ್ಞಾನಮುಖದಿಂ ಗ್ರಹಿಸಿ, ಗುರುದತ್ತಲಿಂಗವೂ ಆತ್ಮನೂ ಏಕಮೆಂದು ತಿಳಿದು, ತೂರ್ಯಭಾವದಲ್ಲಿ ಸ್ವಭಾವಮಾಗಿ, ನಿಜಾನಂದ ತೂರ್ಯಾತೀತದಲ್ಲಿ ಎರಕವೆರದಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಕಾಯವೆಂಬ ಪುರನಾಳುವ ಜೀವನೆಂಬರಸು ನಿಜಬಲದಿಂ ಕರ್ಮವೆಂಬ ರಾಜ್ಯದಲ್ಲಿ ಸಂಪಾದಿಸಿದ ಸುಕೃತ ದುಷ್ಕøತಗಳೆಂಬ ದ್ರವ್ಯವನ್ನು ಮನವೆಂಬ ಬೊಕ್ಕಸದೊಳಗಿಟ್ಟು, ಅಲ್ಲಿಂದ ಶಬ್ದಾಚಾರಮುಖದಿಂದ ನರಕಾದಿ ಯಾತನೆಗಳನ್ನೂ ಸ್ವರ್ಗಾದಿ ಭೋಗಂಗಳನ್ನೂ ಅನುಭವಿಸುತ್ತಿರ್ಪ ಕೋಟಲೆಗಲಸಿ, ವೇದಾಂತಸಮುದ್ರದಲ್ಲಿ ಮುಳುಗಿ, ಅಲ್ಲಿರ್ಪ ಜ್ಞಾನವೆಂಬ ಮಕ್ತಾರತ್ನಮಂ ಕೊಂಡು, ಪರತತ್ವದೇಶದಲ್ಲಿ ಪರಿಣಾಮಿಸುತ್ತಿರ್ಪ ಗುರುವೆಂಬ ಮಹಾರಾಜಂಗೆ ಕಾಣಿಕೆಯಂ ಕೊಟ್ಟು, ಅನಂತಬ್ರಹ್ಮಾಂಡಗಳಂ ತುಂಬಿ, ತಾನನುಭವಿಸಿ, ಲಿಂಗವೆಂಬಕ್ಷಯನಿಧಾನಮಂ ಪಡೆದು, ಅದನ್ನು ಮನೋಭಂಡಾರದೊಳಿಟ್ಟು, ಅತಿಜಾಗರೂಕತೆಯಿಂ ತಾನೇ ಕಾಪಾಡುತ್ತಿರಲು, ಕತಪಯಕಾಲಕ್ಕೆ ಕಾಲದೂತರು ಬಂದು, ಅಂಗಪುರಭಂಗವಂ ಮಾಡಲು, ತತ್ಪುರವಾಸಿಗಳಾದ ರುದ್ರರು ಕಾಲದೂತರಂ ತರಿದು, ಯಮನಂ ಪರಿದು, ಲಿಂಗವಿಧಾನಬಲದಿಂ ಮೋಕ್ಷಸಾಮ್ರಾಜ್ಯಮಂ ಸಂಪಾದಿಸುತ್ತಾ ಬಾಳುವ ನಿತ್ಯಸುಖವನ್ನು ನನಗೆ ಕೊಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಅಯ್ಯಾ, ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ ಕಶ್ಯಪ ಭಾರದ್ವಾಜ ಮೊದಲಾದ ನೂರೊಂದು ಕುಲ, ಹದಿನೆಂಟು ಜಾತಿಯವರೊಳಗಾಗಿ ಯೌವನದ ಸ್ತ್ರೀಯರ ಕಂಡು, ಸಂಪಿಗೆ ಪುಷ್ಪಕ್ಕೆ ಭ್ರಮರನಿಚ್ಫೈಸುವಂತೆ ಕಾಮವಿಕಾರದಿಂದ, ಮೊಲಕ್ಕೆ ನಾಯಿ ಹಂಬಲಿಸಿದಂತೆ, ಮಾಂಸಕ್ಕೆ ಹದ್ದು ಎರಗಿದಂತೆ, ಸತ್ತ ದನವ ನರಿ ಕಾಯ್ದುಕೊಂಡಂತೆ, ಹೆಣ್ಣು ನಾಯಿ ಗಂಡು ನಾಯಿ ಕೂಟವ ಕೂಡಿ ಪಿಟ್ಟಿಸಿಕ್ಕಿ ಒರಲುವಂತೆ, ಮನ್ಮಥರತಿಸಂಗದಿಂದ, ಜನನದ ತಾಯಿಯೆನ್ನದೆ, ಅತ್ತಿಗೆ ನಾದಿನಿಯೆನ್ನದೆ, ಅಕ್ಕತಂಗಿಯೆನ್ನದೆ, ನಡತೆಯ ಒಡಹುಟ್ಟಿದವರೆನ್ನದೆ, ಅತ್ತೆ ಸೊಸೆಯೆನ್ನದೆ, ಮಗಳು ಮೊಮ್ಮಗಳೆನ್ನದೆ, ಅಜ್ಜಿ ಆಯಿಯೆನ್ನದೆ ಪಿಶಾಚರೂಪತಾಳಿ ಉಚ್ಚೆಯ ಬಚ್ಚಲಿಗೆ ಹೊಡದಾಡಿ ಸತ್ತಿತಯ್ಯ ಎನ್ನ ಗುಹ್ಯೇಂದ್ರಿಯವು. ಇಂತೀ ಗುಹ್ಯಲಂಪಟಕ್ಕೆ ದೂರವಾದ ಮಹಾಘನ ಸದ್ಭಕ್ತ ಶಿವಶರಣ ಶಂಕರದಾಸಿಮಯ್ಯನ ದಾಸಿಯ ದಾಸನ ಮಾಡಿ ಸಲಹಯ್ಯ. ಕಾರುಣ್ಯಸಾಗರ, ಪರಮಾನಂದಮೂರ್ತಿ, ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಸ್ಥೂಲತನು, ಸೂಕ್ಷ್ಮತನು, ಕಾರಣತನು. ಇಂತೀ ತನುತ್ರಯದ ಭೇದವನರಿಯಬೇಕಣ್ಣಾ. ಸ್ಥೂಲತನು ಗುರುವಿಂಗೆ ಭಿನ್ನ, ಸೂಕ್ಷ್ಮತನು ಲಿಂಗಕ್ಕೆ ಭಿನ್ನ, ಭಿನ್ನಕಾರಣತನು ಜಂಗಮಕ್ಕೆ ಭಿನ್ನ. ನಾದ ಗುರುವಿನಲ್ಲಿ ಅಡಗಿತ್ತು, ಬಿಂದು ಲಿಂಗದಲ್ಲಿ ಅಡಗಿತ್ತು, ಕಳೆ ಜಂಗಮದಲ್ಲಿ ಅಡಗಿತ್ತು. ಮಹಾಘನ ವಸ್ತುವಿನಲ್ಲಿ ಲೀಯವಾಯಿತ್ತು. ಆದ ಬಳಿಕ, ಗುರುಲಿಂಗೆ ತನುವೆಂಬುದಿಲ್ಲ, ಲಿಂಗಕ್ಕೆ ಮನವೆಂಬುದಿಲ್ಲ, ಜಂಗಮಕ್ಕೆ ಘನವೆಂಬುದಿಲ್ಲ, ಪ್ರಸಾದಕ್ಕೆ ಜಿಹ್ವೆಯೆಂಬುದಿಲ್ಲ. ಅನುವರಿದು ಘನದಲ್ಲಿ ನಿಂದು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಅರಸಿಕೊಳ್ಳಿರಣ್ಣಾ.
--------------
ಮೋಳಿಗೆ ಮಾರಯ್ಯ
ಏನು ಏನೂ ಎನಲಿಲ್ಲದ ಮಹಾಘನ ಚಿತ್ಕಲಾಪ್ರಣವದ ನೆನಹುಮಾತ್ರದಲ್ಲಿ ಅನಾದಿಪ್ರಣವದ ಉತ್ಪತ್ಯವಾಯಿತ್ತು. ಆ ಅನಾದಿಪ್ರಣವಸ್ಥಲದ ವಚನವೆಂತೆಂದಡೆ : ಆದಿ ಅಕಾರ ಆದಿ ಉಕಾರ ಆದಿ ಮಕಾರವೆಂಬ ಆದಿ ಅಕ್ಷರತ್ರಯಂಗಳಿಲ್ಲದಂದು. ಆದಿ ನಾದ ಆದಿ ಬಿಂದು ಆದಿ ಕಲೆಗಳೆಂಬ ಭಿನ್ನನಾಮ ತಲೆದೋರದಂದು, ಆದಿ ಪ್ರಕೃತಿ ಆದಿ ಪ್ರಾಣವಿಲ್ಲದಂದು, ಅಖಂಡ ಜ್ಯೋತಿರ್ಮಯವಾಗಿಹ ಗೊಳಕಾಕಾರಪ್ರಣವ ಜ್ಯೋತಿರ್ಲಿಂಗವಿಲ್ಲದಂದು, ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಸಂಗಮದೇವನು
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಾಯವುಳ್ಳನ್ನಕ್ಕರ ಲಿಂಗವೆಂಬೆ, ಪ್ರಾಣವುಳ್ಳನ್ನಕ್ಕರ ಜಂಗಮವೆಂಬೆ, ಭಾವವುಳ್ಳನ್ನಕ್ಕರ ಪ್ರಸಾದವೆಂಬೆ, ಕಾಯ ಪ್ರಾಣ ಭಾವ ಮನಗೂಡಿ ಮಗ್ನವಾದಲ್ಲಿ ಮಹಾಘನ ಗುರುನಿರಂಜನ ಚನ್ನಬಸವಲಿಂಗವೆಯಾಗಿ ಹಿಂಗಿಯರಿಯದಿರ್ದೆನು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಳಾಯುಕ್ತಮಾಗಿ ರೂಪುಳ್ಳ ಹೆಣ್ಣನು ಲಿಂಗಕ್ಕೆ ಕೊಟ್ಟು, ಬಿಂದುಯುಕ್ತಮಾಗಿ ರುಚಿಯುಳ್ಳ ಮಣ್ಣನು ಗುರುವಿಗೆ ಕೊಟ್ಟು, ನಾದಯುಕ್ತಮಾಗಿ ತೃಪ್ತಿಯುಳ್ಳ ಹೊನ್ನನು ಜಂಗಮಕ್ಕೆ ಕೊಟ್ಟು, ಕರಿಯು ನುಂಗಿದ ಕಪಿತ್ಥಫಲದಂತೆ, ಹೊರಗೆ ಸಾಕಾರಮಾಗಿಯೂ, ಒಳಗೆ ನಿರಾಕಾರಮಾಗಿಯೂ ಇರ್ಪುದೇ ಭಕ್ತಿಯು ; ಉಳಿದುದೆಲ್ಲಾ ಅಭಕ್ತಿಯು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಅಂಗ ಆಪ್ತ ಸ್ಥಾನ ಸದ್ಭಾವ ಎಂಬ ಚತುರ್ವಿಧಭಕ್ತಿಯಿಂದೆ ಗುರುವಿಂಗೆ ತನುವ ಸವೆಸಿದಡೆ ಆ ತನುವಿನಲ್ಲಿ ದೀಕ್ಷಾ ಶಿಕ್ಷಾ ಸ್ವಾನುಭಾವಜ್ಞಾನಸ್ವರೂಪವಾದ ಶ್ರೀಗುರುದೇವನು ನೆಲೆಗೊಂಬನು ನೋಡಾ. ಮಂತ್ರ ಜ್ಞಾನ ಜಪ ಸ್ತೋತ್ರವೆಂಬ ನಾಲ್ಕು ತೆರದ ಭಕ್ತಿಯಿಂದೆ ಲಿಂಗಕ್ಕೆ ಮನವ ಸವೆಸಿದಡೆ ಆ ಮನದಲ್ಲಿ ಇಷ್ಟ ಪ್ರಾಣ ಭಾವಸ್ವರೂಪವಾದ ಪರಶಿವಲಿಂಗವು ನೆಲೆಗೊಂಬುದು ನೋಡಾ. ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಿಂದೆ ಜಂಗಮಕ್ಕೆ ಧನವ ಸವೆಸಿದಡೆ ಆ ಧನದಲ್ಲಿ ಸ್ವಯ ಚರ ಪರಸ್ವರೂಪವಾದ ಮಹಾಘನ ಜಂಗಮವು ನೆಲೆಗೊಂಬುದು ನೋಡಾ. ಇಂತೀ ತ್ರಿವಿಧಸಂಪತ್ತು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಿಃಕಳ ನಿರುಪಮ ತೇಜೋಮಯ ನಿರಂಜನಲಿಂಗದ ನೆನಹಿನ ಮಹಾಘನ ಮಹತ್ವವನುಳ್ಳ ಮಹಾಂತ ಅಖಂಡಪರಶಿವನೊಳಗೆ ಷಡ್‍ವಕ್ತ್ರವನುಳ್ಳ ಪರಬ್ರಹ್ಮವಿರ್ಪುದು, ಆ ಪರಬ್ರಹ್ಮದಲ್ಲಿ ಬ್ರಹ್ಮಾಂಡವಿರ್ಪುದು, ಆ ಬ್ರಹ್ಮಾಂಡದೊಳಗೆ ಸಕಲ ಸ್ಥಿರಚರಪ್ರಾಣಿಗಳಿರ್ಪುವು. ಆ ಪ್ರಾಣಿಗಳ ಸತ್ಕರ್ಮ ದುಷ್ಕರ್ಮದಿಂದಾದ ಪುಣ್ಯ ಪಾಪಂಗಳಿಂದೆ ಬಂದ ಸುಖದುಃಖಂಗಳನುಂಡು ಸೃಷ್ಟಿ ಸ್ಥಿತಿ ಲಯಕ್ಕೊಳಗಾಗಿ ಅನಂತಕಾಲ ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಬರುತಿರ್ಪುದು. ಆ ಬರುವದರೊಳಗೆ ಸತ್ಕರ್ಮದಿಂದ ಪುಣ್ಯವೊದಗಿ ಮಾನವಜನ್ಮ ಬರಲು ಈ ಮಾನವಜನ್ಮದ ಅಜ್ಞಾನಕ್ಕೆ ಆ ಮಹಾಮಹಾಂತ ಪರಿಮಳವನೊಳಕೊಂಡು ಮಹಾಂತಮಾರುತ ಸುಳಿಯಲು ಆ ಮಾರುತನ ಸೋಂಕಿಗೆ ಆ ಅಜ್ಞಾನ ಸುಜ್ಞಾನವಾಯಿತ್ತು. ಆ ಸುಜ್ಞಾನದಿಂದೆ ಸತ್ಕರ್ಮವ ಮಾಡಲು ಸಾಧುರಸಂಗವು ದೊರಕಿತ್ತು. ಆ ಸಾಧುರಸಂಗದಿಂದ ಸುಗುಣ ಅಳವಟ್ಟಿತ್ತು. ಆ ಸುಗುಣ ಅಳವಟ್ಟಲ್ಲಿ ಸಂಸಾರ ಹೇಯವಾಯಿತ್ತು. ಆ ಸಂಸಾರ ಹೇಯವಾದಲ್ಲಿ ಮುಕ್ತನಾಗಬೇಕೆಂಬೋ ಚಿಂತೆ ತಲೆದೋರಿತ್ತು. ಆ ಚಿಂತಾಪರವಶದಿಂದೆ ದುಃಖಗೊಂಡಿರಲು ಆ ಮಹಾಂತಪರಿಮಳವನೊಳಕೊಂಡು, ಮಹಾಂತಮಾರುತನೆಂಬ ಪ್ರಭುವೇ ತಾ ಮುನ್ನ ಸೋಂಕಿದ್ದಕ್ಕೆ ತನ್ನ ಬಯಸುವ ಶಿಷ್ಯನಲ್ಲಿಗೆ ತಾನೇ ಗುರುವಾಗಿ ಬಂದು, ಮೋಕ್ಷವಾಸನಿಗೆ ಅವಸ್ಥೆಯೊಳಗಿದ್ದ ಶಿಷ್ಯನ ಸಂತೈಸಿ, ಮಹಾಂತಪರಿಮಳವನುಳ್ಳ ಮುಕ್ತಿಫಲವಾಗುವ ಘನವೆಂಬ ಪುಷ್ಪಕ್ಕೆ ಮೂಲನೆನವಾದ ಮನವೆಂಬ ಲಿಂಗದಲ್ಲಿ ನಿಃಕಲವೇ ನಾನು, ನಾನೇ ನೀನು. ಹೀಗೆಂಬುವುದ ಉಸುರದೆ ಮರೆಗೈದು, ಆ ಲಿಂಗಮಂ ಪರಿಪೂರ್ಣವಾದ ಕರಕಮಲಕ್ಕೆ ಕೊಟ್ಟು ಮನವೆಂಬ ಲಿಂಗದ ನೆನವೆಂಬ ಬಳ್ಳಿಯೇ ಜಂಗಮವೆಂದು ತೋರಿ, ಆ ಬಳ್ಳಿಯ ಬೊಡ್ಡಿಯ ತಂಪು ಪಾದೋದಕವು. ಆ ಆನಂದ ತಂಪ್ಹಿಡಿಯುವುದಕ್ಕೆ ಮಡಿಯಾದ ಮೃತ್ತಿಕೆಯು ನಿರಂಜನಪ್ರಸಾದ. ಆ ಮೃತ್ತಿಕೆಗೆ ಒಡ್ಡಾದ ತೇಜೋಮಯವೇ ವಿಭೂತಿ, ಆ ತೇಜಸ್ಸು ಲಿಂಗಪೂಜೆಯೇ ರುದ್ರಾಕ್ಷಿ, ಆ ತೇಜಸ್ಸು ಲಿಂಗಸ್ಫುಟನಾದವೇ ನಿರುಪಮಮಂತ್ರ, ಇಂತೀ ಅಷ್ಟಾವರಣ ಘಟ್ಟಿಗೊಂಡು ಪೂಜಿಸಲಾಗಿ ಆ ಶಿಷ್ಯನು ಗುರುವ ಹಾಡಿ, ಲಿಂಗವ ನೋಡಿ, ಜಂಗಮವ ಪೂಜಿಸಿ, ಪಾದೋದಕವನ್ನುಪಾರ್ಜಿಸಿ, ಪ್ರಸಾದವನುಂಡು, ವಿಭೂತಿಯ ಲೇಪಿಸಿಕೊಂಡು, ರುದ್ರಾಕ್ಷಿಯ ಧರಿಸಿಕೊಂಡು, ಮಂತ್ರವ ಚಿತ್ತದೊಳಿರಿಸಿ ಆಚರಿಸಲು, ಆ ಶಿಷ್ಯನ ಕಾಯ ಆ ಗುರುವನಪ್ಪಿ ಸದ್ಗುರುವಾಯಿತ್ತು. ಮನವು ಲಿಂಗವ ಕೂಡಿ ಘನಲಿಂಗವಾಯಿತ್ತು. ಪ್ರಾಣ ಜಂಗಮವ ಮರೆಗೊಂಡು ನಿಜಜಂಗಮವಾಯಿತ್ತು. ತೃಷೆ ಪಾದೋದಕದಲ್ಲಿ ಮುಳುಗಿ ಆನಂದಪಾದೋದಕವಾಯಿತ್ತು. ಹಸಿವು ಪ್ರಸಾದದಲ್ಲಡಗಿ ಪ್ರಸಿದ್ಧಪ್ರಸಾದವಾಯಿತ್ತು. ಚಂದನ ವಿಭೂತಿಯಲ್ಲಿ ಸತ್ತು ಚಿದ್ವಿಭೂತಿಯಾಯಿತ್ತು. ಶೃಂಗಾರ ರುದ್ರಾಕ್ಷಿಯಲ್ಲಿ ಕರಗಿ ಏಕಮುಖರುದ್ರಾಕ್ಷಿಯಾಯಿತ್ತು. ಚಿತ್ತ ಮಂತ್ರದಲ್ಲಿ ಸಮರಸವಾಗಿ ಮೂಲಮಂತ್ರವಾಯಿತ್ತು. ಇಂಥಾ ಮೂಲಮಂತ್ರವೇ ಬ್ರಹ್ಮಾಂಡ, ಪಿಂಡಾಂಡ, ಸ್ಥಿರ, ಚರ, ಸಮಸ್ತಕ್ಕೆ ಕಾರಣ ಚೈತನ್ಯಸೂತ್ರವಾಗಿ ಅಂತರಂಗ ನಿವೇದಿಸಲು, ಅಲ್ಲಿ ಅಂತರಂಗದಲ್ಲಿ ತೋರುವ ಆರುಸ್ಥಲ, ಆರುಚಕ್ರ, ಆರುಶಕ್ತಿ, ಆರುಭಕ್ತಿ, ಆರುಲಿಂಗ, ಆರಾರು ಮೂತ್ತಾರು, ಇನ್ನೂರಾಹದಿನಾರು ತೋರಿಕೆಗೆ ಆ ಮೂಲಮಂತ್ರ ತಾನೇ ಕಾರಣ ಚೈತನ್ಯಸೂತ್ರವಾಗಿ ಕಾಣಿಸಲು ಸಮ್ಯಜ್ಞಾನವೆನಿಸಿತು. ಆ ಸಮ್ಯಜ್ಞಾನಬೆಳಗಿನೊಳಗೆ ಮುದ್ರೆ ಸಂಧಾನ ವಿವರ ವಿಚಾರದಿಂದೆ ಷಟ್ತಾರೆಗಳ ಸ್ವರೂಪದ ಆರುಭೂತ, ಆರುಮುಖ, ಆರುಹಸ್ತ, ಆರುಪ್ರಸಾದ, ಆರುತೃಪ್ತಿ, ಆರು ಅಧಿದೇವತೆ ಮೊದಲಾದ ಆರಾರು ಮೂವತ್ತಾರು ಇನ್ನೂರಾಹದಿನಾರು ಅನಂತ ತೋರಿಕೆಯೆಲ್ಲಾ ಮಂತ್ರಸ್ವರೂಪವೇ ಆಗಿ ತೋರಿದಲ್ಲಿ ತತ್ವಜ್ಞಾನವಾಯಿತು. ಒಳಗೇಕವಾದ ತತ್ವಜ್ಞಾನವು ಹೊರಗೆ ನೋಡಲು ಹೊರಗೇಕವಾಗಿ ತೋರಿತು. ಒಳಹೊರಗೆಂಬಲ್ಲಿ ನಡುವೆಂಬುದೊಂದು ತೋರಿತು. ಈ ಮೂರು ಒಂದೇ ಆಗಿ, ಒಂದೇ ಬ್ಯಾರೆ ಬ್ಯಾರೆ ಸ್ಥೂಲ ಸೂಕ್ಷ್ಮ ಕಾರಣ ಮೂರಾದಲ್ಲಿ ಆತ್ಮಜ್ಞಾನವಾಯಿತು. ಆ ಆತ್ಮಜ್ಞಾನದಿಂದ ಆತ್ಮಾನಾತ್ಮ ವಿಚಾರ ಗಟ್ಟಿಗೊಂಡಲ್ಲಿ ಮಹಾಜ್ಞಾನಪ್ರಕಾಶವಾಯಿತು. ಆ ಮಹಾಜ್ಞಾನದಿಂದೆ ಅನುಭವದ ದೃಷ್ಟಿಯಿಡಲು ಬೊಂಬೆಸೂತ್ರ ಆಡಿಸುವವನಂತೆ ಬ್ಯಾರೆ ಬ್ಯಾರೆ ಕಾಣಿಸಲು ಈ ಬೊಂಬೆಯ ಸೂತ್ರ ಆಡಿಸುವವನು ಇವು ಮೂರು ಎಲ್ಲಿಹವು, ಏನೆಂದು ತೂರ್ಯವೇರಿ ಸೂರೆಗೊಂಡಲ್ಲಿ ಸ್ವಯಂಬ್ರಹ್ಮವೆನಿಸಿತ್ತು. ಆ ಸ್ವಯಂಬ್ರಹ್ಮಜ್ಞಾನವು ತನ್ನ ತಾ ವಿಚಾರಿಸಲು ತನ್ನೊಳಗೆ ಜಗ, ಜಗದೊಳಗೆ ತಾನು, ತಾನೇ ಜಗ, ಜಗವೇ ತಾನೆಂಬಲ್ಲಿ ನಿಜಜ್ಞಾನವಾಯಿತು. ಆ ನಿಜಜ್ಞಾನದಿಂದೆ ನಿಜವರಿಯಲು ಆ ನಿಜದೊಳಗೆ ತಾನೇ ಜಗ, ಜಗದೊಳಗೆ ತಾನೇ ಎಂಬೋ ಎರಡಿಲ್ಲದೆ ತಾನೆ ತಾನೆಂಬೊ ಅರುವಾಯಿತು. ಆ ಅರುವು ಮರೆಗೊಂಡು ಕುರುಹು ಉಲಿಯದೆ ನಿರ್ಬೈಲಾಗಲು ಮಹಾಂತನೆಂಬ ಹೆಸರಿಲ್ಲದೆ ಹೋಗಿ ಏನೋ ಆಯಿತ್ತು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅಯ್ಯ ! ನಿಜವಸ್ತು ನೆಲೆಸಿರ್ಪ ನೇತ್ರವೇ ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ, ಕೂಟಕ್ಕೆ ಕೂಟ ನೋಟಕ್ಕೆ ನೋಟ, ಬೇಟಕ್ಕೆ ಬೇಟ. ಅದೆಂತೆಂದಡೆ: ಲಿಂಗಸ್ಯ ಸಾಯಕಂ ನೇತ್ರಂ ಚುಕ್ಷುರ್ಲಿಂಗಸ್ಯ ಚಕ್ಷುಸಃ ಇಂತೆಂದುದಾಗಿ, ಗುರುಕಟಾಕ್ಷೆಯಿಂದ ಇಷ್ಟ_ಪ್ರಾಣ_ಭಾವಲಿಂಗ ಸಂಬಂಧವಾದ ಮಹಾಘನ ಚಕ್ಷುವೆ ಗುಹೇಶ್ವರಲಿಂಗಕ್ಕೆ ಮಹಾಪ್ರಸಾದ ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ತ್ರೈಮಲದಾಸೆಯ ಮನಗೊಂಡು ಮಹಾಘನ ಮಹಿಮರಾಚರಣೆಯ ಹೊತ್ತು ನಡೆಬದ್ಧ ಹಿರಿಯರೆಂದು ಬರುವರು. ಮಾರ್ಗಕ್ರಿಯೆಯೆನುತ ಸಾರವಿಹೀನ ಜಡಕ್ರಿಯೆ ಕೋಟಲೆಯಗೊಂಡು ಕಾಂತಾರ ಬಿದ್ದು ಕಳವಳಕ್ಕೊಳಗಾದರು. ತಾವು ತಮ್ಮ ಹೂಳಿ ಇತರರನೆತ್ತಿ ತಂದು ಹಳಿದಾಡುವ ಮಲಭಾಂಡರನೆನ್ನತ್ತ ತೋರದಿರಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೃಥಿವ್ಯಪ್ತೇಜೋವಾಯ್ವಾಕಾಶಂಗಳೈದು ಶರೀರಮಹದಹಂಕಾರ ಪ್ರಕೃತಿಗಳೊಳಗೆ ಸೇರಲು, ಮಹತ್ತೇ ಜೀವ ಪರಮರಾಗಿ, ಪ್ರಕೃತಿಯೇ ಮನ ಬುದ್ಧಿಗಳಾಗಿ, ಅಹಂಕಾರವೇ ಚಿದÀಹಂಕಾರವಾಗಲು, ಮನ ಬುದ್ಧಿ ಚಿತ್ತಹಂಕಾರಂಗಳೇ ಅಂತಃಕರಣಗಳು, ತದನುಭವಕರ್ತನೇ ಜೀವನು, ತತ್ಸಾಕ್ಷಿಕಾರಣಮಾಗಿರ್ಪನೇ ಪರಮನು. ಮನ ಬುದ್ಧಿಗಳು ಉತ್ಕøಷ್ಟ ಕಾರ್ಯವನೆಸಗುತ್ತಿರ್ಪುದರಿಂ ಅಹಂಕಾರಮೆನಿಸಿತ್ತು. ಜೀವಪರಮರೆಲ್ಲಕ್ಕೂ ತಾವೇ ಕಾರಣರಾಗಿ, ತಮಗಿಂತಲೂ ದೊಡ್ಡಿತ್ತಾದ ವಸ್ತುಮತ್ತೊಂದಿಲ್ಲದಿರ್ಪುದರಿಂ ಮಹತ್ತಾಗಿತ್ತು. ಆ ಮಹತ್ತೇ ಆತ್ಮನು, ಆದುದರಿಂ ಜೀವಾತ್ಮನೇ ಶಿವನು, ಮನ ಬುದ್ಧಿಗಳೇ ವಿಷ್ಣುವು, ಚಿದಹಂಕಾರಗಳೇ ಬ್ರಹ್ಮನು. ಆ ಚಿದಹಂಕಾರಗಳೆರಡೂ ಮನ ಬುದ್ಧಿಗಳಿಗೆ ಶಕ್ತಿಯಾಗಿಹವು, ಆ ಮನಬುದ್ಧಿಗಳೆರಡೂ ಜೀವಪರಮರಿಗೆ ಶಕ್ತಿಯಾಗಿಹವು, ಆ ಜೀವಪರಮರೇ ಚಿದಹಂಕರಾಗಳಿಗೆ ಶಕ್ತಿಯಾಗಿಹವು, ಜೀವನೇ ಸಗುಣ, ಪರಮನೇ ನಿರ್ಗುಣ, ಬುದ್ಧಿಯೇ ಸುಗುಣ, ಮನವೇ ನಿರ್ಗುಣ, ಜ್ಞಾನವೇ ಸಗುಣ, ಅಹಂಕಾರವೇ ನಿರ್ಗುಣ, ನಿರ್ಗುಣಂಗಳಲ್ಲಿ ಸಗುಣಂಗಳು ಸೃಷ್ಟಿ ಸ್ಥಿತಿ ಸಂಹಾರಗಳಂ ಹೊಂದುತ್ತಿರ್ಪವು, ಸಗುಣ ನಿರ್ಗುಣಗಳಿಂ ಸತ್ಕøತ್ಯ ದುಷ್ಕøತ್ಯರೂಪಂಗಳಾಗಿಹವು. ಆ ದುಷ್ಕøತ್ಯವು ನಿಜವಂ ಹೊಂದದೇ ಇಹುದು. ಸತ್ಕøತ್ಯವು ನಿಜವಂ ಹೊಂದಿ ಹೊಂದದೇ ಇಹುದು. ದುಷ್ಕøತ್ಯದಿಂ ನಿಜ ಸಾಧ್ಯಮಲ್ಲ. ಸತ್ಕøತ್ಯದಿಂ ನಿಜವು ಸಾಧ್ಯಮಪ್ಪದು, ಸಾಧ್ಯಮಾದಲ್ಲಿ ನಿಜವೇ ತಾನಾಗಿಹುದು. ಅಂತಃಕರಣಂಗಳು ಜೀವಪರಮರ ಭೇದಾಭೇದಂಗಳಿಗೆ ತಾವು ಸಾಧನಭೂತಂಗಳಾಗಿಹವು; ಸಾಧ್ಯವಾದಲ್ಲಿ ಸಾಧನದ್ರವ್ಯಂಗಳು ಅಪ್ರಯೋಜಕವಾಗಿರ್ಪಂದದಿ ಜೀವಪರಮರೇಕಮಾದಲ್ಲಿ ಅಂತಃಕರಣದೋಷಂಗಳು ಅಪ್ರಯೋಜಕಂಗಳಾಗಿ ಮಿಥ್ಯಾಭೂತಂಗಳಾಗಿಹವು. ಅಂತಪ್ಪ ಜೀವಪರಮರಸಂಗವೇ ಮೋಕ್ಷವು. ಅಂತಪ್ಪ ನಿಜಾನಂದ ನಿರ್ವಾಣಸುಖವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪ್ರಸಾದ ಪ್ರಸಾದವೆಂದು ಹೆಸರಿಟ್ಟು ನುಡಿವವರಿಗೆ ಪ್ರಸಾದವೆಲ್ಲಿಯದೋ? ಮನಮುಟ್ಟಿ ಕೊಂಡುದು ಪ್ರಸಾದವಲ್ಲ, ತನುಮುಟ್ಟಿ ಕೊಂಡುದು ಪ್ರಸಾದವಲ್ಲ, ಧನಮುಟ್ಟಿ ಕೊಂಡುದು ಪ್ರಸಾದವಲ್ಲ. ಅವು ಏಕಾಗಿ ತ್ರಿವಿಧಸಾಹಿತ್ಯದಲ್ಲಿ ಮುಟ್ಟಿ ಕೊಂಡುದು ಪ್ರಸಾದವಲ್ಲ. ಇಕ್ಕುವವ ಶಿವದ್ರೋಹಿ, ಕೊಂಬವ ಗುರುದ್ರೋಹಿ. ಇದು ಕಾರಣ ಕೂಡಲಚೆನ್ನಸಂಗಯ್ಯನ ಪ್ರಸಾದ ಘನಕ್ಕೆ ಮಹಾಘನ ನಾನೇನೆಂದು ಬಣ್ಣಿಸುವೆ.
--------------
ಚನ್ನಬಸವಣ್ಣ
ಅಷ್ಟತನುಮೂರ್ತಿ ಶಿವನೆಂಬ ಕಷ್ಟಜೀವಿಗಳನೇನೆಂಬೆನಯ್ಯಾ? ಯುಗಜುಗಂಗಳು ಪ್ರಳಯವಹಲ್ಲಿ ಧರೆ ಜಲದಲ್ಲಿ ಅಡಗಿತ್ತು, ಜಲ ಅಗ್ನಿಯಲ್ಲಿ ಅಡಗಿತ್ತು, ಅಗ್ನಿ ವಾಯುವಿನಲ್ಲಿ ಅಡಗಿತ್ತು, ವಾಯು ಆಕಾಶದಲ್ಲಿ ಅಡಗಿತ್ತು, ಆಕಾಶ ಅತೀತನಲ್ಲಿ ಅಡಗಿತ್ತು, ಅತೀತ ಆದಿಯೊಳಗಡಗಿತ್ತು, ಆದಿ ಅನಾದಿಯೊಳಡಗಿತ್ತು, ಅನಾದಿ ನಿಜದೊಳಡಗಿತ್ತು. ಇಂತೀ ಅಷ್ಟತನು ಒಂದರೊಳಗೊಂದಳಿವಲ್ಲಿ, ಒಂದರೊಳಗೊಂದು ಹುಟ್ಟುವಲ್ಲಿ, ಎಂದಳಿದನೆಂದು, ಹುಟ್ಟಿದನೆಂದು ಬಲ್ಲವರುಂಟೆ? ಹುಟ್ಟಿದನಳಿದವನೆಂಬ ಶಬ್ದವ ನುಡಿಯಲಾಗದು. ಇದು ಕಾರಣ, ನಮ್ಮ ಮಹಾಘನ ಸೋಮೇಶ್ವರನು ಮಾಡಿದಡಾದವು, ಬೇಡಾ ಎಂದಡೆ ಮಾದವು.
--------------
ಅಜಗಣ್ಣ ತಂದೆ
ತೀರ್ಥ ಯಾತ್ರೆ ಲಿಂಗದರುಶನಕ್ಕೆ ಹೋಗಿ, ಕರ್ಮವ ಹಿಂಗಿಸಿಕೊಂಡೆನೆಂಬ ಭಂಗಿತರ ಮಾತ ಕೇಳಲಾಗದು. ಅದೇನು ಕಾರಣವೆಂದರೆ, ತೀರ್ಥವಾವುದು, ಯಾತ್ರೆ ಯಾವುದು, ಲಿಂಗವಾವುದು, ಬಲ್ಲರೆ ನೀವು ಹೇಳಿರೆ. ಮಹಾಘನ ಗುರುಪಾದತೀರ್ಥದಿಂದ ವೆಗ್ಗಳ ತೀರ್ಥ ಉಂಟೆ ? ಜಗತ್ಪಾವನ ಜಂಗಮ ದರುಶನದಿಂದ ಬೇರೆ ಯಾತ್ರೆ ಉಂಟೆ? ಇಂಗಿತವನರಿದ ಬಳಿಕ ತನ್ನ ಅಂಗದ ಮೇಲಿರ್ಪ ಲಿಂಗವಲ್ಲದೆ ಬೇರೆ ಲಿಂಗ ಉಂಟೆ ? ಇದನರಿಯದೆ ಇನ್ನು ತೀರ್ಥಯಾತ್ರೆ ಲಿಂಗ ದರುಶನ ಉಂಟೆಂಬ ಅಂಗಹೀನರ ಮುಖವ ನೋಡಲಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->