ಅಥವಾ

ಒಟ್ಟು 27 ಕಡೆಗಳಲ್ಲಿ , 9 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ, ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ ನರಕಕ್ಕಿಳಿವರನೇನೆಂಬೆನಯ್ಯಾ ? ಅಕಟಕಟಾ, ಈ ಹೀಂಗೆ ಶಿವಾಚಾರ ? ಈ ಹೀಂಗೆ ಭೃತ್ಯಾಚಾರ ? ಭಕ್ತಿ ಮುಕ್ತಿಯನರಿಯದೆ ಹೋದರು. ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ. ಇದನರಿದು, ವಂಚಿಸುವವರನೆ ವಂಚಿಸಿ ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು ತನು ಕೆಡದು, ಮನ ಕೆಡದು, ಧನ ಕೆಡದು. ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹೆಂಡಿರು_ಮಕ್ಕಳಿಗೆ ಕುಲದೈವ ಮನೆದೈವವಲ್ಲದೆ ಎನಗೆ ಕುಲದೈವ ಮನೆದೈವವಿಲ್ಲೆಂಬ ಭಂಡನ ಭಕ್ತಿಯ ಪರಿಯ ನೋಡಾ. [ಆ] ಯುಕ್ತಿಶೂನ್ಯಂಗೆ ಮುಂದೆ ದೃಷ್ಟವ ಹೇಳಿಹೆನು: ತನ್ನ ಹೆಂಡತಿ ಮತ್ತೊಬ್ಬನ ಮೆಚ್ಚಿಕೊಂಡು ಹೋಗುತ್ತಿರೆ, ಹೋದರೆ ಹೋಗಲಿ ಎಂದು ಸೈರಿಸಬಲ್ಲಡೆ ತಾನವರೊಳಗಲ್ಲ. ಅಕಟಕಟಾ ಲೌಕಿಕಕ್ಕೆ ಆಜ್ಞೆಯುಂಟು ಪಾರಮಾರ್ಥಕ್ಕೆ ಆಜ್ಞೆಯಿಲ್ಲವೆ ! ಇದು ಕಾರಣ_ಕೂಡಲಚೆನ್ನಸಂಗಯ್ಯಾ ಭಕ್ತನಾಗಿ ಭವಿಯ ಬೆರಸುವ ಅನಾಚಾರಿಯ ತೋರದಿರಯ್ಯಾ.
--------------
ಚನ್ನಬಸವಣ್ಣ
ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆ ಎನಗಾಯಿತ್ತಯ್ಯಾ, ಅಕಟಕಟಾ, ಸಂಸಾರ ವೃಥಾ ಹೋಯಿತ್ತಲ್ಲಾ. ಕರ್ತುವೆ ಕೂಡಲಸಂಗದೇವಾ ಇವ ತಪ್ಪಿಸಿ ಎನ್ನುವ ರಕ್ಷಿಸಯ್ಯಾ. 11
--------------
ಬಸವಣ್ಣ
ಬ್ರಹ್ಮಸಭೆ ನೆರೆದಲ್ಲಿ ಬ್ರಹ್ಮವಿತ್ತುಗಳು ಬ್ರಹ್ಮತ್ವವಡೆದು, ತಮ್ಮ ವಚನಬ್ರಹ್ಮರೆನಿಸಿಕೊಂಡು ನೆಮ್ಮುವರು ವಿಷ್ಣುವನು- ತಮ್ಮ ದೈವವ ಬಿಡುವುದಾವುದುಚಿತ ವಿಷ್ಣು ಶಿವಭಕ್ತನಾಗಿ ನಿಷ್ಠೆಯಿಂದ ಕಣ್ಣನಿತ್ತು ಹಡೆದನು ಶಿವಭಕ್ತಿಯಿಂದ. ಕಷ್ಟಜಾತಿ ಜೀವಿಗಳಿಗೆ ಮಟ್ಟಿ ಎಂತು ಬಂದತ್ತೊ ! ಮುಟ್ಟರೊಂದುವನು ಮೂವಿಧಿಬಟ್ಟರೊ ! ಹುಸಿವನೆ ಹೊಲೆಯನೆಂದು ವಚನವುಂಟು ಲೋಕದಲ್ಲಿ. ಹುಸಿದಜನ ಶಿರ ಹೋಯಿತ್ತಾದಿಯಲ್ಲಿ, ಎಸವೋದ ಕಿರುಪಶುವನುಸರಲೀಯದೆ ವಿ[ದಾರಿ]ಸಿ ತಿಂಬ ಜನ್ಮ ಅದಾವ ಫಲವೋ. ದಕ್ಷ ಯಾಗವ ಮಾಡಿ ನಿಕ್ಷೇತ್ರ ನೆರೆದ ಅಕಟಕಟಾ, ಕೇಳಿಯೂ ಏಕೆ ಮಾಣಿರೊ ಮಮಕರ್ತ ಕೂಡಲಸಂಗನ ಶರಣರು ಅಕ್ಷಯರದ್ಥಿಕರು, ವಿಪ್ರರು ಕೀಳು ಜಗವೆಲ್ಲರಿಯಲು !
--------------
ಬಸವಣ್ಣ
ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ, ಹೆಣ್ಣ ಮೆಚ್ಚಿ ಲಿಂಗಕ್ಕೆ ಹೊರತಾದೆ, ಹೊನ್ನ ಮೆಚ್ಚಿ ಜಂಗಮಕ್ಕೆ ಹೊರತಾದೆ. ಇಂತೀ ತ್ರಿವಿಧವ ಮೆಚ್ಚಿ ಅಕಟಕಟಾ ಕೆಟ್ಟೆನೆಂದು ಗುರೂಪಾವಸ್ತೆಯಂ ಮಾಡಿ, ಗುರುವಾಕ್ಯ ಪ್ರಮಾಣವಿಡಿದು, ಆಚರಿಸುವ ಜ್ಞಾನಕಲಾತ್ಮನಿಗೆ ಈ ಲೋಕದ ಜಡಜೀವರು ಕಡುಪಾತಕರು ಬಂದು ಈ ಸಂಸಾರದಲ್ಲಿ ಪಾರಮಾರ್ಥವುಂಟು, ಇದರೊಳಗೆ ಸಾದ್ಥಿಸಬೇಕೆಂದು ಇಹ ಬಿಟ್ಟು ವೈರಾಗ್ಯದಲ್ಲಿ ಮೋಕ್ಷವಿಲ್ಲೆಂದು ಹೇಳುವರು. ಇದಕ್ಕೆ ಉಪಮೆ- ಹಿಂದೆ ಕಲ್ಯಾಣಪಟ್ಟಣಕ್ಕೆ ತಮ್ಮ ತಮ್ಮ ದೇಶವ ಬಿಟ್ಟು ಬಂದ ಗಣಂಗಳಾರಾರೆಂದಡೆ: ಮೋಳಿಗೆ ಮಾರತಂದೆಗಳು ಕಾಶ್ಮೀರದೇಶದ ಅರಸು. ನಿಜಗುಣಸ್ವಾಮಿಗಳು ಕೈಕಾಡದೇಶದ ಅರಸು. ನುಲಿಯ ಚಂದಯ್ಯನವರು ಕೈಕಾಣ್ಯದೇಶದ ಅರಸುಗಳು. ಇಂತಿವರು ಮೊದಲಾದ ಬಸವಾದಿ ಪ್ರಭುದೇವರಾಂತ್ಯಮಾದ ಏಳನೂರೆಪ್ಪತ್ತು ಪ್ರಮಥಗಣಂಗಳು. ತಮ್ಮ ತಮ್ಮ ದೇಶವ ಬಿಟ್ಟು ಕಲ್ಯಾಣಕ್ಕೆ ಬಂದರು. ಅವರೆಲ್ಲರು ಹುಚ್ಚರು, ನೀವೇ ಬಲ್ಲವರು. ಬಸವೇಶ್ವರದೇವರು ಮೊದಲಾಗಿ ಏಳನೂರೆಪ್ಪತ್ತು ಪ್ರಮಥಗಣಂಗಳು ಕೂಡಿ ತಮ್ಮ ತಮ್ಮ ಹೃನ್ಮಂದಿರದಲ್ಲಿ ನೆಲಸಿರುವ ಪರಶಿವಲಿಂಗಲೀಲಾವಿನೋದದಿಂ ಎರಡೆಂಬತ್ತೆಂಟುಕೋಟಿ ವಚನಗಳನ್ನು ಹಾಡಿಕೊಂಡರು. ಇದರನುಭಾವವ ತಿಳಿಯಬಲ್ಲರೆ ಹೇಳಿರಿ; ಅರಿಯದಿದ್ದರೆ ಕೇಳಿರಿ. ತನು-ಮನ-ಧನ ನೀನಲ್ಲ, ಪಂಚವಿಂಶತಿತತ್ವ ನೀನಲ್ಲ, ಪಂಚಭೂತಪ್ರಕೃತಿ ನೀನಲ್ಲ, ಮನ ಮೊದಲಾದ ಅರವತ್ತಾರುಕೋಟಿ ಕರಣಾದಿ ಗುಣಂಗಳು ನೀನಲ್ಲ. ಇಂತೀ ಎಲ್ಲವನು ನೀನಲ್ಲ, ನೀನು ಸಾಕಾರಸ್ವರೂಪಲ್ಲವೆಂದು ಸ್ವಾನುಭಾವಜ್ಞಾನಗುರುಮುಖದಿಂದ ತಿಳಿದು ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ, ಸಕಲಸಂಶಯವಂ ಬಿಟ್ಟು, ನಿಶ್ಚಿಂತನಾಗಿ, ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾದ್ಥಿಸೆಂದು ಹಾಡಿದರಲ್ಲದೆ ಅವರೇನು ದಡ್ಡರೇ? ನೀವೇ ಬಲು ಬುದ್ಧಿವಂತರು, ಬಲುಜಾಣರು ! ಇಂಥ ಯುಕ್ತಿ ವಿಚಾರವ ಹೇಳುವ ಮತಿಭ್ರಷ್ಟ ಹೊಲೆಯರ ಕಾಲು ಮೇಲಕ್ಕೆ ಮಾಡಿ, ತಲೆ ಕೆಳಯಕ್ಕೆ ಮಾಡಿ ಅವರಂಗದ ಮೇಲಿನ ಚರ್ಮವ ಹೋತು ಕುರಿಗಳ ಚರ್ಮವ ಹರಿದ ಹಾಗೆ ಹರಿದು, ಅವರ ತಿದಿಯನೆ ಹಿರಿದು, ಅವರ ಕಂಡವ ಕಡಿದು, ಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿ ನರಿಗಳಿಗೆ ಹಾಕೆಂದ ಕಾಣಾ ನಿಮ್ಮ ಶರಣ ವೀರಾದ್ಥಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶರಣೆಂದು ಪಾದವ ಹಿಡಿದಿಹೆನೆಂದಡೆ ಚರಣದ ನಿಲವು ಕಾಣಬಾರದು, ಕುರುಹುವಿಡಿದೆಹೆನೆಂದಡೆ ಕೈಗೆ ಸಿಲುಕದು, ಬೆರಸಿ ಹೊಕ್ಕೆಹೆನೆಂದಡೆ ಮುನ್ನವೆ ಅಸಾಧ್ಯ. ಅಕಟಕಟಾ, ಅಹಂಕಾರದಲ್ಲಿ ಕೆಟ್ಟೆನಲ್ಲಾ, ಗುರುವೆ, ಎನ್ನ ಪರಮಗುರುವೆ ಬಾರಯ್ಯಾ, ಅರಿಯದ ತರಳನ ಅವಗುಣವ ನೋಡುವರೆ ಕೂಡಲಸಂಗಮದೇವಾ
--------------
ಬಸವಣ್ಣ
ಕರ್ಮಿ ಬಲ್ಲನೆ ಭಕ್ತಿಯ ಮರ್ಮವ, ಚರ್ಮವ ತಿಂಬ ಸೊಣಗಬಲ್ಲುದೆ ಪಾಯಸದ ಸವಿಯ? ಉಚ್ಚಿಯ ಬಚ್ಚಲ ಮಚ್ಚಿ ಕಚ್ಚಿ ಕಡಿದಾಡುವ ಮರುಳುಮಾನವರು ನಿಶ್ಚಿಂತ ನಿರಾಳನಿಗೊಲಿದು ಒಚ್ಚತ ಹೋಗಿ ಅಪ್ಪಿ ಅಗಲದಿಪ್ಪ ಅನುಪಮಸುಖನಿವರೆತ್ತ ಬಲ್ಲರು? ಸಂಸಾರವೆಂಬ ಸೊಕ್ಕು ತಲೆಗೇರಿ ಮುಂದುಗಾಣದೆ ಅಕಟಕಟಾ ಕೆಟ್ಟಿತ್ತು ನೋಡ ತ್ರೆ ೈಜಗವೆಲ್ಲ. ಸ್ವರ್ಗ ಮತ್ರ್ಯ ಪಾತಾಳಕ್ಕೆ ಪಶುಪತಿ ಏಕೋದೇವನೆಂದು ಅರಿದು ಸಂಸಾರಪ್ರಪಂಚ ಮರೆಯಾ ಮರುಳೇ. ಪರಮಸುಖದೊಳಗಿರ್ದು ಅಲ್ಪಸುಖಕ್ಕೆ ಆಸೆಮಾಡುವ ಅಜ್ಞಾನಿಗಳನೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ?
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉತ್ತಮಾಂಗ, ಗಳ, ಕಕ್ಷೆ, ಕರಸ್ಥಳ, ಮುಖಸಜ್ಜೆ, ಅಮಳೋಕ್ಯ, ಅಕಟಕಟಾ ! ಭಿನ್ನವಾರ್ತೆಯ ಕೇಳಲಾಗದು. ಕೂಡಲಚೆನ್ನಸಂಗಯ್ಯಾ, ಸರ್ವಾಂಗ ಲಿಂಗವಲ್ಲದೆ ಕೇಳಲಾಗದು.
--------------
ಚನ್ನಬಸವಣ್ಣ
ಅಕಟಕಟಾ, ಶಿವ ನಿನಗಿನಿತು ಕರುಣವಿಲ್ಲ, ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ, ಏಕೆ ಹುಟ್ಟಿಸಿದೆ, ಇಹಲೋಕ ದುಃಖಿಯ ಪರಲೋಕದೂರನ ಏಕೆ ಹುಟ್ಟಿಸಿದೆ ಕೂಡಲಸಂಗಮದೇವಾ ಕೇಳಯ್ಯಾ, ಎನಗಾಗಿ ಮತ್ತೊಂದು ತರುಮರನಿಲ್ಲವೆ 64
--------------
ಬಸವಣ್ಣ
ಜಗದ ಕರ್ತ ಜಗದ ಸ್ಥಿತಿ-ಗತಿಯ ನಡೆಸುವ ಪರಿಯನು ಆವಂಗೆ ಆವಂಗೆಯೂ ಅರಿಯಬಾರದು. ಅಕಟಕಟಾ ದೇವದಾನವ ಮಾನವರೆಲ್ಲ ಅಹಂ ಎಂದು ಅಹಂಕಾರದಿ ಕೆಟ್ಟರಲ್ಲ. ಆ ಮಹಾಕರ್ತನು ತನ್ನ ಶಕ್ತಿಯ ವಿನೋದಕ್ಕೆ ರಚಿಸಿದ ರಚನೆ: ಮೂವರು ಪ್ರಧಾನರು, ಒಂಬತ್ತು ಪ್ರಜೆ ಪಸಾಯಿತರು, ಪದಿನಾಲ್ಕು ನಿಯೋಗಿಗಳು, ಇಪ್ಪತ್ತೇಳು ಅನುಚರರು, ಅಷ್ಟತನುಗಳಿಂದಾದ ಜಗಸ್ಥಿತಿಯ ನಡೆಸುವರು. ಆ ಮಹಾಕರ್ತನು ಕಟ್ಟಿದ ಕಟ್ಟಳೆಯಲು, ಆಯುಷ್ಯ ನಿಮಿಷ ಮಾತ್ರ ಹೆಚ್ಚಿಸ ಬಾರದು, ಕುಂದಿಸಬಾರದು ನೋಡಾ. ಭಾಷೆಯಲಿ ಅಣು ಮಾತ್ರ ಹೆಚ್ಚಿಸಬಾರದು, ಕುಂದಿಸಬಾರದು ನೋಡಾ. ಇದನಾವಂಗೆಯೂ ಅರಿಯಬಾರದು. ಇದ ಬಲ್ಲರೆ ಎಮ್ಮ ಶರಣರೆ ಬಲ್ಲರು. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ ನೀವಿರಿಸಿದಲ್ಲಿ ಇರದೆ, ಎನ್ನ ವಶವೆ ಅಯ್ಯಾ ಅಕಟಕಟಾ, ಎನ್ನವನೆನ್ನವನೆನ್ನಯ್ಯಾ ಕೂಡಲಸಂಗಮದೇವಯ್ಯಾ. 57
--------------
ಬಸವಣ್ಣ
ಅಕಟಕಟಾ ಬೆಡಗು ಬಿನ್ನಾಣ ಒಂದೇ ನೋಡಾ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂಬುದೆ ಯಂತ್ರ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂಬುದೆ ತಂತ್ರ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂಬುದೆ ಮಂತ್ರ. ಪ್ರಣಮಪಂಚಾಕ್ಷರಿಯ ಮಂತ್ರವನುಚ್ಚರಿಸುವರೆಲ್ಲರೂ ಅಪ್ರಮಾಣಿಕರು ನೋಡಾ, ಅಪ್ರಣಮ ಪಂಚಾಕ್ಷರ ಮಂತ್ರವ ವಿಶ್ವಾಸದಿಂದವಗ್ರಹಿಸಿ ಮಂತ್ರಾರ್ಥವ ತಿಳಿದು ಉಚ್ಚರಿಸಲರಿಯದ ಕಾರಣ ಮತ್ತೆ ಆಕಾರ ಉಕಾರ ಮಕಾರದ ಮೂಲವಂ ಭೇದಿಸಿ, ಓಂಕಾರದ ನೆಲೆಯಂ ತಿಳಿದು, ಆ ಓಂಕಾರದಲ್ಲಿ ಪಂಚವರ್ಣದ ಲಕ್ಷಣವನರಿದು, ಓಂ ನಮಃ ಶಿವಾಯ ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದು ಸ್ಮರಿಸಬಲ್ಲಡೆ ಇದೆ ಜಪ, ಇದೇ ತಪ, ಇದೇ ಸರ್ವಸಿದ್ಧಿಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಮೂರರಪ್ಯಾಯನ ಐದು ಬೆಟ್ಟವನಿಂಬುಗೊಂಡು, ಅಕಟಕಟಾ, ಮಾಡಿ ಕೆಟ್ಟರು. ಮಾಡದೆ ಕೆಟ್ಟರು, ನೀಡಿ ಕೆಟ್ಟರು, ನೀಡದೆ ಕೆಟ್ಟರು. ಕೂಡಲಸಂಗಮದೇವನ ಬಸಿರ ಮಧ್ಯದ ಬಯಲ ಸಮಾಧಿಯಲಿಕ್ಕದೆ ಕೆಟ್ಟರು.
--------------
ಬಸವಣ್ಣ
ಇಲಿ ಗಡಹನೊಡ್ಡಿದಲ್ಲಿ ಇಪ್ಪಂತೆ ಎನ್ನ ಸಂಸಾರ, ಕೆಡೆವನ್ನಕ್ಕ ಮಾಣದು ಹೆರರ ಬಾಧಿಸುವುದನು ತನು ಕೆಡೆವನ್ನಕ್ಕ ಮಾಣದು, ಹೆರರ ಛಿದ್ರಿಸುವುದನು ಮನ ಕೆಡೆವನ್ನಕ್ಕ ಮಾಣದು. ಅಕಟಕಟಾ, ಸಂಸಾರಕ್ಕೆ ಆಸತ್ತೆ ಕೂಡಲಸಂಗಮದೇವಾ. 10
--------------
ಬಸವಣ್ಣ
ಅಕಟಕಟಾ ದೇಹಾರ ಅಭ್ಯಾಸವಾಯಿತ್ತಲ್ಲಾ ! ಅಕಟಕಟಾ ಓಗರ ಉಪಹಾರವಾಯಿತ್ತಲ್ಲಾ ! ಅಕಟಕಟಾ ಅನುಭಾವ ಹೊಲಬುಗೆಟ್ಟು ಹೋಯಿತ್ತಲ್ಲಾ ! ಅಕಟಕಟಾ ಷೋಡಶೋಪಚಾರವನರಿಯದೆ ಕೆಟ್ಟರಲ್ಲಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->