ಅಥವಾ

ಒಟ್ಟು 16 ಕಡೆಗಳಲ್ಲಿ , 12 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಕುಲಹೀನಶಿಷ್ಯಂಗೆ ಅನುಗ್ರಹವ ಕೊಟ್ಟು, ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣಮಂತ್ರವ ಹೇಳಿ, ಆ ಶ್ರೀಗುರು ಬಂದು, ಆ ಶಿಷ್ಯನ ಮನೆಯ ಹೊಗಲೊಲ್ಲದೆ, ಅಕ್ಕಿ ತುಪ್ಪವ ನೀ [ಡಿ]ಸಿಕೊಂಡುಂಬವನ ಕೇಡಿಂಗಿನ್ನೇವೆನಯ್ಯಾ ? ತನ್ನ ಪ್ರಾಣಲಿಂಗವನವರಿಗೆ ಕೊಟ್ಟು, ತಾ ಹೋಗೆನೆಂಬ ವ್ರತಗೇಡಿಗಿನ್ನೇವೆನಯ್ಯಾ ? ಅವನ ಧನಕ್ಕೆ ತಂದೆಯಾದನಲ್ಲದೆ, ಅವನ ಕುಲಕ್ಕೆ ತಂದೆಯಲ್ಲ. ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ಲಿಂಗವ ಮಾರಿಕೊಂಡುಂಬ ಭಂಗಗಾರರು ಕೆಟ್ಟ ಕೇಡನೇನೆಂಬೆನಯ್ಯಾ.
--------------
ಹಾವಿನಹಾಳ ಕಲ್ಲಯ್ಯ
ಬೆಂಕಿಗೆ ಶೈತ್ಯ ಕೊಂಡು, ಉದಕಕ್ಕೆ ಉರಿ ಹುಟ್ಟಿ ಮತ್ತುದಕವನರಸುವುದ ಕಂಡೆ. ಮಡಕೆ ನಿಂದುರಿದು, ಅಕ್ಕಿ ಉಳಿಯಿತ್ತು, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಮರೆಯಲಾಗಿ.
--------------
ಮೋಳಿಗೆ ಮಾರಯ್ಯ
ಕುಲಹೀನ ಶಿಷ್ಯಂಗೆ ಅನುಗ್ರಹವ ಕೊಟ್ಟು ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣಮಂತ್ರವ ಹೇಳಿ, ಆ ಗುರು ಬಂದು ಆ ಶಿಷ್ಯನ ಮನೆಯ ಹೊಗಲೊಲ್ಲದೆ ಅಕ್ಕಿ ತುಪ್ಪವನೀಸಿಕೊಂಬವನ ಕೇಡಿಂಗೆ ಇನ್ನೇವೆನಯ್ಯಾ ? ತನ್ನ ಪ್ರಾಣಲಿಂಗವನವನಿಗೆ ಕೊಟ್ಟು ತಾ ಹುಗೆನೆಂಬ ವ್ರತಗೇಡಿಯ ಇನ್ನೇನೆನಬಹುದಯ್ಯಾ ? ಅವನ ಧನಕ್ಕೆ ತಂದೆಯಾದನಲ್ಲದೆ ಅವನಿಗೆ ತಂದೆಯಾದುದಿಲ್ಲ. ಇದು ಕಾರಣ-ಕೂಡಲಚೆನ್ನಸಂಗಯ್ಯಾ ಆ ಲಿಂಗವ ಮಾರಿಕೊಂಡುಂಬ ಭಂಗಕಾರರು ಕೆಟ್ಟಕೇಡನೇನೆಂಬೆನಯ್ಯಾ !
--------------
ಚನ್ನಬಸವಣ್ಣ
ಅಕ್ಕ ಕೇಳೌ, ನಾನೊಂದು ಕನಸ ಕಂಡೆ. ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ. ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ. ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು.
--------------
ಅಕ್ಕಮಹಾದೇವಿ
ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ, ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು ಅಕ್ಕಿ ಕಣಕವ ಕೊಂಡುಹೋಗುವ ಗುರುವಿನ ಕಂಡರೆ, ಕೆಡವಿ ಹಾಕಿ ಮೂಗನೆ ಕೊಯ್ಧು ಇಟ್ಟಂಗಿಯ ಕಲ್ಲಿಲೆ ತಿಕ್ಕಿ ಸಾಸಿವೆಯ ಹಿಟ್ಟನೆ ತಳಿದು ಮೇಲೆ ಲಿಂಬಿಯ ಹುಳಿಯನೆ ಹಿಂಡಿ ಪಡುವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ರುದ್ರನ ದೇವೆರೆಂದು ಆರಾಧಿಸಿ, ಶಿಲೆಯೊಳಗೆ ಹೋರಟೆಗೊಂಡು, ಕೆಟ್ಟರಲ್ಲಾ ಭಕ್ತಜನಂಗಳು. ವಿಷ್ಣುವ ದೇವರೆಂದು ಆರಾಧಿಸಿ, ಮರನ ಸುತ್ತಿ ಕಾಲುಗೆಟ್ಟರಲ್ಲಾ ಭೂಸುರಾದಿಗಳು. ಬ್ರಹ್ಮನ ದೇವರೆಂದು ಆರಾಧಿಸಿ, ಬೆಂಕಿಯಲ್ಲಿ ಬೆಂದಿರಲ್ಲಾ ಮತ್ರ್ಯಲೋಕದ ಮಹಾಜನಂಗಳು. ಇಂತೀ ಮೂವರು ಗಂಪಧಾರಿಗಳೆಂಬೆ ಧರೆಯೊಳಗೆ. ಹೇರಿನ ಅಕ್ಕಿ, ಲಳಿಗೆಯ ಎಣ್ಣೆ, ಹೂವು ಕಾಯಿ ಹಣ್ಣು ಮೊದಲಾದವನು, ತಪ್ಪ ಸಾಧಿಸಿ ತರಿಸಿಕೊಂಡುಂಬ ಚಿಕ್ಕಮಕ್ಕಳಿಗೆಲ್ಲಿಯದೊ ನೆಟ್ಟನೆಯ ದೇವತ್ವ? ಎನ್ನ ದೇವಂಗೆ ಇಂತಿವರಂಗ ಒಂದೂ ಇಲ್ಲ. ಕಾಲದೊಳಗಾದ ಪ್ರಳಯವಿರಹಿತ, ಕರ್ಮದೊಳಗಾದ ಚತುರ್ವಿಧರಹಿತ, ಗಂಗೆವಾಳುಕಸಮಾರುದ್ರರೊಳಗಾದ ಬಂಧನವಿರಹಿತ. ಲೀಲೆಗೆ ಹೊರಗಾದ ಸ್ವಯಂಭುವಯ್ಯಾ ಎನ್ನ ದೇವ. ಇಂತಿವರೆಲ್ಲರೂ ಪ್ರತಿಷೆ*ಯನಾರಾಧಿಸಿ ಪ್ರಸನ್ನರಾದರಯ್ಯಾ. ಇಂತೀ ಪುಣ್ಯದ ಫಲ ಎನಗೊಂದೂ ಬೇಡ. ಇದ್ದವರೆಲ್ಲ ಒಳಗಿರಲಿ, ನಾ ಹೊರಗಯ್ಯಾ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಅಲಸಿದೆನಲಸಿದೆ, ನಿಮ್ಮ ಕಾಷ*ದ ಸೇವೆಯನಯ್ಯಾ. ಕಾಷ*ದವನ ಕಾಷ*ವ ಮಾಡದೆ, ಎನ್ನ ಹೊರಗಿರಿಸಿ ನಿನ್ನೊಳಗಾದ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅನಂತರದಲ್ಲಿ ದಾಂತ್ಯಾದಿ ಸಾಧನಸಂಪನ್ನಾಗಿ, ಶ್ರೀಗುರುವಿಂ ಶಾಸನೀಯ ನಪ್ಪುದರಿಂ ಶಿಷ್ಯನಾದಾತ್ಮನು ಶುಭಕಾಲದೇಶಾದಿಗಳಂ ಪರೀಕ್ಷಿಸಿ ಬಳಿಕಾ ಚಾರ್ಯ ಸಂಪ್ರದಾಯಸಿದ್ಧನಾದ ಸಕಲಸದ್ಗುಣಸಹಿತನಾದ ಶ್ರೀಗುರುವನೆಯಿ, ಮತ್ತಮಾ ಗುರುವಿನನುಮತದಿಂ ಶಿವಪೂಜಾ ಪಾರಾಯಣರಾದ ಕೀರ್ತಿಮಯ ರಾದ ನಾಲ್ವರು ಋತ್ವಿಕ್ಕುಗಳಂ ಸ್ನಾನಧವಲಾಂಬರ ಆಭರಣ ಪುಷ್ಪಾದಿ ಗಳಿಂದಲಂ ಕರಿಸಿ, ಬಳಿಕಾ ಶ್ರೀಗುರುವಿನಾಜ್ಞೆಯಿಂ ತಾನಾ ರಾತ್ರೆಯಲ್ಲಿ, ಕ್ಷೀರಾಹಾರಿಯಾಗಿರ್ದು, ಮೇಲೆ ಪ್ರಭಾತಸಮಯದಲ್ಲಿ ದಂತಧಾವನಂಗೆಯ್ದು, ಮಂಗಲಸ್ನಾನಂ ಮಾಡಿ ಧವಲಾಂಬರವನುಟ್ಟು ಪೊದೆದು, ಭಸಿತೋದ್ಧೂಳನಂ ರಚಿಸಿ, ತ್ರಿಪುಂಡ್ರ ಧಾರಣಮಂ ವಿಸ್ತರಿಸಿ, ರುದ್ರಾಕ್ಷಮಾಲೆಗಳಂ ಧರಿಸಿ, ಸುವರ್ಣಾಭರಣಾದಿಗಳಿಂ ಸಿಂಗರಂಬಡೆದು, ಬಳಿಕಾಚಾರ್ಯನ ಸವಿೂಪಕ್ಕೆ ಬಂದು, ಭಯಭಕ್ತಿಯಿಂದಷ್ಟಮಂತ್ರಪೂರ್ವಕದಿಂ ವಿನಯವಿನಮಿತನಾಗಿ ಸುವರ್ಣ ಪುಷ್ಪಾದಿಗಳಿಂ ವಿತ್ತಾನುಸಾರಮಾಗಿ ಗುರುಪೂಜನಂಗೆಯ್ದು ಮರಳಿ ಗಂಧ ಪುಷ್ಪಾದಿಗಳಿಂ ಋತ್ವಿಕ್ಕುಗಳಂ ಭಜಿಸಿ, ಮೇಲೆ ಶ್ರೀಗುರು ಮುಖ್ಯಸಕಲಮಾಹೇಶ್ವರರಂ ವಂದಿಸಿ ವಿಭೂತಿ ವೀಳೆಯಂಗಳಂ ಸಮರ್ಪಿಸಿ, ಬಳಿಕ ಖನನ ದಹನ ಶೋಧನ ಸಂಪ್ರೋಕ್ಷಣ ಮರ್ದನ ಲೇಪನವೆಂಬ ಷಟ್ಕಮರ್ಂಗಳಿಂ ಸಾರಣೆ ಕಾರಣೆ ತಳಿರತೋರಣ ಕುಸುಮತೋರಣ ಸರವಿಸರ ಪಳವಳಿಗೆ ಧೂಪ ಧೂಮ್ನಾದಿಗಳಿಂ ಪರಿಶೋಭೆವಡೆದು, ಮನೋಹರಮಾದ ದೀಕ್ಷಾಮಂಟಪದಲ್ಲಿ ಗೋಚರ್ಮ ಮಾತೃಭೂಮಿಯಂ ಚೌಕಮಾಗಿ, ಗೋರೋಜನ ಗೋಮಯ ಗೋಮೂತ್ರ ಗೋದಧಿ ಘೃತ ಗೋಕ್ಷೀರಯೆಂಬ ಷಟ್ಸಮ್ಮಾರ್ಜನಂಗೆಯು, ಬಳಿಕಾ ಚೌಕಮಧ್ಯದಲ್ಲಿ ಪ್ರವಾಳ ಮೌಕ್ತಿಕ ಶುಭ್ರ ಪಾಷಾಣ ಸುವ್ಯರ್ಣ ಶ್ವೇತಾಭ್ರಕ ತಂಡುಲಾದಿಗಳ ಚೂರ್ಣಂಗಳಿಂದ ಷ್ಟದಳಕಮಲಮಂ ರಚಿಸಿ, ಮತ್ತದರಾ ವಿವರ:ಶಂಖ ಚಕ್ರ ಶೂಲ ಡಮರುಗ ಪರಶು ಘಂಟೆ ಛತ್ರ ಚಾಮರಮೃಷಭ ಚರಣಾದಿ ವಿಚಿತ್ರವರ್ಣಕಮಂ ತುಂಬುತ್ತದರ ಮೇಲೆ ಎಳ್ಳು ಜೀರಿಗೆ ಗೋದುವೆ ಅಕ್ಕಿ ಉದ್ದುಗಳೆಂಬ ಪಂಚಧಾನ್ಯವನಾದರೂ ಕೇವಲ ತಂಡುಲವನಾದರೂ ಮೂವತ್ತೆರಡಂಗುಲ ಪ್ರಮಾಣಿನ ಚತುರಸ್ರಮಾಗಿ ಹರಹುತ್ತದರ ಮೇಲೆ ತೀರ್ಥಾಂಬುಪೂರ್ಣ ಮಾದ ಸುವರ್ಣಾದಿ ನವೀನ ಪಂಚಕಳಶಂಗಳಂ ಪೂರ್ವದಕ್ಷಿಣ ಪಶ್ಚಿಮ ಉತ್ತರ ಮಧ್ಯ ಕ್ರಮದಿಂದಾಚಾರ್ಯನೆ ಸ್ಥಾಪಿಸುತ್ತಾ, ಕಳಶಂಗಳಂ ಬೇರೆ ಬೇರೆ ನೂತನ ವಸ್ತ್ರಂಗಳಿಂ ಸುತ್ತಿ, ನವಪಂಚತಂತುಗಳಿಂ ಪರಿವೇಷ್ಟಿಸಿ ಸುವರ್ಣಾದಿನಗಳನವ ರೊಳಿರಿಸಿ, ಬಳಿಕ್ಕಾಮ್ರಪಲ್ಲವ ದೂರ್ವಾಂಕುರ ಪೂಗ ಕುಸುಮ ನಾಗವಳಿ... (ಇಲ್ಲಿ ಒಂದು ಗರಿ ಕಳೆದುಹೋಗಿದೆ).
--------------
ಶಾಂತವೀರೇಶ್ವರ
ಎಲೋ ಮಾನವ ಕೇಳೆಲೊ, ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೊ: ಹಣ್ಣುಗಳು ಸಣ್ಣ ಜಾತಿಯ ಎಂಜಲು, ಹಾಲು ಕರುವಿನ ಎಂಜಲು, ಮೊಸರು ಗೊಲ್ಲತಿಯ ಎಂಜಲು, ಅಕ್ಕಿ, ಗೋದಿ, ಬೇಳೆ, ಬೆಲ್ಲಗಳು ನೊಣದ ಎಂಜಲು, ನೀರು ಮೀನು ಕಪ್ಪೆಗಳ ಎಂಜಲು, ಉಪ್ಪು ಉಪ್ಪಾರನ ಎಂಜಲು, ಎಣ್ಣೆ ಸರ್ವಮಾನವರ ಎಂಜಲು, ಸಕಲಪದಾರ್ಥವು ಅನಂತ ಹುಳುಗಳ ಎಂಜಲು. ಇಂತಹ ಎಂಜಲವು ಎಂದು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ, ಮಾಡುವ ದುರಾಚಾರವ ಆರು ಬಣ್ಣಿಸಬಹುದುರಿ ಅರಿವು ಇಲ್ಲದವರು ಅರಮನೆಗೆ ಮಾಡಿದರು, ಭಕ್ತಿಯಿಲ್ಲದವರು ತಮ್ಮ ಗುರುಲಿಂಗಜಂಗಮಕ್ಕೆ ಮಾಡಿದರು. ಇಂತಪ್ಪ ಸರ್ವರ ಎಂಜಲು ತಿಂದು ಶಿವಲಿಂಗವ ಧರಿಸಿಕೊಂಡು, ಶಿವಭಕ್ತರೆಂದು ಹೇಳಿಸಿ, ಕಾಲಿಗೆ ಬಂದಂತೆ ಕುಣಿದು, ಬಾಯಿಗೆ ಬಂದಂತೆ ಅಂದು, ಮನಬಂದಂತೆ ಸ್ತ್ರೀಸಂಗದಲ್ಲಿ ಆಚರಿಸುವ ಭ್ರಷ್ಟ ಹೊಲೆಮಾದಿಗರಿಗೆ ಶೀಲವು ಎಲ್ಲಿಹುದು? ಆಚರಣೆ ಎಲ್ಲಿಹುದುರಿ ಕುಲವೆಲ್ಲಿಹುದು? ಇಂತಪ್ಪ ಮೂಳಹೊಲೆಯರ ಮೂಗ ಕೊಯ್ದು ಪಡಿಹಾರಿ ಉತ್ತಣ್ಣಗಳ ಪಾದುಕದಿ ಹೊಡೆ ಎಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನೆನೆವುದು ನೆನೆಹಿಸಿಕೊಂಬುದು ಜಡನೆಂದು ಮತ್ತೆ, ನಾ ನೀನೆಂಬುದಿಲ್ಲ. ಬಾಳೆಯ ಫಲದಂತೆ, ಚೇಳಿಗೆ ಗರ್ಭವಾದಂತೆ, ವೇಣುವಿಗೆ ಅಕ್ಕಿ ಹುಟ್ಟಿದ ಮತ್ತೆ ಬಾಳುವೆ ಉಂಟೆ ? ನೀನೆಂಬುದ ತಾನರಿದಲ್ಲಿ, ನಾ ನೀನೆಂಬ ಭಾವವೇನೂ ಇಲ್ಲ. ಕಾಮಧೂಮ ಧೂಳೇಶ್ವರ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ತಾ ಹೆಳವ; ಎಡಹೊತ್ತಿನ ಪಯಣ; ಒಡ್ಡಿದ ಮಳೆಯ ಮುಗಿಲು, ಸೋರುವ ಮನೆ, ನೆಲದ ಹಾಸಿಕೆ, ಕೊರಳಲ್ಲಿ ಮೂರು ಮಣ್ಣ ಮಣಿ, ಹಿಂದೆ ಕಲ್ಲೊರಳು, ಮೇಣದೊನಕೆ, ಹಳೆ ಅಕ್ಕಿ, ಹೊಸ ಭಾಂಡ_ ಹಸಿಯ ಬೆರಣಿಯ ತಾಳಿಯನಿಕ್ಕಿ, ಕಿಚ್ಚಿಲ್ಲದೆ ಒಲೆಯನುರುಹಿ ಓಗರವನಡಲು, ಗುಹೇಶ್ವರಲಿಂಗವು ಒಡೆದ ತಳಿಗೆಯ [ಲಿ?] ಆರೋಗಣೆಯ ಮಾಡಿದನು.
--------------
ಅಲ್ಲಮಪ್ರಭುದೇವರು
ಅಯ್ಯಾ, ನೀ ಒಲಿದಡೆ ತಿರಿವಂತೆ ಮಾಡುವಿರಿ, ತಿರಿದಡೆ ನೀಡದಂತೆ ಮಾಡುವಿರಿ, ನೀಡಿದಡೆ ಅಕ್ಕಿ ಬೀಳುವಂತೆ ಮಾಡುವಿರಿ, ಬಿದ್ದಡೆ ನಾಯಿ ತಿಂಬಂತೆ ಮಾಡುವಿರಿ, ನಿಮ್ಮ ಧ್ಯಾನದಲಿ ನಾನಿಪ್ಪಂತೆ ಮಾಡುವಿರಿ ಕೂಡಲಸಂಗಮದೇವಾ.
--------------
ಬಸವಣ್ಣ
ನರದೇಹವ ತೊಟ್ಟು, ತಾ ಗುರುವೆಂದು ಇದಿರಿಗೆ ಇಷ್ಟವ ಕೊಟ್ಟು, ಅವರ ಮನೆಯಲ್ಲಿ ಒಲ್ಲದೆ, ಅಕ್ಕಿ ತುಪ್ಪವ ನೀಡಿಸಿಕೊಂಡು, ಅಟ್ಟುಕೊಂಡುಂಬ ಮಿಟ್ಟೆಯಭಂಡರ ಕೈಯಲ್ಲಿ ಕಟ್ಟಿಸಿಕೊಂಡ ಲಿಂಗ, ದೃಷ್ಟದಿ ಶ್ರವಕಾಯ. ಇದನರಿತು, ಅಲ್ಲಿ ಹೊಕ್ಕು ಉಂಡವಂಗೆ ಕರಟನ ಕೈಯ ಕೀಟಕ, ಆ ಕಾಕೂಳು, ಘಟಿತಮಯ ಐಘಟದೂರ ರಾಮೇಶ್ವರಲಿಂಗ ಅವರ ಒಲ್ಲನಾಗಿ.
--------------
ಮೆರೆಮಿಂಡಯ್ಯ
ಅಯ್ಯಾ, ಕೈಯೊಡ್ಡಿ ಬೇಡುವದು ಸ್ಥಲವಲ್ಲ ; ಕೈಯೆತ್ತಿಕ್ಕುವದು ಸ್ಥಲವಲ್ಲ. ಮತ್ತೆಂತೆಂದೊಡೆ, ಗೋದಿ ತೊಗರಿ ಬರಗು ಅಗಸೆ ಚೆನ್ನಂಗಿಬೇಳೆ ಕಡ್ಲೆ ಬೇಳೆ ಬೆಲ್ಲ ಹುಣಸಿಹಣ್ಣು ಮಧು-ಇಂತು ಇವಂ ನಿರ್ಮಳವಾಗಿ ಪಾಕವಮಾಡಿ ಗುರುವನರಿದಿತ್ತುಕೊಂಬುದೇ ಶುದ್ಧಪ್ರಸಾದ. ಅಕ್ಕಿ ಕುಸುಬೆ ಬಿಳಿಯೆಳ್ಳು ಬೀಳಿಜೋಳ ಸಾಸಿವೆ ಹಾಲು ಮೊಸರು ಲವಣ ಹೆತ್ತುಪ್ಪ ಶುಂo ಇಂತು ಇವಂ ನಿರ್ಮಳವಾಗಿ ಪಾಕವಮಾಡಿ ಲಿಂಗವನರಿದಿತ್ತುಕೊಂಬುದೇ ಸಿದ್ಧಪ್ರಸಾದ. ಉದ್ದು ಸಾವೆ ವಟಾಣೆ ಸಜ್ಜೆ ಕರಿಕಡ್ಲೆ ತೈಲ ಮೆಣಸು ಲಾವಂಗ ಇಂತು ಇವಂ ನಿರ್ಮಳವಾಗಿ ಪಾಕವಮಾಡಿ ಜಂಗಮವನರಿದಿತ್ತುಕೊಂಬುದೇ ಪ್ರಸಿದ್ಧಪ್ರಸಾದ. ಈ ಸೈದಾನದೊಳಗಿಪ್ಪ ಸಕಲವನರಿದು ನಿರ್ಮಲ ಪಾಕವಮಾಡಿ ನಿಜಗುರುನಿರಂಜನ ಚನ್ನಬಸವಲಿಂಗವನರಿದಿತ್ತುಕೊಂಬ ಮಹಾಪ್ರಸಾದಿಯೇ ಶರಣ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಡಕೆ ಕಾವುದಕ್ಕೆ ಮುನ್ನವೆ ಜಲ ಕಾದು ಉಕ್ಕಿತ್ತು. ಜಲ ಉಕ್ಕುವುದಕ್ಕೆ ಮುನ್ನವೆ ಅಕ್ಕಿ ಬೆಂದಿತ್ತು. ಉಂಬುದಕ್ಕೆ ಮುನ್ನವೆ ಓಗರ ಮಿಕ್ಕಿತ್ತು. ಮಿಕ್ಕೋಗರವನಾರೋಗಿಸಿದವರು ಹೊಲಬುಗೆಟ್ಟರು. ಎನಗಿನ್ನು ಹೊಲಬಾವುದೊ ? ಎನಗಾರಕರಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->