ಅಥವಾ

ಒಟ್ಟು 22 ಕಡೆಗಳಲ್ಲಿ , 15 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗ್ನಿಗೆ ಮೈಯೆಲ್ಲ ಮುಖ, ಬಲಕೆ ಮೈಯೆಲ್ಲ ಕಾಲು. ಆತ್ಮದೇಹಿಂಗೆ ದಶವಾಯುಗಳ ಮುಖದಲ್ಲಿ ಹರಿವ ಕರಣೇಂದ್ರಿಯಂಗಳೆಲ್ಲ ಮುಖ ಕಾಲಾಗಿ ಚರಿಸುತಿಪ್ಪವು. ತನುವೆಂಬ ಕೊಟಾರದೊಳು ಚರಿಸಿದರೇನು ? ಅವಕೆ ಬೆಸಸೆ ಎನ್ನ ಸ್ವತಂತ್ರವಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಗ್ನಿಯ ಅಡಕವ, ನೀರಿನಲ್ಲಿ[ಯ] ಸಾರವ ನಿರವಯದ ಹೊರೆಯ ಭೇದಿಸಿ ಕಾಬಂತೆ ಅಗ್ನಿಗೆ ಮಥನದಿಂದ, ನೀರಿನ ಸಾರಕ್ಕೆ ಮಧುರದಿಂದ ನಿರವಯದ ಹೊರೆಯಕ್ಕೆ ತನ್ನರಿವಿನ ಭೇದದಿಂದ ಕಾಣಿಸಿಕೊಂಬುದು ತ್ರಿವಿಧಲಿಂಗಭೇದ, ಪ್ರಾಣಲಿಂಗಿಯ ಸಂಗ. ಈ ಗುಣ ಸಂಗನಬಸವಣ್ಣನ ಸುಸಂಗ. ಬ್ರಹ್ಮೇಶ್ವರಲಿಂಗವ ಕೂಡುವ ಕುರುಹಿನ ನಿರಂಗ.
--------------
ಬಾಹೂರ ಬೊಮ್ಮಣ್ಣ
ಆ ಮಹಾಸದಾಶಿವತತ್ವದಲ್ಲಿ ಸದಾಶಿವನುತ್ಪತ್ಯವಾಗಿ ಆಕಾಶಕ್ಕೆ ಅದ್ಥಿದೇವತೆಯಾಗಿಹನು. ಆಕಾಶತತ್ವದಲ್ಲಿ ಏಕಶಿರ ದ್ವಿಭುಜ ತ್ರಿನೇತ್ರವನುಳ್ಳ ಈಶ್ವರತತ್ವ ಉತ್ಪತ್ಯವಾಗಿ ವಾಯುವಿಂಗೆ ಅದ್ಥಿದೇವತೆಯಾಗಿಹನು. ಆ ಈಶ್ವರತತ್ವದಲ್ಲಿ ಪಂಚಮುಖರುದ್ರನುತ್ಪತ್ಯವಾಗಿ ಅಗ್ನಿಗೆ ಅದ್ಥಿದೇವತೆಯಾಗಿಹನು. ಆ ಪಂಚಮುಖರುದ್ರನಲ್ಲಿ ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ಸಹಸ್ರಪಾದವನುಳ್ಳ ವಿರಾಟ್‍ಪುರುಷನುತ್ಪತ್ಯವಾದನು. ಆ ವಿರಾಟ್ಪುರುಷನಲ್ಲಿ ಏಕಶಿರ ದ್ವಿಭುಜವನುಳ್ಳ ವಿಷ್ಣು ಉತ್ಪತ್ಯವಾಗಿ ಅಪ್ಪುವಿಗೆ ಅದ್ಥಿದೇವತೆಯಾಗಿಹನು. ಆ ವಿಷ್ಣುವಿನಲ್ಲಿ ಚತುರ್ಮುಖಬ್ರಹ್ಮ ಉತ್ಪತ್ಯವಾಗಿ ಪೃಥ್ವಿಗೆ ಅದ್ಥಿದೇವತೆಯಾಗಿಹನು. ಆ ಬ್ರಹ್ಮನಲ್ಲಿ ಸರ್ವಜೀವಂಗಳುತ್ಪತ್ಯ ನೋಡಾ. ಇದಕ್ಕೆ ಕಾಲಾಗ್ನಿರುದ್ರಸಂಹಿತಾಯಾಂ : ಶ್ರೀ ಮಹಾದೇವ ಉವಾಚ- ``ಪಂಚವಕ್ತ್ರಸದಾಖ್ಯಾನಾಂ ಈಶ್ವರಶ್ಚ ಸಜಾಯತೇ | ತಥಾ ಈಶ್ವರತತ್ವೇ ಚ ಕಾಲರುದ್ರ ಸಮುದ್ಭವಃ | ಪಂಚವಕ್ತ್ರಃ ಮಹಾರುದ್ರ ವಿರಾಟ್ಪುರುಷ ಜಾಯತೇ | ವಿರಾಟ್ಪುರುಷ ಮಹಾತತ್ವೇ ಆದಿ ವಿಷ್ಣುಸಮುದ್ಭವಃ | ವಿಷ್ಣುತತ್ವಾತ್‍ಮಹಾದೇವಿ ವಿರಿಂಚಿತತ್ವಃ ಜಾಯತೇ | ಚತುರ್ಮುಖಬ್ರಹ್ಮತತ್ವೇ ಸರ್ವಜೀವಸ್ತವೋಸ್ತಥಾ | ಇತಿ ತತ್ವೋದ್ಭವಂ ಜ್ಞಾನಂ ದುರ್ಲಭಂ ಚ ವರಾನನೇ ||'' ಇಂತೆಂದುದಾಗಿ, ಇದಕ್ಕೆ ಆನಂದಭೈರವಿ : ``ಪೃಥ್ವೀ ಬ್ರಹ್ಮಾ ಜಲಂ ವಿಷ್ಣು ಸ್ತಥಾ ರುದ್ರೋ ಹುತಾಶನಃ | ಈಶ್ವರೋ ಪವನೋ ದೇವಾಃ ಆಕಾಶಶ್ಚ ಸದಾಶಿವಃ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ | ಭೂಮ್ಯಾದಿ ದೈವಮಿತ್ಯುಕ್ತಂ ಇತಿ ಭೇದಂ ವರಾನನೇ ||'' ಇತೆಂದುದಾಗಿ, ಅಪ್ರಮಾಣ ಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆರು ಚಕ್ರದಲ್ಲಿ ಅರಿತೆನೆಂದು ನುಡಿವ ಅರಿವುಗೇಡಿಗಳು ನೀವು ಕೇಳಿರೋ. ಆಧಾರಚಕ್ರ ಪೃಥ್ವಿಗೆ ಸಂಬಂಧ ; ಅಲ್ಲಿಗೆ ಬ್ರಹ್ಮ ಅದ್ಥಿದೇವತೆ, ಆಚಾರಲಿಂಗವಿಡಿದು ಯೋಗಿಯಾಗಿ ಸುಳಿದ. ಸ್ವಾದ್ಥಿಷ್ಠಾನಚಕ್ರ ಅಪ್ಪುವಿಗೆ ಸಂಬಂಧ: ಅಲ್ಲಿಗೆ ವಿಷ್ಣು ಅದ್ಥಿದೇವತೆ, ಶ್ರೀಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ. ಮಣಿಪೂರಕ ಚಕ್ರ ಅಗ್ನಿಗೆ ಸಂಬಂಧ ; ಅಲ್ಲಿಗೆ ರುದ್ರನದ್ಥಿದೇವತೆ, ಜಂಗಮಲಿಂಗವ ಪಿಡಿದು ಶ್ರಾವಣಿಯಾಗಿ ಸುಳಿದ. ವಿಶುದ್ಧಿಚಕ್ರ ವಾಯುವಿಗೆ ಸಂಬಂಧ ; ಅಲ್ಲಿಗೆ ಸದಾಶಿವನದ್ಥಿದೇವತೆ, ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ. ಆಜ್ಞಾಚಕ್ರಕ್ಕೆ ಪರತತ್ವದ ಸಂಬಂಧ ; ಅಲ್ಲಿಗೆ ಪರಶಿವನದ್ಥಿದೇವತೆ, ಮಹಾಲಿಂಗವಪಿಡಿದು ಪಶುಪತಿಯಾಗಿ ಸುಳಿದ. ಇಂತೀ ಆರು ದರುಶನಕ್ಕೆ ಬಂದರೆ ಅಂಗಳ ಪೊಗಿಸಿರಿ. ಆ ಲಿಂಗವು ನಿಮಗೆ ತಪ್ಪಿದವು, ಮುಂದಿರ್ದ ಗುರುಲಿಂಗಜಂಗಮದ ಭೇದವನರಿಯದೆ ಆರು ಸ್ಥಲದಲ್ಲಿ ತೃಪ್ತಿಯಾಯಿತ್ತೆಂಬವರ ಕಂಡು ನಾಚಿತ್ತು ಎನ್ನ ಮನವು ಗೊಹೇಶ್ವರಪ್ರಿಯ ನಿರಾಳಲಿಂಗಾ
--------------
ಗುಹೇಶ್ವರಯ್ಯ
ಜ್ಯೋತಿ ಇದ್ದ ಗೃಹಕ್ಕೆ ತಮವುಂಟೇನಯ್ಯಾ ? ಪರಂಜ್ಯೋತಿಲಿಂಗದ ಸಂಗದ ಬೆಳಗಲಿಹ ಮಹಾತ್ಮನಿಗೆ ಮಾಯಾತಮಂಧದ ಭೀತಿಯುಂಟೇನಯ್ಯಾ ? ಕಂಠೀರWವಘೆನಿಹ ವನದೊಳು ಕರಿವುಂಟೇನಯ್ಯಾ ? ಲಿಂಗವೆಂಬ ಸಿಂಹದ ಮರೆಯಬಿದ್ದಾತಂಗೆ ಅಷ್ಟಮದವೆಂಬ ಕರಿಯ ಭಯವುಂಟೇನಯ್ಯಾ ? ಗರುಡನಿದ್ದ ಸ್ಥಾನದಲ್ಲಿಗೆ ಉರಗನ ಭಯವುಂಟೇನಯ್ಯಾ ? ಪರಮಾತ್ಮನೊಳುಬೆರೆದ ನಿಬ್ಬೆರಗಿ ಶರಣಂಗೆ ಕುಂಡಲಿಸರ್ಪನ ಭಯವುಂಟೇನಯ್ಯಾ ? ಆನೆಯ ಮೇಲೆ ಹೋಗುವ ಮಾನವನಿಗೆ ಶ್ವಾನನ ಭಯವುಂಟೇನಯ್ಯಾ ? ಲಿಂಗಾಂಗಸಮರಸವೆಂಬ ಮದ ತಲೆಗೇರಿ ಹೋಗುವ ಶಿವಶರಣಂಗೆ ಪಂಚೇಂದ್ರಿಯವೆಂಬ ಶ್ವಾನನ ಭಯವುಂಟೇನಯ್ಯಾ ? ಉರಿವುತಿಹ ಅಗ್ನಿಗೆ ಸೀತದ ಭಯವುಂಟೇನಯ್ಯಾ ? ಗುರುಕರುಣಾಗ್ನಿಯಲ್ಲಿ ಭವದಗ್ಧನಾದ ಶರಣಂಗೆ ಅನ್ಯಭಯಭೀತಿಯ ಚಳಿ ಉಂಟೇನಯ್ಯಾ ? ಉರಗಮುಟ್ಟಲು ಸರ್ವಾಂಗವನೆಲ್ಲ ವಿಷಕೊಂಡಂತೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಲಿಂಗಸೋಂಕಿದವರೆಲ್ಲ ಸರ್ವಾಂಗಲಿಂಗಿಗಳಾದುದ ನೋಡಾ.
--------------
ಹೇಮಗಲ್ಲ ಹಂಪ
ಅರಿವು ಮರವೆಯೆಂಬ ಉಭಯದ ಭೇದವ ತಿಳಿದಲ್ಲಿ, ಅಕ್ಷಿಯ ಮುಚ್ಚಿದಲ್ಲಿ ಬಯಲು, ಬಿಟ್ಟಲ್ಲಿ ಒಡಲುಗೊಂಡಿತ್ತು. ಉಭಯದೃಷ್ಟವೆಂಬುದು ಇಷ್ಟಲ್ಲದಿಲ್ಲ. ಇಷ್ಟವ ಹಿಡಿದಲ್ಲಿ ಕ್ರೀ, ಬಿಟ್ಟಲ್ಲಿ ಜ್ಞಾನವೆಂಬ ಕಟ್ಟಣೆವುಂಟೆ ? ಕಾಷ*ವ ಹಿಡಿದ ಅಗ್ನಿಗೆ, ಅಗ್ನಿಯಲ್ಲಿ ನಷ್ಟವಾದ ಕಾಷ*ಕ್ಕೆ, ಕೆಟ್ಟ ಮತ್ತೆ ಕೆಂಡವೆಂಬುದಿಲ್ಲ. ನಷ್ಟವಾದ ಮತ್ತೆ ಕಟ್ಟಿಗೆಯೆಂಬುದಿಲ್ಲ. ಕ್ರೀ ಭಾವ ಅಳವಟ್ಟು, ಭಾವ ಶೂನ್ಯವಾದಲ್ಲಿ ಕಾಮಧೂಮ ಧೂಳೇಶ್ವರ ತಾನೂ ತಾನೆ.
--------------
ಮಾದಾರ ಧೂಳಯ್ಯ
ಜಲ ಕೂರ್ಮ ಗಜ ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು ಪವನನ ಸುಳುಹು ಇಲ್ಲದಂದು, ಅಗ್ನಿಗೆ ಕಳೆ ಮೊಳೆದೋರದಂದು, ತರು ಗಿರಿ ತೃಣಕಾಷಾ*ದಿಗಳಿಲ್ಲದಂದು, ಯುಗಜುಗ ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು, ನಿಜವನರಿದಿಹೆನೆಂಬ ತ್ರಿಜಗಾಧಿಪತಿಗಳಿಲ್ಲದಂದು_ ತೋರುವ ಬೀರುವ ಪರಿ ಇಲ್ಲದಂದು, ಆ ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು !
--------------
ಅಲ್ಲಮಪ್ರಭುದೇವರು
ತಾಮಸ ಮುಸುಕಿ ಕಂಗಳ ಕೆಡಿಸಿತ್ತೆನ್ನ, ಭಕ್ತಿ. ಕಾಮವೆಂಬ ಅಗ್ನಿಗೆ ಮುರಿದಿಕ್ಕಿತ್ತೆನ್ನ, ಭಕ್ತಿ. ಉದರಕ್ಕೆ ಕುದಿಕುದಿದು ಮುಂದುಗೆಡಿಸಿತ್ತೆನ್ನ, ಭಕ್ತಿ. ಇದಿರನಾಶ್ರುಸಲು ಹೋುತ್ತೆನ್ನ, ಭಕ್ತಿ. ಹೆಣಮೂಳನು ನಾನು ಕೂಡಲಸಂಗಮದೇವಾ, ಕ್ಷಣ ಹದುಳವಿರದೆ ಬಾಯ ಟೊಣೆದು ಹೋುತ್ತೆನ್ನ, ಭಕ್ತಿ. 272
--------------
ಬಸವಣ್ಣ
ಪೃಥ್ವಿಯಲ್ಲಿ ಅಪ್ಪು ಕೂಡಲಿಕ್ಕೆ ಅಗ್ನಿ ಕೂಡಿ ನಾಲ್ಕು ಭೇದವಾಗಿಪ್ಪುದು. ಆ ಅಗ್ನಿಯಲ್ಲಿ ವಾಯು ಕೂಡಿ ಏಳು ಭೇದವಾಗಿಪ್ಪುದು. ಆ ವಾಯುವಿನಲ್ಲಿ ಆಕಾಶ ಕೂಡಿ ಹದಿನಾರು ಭೇದವಾಗಿಪ್ಪುದು. ಇಂತೀ ಪೃಥ್ವಿಯ ಭೇದ, ಅಪ್ಪುವಿನ ಸರ್ವಸಾರ, ಅಗ್ನಿಗೆ ತನ್ಮಯ ಜಿಹ್ವೆ, ವಾಯುವಿಗೆ ಸರ್ವಗಂಧ, ಆಕಾಶಕ್ಕೆ ಆವರಣ ಅಲಕ್ಷ, ಇಂತೀ ಪಂಚೀಕರಣಂಗಳ ವಿಭಾಗಿಸಿ ಸೂತ್ರವಿಟ್ಟು ಒಂದರಿಂದ ಹಲವು ಲೆಕ್ಕವ ಸಂದಣಿಸುವಂತೆ, ಲೆಕ್ಕವ ಹಲವ ಕಂಡು ಒಂದರಿಂದ ವಿಭಾಗಿಸಿದರೆಂಬುದನರಿದು ತಾಯ ಗರ್ಭದ ಶಿಶು ಭಿನ್ನವಾದಂತೆ ಸುಖದುಃಖವ ವಿಚಾರಿಸಬೇಕು. ಸದ್ಯೋಜಾತಲಿಂಗವೆಂದರಿವನ್ನಕ್ಕ ಉಭಯವ ವಿಚಾರಿಸಬೇಕು
--------------
ಅವಸರದ ರೇಕಣ್ಣ
ವಾಯುವನುಟ್ಟನೇಕವ್ವಾ ? ಅಗ್ನಿಗೆ ಆಧಾರವಾಗಿ ಆಕಾಶವ ಹೊದ್ದದೆ ವೈರಾಗ್ಯದಿಂದ ಬಂದು ಅರಣ್ಯವ ಹೊಕ್ಕು ಕದಳಿಯ ಹೊಕ್ಕನೆಂದು ಕಥಕುಳಿ ಕಧಾಕುಳಿಗೊಳ್ಳುತ್ತಿದ್ದೆ, ಹದುಳವೇಕವ್ವಾ ? ಎಮ್ಮ ಸೋದರಕ್ಕೆ ಬಾಳಿಲ್ಲ. ಬಾಣಸ ಕೂರಲಗಾಗಿ ಅವನಾಳಿಗೊಂಬ ಶಿವಯೋಗಿ, ಅವಕ್ಕೇಳಿಗೆಯಾಗಿ ಹೊಕ್ಕನವ್ವಾ ನಮ್ಮ ಅಜಗಣ್ಣತಂದೆ.
--------------
ಮುಕ್ತಾಯಕ್ಕ
ಅಯ್ಯಾ ಜಲ, ಕೂರ್ಮ, ಗಜ, ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು, ಪವನನ ಸುಳುಹಿಲ್ಲದಂದು, ಅಗ್ನಿಗೆ ಕಳೆದೋರದಂದು, ತರು ಗಿರಿ ತೃಣ ಕಾಷಾ*ದಿಗಳಿಲ್ಲದಂದು, ಯುಗ ಜುಗ, ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು, ನಿಜವನರಿದೆನೆಂಬ ತ್ರಿಜಗಾಧಿಪತಿಗಳಿಲ್ಲದಂದು ತೋರುವ ಬೀರುವ ಭಾವದ ಪರಿ, ಭಾವದಲ್ಲಿ ಭರಿತ, ಆಗಮ್ಯ ಗುಹೇಶ್ವರ ನಿರಾಳವು !
--------------
ಅಲ್ಲಮಪ್ರಭುದೇವರು
ಐಕ್ಯಸ್ಥಲದ ಲೇಪಜ್ಞಾನ ವಿವರ : ಅಪ್ಪು ಆವಾವ ಪಾಕಕ್ಕೂ ತಪ್ಪದೆ ಸಾರವ ಕೊಡುವಂತೆ ತಥ್ಯಮಿಥ್ಯವಾದ ದ್ರವ್ಯಕ್ಕೆ ಹೆಚ್ಚುಕುಂದನರಿಯದಿಪ್ಪಂತೆ ವಾಯು ಸುಗುಣ ದುರ್ಗುಣವೆನ್ನದೆ ತನ್ನಯ ಸಹಜದಿಂದ ಸಂಚರಿಸುವಂತೆ ಅಗ್ನಿಗೆ ಕಾಷ* ಸರಿಸ ಡೊಂಕೆನ್ನದೆ ಮಲಿನ ಅಮಲಿನವೆನ್ನದೆ ಆವ ದ್ರವ್ಯ ದೃಷ್ಟದಲ್ಲಿ ಸಿಕ್ಕಿದಡೂ ಭೇದಿಸಿ ವೇಧಿಸಿ ಸುಡುವುದಾಗಿ. ಇಂತಿವು ತ್ರಿವಿಧಸ್ಥಲದಂತೆ ಇಪ್ಪುದು ಐಕ್ಯನ ಅರ್ಪಿತ ಸ್ಥಲಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಬ್ರಹ್ಮಾಂಡದಲ್ಲಿ ಪುಟ್ಟಿಹ ಲಕ್ಷಣ ಪಿಂಡಾಂಡದಲ್ಲಿ ಉಂಟೆಂಬರು. ಆ ಬ್ರಹ್ಮಾಂಡಕ್ಕೆ ತ್ರಿಜಾತಿವರ್ಗ, ಚರಸ್ಥಾವರ ಮೂಲಾದಿಭೇದ ಸಪ್ತಸಿಂಧು ಸವಾಲಕ್ಷ ಮುಂತಾದ ಮಹಾಮೇರುವೆ ಅಷ್ಟಾಷಷ್ಟಿ ಗಂಗಾನದಿಗಳು ಮುಂತಾದ ನವಪಾಷಾಣದೊಳಗಾದ ರತಿಸಂಭವ ಮುಂತಾದ ಷಟ್ಕರ್ಮ ಆಚರಣೆ ಮುಂತಾದ ಇಂತೀ ಬ್ರಹ್ಮಾಂಡದೊಳಗಾದ ವಸ್ತುಕ ವರ್ಣಕ ಇವು ಎಲ್ಲವು, ಲಕ್ಷಿಸಿಕೊಂಡು ಪ್ರಮಾಣಾದವು. ಈ ಪಿಂಡಾಂಡಕ್ಕೆ ಬ್ರಹ್ಮಾಂಡವ ಸರಿಗಾಬಲ್ಲಿ ನಾನಾ ವರ್ಣದ ಭೇದಂಗಳೆಲ್ಲವ ವಿಚಾರಿಸಲಿಕ್ಕೆ ಉಂಟು. ಘಟಭೇದದಲಿ ಇಲ್ಲ, ಜ್ಞಾನಭೇದದಲ್ಲಿ ಉಂಟೆಂದು ಕರ್ಮವ ವಿಚಾರಿಸಲಿಕ್ಕೆ ಪೃಥ್ವೀತತ್ವದೊಳಗಾದುದೆಲ್ಲವೂ ವಸ್ತುಕರೂಪು. ಅಪ್ಪುತತ್ವದೊಳಗಾದುದೆಲ್ಲವೂ ವರ್ಣಕರೂಪು. ತೇಜತತ್ವದೊಳಗಾದುದೆಲ್ಲವೂ ದೃಶ್ಯಾಂತರಭಾವ. ವಾಯುತತ್ವದೊಳಗಾದುದೆಲ್ಲವೂ ಖೇಚರಸಂಚಾರಭಾವ. ಆಕಾಶತತ್ವದೊಳಗಾದುದೆಲ್ಲವೂ ಇಂತೀ ಚತುರ್ಗುಣ ಭಾವವನೊಳಗೊಂಡು ಶಬ್ದಗಮ್ಯವಾಗಿ ಮಹದಾಕಾಶವ ಎಯ್ದುತ್ತಿಹುದಾಗಿ. ಇಂತೀ ಅಂಡಪಿಂಡವ ವಿಸ್ತರಿಸಿ ನೋಡಿಹೆನೆಂದಡೆ ಅಗ್ನಿಗೆ ಆಕಾಶದ ಉದ್ದ ಕಾಷ*ವನೊಟ್ಟಿದಡೂ ಅಲ್ಲಿಗೆ ಹೊತ್ತುವದಲ್ಲದೆ ಸಾಕೆಂದು ಒಪ್ಪುವದಿಲ್ಲ. ಇಂತೀ ಭೇದದಂತೆ ಸಕಲವ ನೋಡಿಹೆನೆಂದಡೆ ನಾಲ್ಕು ವೇದ ಒಳಗಾಗಿ ಹದಿನಾರು ಶಾಸ್ತ್ರ ಮುಂತಾಗಿ ಇಪ್ಪತ್ತೆಂಟು ದಿವ್ಯಾಗಮಂಗಳು ಕಡೆಯಾಗಿ ಇಂತಿವರೊಳಗಾದ ಉಪಮನ್ಯು, ಶಾಂಕರಸಂಹಿತೆ, ಚಿಂತನೆ, ಉತ್ತರ ಚಿಂತನೆ, ಪ್ರತ್ಯುತ್ತರ ಚಿಂತನೆ, ಸಂಕಲ್ಪಸಿದ್ಧಿ ಇಂತಿವರೊಳಗೆ ತಿಳಿದೆಹೆನೆಂದಡೆ ಕಲಿಕೆಗೆ ಕಡೆಯಿಲ್ಲ ಅರಿವಿಗೆ ತುದಿ ಮೊದಲಿಲ್ಲ. ಇಂತಿವೆಲ್ಲವ ಕಳೆದುಳಿದು ನಿಲಬಲ್ಲಡೆ ವರ್ಮಸ್ಥಾನ ಶುದ್ಧಾತ್ಮನಾಗಿಪ್ಪ ಭೇದವ ಹಿಡಿದು ಮಾಡುವಲ್ಲಿ ದೃಢಾತ್ಮನಾಗಿ, ಲಿಂಗವನರ್ಚಿಸಿ ಪೂಜಿಸುವಲ್ಲಿ ನೈಷಿ*ಕವಂತನಾಗಿ, ತ್ರಿವಿಧವ ಕುರಿತು ಅರಿದು ಮಾಡುವಲ್ಲಿ ನಿಶ್ಚಯವಂತನಾಗಿ, ಅಶ್ವತ್ಥವೃಕ್ಷದ ಪರ್ಣದ ಅಗ್ರದ ತುದಿಯ ಮೊನೆಯಲ್ಲಿ ಬಿಂದು [ಸಾ]ರಕ್ಕೆ ಮುನ್ನವೆ ಬಿದ್ದಂತೆ ಇಂತೀ ಕರ್ಮಕಾಂಡದಲ್ಲಿದ್ದ ಆತ್ಮನು ಹಾಗಾಯಿತ್ತೆಂಬುದ ಹೀಗರಿದು ಇಂತೀ ಉಭಯದಲ್ಲಿ ಚೋದ್ಯನಾಗಿ ಸದ್ಯೋಜಾತಲಿಂಗವ ಕೂಡಬೇಕು.
--------------
ಅವಸರದ ರೇಕಣ್ಣ
ಕಾಷ್ಟವಗ್ನಿಯೊಳಗಿಡಲಿಕ್ಕಾಗಿ, ಆ ಕಾಷ್ಟದೊಳಗಿದ್ದಗ್ನಿ ನಾನಿದ್ದೇನೆ, ನೀ ಬೇಡಾ ಎಂದಿತ್ತೆ ? ತಾನಡಗಿ ಇದಿರಿಟ್ಟ ಅಗ್ನಿಗೆ ಒಡಲಾಯಿತ್ತು. ಇಂತು ಇದ್ದ ಇದಿರಿಂಗೆ ಒಡಲೆಡೆಗೊಡದ ಅಗಮ್ಯಂಗೆ ಪಡಿಪುಚ್ಚವಿಲ್ಲ, ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನನರಿದವಂಗೆ.
--------------
ಹೊಡೆಹುಲ್ಲ ಬಂಕಣ್ಣ
ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ ? ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ ? ದಾಳಿಕಾರಂಗೆ ಧರ್ಮವುಂಟೆ ? [ಕನ್ನಗಳ್ಳಂಗೆ] ಕರುಳುಂಟೆ ? ಗುಹೇಶ್ವರಾ, ನಿಮ್ಮ ಶರಣರು, ಮೂರು ಲೋಕವರಿಯೆ ನಿಶ್ಚಟರಯ್ಯಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->